ಅದೊಂದು ಮಧ್ಯಮ ವರ್ಗದ ಕುಟುಂಬ. ಯಜಮಾನರು ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯೊಡತಿ ಅಪ್ಪಟ ಗೃಹಿಣಿ. ಇರುವ ಒಬ್ಬನೇ ಒಬ್ಬ ಮಗನನ್ನು ಹೊಟ್ಟೆ, ಬಟ್ಟೆ ಕಟ್ಟಿ ಸಾಕಿ ಸಲಹಿ ಒಳ್ಳೆಯ ವಿದ್ಯಾವಂತನನ್ನಾಗಿ ಮಾಡಿದರು. ಆ ಹುಡುಗನೂ ಅಷ್ಟೇ ತಂಬಾ ಬುದ್ಧಿವಂತ. ಕಠಿಣ ಪರಿಶ್ರಮದಿಂದ ಓದಿ ಐದಂಕಿ ಸಂಬಳ ಪಡೆಯುವಷ್ಟು ಎತ್ತರಕ್ಕೆ ಬೆಳೆದ. ವಯಸ್ಸಿಗೆ ಬಂದ ಮಗನಿಗೆ ವಧು ಅನ್ವೇಷಣೆಗಾಗಿ ವಧುವರ ಕೇಂದ್ರಕ್ಕೆ ಹೋಗಿದ್ದರು.
ಅದೇ ಸಮಯಕ್ಕೆ ಊರಿನ ಮತ್ತೊಂದು ಭಾಗದಲ್ಲಿದ್ದ ಇನ್ನೊಂದು ಮಧ್ಯಮ ವರ್ಗದ ಕುಟುಂಬದ ಒಬ್ಬಳೇ ಸುರದ್ರೂಪಿಯಾದ ಡಿಗ್ರಿ ಮುಗಿಸಿ ಹತ್ತಿರದ ಕಾಲ್ ಸೆಂಟರ್ ಒಂದರಲ್ಲಿ ಕೆಲಸ ಮಾಡುತ್ತಾ ತಕ್ಕಮಟ್ಟಿಗೆ ಸಂಬಳ ಪಡೆಯುತ್ತಿದ್ದ (ಅವಳ ದುಡಿಮೆ ಅವಳ ಅಲಂಕಾರಿಕ ವಸ್ತುಗಳಿಗೇ ಖರ್ಚಾಗುತ್ತಿತ್ತು) ಹೆಣ್ಣಿನ ತಂದೆ ತಾಯಿಯರೂ ಅದೇ ಕೇಂದ್ರಕ್ಕೆ ಬಂದಿದ್ದರು .ಅಲ್ಲಿ ಒಬ್ಬರಿಗೊಬ್ಬರು ಪರಿಚಯವಾಗಿ ಹುಡುಗಿಯ ಸೌಂದರ್ಯಕ್ಕೆ ಹುಡುಗ, ಹುಡುಗನ ಸಂಬಳಕ್ಕೆ ಹುಡುಗಿ, ಪರಸ್ಪರ ಆಕರ್ಷಿತರಾಗಿ ಇಬ್ಬರಿಗೂ ಮದುವೆ ನಿಶ್ಚಯವಾಯಿತು.
ಒಳ್ಳೆಯ ಸಂಬಂಧ. ವರದಕ್ಷಿಣೆ ಏನು ಕೇಳಲಿಲ್ಲ. ಹಾಗಾಗಿ ಮದುವೆಯನ್ನು ಶಕ್ತಿ ಮೀರೀ ಸಾಲಾ ಸೋಲ ಮಾಡಿ, ಬಹಳ ವಿಜೃಂಭಣೆಯಿಂದ ಅದ್ದೂರಿಯಿಂದ ಮಾಡಲಾಯಿತು. ಮದುವೆಯಾದ ಎರಡು ಮೂರು ತಿಂಗಳು ಮಧುಚಂದ್ರ, ನೆಂಟರಿಷ್ಟರ ಮನೆಗೆ ಹೋಗಿ ಬರುವುದರಲ್ಲೇ ಕಾಲ ಕಳೆದು ಹೋದದ್ದು ನವ ದಂಪತಿಗಳಿಗೆ ಗೊತ್ತೇ ಆಗಲಿಲ್ಲ.
ಪ್ರತಿದಿನ ಗಂಡ ಹೆಂಡತಿ ಒಟ್ಟಿಗೆ ಆಫೀಸಿಗೆ ಹೋಗಿ ಸಂಜೆ ಮನೆಗೆ ಬರುವ ದಾರಿಯಲ್ಲೇ ಏನಾದರೂ ತಿಂದು ಬರುತ್ತಿದ್ದರು. ಇದೇ ರಾಗವನ್ನು ನೋಡಿ ನೋಡಿ ಬೇಸತ್ತ ತಂದೆ ತಾಯಿಯರು ಒಮ್ಮೆ ಮಗ ಸೊಸೆಯರಿಗೆ, ಇದೇನಪ್ಪಾ ಇದು ಮನೇನೋ ಲಾಡ್ಜೋ? ಬರೀ ರಾತ್ರಿ ಮಲಕ್ಕೋಳದಿಕ್ಕೆ ಮಾತ್ರ ಬರ್ತೀರಿ ಇಂದು ಸುಸಂಸ್ಕೃತ ಸಂಸಾರವಂತರ ಮನೆ. ನಮಗೂ ಮಗ ಸೊಸೆ ಜೊತೆ ನೆಮ್ಮದಿಯಾಗಿ ಒಟ್ಟಿಗೆ ಕುಳಿತು ಊಟ ಮಾಡೋ ಆಸೆ ಇದೆ. ಯಾವಾಗಲಾದರೂ ಒಮ್ಮೊಮ್ಮೆ ಸೊಸೆ ಕೈ ರುಚಿ ನೋಡೋ ಆಸೆ ಇದೆ. ಮೊಮ್ಮಕ್ಕಳನ್ನು ಎತ್ತಿ ಮುದ್ದು ಮಾಡ್ಬೇಕು ಅಂತ ಇದೆ ಅಂತ ಕೇಳಿದ್ದೇ ತಡ. ಸೊಸೆಗೆ ಅದೆಲ್ಲಿತ್ತೋ ರೋಷಾ, ವೇಷಾ, ನೋಡ್ರಿ, ನೋಡ್ರಿ, ಹೇಗೆ ಮಾತಾಡ್ತಾರೆ ನಿಮ್ಮ ಅಪ್ಪ ಅಮ್ಮ. ನಾನೇನು ನಿಮ್ಮನ್ನು ಮದುವೆ ಆಗಿದ್ದು ಈ ಮನೆಯಲ್ಲಿ ಕೆಲಸ ಮಾಡೋದಿಕ್ಕಾ? ನಾನೇನು ಬೇಯಿಸಿ ಹಾಕೋಕೆ ಅಡುಗೆಯವಳಾ? ಇಲ್ಲಾ ನಿಮಗೆ ಮಕ್ಕಳನ್ನು ಹೆತ್ತು ಕೊಡೋ ಮೆಶಿನ್ನಾ? ಒಂದು ಮಾತು ಹೇಳ್ತೀನಿ ಚೆನ್ನಾಗಿ ಎಲ್ಲರೂ ಕೇಳಿಸಿ ಕೊಳ್ಳಿ. ನನಗಂತೂ ಮಕ್ಕಳನ್ನು ಹೆರುವ ಆಸೆ ಇಲ್ಲ. ಮಕ್ಕಳಾದ್ರೆ, ನನ್ನ ಸೌಂದರ್ಯವೆಲ್ಲಾ ಮಂಕಾಗುತ್ತದೆ. ಆಮೇಲೆ ಯಾರೂ ನನ್ನ ಕಡೆ ತಿರುಗಿಯೂ ನೋಡೋದಿಲ್ಲ. ಮಕ್ಕಳು ಏನಾದರೂ ಬೇಕಿದ್ದಲ್ಲಿ, ಯಾವುದಾದರೂ ಅನಾಥಾಶ್ರಮದಿಂದ ತಂದು ಸಾಕೋಣ ಎಂದಳು.
ತಮ್ಮ ವಂಶೋಧ್ಧಾರದ ಮೊಮ್ಮಕ್ಕಳೊಂದಿಗೆ ಆಟವಾಡುತ್ತಾ, ರಾಮಾಕೃಷ್ಣಾ ಗೋವಿಂದಾ ಎಂದು ನಮ್ಮ ಉಳಿದ ಜೀವನವನ್ನು ಕಳೆಯ ಬೇಕು ಅಂತ ಅಂದುಕೊಂಡಿದ್ದ ಅತ್ತೆ ಮಾವನವರಿಗೆ ಸೊಸೆಯ ಮಾತು ಗರ ಬಡಿದಂತಾಗಿತ್ತು. ಗಂಡನಿಗೂ ಹೆಂಡತಿಯ ಮಾತು ಕೇಳಿ ಆಶ್ಚರ್ಯದ ಜೊತೆಗೆ ಬೇಸರವೂ ಆಯಿತು. ಅಪ್ಪಾ ಅಮ್ಮಂದಿರ ಮುಂದೆ ಮಾತಾನಾಡುವುವುದು ಬೇಡ ಎಂದು ಸುಮ್ಮನೆ ಹೆಂಡತಿಯನ್ನು ತನ್ನ ಕೋಣೆಗೆ ಕರೆದೊಯ್ದು ಇದೇನು? ಎಂತಾ ಮಾತಾಡ್ತಾ ಇದ್ಯಾ? ಅವರು ಕೇಳಿದ್ದರಲ್ಲಿ ತಪ್ಪೇನಿದೆ? ಹಾಗೆ ದೊಡ್ಡವರ ಮುಂದೆ ಗೌರವ ಇಲ್ಲದೆ ಮಾತಾನಾಡಿದ್ದು ನನಗೆ ಒಂದು ಚೂರು ಹಿಡಿಸಲಿಲ್ಲ. ಹೋಗಿ ಅಪ್ಪಾ ಅಮ್ಮಾನ ಬಳಿ ಕ್ಷಮೆ ಕೇಳು ಎಂದ. ಆದರೆ ಸೊಸೆ ತನ್ನ ಅಹಂನಿಂದಾಗಿ ಯಾರ ಮಾತನ್ನೂ ಕೇಳಲು ಸಿದ್ಧಳಿರಲಿಲ್ಲ.
ನಾನೇನು ತಪ್ಪು ಮಾತಾನಾಡಿದೆ ಅಂತ ಕ್ಷಮೆ ಕೇಳಲಿ? ಅವರಿಗೆ ನಾವು ಅವರ ಮನೆಯಲ್ಲಿ ಬಿಟ್ಟಿ ತಿನ್ನುತ್ತಿದ್ದೇವೆ ಅನ್ನೋ ಭಾವನೆ. ಮನೆ ಅವರೇ ಕಟ್ಟಿಸಿರಬಹುದು ಆದರೆ ದುಡಿದು ತಂದು ಹಾಕುತ್ತಿರುವವರು ನೀವೇ ತಾನೇ? ಸುಮ್ಮನೆ ಮನೆಯಲಿ ಕುಳಿತು ನಿಮ್ಮ ಸಂಪಾದನೆಯಲ್ಲಿ ತಿಂದು ಬದುಕುತ್ತಿರುವವರಿಗೇ ಇಷ್ಟು ಅಹಂ ಇರಬೇಕಾದರೆ ನಾನು ಕೆಲಸಕ್ಕೆ ಹೋಗುತ್ತಿರುವವಳು. ಇನ್ನು ನನಗೆಷ್ಟಿರ ಬೇಡ? ನೋಡಿ ನಾನೀಗ ಒಂದು ನಿರ್ಧಾರಕ್ಕೆ ಬಂದಾಗಿದೆ. ನಿಮಗೆ ನಾನು ಬೇಕು ಅಂತಂದ್ರೆ, ಈಗಿಂದ್ದೀಗಲೇ ಬೇರೆ ಮನೆ ಮಾಡೋಣ. ಈ ರೀತಿಯಾಗಿ ಬೈಸಿಕೊಂಡು ನನಗೆ ಒಂದು ಕ್ಷಣವೂ ಈ ಮನೆಯಲ್ಲಿ ಇರುವುದಕ್ಕೆ ಆಗುವುದಿಲ್ಲ.ನಾನು ಬಟ್ಟೆ ಜೋಡಿಸಿ ಕೊಳ್ತೀನಿ. ಮನೆ ಸಿಗುವವರೆಗೆ ಆಫೀಸ್ ಹತ್ತಿರ ಇರುವ ಯಾವುದಾದರೂ ಹೋಟೆಲ್ನಲ್ಲಿ ಇರೋಣ. ಒಂದು ವಾರದೊಳಗೆ ಅಲ್ಲೇ ಯಾವುದಾದರೂ ಮನೆ ಹುಡ್ಕೋಳ್ಳೋಣ. ಆಫೀಸ್ ಕ್ಯಾಂಟೀನ್ನಲ್ಲೇ ಬೆಳಿಗ್ಗೆ ತಿಂಡಿ ಮಧ್ಯಾಹ್ನದ ಊಟ ಮಾಡಿ ಕೊಂಡ್ರಾಯ್ತು . ಇನ್ನು ಸಂಜೆ ಬರ್ತಾ ಎಲ್ಲಾದರೂ ಊಟ ಮಾಡೋಣ ಇಲ್ಲಾಂದ್ರೆ ಹೇಗೂ ಸ್ವಿಗ್ಗಿ, ಇಲ್ಲಾ ಝೊಮಾಟೋ ಇದ್ದೇ ಇದೆ. ಆರ್ಡರ್ ಮಾಡಿದ್ರೆ ಅರ್ಧ ಗಂಟೆಯೊಳಗೆ ತಂದು ಕೊಡ್ತಾರೆ. ಇನ್ನೂ ವೀಕೆಂಡ್ನಲ್ಲಿ ನಮ್ಮ ಅಮ್ಮನ ಮನೆಗೆ ಹೋಗ್ಬಿಡೋಣ. ಅಲ್ಲೇ ಎಲ್ಲಾ ಮುಗಿದು ಹೋಗುತ್ತದೆ ಎಂದಾಗ, ಗಂಡನಿಗೆ ಅದು ಎಲ್ಲಿತ್ತೋ ಕೋಪ. ಏನೂ ಮಾತಾಡ್ತಾ ಇದ್ದೀಯಾ ಅಂತಾ ಗೋತ್ತಾ? ಇದೇನು ಸಂಸಾರ ಮಾಡೋ ಹುಟ್ಟಾ? ನಾನು ಅಪ್ಪ ಅಮ್ಮನ ಬಿಟ್ಟು ಎಲ್ಲೂ ಬರೋದಿಲ್ಲ . ನೀನು ಬೇಕಿದ್ರೆ ಎಲ್ಲಿಗಾದರೂ ಹೋಗು ಎಂದು ಸಿಟ್ಟಿನಲ್ಲಿ ಹೇಳಿದ್ದೇ ತಡಾ, ಹೆಂಡತಿ ಜೋಡಿಸಿಕೊಂಡು ಇಟ್ಟಿದ್ದ ಬಟ್ಟೆ ಬರೆಗಳನ್ನು ಎತ್ತಿ ಕೊಂಡು ಓಲಾ ಬುಕ್ ಮಾಡಿಕೊಂಡು ಅಷ್ಟು ರಾತ್ರಿ ಹೊತ್ತಿನಲ್ಲಿ ಅಮ್ಮನ ಮನೆಗೆ ಹೊರಟೇ ಬಿಟ್ಟಳು.
ಇಷ್ಟು ತಡ ಹೊತ್ತಿನಲ್ಲಿ ಹೇಳದೇ ಕೇಳದೆ ದುರು ದುರು ಎಂದು ಬಂದ ಮಗಳನ್ನು ನೋಡಿ ಆಶ್ವರ್ಯಚಕಿತರಾದ ಅಪ್ಪಾ ಅಮ್ಮಾ, ಏನಮ್ಮಾ ಒಬ್ಬಳೇ ಇಷ್ಟು ಹೊತ್ತಿನಲ್ಲಿ ಒಬ್ಬಳೇ ಬಂದಿದ್ದೀಯಾ? ಅಳಿಯಂದಿರು ಎಲ್ಲಿ? ಮನೆಯಲ್ಲಿ ಏನಾದ್ರೂ ಮಾತು ಕತೆ ಆಯ್ತಾ ಅಂತಾ ಕೇಳುವ ಮನಸ್ಸಾದ್ರೂ ಮಗಳ ಕೋಪ ಕಡಿಮೆ ಆದ ಮೇಲೆ ಕೇಳೋಣ ಅಂತ ಸುಮ್ಮನಾದರು. ಮಗಳೋ ಸುಮ್ಮನೆ ಅವಳ ಕೋಣೆಗೆ ಹೋಗಿ ಬಾಗಿಲು ಹಾಕಿ ಕೊಂಡವಳು ಮಾರನೇ ದಿನ ಆಫೀಸಿಗೆ ಹೋಗಿ ಸಂಜೆ ಬರುವಾಗ ಪೋಲಿಸ್ ಠಾಣೆಗೆ ಹೋಗಿ ತನ್ನ ಗಂಡನ ಮನೆಯವರ ಮೇಲೆ ವರದಕ್ಷಿಣೆಯ ಕೇಸ್ ಹಾಕಿ, ಲಾಯರ್ ಆಫೀಸ್ಗೆ ಹೋಗಿ ವಿಚ್ಚೇದನಕ್ಕೆ ಕೋರಿಕೆ ಸಲ್ಲಿಸಿಯೇ ಬಂದಳು.
ತಂದೆ ತಾಯಿ ಎಷ್ಟೇ ಪರಿ ಪರಿಯಾಗಿ ಬೇಡಿ ಕೊಂಡರೂ ಸಂಪಾದನೆ ಮಾಡುತ್ತಿದ್ದ ಮಗಳ ಮನಸ್ಸು ಕರಗಲೇ ಇಲ್ಲ. ಹೆಣ್ಣು ಸ್ವಲ್ಪ ತಗ್ಗಿ ಬಗ್ಗಿ ನಡೆಯಬೇಕಮ್ಮಾ ಎಂದು ಬುದ್ದಿವಾದ ಹೇಳಿದ್ದಕ್ಕೆ, ಅಪ್ಪಾ ಅಮ್ಮನ ಮನೆಯನ್ನೂ ಬಿಟ್ಟು ತನ್ನ ಆಫೀಸಿನ ಬಳಿಯೇ ಪೇಯಿಂಗ್ ಗೆಸ್ಟಾಗಿದ್ದಾಳೆ. ಇನ್ನು ಯಾವ ತಪ್ಪನ್ನೂ ಮಾಡದ ಗಂಡನ ಮನೆಯವರು ಪೋಲಿಸರ ವಿಚಾರಣೆಯಿಂದ ಹೈರಾಣಾಗಿದ್ದಾರೆ. ಪ್ರತಿ ತಿಂಗಳು ಕೋರ್ಟು ಕಛೇರಿ ಅಂತಾ ಅಲೆಯುತ್ತಿದ್ದಾರೆ. ಹೆಣ್ಣು ಹೆತ್ತ ತಪ್ಪಿಗಾಗಿ ಅವಳ ತಂದೆ ತಾಯಿಯರು ಮಗಳ ಮದುವೆಗಾಗಿ ಮಾಡಿದ್ದ ಸಾಲ ತೀರಿಸುತ್ತಾ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.
ಯತ್ರ ನಾರ್ಯಂತು ಪೂಜ್ಯಂತೇ ರಮಂತೇ ತತ್ರ ದೇವತಃ ” ಎಲ್ಲಿ ನಾರಿಯು ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ಇರುತ್ತಾರೆ ಎನ್ನುಂತಹ ನಾಡಿದು. ನಮ್ಮ ದೇಶದ ನಮ್ಮ ಸಂಸ್ಕೃತಿಯಲ್ಲಿ ಎಂದಿಗೂ ಗಂಡು ಹೆಣ್ಣು ಸರಿ ಸಮಾನ ಎಂದು ಭಾವಿಸಲೇ ಇಲ್ಲ. ಬದಲಾಗಿ ಹೆಣ್ಣನ್ನು ಒಬ್ಬ ಮಮತೆಯ ತಾಯಿಯಾಗಿ, ನೆಚ್ಚಿನ ಗೃಹಿಣಿಯಾಗಿ ಎಲ್ಲದ್ದಕ್ಕೂ ಹೆಚ್ಚಿಗೆ ಶಕ್ತಿ ದೇವತೆಯಾಗಿ ಆರಾಧಿಸುತ್ತೇವೆ. ಗಂಡ ಹೊರಗೆ ಹೋಗಿ ತನ್ನ ಶಕ್ತಿ ಮೀರಿ ಸಂಪಾದಿಸಿ ತಂದು ತನ್ನ ಕುಟುಂಬವನ್ನು ಸಾಕುವ ಪದ್ದತಿ ಇತ್ತೇ ಹೊರತು ಹೆಂಡತಿಯ ಸಂಬಳದಲ್ಲಿ ಬದುಕುವ ದೈನೇಸಿ ಸ್ಥಿತಿಯಲ್ಲಿ ಎಂದೂ ಇರಲೇ ಇಲ್ಲ. ಆದರೆ ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಮುಳುಗಿ ಪ್ರತಿಯೊದರಲ್ಲಿಯೂ ಹೆಣ್ಣು ಗಂಡಿಗೆ ಸಮಾನ ಎನ್ನುವ ಅನಾವಶ್ಯಕ ಪೈಪೋಟಿಗೆ ಇಳಿದು ಮನೆ ಮನಗಳು ಹಾಳಾಗುತ್ತಿರುವುದನ್ನು ನೋಡುವುದಕ್ಕೆ ನಿಜಕ್ಕೂ ಬಹಳ ಬೇಸರವಾಗುತ್ತಿದೆ.
ಏನಂತೀರೀ?