ಅದೊಂದು ಶನಿವಾರದ ದಿನ. ಬೆಳಿಗ್ಗೆ ಶಂಕರ ಕಛೇರಿಗೆ ಹೊರಡಲು ಅನುವಾಗಿ ತಿಂಡಿ ತಿನ್ನುತ್ತಿದ್ದ. ಅಡುಗೆ ಮನೆಯೊಳಗೆ ಅವನ ಮಡದಿ ಮಯೂರಿ ಮಗ ಸಮೀರನೊಂದಿಗೆ ಏನೋ ಸಮಾಧಾನ ಮಾಡುತ್ತಿದ್ದಳು ಆದರೆ ಅದನ್ನು ಕೇಳಲು ತಯಾರಿಲ್ಲದ ಮಗ, ಸ್ವಲ್ಪ ಹೆಚ್ಚಾಗಿಯೇ ಕಿರಿಕಿರಿ ಮಾಡುತ್ತಿದ್ದ. ಮೊದ ಮೊದಲು ಅಮ್ಮಾ ಮಗನ ನಡುವಿನ ವಿಷಯಕ್ಕೆ ತಾನೇಕೇ ಹೋಗುವುದು ಎಂದು ಸುಮ್ಮನಿದ್ದರೂ, ಮಡದಿಯು ಪರಿಪರಿಯಾಗಿ ಸಂತೈಸಲು ಪ್ರಯತ್ನಿಸಿದ್ದರೂ ಒಪ್ಪಿಕೊಳ್ಳದೆ ಪಿರಿಪಿರಿ ಮಾಡುತ್ತಿದ್ದ ಮಗನನ್ನು ಕಂಡ ಶಂಕರ, ಏನದು? ಏನಾಗ್ತಾ ಇದೇ? ಎಂದು ತುಸು ಎತ್ತರದ ಧನಿಯಲ್ಲಿ ವಿಚಾರಿಸಿದಾಗ, ಸಹಜವಾಗಿಯೇ ತಾಯಿಯ ಕರುಳು ಏನು ಇಲ್ಲಾರೀ , ಏನೋ ಅಮ್ಮಾ ಮಗನ ನಡುವಿನ ವಿಷಯ ನಾವೇ ಬಗೆ ಹರಿಸಿಕೊಳ್ಳುತ್ತೇವೆ ಎಂದಳು. ಏನೂ? ತಿಂಡಿ ತಟ್ಟೆ ಹಿಡಿದು ಐದು ಹತ್ತು ನಿಮಿಷಗಳಾಯ್ತು. ಇನ್ನೂ ಅಮ್ಮಾ ಮಗನ ವಿಷಯ ಬಗೆ ಹರಿಯಲಿಲ್ಲ ಅಂದ್ರೇ ಅದೇನು ಅಂಥಾ ಗಹನವಾದ ವಿಷಯ ಎಂದಾಗ, ಅದೇನೂ ಇಲ್ಲಾರೀ, ಇವತ್ತು ತಿಂಡಿಗೆ ಹುಳಿಯವಲಕ್ಕಿ (ಗೊಜ್ಜವಲಕ್ಕಿ) ಮಾಡಿದ್ದಿನಲ್ಲಾ, ಅದು ನಿಮ್ಮ ಮಗನಿಗೆ ಇಷ್ಟವಿಲ್ಲವಂತೆ ಅದಕ್ಕೆ ಮ್ಯಾಗಿ ಮಾಡಿಕೊಳ್ತೀನಿ ಇಲ್ಲವೇ ಹಾಗೇ ಹಸಿದುಕೊಂಡು ಹೋಗ್ತೀನಿ ಅಂತಾ ಹಠ ಹಿಡಿದಿದ್ದಾನೆ. ಮಧ್ಯಾಹ್ನ ಊಟದ ಡಬ್ಬಿಗೂ ತೆಗೆದುಕೊಂಡು ಹೋಗೋದಿಲ್ವಂತೆ ಎಂದಳು.
ಏನೋ ಮಗೂ ಅದ್ಯಾಕೋ ಹಾಗೆ ಹೇಳ್ತೀಯಾ? ಎಷ್ಟು ರುಚಿಯಾಗಿದೆಯಲ್ಲೋ? ನೋಡು ನಾನೂ ಅದನ್ನೇ ತಿನ್ತಾಇದ್ದೀನಿ ಮತ್ತು ಅದನ್ನೇ ಮಧ್ಯಾಹ್ನದ ಊಟಕ್ಕೂ ಡಬ್ಬಿಯಲ್ಲಿ ಕಟ್ಟಿಕೊಂಡು ಹೋಗ್ತಾ ಇದ್ದೀನಿ. ಆಹಾರ ದೇವರ ಪ್ರಸಾದದ ಸಮಾನ. ಅದನ್ನು ಹಾಗೆ ಬೇಡಾ ಎನ್ನಬಾರದು. ಸುಮ್ಮನೆ ಕಣ್ಣು ಒತ್ತಿಕೊಂಡು ತಿಂದುಕೊಂಡು ಹೋಗು. ಬೇಕಾದ್ರೆ ಸ್ವಲ್ಪ ಮೊಸರು ಹಾಕಿಸಿಕೊಂಡು ತಿನ್ನು. ತುಂಬಾ ಚೆನ್ನಾಗಿರುತ್ತದೆ. ಮೊಸರು ಆರೋಗ್ಯಕ್ಕೂ ತಂಪು ಎಂದ. ಇಲ್ಲಾಪ್ಪಾ ನನಗೆ ಇಷ್ಟಾ ಇಲ್ಲ. ಅಮ್ಮಾ ಸಿಹಿಯಾಗಿ ಮಾಡಿರ್ತಾರೆ ನನಗೆ ಇಷ್ಟ ಇಲ್ಲ ಎಂದ. ಓ ಅಷ್ಟೇನಾ? ಅದಕ್ಕೇನಂತೆ? ಜೊತೆಗೆ ಒಂದು ಚೂರು ಹೇರಳೇ ಕಾಯಿ ಉಪ್ಪಿನಕಾಯಿಯನ್ನೋ ಇಲ್ಲವೇ ಬಾಳಕದ ಮೆಣಸಿಕಾಯಿ (ಉಪ್ಪು ಮೆಣಸಿನಕಾಯಿ) ನೆಂಚಿಕೊಂಡು ತಿಂದರಾಯ್ತು. ಮಯೂರಿ ನನ್ನ ಡಬ್ಬಿಗೂ ಉಪ್ಪಿನಕಾಯಿ ಜೊತೆಗೆ ಸ್ವಲ್ಪ ಮೊಸರು ಕೊಡು ಮಧ್ಯಾಹ್ನದ ವೇಳೆಗೆ ಅವಲಕ್ಕಿ ಬಿರುಸಾಗಿ ಗಂಟಲೊಳಗೆ ಇಳಿಯುವುದಿಲ್ಲ ಎಂದ ಶಂಕರ, ಮಗೂ ಬೇಗ ಬೇಗ ತಿನ್ನು ಸ್ಪೆಷಲ್ ಕ್ಲಾಸ್ಗೆ ತಡವಾಗುತ್ತದೆ. ಆಮೇಲೆ ಸುಮ್ಮನೆ ಹೊರಗೆ ನಿಲ್ಲಿಸಿ ನಮಗೆ ಕರೆ ಮಾಡ್ತಾರೆ ಅಂದ. ಅದಾವುದಕ್ಕೂ ಒಪ್ಪದ ಮಗ ಮೊಂಡು ಹಠ ಹಿಡಿದು, ನನಗೆ ಬೇಡಾ ಅಂದ್ರೆ ಬೇಡಾ. ಮ್ಯಾಗಿ ಮಾಡಿಕೊಡುವುದಾದರೆ ಸರಿ ಇಲ್ಲಾಂದ್ರೆ ನಾನು ಹಾಗೆ ಹಸಿದು ಕೊಂಡೇ ಇರ್ತೀನಿ ಹಾಗೇ ಶಾಲೆಗೂ ಹೋಗ್ತೀನೀ ಎಂದು ತುಸು ಜೋರಾಗಿಯೇ ಹೇಳಿದ್ದು, ಶಂಕರ ಮತ್ತು ಮಯೂರಿಯರ ಪಿತ್ತ ನೆತ್ತಿಗೇರಿಸಿತ್ತು. ಅದುವರೆವಿಗೂ ಸಮಾಧಾನವಾಗಿ ತಿಂಡಿ ತಿನ್ನುತ್ತಿದ್ದ ಶಂಕರ ತಿಂಡಿ ತಟ್ಟೆ ಕೆಳಗಿಟ್ಟು ಕೈತೊಳೆದುಕೊಂಡು ಬೆಳೆಯುತ್ತಿರುವ ಹುಡುಗ ಈ ಹಾಳೂ ಮೂಳೂ ಜೆಂಕ್ ಫುಡ್ ತಿಂದ್ರೆ ಶಕ್ತಿಯಾದ್ರೂ ಎಲ್ಲಿಂದ ಬರಬೇಕು? ನಿಮ್ಮ ತಾತನ ಕಾಲದಲ್ಲಿ ಮನೆಯಲ್ಲಿ ತಿನ್ನುವುದಕ್ಕೇ ಏನು ಇರ್ತಾಯಿರಲಿಲ್ಲ ಅದಕ್ಕೆ ಅವರಿವರ ಮನೆಯಲ್ಲಿ ವಾರಾನ್ನಾ ಮಾಡಿ ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿ ತಮ್ಮ ಮಕ್ಕಳಿಗೆ ಆ ರೀತಿಯ ತೊಂದರೆ ಆಗಬಾರದೆಂದು ನಮ್ಮಗೆಲ್ಲ ಅವರಿಗೆ ಕೈಯಲ್ಲಿ ಆದಷ್ಟು ಒಳ್ಳೆಯ ತಿಂಡಿ ಊಟ ಹಾಕಿ ಸಾಕಿದ್ರು. ನಾವು ಏನು ಮಾಡಿ ಹಾಕ್ತಿದ್ರೋ ಅದನ್ನೇ ಪ್ರಸಾದ ಎಂದು ತಿಳಿದು ತಿಂದು ಬೆಳೆದು ದೊಡ್ಡವರಾದ ಮೇಲೆ ನಮ್ಮ ರೀತಿ ನಿಮಗೆ ಇರಬಾರದೂ ಅಂತ ಅತ್ಯಂತ ವೈಭವೋಪೇತವಾಗಿ ರುಚಿರುಚಿಯಾಗಿ ಮಾಡಿ ಹಾಕಿದ್ರೂನೂ ತಿನ್ನೋದಕ್ಕೇ ಇಷ್ಟೋಂದು ಕೊಬ್ಬು ಆಡ್ತೀರಲ್ಲೋ, ಮಯೂರೀ, ಅವನು ಕೇಳಿ ಕೇಳಿದ್ದೆಲ್ಲಾ ಮಾಡಿ ಹಾಕಿ ಮುದ್ದು ಮಾಡಿ ಆವನನ್ನೀಗ ಮೊದ್ದು ಮಾಡಿಟ್ಟಿದ್ದೀಯಾ, ಅವನಿಗೆ ಅನ್ನದ ಬೆಲೆ ಗೊತ್ತಿಲ್ಲ ಹಸಿವಿನ ರುಚಿ ಗೊತ್ತಿಲ್ಲಾ. ಇವತ್ತು ಒಂದು ದಿನ ಹಸಿದು ಕೊಂಡೇ ಹೋಗಲಿ ಆಗ ಗೊತ್ತಾಗುತ್ತೆ ಹಸಿವಿನ ಬೆಲೆ ಏನು? ಎಂದು ಎತ್ತರದ ಧನಿಯಲ್ಲಿ ಹೇಳಿದರೂ, ಗೋರ್ಕಲ್ಲ ಮೇಲೆ ಮಳೆ ಸುರಿದಂತೆ ಸರ್ವಜ್ಞ ಎನ್ನುವಂತೆ ಉಬಾ ಶುಬಾ ಎನ್ನದೆ ತನ್ನ ಮೊಂಡು ಹಠದಲ್ಲಿಯೇ ಇದ್ದ ಸಮೀರ.
ಅದೇ ಸಮಯಕ್ಕೆ ಯಾರೋ ಮಕ್ಕಳು ಆಂಟೀ ಆಂಟೀ ಏನಾದ್ರೂ ಕೆಲಸ ಇದ್ಯಾ? ನಿಮ್ಮ ಗಾರ್ಡನ್ ಕ್ಲೀನ್ ಮಾಡ್ಬೇಕಾ? ಇಲ್ಲಾ ನಿಮ್ಮ ಮನೆ ಮುಂದಿರುವ ಮೋರಿ ಕ್ಲೀನ್, ಇಲ್ಲಾ ಗಾಡಿ ತೋಳಿಬೇಕಾ ಹೇಳಿ ಆಂಟಿ, ಏನ್ ಕೆಲ್ಸಾ ಹೇಳಿದ್ರೂ ಮಾಡ್ತೀವಿ. ಸ್ವಲ್ಪ ತಿನ್ನೋದಕ್ಕೆ ತಿಂಡಿ ಮತ್ತು ನಿಮಗೆ ಮನಸ್ಸಿಗೆ ಬಂದಷ್ಟು ದುಡ್ಡು ಕೊಡಿ, ಅಂತಾ ಮನೆಯ ಮುಂದಿನ ಗೇಟ್ ಬಳಿ ಜೋರಾಗಿ ಕೂಗುತ್ತಿರುವುದು ಕೇಳಿ ಬಂತು. ಮಗನೊಂದಿಗೆ ಹೊರಗೆ ಬಂದು ಆ ಮೂರ್ನಾಲ್ಕು ಮಕ್ಕಳನ್ನು ನೋಡಿದರೆ ಯಾರಿಗೂ ಆರು, ಎಂಟು ವರ್ಷಗಳು ದಾಟಿರಲಿಲ್ಲ. ಮೈಮೇಲೆ ಸರಿಯಾದ ಬಟ್ಟೆಯೂ ಇರಲಿಲ್ಲ. ಕಣ್ಣಿನಲ್ಲಿ ಹೊಳಪಿರಲಿಲ್ಲ. ಗಂಟಲಲ್ಲಿ ಹಸಿವಿನ ಆರ್ದ್ರತೆ ಇತ್ತು. ಆ ಮಕ್ಕಳ ಬಳಿ ಬಂದು ಯಾಕೋ ಮಕ್ಳಾ!! ಶಾಲೆಗೆ ಹೋಗುವುದಿಲ್ಲವೇನೋ? ಇಷ್ಟು ಚಿಕ್ಕವಯಸ್ಸಿನಲ್ಲಿಯೇ ಕೆಲಸ ಮಾಡೋದಿಕ್ಕೆ ಬಂದಿದ್ದೀರಲ್ಲೋ ಅಂದ್ರೆ, ಏನು ಮಾಡೋದು ಅಂಕಲ್ ಮನೆ ತುಂಬಾ ಮಕ್ಕಳು ಅಪ್ಪಾ, ಅಣ್ಣ, ಗ್ಯಾರೇಜ್ ಹೋಗ್ತಾರೆ ಅಮ್ಮಾ ಮನೆ ಕೆಲ್ಸಾ ಮಾಡ್ತಾರೆ. ತರೋ ದುಡ್ಡು ಮನೆಗೆ ಸಾಕಾಗೊಲ್ಲ. ಶಾಲೆ ಇರೋ ದಿವಸ ಶಾಲೆಯಲ್ಲಿ ಕೊಡೋ ಬಿಸಿ ಊಟದಲ್ಲೇ ಹೇಗೋ ಹೊಟ್ಟೆ ತುಂಬತ್ತೆ. ಅದಕ್ಕೇ ಶಾಲೆಗೆ ರಜೆ ಇರುವಾಗ ಹೀಗೆ ಸಣ್ನ ಪುಟ್ಟ ಕೆಲಸ ಮಾಡ್ತೀವೀ. ನೀವು ಕೊಟ್ಟ ಅಲ್ಪ ಸ್ವಲ್ಪ ದುಡ್ಡಿನಲ್ಲಿ ಪುಸ್ತಕ, ಪೆನ್ಸಿಲ್ ತಗೋತೀವಿ. ಏನಾದರೂ ಕೊಟ್ರೆ ತಿನ್ನುತ್ತೀವಿ ಎಂದಾಗ ಮನಸ್ಸು ಚುರ್ ಎಂದಿತು. ಶಂಕರ ಪಕ್ಕದಲ್ಲೇ ನಿಂತಿದ್ದ ಮಗನ ಕಡೆ ನೋಡಿದ. ಹೇಳುವುದಕ್ಕೆ ಮತ್ತು ಕೇಳುವುದಕ್ಕೇನು ಇರಲಿಲ್ಲ. ಬುದ್ದಿ ತಿಳಿದಿದ್ದ ಮಗನಿಗೆ ಎಲ್ಲವೂ ಅರ್ಥವಾಗಿತ್ತು. ಸುಮ್ಮನೆ ಮನೆಯೊಳಗೆ ಹೋಗಿ ಅಮ್ಮಾ ತಿಂಡಿ ಕೊಡಿ ಹೊತ್ತಾಯ್ತು ಎಂದ. ಹೊರಗೆ ನಡೆದ ಸಂಗತಿಗಳ ಅರಿವಿಲ್ಲದ ಮಯೂರಿ ಇದೇನಪ್ಪಾ ಮಗ ಇಷ್ಟು ಬೇಗನೆ ಸರಿ ಹೋದ್ನಲ್ಲಾ ಅವರಪ್ಪ ಅದೇನು ಮೋಡಿ ಮಾಡಿದ್ರೋ ಏನೋ? ಸರಿ ನನಗೆಯಾಕೆ ಬೇಕು ಮಗ ತಿಂಡಿ ತಿಂದ್ರೆ ಸಾಕು ಎಂದು ಮನಸ್ಸಿನಲ್ಲಿಯೇ ಯೋಚಿಸಿ ಮಗನಿಗೆ ತಿಂಡಿ ತಟ್ಟೆ ಕೊಟ್ಟು ಡಬ್ಬಿ ಕಟ್ಟಲು ಶುರು ಹಚ್ಚಿಕೊಳ್ಳುವಷ್ಟರಲ್ಲಿಯೇ, ಹೊರಗಿನಿಂದಲೇ ಶಂಕರ, ಮಯೂರಿಯನ್ನು ಕರೆದು, ನೋಡು ಈ ಮಕ್ಕಳಿಗೆಲ್ಲಾ ಹೊಟ್ಟೆ ತುಂಬಾ ತಿಂಡಿ ತಿನ್ನಲು ಕೊಡು. ಮಾಡಿದ ತಿಂಡಿ ಸಾಲದೇ ಹೋದ್ರೆ ನನ್ನ ಡಬ್ಬಿಯಿಂದ ತೆಗೆದುಕೋ, ನಾನು ಬೇಕಿದ್ರೆ, ಆಫೀಸಿನಲ್ಲಿಯೇ ಊಟ ಮಾಡಿಕೊಳ್ತೀನಿ ಇಲ್ಲಾಂದ್ರೆ ಮೂರ್ನಲ್ಕು ಹಣ್ಣುಗಳು ಇದ್ದರೆ ಕೊಟ್ಟು ಬಿಡು. ಇವತ್ತು ಫಲಾಹಾರ ಮಾಡ್ತೀನಿ ಅಂತ ತನ್ನ ಮಡದಿಗೆ ಹೇಳಿ, ಮಕ್ಕಳತ್ತ ತಿರುಗಿ, ನೋಡೋ ಮಕ್ಳಾ, ನೀವೆಲ್ಲಾ ಚಿಕ್ಕ ಮಕ್ಕಳು ನಿಮ್ಮ ಹತ್ತಿರ ಕೆಲಸ ಮಾಡಿಸಿ ಕೊಳ್ಳುವುದು ತಪ್ಪು. ಹಾಗೇ ನಿಮಗೆ ದುಡ್ಡು ಕೊಡುವುದೂ ತಪ್ಪು. ನೀವಾದ್ರೂ ಏನು ಮಾಡ್ತೀರಿ, ಹೆತ್ತವರು ಗೊತ್ತು ಗುರಿ ಇಲ್ಲದೆ ಮಾಡಿದ ತಪ್ಪಿಗೆ ನಿಮ್ಮನ್ನು ದೂರುವುದು ಸರಿಯಲ್ಲ. ಆದರೂ ನಿಮಗೆ ಓದಿನ ಹಸಿವಿದೆ. ನಿಜವಾದ ಹಸಿವಿನ ಅರಿವಿದೆ. ಹಸಿದು ಬಂದಿರುವ ಶತ್ರುಗಳಿಗೂ ಮೊದಲು ಉಣಬಡಿಸಿ ನಂತರ ಕಾದಾಡು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಹಾಗಾಗಿ ನೀವೇನೂ ನಮ್ಮ ಮನೆಯಲ್ಲಿ ಯಾವುದೇ ಕೆಲಸ ಮಾಡಬೇಕಿಲ್ಲ. ತಿಂಡಿ ಕೊಡ್ತಾರೆ. ಹೊಟ್ಟೆ ತುಂಬಾ ತಿನ್ನಿ. ಹಾಗೆ ಈ ದುಡ್ಡು ಜೋಪಾನವಾಗಿ ಅಮ್ಮನ ಕೈಗೆ ಕೊಟ್ಟು ನಿಮ್ಮ ಓದಿನ ಅವಶ್ಯಕತೆಗೆ ಬಳೆಸಿಕೊಳ್ಳಿ. ಸುಖಾ ಸುಮ್ಮನೆ ಖರ್ಚು ಮಾಡಬೇಡಿ ಎಂದು ಹೇಳಿ ಕಛೇರಿಗೆ ಹೊರಡಲು ಸಿಧ್ಧವಾದನು. ಮಕ್ಕಳ ಸ್ಥಿತಿಗತಿಗಳನ್ನು ನೋಡಿದ ತಕ್ಷಣವೇ ಅರಿತ ಮಯೂರಿಯೂ ಮಕ್ಕಳಿಗೆ ತಿಂಡಿ ಕೊಡಲು ಹೋದರೆ, ಆ ಮಕ್ಕಳಲ್ಲಿ ಒಬ್ಬ ಆಂಟಿ ತಿಂಡಿನಾ ಓಂದು ಕವರಿನಲ್ಲಿ ಹಾಕಿ ಕೊಡ್ತೀರಾ? ಮನೆಗೆ ತೆಗೆದುಕೊಂಡು ಹೋಗಿ ನಮ್ಮ ತಮ್ಮ, ತಂಗಿ ಜೊತೆ ತಿನ್ತೀವಿ ಎಂದು ಹೇಳಿದಾಗ, ಅಲ್ಲಿಯೇ ತಿಂಡಿ ತಿನ್ನುತ್ತಿದ್ದ ಸಮೀರನಿಗೆ ಹಸಿವು ಎಂದರೆ ಹೇಗಿರುತ್ತದೆ ಎಂಬ ಅರಿವು ಆಗಿದ್ದಂತೂ ಸುಳ್ಳಲ್ಲ. ಮಯೂರಿ ಕೂಡ ತಿಂಡಿಯನ್ನು ಪೊಟ್ಟಣದಲ್ಲಿ ಕಟ್ಟಿ ಕೊಡುತ್ತಾ ಮಗನಿಗೆ ಚಿಕ್ಕದಾಗಿದ್ದ ಕೆಲವು ಬಟ್ಟೆಗಳನ್ನೂ ಜೊತೆಗೆ ಕೊಟ್ಟು ಅದರ ಜೊತೆಗೆ ಮನೆಯಲ್ಲಿ ತನ್ನ ಮಕ್ಕಳು ಉಪಯೋಗಿಸದೇ ಇದ್ದ ಖಾಲೀ ಪುಸ್ತಕಗಳು ಮತ್ತು ಪೆನ್ಸಿಲ್ಗಳನ್ನು ಕೊಟ್ಟು ಕಳುಹಿಸಿದಳು.
ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮಗನೆಡೆಗೆ ತಿರುಗಿ ನೋಡಿದ ಶಂಕರ, ನೋಡಿದೆಯಾಪ್ಪಾ ನಿಜವಾದ ಹೊಟ್ಟೆಯ ಹಸಿವು ಮತ್ತು ಓದಿನ ಹಸಿವು ಹೇಗೆ ಇರುತ್ತದೆ ಅಂತಾ. ನಿಮಗೆಲ್ಲಾ ಈ ರೀತಿಯ ತೊಂದರೆಗಳಾಗದಿರಲಿ ಎಂದು ನಾವು ಚೆನ್ನಾಗಿ ಹೊಟ್ಟೆ, ಬಟ್ಟೆ ಮತ್ತು ಓದಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡರೆ, ಅದನ್ನು ಅರಿಯದೆ ಸುಮ್ಮನೆ ಅಪ್ಪಾ ಅಮ್ಮನ ಮೇಲೆ ದರ್ಪು ತೋರಿಸುತ್ತೀರಿ ಎಂದಾಗ ಮಗನಿಗೆ ತನ್ನ ತಪ್ಪಿನ ಅರಿವಾಗಿ ಇಲ್ಲಪ್ಪಾ ಇನ್ನು ಮುಂದೆ ಹಾಗೆ ಹಠ ಮಾಡುವುದುದಿಲ್ಲ ನನ್ನನ್ನು ಕ್ಷಮಿಸಿ ಎಂದ. ಮಾಡಿದರ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದವರಿಗೆ ಇನ್ನೂ ಹೆಚ್ಚಿಗೆ ತಿಳುವಳಿಗೆ ಹೇಳುವುದು ಸರಿಯಲ್ಲ ಎಂದು ನಿರ್ಥರಿಸಿದ ಶಂಕರ, ಸರಿ ಸರಿ, ಮೊದಲು ಅಮ್ಮನ ಬಳಿ ಹೋಗಿ ಕ್ಷಮೆ ಕೇಳು ಅವಳಿಗೇ ತುಂಬಾ ಬೇಜಾರಾಗಿರುವುದು ಎಂದ. ಕಾಲಿಗೆ ಬಿದ್ದ ಮಗನನ್ನು ಕೈ ಎತ್ತುತ್ತಾ ಸರಿ ಬಿಡು ಗೊತ್ತಿಲ್ಲದೆ ಹೀಗೆ ಮಾಡಿದೆ. ಮುಂದೆಂದೂ ಇಂತಹ ಪರಿಸ್ಥಿತಿ ಬರದೇ ಇರಲಿ ಎಂದು ಮಗನನ್ನು ಬರಸೆಳೆದು ಮಗನ ಹಣೆಯ ಮೇಲೆ ಮುತ್ತಿಟ್ಟಳು ಮಯೂರಿ. ಎಷ್ಟಾದರೂ ಅವಳದ್ದು ಹೆತ್ತ ತಾಯಿಯ ಕರುಳಲ್ಲವೇ, ತಾಯಿ ಕ್ಷಮಯಾಧರಿತ್ರಿಯಲ್ಲವೇ
ಏನಂತೀರಿ