ನಮ್ಮ ಹಿರಿಕರು ಒಂದು ಗಾದೆಯನ್ನು ಹೇಳುತ್ತಿದ್ದರು. ತೆಂಗಿನ ಮರ ಕಲ್ಪವೃಕ್ಷ. ಅದನ್ನು ಏಳು ವರ್ಷಗಳ ಕಾಲ ಕಾಪಾಡಿ ಬೆಳೆಸು ಅದು ನಿನ್ನನ್ನು ಎಪ್ಪತ್ತು ವರ್ಷ ಕಾಪಾಡುತ್ತದೆ. ಹೌದು ಇದು ಅಕ್ಷರಶಃ ಸತ್ಯವಾದ ಮಾತು. ಇಂದಿನ ಕಾಲದಲ್ಲಿ ಮನೆಯ ಮುಂದೆ ಒಂದು ತೆಂಗಿನಮರ ಇದ್ದರೆ ಸಾಕು. ಅದು ಸಾಕಾಷ್ಟು ಆಮ್ಲಜನಕ ಉತ್ಪತ್ತಿ ಮಾಡುವುದಲ್ಲದೆ, ಕುಡಿಯಲು ಎಳನೀರು, ದೇವರ ಪೂಜೆಗೆ ಮತ್ತು ಅಡುಗೆಗೆ ತೆಂಗಿನ ಕಾಯಿ, ಉರುವಲಾಗಿ ತೆಂಗಿನಕಾಯಿಯ ಸಿಪ್ಪೆ, ಚೆಪ್ಪು ಹೆಡೆಮಟ್ಟೆ ಉರುವಲುಗಳಿಗಾದರೆ, ತೆಂಗಿನ ಗರಿಯನ್ನು ಶುಭಾಸಮಾರಂಭಗಳಲ್ಲಿ ಚಪ್ಪರಕ್ಕೆ ಬಳೆಸಿದರೆ, ಬಡವರು ತಮ್ಮ ಗುಡಿಸಲಿನ ಸೂರಿಗಾಗಿ ಬಳೆಸುತ್ತಾರೆ. ಒಣಗಿದ ಗರಿಯಿಂದ ತೆಂಗಿನ ಕಡ್ಡಿ ಪೊರಕೆಯನ್ನು ಮಾಡಿ ಕೊಂಡು ಸುತ್ತ ಮುತ್ತಲಿನ ಕಸ ಕಡ್ಡಿಯನ್ನು ಗುಡಿಸುವುದರ ಮೂಲಕ ಶುಚಿಯಾಗಿಡಬಹುದು. ಒಟ್ಟಿನಲ್ಲಿ ಒಂದು ಮರವೊಂದು ಮನೆಯಲ್ಲಿದ್ದರೆ ಅದರಿಂದ ನಾನಾ ರೀತಿಯ ಉಪಕಾರವು ಆಗಿಯೇ ತೀರುತ್ತದೆ.
ಹೇಗೂ ಈಗ ಬೇಸಿಗೆಯ ಸಮಯ. ಮಾವು, ಹಲಸು, ನೇರಳೇ ಸೀಬೆ ಇನ್ನು ಮುಂತಾದ ಹಲವಾರು ಹಣ್ಣುಗಳ ಕಾಲ. ಈ ಹಣ್ಣುಗಳನ್ನು ತಿಂದ ನಂತರ ಅವುಗಳ ಬೀಜಗಳನ್ನು ಎಲ್ಲೆಂದರಲ್ಲಿ ಬಿಸಾಡದೆ, ದಯವಿಟ್ಟು ಒಂದು ಪ್ಪಾಸ್ಟಿಕ್ ಕವರಿನಲ್ಲಿ ಜೋಪಾನವಾಗಿ ಸಂಗ್ರಹಿಸಿ, ಮನೆಯಿಂದ ಹೊರಗೆ ದೂರದ ಪ್ರದೇಶದ ಕಡೆ ಪ್ರಯಾಣಿಸುತ್ತಿದ್ದಾಗ ಅಲ್ಲಿ ಎಲ್ಲಾದರೂ ಹಾಕಿಬಿಡಿ. ಮುಂಬರುವ ಮಳೆಗಾಲದಲ್ಲಿ ಇದೇ ಬೀಜಗಳು ಮಣ್ಣಿನಲ್ಲಿ ಚೆನ್ನಾಗಿ ಬೆರೆತು, ಮೊಳಕೆಯೊಡೆದು ಗಿಡವಾಗಿ ಕಡೆಗೆ ಮರವಾಗಿ ಶುಧ್ಧಗಾಳಿಯನ್ನು ಉತ್ಪಾದಿಸುವುದಲ್ಲದೆ, ದಟ್ಟವಾಗಿ ಹೆಮ್ಮರಗಳಾಗಿ ಬೆಳೆದು ನಾನ ರೀತಿಯ ಪಕ್ಷಿಗಳಿಗೆ ಆಶ್ರಯ ತಾಣವಾಗುತ್ತದೆ. ಆಗಸದದಿಂದ ಮೋಡಗಳನ್ನು ತಮ್ಮತ್ತ ಆಕರ್ಷಿಸಿ ಮಳೆಯನ್ನೂ ಸುರಿಸಲು ಸಹಾಯ ಮಾಡುತ್ತವೆ. ಆ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ, ನದಿ ಸೇರಿ ಮನುಕುಲಕ್ಕೆ ಕುಡಿಯಲು ನೀರೂ ದೊರಕುತ್ತದೆ ಮತ್ತು ಅಂತರ್ಜಲವೂ ಹೆಚ್ಚಾಗುತ್ತವೆ.
ಗೊತ್ತು ಗುರಿ ಇಲ್ಲದೆ ಅರಣ್ಯ ನಾಶ ಮಾಡಿದ ಪರಿಣಾಮದಿಂದಾಗಿಯೇ ಈಗಾಗಲೇ ನೀರಿಗೆ ಹಾಹಾಕಾರವಾಗಿ ನೀರನ್ನು ಕೊಂಡು ಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಹೀಗೆಯೇ ಅರಣ್ಯ ನಾಶ ಮಾಡುತ್ತಿದ್ದಲ್ಲಿ ಮುಂದೆ ಉಸಿರಾಡಲು ಕೃತಕವಾಗಿ ಶುದ್ಧವಾದ ಗಾಳಿಯನ್ನು ತಯಾರಿಸಿ, ಅದನ್ನು ಅಂಗಡಿಗಳಿಂದ ಕೊಂಡು ಕೊಳ್ಳುವ ಪರಿಸ್ಥಿತಿ ಬರುವ ಕಾಲವೂ ದೂರವಿಲ್ಲ. ಹಾಗಾಗಿ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ಪ್ರತಿಯೊಬ್ಬರೂ ಒಂದೊಂದು ಮರವನ್ನು ಈ ರೀತಿಯಲ್ಲಿ ಬೆಳೆಸಿದರೂ ನಮ್ಮೆಲ್ಲರ ಶ್ರಮ ಸಾರ್ಥಕವಾಗುತ್ತದೆ ಮತ್ತು ಸಮಾಜಕ್ಕೆ ನಮ್ಮಿಂದ ಅಳಿಲು ಸೇವೆಯನ್ನು ಮಾಡಿದಂತಾಗುತ್ತದೆ. ಈ ರೀತಿಯ ಪ್ರಯತ್ನಗಳು ಕಳೆದ ಒಂದು ದಶಕಗಳಿಂದಲೂ ಮಹಾರಾಷ್ಟ್ರದ ಸತಾರ, ರತ್ನಗಿರಿ ಪ್ರದೇಶಗಳಲ್ಲಿ ಯಶಸ್ವಿಯಾಗಿದೆ ಮತ್ತು ಇನ್ನೂ ಅನೇಕ ಪ್ರದೇಶದ ಜನರು ಇದನ್ನೇ ಅನುಸರಿಸುತ್ತಿದ್ದಾರೆ. ನಮ್ಮ ಪೂರ್ವಜರು ನಮಗೆ ಉಳಿಸಿ ಹೋದ ಅರಣ್ಯ ಸಂಪತ್ತನ್ನು ನಮ್ಮ ಮುಂದಿನ ಪೀಳಿಗೆಯವರಿಗೂ ತಲುಪಿಸುವ ಈ ಪ್ರಯತ್ನದಲ್ಲಿ ನಾವೆಲ್ಲರೂ ಭಾಗಿಯಾಗೋಣ.
ದೂರದ ಪ್ರದೇಶಗಳಿಗೆ ಹೋಗಲು ಸಾಧ್ಯವಾಗದವರು ತಮ್ಮಗಳ ಮನೆಯ ಮುಂದೆಯೋ ಇಲ್ಲವೇ , ರಸ್ತೆಗಳ ಬದುವಿನಲ್ಲಿಯೇ ಈ ರೀತಿಯ ಹಣ್ಣುಗಳ ಮರಗಳನ್ನೋ ಇಲ್ಲವೇ ಸಂಪಿಗೆ, ದೇವಗಣಗಲೆಯಂತಹ ಹೂವಿನ ಮರಗಳನ್ನು ಬೆಳೆಸುವುದರ ಮೂಲಕ ಪೂಜೆಗೆ ಹೂವು ದೊರಕುತ್ತದೆ ಪರಿಸರವನ್ನೂ ರಕ್ಷಿಸಿದಂತಾಗುತ್ತದೆ. ಅದಕ್ಕೇ ಅಲ್ಲವೇ ನಮ್ಮ ಪೂರ್ವಜರು ಹೇಳಿರುವುದು ವೃಕ್ಷೋರಕ್ಷತಿ ರಕ್ಷಿತಃ. ಮರವನ್ನು ಬೆಳೆಸಿದವನ್ನು ಕಂಡಿತವಾಗಿಯೂ ಮರ ಕಾಪಾಡಿಯೇ ತೀರುತ್ತದೆ ಎಂದು.
ಏನಂತೀರೀ?