ಶಂಕರ ಮೊನ್ನೆ ದೇವಸ್ಥಾನಕ್ಕೆ ಹೋಗಿ, ದೇವರ ದರ್ಶನಕ್ಕೆ ಸರದಿಯ ಸಾಲಿನಲ್ಲಿ ನಿಂತಿದ್ದಾಗಲೇ, ಶಂಕರಾಚಾರ್ಯವಿರಚಿತ ಎಂ.ಎಸ್. ಸುಬ್ಬಲಕ್ಷ್ಮಿಯವರ ಸುಶ್ರಾವ್ಯ ಕಂಠದ ಭಜಗೋವಿಂದಂ ಭಜಗೋವಿಂದಂ ಶ್ಲೋಕ ಕೇಳುತ್ತಲೇ ಅವನಿಗೆ ತಾನು ಸಣ್ಣನಿದ್ದಾಗ ಅವನ ತಾತ ಆ ಶ್ಲೋಕಗಳನ್ನು ಹೇಳಿಕೊಡುತ್ತಿದ್ದದ್ದು ಮತ್ತು ಅದರ ಜೊತೆ ಹೇಳಿದ ಸುಂದರ ಪ್ರಸಂಗವೊಂದು ನೆನಪಿಗೆ ಬಂತು. ಆಗ ಶಂಕರನಿಗೆ ಏಳೆಂಟು ವರ್ಷಗಳಿರಬಹುದು . ಪರೀಕ್ಷೆ ಮುಗಿದು ಬೇಸಿಗೆ ರಜಾ ಬಂದಿತೆಂದರೆ ತಾತನ ಮನೆಗೆ ಹೋಗುವುದಕ್ಕೆ ಅವನಿಗೆ ಪಂಚ ಪ್ರಾಣ. ಅದೇ ರೀತೀ ಅವನ ತಾತನೂ ಅಷ್ಟೇ. ಮೊಮ್ಮಗನ ಪರೀಕ್ಷೆ ಮುಗಿಯುವುದಕ್ಕೇ ಕಾಯುತ್ತಿದ್ದು, ಪರೀಕ್ಷೆ ಮುಗಿಯುತ್ತಿದ್ದಂತೆಯೇ ಅವರೇ ಬಂದೋ ಇಲ್ಲವೇ ಮಗನ ಮೂಲಕವೋ ಮೊಮ್ಮಗನನ್ನು ಊರಿಗೆ ಕರೆಸಿಕೊಂಡು ಬಿಡುತ್ತಿದ್ದರು. ಯುಗಾದಿ ನಂತರದ ಒಂದು ತಿಂಗಳ ಪೂರ್ತಿಯೂ ಅವರ ಊರಿನಲ್ಲಿ ಮತ್ತು ಸುತ್ತ ಮುತ್ತಲಿನ ಊರಿನಲ್ಲಿ ಊರ ಹಬ್ಬದ ಸಡಗರ. ಪ್ರತಿ ದಿನ ಮೊಮ್ಮಗನನ್ನು ಕರೆದುಕೊಂಡು ಅಕ್ಕ ಪಕ್ಕದ ಊರುಗಳ ಜಾತ್ರೆಗೆ ಹೋಗುವುದು, ಬಿಡುವಿದ್ದ ಸಮಯದಲ್ಲಿ ದೇವಸ್ಥಾನದ ಕಲ್ಯಾಣಿಯಲ್ಲಿ ಮೊಮ್ಮಗನಿಗೆ ಈಜು ಕಲಿಸುವುದು, ಶ್ಲೋಕ, ಬಾಯಿ ಪಾಠಗಳನ್ನು ಹೇಳಿಕೊಡುವುದು, ತೋಟಕ್ಕೆ ಕರೆದುಕೊಂಡು ಹೋಗಿ ಎಳನೀರು ಕುಡಿಸುವುದೆಂದರೆ ಅವರಿಗೆ ಅದೇನೋ ಅಮಿತಾನಂದ. ಸಂಜೆಯಾಯಿತೆಂದರೆ ಊರಿನ ರಂಗಮಂಟಪದ ಎದುರು ತಮಟೆಯ ಗತ್ತಿಗೆ ಊರಿನ ಆಬಾಲ ವೃಧ್ಧರಾದಿ ಗಂಡಸರು ರಂಗ ಕುಣಿಯುವುದನ್ನು ನೋಡುವುದೇ ಶಂಕರನಿಗೆ ಮಹದಾನಂದ. ಕೆಲವೊಂದು ಬಾರಿ ತಾತನ ಶಲ್ಯವನ್ನು ಎಳೆದುಕೊಂಡು ಹೋಗಿ ತಾನೂ ಅವರೊಡನೆ ತನ್ನ ಪುಟ್ಟ ಪುಟ್ಟ ಹೆಜ್ಜೆಗಳಲ್ಲಿ ರಂಗ ಕುಣಿಯುತ್ತಿದ್ದರೆ. ಅವರ ತಾತ ಎಲ್ಲರಿಗೂ ಅದನ್ನು ತೋರಿಸುತ್ತಾ ನೋಡ್ರೋ ನಮ್ಮ ಮೊಮ್ಮಗ ಹೇಗೆ ಕುಣಿಯುತ್ತಾನೆ ಎಂದರೆ, ಎಷ್ಟಾದರೂ ನಮ್ಮ ಊರಿನ ಶಾನುಭೋಗರ ಕುಡಿಯಲ್ಲವೇ? ಇದಲ್ಲಾ ರಕ್ತದಲ್ಲೇ ಬಂದಿದೆ ಬಿಡಿ ಎಂದು ಅಲ್ಲಿದ್ದವರು ಹೇಳುತ್ತಿದ್ದರು.
ಅದೊಂದು ದಿನ ಶಂಕರ ಮನೆಯಲ್ಲಿ ಸ್ನಾನ ಮಾಡುವುದು ಬೇಡ. ಊರ ದೇವತೆಯ ದೇವಾಲಯದ ಮುಂದಿರುವ ಕಲ್ಯಾಣಿಯಲ್ಲೇ ಸ್ನಾನ ಮಾಡೋಣ ಎಂದು ಹಠ ಹಿಡಿದ. ತಾನನಿಗೋ ಮೊಮ್ಮಗನನ್ನು ಕಲ್ಯಾಣಿಗೆ ಕರೆದುಕೊಂಡು ಹೋಗುವ ಆಸೆ. ಆದರೆ ಅಜ್ಜಿ ಆದಾಗಲೇ ಬಚ್ಚಲಿನಲ್ಲಿ ಬಿಸಿ ನೀರು ಕಾಯಿಸಿಯಾಗಿತ್ತು ಹಾಗಾಗಿ ಬೇಡ ಎಂದರು. ಆದರೂ ಮೊಮ್ಮಗನ ಬೆಂಬೆಡದ ಹಠಕ್ಕೆ ಮಣಿದು ತಾತ ಮೊಮ್ಮಗ ಟವೆಲ್ ಮತ್ತು ಬಟ್ಟೆಗಳನ್ನು ಹಿಡಿದುಕೊಂಡು ಕಲ್ಯಾಣಿಗೆ ಹೋಗಿ ನೀರಿಗೆ ಇಳಿದು ಮನಸೋ ಇಚ್ಚೆ ಆಟವಾಡತೊಡಗಿದರು. ತಾತ ಆ ವಯಸ್ಸಿನಲ್ಲಿಯೂ ಲೀಲಾಜಾಲವಾಗಿ ಈಜುತ್ತಿದ್ದಲ್ಲದೆ, ನೀರಿನ ಮೇಲೆ ಕೆಲ ಯೋಗಾಸನವನ್ನೂ ಮಾಡುತ್ತಿದ್ದರು. ಗಂಟೆ ಗಟ್ಟಲೆ ನೀರಿನ ಮೇಲೆ ಆರಾಮವಾಗಿ ಪದ್ಮಾಸನ ಹಾಕಿಕೊಂಡು ಮಲಗುವುದು ಅವರಿಗೆ ಕರಗತವಾಗಿತ್ತು. ಸೂರ್ಯ ಕೂಡಾ ನೆತ್ತಿಯಮೇಲೆ ಬರುತ್ತಿದ್ದ. ಹೊಟ್ಟೆ ಕೂಡಾ ಚುರುಗುಟ್ಟುತ್ತಿದ್ದರಿಂದ ಇಬ್ಬರೂ ನೀರಿನಿಂದ ಹೊರಗೆ ಬಂದು ಟವಲ್ನಿಂದ ಮೈ ಒರೆಸಿಕೊಳ್ಳುತ್ತಿದ್ದಾಗ ಶಂಕರ ತಾತನ ತೊಡೆಯ ಮೇಲೆ ತ್ರಿಶೂಲಾಕಾರದ ಬರೆ ನೋಡಿ, ಎನು ತಾತಾ, ನೀವೂ ಕೂಡಾ ಚಿಕ್ಕ ವಯಸ್ಸಿನಲ್ಲಿ ನನ್ನಂತೆಯೇ ಚೇಷ್ಟೆ ಮಾಡಿ ನಿಮ್ಮ ಅಮ್ಮನ ಕೈಯಲ್ಲಿ ಬರೆ ಎಳೆಸಿಕೊಂಡಿದ್ರಾ ಎಂದು ತಾತನ ಬರೆಯನ್ನು ತೋರಿಸಿದ. ಮೊಮ್ಮಗನ ಈ ಪ್ರಶ್ನೆಗೆ ಮುಗುಳ್ನಗುತ್ತಾ, ಓ ಇದಾ, ಇದು ನಮ್ಮ ಅಮ್ಮ ಎಳೆದ ಬರೆಯಲ್ಲಾ. ಇದು ಆ ಯಮ ಧರ್ಮರಾಯ ಎಳೆದು ಕಳಿಸಿದ ಬರೆ. ಬಾ ಮನೆಗೆ ಹೋಗುತ್ತಾ ದಾರಿಯಲ್ಲಿ ಎಲ್ಲಾ ಹೇಳುತ್ತೇನೆ ಎಂದು ಹೇಳಿ ಒದ್ದೆ ಬಟ್ಟೆ ಬದಲಾಯಿಸಿ, ದೇವಸ್ಥಾನಕ್ಕೆ ಹೋಗಿ, ಇಬ್ಬರೂ ವೀಭೂತಿ ಧರಿಸಿ, ನಮಸ್ಕರಿಸಿ ತಮ್ಮ ಕಥೆಯನ್ನು ತಮ್ಮ ಮೊಮ್ಮಗನಿಗೆ ಹೇಳುತ್ತಾ ಮನೆಯ ಕಡೆಗೆ ಹೆಜ್ಜೆ ಹಾಕ ತೊಡಗಿದರು.
ನೋಡು ಮಗು, ನಾನಾಗ ನಿನ್ನಷ್ಟೇ ಸಣ್ಣ ವಯಸ್ಸಿನ ಹುಡುಗ. ನಾನು ನಮ್ಮ ಅಮ್ಮನ ಹೊಟ್ಟೆಯಲ್ಲಿ ಇರುವಾಗಲೇ ನನ್ನ ಅಪ್ಪ ತೀರಿಕೊಂಡಿದ್ದರು. ಅಂದು ನಮ್ಮ ತಂದೆಯವರ ಶ್ರಾಧ್ಧ. ನಾನಿನ್ನೂ ಸಣ್ಣವನಾಗಿದ್ದರಿಂದ ನನ್ನನ್ನು ಹೊರಗಡೆ ಆಟವಾಡಲು ಬಿಟ್ಟು ನಮ್ಮ ಅಣ್ಣಂದಿರೂ ಮತ್ತು ಚಿಕ್ಕಪ್ಪ, ದೊಡ್ಡಪ್ಪಂದಿರು ಮನೆಯ ಒಳಗೆ ತಿಥಿ ಮಾಡುತ್ತಿದ್ದರು. ಆದೇನಾಯ್ತೋ ಗೊತ್ತಿಲ್ಲ. ಇದ್ದಕ್ಕಿದ್ದಂತೆಯೇ ಜೋರಾಗಿ ಕೂಗುತ್ತಾ ಬಿದ್ದು ಬಿಟ್ಟನಂತೆ. ಮನೆಯೊಳಗಿನಿಂದ ನಮ್ಮ ಅಮ್ಮ ಮತ್ತು ಅಕ್ಕ ಬಂದು ನೋಡಿದರೆ ನಾನು ನೆಲದ ಮೇಲೆ ಉಸಿರಾಡದೇ ಬಿದ್ದಿದ್ದೆ. ಅಕ್ಕ ಮತ್ತು ಅಮ್ಮನಿಗೆ ನಾನು ಸತ್ತು ಹೋಗಿದ್ದದ್ದು ಗೊತ್ತಾಗಿ ಮನೆಯಲ್ಲಿ ತಿಥಿ ನಡೆಯುತ್ತಿದ್ದರಿಂದ ಮೈಲಿಗೆ ಆಗುವ ಕಾರಣ ಯಾರಿಗೂ ತಿಳಿಯಬಾರದೆಂದು ಗೋಣೀ ಚೀಲದಲ್ಲಿ ನನ್ನನ್ನು ಹಾಕಿ ಅದಕ್ಕೆ ದಾರ ಕಟ್ಟಿ ಹಿತ್ತಲಿನ ಕೊಟ್ಟಿಗೆಯಲ್ಲಿರಿಸಿ, ಅಳುತ್ತಲೇ ನಾಲ್ಕು ಚೊಂಚು ನೀರಿನಿಂದ ಸ್ನಾನ ಮಾಡಿ ತಿಥಿ ಮುಗಿಯುವುದನ್ನೇ ಕಾಯುತ್ತಿದ್ದರಂತೆ. ಅದಾಗಿ ಒಂದೆರಡು ಗಂಟೆಯೊಳಗೆ ಇದ್ದಕ್ಕಿದಂತೆಯೇ ನಾನು ಮತ್ತೆ ಜೋರಾಗಿ ಕಿರುಚಾಡಿದ್ದನ್ನು ಕೇಳಿ ಹಿತ್ತಲಿಗೆ ಬಂದು ನೋಡಿದರೆ, ಗೋಣಿ ಚೀಲದ ಒಳಗೆ ಹೊರಳಾಡುತ್ತಿದ್ದ ನನ್ನನ್ನು ಹೊರಗೆ ತೆಗೆದಾಗ ನೋಡಿದಾಗ ತೊಡೆ ಹಿಡಿದುಕೊಂಡು ಅಮ್ಮಾ ಅಯ್ಯೋ ಉರಿ ಉರಿ ಎಂದು ಅಳುತ್ತಿದ್ದೆ. ಆಗ ಹಾಗೇಕೆ ಅಳುತ್ತಿದ್ದೇನೆ ಎಂದು ನೋಡಿದರೆ ತೊಡೆಯ ಮೇಲೆ ಆಗ ತಾನೇ ಹಾಕಿದ ತ್ರಿಶೂಲಾಕಾರದ ಈ ರೀತಿಯ ಬರೆ ಇತ್ತು. ಅಯ್ಯೋ ರಾಮ. ಸತ್ತು ಹೋಗಿದ್ದವನನ್ನು ನಾವೇ ಗೋಣಿ ಚೀಲದಲ್ಲಿ ಕಟ್ಟಿಹಾಕಿದ್ದರೆ, ಈಗ ಬರೆ ಹಾಕಿಸಿಕೊಂಡು ಅದು ಹೇಗೆ ಬದುಕಿದ ಎಂದು ಯೋಚಿಸುತ್ತಿರುವಾಗ, ಅಮ್ಮಾ ಅದೇನೋ ನನಗೆ ಕನಸು ಬಿತ್ತಮ್ಮ. ಯಾರೋ ಇಬ್ಬರು ದಾಂಡಿಗರು ನನ್ನನ್ನು ಎಲ್ಲಿಗೂ ಕರೆದುಕೊಂಡು ಹೋಗಿ ನಾಟಕದಲ್ಲಿ ಬರುವ ಯಮಧರ್ಮನ ಮುಂದೆ ನಿಲ್ಲಿಸಿದರು. ಆದರೆ ಅಲ್ಲಿ ಬಂದವನೊಬ್ಬ, ಅಯ್ಯೋ ತಪ್ಪು ಕೆಲಸ ಮಾಡಿದ್ದೀರಿ. ನಾನು ಹೇಳಿದ ನಂಜುಂಡ ಈ ವ್ಯಕ್ತಿಯಲ್ಲಾ. ಅವನೂ ಕೂಡಾ ಅದೇ ಊರಿನವನೇ, ಆವನಿಗೆ ವಯಸ್ಸಾಗಿದೆ. ಈ ಕೂಡಲೇ ಇವನನ್ನು ಅಲ್ಲಿಯೇ ಬಿಟ್ಟು ನಾನು ಹೇಳಿದ ನಂಜುಂಡನನ್ನು ಕರೆ ತನ್ನಿ ಎಂದು ಆಜ್ನಾಪಿಸಿದ. ಹಾಗೆಯೇ ಇಲ್ಲಿಗೆ ಬಂದು ಹೋಗಿದ್ದ ಕುರುಹಾಗಿ ಈ ಬರೆ ಎಳೆದು ಕಳುಹಿಸಲು ಹೇಳಿದ. ನನಗೆ ಎಚ್ಚರವಾಗಿ ನೋಡಿದರೆ ನಿಜವಾಗಲೂ ನನಗೆ ಬರೆ ಹಾಕಿದ್ದರು ಮತ್ತು ಗೋಣಿ ಚೀಲದಲ್ಲಿ ಬಂಧಿಸಿದ್ದರು ಎಂದೆ. ಇದನ್ನು ಕೇಳಿದ ನಮ್ಮ ಅಮ್ಮ ಮತ್ತು ಅಕ್ಕನಿಗೆ ಸೋಜಿಗವಾಗಿ, ಕೂಡಲೇ ಅಕ್ಕ ಪಕ್ಕದ ಬೀದಿಯಲ್ಲಿ ಅನಾರೋಗ್ಯದಿಂದ ನರಳುತ್ತಿದ್ದ ನಂಜುಂಡನ ಮನೆಗೆ ಓಡಿ ಹೋಗಿ ನೋಡಿದರೆ, ಆಗಷ್ಟೇ ನಂಜುಂಡ ತೀರಿಹೋಗಿದ್ದ ವಿಷಯ ತಿಳಿಯಿತಂತೆ. ಎಂದು ನಿಟ್ಟುಸಿರು ಬಿಡುತ್ತಿದ್ದಂತೆಯೇ ತಾತಾ ಮೊಮ್ಮಗ ಮನೆಯ ಸಮೀಪ ಬಂದಾಗಿತ್ತು. ಓಹೋ ಹಾಗಾದ್ರೆ ನೀವು ಸತ್ತು ಬದುಕಿದ್ರಾ? ಅಂದರೆ ನೀವೇ ಹೇಳಿಕೊಡುವ ಭಜಗೋವಿಂದಂನಲ್ಲಿ ಬರುವ ಹಾಗೆ ಪುನರಪಿ ಜನನಂ, ಪುನರಪಿ ಮರಣಂ, ಪುನರಪಿ ಜನನೀ ಜಠರೇ ಶಯನಂ ಅನ್ನೋ ಹಾಗಾಯ್ತು ಅಲ್ಲವೇ ತಾತಾ ಎಂದಾಗ, ಮೊಮ್ಮಗನ ಜಾಣ್ಮೆಗೆ ಮೆಚ್ಚಿ ಹೌದಪ್ಪಾ ಅದು ಹಾಗೇ ಮತ್ತೆ ಹುಟ್ಟುವುದು, ಮತ್ತೆ ಸಾಯುವುದು, ಮತ್ತೆ ತಾಯಿಯ ಗರ್ಭದಲ್ಲಿ ಸೇರಿ ಮಲಗುವುದು, ಈ ರೀತಿಯಲ್ಲಿರುವ ಸಂಸಾರಕ್ಕೆ ಪಾರವೇ ಇಲ್ಲ. ಇದನ್ನು ಸುಲಭವಾಗಿ ದಾಟಲಾಗುವುದಿಲ್ಲ. ನಿನಗೆ ಈಗ ಅರ್ಥ ಆಗುವುದಿಲ್ಲ. ಮುಂದೆ ನಿಮ್ಮಪ್ಪನ ರೀತಿ ದೊಡ್ಡವನಾದ ಮೇಲೆ ತಿಳಿಯುತ್ತದೆ ಎಂದಿದ್ದರು.
ಆ ಸುಂದರ ಪ್ರಸಂಗವನ್ನು ಮೆಲುಕು ಹಾಕುತ್ತಾ ಸರದಿಯ ಸಾಲಿನಲ್ಲಿ ಮುಂದುವರಿಯುತ್ತಿದ್ದಾಗಲೇ, ಅರ್ಚನೆ ಮಾಡಿಸುವವರು ಯಾರಾದರೂ ಇದ್ದಾರಾ ಎಂದು ಅರ್ಚಕರು ಹೇಳಿದಾಗಲೇ ವಾಸ್ತವ ಪ್ರಪಂಚಕ್ಕೆ ಮರಳಿ, ಆಗಲಿದ ತಾತನನ್ನು ನೆನೆಯತ್ತಾ , ದೇವರ ದರ್ಶನ ಕಣ್ತುಂಬ ಮಾಡಿದ ಶಂಕರ. ನಮ್ಮ ಪುರಾಣ ಪುಣ್ಯ ಕಥೆಗಳಲ್ಲಿ ಹೇಳಿದಂತೆ ಪುನರ್ಜನ್ಮ ಅನ್ನುವುದು ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಅದರ ಕುರಿತು ನಮ್ಮ ನಂಬಿಕೆಯಂತೂ ಕಡಿಮೆಯಾಗುವುದಿಲ್ಲ. ಏಕೆಂದರೆ ಇಂತಹ ಕಠು ಸತ್ಯ ಪ್ರಸಂಗಗಳು ನಮ್ಮನ್ನು ನಂಬುವಂತೆಯೇ ಮಾಡುತ್ತದೆ.
ಏನಂತೀರೀ?