ಭಾರತ್ ಬಂದ್

ಸಾವಿರಾರು ವರ್ಷಗಳಿಂದ ಪ್ರಪಂಚಾದ್ಯಂತ ಪ್ರಜೆಗಳು ತಮ್ಮ ಪ್ರದೇಶದ ಹವಾಮಾನ ತಕ್ಕಂತೆ ಮತ್ತು ಅವರ ಅಹಾರ ಪದ್ದತಿಗೆ ಅನುಗುಣವಾಗಿ ತಮಗೆ ಅಗತ್ಯವಿದ್ದಷ್ಟು ಆಹಾರ ಪದಾರ್ಥಗಳನ್ನು ಕೃಷಿಯಾಧಾರಿತವಾಗಿ ಬೆಳೆಯುತ್ತಾ ತಮ್ಮಲ್ಲಿ ಹೆಚ್ಚಾಗಿದ್ದ ಆಹಾರಗಳನ್ನು ಇತರೊಂದಿಗೆ ಪರಸ್ಪರ ಕೊಡು ಕೊಳ್ಳುವಿಕೆಯ ಮೂಲಕ ಹಂಚಿಕೊಳ್ಳುತ್ತಾ ನೆಮ್ಮದಿಯ ಜೀವನ ಮಾಡುತ್ತಿದ್ದರು. ಯಾವಾಗ ಜನರ ಆಸೆಗಳು ಹೆಚ್ಚಾಯಿತೂ ಅಂದಿನಿಂದ ಪ್ರಭಲವಾಗಿದ್ದವರು ದುರ್ಬಲ ಮೇಲೆ ಸವಾರಿ ಮಾಡುತ್ತಾ ಊಳಿಗಮಾನ್ಯ ಪದ್ದತಿ ಮತ್ತು ಜಮೀನ್ದಾರಿ ಪದ್ದತಿಗಳು ಆರಂಭವಾದವು. ನೈಸರ್ಗಿಕ ಕೃಷಿ ಪದ್ದತಿಯ ಬೇಸಾಯದಿಂದ ಹೆಚ್ಚಿನ ಇಳುವರಿ ದೊರಕದ ನೆಪವೊಡ್ಡಿ ಕೃಷಿ ಯಂತ್ರಗಳಲ್ಲಿ ಮತ್ತು ನೇಯ್ಗೆಯಲ್ಲಿ ಸುಧಾರಿತ ಯಂತ್ರಗಳ ಹೊಸ ಹೊಸ ಆವಿಷ್ಕಾರಗಳು ಕೈಗಾರಿಕಾ ಕ್ರಾಂತಿಗೆ ನಾಂದಿ ಹಾಡಿದವು. ಕಾರ್ಖಾನೆಗಳ ಮತ್ತು ಜಮೀನಿನ ಮಾಲೀಕರ ಕಾರ್ಮಿಕರ ಮೇಲಿನ ದೌರ್ಜನ್ಯವನ್ನು ಪ್ರತಿಭಟಿಸಲು ಮತ್ತು ಕಾರ್ಮಿಕರಿಗೆ ಸಮಾನ ಹಕ್ಕನ್ನು ಕೊಡಿಸಲು ಶುರವಾದದ್ದೇ ಕಮ್ಯೂನಿಸಂ. ಆರಂಭದಲ್ಲಿ ಜನ ಮರುಳೋ ಜಾತ್ರೆ ಮರುಳೋ ಎನುವಂತೆ ಅವರ ಆರ್ಭಟ ಹೆಚ್ಚಾಗಿ ಅತಿ ವೇಗದಲ್ಲಿ ಪ್ರಪಂಚಾದ್ಯಂತ ಅದರ ಪ್ರಭಾವ ಹೆಚ್ಚಾದರೂ ಸಂವತ್ಸರಗಳು ಕಳೆದಂತೆ ಅವರು ಪ್ರತಿಪಾದಿಸುವ ವಾದದಲ್ಲಿ ಹುರುಳಿಲ್ಲ ಎಂದು ಜನರಿಗೆ ಅರಿವಾಗಿ ಪ್ರಪಂಚಾದ್ಯಂತ ಕೆಲವೊಂದು ರಾಷ್ಟ್ರಗಳ ಹೊರತಾಗಿ ಬೆಳದಷ್ಟೇ ವೇಗದಲ್ಲಿ ಅದೃಷ್ಯವಾಯಿತಾದರೂ ಅಂದಿನ ಅವಿಭಾಜಿತ ಸೋವಿಯತ್ ರಷ್ಯಾದ ಪ್ರಭಾವಕ್ಕೊಳಗಾಗಿದ್ದ ನಮ್ಮ ಕೆಲ ನಾಯಕರುಗಳಿಂದಾಗಿ ಇಂದಿಗೂ ಸಹಾ ನಮ್ಮ ದೇಶದ ಒಂದೆರಡು ರಾಜ್ಯಗಳು ಮತ್ತು ಕೆಲವು ಪ್ರತಿಷ್ಟಿತ ವಿದ್ಯಾಸಂಸ್ಥೆಗಳು ಮತ್ತು ಮಾಧ್ಯಮಗಳಲ್ಲಿ ಕಮ್ಯೂನಿಷ್ಟರು ಕಾಣಸಿಗುತ್ತಿರುವುದು ವಿಪರ್ಯಾಸವೇ ಸರಿ.

ಅಂದು ಜನರ ಹಕ್ಕುಗಳಿಗಾಗಿ ಹೋರಾಡಲು ಆರಂಭಗೊಂಡ ಕಮ್ಯೂನಿಸಂ ಇಂದು ದಿಕ್ಕೇ ಇಲ್ಲದೆ ತನ್ನ ಅಸ್ತಿತ್ವದ ಉಳಿವಿಗಾಗಿ ತನ್ನ ಅಸ್ಮಿತೆಗಾಗಿ ಪರದಾಟ ಪಡುತ್ತಾ ಜನಸಾಮಾನ್ಯರಿಗೆ ತೊಂದರೆ ಆಗುವಂತಹ ಎರಡು ದಿನಗಳ ಭಾರತ್ ಬಂದ್ ಕರೆದಿರುವುದು ಎಷ್ಟು ಸರಿ? ಎರಡು ದಿನಗಳ ಬಂದ್ ಇಂದಾಗಿ ಆಗುವ ನಷ್ಟವನ್ನು ಭರಿಸುವ ಹೊಣೆಯನ್ನು ಹೊರಲು ಕಮ್ಯುನಿಷ್ಟರು ತಯಾರಿದ್ದಾರೆಯೇ? ಅವರದೇ ಆಳ್ವಿಕೆಯಲ್ಲಿ ಇರುವ ಒಂದೇ ಒಂದು ರಾಜ್ಯ ಕೇರಳದ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ವಿಷಯದಲ್ಲಿ ಜನರ ಧಾರ್ಮಿಕ ಆಚರಣೆಯ ವಿರೋಧವಾಗಿ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ವಿರೋಧಿಸಿ ನಡೆಯುತ್ತಿರುವ ಹಿಂಸೆಗಳನ್ನು ಹತ್ತಿಕ್ಕಲಾಗದ ಈ ಕಮ್ಯೂನಿಷ್ಟರು ದೇಶದ ಗಮನವನ್ನು ಇತರೆಡೆಗೆ ಸೆಳೆಯಲು ಮತ್ತು ಮುಂಬರುವ ಚುನಾವಣೆಯ ಸಮಯದಲ್ಲಿ ತನ್ನ ಅಸ್ಠಿತ್ವವನ್ನು ದೇಶದ ಜನರಿಗೆ ತೋರಲು ಇಂತಹ ಹಿಂಬಾಗಿಲಿನ ಹೋರಾಟ ಮಾಡುವ ಅವಶ್ಯಕವಿತ್ತೇ? ನಲವತ್ತೆಂಟು ಗಂಟೆಗಳ ಕಾಲ ಬಲವಂತದಿಂದ ವ್ಯಾಪಾರ, ವ್ಯವಹಾರ, ವಹಿವಾಟುಗಳನ್ನು ಮುಚ್ಚುವುದರಿಂದ ಅವರಿಗೆ ಸಿಗುವ ಲಾಭಾವಾದರೂ ಏನು? ಇದರಿಂದ ದೇಶಕ್ಕೆ ಮತ್ತು ಜನರಿಗೆ ಆಗುವ ಲಾಭವಾದರೂ ಏನು? ದಿನಗೂಲಿ ಮಾಡಿಕೊಂಡು ಹೊಟ್ಟೆ ಹೊರೆಯುವ ಮಂದಿಗಳ ಎರಡು ದಿನಗಳ ಅನ್ನವನ್ನು ಕಸಿದುಕೊಳ್ಳುವ ಅಧಿಕಾರ ಇವರಿಗೆ ನೀಡಿದವರಾರು?

ಕಮ್ಯೂನಿಷ್ಟ್ ಪ್ರಭಾವಕ್ಕೆ ಒಳಗಾದ ಅಸಂಘಟಿತ ಕಾರ್ಮಿಕರ ಮನಸ್ಥಿತಿ ಹೇಗಿರುತ್ತದೆ ಎಂದರೆ, ಎಂಬತ್ತರ ದಶಕದಲ್ಲಿ ನಮ್ಮ ಬಿಇಎಲ್ ಕಾರ್ಖಾನೆಯಲ್ಲಿ ಆಗಿನ್ನೂ ಎಲೆಕ್ಟ್ರಾನಿಕ್ ಮತಯಂತ್ರದ ತಯಾರಿಕೆ ಆರಂಭವಾಗಿ ಅದನ್ನು ಪರೀಕ್ಷಿಸುವ ಸಲುವಾಗಿ ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿದ್ದ ಸ್ಥಳೀಯ ಚುನಾವಣೆಗಳಲ್ಲಿ ಪರೀಕ್ಷಾರ್ಥವಾಗಿ ಬಳೆಸುತ್ತಿದ್ದರು. ಅದರ ಸಲುವಾಗಿ ಕೇರಳದ ಒಂದು ಪುರಸಭೆಯ ಚುನಾವಣೆಯಲ್ಲಿ ಈ ಮತಯಂತ್ರಗಳನ್ನು ತೆಗೆದುಕೊಂಡು ಒಂದಷ್ಟು ಬಿಇಎಲ್ ಕಾರ್ಮಿಕರು ರೈಲಿನಲ್ಲಿ ಪ್ರಯಾಣಿಸಿ ಆ ಊರನ್ನು ತಲುಪಿ ರೈಲ್ವೇ ನಿಲ್ದಾಣದಿಂದ ತಾವು ಉಳಿಯಲು ವ್ಯವಸ್ಥೆ ಮಾಡಿದ್ಠ ಹೋಟೆಲ್ ವರೆಗೂ ಆ ಮತ ಯಂತ್ರಗಳನ್ನು ಮತ್ತು ತಮ್ಮ ಸಾಮಾನು ಸರಂಜಾಮುಗಳನ್ನು ಹೊತ್ತು ತರಲು ಅಲ್ಲಿದ್ದ ಕೂಲಿಯವರನ್ನು ವಿಚಾರಿಸಿದಾಗ. ಹೊರ ಊರಿನಿಂದ ಬಂದವರ ಅಸಹಾಯಕತೆಯನ್ನು ದುರುಪಯೋಗ ಮಾಡಿಕೊಳ್ಳುವ ದುರಾಲೋಚನೆಯಿಂದ ಮನಸೋಯಿಚ್ಚೆ ಕೂಲಿಯನ್ನು ಕೇಳಿದಾಗ ಅವರು ಕೇಳಿದ್ದಷ್ಟನ್ನು ಕೊಡಲು ಒಪ್ಪದೆ ಚೌಕಾಸಿ ಮಾಡಿದರೂ ಅದಕ್ಕೆ ಒಪ್ಪಿಕೊಳ್ಳದ ಕೂಲಿಯವರನ್ನು ಮನಸ್ಸಿನಲ್ಲಿಯೇ ಶಪಿಸುತ್ತಾ ತಾವೇ ಹೊತ್ತುಕೊಂಡು ತಮ್ಮ ಹೋಟೆಲ್ ಕಡೆಗೆ ಪಯಾಣಿಸಿದರು. ಅವರು ಹಾಗೆ ತಮ್ಮ ಸಾಮನು ಸರಂಜಾಮುಗಳನ್ನು ಮತ್ತು ಮತ ಯಂತ್ರಗಳನ್ನು ಕಷ್ಟ ಪಟ್ಟು ಹೊತ್ತು ಕೊಂಡು ಬಾರದ ಭಾಷೆಯಲ್ಲಿ ತಮ್ಮ ಹೋಟೆಲ್ ವಿಳಾಸವನ್ನು ವಿಚಾರಿಸಿಕೊಂಡು ಹೋಗುತ್ತಿದ್ದರೆ, ಆ ಕೂಲಿಗಳು ದಿಮ್ಮಾಲೆ ರಂಗ ಎಂದು ಬರೀ ಕೈ ಬೀಸುತ್ತಾ ಅವರನ್ನೇ ಹೋಟೆಲ್ ವರೆಗೂ ಹಿಂಬಾಲಿಸಿ ಹೋಟೆಲ್ ತಲುಪಿದ ನಂತರ ತಮ್ಮ ಕೂಲಿ ಕೊಡಿ ಎಂದು ಕೇಳಿದರು. ಕೂಲಿಯವರ ಬೇಡಿಕೆಯಿಂದ ಬೆಚ್ಚಿದ ಬಿಇಎಲ್ ಕಾರ್ಮಿಕರು ನಾವೇ ಹೊತ್ತು ತಂದ್ದಿದ್ದೇವೆ. ನಿಮಗೇಕೆ ಕೊಡಬೇಕು ಕೂಲಿ? ಎಂದು ಕಿತ್ತೂರು ರಾಣಿ ಚೆನ್ನಮ್ಮನ ಶೈಲಿಯಲ್ಲಿ ಕೇಳಿದಾಗ ನೀವೇ ಹೊತ್ತು ತಂದಿದ್ದರೂ ನೀವು ನಮ್ಮ ಹೊಟ್ಟೆಯ ಮೇಲೆ ಹೊಡೆದಿದ್ದೀರಿ. ನಮ್ಮ ಕೆಲಸವನ್ನು ಕಸಿದಿರುವ ಕಾರಣ ನೀವು ಕೂಲಿ ಹಣ ಕೊಡಲೇ ಬೇಕು ಎಂದು ದಬಾಯಿಸಿದರೂ ಅದಕ್ಕೊಪ್ಪದೆ ಬಿಇಎಲ್ ಕಾರ್ಮಿಕರು ತಮಗೆ ಕಾಯ್ದಿರಿಸಿದ್ದ ಕೊಠಡಿಗಳಿಗೆ ತೆರಳಿ ತಮ್ಮ ಆಯಾಸವನ್ನು ಪರಿಹರಿಸಿಕೊಳ್ಳುತ್ತಿದ್ದ ಸ್ಚಲ್ಪ ಸಮಯದಲ್ಲೇ ಹೋಟೆಲ್ ಮುಂಭಾಗದಲ್ಲಿ ಏನೋ ಜೋರು ಜೋರಿನ ಗಲಾಟೆಯ ಶಬ್ಧ ಕೇಳಿ ಬರುತ್ತಿತ್ತು, ಯಾರಿಗೋ ದಿಕ್ಕಾರ ಕೂಗುತ್ತಿರುವ ಶಬ್ಧ ಕೇಳಿಬರುತ್ತಿತ್ತು. ಅದೇ ಸಮಯದಲ್ಲಿ ಹೋಟೆಲ್ ಸಿಬ್ಬಂಧಿಯೊಬ್ಬರು ಇವರ ಕೊಠಡಿಗೆ ಬಂದು ನಿಮ್ಮನ್ನು ಭೇಟಿಯಾಗಲು ಕೆಲವರು ಬಂದಿದ್ದಾರೆ ಎಂದಾಗ, ನಮ್ಮನ್ನು ಈ ಸಮಯದಲ್ಲಿ ಅದೂ ಈ ಊರಿನಲಿ ಯಾರಪ್ಪಾ ಭೇಟಿಮಾಡಲು ಬಂದಿದ್ದಾರೆ ಎಂದು ಕುತೂಹಲದಿಂದ ಕೊಠಡಿಯ ಹೊರ ಬಂದು ನೋಡಿದರೆ ಹೋಟೆಲ್ ಮುಂಭಾಗದಲ್ಲಿ ಇಪ್ಪತ್ತು ಮೂವತ್ತು ಜನ ಕೆಂಪು ಬಾವುಟ ಹಿಡಿದುಕೊಂಡು ಧರಣಿ ನಡೆಸುತ್ತಿರುವ ಸನ್ನಿವೇಶ ಕಾಣಿಸಿತು. ಹಾಗೆಯೇ ಸ್ವಲ್ಪ ಹೊರ ಬಂದರೆ ಸಂಜೆ ಅವರ ಜೊತೆ ರೈಲ್ವೇ ನಿಲ್ದಾಣದಿಂದ ಬಂದಿದ್ದ ಕೂಲಿಗಳು ಮತ್ತವರ ತಂಡವೇ ಇವರದ್ದೇ ವಿರುಧ್ಧ ಧರಣಿ ಮಾಡುತ್ತಿದ್ದದ್ದು ಸೋಜಿಗವೆನಿಸಿತು. ಅವರಲ್ಲಿ ಒಬ್ಬ ನಾಯಕ ಎನಿಸಿಕೊಂಡವನು ಸುಮ್ಮನೆ ಇವರಿಗೆ ಸಲ್ಲಬೇಕಾದ ಕೂಲಿ ಕೊಟ್ಟು ಬಿಡಿ ಇಲ್ಲದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಏರು ಧನಿಯಲ್ಲಿ ಎಚ್ಚರಿಸಿದ್ದು ಇವರಿಗೆ ಅಚ್ಚರಿ ತಂದಿತು. ಇದರ ಬಗ್ಗೆ ಹೋಟೆಲ್ ಮ್ಯಾನೇಜರ್ ಅವರಲ್ಲಿ ವಿಚಾರಿಸಿ ಸ್ಥಳೀಯ ಪೋಲೀಸರಿಗೆ ಕರೆ ಮಾಡಿ ದೂರು ನೀಡುವಂತೆ ವಿಚಾರಿಸಿದಾಗ, ಆ ಹೋಟೆಲ್ ಮ್ಯಾನೇಜರ್ ಕೂಡ ಹಾಗೆ ದೂರು ನೀಡುವುದರಿಂದ ಪ್ರಯೋಜನವಾಗುವುದಿಲ್ಲ. ನೀವು ಇನ್ನೂ ಎರಡ್ಮೂರು ದಿನ ಇಲ್ಲೇ ಇರಬೇಕಾದ್ದರಿಂದ ಸುಮ್ಮನೆ ಅವರೊಂದಿಗೆ ಸಂಧಾನ ಮಾಡಿಕೊಂಡು ಏನೋ ಕೊಟ್ಟು ಕಳುಹಿಸಿ ಎಂದಾಗ ವಿಧಿ ಇಲ್ಲದೆ ತಾವೇ ಸಾಮಾನುಗಳನ್ನು ಹೊತ್ತು ತಂದರೂ ಆ ಕೂಲಿಯವರು ಕೇಳಿದಷ್ಟನ್ನು ಕೊಟ್ಟು ಸಮಸ್ಯೆ ಬಗೆ ಹರಿಸಿಕೊಂಡಿದ್ದನ್ನು ಅನೇಕ ಸಲ ನಮ್ಮ ತಂದೆಯವರು ಹೇಳುತ್ತಿದ್ದರು. ಒಟ್ಟಿನಲ್ಲಿ ಕಮ್ಯೂನಿಷ್ಟರ ಮನೋಭಾವ ಕೆಲಸಕ್ಕೆ ಕರಿಬೇಡಿ ಊಟಕ್ಕೆ ಮರೀ ಬೇಡಿ ಎನ್ನುವಂತೆ ಇರುತ್ತದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇನ್ನೊಂದಿಲ್ಲ. ಧಾರ್ಮಿಕ ಭಾವನೆಗಳಿಗೆ ಅತ್ಯಂತ ಮಹತ್ವ ನೀಡುವ ಪಶ್ವಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಕಮ್ಯೂನಿಷ್ಟರ ಆಡಳಿತದಲ್ಲಿ ನಡೆದ ಮತ್ತು ನಡೆಯುತ್ತಿರುವ ದೊಂಬಿ, ಅತ್ಯಾಚಾರ, ಹಿಂಸೆ ಮತ್ತು ಕೊಲೆಗಳಿಗೆ ಲೆಕ್ಕವೇ ಇಲ್ಲ. When you are in Rom, be like a Roman ಎನ್ನುವ ಆಂಗ್ಲ ಗಾದೆಯಂತೆ ಭಾರತ ದೇಶದಲ್ಲಿರುವಾಗ ಇಲ್ಲಿಯ ಜನರ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಅನುಸರಿಸುವುದು ಎಲ್ಲರ ಆದ್ಯ ಕರ್ತ್ಯವ್ಯವೇ ಸರಿ. ಆದರೆ ಈ ಕಮ್ಯೂನಿಷ್ಟರು ತಮಗೆ ದೇವರಲ್ಲಿ ನಂಬಿಕೆ ಇಲ್ಲೆಂದು ಪ್ರತಿಪಾದಿಸುತ್ತಾ ಇಲ್ಲಿಯ ಜನರ ಭಾವನೆಗಳನ್ನು ಹತ್ತಿಕ್ಕುತ್ತಿರುವುದು ಅಕ್ಷಮ್ಯ ಅಪರಾಧವೇ ಸರಿ. ಬಹಿರಂಗವಾಗಿ ದೇವರ ವಿರುಧ್ಧ ಮಾತನಾಡುವ ಅನೇಕ ಕಮ್ಯೂನಿಷ್ಟ್ ನಾಯಕರು ತಮ್ಮ ಮನೆಗಳಲ್ಲಿ ಗುಪ್ತವಾಗಿ ದೇವರನ್ನು ಪೂಜೆಮಾಡುವ ಸಂಗತಿ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಎಂಬತ್ತರ ದಶಕದಲ್ಲಿ ಬೆಂಗಳೂರಿನ ರಾಜಾಜಿನಗರದ ಕಮ್ಯುನಿಷ್ಟ್ ಶಾಸಕರಾಗಿದ್ದ ಶ್ರೀಯುತ ಎಂ.ಎಸ್.ಕೃಷ್ಣನ್ ಅವರು ತಮ್ಮ ಮಗನ ಉಪನಯನವನ್ನು ತಿರುಪತಿಯಲ್ಲಿ ಮಾಡಿ ಎಲ್ಲರಿಂದ ಅಪಹಾಸ್ಯಕ್ಕೀಡಾಗಿದ್ದದ್ದು ಈಗ ಇತಿಹಾಸ. ಜನರ ಭಾವನೆಗಳನ್ನೂ ಧಿಕ್ಕರಿಸಿ, ಶಬರಿಮಲೆ ಅಯಪ್ಪ ಸ್ವಾಮಿಯನ್ನು ಇತ್ತೀಚೆಗೆ ದರ್ಶನ ಮಾಡಿದ ಇಬ್ಬರು ಹೆಂಗಸರ ಹಿಂದಿದ್ದ ಶಕ್ತಿಯೂ ಇದೇ ಕೇರಳದ ಕಮ್ಯೂನಿಷ್ಟ್ ಸರ್ಕಾರ ಎನ್ನುವುದು ಈಗ ಜಗಜ್ಜಾಹೀರಾತಾದ ಸಂಗತಿ.

ಚುನಾವಣೆ ಸಂದರ್ಭದಲ್ಲಿ ದೇಶದ ಜನರ ಗಮನ ತನ್ನತ್ತ ಸೆಳೆಯಲು ಎರಡು ದಿನಗಳ ಬಂದ್ ಕರೆ ಕೊಟ್ಟಿದ್ದ ಕಮ್ಯೂನಿಷ್ಟರ ಈ ಕುತಂತ್ರವನ್ನು ಅರಿತ ನಮ್ಮೆ ಇಡೀ ದೇಶದ ಜನರು ಮೊದಲನೆಯ ದಿನವೇ ಎಂದಿನಂತೆ ತಮ್ಮ ದೈನಂದಿನ ಕೆಲಸಗಳನ್ನು ಮುಂದುವರಿಸುತ್ತಾ ಇವರ ಬಂದ್ ಕರೆಗೆ ಯಾವುದೇ ರೀತಿಯಾಗಿ ಸ್ಪಂದಿಸದೆ ಅವರಿಗೆ ಸರಿಯಾದ ಪಾಠ ಕಲಿಸಿರುವುದಕ್ಕೆ ನಿಜಕ್ಕೂ ಅಭಿನಂದನಾರ್ಹರು. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ಅಲ್ಲಲ್ಲಿ ಕೆಲವಡೆ ದೌರ್ಜನ್ಯದಿಂದ ಅಂಗಡಿ ಮುಂಗಟ್ಟುಗಳನ್ನೂ ಮತ್ತು ವಿವಿಧ ಕಛೇರಿಗಳನ್ನು ಮುಚ್ಚಿಸಲು ಪ್ರಯತ್ನಿಸಿದರಾದರೂ ಸ್ಥಳೀಯರು ಧೈರ್ಯದಿಂದ ಮುನ್ನುಗ್ಗಿ ಪ್ರತಿಭಟಿಸಿದ ಕಾರಣ, ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಓಡಿ ಹೋದ ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿರುವುದನ್ನು ಎಲ್ಲರೂ ನೋಡಿದ್ದಾರೆ.

ಒಟ್ಟಿನಲ್ಲಿ ಇಂತಹ ಬಂದ್ ಗಳಿಂದ ಜನಸಾಮಾನ್ಯರು ಉದ್ದಾರ ಆಗುವುದಕ್ಕಿಂತ ಬಂದ್ ಕರೆ ನೀಡುವ ನಾಯಕರುಗಳು ಉದ್ದಾರವಾಗಿರುವುದಂತೂ ಸತ್ಯವೇ ಸರಿ. ಕೆಲ ನಾಯಕರುಗಳಂತೂ ವಿಷಯ ಯಾವುದೇ ಇರಲಿ, ಬಂದ್ ಗೆ ಯಾರೇ ಕರೆ ನೀಡಲಿ, ಪಶು, ಪಕ್ಷಿ, ಪ್ರಾಣಿಗಳೊಂದಿಗೆ ಹಾಸ್ಯಾಸ್ಪದವಾಗಿ ಬಂದ್ ಮಾಡುತ್ತಾ ತಮ್ಮ ಹೊಟ್ಟೆ ಹೊರೆಯುತ್ತಿರುವುದು ಎಲ್ಲರಿಗೂ ತಿಳಿದ ಸಂಗತಿಯೇ. ಇಂದಿನ ಹಾಗೆಯೇ ನಾಳೆಯೂ ಕೂಡ ಜನಸಾಮಾನ್ಯರು ತಮ್ಮ ತಮ್ಮ ಕೆಲಸ ಕಾರ್ಯಗಳಲ್ಲಿ ಎಂದಿನಂತೆಯೇ ಕಾರ್ಯ ನಿರ್ವಹಿಸಿ ಈ ಕಮ್ಮಿ ನಿಷ್ಟೆಯವರ ಮತ್ತು ಅವರನ್ನು ಬೆಂಬಲಿಸುತ್ತಿರುವ ವಿವಿಧ ಸಂಘಟನೆಗಳ ಸೊಕ್ಕನ್ನು ಮುರಿಯುವುದರಲ್ಲಿ ಸಂದೇಹವೇ ಇಲ್ಲ. ಪಶ್ಚಿಮ ಬಂಗಾಳ ಎಂದೋ ಕಳೆದು ಹೋಗಿದೆ, ದೇಶವನ್ನು ತುಂಡರಿಸಲು ಸಿದ್ದರಾಗಿದ್ದ ತುಕುಡೇ ಗ್ಯಾಂಗ್ ಜೈಲಿನಲ್ಲಿ ಮುದ್ದೆ ಮುರಿಯುವ ಸಮಯ ಬಂದಿದೆ, ಇತ್ತೀಚೆಗೆ ತ್ರಿಪುರಾದಲ್ಲಿ ಕೆಂಪು ಬಾವುಟ ಕೇಸರಿಯಾಗಿ ಬದಲಾಗಿದೆ. ಇನ್ನೂ ಕೇರಳ ರಾಜ್ಯವನ್ನೂ ಕಳೆದು ಕೊಳ್ಳುವ ಎಲ್ಲಾ ಸಂಭವವೂ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: