ಸುಮಾರು ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಒಬ್ಬ ಆಸ್ತಿಕ ಮಹಾಶಯರು ಬೆಂಗಳೂರಿನಿಂದ ತಿರುಪತಿ ವೇಂಕಟರಮಣನನ್ನು ದರ್ಶನ ಮಾಡಲು ನಿರ್ಧರಿಸಿದರು. ಆವತ್ತಿನ ಕಾಲದಲ್ಲಿ ಇಂದಿನಂತೆ ಮೋಟಾರು ವಾಹನಗಳು ಇನ್ನೂ ಹೆಚ್ಚಿನ ಪ್ರಚಲಿತವಿಲ್ಲದಿದ್ದ ಕಾರಣ, ಎತ್ತಿನ ಗಾಡಿಯಲ್ಲಿಯೇ ಹೋಗಲು ನಿರ್ಧರಿಸಿ ಸಕಲ ಸಿದ್ಢತೆಗಳೊಂದಿಗೆ ಒಳ್ಳೆಯ ಮಹೂರ್ತ ನೋಡಿ ಕುಟುಂಬ ಸಮೇತರಾಗಿ ಗಾಡಿಯಲ್ಲಿ ಹೊರಟೇ ಬಿಟ್ಟರು. ಬಹಳ ಅನುಷ್ಟಾಂತರಾದ ಶ್ರೀಯುತರು ಮಾರ್ಗದ ಬದಿಯಲ್ಲಿಯೇ ಇರುತ್ತಿದ್ದ ಅರವಟ್ಟಿಗೆಗಳಲ್ಲಿ ತಂಗಿ, ಅಲ್ಲಿಯೇ ಅಡುಗೆ ಮಾಡಿಕೊಂಡು ತಮ್ಮ ಪ್ರಯಾಣ ಮುಂದುವರಿಸಿದ್ದರು. ಸುಮಾರು ಹದಿನೈದು ಇಪ್ಪತ್ತು ದಿನಗಳ ಪ್ರಯಾಣದ ಮದ್ಯದಲ್ಲಿ ತಮ್ಮ ಜೊತೆಯಲ್ಲಿ ತಂದಿದ್ದ ಕುಡಿಯವ ನೀರು ಖಾಲಿಯಾಗಿ ಹತ್ತಿರದಲ್ಲಿ ಎಲ್ಲಾದರೂ ನೀರು ಸಿಗುತ್ತದೆಯೇ ಎಂದು ನೋಡುತ್ತಿರುವಾಗ ದೂರದಲ್ಲಿ ಒಬ್ಬ ರೈತ ತನ್ನ ಬಾಳೇತೋಟಕ್ಕೆ ತನ್ನ ಭಾವಿಯಿಂದ ನೀರು ತೆಗೆದು ಏತ ನೀರಾವರಿ ಮೂಲಕ ನೀರುಣಿಸುತ್ತಿದ್ದನ್ನು ಕಂಡು ಮರುಭೂಮಿಯಲ್ಲಿ ನೀರು ಕಂಡಾಗ ಸಂತಸ ಪಡುವಂತೆ ಸಂತೋಷ ಪಟ್ಟು, ಆ ರೈತನ ಬಳಿ ಹೋಗಿ ಅಯ್ಯಾ, ಪ್ರಯಾಣದ ಆಯಾಸದಿಂದ ಬಳಲಿದ್ದೇನೆ. ದಯವಿಟ್ತು ಕುಡಿಯಲು ಸ್ವಲ್ಪ ನೀರನ್ನು ಕೊಡುವೆಯಾ ಎಂದಾಗ, ಆತ ಅಯ್ಯೋ ಸಾಮ್ಯಾರ? ಕುಡಿಯುವ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ?. ದಾರಾಳವಾಗಿ ಮನಸೋ ಇಚ್ಚೆ ಕುಡಿಯಿರಿ ಎಂದ. ಅಲ್ಲಿಯೇ ಸಮೀಪದಲ್ಲಿದ್ದ ಆಲದ ಮರದ ಬುಡದಲ್ಲಿ ತಂದಿದ್ದ ಬುತ್ತಿಯನ್ನು ಆ ರೈತನೊಂದಿಗೆ ಹಂಚಿಕೊಂಡು ತಿಂದು, ಹೊಟ್ಟೆ ತುಂಬ ನೀರನ್ನು ಕುಡಿದು, ಮುಂದಿನ ಪ್ರಯಾಣಕ್ಕೆ ಬೇಕಾಗುವಷ್ಟು ನೀರನ್ನು ತುಂಬಿಸಿಕೊಂಡು , ಮರದಡಿಯಲ್ಲಿ ಬೀಸುತ್ತಿದ್ದ ತಂಗಾಳಿಗೆ ಮನಸೋತು ಸ್ವಲ್ಪ ಕಾಲ ವಿರಮಿಸುತ್ತಾ ರೈತನೊಂದಿಗೆ ಲೋಕಾಭಿರಾಮವಾಗಿ ಮಾತಿಗಿಳಿದರು. ಹಾಗೆಯೇ ಮಾತು ಮುಂದುವರೆಯುತ್ತಿದ್ದಾಗ ತಿರುಮಲನ ದರ್ಶನಕ್ಕೆ ಹೋಗುತ್ತಿರುವುದನ್ನು ಕೇಳಿದ ರೈತ, ಸ್ವಾಮೀ, ಆ ಏಳುಕೊಂಡಲವಾಡನ ನೋಡುವ ಭಾಗ್ಯ ನನಗೆಂದು ದೊರಕುವುದೋ ನಾಕಾಣೆ, ದಯವಿಟ್ಟು ನನ್ನದೊಂದು ಸಣ್ಣ ಕೋರಿಕೆಯನ್ನು ನೆರವೇರಿಸುವಿರಾ ಎಂದು ವಿನಮ್ರದಿಂದ ಕೇಳಿದನು. ಹೇಗೂ ಗಾಡಿಯಲ್ಲಿ ಪ್ರಯಣಿಸುತ್ತಿದ್ದೀರಿ ನಾನು ಎರಡು ಕಾಯಿ ಬಾಳೇಹಣ್ಣುಗಳ ಗೊನೆಯನ್ನು ನಿಮಗೆ ಕೊಡುತ್ತೇನೆ. ನೀವು ಅಲ್ಲಿಗೆ ತಲುಪವ ಹೊತ್ತಿಗೆ ಮಾಗಿರುತ್ತದೆ. ದಯವಿಟ್ಟು ನನ್ನ ಪರವಾಗಿ ಶ್ರೀನಿವಾಸನಿಗೆ ಸಮರ್ಪಿಸಿ ಬಿಡಿ ಎಂದನು. ದೇವರಿಗೆ ಭಕ್ತರ ಕಾಣಿಕೆ ಕೊಡುವುದನ್ನು ಇಲ್ಲವೆನ್ನಲಾಗದೆ, ಸಾಮಾನುಗಳು ತುಂಬಿದ್ದ ಗಾಡಿಯಲ್ಲಿ ಬಾಳೇಗೊನೆಗೆ ಸ್ವಲ್ಪ ಜಾಗ ಮಾಡಿ ಪ್ರಯಾಣ ಮುಂದುವರೆಸಿದರು. ಹೀಗೇ ನಾಲ್ಕೈದು ದಿನಗಳು ಕಳೆದು ಬಿಸಿಲಿನ ಝಳಕ್ಕೋ ಏನೂ ಗಾಡಿಯಲ್ಲಿಟ್ಟಿದ್ದ ಬಾಳೇಗೊನೆ ಪಕ್ವವಾಗಿ ಮಾಗಿ ಗೊನೆಯಿಂದ ಒಂದೊಂದಾಗಿ ಹಣ್ಣುಗಳು ಉದರ ತೊಡಗಿದವು. ಆ ಶ್ರೀಹರಿಗೆ ನೈವೇದ್ಯ ತಲುಪಿಸುವ ರೈತನ ಅಭೀಷ್ಟೆಗಳನ್ನು ಮನಗೊಂಡು ಚೆನ್ನಾಗಿ ಹಣ್ಣಾಗಿ ಬಿದ್ದ ಹಣ್ಣುಗಳನ್ನು ಬಿಸಾಡಲು ಮನಸ್ಸುಬಾರದೇ, ಭಗವಂತಾ ಈ ಹಣ್ಣು ನಿನಗೇ ಸಮರ್ಪಿತವಾಗಲಿ, ರೈತನ ಇಷ್ಟಾರ್ಥಗಳು ಪೂರೈಸು ಎಂದು ಬೇಡಿಕೊಳ್ಳುತ್ತಾ ಬಾಳೇ ಹಣ್ಣುಗಳನ್ನು ತಾವೇ ತಿನ್ನುತ್ತಾ ಪ್ರಯಾಣ ಮುಂದುವರೆಸಿ, ಸಪ್ತಗಿರಿಯನ್ನು ದಾಟಿ ತಿರುಪತಿಗೆ ತಲುಪಿದಾಗ ಏರಡೂ ಗೊನೆಗಳಲ್ಲಿ ಕೇವಲ ಎರಡೆರಡು ಬಾಳೇ ಹಣ್ಣುಗಳು ಮಾತ್ರ ಉಳಿದಿದ್ದವು. ಛತ್ರದಲ್ಲಿ ಶುಚಿರ್ಭೂತರಾಗಿ ಮಡಿಯಿಂದ ಸಪ್ತಗಿರಿವಾಸನನ್ನು ದರ್ಶನ ಮಾಡಿ ಭಕ್ತಿಭಾವದಿಂದ ಉಳಿದಿದ್ದ ನಾಲ್ಕೇ ನಾಲ್ಕು ಹಣ್ಣುಗಳನ್ನು ಭಗವಂತನಿಗೆ ಸಮರ್ಪಿಸಿ ಹಣ್ಣುಗಳನ್ನು ತಿಂದಿದ್ದಕ್ಕಾಗಿ ದಯವಿಟ್ಟು ಮನ್ನಿಸು ಹಾಗೂ ರೈತನ ಕುಟುಂಬವನ್ನು ಆಶೀರ್ವದಿಸು ಎಂದು ಬೇಡಿಕೊಂಡು ಎರಡು ಮೂರು ದಿನಗಳವರೆಗೂ ಶ್ರೀ ಕ್ಷೇತ್ರದಲ್ಲಿಯೇ ತಂಗಿದ್ದು, ಸುತ್ತಮುತ್ತಲಿನ ಪದ್ಮಾವತಿಯನ್ನೂ ಒಳಗೊಂಡ ದೇವಸ್ಥಾನಗಳಿಗೆಲ್ಲಾ ಭೇಟಿಕೊಟ್ಟು ಬೆಂಗಳೂರಿನ ಕಡೆಗೆ ಹಿಂತಿರುಗ ತೊಡಗಿದರು.
ದಾರಿಯಲ್ಲಿ ಬರುವಾಗ ದೇವರಿಗೆ ಅರ್ಪಿಸಲು ಕೊಟ್ಟಿದ್ದ ಬಾಳೇ ಹಣ್ಣುಗಳನ್ನು ತಾವೇ ತಿಂದದ್ದಕ್ಕಾಗಿ ಮನಸ್ಸಿನಲ್ಲಿಯೇ ಪರಿತಪಿಸುತ್ತಾ , ಭಗವಂತಾ ಹಿಂದಿರುಗುವ ವೇಳೆಯಲ್ಲಿ ದಯವಿಟ್ಟು ಆ ರೈತನು ನನಗೆ ಸಿಗದಿರುವಂತೆ ನೋಡಿಕೊಳ್ಳಪ್ಪಾ, ಆವನಿಗೆ ಮುಖ ತೋರಿಸಲು ನನಗೆ ಸಾದ್ಯವಿಲ್ಲ ಎಂದು ಪಶ್ವಾತ್ತಾಪ ಪಡುತ್ತಾ ದಾರಿ ಸವೆಸಿದರು. ತಾನೊಂದು ಬಗೆದರೇ ದೈವವೊಂದು ಬಗೆದೀತು ಎನ್ನುವ ಹಾಗೆ, ಆ ರೈತನ ಊರಿಗೆ ಬರುವ ಹೊತ್ತಿಗೆ ಸಂಜೆಯಾಗಿತ್ತು . ಇವರ ಆಗಮನವನ್ನೇ ಕಾಯುತ್ತಿದ್ದನೇನೂ ಎನ್ನುವಂತೆ ಆ ರೈತನೂ ಕೂಡಾ ಇವರು ಬರುತ್ತಿದ್ದದ್ದನ್ನು ದೂರದಿಂದಲೇ ಗಮನಿಸಿ ಇವರತ್ತ ಓಡೋಡಿ ಬರತೊಡಗಿದ. ರೈತ ಇವರತ್ತ ಧಾವಿಸಿ ಬರುತ್ತಿದ್ದನ್ನು ಗಮನಿಸಿದ ಶ್ರೀಯುತರಿಗೆ ಮನಸ್ಸಿನಲ್ಲಿ ಆತಂಕ ಹಾಗೂ ತಳಮಳ. ಗೋವಿಂದಾ, ಗೋವಿಂದಾ, ಎಲ್ಲಾ ಬಾಳೇಹಣ್ಣುಗಳನ್ನು ತಾನೇ ತಿಂದು ಕೇವಲ ಎರಡೇ ಎರಡು ಹಣ್ಣುಗಳನ್ನು ದೇವರಿಗೆ ಅರ್ಪಿಸಿದ್ದದ್ದು ಆತನಿಗೆ ತಿಳಿಯದಿರಲಿ. ನೀನೇ ನನ್ನನ್ನು ಕಾಪಾಡಬೇಕು ಎಂದು ದೇವರನ್ನು ಮನಸ್ಸಿನಲ್ಲೇ ಪ್ರಾರ್ಥಿಸ ತೊಡಗಿದರು. ರೈತನು ಇವರ ಸಮೀಪ ಬಂದು ನಮಸ್ಕರಿಸಿ, ಏನು ಸ್ವಾಮಿ ಎಂಥ ಕೆಲಸ ಮಾಡಿಬಿಟ್ರಿ? ನಿಮ್ಮಂತಹ ಸಜ್ಜನರು ಹೀಗೆ ಮಾಡಬಹುದಾ? ನಿಮ್ಮಿಂದ ಇಂತಹದ್ದನ್ನು ನಾನು ನಿರೀಕ್ಷಿಸಲಿರಲಿಲ್ಲ ಎಂದು ಒಂದೇ ಉಸಿರಿನಲ್ಲಿ ಪ್ರಶ್ನಿಸುತ್ತಿದ್ದರೆ, ಇವರಿಗೆ ತಲೆತಿರುಗಿ ಬೀಳುವಂತಹ ಅನುಭವ. ತಾನು ಬಾಳೇ ಹಣ್ಣುಗಳನ್ನು ತಿಂದದ್ದು ಇವನಿಗೆ ತಿಳಿದು ಹೋಯ್ತಾ? ಅಯ್ಯೋ ಭಗವಂತಾ ಈಗೇನು ಮಾಡುವುದು ಎಂದು ಕೊಳ್ಳುತ್ತಾ, ಛೇ, ಛೇ ಹಾಗೇನಿಲ್ಲಾ ಅಂತಹದ್ದೇನೂ ಆಗಲಿಲ್ಲಾ ಎಂದು ಸಾವರಿಸಿ ಮಾತನಾಡಲು ಮುಂದುವರಿಸಿದಾಗ. ರೈತನು ಇವರ ಮಾತನ್ನು ತುಂಡರಿಸಿ, *ಅಲ್ಲಾ ಬುದ್ದೀ ನಾನು ನಿಮಗೆ ಕೊಟ್ಟಿದ್ದ ಎರಡೂ ಬಾಳೇಗೊನೆಗಳನ್ನು ದೇವರಿಗೆ ಸಮರ್ಪಿಸಿ ಅದರಲ್ಲಿ ಎರೆಡೆರಡು ಬಾಳೇ ಹಣ್ಣುಗಳನ್ನು ನೀವೇ ತಿಂದಿರಂತೇ?* ಕೇಳಿದ್ದರೆ ನಾನೇ ಎರಡೇನೂ, ನಾಲ್ಕು ಗೊನೆ ಕೊಡುತ್ತಿರಲಿಲ್ಲವೇ ಎಂದು ಕೇಳಿದಾಗ, ಒಮ್ಮಿಂದೊಮ್ಮೆಲೆ ಇವರ ಎದೆ ಧಸಕ್ಕೆಂದಿತು. ಇದೇನಿದು, ಈತ ಹೇಳುತ್ತಿರುವುದೇ ಬೇರೆ ನಡೆದದ್ದೇ ಬೇರೆ ಎಂದು ಕೊಂಡು, ಸಮೀಪದಲ್ಲೇ ಇದ್ದ ಮರದಡಿಯಲ್ಲಿ ಅವನನ್ನೂ ಕುಳ್ಳರಿಸಿ ದಯವಿಟ್ಟು ನನ್ನ ತಪ್ಪನ್ನು ಮನ್ನಿಸಿಬಿಡು ಎಂದು ಪರಿ ಪರಿಯಾಗಿ ಬೇಡಿಕೊಂಡು ನಡೆದದ್ದನ್ನೆಲ್ಲವನ್ನೂ ಸವಿಸ್ತಾರವಾಗಿ ವಿವರಿಸಿ, ಆತನಿಗೆ ಆ ವಿಷಯ ಹೇಗೆ ಗೊತ್ತಾಯಿತೆಂದು ಕೇಳಿದರು. ರೈತನು ಇವರಿಗೆ ಬಾಳೇ ಗೊನೆಯನ್ನು ಕೊಟ್ಟು ಕಳುಹಿಸಿದ ನಂತರ ಅಪ್ಪಾ ತಂದೇ, ನಿನ್ನನ್ನು ಕಣ್ತುಂಬಾ ನೋಡುವ ಆಸೆ ನನಗೆಂದು ದಯಪಾಲಿಸುವೆಯೋ ನಾನರಿಯೆ. ಆದರೆ ಒಬ್ಬ ಸಜ್ಜನರ ಮೂಲಕ ನನ್ನ ಪರಿಶ್ರಮದಿಂದ ನಿನ್ನ ಕರುಣೆಯಿಂದಲೇ ಬೆಳೆದ ಬಾಳೇಹಣ್ಣುಗಳನ್ನು ನಿನ್ನೆಡೆಗೆ ಕಳುಹಿಸುತ್ತಿದ್ದೇನೆ. ದಯವಿಟ್ಟು ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡು ಎಂದು ಬೇಡಿಕೊಂಡಿರುತ್ತಾನೆ. ಆದಾದ ಕೆಲವು ದಿನಗಳ ನಂತರ ಭಗವಂತನು ರೈತನ ಕನಸಿನಲ್ಲಿ ಬಂದು, ಭಕ್ತಾ, ನೀನು ಕಳುಹಿಸಿದ ಬಾಳೇಗೊನೆಗಳಲ್ಲಿ ಎರೆಡೆರಡು ಹಣ್ಣುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಹಣ್ಣುಗಳು ನನಗೆ ಸಮರ್ಪಿತವಾದವು. ನನ್ನ ಆಶೀರ್ವಾದ ಸದಾ ನಿನ್ನ ಮೇಲೆ ಇದ್ದೇ ಇರುತ್ತದೆ. ನಿಷ್ಠೆ ನಿಯಮದಿಂದ ಸತ್ಯಮಾರ್ಗದಲ್ಲಿ ದಾನ ಧರ್ಮಗಳನ್ನು ಪಾಲಿಸುತ್ತಾ ಜೀವನ ನಡೆಸು ಎಂದು ಹರೆಸಿ ಮಾಯವಾಗಿರುತ್ತಾನೆ. ಕನಸಿನಲ್ಲಿ ಭಗವಂತ ಬಂದು ಆಶೀರ್ವದಿಸಿದ್ದಕ್ಕೆ ಸಂತೋಷವಾದರೂ ಇಡೀ ಗೊನೆ ಭಗವಂತನಿಗೆ ತಲುಪಲಿಲ್ಲವಲ್ಲಾ ಎಂಬ ಬೇಸರವೂ ಕಾಡಿ, ಹಾಗೇಕೆ ಮಾಡಿದರೆಂದ ಶ್ರೀಯುತನ್ನು ಕೇಳಲೇ ಬೇಕೆಂದು ನಿರ್ಧರಿಸಿ ಅವರ ಆಗಮನಕ್ಕೇ ಕಾಯುತ್ತಿರುತ್ತಾನೆ. ನಡೆದ ವಿಷಯವೆಲ್ಲವೂ ಇಬ್ಬರಿಗೂ ತಿಳಿದು ಮನಸ್ಸು ಹಗುರವಾಗಿ ಭಗವಂತನ ಲೀಲೆಯ ಮಂದೆ ತಮ್ಮದ್ದೇನು ನಡೆಯುವುದಿಲ್ಲ ಎಂದು ತಿಳಿದು ಆ ದಿನ ಅಲ್ಲಿಯೇ ರೈತನ ಮನೆಯ ಆತಿಥ್ಯ ಸ್ವೀಕರಿಸಿ, ರೈತನೂ ತಾನು ಬೆಳೆದಿದ್ದ ಧವಸ ಧಾನ್ಯಗಳನ್ನೂ, ಒಂದೆರಡು ಬಾಳೇಗೊನೆಗಳನ್ನು ಶ್ರೀಯುತರಿಗೆ ಪ್ರೀತಿ ಪೂರ್ವಕವಾಗಿ ಕೊಟ್ಟು ತಮ್ಮಿಬ್ಬರ ಸ್ನೇಹಸಂಬಂಧ ಹೀಗೆಯೇ ಮುಂದುವರಿಯಲಿ ಎಂದು ಆಶೀಸುತ್ತಾ, ಮರುದಿನ ತಮ್ಮ ಊರಿನೆಡೆಗೆ ಪ್ರಯಾಣ ಬೆಳೆಸಿದರು.
ಭಕ್ತಿಯಿಮ್ದ ಸಂಕಲ್ಪ ಮಾಡಿ ಏನನ್ನೇ ಆಗಲಿ, ಯಾರ ಮೂಲಕವಾದರೂ ಅರ್ಪಿಸಿದರೂ ಅದು ಭಗವಂತನಿಗೆ ಖಂಡಿತವಾಗಿಯೂ ನೇರವಾಗಿ ತಲುಪಿಯೇ ತಲುಪುತ್ತದೆ ಎನ್ನುವುದಕ್ಕೇ ಈ ದೃಷ್ಟಾಂತವೇ ಸಾಕ್ಷಿ. ಇಂದು ಮೊದಲನೇ ಶ್ರಾವಣ ಶನಿವಾರ. ಶ್ರೀಪತಿಯನ್ನು ಭಕ್ತಿಯಿಂದ ನೆನೆದು, ಯಥಾಶಕ್ತಿ ಪೂಜೆಗೈದು, ಕೈಲಾದ ಮಟ್ತಿಗೆ ದಾನ ಮಾಡಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗೋಣ
ನಮ್ಮ ರಾಜ್ಯದ ಕೊಡಗು ಹಾಗೂ ನೆರೆ ರಾಜ್ಯ ಕೇರಳದಲ್ಲಿ ಪ್ರಕೃತಿ ವಿಕೋಪದಿಂದ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದು ದಿನನಿತ್ಯದ ಜೀವನಕ್ಕೆ ಪರಿತಪಿಸುತ್ತಿರುವ ಈ ಸಂಧರ್ಭದಲ್ಲಿ ಕಾಣದಾ ದೇವರನ್ನು ಕಷ್ಟ ಪಟ್ಟು ಹುಡುಕಿ ಕಾಣಿಕೆಗಳನ್ನು ಸಮರ್ಪಿಸುವ ಬದಲು, ಅವಶ್ಯಕತೆ ಇರುವ ಕೊಡಗು ಮತ್ತು ಕೇರಳದ ನಮ್ಮ ಬಂಧು-ಬಾಂಧವರಿಗೆ ಕೈಲಾದಷ್ಟು ಸಹಾಯ ಮಾಡೋಣ.
ವೀಡಿಯೋ Story : https://youtu.be/g_-yCMaPXmc
ಏನಂತೀರೀ?
One thought on “ದೇವರಿಗೆ ಅರ್ಪಿಸಿದ ನೈವೇದ್ಯ ದೇವರಿಗೆ ತಲುಪುತ್ತದೆಯೇ?”