ಲಾಸ್ಟ್ ಬೆಂಚ್ ಹುಡುಗರು

teacher1ಅದೊಂದು ಸರ್ಕಾರೀ ಕರೋನಾ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಕೆ ಅತ್ತ ಮಲಗಲೂ ಆಗದೇ ಪುಸ್ತಕವನ್ನೂ ಓದಲು ಆಗದೇ ಹಾಗೆಯೇ ಹಾಸಿಗೆಯ ಮೇಲೆ ನರಳಾಡುತ್ತಿದ್ದಾಗ ಆಕೆಯ ಮೊಬೈಲ್ ರಿಂಗಣಿಸಿದಾಗ, ಯಾರಪ್ಪಾ ಈಗ ಕರೆ ಮಾಡಿರುವುದು ಎಂದು ಕೈಯಲ್ಲಿದ್ದ ಪುಸ್ತಕವನ್ನು ಪಕ್ಕಟ್ಟಿಟ್ಟು, ಮೊಬೈಲ್ ನೋಡಿದಾಗ ಅದಾವುದೋ ಹೊಸಾ ನಂಬರಿನಿಂದ ಬಂದ ಕರೆಯಾಗಿರುತ್ತದೆ. ಸಾಧಾರಣ ದಿನಗಳಲ್ಲಿ ಅಂತಹ ಕರೆಗಳನ್ನು ಸ್ವೀಕರಿಸದೇ ಇದ್ದ ಆಕೆ ಇಲ್ಲಿ ಆಸ್ಪತ್ರೆಯಲ್ಲಿ ಒಬ್ಬರೇ ಏಕಾಂಗಿಯಾಗಿ ಬೇರೇನೂ ಮಾಡಲು ಕೆಲಸವಿಲ್ಲದ ಕಾರಣ, ಆ ಕರೆಯನ್ನು ಸ್ವೀಕರಿಸುತ್ತಾರೆ.

ನಮಸ್ಕಾರ. ಶುಭ ದಿನ ಮೇಡಂ ನಾನು ಸುಜಿತ್ ಗೋಪಾಲಕೃಷ್ಣ ದುಬೈನಿಂದ ಕರೆ ಮಾಡುತ್ತಿದ್ದೇನೆ. ನಾನು ಶ್ರೀಮತಿ ಸೀಮಾ ಕನಕಾಂಬರನ್ ಆವರ ಜೊತೆ ಮಾತನಾಡುತ್ತಿದ್ದೇನೆಯೇ? ಎಂದು ವಿಚಾರಿಸುತ್ತಾರೆ.

ಹೌದು ನೀವು ಸೀಮಾಳೊಂದಿಗೆ ಮಾತನಾಡುತ್ತಿದ್ದೀರಿ. ದಯವಿಟ್ಟು ಕ್ಷಮಿಸಿ ನಿಮ್ಮ ಪರಿಚಯವಾಗಲಿಲ್ಲ ಎಂದು ಕೇಳುತ್ತಾರೆ.

ಕೆಲವು ಕ್ಷಣಗಳ ಕಾಲದ ನಿಶ್ಯಬ್ಧದ ನಂತರ ಆ ವ್ಯಕ್ತಿ ಕೆಲವು ವರ್ಷಗಳ ಹಿಂದೆ, ನಾನು 10 ನೇ ತರಗತಿಯಲ್ಲಿದ್ದಾಗ ನೀವು ನನ್ನ ತರಗತಿಯ ಶಿಕ್ಷಕರಾಗಿದ್ದಿರಿ ಮೇಡಂ ಎಂದು ತನ್ನ ಪರಿಚಯ ಮಾಡಿಕೊಳ್ಳುತ್ತಾರೆ.

ಹೌದಾ ತುಂಬಾ ಸಂತೋಷ. ನಾನೀಗ ಕೋವಿಡ್ ಚಿಕಿತ್ಸೆಗಾಗಿ ಆಸ್ಪತೆಯಲ್ಲಿದ್ದೇನೆ. ತೀರಾ ಅನಿವಾರ್ಯವಿಲ್ಲದಿದ್ದಲ್ಲಿ, ನೀವು ಮತ್ತೊಮ್ಮೆ ಕರೆ ಮಾಡಬಹುದೇ? ಎಂದು ಕೇಳಿಕೊಳ್ಳುತ್ತಾರೆ.

ಹೌದು ಮೇಡಂ. ನಿಮ್ಮ ಅನಾರೋಗ್ಯದ ವಿಷಯವನು ನಮ್ಮ ಬ್ಯಾಚ್ 1995 ರ ಕ್ಲಾಸ್ ಟಾಪರ್ ಸುಬ್ಬುವಿನಿಂದ ತಿಳಿದುಕೊಂಡೆ ಅದಕ್ಕಾಗಿಯೇ ಕರೆಮಾಡುತ್ತಿದ್ದೇನೆ ಎನ್ನುತ್ತಾರೆ ಸುಜಿತ್.

ಓಹೋ ಸುಬ್ಬು. ಅವನು ನನಗೆ ಚೆನ್ನಾಗಿ ನೆನಪಿನಲ್ಲಿದ್ದಾನೆ. ಆದರೆ ನಿಮ್ಮನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಆ ಶಿಕ್ಷಕಿ.

ಮೇಡಂ ನಾನು ಕಡೆಯ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದ ಕಪ್ಪನೆಯ ಎತ್ತರದ ಹುಡುಗ. ಸದಾಕಾಲವೂ ನಿಮಗೆ ಅತ್ಯಂತ ತೊಂದರೆ ಕೊಡುತ್ತಿದ್ದ ಹುಡುಗ. ಬಹುಶಃ ಈಗ ನಿಮಗೆ ನನ್ನ ನೆನಪಾಗಬಹುದು ಎಂದು ಕೊಳ್ಳುತ್ತೇನೆ ಎನ್ನುತ್ತಾರೆ ಸುಜಿತ್.

ಮೊದಲು ಮಾತನಾಡುವುದೇ ಬೇಡ ಎಂದು ಕೊಂಡಿದ್ದ ಆ ಶಿಕ್ಷಕಿಯು ತಮ್ಮ ಹಳೆಯ ವಿದ್ಯಾರ್ಥಿಯೊಬ್ಬನ ಕರೆಯು ಆಸಕ್ತಿದಾಯಕವಾಗಿ ಮತ್ತೊಂದು ದಿಂಬನ್ನು ತಲೆಯ ಮೇಲೆ ಇಟ್ಟು ಕೊಂಡು ಹಾಯಾಗಿ ಕುಳಿತುಕೊಳ್ಳುತ್ತಲೇ, ಇದ್ದಕ್ಕಿದ್ದಂತೆಯೇ ನನ್ನನ್ನು ನೆನಪಿಸಿಕೊಳ್ಳಲು ಕಾರಣವೇನು? ಎಂದು ವಿಚಾರಿಸಿದರು.

ನೀವು ಆಸ್ಪತ್ರೆಗೆ ದಾಖಲಾಗಿದ್ದೀರಿ ಎಂದು ನನಗೆ ತಿಳಿದಾಗ, ನಾನು 1995 ನೇ ತರಗತಿಯ ಎಲ್ಲ ಸ್ನೇಹಿತರೊಂದಿಗೆ ಮಾತಾನಾಡಿ ನಿಮ್ಮೊಂದಿಗೆ ಕಾನ್ಫರೆನ್ಸ್ ಕಾಲ್ ಮಾಡಲು ಯೋ‍ಚಿಸಿ. ಸುಮಾರು 7 ಸ್ನೇಹಿತರನ್ನು ಈ ಕರೆಯಲ್ಲಿ ಸೇರಿಕೊಳ್ಳುವಂತೆ ಮಾಡಲು ಯಶಸ್ವಿಯಾಗಿದ್ದೇನೆ. ನೀವು ಮಾತನಾಡುತ್ತಿರುವುದನ್ನು ಅವರೆಲ್ಲರೂ ಕೇಳುತ್ತಿದ್ದಾರೆ ಮೇಡಂ. ನೀವು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಶುಭ ಕೋರುವ ಸಲುವಾಗಿ ನಾವು ಕರೆ ಮಾಡಿದ್ದೇವೆ ಮೇಡಂ ಎಂದು ಸುಜಿತ್ ಹೇಳುತ್ತಾರೆ.

ಈ ಮಾತುಗಳನ್ನು ಕೇಳುತಲ್ಲೇ ಶಿಕ್ಷಕಿಯವರು ಒಂದು ಕ್ಷಣ ಗದ್ಗತಿರಾಗಿ ನಂತರ ಸುಧಾರಿಸಿಕೊಳ್ಳುತ್ತಾ ಮತ್ತೆ ನೀನು ಈಗ ಎಲ್ಲಿದ್ದೀಯಾ? ಮತ್ತು ಏನು ಮಾಡುತ್ತಿದ್ದೀಯಾ? ಎಂದು ವಿಚಾರಿಸುತ್ತಾರೆ.

ಮೇಡಂ, ಸದ್ಯದಲ್ಲಿ ನಾನು ದುಬೈನಲ್ಲಿ ನನ್ನದೇ ಆದ ಸ್ವಂತದ ಲಾಜಿಸ್ಟಿಕ್ಸ್ ವ್ಯವಹಾರವನ್ನು ನಡೆಸುತ್ತಿದ್ದೇನೆ. ಕೆಲಸ ಹುಡುಕಿಕೊಂಡು ಇಲ್ಲಿಗೆ ಬಂದು ಕಡೆಗೆ ಯಶಸ್ವಿ ಉದ್ಯಮಿಯಾಗಿ ಪರಿವರ್ತನೆಗೊಂಡಿದ್ದೇನೆ. ನನ್ನ ಸಂಸ್ಥೆಯಲ್ಲಿ ಈಗ ಸುಮಾರು 2000 ಉದ್ಯೋಗಿಗಳಿದ್ದಾರೆ ಎಂದು ಹೇಳುತ್ತಲೇ ಮಾತನ್ನು ಮುಂದುವರೆಸಿದ ಸುಜಿತ್, ನಾವು 10 ನೇ ತರಗತಿಯಲ್ಲಿದ್ದಾಗ, ನೀವು ಬಹಳ ಶಿಸ್ತಿನ ಶಿಕ್ಷಕಿಯಾಗಿದ್ದಿರಿ. ಆದರೂ ಹಿಂದಿನ ಬೆಂಚಿನಲ್ಲಿ ಕುಳಿತು ಅತ್ಯಂತ ಗದ್ದಲದ ಮತ್ತು ಅಶಿಸ್ತಿನ ವಿದ್ಯಾರ್ಥಿಗಳ ನಾಯಕನಾಗಿದ್ದ ನನ್ನ ಬಳಿ ಬಂದು ಓದಿನ ಬಗ್ಗೆ ಗಮನ ಹರಿಸುವಂತೆ ಆತ್ಮವಿಶ್ವಾಸವನ್ನು ತುಂಬುತ್ತಿದ್ದಿರಿ.

teacher2ನಿಜ ಹೇಳಬೇಕೆಂದರೆ ಅದೆಷ್ಟೋ ಬಾರಿ ನೀವು ನನ್ನನ್ನು ತರಗತಿಯ ಹೊರಗೆ ಮತ್ತು ಕೆಲವೊಮ್ಮೆ ತರಗತಿಯ ಒಳಗೆ, ಬೆಂಚ್ ಮೇಲೆ ನಿಲ್ಲುವಂತೆ ಮಾಡಿದ್ದೀರಿ. ತರಗತಿಯ ಹೊರಗೆ ನಿಂತು ಮತ್ತು ಕೆಲವೊಮ್ಮೆ ತರಗತಿಯಲ್ಲಿ ಎಲ್ಲರ ಮುಂದೆ ಬೆಂಚ್ ಮೇಲೆ ನಿಂತುಕೊಳ್ಳುವಂತಹ ಅನುಭವಗಳು ನಂತರ ನನ್ನ ಜೀವನದಲ್ಲಿ ಬಹಳ ಸಹಾಯ ಮಾಡಿದವು ಎಂದರೂ ತಪ್ಪಾಗಲಾರದು. ಬೆಂಚ್ ಮೇಲೆ ನಿಂತು ಇಡೀ ತರಗತಿಯನ್ನು ನೋಡುತ್ತಿದ್ದ ಪಕ್ಷಿನೋಟದ ಪಾಠ ನಿಜಕ್ಕೂ ನನ್ನ ಜೀವನ ಮತ್ತು ವ್ಯವಹಾರದಲ್ಲಿ ಸಹಾಯ ಮಾಡಿದೆ. ನಾನಿಂದು ಏನೇ ಆಗಿದ್ದರೂ ಅದರ ಸಂಪೂರ್ಣ ಶ್ರೇಯ ನಿಮಗೆ ಸಲ್ಲುತ್ತದೆ ಅದಕ್ಕಾಗಿ ನಾನು ಸದಾ ಕಾಲವೂ ಋಣಿಯಾಗಿದ್ದೇನೆ.

ಸುಜಿತ್ ಮಾತುಗಳನ್ನು ಮೌನವಾಗಿ ಕೇಳುತ್ತಲೇ ಹೋದ ಶಿಕ್ಷಕಿಯವರಿಗೆ ಅರಿವಿಲ್ಲದಂತೆಯೇ ಕಣ್ಣುಗಳಲ್ಲಿ ಆನಂದ ಭಾಷ್ಪ ಸುರಿಯುತ್ತಿತ್ತಲ್ಲದೇ, ಹಾಗೆಯೇ ಕಣ್ಣುಗಳನ್ನು ಒರೆಸಿಕೊಂಡು, 1995ರ ತರಗತಿಯ ನನೆಪಿನಂಗಳಕ್ಕೆ ಜಾರಿ ಹೋದರು.

teacher3ಹೌದು 1995ರ ಹತ್ತನೇ ತರಗತಿಯಲ್ಲಿದ್ದ ಎತ್ತರದ ಕಪ್ಪನೆಯೆ ಅತ್ಯಂತ ತರಲೆ ಹುಡುಗ, ತರಗತಿಗೆ ಸದಾಕಾಲವೂ ತಡವಾಗಿ ಬರುತ್ತಿದ್ದರೆ ಅದೆಷ್ಟೋ ತರಗತಿಗಳನ್ನು ಬಂಕ್ ಮಾಡಿ ಹುಡುಗರ ಗುಂಪನ್ನು ಕಟ್ಟಿಕೊಂಡು ಚಲನಚಿತ್ರಗಳಿಗೆ ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ. ಎಂದಿಗೂ ಮನೆಕೆಲಸ ಮಾಡದೇ ಶಿಕ್ಷೆಯನ್ನು ಅನುಭವಿಸುತ್ತಿದ್ದವನು. ಪದೇ ಪದೇ ಪೋಷಕರೊಂದಿಗೆ ಶಿಕ್ಷಕರ ಕೊಠಡಿಗೆ ಬರುತ್ತಿದ್ದಂತಹ ಶಿಕ್ಷಕರುಗಳಿಗೆ ಒಂದು ರೀತಿಯ ದುಃಸ್ವಪ್ನವಾಗಿದ್ದಂತಹ ವಿದ್ಯಾರ್ಥಿ. ಹೀಗೆ ಎಲ್ಲವೂ ಅವರ ಕಣ್ಣ ಮುಂದೆ ಬಂದು ಹೋದವು.

teacher4ಇದ್ದಕ್ಕಿದ್ದಂತೆಯೇ ಕೆಲ ಕ್ಷಣಗಳ ಕಾಲ ಯಾರೂ ಮಾತನಾಡದೇ ಮೌನವು ಆವರಿಸಿದಾಗ, ಮೇಡಂ ಇದ್ದೀರಾ? ಎಂದು ಸುಜಿತ್ ಕೇಳುತ್ತಿದ್ದಂತೆಯೇ, ಸಾವರಿಸಿಕೊಂಡ ಶಿಕ್ಷಕಿಯು ಮಾತನ್ನು ಮುಂದುವರಿಸುತ್ತಾ ಸುಜಿತ್, ನೀನು ಶಾಲೆಯನ್ನು ಬಿಟ್ಟು ಹೋದ ನಂತರ ನಿನ್ನ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಈಗ ಇದ್ದಕ್ಕಿದ್ದಂತೆಯೇ ನೀವೆಲ್ಲಾ ಅಚಾನಕ್ಕೆ ಕರೆ ಮಾಡಿದ್ದು ನನಗೆ ತುಂಬಾ ಆಶ್ಚರ್ಯ ಮತ್ತು ಸಂತೋಷವಾಗಿದೆ ಎಂದಿದ್ದಲ್ಲದೇ ಕಾನ್ಫರೆನ್ಸ್ ಕರೆಯಲ್ಲಿದ್ದ ಪ್ರತಿಯೊಬ್ಬರನ್ನು ವಿಚಾರಿಸಿಕೊಂಡಾಗ ಆಕೆಗೆ ತಿಳಿದು ಬಂದ ಸಂಗತಿಯೆಂದರೆ, ಇತರ ಆರು ಜನರಲ್ಲಿ, ಮೂವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್ಗಳಾಗಿದ್ದರೆ, ದೆಹಲಿಯಲ್ಲಿ ಒಬ್ಬ ವೈದ್ಯರು, ಶಿಲ್ಲಾಂಗ್ನಲ್ಲಿ ಒಬ್ಬರು ಪಾದ್ರಿ ಮತ್ತು ಕಡೆಯದಾಗಿ ಕ್ಲಾಸ್ ಟಾಪರ್ ಸುಬ್ಬು ಕೂಡಾ ಇದ್ದರು.

ಸುಬ್ಬು ನೀನೇನು ಮಾಡ್ತಿದ್ದೀಯಪ್ಪಾ ಎಂದು ಶಿಕ್ಷಕಿಯು ಕೇಳಿದಾಗ, ಮೇಡಂ ನಾನು ಚಾರ್ಟರ್ಡ್ ಅಕೌಂಟೆಂಟ್ ಮುಗಿಸಿ ಮೊದಲು ಕೆಪಿಎಂಜಿ ಕಂಪನಿಯಲ್ಲಿ ಕೆಲ ವರ್ಷಗಳ ಕಾಲ ಕೆಲಸ ಮಾಡಿದ ನಂತರ ಈಗ ನಾನು ಸುಜಿತ್ ಕಂಪನಿಯಲ್ಲಿ ಸಿಎಫ್ಒ ಆಗಿ ಕೆಲಸ ಮಾಡುತ್ತಿದ್ದೇನೆ ಎಂದಾಗ ಶಿಕ್ಷಕಿಯವರಿಗೆ ಒಂದು ಕ್ಷಣ ನಂಬಲು ಸಾಧ್ಯವಾಗಲಿಲ್ಲ.

ಅಲ್ಲಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಳ್ಳುವಷ್ಟರಲ್ಲಿ ಸುಮಾರು ಒಂದು ಗಂಟೆಯಾಗಿ ಹೋದದ್ದು ಯಾರಿಗೂ ಗೊತ್ತಾಗಲೇ ಇಲ್ಲ. ತಮ್ಮ ನೆಚ್ಚಿನ ಶಿಕ್ಷಕಿಯವರ ಆರೋಗ್ಯ ಸರಿ ಇಲ್ಲದಿದ್ದಾಗ, ಇಷ್ಟು ಸುಧೀರ್ಘವಾದ ಕರೆ ಮಾಡಿದ್ದಕ್ಕಾಗಿ ಸುಜಿತ್ ಕ್ಷಮೆಯಾಚಿಸಿದ್ದಲ್ಲದೇ ತಮ್ಮ ಪ್ರೀತಿಯ ಶಿಕ್ಷಕಿಯವರು ಅತ್ಯಂತ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಶುಭ ಕೋರಿದ್ದಲ್ಲದೇ, ಮುಂದಿನ ಬಾರಿ ಭಾರತಕ್ಕೆ ಬಂದಾಗ ಖಂಡಿತವಾಗಿಯೂ ಮುಖಾಮುಖಿಯಾಗಿ ಭೇಟಿ ಮಾಡುವುದಾಗಿ ಭರವಸೆ ನೀಡಿದರು.

ಕೋವಿಡ್ 19 ಐಸೊಲೇಷನ್ ವಾರ್ಡ್ನಲ್ಲಿ ಏಕಾಂಗಿಯಾಗಿ, ಆನಂದ ಭಾಷ್ಪವನ್ನು ಸುರಿಸುತ್ತಾ ಆಕೆಯ ಹೃದಯವನ್ನು ತುಂಬಿ ಬಂದಿದ್ದಲ್ಲದೇ ಆಕೆಗೇ ಅರಿವಿಲ್ಲದಂತೆ ಅವರ ಕೆನ್ನೆಯವರೆಗೂ ಕಣ್ಣೀರು ಹರಿಯುತ್ತಿದ್ದದ್ದನ್ನೂ ಗಮನಿಸದೇ, ಲಾಸ್ಟ್ ಬೆಂಚ್ ಹುಡುಗ ತನಗೆ ನೀಡಿದ ಶಿಕ್ಷೆಯನ್ನು ಶಿಕ್ಷೆ ಎಂದು ಭಾವಿಸದೇ ಅದೇ ತನ್ನ ಕಲಿಕೆ ಎಂದು ಭಾವಿಸಿ ತರಗತಿಯ ಒಳಗೆ ಮತ್ತು ಹೊರಗೆ ಕಲಿತಿದ್ದನ್ನು ನಿಜವಾಗಿಯೂ ತನ್ನ ನಿಜ ಜೀವನದಲ್ಲಿ ಅನ್ವಯಿಸಿಕೊಂಡು ಯಶಸ್ವಿಯಾಗಿರುವುದು ಅವರಿಗೆ ಅಚ್ಚರಿ ಮತ್ತು ಸಂತೋಷವನ್ನು ತಂದಿತ್ತು.

  • ತರಗತಿಯ ಕೊನೆಯ ಬೆಂಚ್ ಮೇಲೆ ನಿಂತು, ಇಡೀ ತರಗತಿಯ ಮೇಲಿನ ಪಕ್ಷಿನೋಟ ಮುಂದೆ ತನ್ನ ಸಹೋದ್ಯೋಗಿಗಳ ಮೇಲೆ ಗಮನ ಹರಿಸುವಂತೆ ಸಹಕರಿಸುತ್ತು.
  • ಉಳಿದ ವಿದ್ಯಾರ್ಥಿಗಳೆಲ್ಲರೂ ತರಗತಿಯ ಒಳಗೆ 4 ಗೋಡೆಗಳ ಒಳಗೆ ಸೀಮಿತವಾದರೆ, ಆತ ಮಾತ್ರಾ ತರಗತಿಯ ಹೊರಗೆ ನಿಂತು ಉಳಿದವರಿಗಿಂತ ಹೆಚ್ಚಿನ ದೃಷ್ಟಿಕೋನವನ್ನು ಹರಿಸಲು ಸಹಕಾರಿಯಾಗಿತ್ತು.
  • ತರಗತಿಗೆ ಬಂಕಿಂಗ್ ಸಿಕ್ಕಿ ಕೊಂಡಾಗ ಚಿಕ್ಕ ವಯಸ್ಸಿನಲ್ಲೇ ಅಪಾಯಗಳನ್ನು ಎದುರಿಸಿ ಅದರಿಂದ ಹೇಗೆ ಹೊರ ಬೇಕು ಎಂಬುದನ್ನು ಕಲಿತರು.
  • ಊಟದ ಸಮಯದಲ್ಲಿ ಪದೇ ಪದೇ ಶಿಕ್ಷಕರ ಕೋಣೆಗೆ ಬಂದು ಶಿಕ್ಶಕಿಯರೊಡನೆ ಮಾಡಿದ ತಪ್ಪಿಗಾಗಿ ಕ್ಷಮೆ ಕೇಳುವ ಮೂಲಕ ಸಂಧಾನದ ಕಲೆಯನ್ನು ಕರಗತ ಮಾಡಿಕೊಂಡಿದ್ದಲ್ಲದೇ ತನ್ಮೂಲಕ ತನಗೆ ದೊರೆಯುತ್ತಿದ್ದ ಶಿಕ್ಷೆಯ ಪ್ರಮಾಣವನ್ನೂ ಕಡಿಮೆ ಮಾಡಿ ಕೊಳ್ಳುವ ಕಲೆಯನ್ನು ಸಿದ್ಧಿಸಿಕೊಂಡರು.

ಶಾಲೆಯಲ್ಲಿ ಕಡೆಯ ಬೆಂಚಿನಲ್ಲಿ ಕುಳಿತು ಕೊಳ್ಳುತ್ತಿದ್ದ ಸುಜಿತ್ ಓದುವಾಗ ಗಣಿತದಲ್ಲಿ ಕಳೆದುಕೊಂಡ ಅಂಕಗಳನ್ನು ಜೀವನದಲ್ಲಿ ಗಳಿಸಿಕೊಂಡರೆ, ತರಗತಿಯಲ್ಲಿ ಮುಂದಿನ ಬೆಂಚಿನ ವಿದ್ಯಾರ್ಥಿಯಾಗಿ ಸದಾಕಾಲವೂ ಗಣಿತದಲ್ಲಿ 100 % ಅಂಕಗಳನ್ನು ಪಡೆಯುತ್ತಿದ್ದ ಸುಬ್ಬು ಈಗ ಅದೇ ಲಾಸ್ಟ್ ಬೆಂಚಿನ ಹುಡುಗನ ಅಧೀನದಲ್ಲಿ ಕೆಲಸ ಮಾಡುತ್ತಿರುವುದು ನಿಜಕ್ಕೂ ಅಧ್ಭುತ ಎಂದೇ ಆಕೆ ಭಾವಿಸಿದರು.

ಕಳೆದ ಎರಡು ವರ್ಷಗಳ ಕಾಲ ಕೋವಿಡ್ ಮಹಾಮಾರಿಯಿಂದಾಗಿ ಎಲ್ಲವೂ online ಮುಖಾಂತರವೇ ಕಲಿಯುತ್ತಿರುವ ಮಕ್ಕಳು ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ತೇರ್ಗಡೆ ಹೊಂದಬಹುದು ಆದರೆ ಮುಂದೆ ಜೀವನದ ಪರೀಕ್ಷೆಯಲ್ಲಿ ಹೇಗೆ ತೇರ್ಗಡೆಯಾಗುತ್ತಾರೆ ಎಂಬುದಷ್ಟೇ ಮುಖ್ಯವಾಗುತ್ತದೆ. ಸಮಾಜದಲ್ಲಿ ಸುಜಿತ್ ಮತ್ತು ಸುಬ್ಬು ನಂತಹ ವಿದ್ಯಾರ್ಥಿಗಳು ಇರಲೇ ಬೇಕು. ಆಗ ಮಾತ್ರ ಸಮಾಜ ಅಭಿವೃದ್ಧಿಯಾಗುತ್ತದೆ.

ಅದಕ್ಕಾಗಿಯೇ ಸಮಾಜದಲ್ಲಿ ಯಶಸ್ವಿಗಳಿಸ ಬೇಕಾದಲ್ಲಿ ಕೇವಲ ತರಗತಿಯಲ್ಲಿ ಗಳಿಸುವ ಅಂಕಗಳು ಒಂದೇ ಸಾಲುವುದಿಲ್ಲ.

ಶಾಲೆಯ ಕಲಿಕೆಯಿಂದ 10 % .
ಗೆಳೆಯರೊಡನೆಯ ಸಹವಾಸದಿಂದ 20 %
ಮತ್ತು ಉಳಿದ 70 % ವಿದ್ಯೆಯನ್ನು ಜೀವನದ ಅನುಭವದ ಪಾಠ ಕಲಿಸುತ್ತದೆ.

bilgatesಇದೇ ರೀತಿಯ ಅನುಭವ ಮೈಕ್ರೋಸಾಫ್ಟ್ ಕಂಪನಿಯ ಸಂಸ್ಥಾಪಕರಾದ ಬಿಲ್ ಗೇಟ್ಸ್ ಅವರ ಜೀವನದಲ್ಲೂ ನಡೆದಿದೆ. ಅವರೂ ಸಹಾ ನಾನಾ ಕಾರಣಗಳಿಂದಾಗಿ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ ಕೆಲಸಕ್ಕೆ ಸೇರಿ ದುಡಿಯಲಾರಂಭಿಸಿ ನಂತರ ತಮ್ಮದೇ ಅನುಭವವನ್ನು ಮೂಸೆಗೆ ಹಚ್ಚಿ ಮೈಕ್ರೋಸಾಫ್ಟ್ ಎಂಬು ದೊಡ್ಡ ಕಂಪನಿಯನ್ನು ಕಟ್ಟಿ ಪ್ರಪಂಚಾದ್ಯಂತ ಕೋಟ್ಯಾಂತರ ಜನರಿಗೆ ಉದ್ಯೋಗವನ್ನು ನೀಡುತ್ತಿರುವ ವಿಷಯ ಎಲ್ಲರಿಗೂ ತಿಳಿದಿರುವ ಸಂಗತಿಯಾದರೆ, ಬಹುತೇಕರಿಗೆ ತಿಳಿಯದ ಸಂಗತಿ ಎಂದರೆ ಅಂದು ಅವರ ತರಗತಿಗಳಲ್ಲಿ ಸಹಪಾಠಿಗಳಾಗಿ ಅತ್ಯಂತ ಬುದ್ದಿವಂತರಾಗಿ ಅತಿ ಹೆಚ್ಚಿನ ಅಂಕಗಳಿಸಿ ತೇರ್ಗಡೆ ಹೊಂದಿದ ಬಹುತೇಕರು ಇಂದು ಬಿಲ್ ಗೇಟ್ಸ್ ಅವರ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಉದ್ಯೋಗಿಗಳಾಗಿದ್ದಾರೆ.

teacher5ಅದಕ್ಕೇ ಹೇಳೋದು ಎಲ್ಲಾ ಲಾಸ್ಟ್ ಬೆಂಚಿನ ಹುಡುಗರು ದಡ್ಡರಾಗಿರುವುದಿಲ್ಲ ಮತ್ತು ಫಸ್ಟ್ ಬೆಂಚಿನ ಹುಡುಗರೆಲ್ಲರು ಬುದ್ಧಿವಂತರಾಗಿರುವುದಿಲ್ಲ. ಮುಂದಿನ ಬೆಂಚಿನ ಹುಡುಗರು ಪರೀಕ್ಷೆಯಲ್ಲಿ ಅಂಕಗಳನ್ನು ಗಳಿಸುವುದರಲ್ಲಿ ಮುಂದಿದ್ದರೇ ಹಿಂದಿನ ಬೆಂಚಿನ ಹುಡುಗರು ತರಗತಿಯ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದರೂ ಜೀವನದ ಪರೀಕ್ಷೆಯಲ್ಲಿ ಅತ್ಯಂತ ಯಶಸ್ಸನ್ನು ಕಾಣುತ್ತಾರೆ. ಇದನ್ನೇ ಅಲ್ಲವೇ ತ್ರೀ ಈಡಿಯಟ್ಸ್ ಸಿನಿಮಾದಲ್ಲೂ ತೋರಿಸಿರುವುದು.

ಏನಂತೀರೀ
ನಿಮ್ಮವನೇ ಉಮಾಸುತ

ಈ ಕಥೆಯು ಕೇರಳದ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯಾಗಿರುವ ಶ್ರೀಮತಿ ಸೀಮಾ ಕನಕಾಂಬರನ್ ಅವರ ನಿಜ ಜೀವನದ ಪ್ರಸಂಗದಿಂದ ಸ್ಫೂರ್ತಿ ಪಡೆದು ಅವರ ಸಂಬಂಧಿಯೊಬ್ಬರು ಬರೆದಿದ್ದ ಆಂಗ್ಲ ಸಂದೇಶವೊಂದರ ಭಾವಾನುವಾದವಾಗಿದೆ.