ಲಂಚದಲ್ಲೂ ಡಿಜಟಲೀಕರಣ

ಮೊನ್ನೆ ಇನ್ನೂ, ಮಂಗಳೂರು ಟ್ರಾಫಿಕ್ ಪೋಲಿಸರ ಬಗ್ಗೆ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ, ಇದಕ್ಕೆ ಪೂರಕವಾದ ಬೆಂಗಳೂರಿನ ಯಲಹಂಕದ ಬಳಿಯ ಮತ್ತೊಂದು ಪ್ರಸಂಗಕ್ಕೆ ನೆನ್ನೆ ನಾನೇ ಸಾಕ್ಷಿಯಾಗಬೇಕಾಗಿದ್ದು ನಿಜಕ್ಕೂ ಅಸಹ್ಯಕರ ಎನಿಸಿತು. ಹಾಗಾಗಿ ಮಂಗಳೂರಿನ ಪ್ರಕರಣವನ್ನು ಯಥಾವತ್ ಹಾಗೆಯೇ ಪ್ರಕಟಿಸಿ ನಂತರ ನನಗಾದ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ.

ಮಂಗಳೂರಿನ ಪ್ರಕರಣ 
police2ಇಂದು ಸ್ಟೇಟ್ ಬ್ಯಾಂಕ್ ನಲ್ಲಿ ನಾವು ರಾಂಗ್ ಸೈಡಲ್ಲಿ (one way) ಕಾರು ಚಲಾಯಿಸಿದ್ದಕ್ಕೆ ಈ ಪೋಲಿಸ್ ಅಡ್ಡಗಟ್ಟಿ ಫೈನ್ ಕಟ್ಟಲು ಹೇಳಿದ್ರು, ರಶೀದಿ ಬೇಕಾ? ಬೆಡ್ವಾ? ಅಂತ ಈ ಪೋಲಿಸ್ ಕೇಳಿದಾಗ, ನಾವು ಅವರಲ್ಲಿ ರಶೀದಿ ಕೊಟ್ರೆ ಎಷ್ಟು? ಇಲ್ಲದಿದ್ರೆ ಎಷ್ಟು ಚಾರ್ಜ್ ಮಾಡ್ತೀರಾ? ಅಂತ ಕೇಳಿದೆವು, ಅದಕ್ಕೆ ಈ ಪೋಲಿಸನ ಉತ್ತರ, ರಶೀದಿ ಬೇಕಾದಲ್ಲಿ 200, ಇಲ್ಲದಿದ್ದಲ್ಲಿ 100 ರೂಪಾಯಿ.  ಅದಕ್ಕೆ ನಾನು ಕೇಳಿದೆ, ಹಾಗಾದ್ರೆ ಆ 100 ರೂಪಾಯಿ ನಿಮ್ಮ ಜೇಬಿಗಾ? ಅದಕ್ಕೆ ಪೊಲಿಸನ ಉತ್ತರ, ಎರಡರಲ್ಲೂ ಹಣ ನನಗೆನೇ ಅಂತ ಉತ್ತರಕೊಟ್ಟ…..

ಹಾಗಾದ್ರೆ ಪೋಲಿಸರ ಕೈಯಲ್ಲಿರುವ ರಶೀದಿ ಪುಸ್ತಕ ಸರಕಾರದ್ದೋ ಅಥವಾ ಇವರು ಸ್ವತಃ ಪ್ರಿಂಟ್ ಮಾಡಿಸಿದ್ದೋ? ಅದರಲ್ಲಿ ಸರ್ಕಾರದ ಸೀಲ್ ಕೂಡ ಇರಲಿಲ್ಲ, ಫೈನ್ ಹಾಕುವ ನೆಪದಲ್ಲಿ ಸರಕಾರಕ್ಕೆ ಅದರ ಹಣವನ್ನು ನೀಡದೆ ಸ್ವಂತ ಜೇಬಿಗೆ ಹಾಕುವ ಪೋಲಿಸರ ಮೇಲೆ ಕ್ರಮ ಕೈಗೊಳ್ಳಬೇಕು….

ಬೆಂಗಳೂರಿನ ಯಲಹಂಕ ಪ್ರಕರಣ

policeನೆನ್ನೆೆ ಸುಮಾರು 11:30ರ ಆಸುಪಾಸಿನಲ್ಲಿ ಯಲಹಂಕದ ಕೋಗಿಲ್ ಕ್ರಾಸ್ ನಿಂದ ಹೆಬ್ಬಾಳದ ಕಡೆ ದ್ವಿಚಕ್ರವಾಹನದಲ್ಲಿ ಬರುತ್ತಿದ್ದ ಸಂಧರ್ಭದಲ್ಲಿ ರೈತರ ಸಂತೆ ಸರ್ಕಲ್ಲಿಗಿಂತ ಸ್ವಲ್ಪ ಮುಂದೆ ಟ್ರಾಫಿಕ್ ಪೋಲಿಸ್ ನನ್ನನ್ನು ಅಡ್ಡಗಟ್ಟಿದರು. ಸಾಧಾರಣವಾಗಿ ಅಲ್ಲಿ ಪ್ರತೀ ದಿನವೂ ಟ್ರಾಫಿಕ್ ಪೋಲಿಸರು ಇದೇ ರೀತಿಯ ತಪಾಸಣೆ ಮಾಡುವ ಕಾರಣ ಅದು ಅಚ್ಚರಿ ಎನಿಸಲಿಲ್ಲ. ಆದರೆ ನಂತರ ನಡೆದ ಪ್ರಕ್ರಿಯೆ ನಿಜಕ್ಕೂ ದಂಗು ಬಡಿಸಿತು.

ಗಾಡಿ ನಿಲ್ಲಿಸಿದ ತಕ್ಷಣ, ನನ್ನನ್ನು ಅಡಿಯಿಂದ ಮುಡಿಯವರೆಗೂ ಒಮ್ಮೆ ನೋಡಿ, ಹೆಲ್ಮೆಟ್ ಇದೆಯೇ, ಮುಖಕ್ಕೆ ಮಾಸ್ಕ್ ಧರಿಸಿದ್ದೇನೆಯೇ ಎಲ್ಲವನ್ನೂ ಒಮ್ಮೆ ಕೂಲಂಕುಶವಾಗಿ ಪರೀಕ್ಷಿಸಿದ ಪೋಲೀಸರೊಬ್ಬರು, ನನ್ನ ಗಾಡಿಯ ನಂಬರ್ ನೋಡಿದ ಕೂಡಲೇ ಅದನ್ನು ತಮ್ಮ ಬಳಿಯಿದ್ದ ಉಪಕರಣದಲ್ಲಿ ನಮೂದಿಸಿ, ಈ ಮೊದಲೇ ಯಾವುದಾದರೂ ದಂಡ ಬಾಕಿ ಇದೆಯೇ ಎಂದು ಕ್ಷಣಮಾತ್ರದಲ್ಲಿ ಪರೀಕ್ಷಿಸಿ ಎಲ್ಲವೂ ಸರಿ ಇದೆ ಎನಿಸಿದ ಮೇಲೆ, ಡ್ರೈವಿಂಗ್ ಲೈಸೆನ್ಸ್ ತೋರಿಸಿ ಎಂದು ಕೇಳಿದರು.

ಕೂಡಲೇ ನನ್ನ ಪರ್ಸ್ ತೆಗೆದು ಡ್ರೈವಿಂಗ್ ಲೈಸೆನ್ಸ್ ತೋರಿಸಿದೆ. ಅದೂ ಕೂಡಾ ಸರಿ ಇದೆೆ ಎನಿಸಿದ ಮೇಲೆ ಪೋನ್ ಪೇ ಇಲ್ಲಾ ಗೂಗಲ್ ಪೇ ಇದೆಯೇ? ಎಂದು ಕೇಳಿದ್ದಕ್ಕೆ ಹೌದು ಇದೆ ಎಂದೆ. ಹಾಗೆಂದ ಕೂಡಲೇ ಅಲ್ಲೇ ಪಕ್ಕದಲ್ಲಿಯೇ ನಿಂತಿದ್ದ ಅಪರಿಚಿತ ವ್ಯಕ್ತಿಯೊಬ್ಬರನ್ನು ತೋರಿಸಿ, ಇವರು ನಿಮಗೆ 200 ರೂ online Transfer ಮಾಡ್ತಾರೆ. ನೀವು ನಮಗೆ Cash ಕೊಡಿ ಎಂದಾಗ, ಒಮ್ಮಿಂದೊಮ್ಮೆಲೆ ಮನಸ್ಸಿಗೆ ಕಸಿವಿಸಿಯಾಗಿ, ಆ ವ್ಯಕ್ತಿಯನ್ನು ನೋಡಿದರೆ ಅವರ್ಯಾರೋ ಕೂಲಿ ಕೆಲಸ ಮಾಡುವ ವ್ಯಕ್ತಿಯಂತಿದ್ದು ನೋಡಲು ಅಮಾಯಕ ಎಂದೆನಿಸುತು.

ಸತ್ಯಂ ಬ್ರೂಯಾತ್ ಪ್ರಿಯಮ್ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ಚ ನಾನೃತಂ ಬ್ರೂಯಾದೇಷ ಧರ್ಮ: ಸನಾತನ: ||

ಸತ್ಯವಾದದ್ದನ್ನು ಹೇಳಬೇಕು, ಪ್ರಿಯವಾದದ್ದನ್ನು ಹೇಳಬೇಕು. ಕಹಿಯಾದ ಸತ್ಯವನ್ನು ಹೇಳಬಾರದು, ಹಾಗೆಯೇ ಪ್ರಿಯವಾದ ಅಸತ್ಯವನ್ನೂ ನುಡಿಯಬಾರದು. ಇದುವೇ ಸನಾತನ ಧರ್ಮ ಎನ್ನುವ ಸುಭಾಷಿತ ನೆನಪಾಗಿ ಕೂಡಲೇ ಇಲ್ಲಾ ಸರ್ ನನ್ನ ಬಳಿ ಚಿಲ್ಲರೆ ಇಲ್ಲಾ ಎನ್ನುತ್ತಾ, ಡ್ರೈವಿಂಗ್ ಲೈಸೆನ್ಸ್ ಪರ್ಸಿನಲ್ಲಿ ಇಟ್ಟು ಕೊಳ್ಳಲು ಮುಂದಾಗುತ್ತಿದ್ದಂತೆಯೇ, ಅರೇ ಅಲ್ಲೇ ಪರ್ಸಿನಲ್ಲಿ ಇದ್ಯಾಲ್ಲಾ ಅಂತ ಪೋಲೀಸರೇ ನೆನಪಿಸಿದರು.

ಇವರು ತೆಗೆದುಕೊಳ್ಳುವ ಲಂಚಕ್ಕೆ ನಾನೇಕೇ ಪರೋಕ್ಷವಾಗಿ ಕಾರಣೀಭೂತನಾಗ ಬೇಕು ಎಂದು ನಿರ್ಧರಿಸಿ ಇಲ್ಲಾ ಸರ್ ಬರೀ ನೂರು ರೂಪಾಯಿ ಐದು ನೂರು ರೂಪಾಯಿ ನೋಟು ಇದೆ ಎಂದು ಸುಳ್ಳನ್ನು ಹೇಳಿ ಗಾಡಿ ಸ್ಟಾರ್ಟ್ ಮಾಡಿಕೊಂಡು ಅಲ್ಲಿಂದ ಭರ್ ಎಂದು ಮನೆಯ ಕಡೆಗೆ ಬರುವಾಗ ನಾನು ಕೊಡದೇ ಹೋದರೆ ಏನಂತೆ ನನ್ನಂತಹ ಇನ್ನೊಬ್ಬರನ್ನು ಬಲೆಗೆ ಬೀಳಿಸಿಕೊಂಡು ಅವರ ಬಳಿ ಇದೇ ರೀತಿಯಲ್ಲಿ ಹಣ ತೆಗೆದುಕೊಂಡಿರುತ್ತಾರೆ ಎಂದೆನಿಸುತು.

ನಿಜ ಹೇಳಬೇಕು ಎಂದರೆ, ತಪ್ಪು ಮಾಡಿದವರಿಗೆ ಸುಮ್ಮನೇ ಬುದ್ಧಿ ಮಾತು ಹೇಳಿ ಕಳುಹಿಸಿದರೆ ತಮ್ಮ ತಪ್ಪನ್ನು ಅರಿತುಕೊಳ್ಳುವುದಿಲ್ಲ ಹಾಗಾಗಿಯೇ ಅವರಿಗೆ ಅಲ್ಪ ಪ್ರಮಾಣದಲ್ಲಿ ದಂಡ ವಿಧಿಸಿದಾಗ, ಕೈಯಿಂದ ಹಣ ಖರ್ಚಾದಾಗಲಾದರೂ ಬುದ್ಧಿ ಬರಬಹುದು ಎನ್ನುವ ಕಾರಣಕ್ಕೆ ಸರ್ಕಾರ ದಂಡದ ಮೊತ್ತವನ್ನು ನಿಗಧಿತ ಪಡಿಸಿ ಅದನ್ನು ಸಂಗ್ರಹಿಸಲು ಪೋಲೀಸರಿಗೆ ಅನುಮತಿ ನೀಡಿರುತ್ತದೆ. ಹಾಗೆ ಸಂಗ್ರಹಿಸುವ ಹಣದ ಲೆಖ್ಖ ಸರಿಯಾಗಿ ಸಿಗಲಿ ಎನ್ನುವ ಕಾರಣದಿಂದಾಗಿಯೇ ಇತ್ತೀಚೆಗೆ ಎಲ್ಲರಿಗೂ ಡಿಜಿಟಲ್ ಮೂಲಕ ಸಂಗ್ರಹಿಸುವ ಸೌಲಭ್ಯವನ್ನೂ ಕೊಟ್ಟಿದೆ.

ಆದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವಂತೆ, ಸರ್ಕಾರದಿಂದ ತಿಂಗಳು ತಿಂಗಳೂ ಸರಿಯಾಗಿ ಸಂಬಳ ಎಣಿಸಿಕೊಳ್ಳುತ್ತಿದ್ದರೂ, ಮೇಲೆ ತಿಳಿಸಿದ ಎರಡೂ ಪ್ರಕರಣಗಳಲ್ಲಿ ರಕ್ಷಕರೇ ಈ ರೀತಿಯಲ್ಲಿ ಭಕ್ಷಕರಾಗಿ ಸರ್ಕಾರಕ್ಕೆ ಸಲ್ಲಬೇಕಾದ ದಂಡವನ್ನು ಹಾಡು ಹಗಲಲ್ಲೇ ನಟ್ಟ ನಡು ರಸ್ತೆಯಲ್ಲೇ ಈ ಪರಿಯಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಇಂತಹವರನ್ನು ಹಿಡಿದು, ಅವರಿಗೆ ದಂಡ ಹಾಕಿ ಬುದ್ಧಿ ಕಲಿಸುವವರು ಯಾರು? ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ಆದಷ್ಟು ಶೇರ್ ಮಾಡಿ, ಪೋಲಿಸ್ ಕಮೀಷನರ್ ರವರಿಗೆ ಈ ವಿಷಯವನ್ನು ಮುಟ್ಟಿಸೋಣ…..

ಏನಂತೀರೀ?
ನಿಮ್ಮವನೇ ಉಮಾಸುತ