ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್

ರಾಜಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಕನ್ನಡ ಚಿತ್ರರಂಗದ ದಿಗ್ಗಜರು.  ಪ್ರತಿಭಾವಂತರು, ಸುರದ್ರೂಪಿಗಳು ಮೇಲಾಗಿ, ಸ್ವಾಭಿಮಾನಿಗಳು. ಕನ್ನಡ ನಾಡು, ನುಡಿಗಳ ಬಗ್ಗೆ ಅಪಾರವಾದ ಗೌರವ ಹೊಂದಿದ್ದವರು. ಅವರನ್ನು ಅನುಸರಿಸುವ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದವರು. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ ಬಡವಾಗಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಭೌತಿಕವಾಗಿ ಅವರುಗಳು ನಮ್ಮೊಂದಿಗೆ ಇಂದು ಇಲ್ಲವಾದರೂ, ಅವರು ತಮ್ಮ ಸಿನಿಮಾಗಳ ಮೂಲಕ ಇನ್ನೂ ನೂರಾರು ವರ್ಷಗಳವರೆಗೂ ನಮ್ಮ ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿರುತ್ತಾರೆ ಎನ್ನುವುದಂತೂ ಸತ್ಯ.

ಸದಾ ನಮ್ಮ ಹಿರಿಯರನ್ನು  ನೆನೆಸಿಕೊಳ್ಳುವುದು ನಮ್ಮ ಸಂಪ್ರದಾಯದ ಒಂದು ಅವಿಭಾಜ್ಯ ಅಂಗ.  ಇತರರೊಡನೆ ನಮ್ಮ  ಪರಿಚಯವನ್ನು ಮತ್ತು  ಅಸ್ಥಿತ್ವವನ್ನು ತೋರಪಡಿಸಲು ನಾವುಗಳು  ಆರಂಭಿಸುವುದೇ, ನಾವು, ಇಂತಹ ನಾಡಿನವರು, ನಮ್ಮನಾಡಿನಲ್ಲಿ ಇಂತಿಂತಹ ಮಹನೀಯರಿದ್ದರು, ಇಂತಹವರ ಮೊಮ್ಮಗ, ಇಂತಹವರ ಮಗ ಎಂದೇ. ಹಾಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಮಹನೀಯರಲ್ಲಿ ಈ ಮೂವರು ಅಗ್ರಗಣ್ಯರು. ಇಂತಹ ಮಹನೀಯರ ಕಲಾಸೇವೆ, ಸಾಧನೆಗಳು ನಮ್ಮ ಮುಂದಿನ ಪೀಳಿಗೆಗೂ ಉಳಿಯಬೇಕಾದರೆ ಆವರ ಸ್ಮಾರಕಗಳು ಮತ್ತು ಅವರ ಕುರಿತಾದ ಸಂಗ್ರಹಾಲಯಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ.

ಬಹಳ  ವರ್ಷಗಳ ಹಿಂದೆಯೇ ರಾಜಕುಮಾರರ  ಅಂತ್ಯಕ್ರಿಯೆ ನಡೆದ ಕಂಠೀರವ ಸ್ಟುಡಿಯೋ ಸ್ಥಳದಲ್ಲಿಯೇ ಅವರ ಸ್ಮಾರಕ ನಿರ್ಮಾಣವಾಗಿ  ಪ್ರತಿದಿನ ನೂರಾರು ಆಭಿಮಾನಿಗಳು ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸುತ್ತಾ ಅದೊಂದು ಪ್ರವಾಸಿ ತಾಣದೊಂದಿಗೆ ಶ್ರಧ್ಧಾ ಕೇಂದ್ರವೂ ಆಗಿಹೋಗಿದೆ.  ಹೊಸದಾಗಿ  ಪರ ಊರಿನಿಂದ ಬೆಂಗಳೂರಿಗೆ ಬರುವ ಕನ್ನಡಿಗರು ನೋಡಬೇಕಾದ ಪಟ್ಟಿಗಳಲ್ಲಿ ಡಾ.ರಾಜ್ ಅವರ ಸಮಾಧಿಯೂ ಒಂದಾಗಿದೆ.

ಇನ್ನು ಇಂದು ಪಂಚಭೂತಗಳಲ್ಲಿ ಲೀನವಾಗಿ ಹೋದ ಅಜಾತ ಶತೃ, ಕಲಿಯುಗದ ಕರ್ಣ, ಧೀಮಂತ ಜನಪರ ನಾಯಕ ಆಂಬರೀಶ್ ಆವರ ಸ್ಮಾರಕಕ್ಕೂ ಸರ್ಕಾರವೇ ಆಸ್ಥೆ ವಹಿಸಿ ಅದರಲ್ಲೂ ಮುಖ್ಯಮಂತ್ರಿಗಳೇ ಖುದ್ದಾಗಿ ತಮ್ಮ ನೇತೃತ್ವದಲ್ಲಿಯೇ,  ಡಾ.ರಾಜ್ ಅವರ ಸಮಾಧಿಯ ಪಕ್ಕದಲ್ಲಿಯೇ ಜಾಗವನ್ನು ಮೀಸಲಿಡಿಸಿ ಅಲ್ಲಿಯೇ ಅವರ ಅಂತ್ಯಕ್ರಿಯೆಗಳು ಮುಗಿದಿದೆ.  ಇನ್ನು ಕೆಲವೇ ದಿನಗಳಲ್ಲಿ ಅಲ್ಲಿ ಒಂದು ಭವ್ಯವಾದ ಸ್ಮಾರಕ ನಿರ್ಮಾಣವಾಗುವುದರಲ್ಲಿ ಸಂದೇಹವೇ ಇಲ್ಲವಾಗಿದೆ.

ಆದರೆ ಇವರಿಬ್ಬರ ಮಧ್ಯೆ ಮತ್ತೊಬ್ಬ ಅಭಿಜಾತ ಕಲಾವಿದ, ಸುರದ್ರೂಪಿ ನಟ ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ರಾಜ್ಯಸರ್ಕಾರ ಇಂದಿಗೂ ಮೀನಾ ಮೇಷಾ ಎಣಿಸುತ್ತಿರುವುದು ಅತ್ಯಂತ ದುಃಖಕರ ವಿಷಯವಾಗಿದೆ.  ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ಅವರ ನೆಚ್ಚಿನ ತಾಣವಾಗಿದ್ದ, ಭಾರತಿ ಮತ್ತು ವಿಷ್ಣುವರ್ಧನ್ ಅವರು ಪ್ರಪ್ರಥಮವಾಗಿ ಭೇಟಿಯಾಗಿದ್ದ ಮತ್ತು ಸದಾ ಕಾಲ ಭೇಟಿಯಾಗುತ್ತಿದ್ದ ಬಾಲಣ್ಣನವರ ಅಭಿಮಾನ್ ಸ್ಟುಡಿಯೋಸ್ನಲ್ಲಿ ನಡೆದದ್ದು ಈಗ ಇತಿಹಾಸ. ಆದಾದ ನಂತರ ಆ ಜಾಗಕ್ಕೆ ಆಗುತ್ತಿರುವ  ಅನಗತ್ಯ ವಿವಾದವಂತೂ ನಿಜಕ್ಕೂ ಅಸಹನೀಯ.  ಅಲ್ಲಿಂದ ಇಲ್ಲಿಯವರೆಗೂ ಆಳ್ವಿಕೆ ನಡೆಸಿದ ಎಲ್ಲಾ ಪಕ್ಷಗಳ ಮಲತಾಯಿ ಧೋರಣೆಯ ಫಲವಾಗಿ ವಿಷ್ಣುವರ್ಧನ್ ಅವರ ಸ್ಮಾರಕ ಇಂದಿಗೂ ನೆನೆಗುದಿಗೆ ಬಿದ್ದಿರುವುದು ನಿಜಕ್ಕೂ ಅಕ್ಷಮ್ಯ ಮತ್ತು ಅಂತಹಾ ಕಲಾವಿದನಿಗೆ ಅವಮಾನ ಮಾಡಿದಂತೆಯೇ ಸರಿ.    ವಿಷ್ಣುವರ್ಧನ್ ಅವರ ಕುಟುಂಬದವರು ಮತ್ತು ಅವರ ಅಪಾರ ಅಭಿಮಾನಿಗಳ ಅಸಂಖ್ಯಾತ ಬೇಡಿಕೆಗಳ ನಂತರವೂ ಎಚ್ಚರಗೊಳ್ಳದ  ರಾಜ್ಯ ಸರ್ಕಾರ ಕೊನೆಗೆ ಮೈಸೂರಿನಲ್ಲಿ ಜಾಗ ಕೊಡುವ ಭರವಸೆ ನೀಡಿತಾದರೂ ಆ ಜಾಗವೂ ವಿವಾದಕ್ಕೆ ಹೊರತಾಗದೆ ತ್ರಿಶಂಕು ಸ್ವರ್ಗದಂತಾಗಿದೆ. ಇಂದು ನಮ್ಮ ಮುಖ್ಯಮಂತ್ರಿಗಳು ಅಂಬರೀಶ್ ಆವರ ಕುಚಿಕು ಗೆಳೆಯ ಅಂಬರೀಶ್ ಅವರ ಸಮಾಧಿಯ ಪಕ್ಕವೇ ವಿಷ್ಣುವರ್ಧನ್ ಸ್ಮಾರಕಕ್ಕೂ ಜಾಗ ಕೊಡುತ್ತೇವೆ ಎಂದು ಬಾಯಿ ಮಾತಿನಲ್ಲಿ ಹೇಳಿದರಾದರೂ ಇಷ್ಟು ದಿನಗಳ ಸರ್ಕಾರದ ನಡವಳಿಕೆ ನೋಡಿದರೆ ಅದು ಕೇವಲ ಬಾಯಿಮಾತಿನಲ್ಲೇ ಉಳಿಯುವ ಸಾಧ್ಯತೆಗಳೇ ಹೆಚ್ಚಾಗಿದೆ.

ಒಬ್ಬ ಕನ್ನಡ ಚಿತ್ರಗಳ ಅಭಿಮಾನಿಯಾಗಿ ಸರ್ಕಾರದಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ದಯವಿಟ್ಟು ಕನ್ನಡಿಗರ ಸ್ವಾಭಿಮಾನವನ್ನು  ಇನ್ನಷ್ಟು ಕೆಣಕದೆ ಸರ್ಕಾರವೇ ಮುತುವರ್ಜಿವಹಿಸಿ ಬಾಲಣ್ಣನವರ ಕುಟುಂಬದವರನ್ನು ಕರೆಸಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಜಾಗದಲ್ಲಿಯೇ ಆತೀ ಶೀಘ್ರವಾಗಿ ಅವರ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಲಿ. ಸರ್ಕಾರಕ್ಕೆ ಆ ಜಾಗ ಕೊಳ್ಳಲು ಸ್ಮಾರಕ ನಿರ್ಮಿಸಲು ಹಣವಿಲ್ಲದಿದ್ದಲ್ಲಿ, ಸರ್ಕಾರವೇ ಬಾಲಣ್ಣನವರ ಕುಟುಂಬ ಒಪ್ಪೊಕೊಳ್ಳುವ  ಒಂದು ಒಳ್ಳೆಯ ಬೆಲೆಯನ್ನು ನಿರ್ಧರಿಸಲಿ. ಕೊಡುಗೈ ದಾನಿಗಳಾದ ಕನ್ನಡಿಗರು ಖಂಡಿತವಾಗಿಯೂ ಅ ಹಣವನ್ನು ಸಂಗ್ರಹಿಸಿ ಸರ್ಕಾರದ ಬೊಕ್ಕಸಕ್ಕೆ ತುಂಬಿಸಿಯೇ ತೀರುತ್ತಾರೆ.

ನಾವು ಡಾ.ರಾಜ್ ಮತ್ತು ಅಂಬರೀಶ್ ಅಥವಾ ಸರ್ಕಾರದ ವಿರೋಧಿಗಳಲ್ಲಾ.  ನಮ್ಮದು ಯಾರದೇ ವಿರುದ್ಧ ನಡೆಸುತ್ತಿರುವ  ಹೋರಾಟವಂತೂ ಅಲ್ಲವೇ ಅಲ್ಲ. ಕೇವಲ ವಿಷ್ಣುವರ್ಧನ್ ಅವರ ಮೇಲಿನ ಆಭಿಮಾನದಿಂದ ಆಗ್ರಹ ಪೂರ್ವಕ ಕೋರಿಕೆಯಷ್ಟೇ. ಸರ್ಕಾರವು ಈ ಕೂಡಲೇ  ಈ ಬಗ್ಗೆ ಗಮನ ಹರಿಸಿ ಆದಷ್ಟು ಬೇಗನೆ  ಅಭಿಮಾನ್ ಸ್ಟುಡಿಯೋದಲ್ಲಿಯೇ ವಿಷ್ಣುವರ್ಧನ್ ಅವರ ಸ್ಮಾರಕವನ್ನು  ನಿರ್ಮಿಸಬೇಕೆಂಬ ಕಳಕಳಿಯ ಪ್ರಾರ್ಥನೆ.

ಸರ್ಕಾರ ಮನಸ್ಸು ಮಾಡಿದಲ್ಲಿ ಇದು ಒಂದು ದೊಡ್ದ ಕೆಲಸವೇ  ಅಲ್ಲ.  ವಿಷ್ಣುವರ್ಧನ್ ಅವರ ಜನಪ್ರಿಯ ಚಿತ್ರಗಳನ್ನು ನಿರ್ಮಿಸಿದ್ದ  ಮತ್ತು ವಿಷ್ಣುವರ್ಧನರ ಅಭಿಮಾನಿಗಳಲ್ಲಿ ಒಬ್ಬರಾದ ನಮ್ಮ ಮುಖ್ಯಮಂತ್ರಿಗಳು ಮನಸ್ಸು ಮಾಡಬೇಕಷ್ಟೇ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s