ಸಿದ್ದಗಂಗಾ ಶ್ರೀಗಳು

ಒಂದೂರಲ್ಲೊಬ್ಬ ನಾಸ್ತಿಕನಿದ್ದ. ಅವನು ದೇವರನ್ನೂ ನಂಬುತ್ತಿರಲಿಲ್ಲ ಹಾಗೆಯೇ ಜ್ಯೋತಿಷಿಗಳನ್ನೂ ನಂಬುತ್ತಿರಲಿಲ್ಲ. ಹೇಗಾದರೂ ಮಾಡಿ ಜ್ಯೋತಿಷಿಗಳ ಬಂಡವಾಳವನ್ನು ಬಯಲು ಮಾಡಬೇಕೆಂದು ಹವಣಿಸುತ್ತಿದ್ದ. ಒಂದು ದಿನ ಅವನ ಸ್ನೇಹಿತನ ಮನೆಗೆ ಹೋಗಿದ್ದಾಗ ಅವರ ಮನೆಗೆ ಬಂದಿದ್ದ ಪ್ರಖ್ಯಾತ ಜ್ಯೋತಿಷಿಗಳನ್ನು ಇವನಿಗೆ ಪರಿಚಯಿಸಲಾಯಿತು. ಇಂತಹದ್ದೇ ಸುಸಂಧರ್ಭವನ್ನು ಎದುರು ನೋಡುತ್ತಿದ್ದ ಅವನಿಗೆ ರೊಟ್ಟಿ ಜಾರಿ ತುಪ್ಪಕ್ಕೇ ಬಿದ್ದಹಾಗಾಯಿತು.  ಹಾಗೆಯೇ ಜ್ಯೋತಿಷಿಗಳನ್ನು ಮಾತಿಗೆಳೆದು ನನ್ನಲ್ಲಿ ಒಂದು ಸಮಸ್ಯೆಯಿದೆ ಅದನ್ನು ಸ್ವಲ್ಪ ಬಗಹರಿಸುವಿರಾ ಎಂದು ಕೇಳಿದ. ಅವನ ಮುಖವನ್ನು ಒಮ್ಮೆ ದಿಟ್ಟಿಸಿ ನೋಡಿದ ಜ್ಯೋತಿಷಿಗಳು ಮುಗುಳ್ನಗೆಯಿಂದ ಸರಿ ಸಮಸ್ಯೆ ಏನೆಂದು ಹೇಳಿ ನನ್ನ ಬುದ್ದಿಮತ್ತೆಯ ಪರಿಧಿಯಲ್ಲಿದ್ದರೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು. ಜ್ಯೋತಿಷಿಗಳು ಅಷ್ಟು ಬೇಗನೆ ಒಪ್ಪಿಕೊಂಡದ್ದು ಸ್ವಲ್ಪ ಅಚ್ಚರಿಯಾದರೂ ಹೇಗಾಗರೂ ಮಾಡಿ ಅವರನ್ನು ಸೋಲಿಸಲೇ ಬೇಕೆಂಬ ಫಣ ತೊಟ್ಟಿದ್ದ  ಆ ನಾಸ್ತಿಕ ಕೆಲ ಕ್ಷಣ ಹೊರಗೆ ಹೋಗಿ ಮತ್ತೆ ಜ್ಯೋತಿಷಿಗಳ  ಮುಂದೆ ಬಂದು  ಅವನ ಮುಷ್ಟಿಯನ್ನು ತೋರಿಸುತ್ತಾ ಈ ಮುಷ್ಟಿಯಲ್ಲೇನಿದೆ? ಎಂದು ಹೇಳುವಿರಾ ಎಂದು ಕೇಳಿದ. ಅವನ ಪ್ರಶ್ನೆಯನ್ನು ಕೇಳಿದ ಜ್ಯೋತಿಷಿಗಳು  ನಿನ್ನ ಮುಷ್ಟಿಯಲ್ಲಿ ಒಂದು ಕೀಟವಿದೆ ಎಂದರು. ಅವರ ಉತ್ತರಕ್ಕೆ ಮನಸ್ಸಿನಲ್ಲಿಯೇ ಬೆಚ್ಚಿದ ನಾಸ್ತಿಕ ತನ್ನ ಅಳುಕನ್ನು ತೋರಿಸಿಕೊಳ್ಳದೆ, ಸರಿ ಹಾಗಾದರೆ ಆ ಕೀಟ ಬದುಕಿದೆಯಾ? ಇಲ್ಲವೇ ಸತ್ತಿದೆಯಾ? ಎಂದು ಮರು ಪ್ರಶ್ನೆ ಹಾಕಿದ.  ನಾಸ್ತಿಕನ ಮರು ಪ್ರಶ್ನೆಗೆ ಸ್ವಲ್ಪ ಸಮಯ ಮೌನವಾಗಿದ್ದನ್ನು ಕಂಡ ನಾಸ್ತಿಕ, ಆಹಾ!! ನೋಡಿದ್ರಾ ನೀವು ಸೋತು ಬಿಟ್ಟಿರೀ. ನನ್ನ ಪ್ರಶ್ನೆಗೆ ಉತ್ತರ ಕೊಡಲು ಸಾಧ್ಯವಾಗಲಿಲ್ಲ  ಎಂದು ಕೇಕೇ ಹಾಕುತ್ತಿದ್ದನ್ನು ಕಂಡ ಜ್ಯೋತಿಷಿಗಳು. ಅಯ್ಯಾ  ನಿನ್ನ ಮುಷ್ಟಿಯಲ್ಲಿರುವ ಕೀಟದ ಅಳಿವು ಉಳಿವಿನ ಪ್ರಶ್ನೆ ನಿನ್ನ ಕೈಯಲ್ಲಿಯೇ ಇದೆ. ಒಂದು ವೇಳೆ ನಾನು ಕೀಟ ಬದುಕಿದೆ ಎಂದರೆ ನೀನು ಮುಷ್ಟಿಯನ್ನು ಗಟ್ಟಿಯಾಗಿಸಿ ಕೀಟವನ್ನು ಕೊಂದು ನನ್ನ ಉತ್ತರ ತಪ್ಪಿದೆ ಎನ್ನುತ್ತೀಯಾ. ಇಲ್ಲವೇ ನಾನು ಕೀಟ ಸತ್ತಿದೆ ಎಂದರೆ, ಬದುಕಿರುವ ಕೀಟವನ್ನು ಹಾಗೆಯೇ ತೋರಿಸಿ ನೋಡಿ ಕೀಟ ಬದುಕಿದೆ ಹಾಗಾಗಿ ನೀವು ತಪ್ಪು ಉತ್ತರಿಸಿ ಸೋತಿದ್ದೀರಿ ಅನ್ನುತ್ತೀಯೆ. ಸುಮ್ಮನೆ ನಾನು ನಿನ್ನ ಈ ಅಪ್ರಸ್ತುತ ಪ್ರಶ್ನೆಗೆ ಉತ್ತರಿಸಿ ಒಂದು ಕೀಟವನ್ನು ಪರೋಕ್ಷವಾಗಿ  ಕೊಲ್ಲಲು ಸಹಕರಿಸಿದ ಪಾಪವನ್ನು ಕಟ್ಟಿ ಕೊಳ್ಳಲಾರೆ.  ಅವರವರ ಭಾವಕ್ಕೆ ಅವರವರ ಭಕುತಿ ಎನ್ನುವಂತೆ, ನೀನು ನಿನ್ನ ಬಯಕೆಯಂತೆಯೇ ಉತ್ತರವನ್ನು ಇತರರಿಂದ ಬಯಸುತ್ತೀಯೆ. ಅಂತೆಯೇ ನಿನ್ನ ಸ್ವಾರ್ಥ ಲಾಭಕ್ಕಾಗಿ  ದೇವರನ್ನೂ ಸಹ ಪ್ರಶ್ನಿಸಲು ಮತ್ತು ಪರೀಕ್ಷಿಸಲು ಪ್ರಯತ್ನಿಸುವುದೇ ಮೂರ್ಖತನ. ಸ್ವಲ್ಪ ಕಾಲ  ಸ್ವಾರ್ಥದಿಂದ ಹೊರಬಂದು ನಿಸ್ವಾರ್ಥದಿಂದ  ಭಗವಂತನನ್ನು ಧ್ಯಾನ ಮಾಡು ನಿನಗೇ ಭಗವಂತನು ಒಲಿಯುತ್ತಾನೆ ಎನ್ನುತ್ತಾರೆ.

ss2ಬಹಳ ದಿನಗಳಿಂದಲೂ ನಡೆದಾಡುವ ದೇವರೆಂದೇ ಖ್ಯಾತರಾಗಿದ್ದ ಶತಾಯುಷಿ ಅಕ್ಷರ ದಾಸೋಹೀ ಪರಮ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಭಾರತರತ್ನವನ್ನು ನೀಡಬೇಕೆಂದು ಎಷ್ಟೋ ವರ್ಷಗಳಿಂದ ಹಲವರು ನಾನಾ ರೀತಿಯ ಪ್ರಯತ್ನಗಳನ್ನೂ ಮತ್ತು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದದ್ದು ನಮಗೆಲ್ಲರಿಗೂ  ತಿಳಿದಿದ್ದ ವಿಷಯ. ಕಾರಣಾಂತರಗಳಿಂದ  ಜನರ ಆಸೆಯನ್ನು ಈಡೇರಿಸುವ ಪ್ರಯತ್ನಗಳನ್ನು ಯಾವುದೇ ಸರ್ಕಾರಗಳು ಮಾಡದಿದ್ದದ್ದು ವಿಷಾಧನೀಯ. ಆದರೆ  ಸ್ವಾಮೀಜಿಯವರು ಇದ್ದಕ್ಕಿದ್ದಂತೆಯೇ ಜನವರಿ 21, 2019 ನಮ್ಮನ್ನು ಅಗಲಿದಾಗ ಇಡೀ ಪ್ರಪಂಚಾದ್ಯಂತ   ಕೋಟ್ಯಂತರ ಭಕ್ತ ಸಮೂಹ ಶೋಕ ಸಾಗರದಲ್ಲಿ ಮುಳುಗಿದ್ದಾಗ ಕೆಲ ಸ್ವಾರ್ಥಿಗಳು, ಪಟ್ಟ ಭಧ್ರ ಹಿತಾಸಕ್ತಿಗಳು ಮತ್ತು ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಬಯಸುವ ಕೆಲ ಪುಡಾರಿಗಳು   ಪೂಜ್ಯ ಶ್ರೀಗಳಿಗೆ ಭಾರತರತ್ನ ನೀಡಲಿಲ್ಲವೆಂದೂ ಗಂಟಲು ಹರಿಯುವಂತೆ ಅರುಚಾಡುವುದನ್ನೂ, ದೃಶ್ಯ ಮಾಧ್ಯಮದ ಕ್ಯಾಮೆರಾಗಳ ಮುಂದೆ ಗೀಳುಡುತ್ತಿದ್ದರೆ, ಇನ್ನೂ ಕೆಲವು  ವಿಕೃತ  ಮನಸ್ಸಿನ ಜನ ಸ್ವಾಮೀಜಿಗಳ ಅಕಾಲಿಕ ಮರಣದ ಬಗ್ಗೆ ಅಸಹ್ಯಕರವಾಗಿ ಮತ್ತು ಅಶ್ಲೀಲವಾದ ಹೇಳಿಕೆಗಳನ್ನು   ಸಾಮಾಜಿಕ ಜಾಲ ತಾಣಗಳಲ್ಲಿ   ಹರಿಬಿಟ್ಟಿರುವುದು ನಿಜಕ್ಕೂ ದುಃಖಕರ. ಒಂದು ವೇಳೆ ಇಂತಹವರ ಮಾತುಗಳಿಗೆ ಸರ್ಕಾರಗಳು ಬಗ್ಗಿ ಸ್ವಾಮಿಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿದಲ್ಲಿ, ನೋಡಿದಿರಾ ನಮ್ಮ ಹೋರಾಟದ ಫಲವಾಗಿಯೇ ಇದು ದಕ್ಕಿದ್ದೆಂದು, ಇಲ್ಲವೇ   ಒಂದು ವೇಳೆ ಇಂತಹವರ ಮಾತುಗಳಿಗೆ ಸರ್ಕಾರಗಳು ಜಗ್ಗದೆ ಸ್ವಾಮಿಗಳಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ನೀಡಿದೇ ಹೋದಲ್ಲಿ , ನೋಡಿದಿರಾ ಈ ಬಂಡ ಸರ್ಕಾರಗಳನ್ನು ಮತ್ತಿವರ  ಸ್ವಾಮಿ ಭಕ್ತಿಯನ್ನು ಇಂತಹ ಸರ್ಕಾರಗಳು ಬೇಕೆ ಎಂದು ಜನರನ್ನು  ಸರ್ಕಾರಗಳ ವಿರುದ್ಧ ಎತ್ತಿ ಕಟ್ಟಿ ತಮ್ಮ ಓಟ್ ಬ್ಯಾಂಕ್ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಯಾವುದೇ ಜಾತಿ, ಧರ್ಮಗಳನ್ನು ನೋಡದೆ  ನೂರಕ್ಕೂ ಅಧಿಕ ವರ್ಷ ಬಾಳಿ, ಸಾವಿರಾರು ವಿದ್ಯಾ ಸಂಸ್ಥೆಗಳನ್ನು ಕಟ್ಟಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ನೀಡುವುದರ ಮೂಲಕ, ಇಂದು ಕೋಟ್ಯಾಂತರ ಜನರ ಹಸಿವನ್ನು ಇಂಗಿಸಿದ ಮಹಾ ಚೇತನದ ಸಾವಿನಲ್ಲೂ ರಾಜಕಾರಣ ಮಾಡಲು ಹೊರಟಿರುವಂತಹಾ ಇಂತಹ ವಿಕೃತ ಮನಸ್ಸಿನ ಜನರನ್ನು ನೋಡುತ್ತಿದ್ದಾಗ ಮೇಲೆ ಹೇಳಿದ ನಾಸ್ತಿಕನ ದೃಷ್ಟಾಂತ ನೆನಪಿಗೆ ಬಂದಿತು. ಯಾರೇ ಬದುಕಲಿ, ಯಾರೇ ಸಾಯಲಿ, ಯಾವುದೇ ರೀತಿಯ ಭಾವನೆಗಳಿಲ್ಲದೆ, ಸಮಾಜದ ಕಾಳಜಿ ಇಲ್ಲದೇ ಕೇವಲ ಸ್ವಾರ್ಥಕ್ಕಾಗಿಯೇ ಇಂತಹ ಸಂಧರ್ಭಗಳನ್ನು ದುರುಪಯೋಗ ಪಡಿಸಿಕೊಳ್ಳುವ ಸಾವಿನ ಮನೆಯಲ್ಲಿ ಗಳ  ಹಿರಿಯುವ ಇಲ್ಲವೇ ಸಾವಿನ ಮನೆಯ ಮುಂದೆ ಹಾಕಿರುವ ಬೆಂಕಿಯಲ್ಲಿ  ಬೀಡಿ ಹಚ್ಚಿಕೊಂಡು ಚಳಿ ಹಚ್ಚಿಕೊಳ್ಳುವ ಮಂದಿಗೆ ಧಿಕ್ಕಾರವಿರಲಿ.

ss3ಸ್ವಾಮೀಜಿಗಳು ಅದೆಷ್ಟೋ ವಿದ್ಯಾಸಂಸ್ಥೆಗಳನ್ನು ನಾಡಿನಾದ್ಯಂತ ಸ್ಥಾಪಿಸಿ ಅತ್ಯಂತ ಉನ್ನತ ಶಿಕ್ಷಣವನ್ನು ಕೈಗೆಟುಕುವ ಬೆಲೆಯಲ್ಲಿ ಹಲವಾರು ಸಲ ಆತ ನಿಜಕ್ಕೂ ಆರ್ಥಿಕವಾಗಿ ಬಡವನಾಗಿದ್ದಲ್ಲಿ ಉಚಿತವಾಗಿ ಶಿಕ್ಷಣವನ್ನು ನೀಡಿರುವ ಹಲವಾರು ಉದಾಹರಣೆಗಳು ನಮ್ಮ ಮುಂದಿದೆ. ತಮ್ಮ ಸಿದ್ದಗಂಗೆಯ ಆಶ್ರಮದ ಪಾಕ ಶಾಲೆಯಲ್ಲಿ ಅದೆಷ್ಟೋ ವರುಷಗಳಿಂದಲೂ ಹತ್ತಿಸಿದ ಬೆಂಕಿ ಆರಿರುವ ಉದಾಹರಣೆಯೇ ಇಲ್ಲ ಎಂಬ ಖ್ಯಾತಿಯನ್ನು ಪಡೆದಿದೆ. ಅಂದರೆ ದಿನದ 24ಗಂಟೆಗಳು,ವರ್ಷದ 365ದಿನಗಳೂ ಅಲ್ಲಿನ ಭೋಜನ ಶಾಲೆ ಭಕ್ತಾದಿಗಳಿಗೆ ಮತ್ತು ವಿದ್ಯಾರ್ಥಿಗಳ ಸೇವೆಗೆ ಸಿದ್ಧವಾಗಿರುತ್ತದೆ. ಅಲ್ಲಿಗೆ ಆಶ್ರಯ ಕೋರಲು ಬರುತ್ತಿದ್ದ ಎಲ್ಲ ಮಕ್ಕಳನ್ನೂ ಸ್ವಾಮೀಜಿಗಳೇ ಖುದ್ದಾಗಿ ಸಂದರ್ಶನ ಮಾಡುತ್ತಾ ಅಗತ್ಯವಿದ್ದವರನ್ನು ತಮ್ಮ ಆಶ್ರಮದಲ್ಲೇ ಉಚಿತ ಊಟ ಮತ್ತು ವಸತಿಯೊಂದಿಗೆ ಯೋಗ್ಯ ಶಿಕ್ಷಣ ಕೊಟ್ಟಿದ್ದಾರೆ. ಹಾಗೆ ಬೆಳೆದು ಬಂದ ಲಕ್ಷಾಂತರ ಮಂದಿ ಇಂದು ದೇಶ ವಿದೇಶಗಳಲ್ಲಿ ಅತ್ಯುತ್ತಮ ಮೌಲ್ಯಾಧಾರಿತ ಜೀವನ ನಡೆಸುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಸ್ವಾಮೀಜಿಗಳು ತಮ್ಮ ಮಠದ ಪೋಷಣೆಗೆ ಎಂದೂ ತಮ್ಮ ಹಳೆಯ ವಿಧ್ಯಾರ್ಥಿಗಳನ್ನು ಹಣ ಕೊಡಿರೆಂದು ಕೇಳಿರಲಿಲ್ಲ. ಯಾರ ಮುಂದೆಯೂ ಅಥವಾ ಯಾವ ಸರ್ಕಾರದ ಮುಂದಾಗಲೀ ಜೋಳಿಗೆ ಹಿಡಿದದ್ದೇ ಇಲ್ಲಾ.  ಸ್ವಾಮೀಜಿಗಳಿಂದ ಉಪಕೃತರಾದವರು ಮತ್ತು ಮಠದ ನಿಷ್ಠಾವಂತ ಭಕ್ತರು ಸ್ವಯಂಪ್ರೇರಣೆಯಿಂದ ಕೊಡುತ್ತಿದ್ದ ದೇಣಿಗೆ ಮತ್ತು ಶಿಕ್ಷಣ ಸಂಸ್ಥೆಗಳಿಂದ ಬರುತ್ತಿದ್ದ ಆದಾಯದಲ್ಲೇ ಮಠವನ್ನು ಇಷ್ಟುದಿನ ಅಚ್ಚು ಕಟ್ಟಾಗಿ ನಡೆಸಿಕೊಂಡು ಕೋಟ್ಯಾಂತರ ಮಂದಿಯ ಬಾಳ ಬೆಳಕಾಗಿರುವ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಿರೆಂದು ಜೋಳಿಗೆ ಹಿಡಿಯುವುದು ಸ್ವಾಮೀಜಿಗಳಿಗೆ ಮತ್ತು ಅವರ ನಂಬಿಕೆಗಳಿಗೆ ಅವಮಾನ ಮಾಡಿದಂತೆಯೇ ಸರಿ.

bhara_ratnaಈಗಾಗಲೇ ಸ್ವಾರ್ಥಕ್ಕಾಗಿ, ರಾಜಕೀಯ ಹಿತಾಸಕ್ತಿಗಳಿಗೆ ಮತ್ತು ಓಲೈಕೆಗಾಗಿ ಬೇಕಾಬಿಟ್ಟಿ ಭಾರತರತ್ನ ಪ್ರಶಸ್ತಿಗಳನ್ನು ಹಂಚಿ, ಪ್ರಶಸ್ತಿಯನ್ನೇ  ಅಪಮೌಲ್ಯವನ್ನಾಗಿ ಮಾಡಿರುವಾಗ, ಅರಿಷಡ್ವರ್ಗಗಳನ್ನು  ಮೆಟ್ಟಿ ನಿಂತಿದ್ದ,  ಸನ್ಯಾಸಿಗಳು ಮತ್ತು ಸಾಧು ಸಂತರೆಂದರೆ ಹೀಗಿರಬೇಕು ಎಂದು ಸದಾ ಸರಳ ಜೀವಿಯಾಗಿ ವಿಶ್ವಾದ್ಯಂತ ಪ್ರಸಿದ್ದರಾಗಿ ನಡೆದಾಡುವ ದೇವರೆಂದೇ ವಿಶ್ವ ವಿಖ್ಯಾತರಾಗಿದ್ದ  ಶ್ರೀ ಶಿವಕುಮಾರಸ್ವಾಮಿಗಳಿಗೆ  ಈಗ ಮರಣೋತ್ತರವಾಗಿ ಭಾರತರತ್ನ ನೀಡಿದರೆ  ಅದು ಕೇವಲ ತೋರ್ಪಡೆಗಾಗಿಯೋ ಇಲ್ಲವೇ , ಯಾರದ್ದೂ ಓಲೈಕೆಗಾಗಿಯೋ ಕೊಟ್ಟ ಪ್ರಶಸ್ತಿಯಾಗುವುದೇ ಹೊರತು ಅದಕ್ಕೆ ಬೆಲೆ  ಯಾವುದೇ ಹೆಚ್ಚಿನ ಬೆಲೆ ಇರುವುದಿಲ್ಲ.

ss1ನಾವೆಲ್ಲಾ ಪ್ರತ್ಯಕ್ಷವಾಗಿ ಕಂಡ  ನಡೆದಾಡುವ ದೇವರು ಎಂದು ಪೂಜಿಸಿದ, ಆರಾಧಿಸಿದ  ಶ್ರೀ ಶಿವಕುಮಾರ ಸ್ವಾಮಿಗಳು, ಇನ್ನು ಮುಂದೆ ಭೌತಿಕವಾಗಿ ನಮ್ಮೊಂದಿಗೆ ಇರುವುದಿಲ್ಲವಾದರೂ ಮತ್ತು ಅವರ ದೈಹಿಕ ಅಗಲಿಕೆ ನಮ್ಮನ್ನು ಕಾಡುವುದಾದರೂ, ಅವರ ಹೇಳಿ ಕೊಟ್ಟ ಆದರ್ಶಗಳು, ಅವರ ಸರಳ ನಡೆ, ನುಡಿಗಳು  ಮತ್ತು ಆಶೀರ್ವಾದಗಳು, ಸದಾಕಾಲವೂ ನಮ್ಮೊಂದಿಗೆ  ಇದ್ದು, ನಮ್ಮನ್ನು ಚಿರಕಾಲವೂ ಕಾಪಾಡುತ್ತಲೇ ಇರುತ್ತದೆ.  ಈ ಕರ್ನಾಟಕದ ಅನರ್ಘ್ಯರತ್ನಕ್ಕೆ  ಸರ್ಕಾರ ಕೊಡುವ ಕಾಗದದ ಮರಣೋತ್ತರ ಭಾರತರತ್ನ ಪ್ರಶಸ್ತಿಗಿಂತ ಈಗಾಗಲೇ ವಿಶ್ವಾದ್ಯಂತ ಜನರುಗಳೇ ತಮ್ಮ ಹೃದಯಾಂತರಾಳದಿಂದ  ಮುಂದಿನ ಸಾವಿರಾರು ವರ್ಷಗಳಿಗೂ ಅಚ್ಚಳಿಯದಂತೆ ನೀಡಿರುವ  ವಿಶ್ವರತ್ನ ಗೌರವವೇ ಹೆಚ್ಚೆನಿಸುತ್ತದೆ.

ಏನಂತೀರಿ? ನಿಮ್ಮವನೇ ಉಮಾಸುತ

Leave a comment