ಕಳೆದ ಒಂದು ವಾರದಿಂದ ಕಛೇರಿಯಲ್ಲಿ ಬಹಳ ಕೆಲಸವಿದ್ದ ಕಾರಣ ರಾತ್ರಿ ಪಾಳಿ ಮುಗಿಸಿ ಇಂದು ಬೆಳಿಗ್ಗೆ ಮನೆಗೆ ಬಂದಾಗ ನಗು ಮುಖದಿಂದಲೇ ಸ್ವಾಗತಿಸಿದ ನನ್ನ ಮಡದಿ, ಜನ್ಮದಿನದ ಶುಭಾಶಯಗಳು ಎಂದು ಆತ್ಮೀಯವಾಗಿ ಹೇಳಿದಾಗ ಮನಸ್ಸಂತೋಷವಾಯಿತು.
ಆಶ್ವಯುಜ ಶುಧ್ಧ ಪಂಚಮಿ, ದಸರಾ ಹಬ್ಬದ ಐದನೆಯ ದಿನ, ಜನ್ಮ ತಿಥಿಯ ಪ್ರಕಾರ ನನ್ನ ಹುಟ್ಟಿದ ದಿನ. ಛೇ, ಕಳೆದ ವರ್ಷ ಇದೇ ಸಮಯದಲ್ಲಿ ನನಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಿ ಐದುನೂರರ ಎರಡು ನೋಟುಗಳನ್ನು ನನ್ನ ಜೋಬಿನಲ್ಲಿ ಇರಿಸಿ ಹೃದಯಪೂರ್ವಕವಾಗಿ ಆಶೀರ್ವದಿಸಿದ್ದ ನಮ್ಮ ತಂದೆಯವರು ಇಂದು ನಮ್ಮೊಂದಿಗೆ ಇಲ್ಲವಲ್ಲಾ, ಎಂದು ಯೋಚಿಸುತ್ತಿರುವಾಗಲೇ ಹೆಣ್ಣು ಕೊಟ್ಟ ಮಾವನವರು ಕಣ್ಣು ಕೊಟ್ಟ ದೇವರು ಅನ್ನುವ ಹಾಗೆ ನಮ್ಮ ಮಾವನವರು ಕರೆ ಮಾಡಿ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದಾಗ ಅಬ್ಬಾ ಒಬ್ಬ ಹಿರಿಯರ ಆಶೀರ್ವಾದವಾದರೂ ನನಗಿಂದು ಸಿಕ್ಕಿತಲ್ಲಾ ಎಂದು ಸಂತೋಷಗೊಂಡು, ಸ್ನಾನ ಸಂಧ್ಯಾವಂದನೆ ಮುಗಿಸಿ ಶಾಶ್ವತ ಪೂಜೆ ಕೊಟ್ಟಿರುವ ಗಣೇಶನ ದೇವಸ್ಥಾನಕ್ಕೆ ಹೋಗಿ, ಭಗವಂತನನಿಗೆ ಭಕ್ತಿ ಪೂರ್ವಕವಾಗಿ ನಮಿಸಿ ಪೂರ್ವ ನಿಯೋಜಿತ ಕಾರ್ಯಕ್ರಮಕ್ಕೆ ಒಂದಕ್ಕೆ ಹೋಗಿ ಬಂದು ಮಧ್ಯಾಹ್ನ ಊಟಕ್ಕೆ ಕುಟುಂಬ ಸಮೇತರಾಗಿ ಹೊರಗೆಲ್ಲಾದರಾರೂ ಹೋಗೋಣವೆಂದು ಸಿದ್ಧವಾಗುತ್ತಿರುವಾಗಲೇ ನಮ್ಮ ತಂದೆಯವರ ಆತ್ಮೀಯ ಸ್ನೇಹಿತರ ಆಗಮನ ನನ್ನ ಸಂತೋಷವನ್ನು ಇಮ್ಮಡಿಗೊಳಿಸಿತು. ಉಭಯ ಕುಶಲೋಪರಿ ವಿಚಾರಿಸಿ ಮುಂದಿನ ವಾರ ನಮ್ಮ ತಂದೆಯವರ ವರ್ಷಾಬ್ದಿಕದ ತಯಾರಿಯ ಬಗ್ಗೆ ವಿಚಾರಿಸಿ ನಾಲ್ಕಾರು ಹಿತವಚನಗಳನ್ನು ಹೇಳಿ ನಮ್ಮ ಆದರಾದಿತ್ಯವನ್ನು ಸ್ವೀಕರಿಸಿ ಹೊರಡಲನುವಾದಾಗ ನಾನು ಮತ್ತು ನಮ್ಮ ಶ್ರೀಮತಿಯವರು ಅವರ ಕೈಗೆ ಮಂತ್ರಾಕ್ಷತೆಯನ್ನು ಕೊಟ್ಟು ನಮಸ್ಕಾರ ಮಾಡಿದಾಗ, ಮನಸ್ಪೂರ್ವಕವಾಗಿ ಆಶೀರ್ವದಿಸಿದಾಗ ನನ್ನ ಮಡದಿ ಇವತ್ತು ನಮ್ಮ ಮನೆಯವರು ಹುಟ್ಟಿದ ದಿನ ನೀವು ನಮ್ಮ ಮಾನವನವರ ಹಾಗೆ ನಮ್ಮ ಮನೆಗೆ ಬಂದಿದ್ದು ನಮಗೆ ಅತೀ ಸಂತೋಷವಾಯಿತು ಎಂದಾಗ, ಅಯ್ಯೋ, ಛೇ, ನನಗೆ ಈ ವಿಷಯ ಗೊತ್ತೇ ಇರಲಿಲ್ಲವಲ್ಲಾ, ನಾನು ಸುಮ್ಮನೆ ಹಣ್ಣು ತರಕಾರಿಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದವನು, ಹೇಗೂ ಭಾನುವಾರ ಶ್ರೀಕಂಠ ಮನೆಯಲ್ಲಿ ಇದ್ದರೆ ಮಾತನಾಡಿಸಿಕೊಂಡು ಹೋಗಬಹುದೆಂದು ಏನೂ ತರದೇ ಬರೀ ಕೈಯಲ್ಲಿ ಬಂದ್ದಿದ್ದೀನಲ್ಲಾ ಎಂದು ಪರಿತಪಿಸಿ ಜೋಬಿನಿಂದ ನೋಟೋಂದ್ದನ್ನು ತೆಗೆದು ಇದು ನಿಮಗೆ ಅಕ್ಷಯವಾಗಲಿ ಎಂದು ಮತ್ತೊಮ್ಮೆ ಆಶೀರ್ವದಿಸಿ ಮನೆಗೆ ಹೊರಡಲನುವಾದಾಗ ನಾವೇ ಅವರನ್ನು ಮನೆಗೆ ಕಾರಿನಲ್ಲಿ ಬಿಟ್ಟುಅತ್ತೆ ಮಾವನವರನ್ನು ಊಟಕ್ಕೆ ಕರೆದೊಯ್ಯಲು ಅವರ ಮನೆಗೆ ಹೋದೆವು.
ಅವರ ಮನೆಗೆ ಹೋದ ತಕ್ಷಣವೇ ಅತ್ತೆ ಮಾವನವರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಹೊರಗಡೆ ಊಟ ಮಾಡಲು ಸಿದ್ಧವಾಗಿಯೇ ಇಲ್ಲವಲ್ಲಾ. ನಡೀರೀ ಈಗಾಗಲೇ ತಡವಾಗಿದೆ ಎಂದಾಗ, ಎಲ್ಲರೂ ಒಕ್ಕೊರಲಿನಿಂದ ಸರ್ಪ್ರೈಸ್ ಎಂದಾಗ ಕಕ್ಕಾಬಿಕ್ಕಿಯಾಗುವ ಸರದಿ ನನ್ನದಾಗಿತ್ತು.
ನಮ್ಮ ಅತ್ತೆಯವರ ಆರೋಗ್ಯ ಅಷ್ಟೊಂದು ಸರಿ ಇಲ್ಲದಿದ್ದರೂ, ಅಳಿಂದಿರ ಜನ್ಮದಿನದಂದು ನನಗೆ ಇಷ್ಟವಾದ ಒತ್ತು ಶ್ಯಾವಿಗೆ, ಗಸಗಸೆ ಪಾಯಸ, ಟೊಮೆಟೋ ಚೆಟ್ನಿ, ಪೂರಿ, ತಿಳಿ ಸಾರು, ಹೀಗೆ ಬಗೆ ಬಗೆಯಾದ ಅಡುಗೆಗಳನ್ನು ತಯಾರಿಸಿ ಅಚ್ಚುಕಟ್ಟಾಗಿ ಊಟದ ಮೇಜಿನ ಮೇಲೆ ಜೋಡಿಸಿಟ್ಡಿದ್ದನ್ನು ನೋಡಿ ನನಗೇ ಅರಿವಿಲ್ಲದೆಯೇ ಆನಂದ ಭಾಷ್ಪ ಸುರಿದು, ಗದ್ಗತನಾಗಿ ಗಂಟಲಿನಿಂದ ಮಾತೇ ಹೊರಡದಾಯಿತು. ಹಾಗೂ ಹೀಗೂ ಸಾವರಿಸಿಕೊಂಡು ಮನೆಯವರೆಲ್ಲರೂ ಒಟ್ಟಿಗೆ ಊಟ ಮಾಡಿದಾಗ ಆದ ಆನಂದ ಯಾವ ಪಂಚತಾರಾ ಹೋಟಲ್ಲಿನಲ್ಲೂ ಸಿಗದು ಎನ್ನುವಂತಾಗಿತ್ತು
ಈ ಹಿಂದೆ ಕುಟುಂಬ ಮತ್ತು ನರೆಹೊರೆಯವರ ನಡುವಿನ ಸಂಬಂಧಗಳನ್ನು ಬೆಸೆಯುವ ಒತ್ತು ಶ್ಯಾವಿಗೆ ಬಗ್ಗೆ ನಾನೇ ದೀರ್ಘವಾಗಿ ಬರೆದ ಪ್ರಬಂಧ ಎಲ್ಲರ ಮನಸ್ಸೆಳೆದಿತ್ತು. ಇತ್ತೀಚೆಗೆ ಮುಖಪುಟದಿಂದಲೇ ಪರಿಚಯವಾದ ಹಿರಿಯರೊಬ್ಬರ ಮನೆಗೆ ದಸರಾ ಬೊಂಬೆ ನೋಡಲು ಹೋದಾಗ ಅವರು ನನ್ನನ್ನು ಅವರ ಮನೆಯವರಿಗೆ ಪರಿಚಯಿಸಿದ್ದೇ ಇದೇ ಒತ್ತು ಶ್ಯಾವಿಗೆ ಲೇಖನದಿಂದಲೇ.
ಇಂದು ಕೈಯಲ್ಲಿ ಆಗದಿದ್ದರೂ ಶ್ಯಾವಿಗೆ ಎಳೆಗಳಂತೆ ಸಂಬಂಧ ಬೆಸೆಯುವ ,ಅದೇ ಒತ್ತು ಶ್ಯಾವಿಗೆಯನ್ನು ನಮ್ಮ ಅತ್ತೆಯವರು ನನಗಾಗಿ ಅಚ್ಚರಿಯಾಗಿ ತಯಾರಿಸಿದ್ದರು. ತಂದೆಯವರ ಮರಣಾ ನಂತರ ಹಲವು ದಿನಗಳಿಂದ ಬಾರದಿದ್ದ ನಮ್ಮ ತಂದೆಯವರ ಆತ್ಮೀಯ ಸ್ನೇಹಿತರು ಅವರಿಗೇ ಅರಿವಿಲ್ಲದಂತಯೇ ನಮ್ಮ ಮನೆಗೆ ಬಂದು ನಮ್ಮ ತಂದೆಯವರ ಸಂಪ್ರದಾಯವನ್ನು ಮುಂದುವರೆಸಿದ್ದರು.
ಇದನ್ನೇ ಹೇಳುವುದು ಸಂಬಂಧದ ಅನುಬಂಧ ಇದರ ಮುಂದೆ ಯಾವುದೇ ಬಾರೀ ಉಡುಗೊರೆಯಾಗಲೀ, ಭಕ್ಷ ಬೋಜನವಾಗಲೀ ಹೆಚ್ಚೆನಿಸದು
ಏನಂತೀರೀ?…