ಸ್ವಾಮಿ ಭಕ್ತಿ ಮತ್ತು ಕರ್ತ್ಯವ್ಯ ನಿಷ್ಠೆ

ಅದೊಂದು ದೊಡ್ಡನಗರ ಅಲ್ಲೊಂದು ಬಾರೀ ವ್ಯವಹಾರಸ್ಥರ ಮನೆ.  ಅವರ ವ್ಯವಹಾರ ಇಡೀ ಪ್ರಪಂಚಾದ್ಯಂತ ಹರಡಿದ್ದು ಕುಟುಂಬದ ಯಜಮಾನರು ಸದಾ ಕಾಲ ದೇಶ ವಿದೇಶಗಳನ್ನು ಸುತ್ತುತ್ತಿದ್ದು, ಅಗೊಮ್ಮೆ ಈಗೊಮ್ಮೆ  ಕುಟುಂಬದೊಡನೆ ಕಾಲ ಕಳೆಯುತ್ತಿದ್ದದ್ದು ಸಹಜ ಪ್ರಕ್ರಿಯೆಯಾಗಿತ್ತು. ಅದೊಂದು ದಿನ ಯಾವುದೋ ಕೆಲಸದ ನಿಮಿತ್ತ  ಉದ್ಯೋಗಪತಿಗಳು ಪರ ಊರಿಗೆ ಹೊರಡಲು ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ಹಾಗಾಗಿ  ಬೆಳ್ಳಂಬೆಳಿಗ್ಗೆಯೇ  ತಮ್ಮ ಮನೆಯಿಂದ ಹೊರಡಲು ಅನುವಾಗಿ ತಮ್ಮ ಕಾರನ್ನೇರಿ ಹೊರಟು ಮನೆಯ ಮುಂಬಾಗಿಲಿಗೆ ಬಂದಾಗ ಅವರ ಮನೆಯ ರಾತ್ರಿಯ ಪಾಳಿಯ ಕಾವಲುಗಾರ ಎಂದಿನಂತೆ ಪ್ರೀತಿಯಿಂದ ನಮಸ್ಕರಿಸಿ ಅಯ್ಯಾ, ನೀವು ಏನೂ ತಿಳಿಯದಿದ್ದರೆ  ಈ ದಿನದ ಪ್ರಯಾಣವನ್ನು ನೀವು ದಯವಿಟ್ಟು ಮಂದೂಡಬಹುದೇ? ಯಾಕೋ ಏನೋ ನನ್ನ ಮನಸ್ಸು ಈ ದಿನ ನಿಮಗೆ ಆಶುಭಕರ ಮತ್ತು ನಿಮಗೊಂದು ಅವಗಡ ಇದ್ದು ಪ್ರಾಣಪಾಯವಿದೆ ಎಂದು ಸೂಚಿಸುತ್ತಿದೆ. ನಿಮ್ಮ  ತಂದೆಯವರ ಕಾಲದಿಂದಲೂ ಈ ಮನೆಯ ನಿಷ್ಠಾವಂತ ಸೇವಕನಾಗಿದ್ದೇನೆ. ನಿಮ್ಮ ಮನೆಯ ಋಣ ನನ್ನ ಮೇಲಿದೆ.  ನಿಮ್ಮನ್ನು ಚಿಕ್ಕಂದಿನಿಂದಲೂ ಎತ್ತಿ ಆಡಿಸಿರುವ ಸಲಿಗೆಯಿಂದ ಈ ಮಾತನ್ನು  ಹೇಳುತ್ತಿದ್ದೇನೆ. ದಯವಿಟ್ಟು ಒಮ್ಮೆ ಯೋಚಿಸಿ ನೋಡಿ ಎಂದು ಪರಿ ಪರಿಯಾಗಿ ಬೇಡಿಕೊಂಡಾಗ,  ಅತ್ಯಂತ ಮಹತ್ತರವಾದ  ಕೆಲಸವಿದ್ದೂ ಅನಿವಾರ್ಯವಾಗಿ ಖುದ್ದಾಗಿ ಹೋಗಲೇಬೇಕಾದ ಪರಿಸ್ಥಿತಿ ಇದ್ದರೂ ಸಹಾ ಆ ಹಿರಿಯರ ಮಾತನ್ನು ಅಲ್ಲಗಳಿಯಲಾಗದೆ, ಆ ಸಮಯದಲ್ಲಿ ತಮ್ಮ ಸಹಾಯಕರಿಗೆ ಕರೆಮಾಡಿ, ತಮ್ಮ ಪ್ರವಾಸವನ್ನು ಮುಂದೂಡಲು ಸೂಚಿಸಿ ಮರಳಿ ಮನೆಯ ಒಳಗೆ ಹೋದದ್ದನ್ನು ನೋಡಿದ ಆ ಕಾವಲುಗಾರರಿಗೆ ಒಂದು ರೀತಿಯ ನೆಮ್ಮದಿ. ಅಷ್ಟು ದೊಡ್ಡ ವ್ಯವಹಾರಸ್ಥರು ತಮ್ಮ ಮಾತಿಗೆ ಓಗಟ್ಟಿದ್ದು ಅವರಿಗೆ ಹೆಮ್ಮೆಯಾಗಿ, ಅವರ ಇಡೀ ಕುಟುಂಬವು ಚೆನ್ನಾಗಿರಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತಾ, ಬೆಳಕು ಹರಿದ ನಂತರ ತಮ್ಮ ಪಾಳಿ ಮುಗಿಸಿ ಮತ್ತೊಬ್ಬ  ಕಾವಲುಗಾರರಿಗೆ ತಮ್ಮ ಕೆಲಸವನ್ನು ಒಪ್ಪಿಸಿ ತಮ್ಮ ಮನೆಗೆ ಮರಳಿದ್ದರು. ಇತ್ತ ತಮ್ಮ ಪ್ರವಾಸ ಅಚಾನಕ್ಕಾಗಿ ರದ್ದಾದ ಪ್ರಯುಕ್ತ ಮನೆಯಲ್ಲಿಯೇ ಇದ್ದ ಯಜಮಾನರು ಬೆಳಗಿನ ಉಪಹಾರ ಸೇವಿಸುತ್ತಾ ಟಿವಿಯಲ್ಲಿ ವಾರ್ತೆಗಳನ್ನು ನೋಡುತ್ತಿರುವಾಗ ಅವರ ಟಿವಿಯ ಪರದೆಯ ಮೇಲೆ ಬಂದ ಫ್ಲಾಷ್ ನ್ಯೂಸ್ ಅವರನ್ನು ಒಂದು ಕ್ಷಣ ದಿಗ್ರ್ಭಮೆ ಮಾಡಿಸಿತು. ಕೈಯಲ್ಲಿದ್ದ  ತಿಂಡಿಯ ತಟ್ಟೆ ತಮಗರಿವಿಲ್ಲದಂತೆಯೇ ನೆಲಕ್ಕೆ ಬಿದ್ದು ಜೋರಾಗಿ ಶಬ್ಧಮಾಡಿದಾಗ,  ಆ ಶಬ್ಧಕ್ಕೆ ಬೆದರಿ ಮನೆಯಲ್ಲಿದ್ದವರೆಲ್ಲರೂ ಊಟದ ಕೋಣೆಗೆ ಬಂದು ಏನಾಯ್ತು ಎಂದು ಕೇಳಿದಾಗಲೇ ಅವರು ವಾಸ್ತವ ಪ್ರಪಂಚಕ್ಕೆ ಮರಳಿದ್ದದ್ದು.  ಅಲ್ಲಿಯೇ ಇದ್ದ ತಮ್ಮ ತಾಯಿ ತಂದೆಯವರ ಕಾಲಿಗೆ ಬಿದ್ದು ನಮಸ್ಕರಿಸಿ ತಮ್ಮ  ಮಡದಿ ಮತ್ತು ಮಕ್ಕಳನ್ನು ಬಾಚಿ ತಬ್ಬಿಕೊಂಡು ಗಳಗಳನೆ ಕಣ್ಣಿರಧಾರೆ ಹರಿಸಿದಾಗಲೂ ಮನೆಯವರಿಗೆ ಏನಾಗುತ್ತಿದ್ದೆ  ಎಂಬುದರ ಅರಿವಿಲ್ಲದ್ದಾಗಿತ್ತು. ಸ್ವಲ್ಪ ಕ್ಷಣದ ನಂತರ ಸಾವರಿಸಿಕೊಂಡು  ಬಚ್ಚಲು ಮನೆಗೆ ಹೋಗಿ  ಕೈಕಾಲು ಮುಖವನ್ನು ತೊಳೆದುಕೊಂಡು ಶುಭ್ರರಾಗಿ ದೇವರ ಮನೆಗೆ ಬಂದು ದೇವರಿಗೆ ಒಂದು ದೀರ್ಘದಂಡ ನಮಸ್ಕಾರಗಳನ್ನು ಹಾಕಿ. ಭಗವಂತ ನಿನ್ನ ಲೀಲೆ ಅಪಾರ. ನೀನಿಂದು ನನ್ನ  ಜೀವವನ್ನು ಉಳಿಸಿದೆ ಎಂದು ಜೋರಾಗಿ ಹೇಳಿದಾಗ ಮನೆಯವರೆಲ್ಲರಿಗೂ ಪರಮಾಶ್ವರ್ಯ.  ಕೆಲಸದ ನಿಮಿತ್ತ ಪ್ರವಾಸಕ್ಕೆ ಹೋಗಬೇಕಿದ್ದವರು ಯಾರಿಗೂ ಹೇಳದಂತೆ ಪ್ರವಾಸವನ್ನು ರದ್ದು ಪಡಿಸಿ ಈ ರೀತಿಯಾಗಿ ಪರಿತಪಿಸುತ್ತಿರುವುದು ಮನೆಯವರಿಗೆಲ್ಲರಿಗೂ ಒಂದು ಕ್ಷಣ ಆಶ್ವರ್ಯತಂದಿತ್ತಾದರೂ ಅವರ ಬಾಯಿಯಿಂದಲೇ ಜೀವ ಉಳಿಯಿತಲ್ಲಾ ಎಂಬ ಮಾತನ್ನು ಕೇಳಿ ಮನೆಯವರೆಲ್ಲರೂ ಕೊಂಚ ನಿರಾಳರಾಗಿ ಎಲ್ಲರೂ ಒಟ್ಟಿಗೆ ಕುಳಿತು ವಿಚಾರವೇನು ಎಂದು ಕೇಳಲು,  ಅವರು ಟಿವಿಯ  ವಾರ್ತೆಯಲ್ಲಿ ಬಿತ್ತರವಾಗುತ್ತಿದ್ದ  ವಿಮಾನದ  ಅಪಘಾತದ ಸುದ್ದಿಯನ್ನು  ತೋರಿಸಿ, ತಾನೂ ಕೂಡಾ ಇಂದು  ಕೆಲಸದ ನಿಮಿತ್ತ  ಅದೇ ವಿಮಾನದಲ್ಲಿ ಪ್ರಯಾಣಿಸಬೇಕಾಗಿದ್ದು ರಾತ್ರಿಯ ಪಾಳಿಯ ಕಾವಲುಗಾರರ ಸಲಹೆಯ ಮೇರೆಗೆ ಪ್ರವಾಸ ರದ್ದು ಪಡಿಸಿದ ಕಾರಣ ತನ್ನ ಜೀವ ಉಳಿಯಿತೆಂದು ಹೇಳಿದಾಗ ಮನೆಯವರೆಲ್ಲರಿಗೂ ಸಂಭ್ರಮದ ಕ್ಷಣ ಮತ್ತು ಆ ಕಾವಲುಗಾರ ಮೇಲೆ ಒಂದು ರೀತಿಯ ಮಮಕಾರ. ತಮ್ಮ ಮಗನ ಜೀವವನ್ನು ಉಳಿಸಿದ ಆ ಕಾವಲುಗಾರನಿಗೆ  ಸೂಕ್ತ ರೀತಿಯಲ್ಲಿ ಸತ್ಕರಿಸ ಬೇಕೆಂದು  ಆಲೋಚಿಸಿ ಈ ಕೂಡಲೇ ಮನೆಗೆ ಬರಬೇಕೆಂದು ಆವರಿಗೆ ಕರೆ ಮಾಡಿಸಿದಾಗ ಆ ಕಾವಲುಗಾರನಿಗೆ ಒಂದು ರೀತಿಯ ಅಚ್ಚರಿ. ಆಗ ತಾನೆ ಕೆಲಸ ಮುಗಿಸಿ ಮನೆಗೆ ಬಂದು ವಿರಮಿಸುತ್ತಿದ್ದ  ಕಾವಲುಗಾರರಿಗೆ, ಎಂದು ಕರೆಯದ ಮನೆಯ ಹಿರಿಯರು  ಯಾವುದೇ ವಿಷಯ ತಿಳಿಸಿದೇ ಈ ಕೂಡಲೇ ತುರ್ತಾಗಿ ಬರಲು ತಿಳಿಸಿರುವ ಕಾರಣವಾದರೂ ಏನೂ? ತನ್ನಿಂದ ಏನಾದರೂ ತಪ್ಪಾಗಿದೆಯೇ ಎಂದು ಯೋಚಿಸುತ್ತಾ ,  ತಮ್ಮ ಮಡದಿಗೆ ದೊಡ್ಡವರು ಬರಲು ಹೇಳಿರುವ ವಿಚಾರ ತಿಳಿಸಿ ಭಯದಿಂದಲೇ ಕೆಲಸದ ಮನೆಗೆ ಬಂದಾಗ ಮನೆಯವರೆಲ್ಲರೂ ಅವರನ್ನು  ಆದರದಿಂದ ಬರಮಾಡಿಕೊಂಡಿದ್ದು ಅವರಿಗೆ ಕಸಿವಿಸಿಯಾಯಿತು. ಮನೆಯ ಹಿರಿಯರು ಆ ಕಾವಲುಗಾರರ ಕೈ ಹಿಡಿದು, ನಿಮ್ಮಿಂದ ಇಂದು ಮಹದುಪಕಾರವಾಯಿತು. ಭಗವಂತನ ರೂಪದಲ್ಲಿ ಬಂದು ತಮ್ಮ ಮಗನ ಪ್ರವಾಸವನ್ನು ರದ್ದು ಪಡಿಸಿ ತಮ್ಮ ಮಗನ ಜೀವವನ್ನು ವಿಮಾನಾಪಘಾತದಿಂದ ಪಾರುಮಾಡಿದ್ದನ್ನು ವಿವರಿಸಿ ಅವರಿಗೆ ಹಣ್ಣು ಹಂಪಲಿನ ಬುಟ್ಟಿಯ ಜೊತೆಗೆ ಒಂದು ದೊಡ್ಡ ಮಟ್ಟದ ನಗದನ್ನು ಉಡುಗೊರೆಯಾಗಿ ನೀಡಿದಾಗ ಅದನ್ನು ನಯವಾಗಿ ತಿರಸ್ಕರಿಸಿ, ಇದರಲ್ಲಿ ನನ್ನ ಪಾತ್ರವೇನೂ ಇಲ್ಲ ಎಲ್ಲವೂ ಭಗವಂತನ ಕೃಪೆ. ನಿಮ್ಮ ಮನೆಯ ಉಪ್ಪುಂಡ ಋಣ ನನ್ನ ಮೇಲಿದೆ. ನನ್ನ ಸ್ವಾಮಿನಿಷ್ಠೆ ಸದಾಕಾಲವೂ ನಿಮ್ಮ ಮನೆಯವರ ಮೇಲಿದ್ದು ನನ್ನ ಕರ್ತವ್ಯ ನಾನು ಪಾಲಿಸಿದ್ದೇನೆ. ಅದಕ್ಕೆ ನೀವು ಪ್ರತೀ ತಿಂಗಳು ಸಂಬಳ ಕೊಡುತ್ತಿದ್ದೀರಿ ಹಾಗಾಗಿ  ಹಣ್ಣುಗಳನ್ನು ತಿರಸ್ಕರಿವುದು ಒಳ್ಳೆಯ ಸಂಪ್ರದಾಯವಲ್ಲದ ಕಾರಣ, ಹಣ್ಣುಗಳನ್ನು ಮಾತ್ರ ತೆಗೆದುಕೊಳ್ಳುತ್ತೀನಿ. ದಯವಿಟ್ಟು ಹಣ ನನಗೆ ಬೇಡ ಎಂದರು.  ಆ ಕಾವಲುಗಾರರ ಸುಸಂಸ್ಕೃತಿಯನ್ನು ಹೊಗಳಿದರಾದರೂ ಮಗನ ಪ್ರಾಣವನ್ನು  ಉಳಿಸಿದವರಿಗೆ ಏನಾನ್ನಾದರೂ ಕೊಡಲೇ ಬೇಕೆನ್ನುವುದು  ನಮ್ಮ ಸಂಸ್ಕಾರ ಎಂದು ತಿಳಿಸಿ ಆ ಕಾಣಿಕೆಯನ್ನು ಸ್ವೀಕರಿಸಲೇ ಬೇಕೆಂದು ಆಗ್ರಹಿಸಿದರು. ಮನೆಯವರ ಒತ್ತಾಯ ಫೂರ್ವಕ ಆಗ್ರಹವನ್ನು ಒಲ್ಲದ ಮನಸ್ಸಿನಿಂದಲೇ ಪರಿಗಣಿಸಿ ಫಲ ಪುಷ್ಪಗಳೊಡನೆ ಕಾಣಿಕೆಯನ್ನು ಸ್ವೀಕರಿಸಿ ಮನೆಯವರೆಲ್ಲರಿಗೂ ವಂದಿಸಿ ತಮ್ಮ ಮನೆಗೆ ಮರಳಿದ್ದರು ಆ ಕಾವಲುಗಾರರು.

ಹಾಗೆಯೇ ಕೆಲ ತಿಂಗಳುಗಳು ಕಳೆದು, ಮನೆಯವರ ವ್ಯವಹಾರಗಳು ಇನ್ನಷ್ಟೂ  ಹೆಚ್ಚಾಗಿ ಎಲ್ಲರೂ ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾಗ, ಅಂದೊಂದು ದಿನ ಮುಂಜಾನೆಯೇ  ವಿಮಾನ ಪ್ರಯಾಣ ಮಾಡುವ ಸುದ್ದಿ ತಿಳಿದ ಕಾವಲುಗಾರರು ಮತ್ತೊಮ್ಮೆ ತಮ್ಮ ಯಜಮಾನರ ಬಳಿ ಬಂದು ಈ ದಿನ ನೀವು ಪ್ರವಾಸ ಮಾಡುವುದು ಉಚಿತವಲ್ಲ ಎಂದು ಹೇಳಿದಾಗ ಕಳೆದ ಸಾರಿಯ ಅನುಭವವಿದ್ದ ಕಾರಣ ಹೆಚ್ಚೇನೂ ಮಾತನಾಡದೇ ತಮ್ಮ ಪ್ರವಾಸವನ್ನು ಮುಂದೂಡಿ ಸ್ವಲ್ಪ ಸಮಯದ ನಂತರ ಟಿವಿಯಲ್ಲಿ ಅವರು ಪ್ರಯಾಣ ಮಾಡಬೇಕಿದ್ದ ವಿಮಾನ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟಿದ್ದು ಎಲ್ಲಾ ಪ್ರಯಾಣಿಕರ ಪ್ರಣಾಪಾಯವಿರುವ ಸುದ್ದಿ ತಿಳಿದು ಮತ್ತೊಮ್ಮೆ ತಮ್ಮ ಪ್ರಾಣ ಉಳಿಸಿದ ಕಾವಲುಗಾರನನ್ನು  ಮನಸ್ಸಿನಲ್ಲಿಯೇ ನೆನೆದು ಸಂತೋಷಪಟ್ಟು ಆತನನ್ನು ಈ ಕೂಡಲೇ ಮನೆಗೆ ಬರಲು ಹೇಳಿ ಕಳುಹಿಸಿದರು.   ಮತ್ತೊಮ್ಮೆ ತನ್ನ ಕೆಲಸದ ಮನೆಯ ಯಜಮಾನರು ತುರ್ತಾಗಿ ಬರಲು ತಿಳಿಸಿರುವುದನ್ನು ಕೇಳಿ, ಈ ದಿನ ಮುಂಜಾನೆ ತಾವು ಅವರ ಪ್ರವಾಸವನ್ನು ರದ್ದು ಪಡಿಸಿದ್ದರ ಪ್ರಭಾವೇ ಇರಬೇಕೆಂದು ಯೋಚಿಸಿ, ವಿಷಯವೇನೆಂದು ತಿಳಿಯಲು ಒಮ್ಮೆ ಟಿವಿಯಲ್ಲಿ ವಾರ್ತೆಗೆಳನ್ನು ನೋಡಿದಾಗ ವಿಮಾನ ಅಪಹರಣವಾಗಿದ್ದ ಸುದ್ದಿ ಕೇಳಿ ಮತ್ತೊಮ್ಮೆ ತಮ್ಮ ಯಜಮಾನರ ಪ್ರಾಣ ಕಾಪಾಡಿದ್ದಕ್ಕೆ ಹೆಮ್ಮೆಯಾಯಿತು.  ಲಕ್ಷ್ಮಿ ಚಂಚಲೆ. ಒಂದು ಸಾರಿ ಅನಾಯಾಸವಾದ  ದುಡ್ಡನ್ನು  ನೋಡಿದ ಕೂಡಲೇ ಮನುಷ್ಯರ ಮನಸ್ಥಿತಿ ಬದಲಾಗುವುದು ಜಗದ ನಿಯಮ ಎನ್ನುವ ಹಾಗೆ ಕಳೆದ ಬಾರಿ ಪ್ರಾಣ ಉಳಿಸಿದಾಗ ಭಾರೀ ಮೊತ್ತದ ಕಾಣಿಕೆ ನೀಡಿದ್ದ ಯಜಮಾನರು ಈಗ ಮತ್ತೊಮ್ಮೆ ಕರೆದಿರುವ ಕಾರಣ ಅವರ ಬಹುಮಾನದ ನಿರೀಕ್ಷೆ  ಹೆಚ್ಚಾಗಿ, ಅವರ ಕೊಡುವ ಹಣದಿಂದ ಮನೆಯವರಿಗೆ, ಯಾರು ಯಾರಿಗೆ  ಏನೆಲ್ಲಾ ಖರೀದಿಸಬೇಕು ಎಂದು ಮನಸಿನಲ್ಲಿಯೇ  ಮಂಡಿಗೆ ಹಾಕುತ್ತಾ ಸಂತೋಷದಿಂದ ತಮ್ಮ ಕೆಲಸದ ಮನೆಗೆ ಬಂದರು. ಯಥಾ ರೀತಿಯಾಗಿ ಸಂಭ್ರಮದಿಂದಲೇ ಮಾತನಾಡಿಸಿದ ಮನೆಯವರು ಅವರನ್ನು ಕುಳ್ಳರಿಸಿ ಮತ್ತೊಮ್ಮೆ ಪ್ರಾಣಾಪಾಯದಿಂದ ಪಾರು ಮಾಡಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿ  ಮತ್ತದೇ ರೀತಿಯಾಗಿ ಫಲಪುಷ್ಪಗಳ ಜೊತೆ ಒಂದು ಲಕೋಟೆಯನ್ನಿರಿಸಿ ಅವರ ಕೈಗಿತ್ತಿದ್ದರು. ಕಳೆದ ಬಾರಿ ಉಡುಗೊರೆ ಬೇಡವೆಂದಿದ್ದರೂ ಈ ಬಾರಿ ಭಾರೀ ಮೊತ್ತದ  ಬಹುಮಾನದ  ನಿರೀಕ್ಷೆಯಲ್ಲಿದ್ದ ಕಾರಣ ಆ ಕೂಡಲೇ  ತಮ್ಮ ಯಜಮಾನರ ಸನ್ನಿಧಿಯಲ್ಲಿಯೇ ಲಕೋಟೆಯನ್ನು ಲಗು ಬಗನೆ ತೆಗೆದು ನೋಡಿದಾಗ ಅವರ ಎದೆ ಧಸಕ್ಕೆಂದು ಒಂದು ಕ್ಷಣ ತಮ್ಮನ್ನೇ ತಾವು ನಂಬಲಾಗದೇ ನಿಂತಲ್ಲೇ ಕುಸಿದು ಬಿದ್ದರೂ, ಕೂಡಲೇ ಸಾವರಿಸಿಕೊಂಡು ಇದೇನು ಯಜಮಾನರೇ ತಾವು ಈಬಾರಿ ಹೀಗೇಕೆ  ಮಾಡಿದಿರಿ? ಮತ್ತೊಮ್ಮೆ ಜೀವ ಉಳಿಸಿದರೂ ಈ ಬಡಪಾಯಿಯ ಜೀವದ  ಮೇಲೆ ಬರೆಯನ್ನೇಕೆ ಎಳೆದಿರಿ? ತಾನು ಮಾಡಿದ ತಪ್ಪಾದರೂ ಏನು ಎಂದು ತಿಳಿಸಿ ಎಂದಾಗ. ನಿಧಾನವಾಗಿ ಅವರ ಮೈತಡವಿ ಅವರನ್ನು ಅಲ್ಲಿಯೇ ಕುಳ್ಳರಿಸಿದ ಯಜಮಾನರು, ನೀವು ಮತ್ತೊಮ್ಮೆ ನಮ್ಮ ಮಗನ ಜೀವ ಉಳಿಸಿದ್ದಕಾಗಿ ನಮ್ಮ ಇಡೀ ಕುಟುಂಬ ನಿಮಗೆ ಆಜೀವ ಪರ್ಯಂತ ಋಣಿಗಳಾಗಿರುತ್ತೇವೆಯಾದರೂ, ಇನ್ನು ಮುಂದೆ ರಾತ್ರಿಯಪಾಳಿಯ ಕಾವಲುಗಾರಗಾಗಿ ನಿಮ್ಮ  ಸೇವೆ ನಮ್ಮ ಕುಟಂಬಕ್ಕೆ ಅವಶ್ಯಕತೆ ಇಲ್ಲದ ಕಾರಣ ನಿಮ್ಮನ್ನು ಕೆಲಸದಿಂದ ತೆಗೆಯುತ್ತಿರುವ ಪತ್ರವನ್ನು ನಿಮಗೆ ಕೊಟ್ಟಿದ್ದೇವೆ. ಅನ್ಯಥಾ ಭಾವಿಸದಿರಿ.  ಮಧ್ಯಾಹ್ನದ ನಂತರ ಕಛೇರಿಗೆ ಬಂದು ನಿಮ್ಮ ಇಷ್ಟು ದಿನದ ಕೆಲಸ ಮಾಡಿದ್ದಕ್ಕೆ ಸಲ್ಲಬೇಕಾದ ಎಲ್ಲಾ ರೀತಿಯ ಭತ್ಯೆಗಳನ್ನು ಪಡೆದುಕೊಂಡು ಹೋಗಿ ಎಂದು ತಿಳಿಸಿ ಮಧ್ಯಾಹ್ನ ಕಛೇರಿಯಲ್ಲಿ ಭೇಟಿಯಾಗೋಣ ಎಂದು ತಿಳಿಸಿ ಹೊರಟೇ ಬಿಟ್ಟರು.

ಅಪ್ಪಾ ತಂದೇ ಭಗವಂತಾ!! ಇದೆಂತಹ ಶಿಕ್ಷೆ ಕೊಟ್ಟೆಯಪ್ಪಾ? ಇದ್ದೊಂದು ಕೆಲಸವನ್ನೂ ಕಿತ್ತು ಕೊಂಡೆಯಲ್ಲಪ್ಪಾ?  ಮದುವೆ ವಯಸ್ಸಿಗೆ ಬಂದು ಬೆಳೆದು ನಿಂತಿರುವ ಮಗಳಿದ್ದಾಳಪ್ಪಾ!! ಮಗ ಈಗಷ್ಟೇ ಓದು ಮುಗಿಸಿ ಮುಂದಿನ ಭವಿಷ್ಯ ರೂಪಿಸಿ ಕೊಳ್ಳುವ ಭರದಲ್ಲಿದ್ದಾನಪ್ಪಾ!! ಈ ಇಳಿ ವಯಸ್ಸಿನಲ್ಲಿ ನನಗೆ ಯಾರು ಕೆಲಸ ಕೊಡುತ್ತಾರಪ್ಪಾ!!  ಈ ದುಬಾರೀ ಕಾಲದಲ್ಲಿ  ಇನ್ನು ಮುಂದೆ ಜೀವನ ನಡೆಸುವುದು ಹೇಗಪ್ಪಾ?  ಎಂದು ಭಗವಂತನನ್ನು ಮನದಲ್ಲಿಯೇ ನೆನೆಸಿಕೊಳ್ಳುತ್ತಾ , ತಮ್ಮ ಹಣೆಯ ಬರಹವನ್ನು ತಾವೇ ಹಳಿದುಕೊಳ್ಳುತ್ತಾ ಹುಟ್ಟಿಸಿದ ದೇವರು ಹುಲ್ಲನ್ನು ಮೇಯಿಸುವುದಿಲ್ಲಾ ಎನ್ನುವ ಭರವಸೆಯೊಂದಿಗೆ ಮಧ್ಯಾಹ್ನ  ತಮ್ಮ ಇಷ್ಟು ದಿನದ ಸೇವಾವಧಿಗೆ ಬರಬೇಕಿದ್ದ ಹಣವನ್ನು ಪಡೆಯಲು ಕಛೇರಿಗೆ ಹೋದಾಗ ಅವರಿಗೆ ಮತ್ತೊಂದು ಮಹದಾಶ್ವರ್ಯ ಕಾದಿತ್ತು.

ಕಛೇರಿಗೆ ಕಾಲಿಟ್ಟೊಡನೆಯೇ ಕಛೇರಿಯ ಸಿಬ್ಬಂಧಿಯೆಲ್ಲರೂ ಎರಡನೇ ಬಾರಿಗೆ ತಮ್ಮ ಯಜಮಾನರ ಜೀವವನ್ನು ಉಳಿದ ಬಗೆಯನ್ನು ಪರಿ ಪರಿಯಾಗಿ ಕೊಂಡಾದುತ್ತಿದ್ದರೂ ಇವರ ಮುಖದಲ್ಲಿ ಮಾತ್ರ ಕೊಂಚವೂ ನಗೆಯಿರದೆ ಇದ್ದ ಕೆಲಸಕ್ಕೆ ತಾನೇ ಕೈಯ್ಯಾರೆ ಗೋರಿ ತೋಡಿಕೊಂಡೆನಲ್ಲಾ.  ತನ್ನ ಪಾಡಿಗೆ ಸುಮ್ಮನಿದ್ದಿದ್ದರೆ ತಮ್ಮ ಕೆಲಸವೂ ಉಳಿದಿರುತ್ತಿತ್ತು. ಯಜಮಾನರ ಹಣೆಯಲ್ಲಿ ಬ್ರಹ್ಮ ಬರೆದ ವಿಧಿಯಂತೆ ಆಗುತ್ತಿತ್ತು ಎಂದು ಮನದಲ್ಲಿ  ನೆನೆಯುತ್ತಾ ಯಜಮಾನರ ಕರೆಯ ನಿರೀಕ್ಷೆಯಲ್ಲಿದ್ದಾಗ  ತಮ್ಮ ಸಹೋದ್ಯೋಗಿಯೊಬ್ಬರು ಯಜಮಾನರು ನಿಮ್ಮನ್ನು  ಭೇಟಿಯಾಗಲು ಕಾಯುತ್ತಿದ್ದಾರೆ ಬನ್ನಿ ಹೋಗೋಣ ಎಂದಾಗಲೇ ವಾಸ್ತವ ಪ್ರಪಂಚಕ್ಕೆ ಮರಳಿ ಅವರನ್ನು ಹಿಂಬಾಲಿಸಿದರು. ಯಜಮಾನರ ವಿಶಾಲ ಕೊಠಡಿಗೆ ಕಾಲಿಟ್ಟ ಕೊಡಲೇ ಮುಗಿಲು ಮುಟ್ಟುವ ಹಾಗೆ ಜೊರಾದ  ಚಪ್ಪಾಳೆ ಸದ್ದು  ಅವರನ್ನು ಆಶ್ಚರ್ಯ ಚಕಿತರನ್ನಾಗಿಸಿತ್ತು. ಅವರು ಬರುವ ಮುನ್ನವೇ ಪೂರ್ವ ಸಿದ್ಧತೆಂತೆ ಯಜಮಾನರಾದಿಯಾಗಿ  ಕಛೇರಿಯ ಬಹುತೇಕ ಸಿಬ್ಬಂಧಿ  ಅಲ್ಲಿದ್ದು ಅವರ ಬರುವಿಗೇ ಕಾಯುತ್ತಿದ್ದು ಅವರ ಸೇವೆಯನ್ನು ಕೊಂಡಾಡಿ ಅವರಿಗೆ ಹಾರ ತುರಾಯಿಗಳನ್ನು ಹಾಕಿ ಸನ್ಮಾನಿಸಿ ಮತ್ತೊಮ್ಮೆ ಫಲ ಪುಷ್ಗಗಳೊಂದಿಗೆ  ಎರೆಡು ಲಕೋಟೆಗಳನ್ನು ಕೊಟ್ಟು ಅದನ್ನು  ಆ ಕೂಡಲೇ ಅಲ್ಲಿಯೇ ನೋಡಲು ತಿಳಿಸಿದರು. ಎಲ್ಲರ ಆದರಾತಿತ್ಯಗಳಿಂದ ಮನಸ್ಸಂತೋಷಗೊಂಡಿತಾದರೂ ಕೆಲಸ ಹೋದ ದುಃಖದಲ್ಲಿ ಒಲ್ಲದ ಮನಸ್ಸಿನಿಂದ ಕೈಯಲ್ಲಿದ್ದ ಲಕೋಟೆಯನ್ನು ತೆಗೆದು ನೋಡಿದಾಗ ಎಲ್ಲಾ ದುಃಖಗಳೂ ಒಮ್ಮಿಂದೊಮ್ಮೆಲೆ ಮಾಯವಾಗಿ ತಮಗೇ ಅರಿವಿಲ್ಲದಂತೆಯೇ ತಮ್ಮ ಯಜಮಾನರಿಗೆ ಕೈ ಮುಗಿದು  ಕಾಲಿಗೆ ಎರಗಲು ಅನುವಾದಾಗ ಅದನ್ನು ತಡೆದ ಯಜಮಾನರು ಅವರನ್ನು ಆಲಂಗಿಸುತ್ತಾ , ಅವರನ್ನು ಅಲ್ಲಿಯೇ ಕುಳ್ಳರಿಸಿ ಎಲ್ಲರನ್ನು ಉದ್ದೇಶಿಸಿ ಮಾತಾನಾಡುತ್ತಾ , ಶ್ರೀಯುತರ *ಸ್ವಾಮಿಭಕ್ತಿಯನ್ನು ಅಪಾರವಾಗಿ ಕೊಂಡಾಡಿ* ಎಲ್ಲರೂ ಅದನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದಾಗ, ಶ್ರೀಯುತರ ಮನಸ್ಸು ನಿರಾಳವಾಗಿ, ಅವರ ಆನಂದಕ್ಕೆ  ಪಾರವೇ ಇಲ್ಲದೇ ಕಣ್ಣಿನಿಂದ ಆನಂದ ಭಾಷ್ಪ ಉಕ್ಕಿ ಹರಿಯಿತು. ಯಜಮಾನರು ತಮ್ಮ ಮಾತನ್ನು ಮುಂದುವರಿಸುತ್ತಾ,  *ಶ್ರೀಯುತರ  ಸ್ವಾಮಿಭಕ್ತಿ ಅನುಕರಣೀಯವಾದರೂ ಅವರ ಕರ್ತವ್ಯ ನಿಷ್ಠೆಯನ್ನು ಯಾರೂ  ಅನುಕರಿಸಬಾರದೆಂದು* ದಿಟ್ಟವಾಗಿ ಸ್ವಲ್ಪ ಎತ್ತದರ ಧ್ವನಿಯಲ್ಲಿ ಹೇಳಿದಾಗ ನೆರೆದಿದ್ದವರೆಲ್ಲರ ಮನದಲ್ಲಿ ಗೊಂದಲದ ವಾತಾವರಣ ಮೂಡಿತು. ಅದಕ್ಕೆ ಪ್ರತಿಯಾಗಿ ಯಜಮಾನರು ಶ್ರೀಯುತರು  ಅನೇಕ ವರ್ಷಗಳಿಂದ  ತಮ್ಮ ಮನೆ ಮತ್ತು ಕಛೇರಿಯಲ್ಲಿ ಭಧ್ರತಾ ಸಿಬ್ಬಂಧಿಯಾಗಿ  ಸೇವೆ ಸಲ್ಲಿಸುತ್ತಿರುವುದು ಎಲ್ಲರಿಗೂ ತಿಳಿದ ವಿಷಯವಾದರೂ ಅತ್ಯಂತ ಕುತೂಹಲಕಾರಿ ಸಂಗತಿಯೇನೆಂದರೆ ಪ್ರತೀ ಬಾರೀ ತಮ್ಮ ಮಗನ ಜೀವವನ್ನು ಕಾಪಾಡಿದಾಗಲೂ ಅವರು ರಾತ್ರಿಯ ಪಾಳಿಯ ಕೆಲಸಲ್ಲಿದ್ದು ಎರಡೂ ಬಾರಿಯೂ ಬೆಳಗಿನ ಜಾವವೇ ತಮ್ಮ ಮಗನನ್ನು ಎಚ್ಚರಿಸಿದ್ದರು. ಈ ರೀತಿಯಾಗಿ  ಅವಗಡ ಸಂಭವಿಸಿವುದು  ಅವರಿಗೆ ಹೇಗೆ ತಿಳಿಯುವುದು ಎಂಬುದನ್ನು ತಿಳಿಯುವ  ಕೂತೂಹಲವಾಗಿ ಅವರಿಗೇ ತಿಳಿಯದಂತೆ ಅವರ ಸಹೋದ್ಯೋಗಿಯನ್ನು ಅದರ ಕುರಿತು ತಿಳಿಯಲು ತಿಳಿಸಿದ್ದರು. ಅದೇ ರೀತಿ  ಆ ಸಹೋದ್ಯೋಗಿ ಶ್ರೀಯುತರನ್ನು  ಅಭಿನಂದಿಸಿ ಮಾತನಾಡುಸುತ್ತಾ   ನೀವೇನು ಜ್ಯೋತಿಷ್ಯ ಶ್ಯಾಸ್ತ್ರ ಕಲಿತಿದ್ದೀರಾ? ನಿಮಗೆ ಹೇಗೆ ಇದೆಲ್ಲಾ ತಿಳಿಯುತ್ತದೆ ಎಂದಾಗ ಮಾತಿನ ಭರದಲ್ಲಿ ಎರಡೂ ಬಾರಿ  ನನಗೆ ಸ್ವಪ್ನದಲ್ಲಿ  ಈ ವಿಷಯ ತಿಳಿದು ಬಂದ್ದಿದ್ದರಿಂದ ಯಜಮಾನರ ಜೀವವನ್ನು ಉಳಿದ್ದನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದು ಯಥಾವತ್ತಾಗಿ ಯಜಮಾನರಿಗೆ ತಿಳಿದಿತ್ತು.  ಹಗಲಿರಲಿ, ರಾತ್ರಿಯಿರಲಿ ಕೆಲಸದ ಸಮಯದಲ್ಲಿ ಕರ್ತ್ಯವ್ಯದ  ಕಡೆ ಸದಾ ಜಾಗೃತರಾಗಿರಬೇಕು.  *ಆ ಎರಡೂ ಬಾರಿ ಅವರು ರಾತ್ರಿಯ ಪಾಳಿಯಲ್ಲಿದ್ದು ಕೆಲಸದ ಸಮಯದಲ್ಲಿ ನಿದ್ರಿಸಿ ಕನಸು ಕಂಡು ಯಜಮಾನರ ಜೀವವನ್ನು ಉಳಿಸಿದರಾದರೂ  ಕರ್ತವ್ಯಕ್ಕೆ ಚ್ಯುತಿ ತಂದ ಪರಿಣಾಮವಾಗಿ* ಅವರನ್ನು  ಈ ತತ್ ಕ್ಷಣದಿಂದಲೇ ಕೆಲಸದಿಂದ ನಿವೃತ್ತಗೊಳಿಸುತ್ತಿದ್ದೇವೆ. ಆದರೆ *ಅವರ ಸ್ವಾಮಿ ಭಕ್ತಿಗೆ ಮೆಚ್ಚಿ*  ಆವರ ಬದಲಿಗೆ ಅವರ ಮಗನಿಗೆ ನಮ್ಮ ಕಛೇರಿಯಲ್ಲಿಯೇ ಅವನ ವಿದ್ಯಾಭ್ಯಾಸಕ್ಕೆ  ಅನುಗುಣವಾಗಿ ಕೆಲಸ ನೀಡುತ್ತಿದ್ದೇವೆ. ಇಂತಹ ಸ್ವಾಮಿ ಭಕ್ತಿಯುಳ್ಳ ಸಂಸ್ಕಾರವಂತ ಕುಟುಂಬದ ಸೇವೆ ನಮಗೆ ಅತ್ಯಾವಶ್ಯಕ. ಬಹುಶಃ  ಈ ಘಟನೆ ಅವರ ಮಗನನ್ನೂ ಒಳಗೊಂಡು ಇಡೀ ಕಚೇರಿಯ ಸಿಬ್ಬಂಧಿಗೆ ಕರ್ತವ್ಯ ನಿಷ್ಠೆಯ ಕುರಿತಾದ  ಒಂದು ರೀತಿಯ ನೀತಿ ಪಾಠ. ಇದನ್ನು ಅರಿತು ಎಲ್ಲರು ಚೆನ್ನಾಗಿ ಸ್ವಾಮಿ ಕಾರ್ಯ ಮತ್ತು ಸ್ವಾಕಾರ್ಯದಿಂದ  ಕಛೇರಿಯನ್ನೂ ಬೆಳೆಸುತ್ತಾ ತಾವೂ ಬೆಳೆಯಿರಿ ಎಂದು ತಿಳಿ ಹೇಳಿ,  ಶ್ರೀಯುತರು  ಈ ಇಳಿ ವಯಸ್ಸಿನಲ್ಲಿ ರಾಮ ಕೃಷ್ಣಾ ಗೋವಿಂದಾ ಎನ್ನುತ್ತಾ ಭಗವಂತನನ್ನು ನೆನೆಯುತ್ತಾ ತಮ್ಮ ಮುಂದಿನ ಜೀವವನ್ನು  ಮಗನ ಆಶ್ರಯದಲ್ಲಿ ನೆಮ್ಮದಿಯಿಂದ  ಕಳೆಯಲಿ  ಎಂದು ಹಾರೈಸಿ ತಮ್ಮ ಮಾತನ್ನು ಮುಗಿಸುತ್ತಿದ್ದಂತೆಯೇ ನೆರೆದಿದ್ದವರೆಲ್ಲರೂ ಎದ್ದು ನಿಂತು ತುಂಬು ಹೃದಯದಿಂದ ತಮ್ಮ ಯಜಮಾನರಿಗೆ ಅಭಿನಂದಿಸುತ್ತಾ ಅವರ ಇಚ್ಚೆಯಂತೆಯೇ ತಾವೆಲ್ಲರೂ ಕೆಲಸ ಮಾಡುವುದಾಗಿ ಭರವಸೆ ಇತ್ತರು.

ಈ ಕಥೆ, ಇಂದಿನ ಕಾಲದ ಯುವ ತರುಣ ತರುಣಿಯರು, ವರ್ಷ ಇಲ್ಲವೇ ಎರಡು ವರ್ಷಗಳು ಕಳೆಯುವುದರಲ್ಲಿಯೇ ಕಂಪನಿಯಿಂದ ಕಂಪನಿ ಬದಲಿಸುತ್ತ, ಕೆಲಸದ ಸಮಯದಲ್ಲಿ ಕೆಲಸದ ಬಗ್ಗೆ ಕೇಂದ್ರೀಕರಿಸದೆ ಮತ್ತೊಂದ್ದರ ಬಗ್ಗೆ ಆಲೋಚಿಸುತ್ತಾ ತಾವೂ ಬೆಳೆಯದೆ ಆಶ್ರಯ ನೀಡಿದ ಕಂಪನಿಯನ್ನೂ ಬೆಳೆಸದೆ ಕಾಲ ತಳ್ಳುವವರಿಗೆ ಎಚ್ಚರಿಕೆಯ ಗಂಟೆ ಎಂದು ಭಾವಿಸುತ್ತೇನೆ.

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: