ಎಂದಿನಂತೆಯೇ ಇಂದು ಬೆಳ್ಳಂಬೆಳಿಗ್ಗೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ದೈನಂದಿನ ವ್ಯಾಯಮವನ್ನು ಮುಗಿಸಿ ಮನೆಗೆ ಬಂದು ವಾಟ್ಸಾಪ್ ಸಂದೇಶಗಳನ್ನು ಓದುತ್ತಿದ್ದಾಗ,15 ವರ್ಷಗಳ ನನ್ನ ಮಗನಷ್ಟೇ ವಯಸ್ಸಿನ ಪರಿಚಯಸ್ಠ ಬಾಲಕನ ಅಕಾಲಿಕ ಮರಣ ಸುದ್ದಿ ಓದಿ ಕರಳು ಚುರುಕ್ ಎಂದಿತು. ಆಟ ಪಾಠಗಳಲ್ಲಿ ಚುರುಕಾಗಿದ್ದ ಹುಡುಗ, ಹಾಡು, ಅಮೃತವಚನ, ಶ್ಲೋಕಗಳನ್ನು ನಿರ್ಗಳವಾಗಿ ಹೇಳುತ್ತಿದ್ದದ್ದು ಕಣ್ಣುಮುಂದೆ ಬಂದು ಕಣ್ಣಂಚಿನಲ್ಲಿ ನೀರೂರಿ, ಅಭ್ಯಾಸದ ಬಲದಂತೆ ಭಗವಂತನು ಮೃತನ ಆತ್ಮಕ್ಕೆ ಶಾಂತಿ ಕೊಡಲಿ ಹಾಗು ಮಗನನ್ನು ಕಳೆದು ಕೊಂಡ ಕುಟುಂಬವರ್ಗದವರಿಗೆ ದುಖಃ ಭರಿಸುವ ಶಕ್ತಿಯನ್ನು ನೀಡಲಿ ಎಂದು ವಾಟ್ಸಾಪ್ ಸಂದೇಶ ಕಳುಹಿಸಿ , ದಿನ ಪತ್ರಿಕೆಯನ್ನು ಓದಲು ಶುರುಮಾಡುತ್ತಿದ್ದಂತೆಯೇ, ಮೊಬೈಲ್ ಕೊಡಿಸದಿದ್ದಕ್ಕೆ ಎಸ್ಸೆಸ್ಸೆಲ್ಸಿ ವಿಧ್ಯಾರ್ಥಿ ಆತ್ಮಹತ್ಯೆ ಎಂಬ ಸುದ್ದಿ ನೋಡಿ ಕುತೂಹಲದಿಂದ ಓದಿದರೆ, ನಾನು ಮೇಲೆ ತಿಳಿಸಿದ ಹುಡುಗನದ್ದೇ ಸುದ್ದಿ ಅದಾಗಿತ್ತು.
ತನ್ನ ಎಲ್ಲ ಸಹಪಾಠಿಗಳ ಬಳಿ ಮೊಬೈಲ್ ಇದೆ ತನಗೂ ಒಂದು ಕೊಡಿಸಿರೆಂದು ಕೃಷಿಕ ಕುಟುಂಬದ ಪೋಷಕರಲ್ಲಿ ಹಿಂದಿನ ದಿನ ಆಗ್ರಹಿಸಿ, ಪೋಷಕರು ನಿರಾಕರಿಸಿದ್ದ ಕಾರಣ ಮನ ನೊಂದು ಮಾರನೇ ದಿನ ಬೆಳಗ್ಗಿನ ಜಾವ ಮನೆಯ ಸಮೀಪ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಒಂದರಲ್ಲಿ ನೇಣಿಗೆ ಶರಣಾಗಿದ್ದ ಸುದ್ದಿ ಓದಿ ಒಂದು ಕ್ಷಣ ಧಿಗ್ಬ್ರಮೆಗೊಳಗಾದೆ.
ಒಂದು ಮೊಬೈಲ್ ಕೊಡಿಸದಿದ್ದಕ್ಕೆ ಆತ್ಮಹತ್ಯೆಗೊಳಗಾಗುವಂತಹ ದುರ್ಬಲ ಯುವ ಜನತೆಯನ್ನು ಬೆಳೆಸುತ್ತಿದ್ದೇವೆಯಾ, ಪರೀಕ್ಷೆಗಳ ಫಲಿತಾಂಶಗಳು ಬಂದಾಗಲೂ ಇದೇ ಪುನರಾವರ್ತನೆ ಆಗುತ್ತಿರುವುದು ಖೇದಕರ. ನನಗೆ ಉಕ್ಕಿನ ದೇಹದ ತರುಣರನ್ನು ಕೊಡಿ ನಾನೀಗಲೇ ಸ್ವಾತಂತ್ಯ್ರವನ್ನು ಕೊಡಿಸುತ್ತೇನೆ ಎಂದ ವಿವೇಕಾನಂದರು ಖಂಡಿತವಾಗಿಯೂ ಬಯಸಿದ್ದು ಇಂತಹ ದುರ್ಬಲ ಮನಸ್ಸಿನ ಯುವ ಜನತೆಯನ್ನಲ್ಲಾ. ಆಟೋಟಗಳೊಂದಿಗೆ ಪರಿಸರದ ಮಧ್ಯದಲ್ಲಿ ನೈಸರ್ಗಿಕವಾಗಿ ಗುರುಕುಲ ಪದ್ದತಿಯಲ್ಲಿ ಪ್ರಾಯೋಗಿಕವಾಗಿ ಕಲಿತು ವಿದ್ಯೆಯ ಜೊತೆಗೆ ಯೋಗ, ದೈಹಿಕ ಪರಿಶ್ರಮದ ಮೂಲಕ ಮಾನಸಿಕವಾಗಿಯೂ ದೈಹಿಕವಾಗಿಯೂ ಸಧೃಡರಾಗುತ್ತಿದ್ದ ಪದ್ದತಿ ನಶಿಸಿ ಬ್ರಿಟಿಷ್ ಅಧಿಕಾರಿ ಮೆಕಾಲೆಯ ದುರಾಲೋಚನೆಯಿಂದ ಆರಂಭಗೊಂಡ ಆಧುನಿಕತೆಯ ಹೆಸರಿನಲ್ಲಿ ಶಿಕ್ಷಣ ನಾಲ್ಕು ಗೋಡೆಗಳ ಮಧ್ಯದಲ್ಲಿ , ವಿಷಯದ ಆಳವಾದ ಜ್ಣಾನವಿಲ್ಲದೆ ಕೇವಲ ಅಂಕಗಳಿಗಷ್ಟೇ ಮಹತ್ವ ನೀಡುವ, ಉರು ಹೊಡೆಯುವ ಪದ್ದತಿಯಿಂದಾಗಿ ಮತ್ತು ಬಹುತೇಕ ಪೋಷಕರು ತಮ್ಮ ಮಕ್ಕಳು ಡಾಕ್ಟರ್ ಇಲ್ಲವೇ ಇಂಜೀನೀಯರ್ಗಳೇ ಆಗಬೇಕೆನ್ನುವ ಒತ್ತಾಯದಿಂದ ಮಕ್ಕಳನ್ಣ್ನು ಮನೆಯೊಳಗೇ ಕೂಡಿಹಾಕಿರುವ ಪರಿಣಾಮವೋ, ಮನೆಯ ಹೊರಗೆ ಆಡಲು ಕಳುಹಿಸಿದರೆ ಎಲ್ಲಿ ಮಕ್ಕಳಿಗೆ ನೋವಾಗುವುದೋ ಇಲ್ಲವೇ, ಮಕ್ಕಳು ಆಟದಲ್ಲೇ ಮಗ್ನರಾಗಿ ಸಮಯ ಹಾಳು ಮಾಡಿ ಓದಿನ ಕಡೆ ಗಮನ ಹರಿಸುವುದೆಲ್ಲವೆಂದು ತಿಳಿದ ಪೋಷಕರು ಮಕ್ಕಳ ಕೈಗೆ ವಿಡಿಯೋ ಆಟಿಕೆಗಳನ್ನು ಕೊಟ್ಟ ಪರಿಣಾಮವೋ, ಮನೆಯಲ್ಲಿಯೇ ಕುಳಿತು ಇಡೀ ಪ್ರಪಂಚವನ್ನೇ ನೋಡಬಲ್ಲ ಟಿವಿ ಮತ್ತು ಚಲನ ಚಿತ್ರಗಳ ಪ್ರಭಾವವೋ. ದುಬಾರಿಯಾಗಿದ್ದ ಮೊಬೈಲ್ ಇಂಟರ್ ನೆಟ್ ವೆಚ್ಚ ಅಗ್ಗವಾದ ಮೇಲಂತೂ ಬೇಕೋ ಬೇಡವೂ ಎರೆಡೆರಡು ಸಿಮ್ ಕಾರ್ಡ್ಗಳ ಮೂಲಕ ಮಕ್ಕಳು ನೋಡಬಾರದ್ದನ್ನೆಲ್ಲಾ ನೋಡುವ ಅನಗತ್ಯವಾಗಿ ತಮ್ಮ ಸ್ನೇಹಿತರೊಂದಿಗೆ ಚಾಟ್ ಮಾಡುವ, ಸೋಷಿಯಲ್ ಮೀಡಿಯಾಗಳಲ್ಲಿ ಹೆಚ್ಚು ಹೆಚ್ಚಿನ ಸಮಯವನ್ನು ಪೋಲು ಮಾಡುವ ಚಟ ಬೆಳೆಸಿಕೊಂಡ ಪರಿಣಾಮವೋ, ಈ ದುರಂತಮಯ ಸಾವಿನ ಹಿಂದಿನ ಕಾರಣವಿರಬಹುದು.
ನರ್ಸರಿಯಲ್ಲಿ ಸಣ್ಣ ಮಕ್ಕಳಿಗೆ A for Apple, B for Ball, C for Cat, D for Dog ಎಂದು ಹೇಳಿಕೊಡುತ್ತಿದ್ದವರು ಈಗ A-Android, B for Blue tooth, C for Chat, D for Download ಎಂದು ಹೇಳಿಕೊಡುವ ಸಂಧರ್ಭವೂ ಬಂದೊದಗಿದರೂ ಅತಿಶಯೋಕ್ತಿಯೇನಲ್ಲ. ಒಂದರಿಂದ ಇಪ್ಪತ್ತರ ವರಗಿನ ಮಗ್ಗಿಯನ್ನು ಕಂಠಪಾಠ ಮಾಡಿಸುತ್ತಿದ್ದದ್ದು ಮಾಯವಾಗಿ ಸಣ್ಣ ಸಣ್ಣ ಸಂಕಲನ, ವ್ಯವಕಲನಕ್ಕೂ ಮೋಬೈಲ್ ಕ್ಯಾಲುಕ್ಲೇಟರ್ ಬಳೆಸಿ ಮಕ್ಕಳ ಸಾಮಾನ್ಯ ಗಣಿತದ ಪರಿಣಿತಿಯನ್ನೂ ಹಾಳು ಮಾಡುವ ಕೆಟ್ಟ ಸಂಪ್ರದಾಯ ಆತಂಕಕಾರಿಯಾಗಿದೆ.
ಮಲಗಲು ಹಠ ಮಾಡುವ ಇಲ್ಲವೇ, ಊಟ ಮಾಡಲು ತಾಯಿಯರಿಗೆ ತೊಂದರೆ ಕೊಡುವ ಸಣ್ಣ ಮಕ್ಕಳನ್ನು ಸಮಾಧಾನ ಪಡಿಸುವ ಗೋಜಿಗೇ ಹೋಗದೆ ಅವರ ಕೈಗೆ ಮೊಬೈಲ್ ಫೋನ್ ಕೊಟ್ಟು ಸುಮ್ಮನಾಗಿಸುವ ಪರಿಪಾಠವನ್ನು ನಮ್ಮ ಇಂದಿನ ತಾಯಂದಿರು ಬೆಳೆಸಿ ಕೊಂಡಿರುವುದು ಮತ್ತೂ ಕಳವಳಕಾರಿಯಾದ ವಿಷಯವೇ ಆಗಿದೆ.
ನಿಜ ಇಂದಿನ ಆಧುನಿಕ ಜಗತ್ತಿನಲ್ಲಿ ಜನರ ನಡುವಿನ ಸಂಪರ್ಕಕ್ಕೆ ಮೊಬೈಲ್ ಅತ್ಯವಶ್ಯಕವಾದರೂ ಅತೀಯಾದರೆ ಅಮೃತವೂ ವಿಷ ಎನ್ನುವ ಹಾಗೆ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚಾಗಿದೆ. ಮನೆಯಲ್ಲಿ ಒಂದು ಕೋಣೆಯಿಂದ ಮತ್ತೊಂದು ಕೋಣೆಗಳಲ್ಲಿರುವವರನ್ನು ಕರೆಯಲು ಮೋಬೈಲ್ ಬಳೆಸುತ್ತಿರುವುದು ಸರ್ವೇಸಾಮನ್ಯವಾಗಿದೆ. ಸಭೆ ಸಮಾರಂಭಗಳಿಗೆ ಅಂದದ ಚೆಂದದ ಆಮಂತ್ರಣ ಪತ್ರ ಮಾಡಿಸಿ ಓಂದು ತಿಂಗಳಿಗೆ ಮುಂಚೆಯೇ ಎಲ್ಲ ಬಂಧು ಮಿತ್ರರ ಮನೆಗಳಿಗೆ ಹೋಗಿ ಮುಖತಃ ಆಮಂತ್ರಿಸುತ್ತಿದ್ದ ಪದ್ದತಿ ಎಂದೋ ಮಾಯವಾಗಿ ಬರೀ ಮೊಬೈಲ್ ಸಂದೇಶಗಳಲ್ಲೇ ಆಮಂತಿಸುವುದು ಸಹಜವಾಗಿದೆ. ಆ ಸಭೆ ಸಮಾರಂಭಗಳಲ್ಲಿ ಬಂಧು ಮಿತ್ರರೆಲ್ಲಾ ಒಳಗೂಡಿ ಆತ್ಮೀಯತೆಯಿಂದ ಪರಸ್ಪರ ಕಷ್ಟ ಸುಖಗಳನ್ನು ಹಂಚಿಕೊಳ್ಳುವುದು ಕಾಣೆಯಾಗಿ ಒಂದೇ ಜಾಗದಲ್ಲಿ ಕುಳಿತಿದ್ದರೂ ಎಲ್ಲರೂ ತಮ್ಮ ತಮ್ಮ ಮೊಬೈಲ್ಗಳಲ್ಲಿಯೇ ಮಳುಗಿ ಹೋಗುತ್ತಿರುವುದು ಯೋಚಿಸಬೇಕಾದ ವಿಷಯವಾಗಿದೆ.
ಬಡವ ಬಲ್ಲಿದ, ಹಿರಿಯ ಕಿರಿಯ ಎಂದು ಬೇಧವಿಲ್ಲದೆ ಎಲ್ಲರನ್ನೂ ಭೌಗೋಳಿಗವಾಗಿ ಒಂದುಗೂಡಿಸುತ್ತಾದರೂ ಮಾನಸಿಕವಾಗಿ ದೂರ ಮಾಡುತ್ತಿರುವುದು ಸುಳ್ಳಲ್ಲ. ಅಷ್ಟೇ ಏಕೆ ನನ್ನ ಮತ್ತು ನನ್ನ ಪತ್ನಿಯ ನಡುವಿನ ಇಪ್ಪತ್ತು ವರ್ಷಗಳ ಸುಮಧುರ ದಾಂಪತ್ಯಕ್ಕೆ ಮಗ್ಗಲ ಮುಳ್ಳಾಗಿರುವುದೂ ಇದೇ ಮೋಬೈಲ್ ಆಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್, ಕಛೇರಿಗೆ ಹೋಗುತ್ತಿರುವಾಗಲೂ ರಸ್ತೆಗಳ ಸಿಗ್ನಲ್ಸ್, ಸಿಗ್ನಲ್ ನಡುವೆಯೇ ಮೊಬೈಲ್, ರಾತ್ರಿ ಮನೆಗೆ ಬಂದು ಊಟ ಮಾಡಿದ ಕೂಡಲೇ ಸದ್ದಿಲ್ಲದೆ ಮೊಬೈಲ್, ಮಲಗುವಾಗ ತಲೆದಿಂಬಿನ ಪಕ್ಕದಲ್ಲೇ ಮೊಬೈಲ್ ಇಟ್ಟಿಕೊಂಡರೆ ಯಾವ ಹೆಂಡತಿಯಾದರೂ ಎಷ್ಟು ದಿನ ಸಹಿಸಿಯಾಳು?
ಇಷ್ಟೆಲ್ಲಾ ರಂಪ ರಾಮಾಯಣಗಳನ್ನು ಓದಿದ ನಂತರ, prevention is better than cure ಎನ್ನುವ ಆಂಗ್ಲ ನಾಣ್ಣುಡಿಯಂತೆ ಅಗತ್ಯವಿದ್ದಾಗ ಮಾತ್ರ ( ನನ್ನನ್ನೂ ಒಳಗೊಂಡು) ಮೊಬೈಲ್ ಬಳೆಸುತ್ತಾ, ಅಗತ್ಯ ಕೆಲಸಗಳನ್ನು ಪೂರೈಸುತ್ತಾ ಮನೆ ಮನಗಳನ್ನು ಗೆಲ್ಲುವ ಪ್ರಯತ್ನ ಮಾಡೋಣವೇ?
ಏನಂತೀರಿ?