ಕರ್ಮಯೋಗಿ ಹಾಗೂ ಭಕ್ತಿಯೋಗಿ 

ಮಂಡ್ಯ ಜಿಲ್ಲೆಯ ಮೇಲುಕೋಟೆಯ ಚೆಲುವನಾರಾಯಣ ಸ್ವಾಮಿ  ಜಗದ್ವಿಖ್ಯಾತವಾದ  ದೇವಾಲಯ.  ಆಚಾರ್ಯ ತ್ರಯರಲ್ಲಿ ಒಬ್ಬರಾದ ಶ್ರೀ ರಾಮಾನುನುಜಾಚಾರ್ಯರ ಆರಾಧ್ಯ ದೈವವೂ ಹೌದು.  ಪ್ರತಿನಿತ್ಯ ನೂರಾರೂ ಮತ್ತು  ವಾರಾಂತ್ಯದಲ್ಲಿ ಸಾವಿರಾರು ಮತ್ತು ವಿಶೇಷ ದಿನಗಳಲ್ಲಿ ಅದರಲ್ಲೂ ವೈರಮುಡಿ ಉತ್ಸವದ ಸಮಯದಲ್ಲಿ  ಲಕ್ಷಾಂತರ ಭಕ್ತಾದಿಗಳು ಸೇರುವ ಸ್ಥಳವಾಗಿದೆ.  ಕಡಿದಾದ ಬೆಟ್ಟದ ತುದಿಯಲ್ಲಿ  ಕಟ್ಟಿರುವ ದೇವಾಲಯ ನಿಜಕ್ಕೂ ಅಂದಿನ ದಿನದ ವಾಸ್ತುಪಂಡಿತರ ಮತ್ತು ಕುಶಲ ಕರ್ಮಿಗಳ  ಅಧ್ಭುತ ಪರಿಣಿತಿಯ ದ್ಯೋತಕವಾಗಿದೆ.  ಸುಮಾರು 300 ರಷ್ಟು ಕಡಿದಾದ ಎತ್ತರದ ಮೆಟ್ಟುಲುಗಳ ದೇವಾಲಯ ಸಾಮಾನ್ಯ ಆರೋಗ್ಯವಂತರಿಗೂ ಹತ್ತುವುದು ತುಸು ಕಷ್ಟವೇ ಸರಿ.

ಆದರೆ ಈ ಕೆಳಗಿನ ಚಿತ್ರದಲ್ಲಿರುವ ಶ್ರೀಯುತ ರಾಮಯ್ಯುಂಗಾರರು ಪ್ರತಿನಿತ್ಯ  ಶುಭ್ರವಾಗಿ ಮಡಿಯುಟ್ಟು  ದೇವರ ಅಭಿಷೇಕಕ್ಕೂ ಮತ್ತು ನೈವೇದ್ಯಕ್ಕೂ ಅಗತ್ಯವಾದ ನೀರನ್ನು   ಕೆಳಗಿನ ಕೊಳದಿಂದ ತಲೆಯ ಮೇಲೆ  ಭಾರವಾದ ಹಿತ್ತಾಳೆಯ ಪಾತ್ರೆಯಲ್ಲಿ ಈ ಎಪ್ಪತ್ತರ ಇಳಿ ವಯಸ್ಸಿನಲ್ಲೂ ಹೊತ್ತು ಸಾಗುವುದನ್ನು ನನ್ನ ಸ್ನೇಹಿತನೊಬ್ಬ ಈ ಹಿಂದೆ ಮುಖಪುಟದಲ್ಲಿ ಹಾಕಿದ್ದಾಗ, ನನಗರಿವಿಲ್ಲದಂತೆಯೇ “ಹೊಟ್ಟೆಯ ಪಾಡಿಗೆ ಏನೇನು ಮಾಡಬೇಕೋ, ಛೇ, ಅಯ್ಯೋ ಪಾಪ” ಎಂದು ನಾನೇ ವ್ಯಾಖ್ಯಾನಿಸಿದ್ದು ನಂತರ ಕೆಲವು ಸ್ನೇಹಿತರು ಅದಕ್ಕೆ ಪರ ಮತ್ತು ವಿರೋಧವಾಗಿ ಚರ್ಚೆಯೂ ನಡೆಸಿದ್ದಾಗಿತ್ತು. ಅಂದಿನಿಂದ ಕುತೂಹಲಿತನಾಗಿ  ಅವರನ್ನು  ವಯಕ್ತಿಕವಾಗಿ ಭೇಟಿ ಮಾಡಲೇ ಬೇಕೆಂದು ಧೃಡ ಸಂಕಲ್ಪ ಮಾಡಿದ್ದೆನಾದರೂ, ತೇನ ವಿನಾ ತೃಣಮಪಿ ನಚಲತಿ ಎನ್ನುವಂತೆ ಆ ಭಗವಂತ ತನ್ನ ಬಳಿ ತಾನಾಗಿಯೇ  ನಮ್ಮನ್ನು ಕರೆಸಿಕೊಳ್ಳುವವರೆಗೂ  ಅದು ಸಾಧ್ಯವಾಗಿರಲಿಲ್ಲ. ಕಳೆದ ವಾರದ  ಧೀರ್ಘ ವಾರಾಂತ್ಯದಲ್ಲಿ ನನಗೂ ಮತ್ತು ನಮ್ಮ ಮಕ್ಕಳಿಗೆ ರಜೆ ಇದ್ದ ಕಾರಣ ಹಾಗೂ ಹೊಸದಾಗಿ ಕೊಂಡುಕೊಂಡಿದ್ದ ವಾಹನದ ದೂರ ಪ್ರಯಾಣದ ಸವಿಯನ್ನು ಪಡೆಯದಿದ್ದ ಕಾರಣ ಮತ್ತು  ರಾಷ್ಟ್ರೀಯ ಹೆದ್ದಾರಿ 48 ರ  ರಸ್ತೆ ಅತ್ಯುತ್ತಮವಾಗಿದ್ದ ಕಾರಣ ಎಲ್ಲವೂ ಒಗ್ಗೂಡಿ ಬೆಳಿಗ್ಗೆಯೇ ಇತರೇ ವಾಹನಗಳು ರಸ್ತೆಗಳಿಗೆ ಇಳಿಯುವ ಮುನ್ನವೇ ಬೆಂಗಳೂರಿಂದ ಮೇಲುಕೋಟೆಗೆ ನಮ್ಮ ಸವಾರಿ ಹೊರಟೇ ಬಿಟ್ಟಿತು. ಹೊಸ ವಾಹನದ ಪ್ರಭಾವವೋ ರಸ್ತೆಯ ಪ್ರಭಾವವೋ, ದೇವರನ್ನು ಕಾಣುವ ನಮ್ಮ ಉತ್ಕಟ ಬಯಕೆಯೋ ಕಾಣೆ ಸುಮಾರು ಎರಡು ಗಂಟೆಗೆಳಲ್ಲಿಯೇ ಮೇಲುಕೋಟೆ ತಲುಪಿ ಪೂಜಾಸಾಮಗ್ರಿಗಳನ್ನೆಲ್ಲಾ ಕೊಂಡು ದೇವಸ್ಥಾನದ ಮೆಟ್ಟಿಲುಗಳನ್ನು  ಸ್ವಲ್ಪ ತ್ರಾಸ ಪಟ್ಟು  ಹತ್ತಿ  ನೋಡಿದರೆ, ದೇವಾಲಯವೇ ಇನ್ನೂ  ಭಕ್ತಾದಿಗಳಿಗೆ ತೆರೆದಿರಲಿಲ್ಲ. ಪೂಜಿಸಲೆಂದೇ ಅಲ್ಲಿಂದ ಬಂದೆ, ದರುಶನ ನೀಡೋ ಹೇ ತಂದೇ, ಎಂದು ಮನದಲ್ಲೇ ನೆನೆಯುತ್ತಾ ಕೈಯಲ್ಲಿದ್ದ ಹೂವು, ಹಣ್ಣು ಮತ್ತು ಕಾಯಿಗಳನ್ನು ಅಸಂಖ್ಯೆಯಲ್ಲಿದ್ದ  ಕಪಿ ಸೈನ್ಯಗಳ  ದೃಷ್ಟಿಯಿಂದ ತಪ್ಪಿಸುತ್ತಾ ,  ಕಪಿಗಳ ಆರಿವಿಲ್ಲದೆ  ಕೈಯಲ್ಲಿದ್ದ ಹಣ್ಣುಕಾಯಿ ಬುಟ್ಟಿಯನ್ನು  ವಾನರ ಸೈನ್ಯ ಕಿತ್ತುಕೊಂಡಾಗ ಮತ್ತು ಕೆಲವು ಹೆಣ್ಣು ಮಕ್ಕಳು ಮುಡಿದಿದ್ದ ಮಲ್ಲಿಗೆ ಹೂವನ್ನು ಮಂಗಗಳು ಎಗರಿಸುತ್ತಿದ್ದಾಗ,  ಅವರೆಲ್ಲರ ಚೀರಾಟಕ್ಕೆ ಮಮ್ಮಲ ಮರುಗುತ್ತಾ ಬೆಟ್ಟದ ತುದಿಯಿಂದ ಕೆಳಗಿನ ಜಗದ್ವಿಖ್ಯಾತ  ಕಲ್ಯಾಣಿ,  ಹಾಗೂ ಊರಿನ ರಮಣೀಯ ದೃಶ್ಯಗಳನ್ನು ಸವಿಯುತ್ತ ಸರದಿಯಲ್ಲಿ ನಿಂತಿರುವಾಗ ಅರ್ಚಕರುಗಳು ಬಂದು ದೇವಾಲಯದ ಬಾಗಿಲನ್ನು ತೆಗೆದು  ನಮ್ಮೆಲ್ಲರಿಗೂ ಯೋಗಾನರಸಿಂಹನ ದರ್ಶನವನ್ನು ಕಣ್ತುಂಬ ನೋಡುವ ಅವಕಾಶವಿತ್ತರು. ಸಕುಟುಂಬ ಸಮೇತನಾಗಿ ಸಂಗೋಪಾಂಗವಾಗಿ ದೇವರ ದರ್ಶನವಾಗಿ  ತೀರ್ಥ, ಪ್ರಸಾದವೆಲ್ಲಾ ಮುಗಿದು ದೇವಾಲಯದಿಂದ ಹೊರಬಂದರೂ ನನ್ನ ಕಣ್ಣುಗಳು ಶ್ರೀಯುತ ರಾಮಯ್ಯಂಗಾರರನ್ನೇ ಹುಡುಕುತ್ತಿತ್ತು. ನನ್ನ ಸುದೈವವೋ ಎನ್ನುವಂತೆ ಸುಮಾರು ಮುಕ್ಕಾಲು ಮೆಟ್ಟಿಲುಗಳನ್ನು ಇಳಿಯುತ್ತಿದ್ದಾಗ ಕೆಳಗಿನಿಂದ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಶ್ರೀಯುತರು ನನ್ನ ಕಣ್ಣಿಗೆ ಕಾಣಿಸಿದಾಗ ನನಗೆ ದೇವರನ್ನು ಕಂಡಾಗ ಆಗಿದ್ದಕ್ಕಿಂತಲೂ  ಹೆಚ್ಚಿನ ಆನಂದವಾಯಿತು  ಎಂದರೆ ಅತಿಶಯೋಕ್ತಿಯೇನಲ್ಲ.  ಅಲ್ಲಿಯೇ ಕುಟುಂಬದವನ್ನು ನಿಲ್ಲಿಸಿ, ದಡ ದಡನೆ ಮೆಟ್ಟಿಲುಗಳನ್ನು ಇಳಿದು ಅವರ ಬಳಿ ಬಂದು ಸ್ವಾಮಿ ನಮಸ್ಕಾರ ಎಂದೆ.  ಅವರೂ ಸಹಾ ನಮಸ್ಕಾರ ಎಂದು ಪ್ರತಿವಂದಿಸಿದರಾದರೂ ಅವರ ಮುಖಚರ್ಯೆಯಲ್ಲಿ ಯಾರೀ ಅಪರಿಚಿತ ವ್ಯಕ್ತಿ ಎಂಬ ಭಾವ ಗೋಚರಿಸುತ್ತಿತ್ತು.

ಸ್ವಾಮಿ, ನಿಮಗೆ ನನ್ನ ಪರಿಚಯವಿಲ್ಲ. ಆದರೆ ನಿಮ್ಮನ್ನು ನನ್ನ ಸ್ನೇಹಿತ ನನಗೆ ಪರೋಕ್ಷವಾಗಿ ಪರಿಚಯಿಸಿದ್ದಾನೆ ಎಂದಾಗ, ಓಹೋ ಹಾಗೋ, ನನ್ನನ್ನು ಹಲವು ವೃತ್ತ ಪತ್ರಿಕೆಗಳು ಮತ್ತು ದೃಶ್ಯಮಾಧ್ಯಮಗಳು ಈಗಾಗಲೇ ಸಂದರ್ಶಿಸಿ ನಾಡಿನಾದ್ಯಂತ ನನ್ನನ್ನು ಪರಿಚಯ ಮಾಡಿಸಿ ಬಿಟ್ಟಿದ್ದಾರೆ ಎಂದು ಧನ್ಯತಾ ಭಾವದಿಂದ ನಗೆ ಚೆಲ್ಲಿದರು. ನಂತರ ಯಾವ ಊರು? ಎಲ್ಲಿಂದ ಬಂದಿದ್ದೀರಿ? ಯಾರು ಯಾರು ಬಂದಿದ್ದೀರೀ ಎಂದು ಕುಶಲೋಪರಿಯನ್ನು ಅವರೇ ಶುರು ಮಾಡಿಕೊಂಡಾಗ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿ ನನ್ನ ಪ್ರವರಗಳನ್ನೆಲ್ಲಾ ಹೇಳಿ, ಸದ್ಯಕ್ಕೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಕುಟುಂಬ ಸಮೇತ ವಾಸಿಸುತ್ತಿರುವುದಾಗಿ ತಿಳಿಸಿ ಇಡಿ ಕುಟುಂಬವನ್ನು ಅವರಿಗೆ ಪರಿವಯಿಸಿದೆ. ಇಡಿ ನಮ್ಮ ಕುಟುಂಬವದ ಮೇಲೆ  ಚೆಲುವನಾರಾಯಣ ಅನುಗ್ರಹ ಸದಾಕಾಲವೂ ಇರಲಿ ಎಂದು ಹಾರೈಸಿ,   ಓಹೋ ನೀವೂ ಕೂಡಾ ನಮ್ಮ ಊರಿನವರೇ,  ನಮ್ಮವರೇ ಎಂದು ಉದ್ಗಾರ ತೆಗೆದಾಗ ನನಗಾಶ್ವರ್ಯ.  ಬೆಂಗಳೂರಿನ ವಿದ್ಯಾರಣ್ಯಪುರದ ದುರ್ಗಾಪರಮೇಶ್ವರಿ ದೇವಾಲಯದ ಹಿಂದಿನ ಬಡಾವಣೆಯಲ್ಲಿ ಅವರದ್ದೂ ಮತ್ತು ಅವರ ಸಹೋದರಿಯ ಸ್ವಂತ ಮನೆ ಇದೆ  ಎಂದು ತಿಳಿಸಿ ಲೋಕಾಭಿರಾಮವಾಗಿ ಅಲ್ಲಿನ ಪ್ರಸಕ್ತ ಸ್ಥಿತಿಗತಿಗಳನ್ನೂ, ಇಂದಿನ ನಿವೇಶನಗಳ ಬೆಲೆಯನ್ನು  ಅವರು ಕೊಂಡು ಕೊಂಡ ಬೆಲೆಗೆ ತಳುಕು ಹಾಕುತ್ತಾ ಎಲ್ಲ ಮಧ್ಯಮವರ್ಗದವರ ರೀತಿಯೇ ನನಗೆ ಕಂಡರು .  ಅಷ್ಟು ಹೇಳಿದಾಕ್ಷಣವೇ ನನಗೆ ಅವರೊಂದಿಗೆ ಸ್ವಲ್ಪ ಸಲುಗೆಯಾಗಿ ನನ್ನ ಸಂಸ್ಕೃತ ಮತ್ತು ವೇದಾಧ್ಯಯನದ ಮೊದಲ ಗುರುಗಳಾದ ಮೇಲುಕೋಟೆಯವರೇ ಆದ ಕೀರ್ತಿಶೇಷ ಶ್ರೀ ಸಂಪತ್ ಅಯ್ಯಂಗಾರ್ ಮತ್ತು ಅವರ ಸಹೋದರಾದ ಶಡಗೋಪನ್ ಮತ್ತು ಗೋವಿಂದ ರಾಜು ಅವರ ಬಗ್ಗೆ  ಮತ್ತವರ ಕುಟುಂಬದ ಬಗ್ಗೆ  ವಿಚಾರಿಸಿದಾಗ  ಅವರು ನನಗೇ ಮತ್ತೂ  ಆತ್ಮೀಯರಾಗಿ ಅವರೆಲ್ಲರ ಬಗ್ಗೆಯೂ ತಿಳಿಸುತ್ತಾ ನಮ್ಮ ಗುರುಗಳು ವೈರಮುಡಿ ಸಮಯದಲ್ಲಿ ಅಹೋಬಲ ಮಠದಲ್ಲಿ ಮಾಡುತ್ತಿದ್ದ  ಪ್ರವಚನಗಳನ್ನು ನೆನೆದು ಸ್ವಲ್ಪ ಕಾಲ ಗದ್ಗದಿತರಾದರು.  ಹಾಗೆಯೇ ಮಾತನಾಡುತ್ತಾ  ಪ್ರತಿದಿನ ಎಂಟು ಹತ್ತು ಬಾರಿ ಕೆಳಗಿನಂದ ಮೇಲಕ್ಕೆ  ನೀರನ್ನು ತೆಗೆದು ಕೊಂಡು ಹೋಗುವುದಾಗಿ ತಿಳಿಸಿ ವಿಶೇಷ ದಿನಗಳಲ್ಲಿ ಅದು ಇನ್ನೂ ಹೆಚ್ಚಾಗ ಬಹುದು ಎಂದರು.

ಅವರು ಈ  ಎಪ್ಪತ್ತರ ಇಳಿ ವಯಸ್ಸಿನಲ್ಲಿ ಜೀವನ ನಡೆಸುವುದಕ್ಕೆ ಯಾವುದೇ ರೀತಿಯ ಆರ್ಥಿಕ ತೊಂದರೆ ಇಲ್ಲದಿದ್ದರೂ,  ಕೇವಲ ದೇವರ ಮೇಲಿನ ಆನನ್ಯ ಭಕ್ತಿಯಿಂದ ಈ ಮಹತ್ಕಾರ್ಯವನ್ನು  ಮಾಡುತ್ತಿರುವುದು ನನಗೆ ಅರಿವಾಗಿ ನಾನೇ ಅವರ ಬಗ್ಗೆ ತಿಳಿಯದೆ, “ಉದರ ನಿಮಿತ್ತ ಬಹುಕೃತ ವೇಷಂ” ಎಂದು ಮುಖ ಪುಟದಲ್ಲಿ ಹೇಳಿದ್ದಕ್ಕಾಗಿ  ಪಶ್ವಾತ್ತಾಪವಾಗಿ  ಅವರ ಬಳಿ  ನನ್ನಿಂದಾಗಿ ಅರಿಯದೆ ಆದ ತಪ್ಪಿಗೆ  ಕ್ಷಮೆಯನ್ನು ಕೋರಿ, ಮನಸ್ಸನ್ನು ಹಗುರ ಮಾಡಿಕೊಂಡೆ.  ಶ್ರೀಯುತರಿಗೆ  ಅವರು ಮಾಡುತ್ತಿರುವ ಕಾಯಕದಲ್ಲಿ ಯಾವುದೇ ರೀತಿಯ ಸಂಕೋಚವಿಲ್ಲದೆ  ಹೆಚ್ಚಿನ  ಆರ್ಥಿಕ ಪರಿಣಾಮಗಳನ್ನು ಯೋಚಿಸದೆ,  ಕೇವಲ ಭಗವಂತನ ಸೇವೆ ಮಾಡುವ ಅವಕಾಶವಿದೆಯಲ್ಲಾ ಎಂದು ಧನಾತ್ಮಕವಾಗಿ ಆಲೋಚಿಸುತ್ತಿರುವ ಪರಿಣಾಮವಾಗಿ ಅವರು ಮಾಡುತ್ತಿರುವ ಎಲ್ಲಾ ಕೆಲಸ ಕಾರ್ಯಗಳೂ ಸುಲಭ ಸಾದ್ಯವಾಗಿದೆ.  ಹಾಡುತ್ತಾ ಹಾಡುತ್ತಾ ರಾಗ ಎನ್ನುವಹಾಗೆ ಪ್ರತಿದಿನವೂ ಅದೇ ಮೆಟ್ಟಿಲುಗಳನ್ನು ನಿಶ್ಕಲ್ಮಶ ಮನಸ್ಸಿನಿಂದ ಧೃಡ ಸಂಕಲ್ಪದಿಂದ ಭಗಂತನನ್ನು ನೆನೆಯುತ್ತಾ ಹತ್ತುತ್ತಿರುವುದರಿಂದ ಅವರಿಗೆ  ಅದು ಅಭ್ಯಾಸಗತವಾಗಿ ಹೋಗಿ ತಲೆಯ ಮೇಲಿರುವ ಭಾರವೂ ಅರಿವಾಗದೆ ಭಗವಂತನ ಸೇವೆಯನ್ನು ಮಾಡಲು ಸಾಧ್ಯವಾಗಿದೆ. ಈ ಜೀವ ಇರುವವರೆಗೂ ಆ ಭಗವಂತನ ಸೇವೆಯನ್ನು ಮಾಡುತ್ತಲೇ ಇರುವೆ ಎಂದು ಅವರು ಹೇಳುವಾಗ ಅವರ ಕಣ್ಣುಗಳಲ್ಲಿದ್ದ  ಕ್ಷಾತ್ರ ತೇಜವನ್ನು  ವರ್ಣಿಸಲಸದಳ ಮತ್ತು  ಅದನ್ನು  ಪ್ರತ್ಯಕ್ಷವಾಗಿ ನೋಡಿಯೇ  ತೀರಬೇಕಷ್ಟೇ.

ನಾನು ಈಗಾಗಲೇ ಹತ್ತು ಹಲವು ಬಾರಿ ಹೇಳಿದಂತೆ,

ಭಕ್ತಿ ಎನ್ನುವುದು ವ್ಯಾಪಾರವಲ್ಲ ,  ಅದು ಪ್ರದರ್ಶನಕ್ಕಿಟ್ಟ ವಸ್ತುವಲ್ಲ. ಅಂಧಾನುಕರಣೆಯಂತೂ ಅಲ್ಲವೇ ಅಲ್ಲ.

ಅದು ನಮ್ಮಲ್ಲಿಯೇ ಭಗವಂತನನ್ನು ಕಾಣುವ ಪರಿ. ನಮ್ಮನ್ನೇ ನಾವು ಅರಿತು ಬಾಳುವ ಸರಿದಾರಿ.

ಉತ್ಕಟ ಭಕ್ತಿಯ ಮೂಲಕ ನಮ್ಮೊಳಗೇ ಭಗವಂತನನ್ನು ಸಾಕ್ಷಾತ್ಕಾರಗೊಳಿಸಿ,

ಯಾವುದೇ ಸಬೂಬು ಹೇಳದೆ ಭಗವಂತನನ್ನು ಒಲಿಸಿಕೊಳ್ಳುವ ಪರಿ.

ಈ ವಾಕ್ಯಗಳನ್ನು ಅಕ್ಷರ ಸಹಾ ಪಾಲಿಸುತ್ತಿರುವ ಇಂತಹ

ಭಗವಂತನು ಇನ್ನೂ ಹೆಚ್ಚಿನ ಆಯಸ್ಸು  ಮತ್ತು ಆರೋಗ್ಯ ನೀಡಿ  ಆಡಷ್ಟೂ ಸಮಯ ಅವನ ಸೇವೆಯನ್ನು ಮಾಡುವ ಅವಕಾಶ ಅವರಿಗೆ ನೀಡಲಿ ಎಂದಷ್ಟೇ ನಾವುಗಳು ಕೇಳಿಕೊಳ್ಳಬಹುದು.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s