ವಾರನ್ನ

ಇತ್ತೀಚೆಗೆ ಮುಖಪುಟದಲ್ಲಿ ಒಬ್ಬರು ವಾರನ್ನದ ಬಗ್ಗೆ  ಹೇಳುತ್ತಾ ಹಿಂದೆಲ್ಲಾ ನಮ್ಮ ಮನೆಗೆ ವಾರಾನ್ನದ ಹುಡುಗರು ಊಟಕ್ಕೆ ಬರ್ತಾ ಇದ್ದರು..ಅವರು ವಾರದ ಏಳು ದಿನಗಳೂ ..ದಿನಕ್ಕೊಬ್ಬರ ಮನೆಯಂತೆ ಒಪ್ಪಂದ ಮಾಡ್ಕೊಳ್ತಿದ್ರು..ನಮ್ಮ ಮನೆಗೂ ಒಬ್ಬ ಕಾಲೇಜು ಓದುವ ಹುಡುಗ ಸೋಮವಾರದ ದಿನ ಎರಡೂ ಹೊತ್ತು ಬಂದು ಊಟ ಮಾಡಿ ಹೋಗ್ತಿದ್ದ..ಕಷ್ಟದ ಕಾಲ..ವಿಧ್ಯೆ ಕಲಿಯುವ ಆಸೆ..ತುಂಬಾ ಕಷ್ಟ ಪಟ್ಟು ಓದಿ ,ವಾರಾನ್ನ ತಿಂದವರೂ ಈಗಲೂ ಅದೆಷ್ಟೋ ಮಂದಿ ಇಂದು ಒಳ್ಳೊಳ್ಳೆ ಉದ್ಯೋಗದಲ್ಲಿರಬಹುದು ಅಲ್ವೇ ಬಂಧುಗಳೇ..ನಿಮಗೂ ಗೊತ್ತೆ ? ಅಂತಾ ಪ್ರಶ್ನಿಸಿದ್ದರು.

ಹಿಂದೆಲ್ಲಾ ನಮಗೆಲ್ಲಾ ತಿಳಿದಿದ್ದಂತೆ ಮನೆಯ ತುಂಬಾ ಮಕ್ಕಳು ದುಡಿಯುವ ಕೈ ಒಂದಾದರೆ ತಿನ್ನುವ ಕೈಗಳು ಹತ್ತಾರು. ಇದ್ದ ಅಷ್ಟೋ ಇಷ್ಟು ವ್ಯವಸಾಯದ ಭೂಮಿ ಮಳೆಯಾಧಾರಿತ. ಮಳೆ ಚೆನ್ನಾಗಿ ಬಿದ್ದರೆ ಬೆಳೆ, ಇಲ್ಲವೆ ಹೊಟ್ಟೆಗೆ ಬರೆ ಅನ್ನುವಂತಹ ಪರಿಸ್ಥಿತಿ. ತಮ್ಮ ಜೀವನವೇನೂ ಹೀಗಾಯ್ತು ತಮ್ಮ ಮಕ್ಕಳ ಜೀವನ ಹೀಗಾಗದಿರಲಿ. ನಮ್ಮ ಮಕ್ಕಳು ಚೆನ್ನಾಗಿ ಓದಿ ವಿದ್ಯಾವಂತರಾಗಿ ಪಟ್ಟಣಗಳಲ್ಲಿ  ಕೈತುಂಬಾ ಸಂಪಾದಿಸುವ ಉದ್ಯೋಗಿಗಳಾಗಿ ನಮ್ಮೆದಿಯ ಜೀವನ ನಡೆಸಲಿ ಎಂದು ಬಯಸುವವರೇ ಹೆಚ್ಚಾಗಿದ್ದರು. ಮಕ್ಕಳನ್ನು ಓದಿಸುವ ಆಸೆಯೇನೂ ಇದೆ ಆದರೆ ಅವರನ್ನು ಓದಿಗಾಗಿ ಪಟ್ಟಣಗಳಿಗೆ ಕಳುಹಿಸಿಕೊಟ್ಟರೆ ಅವರನ್ನು ಸಾಕಿ ಸಲಹುವರಾರು? ಅವರ ಹೊಟ್ಟೆ ಬಟ್ಟೆಯ ಪಾಡೇನು ಎಂಬ ಸಮಸ್ಯೆಗಳಿಗೆ ಪರಿಹಾರವೇ ವಾರನ್ನ ಪದ್ದತಿ.

ಅಂದೆಲ್ಲಾ ಎಲ್ಲರ ಮನೆಗಳು ಚಿಕ್ಕದಾಗಿದ್ದರೂ ಮನಸ್ಸುಗಳು ದೊಡ್ಡದಾಗಿರುತ್ತಿದ್ದವು. ತಮ್ಮ ಮನೆಯಲ್ಲಿರುವ ಮಕ್ಕಳ ಜೊತೆ ಒಂದಿಬ್ಬರು ಮಕ್ಕಳು ಹೆಚ್ಚಾದರೆ ಯಾರಿಗೂ ಅಂಥಹ ಹೆಚ್ಚಿನ ಹೊರೆ ಆಗುವುದಿಲ್ಲ ಎಂಬ ಭಾವನೆ. ಹೊರೆ ಎನ್ನುವುದಕ್ಕಿಂತ ವಿಶಾಲ ಹೃದಯವಂತರಾಗಿದ್ದ ಅವರು ತಮ್ಮ ಮನೆಗಳಲ್ಲಿ ಪರ ಊರಿನಿಂದ ಓದಲು ಬರುತ್ತಿದ್ದ ವಿಧ್ಯಾರ್ಥಿಗಳಿಗೆ ತಮ್ಮ ಮನೆಗೆಳಲ್ಲಿ ಊಟ ತಿಂಡಿಯ ವ್ಯವಸ್ಥೆ ಮಾಡುತ್ತಿದ್ದುದೇ ವಾರನ್ನ ಪದ್ದತಿ. ವಾರದ ಏಳು ದಿನಗಳು, ಏಳು ಮನೆಗೆಳಲ್ಲಿ ಅಥವಾ ಕೆಲವೊಮ್ಮೆ ಹದಿನಾಲ್ಕು ಮನೆಗಳಲ್ಲಿ (ಬೆಳಿಗ್ಗೆ ಮತ್ತೆ ಸಂಜೆ ತಿಂಡಿ ಊಟಕ್ಕೆ ಬೇೆ ಬೇರೆ ಮನೆ) ನಿಗಧಿತ ಸಮಯಕ್ಕೆ ಸರಿಯಗಿ ಹೋಗಿ ಅವರುಗಳ ಮನೆಯ ರೀತಿ ರಿವಾಜಿಗೆ ಅನುಗುಣವಾಗಿ ಅವರ ಮಕ್ಕಳ ಜೊತೆ ಒಡಗೂಡಿ ಅವರ ಮನೆಯಲ್ಲಿ ಮಾಡಿದ್ದನ್ನೇ ಪ್ರಸಾದ ರೂಪದಲ್ಲಿ  ಸಂತೋಷದಿಂದ ತಿನ್ನುತ್ತಿದ್ದದ್ದೇ ವಾರನ್ನ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಯಾರೊಬ್ಬರ ಮನೆಯಲ್ಲಿ ಊಟದ ವ್ಯವಸ್ಥೆಯಾಗದಿದ್ದರೆ ಅಂದು ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. ಇಲ್ಲವೇ ಕೆಲವು ಮಾತೃಸ್ವರೂಪಿ ತಾಯಂದಿರು ಲೋ ಮಗು, ಯಾವತ್ತಾದರೂ ಯಾರ ಮನೆಯಲ್ಲಾದರೂ ಊಟಕ್ಕೆ  ತೊಂದರೆಯಾದರೆ ನಮ್ಮ ಮನೆಗೆ ಸಂಕೋಚವಿಲ್ಲದೆ  ಬಂದು ಬಿಡೋ, ಎಂದು ಹೇಳುತ್ತಿದ್ದರಿಂದ ವಿದ್ಯಾರ್ಥಿಗಳಿಗೆ ತುಸು ನೆಮ್ಮದಿ.

ನನಗೆ ಖುದ್ಡಾಗಿ ವಾರನ್ನ ಸವಿಯುವ ಅವಕಾಶವಿಲ್ಲದಿದ್ದರೂ ನಮ್ಮ ತಂದೆಯವರಿಂದ ಬಹಳವಾಗಿ ಕೇಳಲ್ಪಟ್ಟಿದ್ದೆ.  ತಂದೆಯವರ ಹುಟ್ಟೂರಾದ ಬಾಳಗಂಚಿಯಲ್ಲಿ  ವಿದ್ಯಾಭ್ಯಾಸ ಮುಗಿಸಿ ಆರಾಥ್ಯ ದೈವ ಲಕ್ಷ್ಮೀನರಸಿಂಹ ದೇವರ ಪೂಜೆ ಮಾಡುತ್ತಾ ಇದ್ದ  ಅಲ್ಪ ಸ್ವಲ್ಪ ಜಮೀನಿನ ಆದಾಯ ಸಾಲದೆ ಅಕ್ಕ ಪಕ್ಕದವರ ಜಮೀನಿನಲ್ಲಿ ಕೂಲಿ ಇಲ್ಲವೆ ಭಾವಿ ತೋಡುವ ಕೆಲಸ ಮಾಡುತ್ತಿದ್ದ ನಮ್ಮ ತಂದೆಯವರನ್ನು ಗಮನಿಸಿದ ಅವರ ದೊಡ್ಡಮ್ಮ ಗೌರಮ್ಮನವರು ಬೈದು ಮೈಸೂರಿಗೆ ಕರೆದು ಕೊಂಡು ಹೋಗಿ ಕಾಲೇಜಿಗೆ ಸೇರಿಸಿ ಕೆಲದಿನಗಳು ತಮ್ಮ ಮನೆಯಲ್ಲಿಯೇ ಆಶ್ರಯ ನೀಡಿ ನಂತರ ಅಕ್ಕ ಪಕ್ಕ ಮನೆಗಳಲ್ಲಿ ವಾರನ್ನಾದ ವ್ಯವಸ್ಥೆ ಮಾಡಿದ್ದರು. ನಮ್ಮ ತಂದೆಯವರು ಹೇಳುತ್ತಿದ್ದಂತೆ ಎಷ್ಟೋ ಮಹಾತಾಯಂದಿರು ತಮ್ಮ ಮಕ್ಕಳಿಗೆ ತಣ್ಣಗಿನ ಅನ್ನ ಹಾಕಿದರೆ, ವಾರನ್ನದ ಮಕ್ಕಳಿಗೆ ಬಿಸಿ ಬಿಸಿ ಅನ್ನ ಹಾಕುತ್ತಿದ್ದರಂತೆ. ತಮ್ಮ ಮಕ್ಕಳಿಗೆ ಒಂದು ಮಿಳ್ಳೆ ತುಪ್ಪ ಬಡಿಸಿದರೆ, ಅಯ್ಯೋ ಪಾಪ ಓದುತ್ತಿರುವ ಮಕ್ಕಳು ಚೆನ್ನಾಗಿರಲಿ ಎಂದು ಎರೆಡೆರಡು ಮಿಳ್ಳೆ ತುಪ್ಪಾ ಬಡಿಸಿದ್ದದ್ದೂ ಉಂಟಂತೆ. ಹಬ್ಬ ಹರಿ ದಿನಗಳಲ್ಲಿ  ತಮ್ಮ ಮಕ್ಕಳಿಗೆ ಎಣ್ಣೆ ನೀರು ಹಾಕುವ ಜೊತೆಗೇ ವಾರನ್ನದ ಹುಡುಗರಿಗೂ ಚೆನ್ನಾಗಿ ಹರಳೆಣ್ಣೆ ತೀಡಿ, ದೇಹ ತಂಪಾಗಿರಲಿ ಎಂದು ಅಭ್ಯಂಜನ ಮಾಡಿಸಿದ್ದದ್ದೂ ಇದೆ. ತಮ್ಮ ಅಕ್ಕ ಪಕ್ಕದ ಮನೆಗಳಲ್ಲಿ  ಸುಬ್ಬರಾಯನ ಷಷ್ಟಿಗೂ ಅಥವಾ ಮುಂಜಿಗಳಲ್ಲಿ ಚೌಲ ಪಂಕ್ತಿಗಳಿಗೆ ಬ್ರಹ್ಮಚಾರಿಗಳ ಅವಶ್ಯಕತೆ ಇದ್ದಲ್ಲಿ ತಮ್ಮ ಮನೆಗಳ ಹುಡುಗರಿಗಿಂತ ವಾರನ್ನದ ಹುಡುಗರಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡಿ, ಮೃಷ್ಟಾನ್ನದ ಊಟದ ಜೊತೆ ಒಂದಿಷ್ಟು ದಕ್ಷಿಣೆ ಮತ್ತು ಉಡಲು ಪಂಚೆ ಶಲ್ಯ ವಾರನ್ನದ ಮಕ್ಕಳಿಗೆ ಸಿಗುವುದೆಂಬ ಆಶಯ ಅವರದಾಗಿರುತ್ತಿತ್ತು. ನಿಗದಿತ ದಿನ ನಿಗದಿತ ಸಮಯಕ್ಕೆ ವಾರನ್ನದ ಹುಡುಗರು ಬಾರದಿದ್ದಲ್ಲಿ ತಮ್ಮ ಮಕ್ಕಳನ್ನು ಆ ಹುಡುಗರ ಮನೆಗೆ ಕಳುಹಿಸಿ ಏಕೆ ಬರಲಿಲ್ಲ ಎಂದು ವಿಚಾರಿಸಿ ಅನಾರೋಗ್ಯದಿಂದೇನಾದರೂ ಬಾರದಿದ್ದಲ್ಲಿ ಅವರಿಗೆ ಮನೆಯ ಮದ್ದಿನ ಜೊತೆ  ಊಟದ ವ್ಯವಸ್ಥೆಯನ್ನೂ ಮಾಡಿರುವ ಸಂಧರ್ಭಗಳಿವೆ. ಕೆಲವೊಂದು ಬಾರಿ ತಮ್ಮ ಮಕ್ಕಳಿಗೆ ಬಟ್ಟೆ ತರುವ ಸಮಯದಲ್ಲಿ ವಾರನ್ನದ ಮಕ್ಕಳಿಗೂ ಸೇರಿಸಿ ತಂದಿದ್ದಾರೆ. ತಮ್ಮ ಮಕ್ಕಳ ಪುಸ್ತಕಗಳನ್ನು ಜೋಪಾನವಾಗಿಟ್ಟು ವಾರನ್ನದ ಮಕ್ಕಳಿಗೂ ಕೊಟ್ಟಿದ್ದಾರೆ.  ಒಟ್ಟಿನಲ್ಲಿ ನಮಗೆಲ್ಲಾ ಕೇವಲ ಒಬ್ಬಳೇ ತಾಯಿ ಇರುತ್ತಿದ್ದರೆ, ಶ್ರೀ ಕೃಷ್ಣನಿಗೆ ಇಬ್ಬರು ಅಮ್ಮಂದಿರು, ರಾಮ ಲಕ್ಷ್ಮಣರಿಗೆ ಮೂರು ತಾಯಿಯರಾದರೆ,  ವಾರನ್ನ ಪದ್ದತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೆ ಹಲವಾರು  ಮಮತೆಯ ತಾಯಿಯಂದಿರುಗಳು ಇರುತ್ತಿದ್ದಂತೂ ಸತ್ಯವೇ ಸರಿ.

ನಮ್ಮ ತಂದೆಯವರು ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನ ಬಿಇಎಲ್ ಕಾರ್ಖಾನೆಯಲ್ಲಿ ಉದ್ಯೋಗ ಪಡೆದು ಮೂರು ಮಕ್ಕಳ ತಂದೆಯಾದರೂ, ಪ್ರತೀ ಬಾರಿ ಮೈಸೂರಿಗೆ ಹೋದಾಗಲೆಲ್ಲಾ ಬಹಳಷ್ಟು ವಾರನ್ನದ ಮಕ್ಕಳಿಗೆ ಸಕುಟುಂಬ ಸಮೇತರಾಗಿ ನಮ್ಮನ್ನೆಲ್ಲಾ ಕರೆದು ಕೊಂಡು ಹೋಗಿ ಅವರನ್ನೆಲ್ಲಾ ನಮಗೆ ಪರಿಚಯಿಸಿ ಅವರ ಆಶೀರ್ವಾದವನ್ನು ಪಡೆಯುತ್ತಿದ್ದದ್ದು ನಮಗಿನ್ನೂ ಚೆನ್ನಾಗಿಯೇ ಜ್ನಾಪಕವಿದೆ.  ನಾವು ಐದು ಮಂದಿ ಅವರ ಮನೆಗಳಿಗೆ ಏಕಾಏಕಿ ಯಾವುದೇ  ಸೂಚನೆ ನೀಡದೇ  ಹೋದರೂ ಯಾವುದೇ ರೀತಿಯಾಗಿ ಬೇಸರಿಸದೇ ತಮ್ಮ ಮನೆಯ ಮಗ ಸೊಸೆ ಮತ್ತು ಮೊಮ್ಮಕ್ಕಳು  ಬಂದರೇನೋ ಅನ್ನುವಷ್ಟರ ಮಟ್ಟಿಗೆ ಸಂಭ್ರಮಿಸಿರುವುದೂ ನನಗೆ ತಿಳಿದಿದೆ.  ಮೈಸೂರಿನಿನ ಹಿಂದೂ ಪೇಪರ್ ಮಾಮಿಯವರ ಮನೆಗೆ ಒಮ್ಮೆ ಹೋಗಿದ್ದಾಗ ಅವರು ನಮ್ಮ ತಾಯಿಯವರಿಗೆ ರೇಷ್ಮೇ ಸೀರೆ ಮತ್ತು ನಮ್ಮೆಲ್ಲರಿಗೂ ಬಟ್ಟೆಗಳನ್ನು ಉಡುಗೊರೆಯಾಗಿ ಕೊಟ್ಟದ್ದನ್ನು ನಾವುಗಳು ಜೀವಮಾನದಲ್ಲಿ ಮರೆಯುವ ಹಾಗಿಲ್ಲ. ಅಂದು ಆ ಮಾಹಾತಾಯಿ ಪ್ರೀತಿ ಪೂರ್ವಕವಾಗಿ ಆಶೀರ್ವದಿಸಿ ಕೊಟ್ಟ  ಒಂದು ರೇಷ್ಮೇ ಸೀರೆ  ಇಂದು ನಮ್ಮ ಮನೆಯಲ್ಲಿ ಅಕ್ಷೋಹಿಣಿಯಾಗಿದೆ ಎಂದರೆ ಅತಿಶಯೋಕ್ತಿಯೇನಲ್ಲ.

ಊಟದ ಮಹತ್ವವನ್ನು ಚೆನ್ನಾಗಿಯೇ  ತಿಳಿದಿದ್ದ ನಮ್ಮ ತಂದೆಯವರು ಮುಂದೆ ನಮ್ಮ ಮನೆಯಲ್ಲಿಯೂ ಅದೇ ಸತ್ಸಂಪ್ರದಾಯವನ್ನು ಮುಂದುವರಿಸಿ ಕೊಂಡು ಹೋದರು.  90ರ ದಶಕದಲ್ಲಿ ಮಣಿಪುರದಲ್ಲಿ  ಮತಾಂತರದ ಹಾವಳಿ ಹೆಚ್ಚಾಗಿ ಅಲ್ಲಿನ ಕೆಲವು ಮಕ್ಕಳನ್ನು ಕರ್ನಾಟಕದ ರಾಷ್ಟ್ರೀಯ ಸ್ವಯಂಸೇವಕ ಸಂಘದವರು ಬೆಂಗಳೂರಿಗೆ ಕರೆತಂದು  ನಗರಾದ್ಯಂತ ಪ್ರತಿಷ್ಠಿತ ಶಾಲೆಗಳಿಗೆ ಭರ್ತಿಮಾಡಿಸಿ ಸ್ಥಳೀಯ ಸ್ವಯಂ ಸೇವಕರ ಮನೆಗಳಲ್ಲಿ ಆ ಮಕ್ಕಳಿಗೆ ವಾರನ್ನದ ವ್ಯವಸ್ಥೆ ಮಾಡಿದ್ದರು. ಅಂತಹ ಮನೆಗಳಲ್ಲಿ ನಮ್ಮ ಮನೆಯೂ ಒಂದಾಗಿತ್ತು. ಪ್ರತಿ ಸಂಜೆ ಎರಡು ಮೂರು ಹುಡುಗರು  ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದು, ಊಟದ ಜೊತೆ ಕನ್ನಡ ಪಾಠವನ್ನೂ ಕಲಿತದ್ದು ಇನ್ನೂ ಹಚ್ಚ ಹಸಿರಾಗಿದೆ. ಚಿಕ್ಕ ಮಕ್ಕಳಾಗಿದ್ದ ಕಾರಣವೂ ಏನೋ ಬಹಳ ಬೇಗ ಕನ್ನಡ ಕಲಿತು ನಮ್ಮ ಮನೆಯೆ ಮಕ್ಕಳೇನೂ ಅನ್ನುವ ಹಾಗೆ ನಮ್ಮೊಂದಿಗೆ ಬೆರೆತು ಹೋಗಿದ್ದರು. ಓದಿನ ನಂತರ ಬಹಳಷ್ಟು ಹುಡುಗರು ತಮ್ಮ ಊರಿಗೆ ಮರಳಿದರೂ ಕೆಲವು ಹುಡುಗರು ಇಲ್ಲಿಯೇ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಐದಂಕಿ ಸಂಬಳ ಪಡೆಯುತ್ತಿದ್ದಾರೆ ಎಂದು ಕೇಳಿ ಸಂತೋಷ ಪಟ್ಟಿದ್ದೇವೆ.

ನನಗೆ ತಿಳಿದಂತೆ  ಸರ್ ಎಂ ವಿಶ್ವೇಶ್ವರಯ್ಯನವರು, ನ. ಕೃಷ್ಣಪ್ಪನವರು, ಎಸ್. ಎಲ್. ಭೈರಪ್ಪನವರಂತಹ ಹಲವಾರು  ಮಹನೀಯರೂ ಒಂದು ಕಾಲದಲ್ಲಿ ವಾರನ್ನದಲ್ಲಿ ಓದಿ ಬೆಳೆದವರೇ ಆಗಿದ್ದರು. ಭೈರಪ್ಪನವರೇ ತಮ್ಮ ಧರ್ಮಶ್ರೀ ಪುಸ್ತಕದಲ್ಲಿ ತಿಳಿಸಿರುವಂತೆ ಚೆಲುವರಾಯಪಟ್ಟಣದಿಂದ ಮೈಸೂರಿಗೆ ಬಂದಾಗ ಊಟಕ್ಕೆ ಆಶ್ರಯಿಸಿದ್ದೂ ಧರ್ಮ ಛತ್ರವನ್ನೇ. ಅಲ್ಲಿಯೇ ಅವರಿಗೆ  ನ. ಕೃಷ್ಣಪ್ಪನವರ ಪರಿಚಯವಾಗಿ ಅವರ ಜೀವನದ ದಿಕ್ಕನ್ನೇ ಬದಲಿಸಿತು ಎಂದು ತಿಳಿಸಿದ್ದಾರೆ.   ಅಂದು ಜ್ನಾನಾರ್ಜನೆಗೆ ದೂರದ ಊರುಗಳಿಮ್ದ  ಬರುತ್ತಿದ್ದ ಬಡ ವಿದ್ಯಾರ್ಥಿಗಳ ಹಸಿವನ್ನು ನೀಗಿಸಿ ಹೆತ್ತ  ತಾಯಿಗೂ ಒಂದು ಕೈ ಮಿಗಿಲಂತೆ ಪೋಷಿಸಿ, ಆರೈಕೆ ಮಾಡಿದ ಸಾವಿರಾರು ತಾಯಂದಿರಿಗೆ ಎಷ್ಟು ನಮನಗಳನ್ನು ಸಲ್ಲಿಸಿದರೂ ಸಾಲದು. ಅವರ ಅಂದಿನ ನಿಸ್ವಾರ್ಥ ಸೇವೆಯಿಂದಾಗಿ ಇಂದು ನಮ್ಮಂತಹ  ಲಕ್ಷಾಂತರ ಕುಟುಂಬಗಳ ಮನೆಯಲ್ಲಿ ನಿಮ್ಮದಿಯ ಜೀವನ ಕಾಣುತ್ತಿದೆ ಎನ್ನುವುದಕ್ಕೆ   ಜ್ವಲಂತ ಸಾಕ್ಷಿಯೇ ನಮ್ಮ ಕುಟುಂಬ.  ಆ ತಾಯಂದಿರು ಇಂದು ನಮ್ಮೊಡನಿಲ್ಲ. ಅವರ ಅಂದಿನ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.  ಇನ್ನು ಋಣವನ್ನಂತೂ ತೀರಿಸಲು ಸಾಧ್ಯವೇ ಇಲ್ಲ. ನಾವೇನಿದ್ದರು ಅಂತಹ ಕುಟುಂಬಗಳನ್ನು ದೇವರು ಚೆನ್ನಾಗಿ ಇಟ್ಟಿರಲಿ, ಅವರ ಮಕ್ಕಳು, ಮೊಮ್ಮಕ್ಕಳಿಗೂ ಅದೇ ವಿಶಾಲ ಹೃದಯವಂತಿಗೆ ಮುಂದುವರಿದು ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜಮುಖಿಗಳಾಗಿ   ಹಲವರಿಗೆ ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಹಾಯ ಮಾಡುವಂತಹ ಶಕ್ತಿಯನ್ನು ನೀಡಲಿ. ಅಂತಹವರ ವಂಶ ಉದ್ದಾರವಾಗಲಿ ಎಂದು ಪ್ರಾರ್ಥಿಸ ಬಹುದು

ಆಗಲೇ ಹೇಳಿದಂತೆ ಅಂದೆಲ್ಲಾ  ಮನೆಗಳು ಚಿಕ್ಕದಾಗಿರುತ್ತಿತ್ತು. ಆರ್ಥಿಕವಾಗಿ ಬಡತನವಿದ್ದರೂ ಮನಸ್ಸುಗಳು ಶ್ರೀಮಂತವಾಗಿರುತ್ತಿದ್ದವು. ಇಂದು ಬಹುತೇಕ ಎಲ್ಲರ ಮನೆಗಳೂ ದೊಡ್ಡ ದೊಡ್ದದಾಗಿಯೇ ಇವೆ. ಆರ್ಥಿಕವಾಗಿ ಸಧೃಡ  ಶ್ರೀಮಂತರಾಗಿದ್ದರೂ ಮಾನಸಿಕವಾಗಿ ಬಡವರಾಗಿರುವುದು ವಿಷಾಧನೀಯ ಮತ್ತು ಆತಂತಕಾರಿಯಾದ ವಿಷಯವಾಗಿದೆ.

ಏನಂತೀರೀ?

2 comments

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s