ಇಂದು ಕಛೇರಿಗೆ ಬರುತ್ತಿದ್ದಂತೆಯೇ ಮೊದಲಿಗೆ ನೋಡಿದ ಸುದ್ದಿ *ರಂಗಭೂಮಿ ಮತ್ತು ಚಲನಚಿತ್ರ ರಂಗದ ಮೇರು ನಟ ಸಿ.ಎಚ್.ಲೋಕನಾಥ್ ಇನ್ನಿಲ್ಲ* ಆ ಸುದ್ದಿ ಓದುತ್ತಿದ್ದಂತೆಯೇ ನನ್ನ ಮನಸ್ಸಿಗೆ ನಮ್ಮ ಮನೆಯವರನ್ನೊಬ್ಬರನ್ನೇ ಕಳೆದುಕೊಂಡಷ್ಟೇ ದುಃಖವಾಯಿತು. ಕನ್ನಡ ಚಿತ್ರರಂಗದಲ್ಲಿ ಅಂಕಲ್ ಎಂದೇ ಚಿರಪರಿಚಿತರಾಗಿದ್ದ ಲೋಕನಾಥರ ಅಕಾಲಿಕ ಅಗಲಿಗೆ ಕನ್ನಡ ಚಿತ್ರರಂಗಕ್ಕೆ ತುಂಬಲಾದರ ನಷ್ಟವೇ ಸರಿ. ಅವರನ್ನು ಕನ್ನಡ ಚಿತ್ರ ರಂಗದ ಭೀಷ್ಮ ಪಿತಾಮಹನೆಂದರೆ ತಪ್ಪಾಗಲಾರದು. ಡಿಸೆಂಬರ್ ಅಂತ್ಯಕ್ಕೂ ಕನ್ನಡ ಚಿತ್ರರಂಗಕ್ಕೂ ಕೂಡಿ ಬರುವುದಿಲ್ಲ ಎಂಬುದು ಮತ್ತೊಮ್ಮೆ ಸಾಭೀತಾಯಿತು. ಡಿ. 29 ಕಂಚಿನ ಕಂಠದ ಆಶ್ವಥ್, 30ರಂದು ಡಾ. ವಿಷ್ಣುವರ್ಧನ್ ಮತ್ತು 31 ರಂದು ಲೋಕನಾಥ್ ಅಂತಹ ದಿಗ್ಗಜರನ್ನು ಕಳೆದು ಕೊಂಡಿರುವುದು ನಿಜಕ್ಕೂ ಖೇದಕರ ವಿಷಯ.
ಮೂಲತಃ ಎಂಜಿನಿಯರಿಂಗ್ ಪದವೀಧರರಾಗಿ ಗಾಯಕ ಸಿ. ಆಶ್ವಥ್ ಅವರ ಜೊತೆ ಅಂದಿನ ಕಾಲದಲ್ಲಿ ಹೆಸರುವಾಸಿಯಾಗಿದ್ದ ಐಟಿಐ ಕಾರ್ಖಾನೆಯಲ್ಲಿ ವೃತ್ತಿ ಮಾಡುತ್ತಿದ್ದರೂ ಮನಸ್ಸೆಲ್ಲಾ ಪ್ರವೃತ್ತಿಯಾದ ರವೀಂದ್ರ ಕಲಾಕ್ಷೇತ್ರದ ನಾಟಕದ ಕಡೆಯೇ ಇದ್ದದ್ದು ನಿಜಕ್ಕೂ ಅಭಿನಂದನಾರ್ಹ. ಕನ್ನಡಕ್ಕೊಬ್ಬನೇ ಕೈಲಾಸಂ ಅವರಿಂದಾಗಿ ನಾಟಕರಂಗಕ್ಕೆ ಪ್ರವೇಶ ಮಾಡಿ ಅವರದ್ದೇ ಆದ ಬಂಡ್ವಾಳವಿಲ್ಲದ ಬಡಾಯಿ ಮೂಲಕ ರಂಗಭೂಮಿಗೆ ಪಾದರ್ಪಣೆ ಮಾಡಿ ಮುಂದೆ ರಕ್ತಾಕ್ಷಿ, ವಿಗಡವಿಕ್ರಮರಾಯ, ಗೆಲಿಲಿಯೋ, ಬಿರುದಂತೆಂಬರ ಗಂಡ, ಬಹದ್ದೂರ್ ಗಂಡು, ಬಿಡುಗಡೆ, ಚಂದ್ರಹಾಸ, ಮನವೆಂಬ ಮರ್ಕಟ ಎಂಬ ನಾಟಕಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಪ್ರಖ್ಯಾತಿ ಪಡೆದು ಸುಮಾರು 1000 ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸು ಸೈ ಎನಿಸಿಕೊಂಡಿದ್ದರು ಶ್ರೀಯುತರು. ಸಮಯ ಪ್ರಜ್ಞೆಗೆ ಬಹಳಷ್ಟು ಹೆಸರುವಾಸಿಯಾಗಿದ್ದ ಶ್ರೀಯುತರು ನಾಟಕದ ತಾಲೀಮಿಗಾಗಲೀ, ನಾಟಕ ಪ್ರದರ್ಶನಕ್ಕಾಗಲೀ ಎಂದೂ ತಡವಾಗಿ ಬಂದಿದ್ದೇ ಇಲ್ಲ ಎಂದು ಕೇಳಿದ ನೆನಪು.
ತಮ್ಮ ಗಡಸು ಧ್ವನಿ ಮತ್ತು ವಿಶಿಷ್ಟ ಮ್ಯಾನರಿಸಂನಿಂದ ಅತೀ ಕಡೆಮೆ ಸಮಯದಲ್ಲೇ ರಂಗಭೂಮಿಯಲ್ಲಿ ಖ್ಯಾತರಾಗಿ ಸಂಸ್ಕಾರ ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗವನ್ನು ಪ್ರವೇಶಿಸಿದರೂ ಮೊದಲು ಬಿಡುಗಡೆಯಾಗಿದ್ದು ಪುಟ್ಟಣ್ಣನವರ ಗೆಜ್ಜೆ ಪೂಜೆ. ಮುಂದೆ ದಿ. ಪುಟ್ಟಣ್ಣ ಕಣಗಾಲರ ನಿಲಯದ ಕಲಾವಿದರಂತೆ ಬಹುತೇಕ ಅವರ ಚಿತ್ರಗಳಲ್ಲಿ ಅವರಿಗೆಂದೇ ಒಂದಲ್ಲಾ ಒಂದು ವಿಶಿಷ್ಠಪಾತ್ರಗಳು ಮೀಸಲಾಗಿರುತ್ತಿದ್ದದ್ದು ವಿಶೇಷವೇ ಸರಿ. ಪುಟ್ಟಣ್ಣನವರ ನಂತರ ಅವರ ಕಲಾ ನೈಪುಣ್ಯತೆಯನ್ನು ಸಮರ್ಥವಾಗಿ ಬಳೆಸಿಕೊಂಡ ಮತ್ತೊಬ್ಬ ನಿರ್ದೇಶಕನೆಂದರೆ ದಿ. ಶಂಕರ್ನಾಗ್. ಆರಂಭದ ಕೆಲ ಚಿತ್ರಗಳಲ್ಲಿ ಶ್ರೀಮಂತ ಖಳ ನಟನಾಗಿ ಅಭಿನಯಿಸಿ ನಂತರ ಪೋಷಕ ಪಾತ್ರಗಳಿಗೆ ಸೀಮಿತಗೊಂಡರು. ಅತ್ಯಂತ ಕಡು ಬಡವನಾಗಿ, ಮಧ್ಯಮ ವರ್ಗದವನಾಗಿ ಅದೇ ರೀತಿ ಶ್ರೀಮಂತನಾಗಿಯೂ ನಟಿಸಿ ಸೈ ಎನಿಸಿಕೊಂಡವರು ಲೋಕನಾಥ್ ಅವರು. ಗೆಜ್ಜೆ ಪೂಜೆ, ಬಂಗಾರದ ಮನುಷ್ಯ, ದೂರದ ಬೆಟ್ಟ, ಭೂತಯ್ಯನ ಮಗ ಅಯ್ಯು, ಶರಪಂಜರ, ನಾಗರಹಾವು, ಬಂಗಾರದ ಪಂಜರ, ಮಿಂಚಿನ ಓಟ, ಹೊಸ ನೀರು, ನೋಡಿ ಸ್ವಾಮಿ ನಾವಿರೋದೆ ಹೀಗೆ, ಕಥಾ ಸಂಗಮ , ನಾಗರಹಾವು, ಕಿಟ್ಟು ಪುಟ್ಟು ಇತ್ತೀಚೆಗೆ ರೇ, ಹೀಗೆ ಸುಮಾರು 650ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಎಪ್ಪತ್ತ ದಶಕದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರರ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ಉಪ್ಪಿನ ಕಾಯಿ ಜಾಡಿಯಿಂದ ಉಪ್ಪಿನಕಾಯಿ ತಿನ್ನುವ ಪಾತ್ರವಂತೂ ನನಗೆ ವಯಕ್ತಿಕವಾಗಿ ಅತ್ಯಂತ ಪರಿಣಾಮ ಬೀರಿ ಆಗ ಸಣ್ಣ ವಯಸ್ಸಿನವನಾದ ನಾನು ಅವರನ್ನೇ ಅನುಕರಣೆ ಮಾಡಿ ಎಲ್ಲರ ಮುಂದೆ ಉಪ್ಪಿನ ಕಾಯಿ ತಿನ್ನುವುದನ್ನು ಪ್ರದರ್ಶಿಸುತ್ತಿದ್ದದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ. ಮುಂದೆ ನಾನು ಮತ್ತು ನಮ್ಮ ತಂದೆಯವರು ನಮ್ಮ ಸಂಬಂಧೀಕರನ್ನು ನನ್ನ ಮದುವೆಗೆ ಆಮಂತ್ರಿಸಲು ಹೋಗಿದ್ದಾಗ ನನ್ನ ಚಿಕ್ಕವಯಸ್ಸಿನ ಲೋಕನಾಥ್ ಅವರ ಆಭಿನಯದ ಅನುಕರಣೆಯನ್ನು ನೆನಪಿಸಿಕೊಂಡು ಅದನ್ನು ಅವರ ಮನೆಯವರೆಲ್ಲರ ಮುಂದೆ ನನ್ನನ್ನು ಹಾಡಿ ಹೊಗಳಿ ಎಲ್ಲಿ ಅದನ್ನು ಮತ್ತೊಮ್ಮೆ ಮಾಡಿ ತೋರಿಸಿ ಬಿಡು ಎಂದಾಗ ಕಕ್ಕಾ ಬಿಕ್ಕಿಯಾಗುವಂತಹ ಪರಿಸ್ಥಿತಿ ನನ್ನದಾಗಿತ್ತು.
ಇನ್ನು ಎಂಬತ್ತರ ದಶಕದ ಶಂಕರ್ನಾಗ್ ಅವರ ಮಿಂಚಿನ ಓಟದಲ್ಲಿನ ಅವರ ಅಭಿನಯವನ್ನಂತೂ ಮರೆಯಲು ಸಾಧ್ಯವೇ ಇಲ್ಲಾ. ಸಣ್ಣ ವಯಸ್ಸಿನ ಕಾರ್ ಕಳ್ಳರ ಪಾತ್ರದಲ್ಲಿ ಅನಂತ್ ನಾಗ್ ಮತ್ತು ಶಂಕರ್ ನಾಗ್ ಎಲ್ಲರ ಮನಸೂರೆಗೊಂಡರೆ ನಡು ವಯಸ್ಸಿನ ಪಾತ್ರದಲ್ಲಿ ಲೋಕನಾಥ್ ಅಣ್ಣ ತಮ್ಮಂದಿರನ್ನೂ ಮೀರಿಸಿ ಅಭಿನಯಿಸಿದ್ದರು ಎಂದರೆ ಅತಿಶಯೋಕ್ತಿಯೇನಲ್ಲ. ಜೈಲಿನಿಂದ ತಪ್ಪಿಸಿಕೊಳ್ಳಲು ಶಂಕರ್ ಕಂಬಿ ಕತ್ತರಿಸುತ್ತಿದ್ದರೆ ಪೋಲೀಸರಾಗಲೀ ಅಥವಾ ಇತರರು ಯಾರೇ ಆಗಲಿ ಬಂದರೆ ವಿಶಿಷ್ಟ ರೀತಿಯಲ್ಲಿ ಕೆಮ್ಮುತ್ತ ಶಂಕರ್ನಾಗ್ರನ್ನು ಎಚ್ಚರಿಸುತ್ತಿದ್ದ ಅಭಿನಯ ನಿಜಕ್ಕೂ ಮನೋಜ್ಣ. ಅದೇ ಚಿತ್ರದಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗೋಡೆ ಹಾರುವ ಸಮಯದಲ್ಲಿ ಪೋಲೀಸ ಗುಂಡಿನೇಟಿಗೆ ಬಲಿಯಾದಾಗ ನನಗೇ ಅರಿವಿಲ್ಲದಂತೆಯೇ ನನ್ನ ಕಣ್ಣು ತುಂಬಿ ಬಂದು ಬಿಕ್ಕಿ ಬಿಕ್ಕಿ ಅತ್ತಿದ್ದು ಇನ್ನೂ ನೆನಪಿನಲ್ಲಿಯೇ ಇದೆ.
ಮೊನ್ನೇ ತಾನೆ ಟಿವಿಯಲ್ಲಿ ಕಿಟ್ಟು ಪುಟ್ಟು ಸಿನಿಮಾದಲ್ಲಿ ಪಾತ್ರವಹಿಸಿ ಆದಾಯ ತೆರಿಗೆ ಅಧಿಕಾರಿಗಳ ಮುಂದೆ ಸೋಫಾ ಸೆಟ್ನಲ್ಲಿ ಆಡಗಿಸಿಟ್ಟಿದ್ದ ಹಣವನ್ನು ವಿಷ್ಣುವರ್ಧನ್ ಮತ್ತು ದ್ವಾರಕೀಶರ ಅವರುಗಳು ಎತ್ತಿ ಎತ್ತಿ ತೋರಿಸುತ್ತಿದ್ದರೆ ಅವರಿಬ್ಬರ ತಂದೆಯಾಗಿ ಅತ್ತ ಮಕ್ಕಳಿಗೂ ಏನೂ ಹೇಳಲಾಗದೇ ಇತ್ತ ಅಧಿಕಾರಿಗಳ ಮುಂದೆ ಸಿಕ್ಕಿಕೊಳ್ಳುವ ಅಭಿನಯ ನೋಡಿದ್ದ ನನಗೆ ಇಷ್ಟು ಬೇಗ ಅವರಿಗೆ ಶ್ರದ್ಧಾಂಜಲಿ ಲೇಖನ ಬರೆಯುತ್ತಿದ್ದೇನಲ್ಲಾ ಎಂಬ ನೋವು ನನಗೆ ಕಾಡುತ್ತಿದೆ.
ಸುಮಾರು ಎಂಟು-ಹತ್ತು ವರ್ಷಗಳ ಹಿಂದೆ ನಮ್ಮ ಸ್ನೇಹಿತರ Lampo Computers ಕಂಪನಿಯಲ್ಲಿ ನಾನು ಯಾವುದೋ ಕೆಲಸಕ್ಕೆಂದು ಹೋಗಿದ್ದಾಗ ತಮ್ಮ Computer ರಿಪೇರಿಗಾಗಿ ಬಂದಿದ್ದ ಶ್ರೀಯುತರನ್ನು ಮುಖಃತಹ ಭೇಟಿಯಾಗಿ ಅವರನ್ನು ಹತ್ತಿದರದಿಂದ ಮಾತನಾಡಿಸುವ ಸೌಭಾಗ್ಯ ನನಗೆ ಒದಗಿದ್ದದ್ದು ನನ್ನ ಜೀವನದಲಿ ಮರೆಯಲಾಗದ ಸಂಗತಿ.
ಇಂದಿನ ದಿನಗಳಲ್ಲಿ 50 ವರ್ಷ ಬದುಕುವುದೇ ಹೆಚ್ಚಾಗಿರುವಾಗ 90 ವರ್ಷಗಳ ತುಂಬು ಜೀವನ ನಡೆಸಿ ಕೊನೆಯ ಗಳಿಗೆಯಲ್ಲಿ ಕೊಂಚ ಅನಾರೋಗ್ಯದಿಂದ ವಯೋಸಹಜವಾಗಿ ಮರಣ ಹೊಂದಿದ ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟಂಬ ವರ್ಗ ಮತ್ತು ನನ್ನನ್ನೂ ಒಳಗೊಂಡು ಅವರ ಅಪಾರ ಆಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತನು ನೀಡಲಿ ಎಂದು ಕೋರುತ್ತೇನೆ.
ತಮ್ಮ ಅತ್ಯುತ್ತಮ ನಟನೆಗಾಗಿ ಆರ್ಯಭಟ ಪ್ರಶಸ್ತಿಯನ್ನೂ ಒಳಗೊಂಡು, ಉತ್ತಮ ಪೋಷಕ ನಟ, ನಾಟಕ ಅಕಾಡಮಿ ಪ್ರಶಸ್ತಿ ಮತ್ತು ನಾನಾ ಸಂಘ ಸಂಸ್ಥೆಗಳಿಂದ ಸನ್ಮಾನ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದರೂ ಅವರ ಕಲಾ ಸೇವೆಗೆ ನಿಜವಾಗಿ ಸಲ್ಲಬೇಕಾದ ಪ್ರಶಸ್ತಿಗಳು ಅವರಿಗೆ ಸಲ್ಲದಿರುವುದು ವಿಯರ್ಯಾಸವೇ ಸರಿ.
ಏನಂತೀರೀ?