ಅದೋಂದು ಗಿಜಿ ಗಿಜಿಯಿಂದ ವಕೀಲರು ಮತ್ತು ಕಕ್ಷೀದಾರರಿಂದ ತುಂಬ್ಬಿದ್ದ ನ್ಯಾಯಾಲಯ. ಅಲ್ಲೋಂದು ಕಳ್ಳತನದ ವಿಚಾರಣೆ ನಡೆದು ಅಂತಿಮ ತೀರ್ಮಾನ ನೀಡುವ ಸಂದರ್ಭವಾಗಿತ್ತು. ವಾದ ಪ್ರತಿವಾದಗಳನ್ನೆಲ್ಲ ಕೇಳಿ ಮುಗಿಸಿದ ನ್ಯಾಯಾಧೀಯರಿಗೆ ಆರೋಪಿ ತಪ್ಪು ಮಾಡಿರುವುದು ಸಾಭೀತಾಗಿ ಅವನಿಗೆ ಕಠಿಣ ಶಿಕ್ಷೆಯನ್ನು ವಿಧಿಸಿದ ನಂತರ ಆರೋಪಿಯತ್ತ ನೋಡಿ ಇನ್ನೆನಾದರೂ ಹೇಳಬೇಕಾಗಿದೆಯೇ ಎಂದು ವಿಚಾರಿಸಿದಾಗ, ಅದಕ್ಕಾಗಿಯೇ ಬಕ ಪಕ್ಷಿಂತೆ ಕಾಯುತ್ತಿದ್ದ ಆರೋಪಿ ನನ್ನ ತಾಯಿಯವರನ್ನು ಒಮ್ಮೆ ಮಾತನಾಡಿಸಲು ಅವಕಾಶ ಕೊಡಿ. ಅವರ ಬಳಿ ಮಾತಾನಾಡಿದ ನಂತರ ನೀವು ಹೇಳಿದ ಶಿಕ್ಷೆಯನ್ನು ಸಂತೋಷದಿಂದ ಅನುಭವಿಸಿ ಜೀವನದಲ್ಲಿ ಬದಲಾಗಲು ಪ್ರಯತ್ನಿಸುವೆ ಎಂದಾಗ, ನ್ಯಾಯಾಧೀಶರಿಗೇ ಒಮ್ಮೆ ತಮ್ಮ ತೀರ್ಪಿನ ಮೇಲೆ ಅನುಮಾನ ಮೂಡತೊಡಗಿತು. ಇಂತಹ ಸಂಸ್ಕಾರವಂತನನ್ನು ಅರ್ಥ ಮಾಡಿಕೊಳ್ಳದೆ ಶಿಕ್ಷೆ ವಿಧಿಸಿಬಿಟ್ಟೆನಾ ಎಂದು ಒಮ್ಮೆ ಯೋಚಿಸಿ ಸ್ವಲ್ಪ ಸಾವರಿಸಿಕೊಂಡು ತಾಯಿಯೊಂದಿಗೆ ಮಾತನಾಡಲು ಆರೋಪಿಗೆ ಅನುವು ಮಾಡಿ ಕೊಟ್ಟರು. ಹೆತ್ತ ಕರಳು. ಕಳ್ಳನಾದರೂ ತಾನು ಹೊತ್ತು ಹೆತ್ತು ಸಾಕಿ ಸಲಹಿ ಬೆಳಸಿದ ಮಗನಲ್ಲವೇ ಎಂದು ಹಂಬಲಿಸಿ ತನ್ನ ಮಗನೊಡನೆ ಮಾತನಾಡಲು ಹತ್ತಿರಬಂದಾಗ, ಮಗ ಅಮ್ಮನನ್ನು ಗಟ್ಟಿಯಾಗಿ ಹಿಡಿದು ಅವಳ ಕಿವಿಯನ್ನು ಜೋರಾಗಿ ಕಚ್ಚಿಯೇ ಬಿಟ್ಟ. ಬೆಳೆದು ನಿಂತಿದ್ದ ಮಗನಿಂದ ಈ ರೀತಿಯ ಆಕ್ರಮಣವನ್ನು ನಿರೀಕ್ಷಿಸದಿದ್ದ ತಾಯಿ ಕಿಟಾರ್ ಎಂದು ಕಿರುಚಿಕೊಂಡು ಮಗನಿಂದ ತಪ್ಪಿಸಿಕೊಳ್ಳಲು ಜಗ್ಗಿದಾಗ ಕಿವಿ ಹರಿದು ರಕ್ತ ಹರಿಯಲಾರಂಭಿಸಿತು. ಅಲ್ಲಿಯೇ ನಿಂತಿದ್ದ ಆರಕ್ಷಕರು ಆರೋಪಿಯನ್ನು ಹಿಂದಕ್ಕೆ ಹಿಡಿದೆಳೆದು, ಆ ತಾಯಿಗೆ ಪ್ರಥಮ ಚಿಕಿತ್ಸೆ ಕೊಡಿಸಿದರು. ಇದನ್ನೆಲ್ಲಾ ನೋಡುತ್ತಿದ್ದ ನ್ಯಾಯಾಧೀಶರು ಕ್ಷುದ್ರರಾಗಿ ಆರೋಪಿಯ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದರು. ಆದಕ್ಕೆ ಪ್ರತಿಯಾಗಿ ಆರೋಪಿ ಸ್ವಾಮಿ ಈ ಶಿಕ್ಷೆ ನನಗೊಬ್ಬನಿಗೆ ಕೊಟ್ಟರೆ ಸಾಲದು. ಇದರಲ್ಲಿ ನನ್ನ ತಾಯಿಯೂ ಭಾಗಿಯಾಗಿದ್ದಾಳೆ. ಅವಳಿಗೂ ಸರಿ ಸಮನಾದ ಶಿಕ್ಷೆಯನ್ನು ವಿಧಿಸಲೇ ಬೇಕು. ಒಬ್ಬ ಅಪರಾಧಿಗೆ ಶಿಕ್ಷೆ ಆಗದಿದ್ದರೂ ಸರಿ ಆದರೆ ಅನಗತ್ಯವಾಗಿ ಒಬ್ಬ ನಿರಪರಾಧಿಗೆ ಶಿಕ್ಷೆ ವಿಧಿಸುವುದು ತಪ್ಪಾಗುವುದು ಆದನ್ನು ಆ ಭಗವಂತನೂ ಮೆಚ್ಚುವುದಿಲ್ಲ. ದಯವಿಟ್ಟು ಸ್ವಲ್ಪ ಸಮ ಚಿತ್ತದಿಂದ ನನ್ನ ವಾದವನ್ನೂ ಆಲಿಸಿ ಮಹಾಪ್ರಭುಗಳೇ ಎಂಬ ವಿನಮ್ರ ಪಾರ್ಥನೆ ಸಲ್ಲಿಸಿದಾಗ, ಸರಿ ಏನು ಹೇಳ ಬೇಕೆಂದಿದೆಯೋ ಬೇಗ ಬೇಗನೆ ಹೇಳಿಬಿಡು. ಇನ್ನೂ ಹಲವಾರು ಜನ ಕಾದಿದ್ದಾರೆ ಎಂದರು.
ಮಹಾ ಪ್ರಭೂ, ನಾನು ಸಣ್ಣ ವಯಸ್ಸಿನಲ್ಲಿದ್ದಾಗ ಅಮ್ಮ ಒಮ್ಮೆ ನನ್ನನ್ನು ತನ್ನ ಸೊಂಟದ ಮೇಲೆ ಕುಳ್ಳರಿಸಿಕೊಂಡು ತರಕಾರಿ ಹಣ್ಣುಗಳನ್ನು ತರಲು ಮಾರುಕಟ್ಟೆಗೆ ಹೋಗಿದ್ದಾಗ, ಬಾಳೇ ಹಣ್ಣುಗಳನ್ನು ತಲೆಯ ಮೇಲೆ ಹೊತ್ತು ಮಾರುತ್ತಿದ್ದ ವ್ಯಾಪಾರಿಯೊಬ್ಬನಿಂದ ಆತನಿಗೂ ಮತ್ತು ನನ್ನ ಅಮ್ಮನಿಗೂ ಕಾಣದಂತೆ ಒಂದು ಚಿಪ್ಪು ಬಾಳೇ ಹಣ್ಣುಗಳನ್ನು ಕದ್ದು ಅಮ್ಮನ ಬುಟ್ಟಿಗೆ ಹಾಕಿದ್ದೆ. ಮನೆಗೆ ಬಂದ ನಂತರ ಬುಟ್ಟಿಯಲ್ಲಿದ್ದ ಬಾಳೇ ಹಣ್ಣುಗಳನ್ನು ಗಮನಿಸಿದ ಆಮ್ಮಾ, ಅರೇ ನಾವು ಬಾಳೇ ಹಣ್ಣುಗಳನ್ನು ಕೊಳ್ಳಲೇ ಇಲ್ಲವಲ್ಲಾ? ಇದು ಹೇಗೆ ನಮ್ಮ ಬುಟ್ಟಿಗೆ ಬಂದಿತು? ಎಂದು ವಿಚಾರಿಸಿದಾಗ ನಾನು ಹೆಮ್ಮೆಯಿಂದ ಮಾಡಿದ್ದ ಘನಕಾರ್ಯವನ್ನು ಹೇಳಿದಾಗ ಅಮ್ಮ ಭೇಷ್ ಮಗನೇ ಒಳ್ಳೆಯ ಕೆಲಸ ಮಾಡಿದ್ದೀಯಾ ಎಂದು ಬೆನ್ನು ತಟ್ಟಿದ್ದಳು.
ಮುಂದೆ ಸ್ವಲ್ಪ ದೊಡ್ಡವನಾಗಿ ಶಾಲೆಗೆ ಸೇರಿ ಪ್ರತಿದಿನ ಶಾಲೆಯಿಂದ ಸಹಪಾಠಿಗಳ ಪೆನ್ಸಿಲ್, ಪೆನ್ನು, ಪುಸ್ತಕ, ಊಟದ ಡಬ್ಬಿ ಇತ್ಯಾದಿ ಇತ್ಯಾದಿಗಳನ್ನು ಕದ್ದು ತಂದಾಗಲೂ ಅಮ್ಮಾ ಅದಕ್ಕೆ ಯಾವುದೇ ರೀತಿಯ ವಿರೋಧ ಮಾಡದಿದ್ದಾಗ, ನಾನು ಮಾಡುತ್ತಿರುವುದೆಲ್ಲವೂ ಸರಿ ಎನ್ನುವುದೇ ನನ್ನ ಭಾವನೆಯಾಗಿ ಕಳ್ಳತನವೇ ನನ್ನಲ್ಲಿ ಮೈಗೂಡಿ ವಿದ್ಯೆ ತಲೆಗೆ ಹತ್ತದೆ ದೊಡ್ಡ ದೊಡ್ಡ ಕಳ್ಳತನಕ್ಕೆ ಕೈಹಾಕಿ ಅದನ್ನೇ ನನ್ನ ವೃತಿಯನ್ನಾಗಿ ಮಾಡಿಕೊಂಡು ಗ್ರಹಚಾರ ತಪ್ಪಿ ಪೋಲೀಸರ ಕೈಯಲ್ಲಿ ಸಿಕ್ಕಿ ಕೊಂಡು ನಾನಿಂದು ನಿಮ್ಮ ಮುಂದೆ ನಿಂತಿರುವೆ.
ನನ್ನ ತಾಯಿ ಚಿಕ್ಕಂದಿನಿಂದಲೇ ನಾನು ಮಾಡಿದ ಕಳ್ಳತನವನ್ನು ವಿರೋಧಿಸಿ ನನಗೆ ಬುದ್ದಿ ಹೇಳಿ ಸರಿದಾರಿಗೆ ತಂದಿದ್ದಲ್ಲಿ ನಾನಿಂದು ಈ ರೀತಿಯಾಗಿ ನಿಮ್ಮ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ಬರುತ್ತಿರಲಿಲ್ಲವಾದ ಕಾರಣ, ಕೊಲೆ ಸುಲಿಗೆ ಅತ್ಯಾಚಾರಗಳನ್ನು ಮಾಡುವುದು ಹೇಗೆ ತಪ್ಪಾಗುವುದೋ , ಅದೇ ರೀತಿ ಅದಕ್ಕೆ ಪ್ರಚೋದನೆ ನೀಡುವುದು ಮತ್ತು ಸಹಕರಿಸುವುದು ತಪ್ಪಾಗುವ ಕಾರಣ ತನ್ನ ತಾಯಿಗೂ ಶಿಕ್ಷೆಯನ್ನು ನೀಡಬೇಕೆಂದು ನ್ಯಾಯಾಧೀಶರಲ್ಲಿ ಕೋರಿಕೊಂಡು ತನ್ನ ವಾದವನ್ನು ಮಂಡಿಸಿದನು.
ಆರೋಪಿಯ ವಾದವನ್ನು ಅಲ್ಲಿಯವರೆಗೂ ತಾಳ್ಮೆಯಿಂದ ಆಲಿಸಿದ ನ್ಯಾಯಾಧೀಶರು ಆತನ ವಾದದಲ್ಲಿ ಸತ್ಯವಿದೆ ಎಂದು ತಿಳಿದು ಆತನ ತಾಯಿಯನ್ನು ಕುರಿತು, ಏನಮ್ಮಾ ತಾಯಿ ಇದುವರೆವಿಗೂ ನಿನ್ನ ಮಗ ಹೇಳಿದ್ದನ್ನೆಲ್ಲವನ್ನೂ ನೀನೂ ಸಹಾ ಕೇಳಿದ್ದೀಯೆ. ಇದರ ಬಗ್ಗೆ ನಿನ್ನ ಅಭಿಪ್ರಾಯವೇನೂ ಎಂದಾಗ, ಅಲ್ಲಿಯವರೆಗೂ ಉಕ್ಕಿ ಉಕ್ಕಿ ಬರುತ್ತಿದ್ದ ದುಃಖವನ್ನು ತಡೆಹಿಡಿದಿದ್ದ ಆ ತಾಯಿ ಒಮ್ಮಿಂದೊಮ್ಮೆಲೆ ಜೋರಾಗಿ ನ್ಯಾಯಾಧೀಶರ ಮುಂದೆ ಆಳುತ್ತಾ, ಹೌದು ಮಹಾಸ್ವಾಮೀ ನಾನು ತಪ್ಪು ಮಾಡಿದ್ದೇನೆ. ತಪ್ಪು ದಾರಿ ಹಿಡಿದ ಮಕ್ಕಳನ್ನು ಕಿವಿ ಹಿಂಡಿ ಅವರನ್ನು ದಾರಿಗೆ ತರುವುದು ತಂದೆ ತಾಯಿಯರ ಆದ್ಯ ಕರ್ತವ್ಯ. ತಿಳಿದೋ, ತಿಳಿಯದೋ, ನಾನಂದು ಮಾಡಿದ ತಪ್ಪಿಗಾಗಿ ಈಗ ಪರಿತಪಿಸುತ್ತಿದ್ದೇನೆ. ದಯವಿಟ್ಟು ನನ್ನ ಮಗನ ಜೊತೆಗೆ ನನಗೂ ಶಿಕ್ಷೆ ಕೊಟ್ಟು ಬಿಡಿ. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಎಂದುಕೊಂಡು ಶಿಕ್ಷೆ ಅನುಭವಿಸಿ ಒಳ್ಳೆಯ ಪ್ರಜೆಯಾಗಲು ಪ್ರಯತ್ನಿಸುತ್ತೇನೆ ಎಂದಳು.
ಮಾಡಿದ ತಪ್ಪನ್ನು ಅರಿತು ಪಶ್ಚಾತ್ತಾಪ ಪಟ್ಟು ಸರಿ ದಾರಿಯಲ್ಲಿ ನಡೆಯುತ್ತೇನೆ ಎನ್ನುವವರಿಗೆ ಶಿಕ್ಷಿಸಿದರೆ ಆ ಭಗವಂತನೂ ಮೆಚ್ಚುವುದಿಲ್ಲ. ಒಮ್ಮೆ ಸೆರೆಮನೆಗೆ ಹೋಗಿ ಬಂದವನ ಬಗ್ಗೆ ಸಮಾಜದಲ್ಲೂ ಒಳ್ಳೆಯ ಅಭಿಪ್ರಾಯವೂ ಇರುವುದಿಲ್ಲ ಮತ್ತು ಸರೆಮನೆಯಲ್ಲಿ ಅಕಸ್ಮಾತ್ ಕೆಟ್ಟ ಜನರ ಸಂಗವನ್ನು ಮಾಡಿ ಶಿಕ್ಷೆ ಮುಗಿದ ನಂತರ ಪುನಃ ಮತ್ತಷ್ಟೂ ಕೆಟ್ಟ ಕೆಲಸಮಾಡುವ ಸಂದರ್ಭಗಳೇ ಹೆಚ್ಚಾಗಿರುವ ಕಾರಣ ಅವರ ತಪ್ಪನ್ನು ಮನ್ನಿಸಿ ಪುನಃ ತಪ್ಪು ದಾರಿಗೆ ಇಳಿಯುವುದಿಲ್ಲ ಎನ್ನುವ ಮುಚ್ಚಳಿಗೆ ಬರಯಿಸಿಕೊಂಡು ತಾಯಿ ಮಗನನ್ನು ಬಿಡುಗಡೆ ಗೊಳಿಸಿದರು.
ಅಮ್ಮ ಮಗನಿಗೆ ತಾವು ಮಾಡಿದ ತಪ್ಪಿನ ಅರಿವಾಗಿ ನ್ಯಾಯಾಧೀಶರಿಂದ ಪುನರ್ಜನ್ಮವೆಂಬಂತೆ ಬಿಡುಗಡೆಯ ಭಾಗ್ಯ ದೊರೆತ ಸಂತೋಷದ ಪರಿಣಾಮವಾಗಿ ಬದುಕಿದೆಯಾ ಬಡಜೀವ ಎಂಬಂತೆ ಸರಿಯಾದ ನ್ಯಾಯರೀತಿಯಲ್ಲಿ ಸಣ್ಣ ಪುಟ್ಟ ಕೆಲಸಗಳಿಂದ ಸಂಪಾದಿಸಿದ ಹಣವನ್ನು ಕೂಡಿಟ್ಟು ನಂತರ ತಮ್ಮದೇ ಒಂದು ಸಣ್ಣ ವ್ಯಾಪಾರ ಆರಂಭಿಸಿ ನಂತರದ ದಿನಗಳಲ್ಲಿ ಅದುವೇ ದೊಡ್ಡದಾಗಿ ಆತ ನಗರದ ಪ್ರತಿಷ್ಟಿತ ವ್ಯಕ್ತಿಗಳಲ್ಲಿ ಒಬ್ಬನಾಗಿ ಸಂಸಾರವಂತನಾಗಿ ಜನ ಮನ್ನಣೆಗಳಿಸುತ್ತಾ ಸುಖಃ ಜೀವನ ನಡೆಸುತ್ತಾನೆ.
ಈ ಮೇಲೆ ಹೇಳಿದ ಕಥೆ ನಮಗೆಲ್ಲರಿಗೂ ಬಾಲ್ಯದಿಂದಲ್ಲೂ ತಿಳಿದಿದ್ದದ್ದೇ. ನಾನು ಕೇವಲ ನನ್ನ ನಿರೂಪಣೆಯಿಂದ ಸ್ವಲ್ಪ ರೋಚಕಗೊಳಿಸಿ ಉತ್ತರಾರ್ಧದಲ್ಲಿ ಸಂತೋಷದ ಅಂತ್ಯವನ್ನು ಕೊಟ್ಟಿದ್ದೇನೆ. ಆದರೆ ನಾನು ಹೇಳಲು ಬಂದ ಸಂಗತಿ ಏನೆಂದರೆ ಮನೆಯೇ ಮೊದಲ ಪಾಠಶಾಲೆ. ತಂದೆ ತಾಯಿಯರೇ ಮಕ್ಕಳಿಗೆ ಮೊದಲ ಗುರುಗಳು. ಒಂದು ಎತ್ತರವಾದ ಕಟ್ಟಡ ಸುಭಧ್ರವಾಗಿರ ಬೇಕಾದರೆ ಅದಕ್ಕೆ ಸರಿಯಾದ ತಳಪಾಯವಿರಬೇಕಾದದ್ದು ಅತ್ಯಗತ್ಯ. ಬುಡ ಗಟ್ಟಿ ಇಲ್ಲದಿದ್ದರೆ ಒಂದು ಸಣ್ಣ ಗಾಳಿಗೇ ಮರ ಉರುಳಿ ಬೀಳುವಂತೆ ಬಾಲ್ಯದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡದಿದ್ದಲ್ಲಿ ಮಕ್ಕಳ ಮುಂದಿನ ಭವಿಷ್ಯ ಮಸುಕಾಗುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಮತ್ತು ಪ್ರಾಥಮಿಕ ಹಂತದ ಶಿಕ್ಷಕರ ಪಾಲು ಅತ್ಯಂತ ಮಹತ್ತರದ್ದಾಗಿರುತ್ತದೆ. ಇಂದು ನಾವುಗಳೇ, ಪಾಶ್ವಾತ್ಯ ಅಂಧಾನುಕರಣದಿಂದಾಗಿ ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ನಮ್ಮ ಮಕ್ಕಳಿಗೆ ಸರಿಯಾಗಿ ಹೇಳಿಕೊಡದ ಕಾರಣ ನಮ್ಮ ಮಕ್ಕಳು ಅಡ್ಡ ದಾರಿ ಹಿಡಿಯುತ್ತಿರುವುದು ವಿಪರ್ಯಾಸವೇ ಸರಿ.
ಮಕ್ಕಳನ್ನು ಪಾಲಕರು ಹೇಗೆ ಬೆಳೆಸಬೇಕೆಂದು ಸ್ವಾಮಿ ನಿರ್ಭಯಾನಂದರು ಸೊಗಸಾಗಿ https://youtu.be/qOPMCAhQ4h8 ವಿವರಿಸಿದ್ದಾರೆ. ದಯವಿಟ್ಟು ಸ್ವಲ್ಪ ಸಮಯ ಮಾಡಿಕೊಂಡು ಪತಿ ಪತ್ನಿ ಸಮೇತರಾಗಿ ಸಂಪೂರ್ಣ ವಿಡಿಯೋವನ್ನು ನೋಡಿ ನಂತರ ನಿಮ್ಮ ಸಂಬಂಧಿಗಳಿಗೂ ಮತ್ತು ಸ್ನೇಹಿತರಿಗೂ ಈ ಲೇಖನ ತಲುಪಿಸಿ. ದೀಪದಿಂದ ದೀಪವ ಹಚ್ಚಬೇಕು ಮಾನವ ಎನ್ನುವಂತೆ ಜ್ಞಾನದ ಜ್ಯೋತಿಯನ್ನು ಎಲ್ಲರಿಗೂ ಪಸರಿಸೋಣ. ಆ ಮೂಲಕ, ನಾವು ಮತ್ತು ನಮ್ಮ ಮುಂದಿನ ಪೀಳಿಗೆಯವರು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳೋಣ.
ಏನಂತೀರೀ?