ಅದೊಂದು ದೊಡ್ಡ ನಗರ ಅಲ್ಲೊಬ್ಬ ಬಲು ದೊಡ್ಡ ಉದ್ಯಮಿ ಹಾಗೂ ರಾಜಕಾರಣಿಗಳಾಗಿದ್ದರು. ಅವರಿಗೆ ಶಿಕ್ಷಣ ಸಂಸ್ಥೆಗಳು, ಗೋಶಾಲೆಗಳು, ಧಾರ್ಮಿಕದತ್ತಿಗಳು, ಜವಳಿ ಅಂಗಡಿಗಳು ಹಾಗೂ ಇನ್ನೂ ತರ ತರಹದ ವ್ಯಾಪಾರಗಳು ಇದ್ದವು. ಅವರಿಗೆ ಮೂರು ಗಂಡು ಮಕ್ಕಳಿದ್ದು, ವಿದ್ಯಾವಂತರಾಗಿ ತಂದೆಯ ವ್ಯಾಪಾರ ವಹಿವಾಟುಗಳಿಗೆ ಸಹಕರಿಸುತ್ತಿದ್ದರು. ಸಹಜವಾಗಿ ತಂದೆಯವರಿಗೆ ವಯಾಸ್ಸಾಗುತ್ತಿದ್ದಂತೆಯೇ ತಮ್ಮ ವ್ಯವಹಾರಗಳನ್ನು ತಮ್ಮ ಮಕ್ಕಳಿಗೆ ಹಂಚಿ ವಿಶ್ರಾಂತ ಜೀವನ ನಡೆದಸಲು ಯೋಚಿಸಿ ಯಾವ ಯಾವ ಮಕ್ಕಳಿಗೆ ಯಾವ ರೀತಿಯ ವ್ಯವಹಾರಗಳನ್ನು ಹಂಚಬೇಕೆನ್ನುವ ಜಿಜ್ಞಾಸೆಯಲ್ಲಿದ್ದರು.
ಅದೊಂದು ಬೇಸಿಗೆಯ ದಿನ ಹೊರಗಡೆ ಬಹಳ ಬಿಸಿಲಿತ್ತು. ಆ ವ್ಯಾಪಾರಸ್ಥರು ತಮ್ಮ ಹವಾನಿಯಂತ್ರಿತ ಜವಳಿ ಅಂಗಡಿಯಲ್ಲಿ ತಮ್ಮ ಮೂರು ಮಕ್ಕಳೊಂದಿಗೆ ವ್ಯಾಪಾರ ನಡೆಸುತ್ತಿದ್ದಾಗ ವಯಸ್ಸಾದ ಒಬ್ಬ ಬಡ ಹೆಂಗಸು ತನ್ನ ಮೊಮ್ಮಗಳೊಂದಿಗೆ ಸೀರೆ ಕೊಳ್ಳಲು ಅಂಗಡಿಗೆ ಬಂದಳು. ಎಲ್ಲಾ ರೀತಿಯ ಗಿರಾಕಿಗಳನ್ನು ಸ್ವಾಗತಿಸಿದಂತೆ ಅವರನ್ನೂ ಆದರಿಸಿ ಅವರಿಗೆ ಬೇಕಾದ ಬಟ್ಟೆಗಳನ್ನು ತೋರಿಸತೊಡಗಿದರು. ಇವೆಲ್ಲದರ ಮಧ್ಯೆ, ಅಂಗಡಿಗೆ ಬರುವವರೆಲ್ಲರಿಗೂ ನೀಡುವಂತೆ ಅವರಿಗೂ ತಂಪು ಪಾನೀಯಗಳನ್ನು ನೀಡಿದರು. ಆ ಪುಟ್ಟ ಮೊಮ್ಮಗಳು ವಯೋ ಸಹಜವಾಗಿ ಕೇಳುವಂತೆ ಮತ್ತೊಂದು ಲೋಟ ಪಾನೀಯವನ್ನು ಕೇಳಿದಾಗ ಅಂಗಡಿಯ ಸಿಬ್ಬಂದಿ ಬೇಸರಿಸದೆ ಕೊಟ್ಟರು. ಅದಲ್ಲದೇ ಆ ಮಗುವಿಗೆ ಚೆಂದದ ಬೆಲೂನನ್ನೂ ಕೊಟ್ಟಾಗ ಆ ಮಗುವಿನ ಆನಂದಕ್ಕೆ ಪಾರವೇ ಇರಲಿಲ್ಲ. ಸುಮಾರು ಒಂದು ಘಂಟೆಗಳ ನಂತರ ನಮಗೆ ಒಪ್ಪುವ ಮತ್ತು ನಮ್ಮ ಅಂದಾಜಿಗೆ ತಕ್ಕ ಬಟ್ಟೆ ಸಿಗಲಿಲ್ಲ ಎಂಬ ಕಾರಣ ನೀಡಿ ಏನನ್ನೂ ಕೊಂಡು ಕೊಳ್ಳದೆ ಆಕೆ ತನ್ನ ಮೂಮ್ಮಗಳೊಂದಿಗೆ ಹಾಗೆಯೇ ಹಿಂದಿರುಗಿದರು.
ಇದನ್ನೆಲ್ಲಾ ಗಮನಿಸುತ್ತಿದ್ದ ತಂದೆ ತಮ್ಮ ಮಕ್ಕಳನ್ನು ಕರೆದು ಇಲ್ಲಿಯವರೆಗೂ ಆ ಅಜ್ಜಿ ಮೊಮ್ಮಗಳು ನಡೆಸಿದ ವ್ಯಾಪಾರವನ್ನು ಗಮನಿಸಿದ್ದೀರೀ ಎಂದು ಭಾವಿಸುತ್ತೇನೆ. ಸುಮಾರು ಒಂದು ಗಂಟೆಯವರೆಗೆ ನಮ್ಮ ಸಿಬ್ಬಂದಿಯವರು ಅವರಿಗೆ ತರ ತರಹದ ಸೀರೆಗಳನ್ನು ತೋರಿಸಿದರೂ ಅವರು ಏನನ್ನೂ ಕೊಳ್ಳದೆ ಹಾಗೆ ಹೊರ ನಡೆದಿದ್ದಾರೆ. ಇದರ ಬಗ್ಗೆ ತಮ್ಮ ಅಭಿಪ್ರಾಯವೇನು? ಎಂದರು. ತಂದೆಯವರ ಈ ಮಾತನ್ನು ಕೇಳಿದ ಮೊದಲನೇ ಮಗ, ಅಪ್ಪಾ ಇದು ಸುಡು ಬೇಸಿಗೆ, ಹೊರಗಡೆ ಬಿಸಿಲಿನ ಝಳ ತಡೆಯುವುದು ನಿಜಕ್ಕೂ ಅಸಹನೀಯವಾದ ಕಾರಣ ಪ್ರಾಯಶಃ ಸ್ವಲ್ಪ ಕಾಲ ತಂಪಾಗಿ ಇರಬಹುದೆಂದು ನಮ್ಮ ಅಂಗಡಿಗೆ ಬಂದಿರ ಬಹುದು. ಅಂಗಡಿಯ ತಂಪಾದ ವಾತಾವರಣದ ಜೊತೆ ತಂಪಾದ ಪಾನೀಯವನ್ನು ಸೇವಿಸಿದ ನಂತರ ಅವರಿಬ್ಬರಿಗೂ ಸಂತೋಷವಾಗಿರಬಹುದು. ಇದೂ ಕೂಡಾ ಒಂದು ರೀತಿಯ ಸಮಾಜ ಸೇವೆಯೇ ಎಂದು ಭಾವಿಸುತ್ತೇನೆ ಎಂದನು.
ಅದಕ್ಕೆ ಎರಡನೇ ಮಗ ಅಪ್ಪಾ, ಅಣ್ಣನ ಮಾತು ಸ್ವಲ್ಪ ಮಟ್ಟಿಗೆ ಒಪ್ಪುವೆನಾದರೂ ಆಕೆ ಕೇವಲ ಕಾಲ ಕಳೆಯಲು ಬಂದಿರದೆ ನಿಜವಾಗಲೂ ಸೀರೆಗಳನ್ನು ಕೊಳ್ಳಲು ಬಂದಿದ್ದ ಹಾಗಿತ್ತು ಆಕೆಯ ವರ್ತನೆ. ಅಂಗಡಿಗೆ ಬಂದೊಡನೆ ಆಕೆ ತನ್ನ ಸೆರಗಿನ ಗಂಟಿನಲ್ಲಿ ಕಟ್ಟಿಟ್ಟಿದ್ದ ದುಡ್ಡನ್ನು ಎಣಿಸಿ ನೋಡಿದ್ದನ್ನು ನಾನು ಕಣ್ಣಾರೆ ಕಂಡೆ. ಪ್ರತೀ ಬಾರಿ ನಮ್ಮ ಸಿಬ್ಬಂಧಿ ಆಕೆಗೆ ಸೀರೆಗಳನ್ನು ತೋರಿಸಿದಾಗಲೂ ಆಕೆ ಸೀರೆಯನ್ನು ನೋಡುವ ಮೊದಲು ಸೀರೆಯ ಮೊಬಲಗಿನ ಚೀಟಿಯನ್ನು ನೋಡುತ್ತಿದ್ದಳು. ಹೀಗಾಗಿ ಬಹುಶಃ ನಮ್ಮ ಅಂಗಡಿಯಲ್ಲಿ ನಮ್ಮ ಸೀರೆಗಳು ಕೇವಲ ಸ್ಥಿತಿವಂತರಿಗೆ ಸೀಮಿತವಾಗಿದ್ದು. ಬಡವರಿಗೆ ಎಟುಕದಿರಬಹುದು. ಹಾಗಾಗಿ ಇದನ್ನು ಗಮನದಲ್ಲಿಟ್ಟುಕೊಂಡು ಜನ ಸಾಮಾನ್ಯರಿಗೂ ಕೈಗೆಟುಕವ ಬೆಲೆಯಲ್ಲಿ ಲಭ್ಯವಾಗುವ ಸೀರೆಗಳನ್ನೂ ನಮ್ಮ ಅಂಗಡಿಯಲ್ಲಿ ಮಾರಾಟ ಮಾಡುವ ವ್ಯವಸ್ಥೆಯಾಗಬೇಕಿದೆ ಎಂದನು.
ಇವರಿಬ್ಬರಿಗೂ ತದ್ವಿರುದ್ದವಾಗಿ ಮೂರನೆಯ ಮಗ. ಅಪ್ಪಾ, ಇಂದು ಅವರು ನಮ್ಮ ಅಂಗಡಿಯಲ್ಲಿ ಏನನ್ನೂ ಖರೀದಿಸದಿರಬಹುದು. ಆವರು ನಮ್ಮ ಸಿಬ್ಬಂಧಿಯ ಒಂದು ಗಂಟೆಯ ಅವಧಿಯನ್ನು ಹಾಳು ಮಾಡಿರಲೂ ಬಹುದು. ನಮ್ಮ ಎರಡು ಮೂರು ಲೋಟ ತಂಪು ಪಾನೀಯ ಹಾಗೂ ಕೆಲವು ಬೆಲೂನ್ಗಳು ವೃಥಾ ಖರ್ಚಾಗಿರಲೂ ಬಹುದು. ಆದರೆ ಖಂಡಿತವಾಗಿಯೂ ಮುಂದೊಂದು ದಿನ ಈ ಎಲ್ಲಾ ಖರ್ಚುಗಳೂ ಸೇರಿ ಆವರಿಂದ ನಮ್ಮ ಅಂಗಡಿಗೆ ಖಂಡಿತವಾಗಿಯೂ ಲಾಭ ಆಗಿಯೇ ತೀರುತ್ತದೆ. ವಯಸ್ಸಾದ ಅಜ್ಜಿಯ ಜೊತೆಗೆ ಆಕೆಯ ಮೊಮ್ಮಗಳು ನಮ್ಮ ಅಂಗಡಿಗೆ ಬಂದಿದ್ದಳು. ಮುಂದೊಂದು ದಿನ ಆಕೆ ದೊಡ್ಡವಳಾದ ಮೇಲೆ ಖಂಡಿತವಾಗಿಯೂ ನಮ್ಮ ಅಂಗಡಿಗೆ ಬಂದು ದೊಡ್ಡ ಮಟ್ಟದ ಖರೀದಿ ಮಾಡಿಯೇ ತೀರುತ್ತಾಳೆ ಏಕೆಂದರೆ ಗೊತ್ತೋ ಗೊತ್ತಿಲ್ಲದೋ ನಮ್ಮ ಜನ ಯಾವುದೇ ಋಣವನ್ನು ಇಟ್ಟುಕೊಳ್ಳಲು ಬಯಸುವುದಿಲ್ಲ ಎಂದನು.
ತಮ್ಮ ಮೂರು ಮಕ್ಕಳ ಅಭಿಪ್ರಾಯಗಳನ್ನು ತದೇಕ ಚಿತ್ತದಿಂದ ಆಲಿಸುತ್ತಿದ್ದ ಆ ವ್ಯಾಪಾರಸ್ಥರು ಒಂದು ಧೃಡ ನಿರ್ಧಾರಕ್ಕೆ ಬಂದು ತಮ್ಮ ವಕೀಲರನ್ನು ಕರೆಯಿಸಿ ಅವರ ಸಮ್ಮುಖದಲ್ಲಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಈ ರೀತಿಯಾಗಿ ವಿಂಗಡಿಸಿದರು. ಮೊದಲನೇ ಮಗನ ಅಭಿಪ್ರಾಯದಲ್ಲಿ ವ್ಯಾಪಾರಕ್ಕಿಂತ ಬಡವರ ಬಗ್ಗೆ ಕನಿಕರ, ದಾನ ಧರ್ಮ ಇತ್ಯಾದಿಗಳು ಹೆಚ್ಚಾಗಿದ್ದರಿಂದ ಆತನಿಗೆ ತಮ್ಮ ಕೃಷಿ, ಹೈನೋದ್ಯಮ, ಗೋಶಾಲೆ ಮತ್ತು ಧಾರ್ಮಿಕ ದತ್ತಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಗಳನ್ನು ವಹಿಸಿದರು.
ಇನ್ನು ಎರಡನೆಯ ಮಗ ಅಂಗಡಿಯ ವ್ಯಾಪಾರದ ಜೊತೆ ಗಿರಾಕಿಗಳ ಹಾವ ಭಾವಗಳು ಮತ್ತು ಮನಸ್ಥಿತಿಯನ್ನರಿತು ಅದಕ್ಕನುಗುಣವಾಗಿ ತನ್ನ ವ್ಯವಹಾರಗಳನ್ನು ಶೀಘ್ರವಾಗಿ ಬದಲಿಸ ಬಲ್ಲವನಾದ್ದರಿಂದ ಆತನಿಗೆ ತಮ್ಮ ಶಿಕ್ಷಣ ಸಂಸ್ಘೆಗಳು ಮತ್ತು ಇತರೇ ವ್ಯಾಪಾರಗಳ ಜವಾಬ್ದಾರಿಯನ್ನು ನೀಡಿ, ಕಾಲ ಕಾಲಕ್ಕೆ ತಕ್ಕಂತೆ ಜನರಿಗೆ ಅವಶ್ಯಕವಾಗಿರುವ ಉದ್ಯಮಗಳನ್ನು ಮತ್ತು ಶಿಕ್ಷಣ ಸಂಸ್ಥೆಗಳನ್ನು ಜನಸಾಮಾನ್ಯರಿಗೆ ಅನುಕೂಲಕರವಾಗಿ ಅವರ ಕೈಗೆಟುಕುವ ರೀತಿಯಲ್ಲಿ ಪ್ರಾರಂಭಿಸುತ್ತಾ ಜನ ಸೇವೆ, ಜನಾರ್ಧನ ಸೇವೆಯನ್ನು ಮುಂದುವರಿಸಲು ಸೂಚಿಸಿದರು.
ಇನ್ನು ಮೂರನೆಯ ಮಗ ಕೇವಲ ಇಂದಿನ ವ್ಯಾಪಾರಕ್ಕೇ ದುರಾಲೋಚಿಸದೆ, ಮುಂದಿನ ಹಲವಾರು ವರ್ಷಗಳಿಗೂ ಮುಂದುವರಿಸಿಕೊಂಡು ಹೋಗುವ ದೂರಾಲೋಚನೆ ಉಳ್ಳವನಾದ್ದರಿಂದ ಆತನಿಗೆ ತಮ್ಮ ವ್ಯವಹಾರದ ಬದಲು ರಾಜಕಾರಣದಲ್ಲಿ ಮುಂದುವರೆಯಲು ಸೂಚಿಸಿ, ತನ್ನ ಕುಶಾಗ್ರಮತಿಯಿಂದ ನಮ್ಮ ದೇಶ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಧಾರ್ಮಿಕವಾಗಿ ಸದಾ ಸುಸ್ಥಿಯಲ್ಲಿಡುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿ ನಿರಾಳವಾಗಿ ರಾಮ, ಕೃಷ್ಣ , ಗೋವಿಂದ ಎನ್ನುತ್ತಾ ಭಗವಂತನ ನಾಮ ಸ್ಮರಣೆ ಮಾಡುತ್ತಾ ತಮ್ಮ ವಿಶ್ರಾಂತ ಜೀವನ ನಡೆಸ ತೊಡಗಿದರು.
ಎಲ್ಲರೂ ಇಂತಹ ತಂದೆಯಂತೆ ತಮ್ಮ ಮಕ್ಕಳ ಅರ್ಹತೆಗೆ ಅನುಗುಣವಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಿ ಕೆಲಸಕ್ಕೆ ಹಚ್ಚಿದಲ್ಲಿ ಮಕ್ಕಳೂ ಕೂಡ ತಮ್ಮ ಆಸಕ್ತಿಕರ ವಿಷಯದಲ್ಲಿ ಗಂಭೀರವಾಗಿ ಆಧ್ಯಯನ ನಡೆಸಿ ಸ್ವಾಮಿ ಕಾರ್ಯ ಮತ್ತು ಸ್ವಕಾರ್ಯಗಳಲ್ಲಿ ಅತ್ಯುತ್ತಮವಾಗಿ ಮುಂದುವರೆಯಬಲ್ಲರು. ಆದರೆ ಇದನ್ನರಿಯದ ಬಹಳಷ್ಟು ಪೋಷಕರು ತಮ್ಮ ಇಚ್ಚೆಯನ್ನು ಮಕ್ಕಳ ಮೇಲೆ ಹೇರುತ್ತಿರುವುದು ವಿಪರ್ಯಾಸವೇ ಸರಿ
ಏನಂತೀರೀ?