ವಾರನ್ನ ಮತ್ತು ಧರ್ಮ ಕಾರ್ಯಗಳು

ಇತ್ತೀಚೆಗೆ  ವಾರನ್ನ ಕುರಿತಾದ ನನ್ನ  ಲೇಖನವೊಂದಕ್ಕೆ ಭಾರೀ ಪ್ರೋತ್ಸಾಹಕರ ಆಭಿಮಾನಗಳ ಸುರಿಮಳೆಯಾಗಿದ್ದು  ನಿಜಕ್ಕೂ ನನಗೆ ಸಂತೋಷ ಮತ್ತು ಆಶ್ವರ್ಯವನ್ನು ಉಂಟು ಮಾಡಿತು.  ಸಂತೋಷವೇಕೆಂದರೆ ಪ್ರತಿಕ್ರಿಯೆ ನೀಡಿದ್ದ ಬಹುಪಾಲು ಜನರು ಪ್ರತ್ಯಕ್ಷವಾಗಿಯೋ ಇಲ್ಲವೇ ಅವರ ಕುಟಂಬದವರೋ ವಾರನ್ನದಿಂದ ಉಪಕೃತರಾದವರೇ ಆಗಿದ್ದರು. ಇನ್ನೂ ಹಲವರು ತಮ್ಮ ಮನೆಯಲ್ಲಿಯೋ ಅಥವಾ ತಮ್ಮ ಸಂಬಂಧಿಕರುಗಳ ಮನೆಯಲ್ಲಿ ಮೂವತ್ತು ನಲವತ್ತು ವರ್ಷಗಳ ಹಿಂದೆ ಈ ಪದ್ದತಿ ರೂಡಿಯಲ್ಲಿದ್ದದನ್ನು ನೆನಪಿಸಿಕೊಂಡರೆ,  ಇನ್ನೂ ಅನೇಕರು ತಮ್ಮ ತಂದೆತಾಯರಿಂದ ವಾರನ್ನದ ಬಗ್ಗೆ ಕೇಳಿ ತಿಳಿದವರೇ ಆಗಿದ್ದರು. ಎಲ್ಲದ್ದಕ್ಕಿಂತ ಹೆಚ್ಚಾಗಿ ಈ ಮೇಲೆ ತಿಳಿಸಿದವರೆಲ್ಲರೂ ಅವಶ್ಯವಿದ್ದ ವಿದ್ಯಾರ್ಥಿಗಳಿಗೆ ತಮ್ಮೆಲ್ಲರ ಮನೆಗಳಲ್ಲಿ  ಊಟೋಪಚಾರಗಳನ್ನು ವ್ಯವಸ್ಥೆ ಮಾಡಲು ಸಿದ್ದರಾಗಿದ್ದರು.  ಆಶ್ಚರ್ಯವೇನೆಂದರೆ  ನಾವೇನೂ ಊಟ ಹಾಕಲು ಸಿದ್ಧರಿದ್ದೇವೆ ಆದರೆ  ಊಟ ಮಾಡುವುದಕ್ಕೇ ಹುಡುಗರೇ ಬರೋದಿಲ್ಲ  ಮತ್ತು  ಈಗಿನ ಕಾಲದಲ್ಲಿ  ಅಂತಹ ನಂಬಿಕಾರ್ಹ, ವಿಶ್ವಾಸಾರ್ಹ, ವಿಧ್ಯಾಬ್ಯಾಸದ ತುಡಿತವಿರುವ ವಿಧ್ಯಾರ್ಥಿಗಳು ಎಲ್ಲಿದ್ದಾರೆ ಎಂದು ಪ್ರಶ್ನಿಸುವರೇ ಅನೇಕರಿದ್ದರು. ಇನ್ನೊಬ್ಬರು ವಾರನ್ನವನ್ನು ಪ್ರಚಲಿತ ಅನ್ನಭಾಗ್ಯಕ್ಕೆ ಹೋಲಿಸಿ ತುಲನೆ ಮಾಡತೊಡಗಿದರು.

ನಿಜ ಹೇಳ ಬೇಕೆಂದರೆ ವಾರನ್ನಕ್ಕೇ ವಾರನ್ನವೇ ಸಾಟಿ ಅದನ್ನು ಬೇರಾವುದಕ್ಕೂ  ಹೋಲಿಸಲಾಗದು. ವಾರನ್ನದ ಮನೆಗಳ ಬಹುತೇಕರು  ಸಿರಿವಂತರಾಗಿರಲಿಲ್ಲ. ಸಾಧಾರಣ ಮಧ್ಯಮ ಕುಟುಂಬದವರೇ ಆಗಿದ್ದರು. ಅವರ ಮನೆಗಳಲ್ಲೂ ಮಕ್ಕಳ ಸಾಮ್ರಾಜ್ಯವೇ ಇದ್ದಿರುತ್ತಿದ್ದಾದರೂ, ತಮ್ಮ ಮಕ್ಕಳ ಜೊತೆ ಮತ್ತೆರಡು ಮೂರು ಮಕ್ಕಳು ಹೆಚ್ಚಿನ ಹೊರೆಯಲ್ಲಾ ಎಂದು ಭಾವಿಸಿ ನಿಸ್ವಾರ್ಥದಿಂದ ಸಾಕುವ ಸಮಾಜಮುಖಿಗಳಾಗಿದ್ದವರು. ಅವರಾರೂ ಹೊಟ್ಟೆ ತುಂಬಿದವರಲ್ಲವಾದರೂ,  ಅವರೆಲ್ಲರೂ ಹಸಿವಿನ ರುಚಿ ಆರಿತವರಾದ್ದರಿಂದ ತಮಗೆ ಎಷ್ಟೇ ಕಷ್ಟಗಳಿದ್ದರೂ ಕೆಲವೊಮ್ಮೆ ತಮ್ಮ ಮಕ್ಕಳಿಗೆ ಒಂದು ತುತ್ತು ಕಡಿಮೆ ಹಾಕಿದಯಾದರೂ ಅಥವಾ ಆ ತಾಯಂದಿರು  ತಮ್ಮ ಪಾಲನ್ನೇ ವಯಸ್ಸಿಗೆ ಬಂದ ಮಕ್ಕಳು ಅದೆಲ್ಲಿ ಸಂಕೋಚದಿಂದ ಅರೆಹೊಟ್ಟೆ ತಿಂದು ಮಲಗುವರೋ ಎಂದು ಕಕ್ಕುಲತೆಯಿಂದ ಉಣಬಡಿಸುತ್ತಿದ್ದ ಅನ್ನಪೂರ್ಣೆಯರಾಗಿದ್ದರು. ವಾರನ್ನದ ಮಕ್ಕಳಿಗೆ ಗಟ್ಟಿಯಾದ ಕೆನೆ ಮೊಸರನ್ನು ಬಡಿಸಿ ತಮ್ಮ ಹೆತ್ತ ಮಕ್ಕಳಿಗೆ ಮಜ್ಜಿಗೆಯನ್ನು ಬಡಿಸುತ್ತಿದ್ದ ಉದಾಹರಣೆಗಳೂ ಉಂಟು. ಅವರಾರಿಗೂ ಪ್ರಚಾರ ಪ್ರಿಯತೆ ಇರಲಿಲ್ಲ.  ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗ ಬಾರದೆಂಬ ಮಹಾನ್ ಸ್ವಾಭಿಮಾನಿ ತಾಯಂದಿರಾಗಿದ್ದವರು.  ತಾವು ಮಾಡಿದ ಪುಣ್ಯಕಾರ್ಯಗಳು ತಮ್ಮ ಮಕ್ಕಳನ್ನು ಮುಂದೆಂದೋ ಕಾಪಾಡುತ್ತದೆಯೆಂಬ ನಂಬಿಕೆ ಹೊರತಾಗಿ ಬೇರಾವ ಅಪೇಕ್ಷೆಯೂ ಅವರಲ್ಲಿರಲಿಲ್ಲ. ಈ ಪದ್ದತಿಯಿಂದ ತಮ್ಮ ಮನೆಗಳಲ್ಲಿಯೂ ತಮ್ಮ ಮಕ್ಕಳಿಗೆ  ಪರಕೀಯ ಭಾವನೆಯಿಂದ ಮುಕ್ತವಾಗಿ ಇತರರೊಂದಿಗಿನ  ಸಂಬಂಧ, ಸಹಬಾಳ್ವೆ ಮತ್ತು  ಹಂಚಿ ತಿನ್ನುವ ಅಭ್ಯಾಸವಾಗುತ್ತದೆ ಎಂದೇ ಭಾವಿಸಿದ್ದರು.  ಇಂದಿಗೂ ಅನೇಕ ವಾರನ್ನದದಲ್ಲಿ ಬೆಳೆದ ಮಕ್ಕಳು  ಅವರ ಸಹ ಕುಟುಂಬದವರೇ ಎಂದು ಭಾವಿಸಿ ತಮ್ಮೆಲ್ಲಾ ಸುಖಃ ದುಖಃಗಳಲ್ಲಿ ಸಮಾನರಾಗಿರುವುದನ್ನು ನೋಡಿದ್ದೇನೆ. ಆದಕ್ಕೂ ಮಿಗಿಲಾಗಿ ನಮ್ಮ ಸೋದರತ್ತೆಯ ಮಾವನವರು  ತಮ್ಮ ಸಾಕು ಮಗನಿಗೆ ತಮ್ಮ ಇತರ ಮಕ್ಕಳ ಜೊತೆಯಲ್ಲಿ ತಮ್ಮ ಸ್ವಯಾರ್ಜಿತ ಆಸ್ತಿಯ ಪಾಲು ಹಂಚಿಕೆ ಮಾಡಿದಾಗಲೂ ಚಕಾರವೆತ್ತದ ಅನ್ಯೋನ್ಯತೆಯನ್ನು ಕಂಡಿದ್ದೇನೆ. ಅಂತಹ ಮಹನೀಯರು, ತಾಯಂದಿರು, ಆವರ ಸತ್ಯ ಸಂಧತೆ, ವಿಶಾಲ ಮನೋಭಾವ,ಪರೋಪಕಾರ, ಹೊರಗಿನವರನ್ನು ಶ್ರದ್ಧೆಯಿಂದ ಉಪಚರಿಸುವುದು, ಅತಿಥಿ ದೇವೋಭವ ಎಂಬುದನ್ನು  ಅಕ್ಷರಶಃ ಪರಿಪಾಲಿಸಿದ ತಂದೆತಾಯಿಯರು ನಿಜಕ್ಕೂ ಪ್ರಾತಃ ಸ್ಮರಣೀಯರು. ಇಂದಿನ ಪೀಳಿಗೆಯಲ್ಲಿ ಅಂತಹ ಸಂಸ್ಶಾರ ಮತ್ತು ಸಂಸ್ಕೃತಿಗಳು  ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿರುವುದು ನಿಜಕ್ಕೂ ಕಳವಳಕಾರಿಯೇ ಸರಿ.

ಲೇಖನ ಪ್ರಕಟಿಸಿದ ನಂತರ ಬಂದ ಕಾಳಜಿ ಮತ್ತು  ಮೆಚ್ಚಿಗೆಗಳನ್ನು ನೋಡಿದ ಮೇಲೆ, ನನಗೂ ಕೂಡಾ ಈ  ವಾರನ್ನದ ರೂಡಿ ಹೇಗೆ   ಬಂದಿರ ಬಹುದೆಂಬ ಕೂತೂಹಲದಿಂದ ಯೋಚಿಸಿದಾಗ ಈ ಕೆಲವೊಂದು ಅಂಶಗಳು ನೆನಪಿಗೆ ಬಂದವು.

ನಮ್ಮ ಪೂರ್ವಜರು ಹಿಂದಿನಿಂದಲೂ ನಮ್ಮ ಗಳಿಕೆಯಲ್ಲಿ ಒಂದು ಪಾಲನ್ನು ದೇವರಿಗೆ ಮೀಸಲಾಗಿಡುವ ಸತ್ಸಂಪ್ರದಾಯವನ್ನು ರೂಢಿಗೆ ತಂದಿದ್ದಾರೆ. ಅದು ದವಸ ಧಾನ್ಯಗಳ ರೂಪದಲ್ಲಿ ಇರಬಹುದು, ವಸ್ತ್ರಾಭರಣ ರೂಪದಲ್ಲಿಯೋ, ಧನಕನಕ ರೂಪದಲ್ಲಿಯಾಗಿಯೋ ಒಟ್ಟಿನಲ್ಲಿ ನಮ್ಮ ಸಂಪಾದನೆಯ ಒಂದು ಪಾಲನ್ನು ದೇವರಿಗೆ ಮೀಸಲಾಗಿದುವ ಪದ್ದತಿಯನ್ನು  ಜಾರಿಗೆ ತಂದಿದ್ದಾರೆ. ಅದರಂತೆ ಪ್ರತಿಬಾರಿ ಬೆಳೆ ಬಂದಾಗ ಸಮೀಪದ ಮಂದಿರ ಮಠಗಳಿಗೆ ಯತೇಚ್ಛವಾಗಿ ದಾನ ಮಾಡುವ ಪದ್ದತಿ ಇಂದಿಗೂ ನಮ್ಮಲ್ಲಿ ಜಾರಿಯಲ್ಲಿದೆ.  ಮನೆಗಳಲ್ಲಿ ನಡೆಸುವ ಪ್ರತಿ ಶುಭಕಾರ್ಯಗಳಿಗಿಂತ ಮುಂಚೆ ಮನೆ ದೇವರನ್ನು ಪ್ರಾರ್ಥಿಸಿ ಕಾಣಿಕೆಯನ್ನು ಎತ್ತಿ ಇಡುವುದೋ ಇಲ್ಲವೆ ಸಾಧು ಸಂತರನ್ನು ಮನೆಗಳಿಗೆ ಕರೆಸಿ ಪಾದಪೂಜೆ ಮಾಡಿಸಿ ಗುರು ಕಾಣಿಕೆ ಅಥವಾ ಮಂಗಲ ನಿಧಿ  ಎಂದು ಅರ್ಪಿಸುವುದನ್ನು ನೋಡಿದ್ದೇವೆ. ಅನೇಕರು ತಮ್ಮ ಆಸ್ತಿಗಳನ್ನೂ ಮಂದಿರ ಮಠಗಳಿಗೆ ದಾನ ಮಾಡಿರುವ  ಪುರವೆಗಳನ್ನು ನಾವು ಕಾಣ ಬಹುದಾಗಿದೆ.  ಈ ರೀತಿಯಾಗಿ ಭಕ್ತಾದಿಗಳಿಂದ ಸಂಗ್ರಹವಾದ ನಿಧಿಗಳಿಂದಲೇ ಇಂದೂ ಕೂಡ ಅನೇಕ ಮಠ ಮಂದಿರಗಳು ತಮ್ಮ ಧರ್ಮದ  ಆಚರಣೆಯ ಅನುಗುಣವಾಗಿ ಧಾರ್ಮಿಕ ಕಾರ್ಯಗಳನ್ನು ಮುಂದುವರಿಸಿದೆ.

ಉತ್ತರ ಮತ್ತು ದಕ್ಷಿಣ  ಕನ್ನಡ ಭಾಗಗಳಲ್ಲಿ  ಧರ್ಮಕ್ಷೇತ್ರಗಳು ಹೆಚ್ಚಾಗಿದ್ದು ಅಲ್ಲಿ ಪ್ರತಿನಿತ್ಯವೂ ಭಕ್ತರಿಗೆ ಅನ್ನ ದಾಸೋಹ ನಡೆಯುತ್ತಿದ್ದ ಕಾರಣ ಬಹುತೇಕ ವಿಧ್ಯಾರ್ಥಿಗಳು ಅಲ್ಲಿಯ ಮಂದಿರ, ಮಠಗಳನ್ನೇ ಆಶ್ರಯಿಸಿ ಅಲ್ಲಿಯೇ ಸಣ್ಣ ಪುಟ್ಟ ದೇವರ ಕೆಲಸಗಳಲ್ಲಿ ಭಾಗಿಯಾಗಿ ಸ್ವಕಾರ್ಯದ ಜೊತೆಗೆ  ಸ್ವಾಮೀ ಕಾರ್ಯವೂ ಮುಗಿದು ಹೋಗುತ್ತಿತ್ತು.

ಇನ್ನು ಉತ್ತರ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಅನೇಕ ಧಾರ್ಮಿಕ ಮಠಗಳ ಪ್ರಾಭಲ್ಯ  ಅಂದಿಗೂ, ಇಂದಿಗೂ  ಜಾರಿಯಲ್ಲಿದೆ. ಸಾಕಷ್ಟು ಭಕ್ತಾದಿಗಳ  ಆರ್ಥಿಕ  ನೆರವಿನಿಂದ ಸಧೃಡವಾಗಿರುವ ಈ ಮಠಗಳು ಧರ್ಮಜಾಗರಣೆಯ ಜೊತೆ ಶಾಲಾ ಕಾಲೇಜುಗಳು, ಉಚಿತ ವಿಧ್ಯಾರ್ಥಿನಿಲಯಗಳು ಮತ್ತು  ನಿತ್ಯ್ ದಾಸೋಹವನ್ನು ಏರ್ಪಡಿಸಿರುವುದರಿಂದ ಆ ಭಾಗದ ಹೆಚ್ಚಿನ ವಿಧ್ಯಾರ್ಥಿಗಳು ಇದರ  ಸದ್ವಿನಿಯೋಗ ಪಡಿಸಿಕೊಳ್ಳುತ್ತಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠದ ಅಡುಗೆಯ ಮನೆಯ ಒಲೆ  ನೂರಾರು ವರ್ಷಗಳಿಂದ ಆರಿಯೇ ಇಲ್ಲ ಎನ್ನುವ ಹೆಗ್ಗಳಿಕೆ ಇದೆ.

ಈ ಪದ್ದತಿ ನಮ್ಮಲ್ಲಷ್ಟೇ ಅಲ್ಲದೆ ಲಂಗರ್ ಎನ್ನುವ ಹೆಸರಿನಲ್ಲಿ ನಾಡಿನಾದ್ಯಂತ ಎಲ್ಲಾ ಗುರುನಾನಕ್ ಭವನಗಳಲ್ಲಿಯೂ ಮತ್ತು ಕೇವಲ ನಮ್ಮ ಭಾರತದಲ್ಲಷ್ಟೇ ಅಲ್ಲದೆ ಬ್ರಿಟನ್ ಮತ್ತು  ಕೆನಡ ದೇಶಗಳಲ್ಲಿಯೂ ರೂಢಿಯಲ್ಲಿದ್ದು ಭಕ್ತಾದಿಗಳ ಜೊತೆ  ಲಕ್ಷಾಂತರ ವಿದ್ಯಾರ್ಥಿಗಳ ಹಸಿವನ್ನು ನೀಗಿಸುತ್ತಿದೆ.

ಇತ್ತೀಚೆಗೆ ಶ್ರೀ ಕೃಷ್ಣ ಪಂಥ ಅಂದರೆ ಇಸ್ಕಾನ್ ದೇವಾಲಯಗಳೂ ಪ್ರಪಂಚಾದ್ಯಂತ ಅಕ್ಷಯ ಪಾತ್ರೆ ಎನ್ನುವ ಹೆಸರಿನಲ್ಲಿ ನಿತ್ಯ ದಾಸೋಹ ನಡೆಸುತ್ತಿವೆ.

ಆದರೆ  ವಾರನ್ನ ಎನ್ನುವ ಹೆಸರಿನಲ್ಲಿ  ರಾಜ್ಯದ ಉಳಿದೆಲ್ಲಾ ಭಾಗಗಳಿಗಿಂತ  ಹೆಚ್ಚಾಗಿ ಹಳೆಯ  ಮೈಸೂರು ಪ್ರಾಂತ್ಯದಲ್ಲಿಯೇ  ಕಾಣಸಿಗುತ್ತದೆ. ಹೆಚ್ಚಿನ ಹಳ್ಳಿಗಳಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹತ್ತಿರದ ಶಾಲೆಗಳಲ್ಲಿಯೇ ಮುಗಿಸಿ ಪ್ರೌಢ ಶಿಕ್ಷಣಕ್ಕೆ ಸಮೀಪದ ಪಟ್ಟಣಗಳಿಗೆ ಹೋಗಬೇಕಗುತ್ತಿತ್ತು.  ಆಗೆಲ್ಲಾ  ಮೈಸೂರು ಪ್ರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯ ಧರ್ಮಛತ್ರಗಳಿಲ್ಲದಿದ್ದ ಕಾರಣ ಮತ್ತು  ಮಡಿವಂತಿಕೆಯ  ಕಾಲ ಮತ್ತು ಬಡತನವಿದ್ದ ಕಾರಣ ಹೋಟೆಲ್ನಲ್ಲಿ ಊಟ ಮಾಡಲು ಸಾಧ್ಯವಾಗದ ಕಾರಣ ಮತ್ತು ಮಮತೆಯ, ವಿಶಾಲ ಹೃದಯದ  ಶ್ರದ್ಢೇಯ ತಾಯಂದಿರು ಈ ಪ್ರಾಂತ್ಯದಲ್ಲಿ ಬಹಳವಾಗಿದ್ದ ಕಾರಣ  ವಾರನ್ನದ ಪದ್ದತಿ ರೂಢಿಗೆ ಬಂದಿರಬಹುದು.

ಇನ್ನು ಕೋಲಾರ ಭಾಗದ ಸುತ್ತ ಮುತ್ತಲಿನಲ್ಲಿ ಆರ್ಯ ವೈಶ್ಯ ಸಮುದಾಯದವರು ಅನೇಕ ಕಡೆಗಳಲ್ಲಿ ಉಚಿತ ವಿದ್ಯಾರ್ಥಿ ನಿಲಯಗಳನ್ನು  ಕಟ್ತಿಸುವ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ  ದಿನ ನಿತ್ಯ ಅನ್ನ ದಾನ ಮಾಡುತ್ತಿದ್ದಾರೆ.  ಇದಲ್ಲದೆ ರಾಜ್ಯಾದ್ಯಂತ ಅನೇಕ  ಪಂಗಡಗಳು ಅವರವರ ಸ್ವಾಮಿಗಳ ಹೆಸರಿನಲ್ಲಿ ಮತ್ತು  ಅನೇಕ ದಾನಿಗಳು ತಮ್ಮ ಹಿರಿಕರ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಕೈಯಲ್ಲಾದ ಮಟ್ಟಿಗೆ ಸಹಾಯ ಮಾಡುತ್ತಿದ್ದಾರೆ.

ಆದರೆ ಇಂದು ನಮ್ಮ ಸರ್ಕಾರವು ನಮ್ಮ  ಮಂದಿರ ಮತ್ತು ಮಠಗಳ ಸತ್ಕಾರ್ಯವನ್ನು ಗಮನಿಸದೇ ಕೇವಲ ಆದಾಯವನ್ನೇ ನೆಪವಾಗಿಟ್ಟು ಕೊಂಡು ರಾಜ್ಯಾದ್ಯಂತ  ಬಹುತೇಕ ಮಂದಿರ  ಮಠಗಳನ್ನು ತನ್ನ ಮುಜರಾಯಿ ಇಲಾಖೆಯ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದು ವಿಷಾಧನೀಯವೇ ಸರಿ. ಒಮ್ಮೆ ದೇವಸ್ಥಾನಗಳು ಸರ್ಕಾರದ ಆಡಳಿತಕ್ಕೋಳಗಾದಲ್ಲಿ ಧರ್ಮ ಕಾರ್ಯಗಳನ್ನು ಖರ್ಚು ಎಂದು ಭಾವಿಸಿ ಬಹುತೇಕ ರೂಡಿಯಲ್ಲಿದ್ದ ಪದ್ದತಿಗಳನ್ನು  ನಿಲ್ಲಿಸಿರುವುದು ನಿಮ್ಮ ಗಮನಕ್ಕೂ ಬಂದಿರಬಹುದಷ್ಟೇ. ಗೋಕರ್ಣದ ದೇವಸ್ಥಾನ, ಬೆಂಗಳೂರಿನ ವಿದ್ಯಾರಣಪುರದ ದುರ್ಗಾ ಪರಮೇಶ್ವರಿ ದೇವಸ್ಥಾನ (ಇದರ ಬಗ್ಗೆಯ ವಿಸ್ತೃತ ಲೇಖನ ನನ್ನ ಮುಖ ಪುಟದಲ್ಲಿದೆ) ಇತ್ತೀಚಿನ ಉದಾಹರಣೆಗಳಷ್ಟೇ.  ಹಾಗಾಗಿ   ನಾವೆಲ್ಲರೂ   ಮುಜರಾಯಿ ಇಲಾಖೆಯ ಸುಪರ್ದಿಯ ದೇವಸ್ಥಾನಗಳಿಗೆ ಹೋಗೋಣ. ಶ್ರಧ್ಧೆಯಿಂದ ಭಕ್ತಿಯಿಂದ ದೇವರ ದರ್ಶನ ಪಡೆಯೋಣ ಆದರೆ ಅಲ್ಲಿಟ್ಟಿರುವ ಹುಂಡಿಗೆ ಮಾತ್ರ ಹಣ ಹಾಕುವುದು ಬೇಡ. ಬಹಳಷ್ಟು ದೇವಾಲಯಗಲಲ್ಲಿ ಸರ್ಕಾರವೇ ಲಜ್ಜೆಗೆಟ್ಟು ಆರತಿಯ ತಟ್ಟೆಗೆ ಹಾಗಿದ ಹಣ ಅರ್ಚಕರಿಗೆ, ಹುಂಡಿಗೆ ಹಾಗಿದ ಹಣ ಸರ್ಕಾರಕ್ಕೆ ಎಂದು ಫಲಕಗಳನ್ನು ಹಾಕಿಸಿದೆ. ಅಂದರೆ ಸರ್ಕಾರ ನಮ್ಮ ದೇವಾಲಗಳನ್ನು  ಭಕ್ತಿಯ ಶ್ರದ್ಢ ಕೇಂದ್ರಗಳಾಗಿ ಪರಿಗಣಿಸದೆ, ಕೇವಲ ಆದಾಯ ಕೇಂದ್ರಗಳನ್ನಾಗಿ ನೋಡುತ್ತಿರುವುದು ಶೋಚನೀಯವಾಗಿದೆ.   ನಮ್ಮ ದೇವಾಲಯಗಳ ಹುಂಡಿಯಿಂದ ಎತ್ತಿದ ಹಣವನ್ನು ತಮ್ಮ ತೆವಲುಗಳಿಗೆ  ಕೆಲ ಅಧಿಕಾರಿಗಳು ಮತ್ತು ಪಟ್ಟ ಭದ್ರ ಹಿತಾಸಕ್ತಿಗಳು ಬಳಸಿಕೊಳ್ಳುತ್ತಿರುವುದು ಎಲ್ಲರ ಗಮನಕ್ಕೂ ಬಂದಿದೆ.

ಇತ್ತೀಚೆಗೆ   ಸರ್ಕಾರವು ದೇವಾಲಯದ ಹಣವನ್ನು ರೈತರ ಸಾಲ ಮನ್ನಕ್ಕೂ ಮತ್ತು  ಸಂತ್ರಸ್ತರಿಗೆ ಬಳೆಸಿಕೊಳ್ಳಲು ಹೋದಾಗ ಉಚ್ಚನ್ಯಾಯಲಯ ಸರ್ಕಾರಕ್ಕೆ ತಪರಾಕಿ ಹಾಕಿದೆ. ಯಾವಾಗ ಸರ್ಕಾರಕ್ಕೆ ದೇವಾಲಯಗಳಿಂದ ಬರುವ ಆದಾಯ ನಿಂತು ಹೋಗುತ್ತದೋ ಆ ಕೂಡಲೇ ನಷ್ಟವಾದ ದೇವಾಲಯಗಳನ್ನು ಪುನಃ ಜನಸಾಮಾನ್ಯರಿಗೆ ಹಿಂತಿರುಗಿಸುವಂತಹ ಕಾಲವು ಅತೀ ಶೀಘ್ರದಲ್ಲಿಯೇ ಖಂಡಿತವಾಗಿಯೂ

ಬಡ ವಿದ್ಯಾರ್ಧಿಗಳಿಗೆ ನಿಜವಾಗಿಯೂ  ಸಹಾಯ ಮಾಡಬೇಕೆನಿಸಿದಲ್ಲಿ ನಗದಿಗೆ ಬದಲಾಗಿ ಅಗತ್ಯ ವಸ್ತುಗಳ ರೀತಿಯಲ್ಲಿಯೇ ಯಾವುದೇ ಸಂಘ ಸಂಸ್ಥೆಗಳ ಅಥವಾ ಮಧ್ಯವರ್ತಿಗಳ ನೆರವಿಲ್ಲದೆ  ನೇರವಾಗಿ ಕೊಡೋಣ.  ಶಾಲಾ ಕಾಲೇಜುಗಳ ವ್ಯಾಸಂಗದ ದುಡ್ಡು ಅಥವಾ ಪುಸ್ತಕ, ಸಮವಸ್ತ್ರಗಳ ಖರ್ಚನ್ನು ನೇರವಾಗಿ ಶಾಲಾಕಾಲೇಜುಗಳಿಗೆ ಕಟ್ಟುವ ಮೂಲಕ ದೇಶದ ಉಜ್ವಲ ಭವಿಷ್ಯಕ್ಕೆ ನಮ್ಮ ಅಳಿಸು ಸೇವೆ ಸಲ್ಲಿಸೋಣ

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s