ಕೆಜಿಎಫ್-2

ಅದೊಮ್ಮೆ ಒಬ್ಬ ತಂದೆ ತನ್ನ ಮಕ್ಕಳೊಂದಿಗೆ ಪ್ರಾಣಿಸಂಗ್ರಹಾಲಯಕ್ಕೆ ಹೋಗಿರುತ್ತಾರೆ. ಆಲ್ಲಿ ಬಗೆ ಬಗೆ ಭಯಾನಕ, ಸಾಧು ಪ್ರಾಣಿಗಳು, ಪಶು ಪಕ್ಷಿಗಳು, ಸರಿಸೃಪಗಳು ಹೀಗೆ ಎಲ್ಲವನ್ನೂ ಗೂಡಿನಲ್ಲೋ‍, ಪಂಜರದೊಳಗೂ ಇಲ್ಲವೇ ಗಟ್ಟಿಯಾಗಿ ಬಂಧಿಸಲ್ಪಟ್ಟಂತೆ ನೋಡಿಕೊಂಡು ಬರುವಾಗ ಮತ್ಯಾಲಯದ ಬಳಿ ಬಂದು ಅಲ್ಲಿ ವಿಧ ವಿಧ ರೂಪದ ಬಣ್ಣ ಬಣ್ಣದ ಮೀನುಗಳನ್ನು ಕಣ್ತುಂಬ ನೋಡಿ ಆನಂದಿಸುತ್ತಿರುವಾಗ ಒಂದು ತೆರೆದ ಗಾಜಿನ ದೊಡ್ಡ ಬೋಗುಣಿಯಲ್ಲಿರುವ ಏಡಿಗಳನ್ನು ನೋಡಿ ಆಶ್ವರ್ಯ ಚಕಿತರಾಗಿ, ಅಪ್ಪಾ ಇಲ್ನೋಡಿ ಎಲ್ಲಾ ಪ್ರಾಣಿ ಪಕ್ಷಿಗಳು ತಪ್ಪಿಸಿಕೊಂಡು ಹೋಗದಂತೆ ಒಂದಲ್ಲಾ ಒಂದು ರೀತಿ ರಕ್ಷಿಸಲ್ಪಟ್ಟಿದ್ದರೆ, ಈ ಏಡಿಗಳನ್ನು ಮಾತ್ರ ತೆರೆದಿಟ್ಟಿದ್ದಾರಲ್ಲಾ? ಇದು ತಪ್ಪಿಸಿಕೊಂಡು ಹೊರಗ ಬಂದು ಯಾರಾನ್ನಾದರೂ ಕುಟುಕಿದರೆ ಏನು ಗತಿ ಇಲ್ಲವೇ ಯಾರಾದರೂ ನೋಡದೆ ಅದನ್ನು ತುಳಿದುಬಿಟ್ಟರೆ ಏನು ಮಾಡೋದು ಎಂದು ಕುತೂಹಲದಿಂದ ತಮ್ಮ ತಂದೆಯವರನ್ನು ಕೇಳಿದಾಗ, ಅದಕ್ಕೆ ನಗುತ್ತ ಆ ತಂದೆ ಹೇಳುತ್ತಾನೆ. ನೀವು ಸ್ಪಲ್ಪ ಕುತೂಹಲದಿಂದ ಗಮನಿಸಿ ನೋಡಿ ಒಂದು ಏಡಿ ಆ ಗಾಜಿನ ಪಾತ್ರೆಯಿಂದ ಮೇಲೆ ಬರಲು ಪ್ರಯತ್ನಿಸುತ್ತಿದ್ದಂತೆಯೇ ಉಳಿದ ಏಡಿಗಳು ಅದನ್ನು ಕೆಳಕ್ಕೆ ಹಿಡಿದೆಳೆಯುತ್ತವೆ ಮತ್ತು ಈ ಪ್ರಕ್ರಿಯೆ ನಿರಂತರವಾಗಿರುವುದರಿಂದ ಈ ಏಡಿಗಳನ್ನು ಮುಚ್ಚಿಡುವುದಾಗಲೀ, ಬಂಧಿಸುವುದಾಗಲೀ ಅಗತ್ಯವೇ ಇಲ್ಲ ಎನ್ನುತ್ತಾನೆ.

ಸುಮಾರು ಎರಡು ಮೂರು ವರ್ಷಗಳಿಂದ ಹಗಲು ರಾತ್ರಿ ಎನ್ನದೆ ಇಡೀ ಕೆಜಿಎಫ್ ಚಿತ್ರತಂಡ ಪರಿಶ್ರಮ ಪಟ್ಟು ಇಡೀ ಜಗತ್ತೇ ಈ ಕನ್ನಡ ಚಲನಚಿತ್ರದತ್ತ ನೋಡುವತ್ತಾ ಮಾಡಿದೆ. ಪ್ರಪ್ರಥಮ ಬಾರಿಗೆ ಕನ್ನಡ ಚಿತ್ರವೊಂದು ನಾನಾ ಭಾಷೆಗೆ ಡಬ್ಬಿಂಗ್ ಆಗಿ ಎಲ್ಲಾ ಚಿತ್ರ ರಸಿಕರರೂ ಬಿಡುಗಡೆಯ ದಿನವನ್ನು ಕಾಯುತ್ತಿದ್ದರೆ, ಅದೆಲ್ಲಿಂದಲೋ ಒಂದು ಅನಾಮಧೇಯ ಪತ್ರ ಕೆಜಿಏಫ್ ನಾಗರೀಕರ ಹೆಸರಿನಲ್ಲಿ, ಕೆಜಿಏಫ್ ಜನರನ್ನು ದಲಿತರ ಹೆಸರಿನಲ್ಲಿ ಎತ್ತಿ ಕಟ್ಟಿ ಚಲನಚಿತ್ರಕ್ಕೆ ಧಕ್ಕೆ ತರಲು ಯತ್ನಿಸಿದರೆ, ಚಿತ್ರ ಬಿಡುಗಡೆಯ ಹಿಂದಿನ ದಿನ ಮತ್ತೊಬ್ಬ ಮಹಾಶರು ನ್ಯಾಯಾಲಯದ ಮೆಟ್ಟಿಲನ್ನೇರಿ ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ತಂದಿದ್ದನ್ನು ನೋಡಿ ಮೇಲಿನ ಏಡಿ ಕತೆ ಜ್ಞಾಪಕ್ಕೆ ಬಂತು.

ಒಂದು ಒಳ್ಳೆಯ ಕೆಲಸಕ್ಕೆ ನೂರಾರು ವಿಘ್ನಗಳು ಎನ್ನುವಂತೆ ಒಬ್ಬ ಒಳ್ಳೆ ಕೆಲಸ ಮಾಡಿದರೆ ಅದಕ್ಕೆ ಬೆನ್ನು ತಟ್ಟಿ ಪ್ರೋತ್ಸಾಹಿಸುವುದು ಬಿಟ್ಟು ಅದಕ್ಕೆ ನೂರಾರು ಅನಾವಶ್ಯಕ ಅಡ್ಡಿ ಆತಂಕಗಳನ್ನು ತರುವುದು ಎಷ್ಟು ಸರಿ. ಬೆಳೆಯುತ್ತಿರುವ ಉದಯೋನ್ಮುಖ ಪ್ರತಿಭೆಗಳ ಕಾಲನ್ನು ಎಳೆಯುವುದು ನಿಜಕ್ಕೂ ಅಕ್ಷಮ್ಯ ಅಪರಾಧವೇ ಸರಿ. ಚಿತ್ರದ ಬಿಡುಗಡೆಗೆ ತಡೆ ಒಡ್ಡಲು ಪ್ರಯತ್ನಿಸಿದ ಎರಡೂ ಆರೋಪಗಳೇ ತದ್ವಿರುದ್ದವಾಗಿದೆ. ಮೊದಲನೆಯ ಆರೋಪ ಈ ಚಲನಚಿತ್ರದಲ್ಲಿ ಇಲ್ಲಿನ ಜನ ದುಷ್ಟರು ಮತ್ತು ದರೋಡೆಕೋರರು ಎಂದು ಬಿಂಬಿಸಲಾಗುತ್ತಿದೆ ಹಾಗಾಗಿ ಕೆಜಿಎಫ್ ನಗರ ಪ್ರಪಂಚದ ದೃಷ್ಟಿಯಲ್ಲಿ ಅವಗಣನೆಗೊಳಗಾಗುವಂತಿದೆ ಎಂದರೆ, ಮತ್ತೊಬ್ಬರ ಆರೋಪದಲ್ಲಿ ಈ ಚಿತ್ರದಲ್ಲಿ ಕಳೆದ ಎರಡು ದಶಕಗಳ ಹಿಂದೆ ಕೆಜಿಎಫ್ ನಗರದಲ್ಲಿ ಎಲ್ಲರಿಗೂ ಕಂಟಕಪ್ರಾಯನಾಗಿದ್ದ ತಂಗಂ ಎಂಬ ಕುಖ್ಯಾತ ವ್ಯಕ್ತಿಯ ಕಥೆಯನ್ನು ಆಧರಿಸಿದ್ದು, ಆ ವ್ಯಕ್ತಿಯ ಬಗ್ಗೆ ಚಿತ್ರ ಮಾಡುವ ಹಕ್ಕನ್ನು ಆತನ ತಾಯಿಯಿಂದ ಆತ ಪಡೆದಿರುವ ಕಾರಣ ತನಗೆ ನಷ್ಟವಾಗಿದೆ ಎಂದು ಆರೋಪಿಸಿದ್ದಾನೆ. ಮೊದಲನೆ ಆರೋಪ ಕೆಜಿಎಫ್ ನಗರ ಶಾಂತವಾದ ನಗರ ಎಂದು ಬಿಂಬಿಸಲು ಪ್ರಯತ್ನಿಸಿದರೆ ಎರಡನೆಯ ವ್ಯಕ್ತಿ ಅಲ್ಲಿ ತಂಗ ಎಂಬ ಕುಖ್ಯಾತನ ಹಾವಳಿ ಇತ್ತು ಎಂದು ನ್ಯಾಯಾಲಯದಲ್ಲಿಯೇ ಒಪ್ಪಿಕೊಂಡಿದ್ದಾನೆ.

ಕೂಲಕುಂಶವಾಗಿ ಅಲೋಚಿಸಿದಲ್ಲಿ ಎರಡೂ ಆರೋಪಗಳ ಹಿಂದೆ ಕೇವಲ ಹೆದರಿಸಿ, ಬೆದರಿಸಿ ಚಿತ್ರತಂಡದಿಂದ ಹಣ ಮಾಡಿಕೊಳ್ಳುವ ಉದ್ದೇಶವೇ ಆಗಿರುವುದು ಗಮನಿಸಬೇಕಾದ ಅಂಶ. ಏಕೆಂದರೆ ಆ ಇಬ್ಬರಿಗೂ ನಿಜವಾಗಿಯೂ ಚಿತ್ರಕಥೆಯ ಅರಿವೇ ಇರಲಿಲ್ಲ. ಅವರಿಬ್ಬರದೂ ಊಹಾಧಾರಿತ ಆರೋಪಗಳಷ್ಟೆ. ಈ ಘಟನಾವಳಿಯಿಂದ ಎಂದೋ ಮಾಸಿ ಹೋಗಿದ್ದ ತಂಗಂ ಎಂಬ ಕುಖ್ಯಾತನನ್ನು ಅನಾವಶ್ಯಕವಾಗಿ ಹೀರೋ ಮಾಡಲು ಹೊರಟಿರುವುದು ಎಷ್ಟು ಸರಿ. ದೇಶದ ಗಡಿಯಲ್ಲಿ ಕಾಯುತ್ತಿರುವ ಮತ್ತು ದೇಶದ ಒಳಗೆ ಪ್ರಜೆಗಳ ಯೋಗಕ್ಷೇಮವನ್ನು ಕಾಪಾಡುತ್ತಿರುವ ನೂರಾರು ಸೈನಿಕರು ಮತ್ತು ಆರಕ್ಷಕರು ವೀರ ಮರಣವನ್ನಪ್ಪಿದಾಗಲೂ ಪ್ರತಿಕ್ರಯಿಸದ ಈ ಜನ ತಮ್ಮ ಸ್ವಾರ್ಥಕ್ಕಾಗಿ ಒಬ್ಬ ಕುಖ್ಯಾತ ರೌಡಿಯನ್ನು ಮೆರೆಸಲು ಯಾವುದೇ ರೀತಿಯ ಅಸಹ್ಯ ಪಡದಿರುವುದು ನಿಜಕ್ಕೂ ಅಸಹನೀಯವೇ ಸರಿ. ಕಾಣದ ಕೈಗಳ ಪ್ರಭಾವದಿಂದಾಗಿ ಆರೋಪ ಮಾಡಿದ ವ್ಯಕ್ತಿ ಆಶ್ಚರ್ಯಕರ ರೀತಿಯಲ್ಲಿ ತನ್ನ ವ್ಯಾಜ್ಯವನ್ನು ಹಿಂಪಡೆದಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿರುವುದಂತೂ ಸುಳ್ಳಲ್ಲ.

ನೆನ್ನೆ ಚಿತ್ರದ ಬಿಡುಗಡೆಗೆ ಇದ್ದ ಎಲ್ಲಾ ಅಡ್ಡಿ ಆತಂಕಗಳು ನಿವಾರಣೆಯಾಗಿ ಚಿತ್ರರಸಿಕರ ಆಸೆಯಂತೆ ಪ್ರಪಂಚಾದ್ಯಂತ ವಿವಿಧ ಭಾಷೆಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಯಶಸ್ವಿಯಾಗಿ ಬಿಡುಗಡೆಯಾಗಿ ಎಲ್ಲರ ಮನಸೂರೆ ಮಾಡುತ್ತಾ ಕನ್ನಡ ಮತ್ತು ಕನ್ನಡಿಗರ ಹೆಮ್ಮೆಯನ್ನು ಜಗತ್ತಿನಾದ್ಯಂತ ಪಸರಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ಸಮಯ ಮಾಡಿಕೊಂಡು, ಚಿತ್ರಮಂದಿರದಲ್ಲೇ ಕೆಜಿಎಫ್ ಚಿತ್ರವನ್ನು ನೋಡೋಣ. ಈ ಮೂಲಕ ಕನ್ನಡಿಗರ ಪರಿಶ್ರಮವನ್ನು ಪ್ರೋತ್ಸಾಹಿಸಿ ಅದೇ ತಂಡದಿಂದ ಮತ್ತು ಇತರರಿಂದ ಇನ್ನೂ ಹೆಚ್ಚಿನ ಇಂತಹ ಚಿತ್ರಗಳು ಬರಲಿ ಎಂದು ಆಶಿಸೋಣ.

ಕೆಜಿಎಫ್ ಚಿತ್ರ ಬಿಡುಗಡೆಗೆಯಾದ ಚಿತ್ರಮಂದಿರಗಳ ಎದುರು ಬೆಳ್ಳಂಬೆಳಿಗ್ಗೆಯೇ ಬೀಡು ಬಿಟ್ಟು ಅಮಿತೋತ್ಶಾಹ ತೋರಿಸುತ್ತಿರುವ ನಮ್ಮ ಯುವ ಜನತೆ ಇದೇ ರೀತಿಯ ಉತ್ಸಾಹವನ್ನು ತಮ್ಮ ವಿದ್ಯಾಬ್ಯಾಸದಲ್ಲಿ, ತಾವು ಮಾಡುವ ಕೆಲಸ ಕಾರ್ಯಗಳಲ್ಲಿ ಮತ್ತು ನಮ್ಮ ದೇಶದ ಭವಿಷ್ಯ ನಿರ್ಧರಿಸುವ ಮತದಾನದ ದಿನವೂ ತೋರಿಸಿ ಈ ಚಲನಚಿತ್ರದಂತೆಯೇ ನಮ್ಮ ದೇಶದ ಗರಿಮೆಯೂ ಇಡೀ ಪ್ರಪಂಚಾದ್ಯಂತ ಹರಡಿಸಲು ಕಾರ್ಯದಲ್ಲಿ ಭಾಗಿಯಾಗಲಿ ಎಂದು ಆಶಿಸುವಾ.

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: