ವಿದ್ಯಾರಣ್ಯಪುರದ ಕಾಳಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನ

ಇತ್ತೀಚೆಗೆ ಹೊರ ಊರಿಗೆ ಪ್ರಯಾಣ ಮಾಡುತ್ತಿದ್ದಾಗ ರೈಲಿನಲ್ಲಿ ಸಹಪ್ರಯಾಣಿಕರೊಬ್ಬರು ಪರಿಚಯವಾಗಿ ಉಭಯ ಕುಶಲೋಪರಿ ವಿಚಾರಿಸುತ್ತಿದ್ದಾಗ ಅವರು  ಬಹಳ ದೈವೀಕ ಭಕ್ತರೆಂದು ಅವರ ವೇಷ ಭೂಷಣ ಮತ್ತು ಅವರ ಸಂಭಾಷಣೆಯಿಂದಲೇ ವ್ಯಕ್ತವಾಯಿತು. ನನ್ನ ಬಗ್ಗೆ ವಿವರಿಸುತ್ತಿದ್ದಾಗ, ನಾನು ಬೆಂಗಳೂರಿನ ವಿದ್ಯಾರಣ್ಯಪುರದವನೆಂದು ಪರಿಚಯಿಸಿ ಕೊಳ್ಳುತ್ತಿದ್ದಾಗಲೇ, ಓಹೋ ನೀವು ವಿದ್ಯಾರಣ್ಯಪುರದವರಾ? ಬಹಳ ಅದೃಷ್ಟವಂತರಿದ್ದೀರಿ. ಅಲ್ಲಿಯ ಜಾಗ ತುಂಬಾನೇ ಪ್ರಶಾಂತವಾಗಿದೆ. ಎಲ್ಲದಕ್ಕಿಂತ ಮಿಗಿಲಾಗಿ ತಾಯಿ ದುರ್ಗಾ ಪರಮೇಶ್ವರಿ ಅಲ್ಲಿ ಶಾಶ್ವತವಾಗಿ ನೆಲೆ ಮಾಡಿರುವ ಕಾರಣ ಇಡೀ ಬಡಾವಣೆ ಸಾಂಸ್ಕೃತಿವಾಗಿ ಹಾಗೂ ಆರ್ಥಿಕವಾಗಿ ಅಭಿವೃಧ್ಧಿ ಹೊಂದಿದೆ. ವರ್ಷದಲ್ಲಿ ಪ್ರತಿ ದಿನ ಒಂದಲ್ಲಾ ಒಂದು ವಿಶೇಷ ಪೂಜೆಗಳು ನಡೆಯುತ್ತಲಿದ್ದು ಆಸ್ತಿಕರ ಆಶೆಗಳನ್ನು ಪೂರೈಸುತ್ತಲಿದೆ. ಅಲ್ಲಿಯ  ವಾರ್ಷಿಕೋತ್ಸವ,  ದಸರಾ ಉತ್ಸವ, ಬೇರಾವುದೇ ಹಬ್ಬ ಹರಿದಿನಗಳ ವಿಶೇಷ ಪೂಜೆ, ಇಂದಿನ ದುಬಾರಿ ದಿನಗಳಲ್ಲೂ ಪ್ರತಿ ನಿತ್ಯ ದಾಸೋಹ ರಾಜ್ಯದ ಬೇರಾವುದೇ ಪ್ರಸಿದ್ಧ ದೇವಸ್ಥಾನಗಳಿಗೂ ಕಡಿಮೆ ಇಲ್ಲದಂತೆ ನಡೆಯುತ್ತಲಿದೆ.  ಯಾವುದೇ ಕಾರ್ಯಗಳನ್ನು ಮಾಡುವಾಗ ಆಯವ್ಯಯ ಹೆಚ್ಚಾದಲ್ಲಿ  ಇದೊಳ್ಳೆ ಆನೆ ಸಾಕಿದ ಹಾಗಿದೆಯಲ್ಲಾ ಎನ್ನುವುದು ಆಡು ಮಾತು. ಆದರೆ ಇಲ್ಲಿ ಅಕ್ಷರಶಃ ಆನೆಯನ್ನು  ದುರ್ಗಾದೇವಿಯ ಮೆರವಣಿಗೆಗೆಂದೇ ಸಾಕಲಾಗಿರುವುದು ನಿಜಕ್ಕೂ ಶ್ಲಾಘನೀಯ. ಹೀಗೆ ಹಾಗೆ ಎಂದು ನಮ್ಮ ದುರ್ಗಾದೇವಿಯ ದೇವಸ್ಥಾನವನ್ನೂ  ಅಲ್ಲಿಯ ಉತ್ಸವಗಳನ್ನು ಹೊಗಳುತ್ತಿದ್ದರೆ. ಒಂದು ಕ್ಷಣ ವಿದ್ಯಾರಣ್ಯಪುರದ ನಿವಾಸಿ ನಾನಾ ಇಲ್ಲವೇ ಅವರಾ ಎಂದು ನನ್ನಲ್ಲಿಯೇ ಸಂದೇಹ ಉಂಟಾಗಿ ಅದನ್ನು ತೋರಪಡಿಸದೆ, ಹೌದು ಸ್ವಾಮಿ ನೀವು ತಿಳಿಸಿದ ಎಲ್ಲ ವಿಷಗಳೂ ಸತ್ಯವೆ. ನಾವು ನಿಜಕ್ಕೂ ತಾಯಿ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ನೆಲೆಸಿರುವುದಕ್ಕೆ ಧನ್ಯರೆ ಎಂದು.  ಇಷ್ಟೆಲ್ಲಾ ವಿವರಗಳು ತಮಗೆ ಹೇಗೆ ತಿಳಿಯಿತು ಎಂದು ವಿಚಾರಿಸಲು ಅವರೊಮ್ಮೆ ಯಾವುದೋ ಸಂಕಷ್ಟದಲ್ಲಿ ಸಿಕ್ಕಿದ್ದಾಗ ಯಾರೋ ಹಿತೈಷಿಗಳ ಮಾತಿನಂತೆ, ತಮ್ಮೆಲ್ಲಾ ಕಷ್ಟಗಳು ಪರಿಹಾರವಾದಲ್ಲಿ ದೇವಿ ದುರ್ಗೆಯ ಸನ್ನಿಧಿಗೆ ಬರುವೆನೆಂದು ಹರಸಿಕೊಂಡರಂತೆ. ದೈವೀ ಪ್ರೇರಣೆಯೋ ಅಥವಾ ಅವರ ಪೂರ್ವ ಜನ್ಮದ ಸುಕೃತವೂ ಅಥವಾ ಅವರ ಪರಿಶ್ರಮದ ಫಲವೂ ಏನೋ ಆವರಿಗೆ ಬಂದಿದ್ದ ಕಷ್ಟಗಳೆಲ್ಲವೂ ಕೆಲ ಸಮಯದಲ್ಲೇ ಕಳೆದು, ಹರಕೆ ತೀರಿಸಲು ದೇವಿಯ ಸನ್ನಿಧಾನಕ್ಕೆ ಒಮ್ಮೆ ಬಂದ ನಂತರ  ದುರ್ಗಾದೇವಿಯ ಜೊತೆ ಜೊತೆಗೆ ಅಲ್ಲಿದ್ದ  ಸರ್ವ ಮೂರ್ತಿಗಳ ದೇವರುಗಳನ್ನು, ದೇವಿಯ ಸನ್ನಿಧಿಗೆ ಬಂದಿದ್ದ ಅಪಾರ ಭಕ್ತಾದಿಗಳನ್ನು ನೋಡಿಯೂ, ಎಲ್ಲದಕ್ಕಿಂತ ಹೆಚ್ಚಾಗಿ ದೇವಿಯ ಸನ್ನಿಧಾನಕ್ಕೆ  ಬರುವ  ಅಪರಿಚಿತರಿಗೂ ದೇವಾಲಯದ ಸಿಬ್ಬಂಧಿಗಳ ಆದರ ಆತಿಥ್ಯಗಳಿಂದ ಸಂತುಷ್ಟಗೊಂಡು ದೇವಿಯ ಖಾಯಂ ಭಕ್ತಾದಿಗಳಾಗಿ ಮಾರ್ಪಟ್ಟು ವಿಶೇಷ ದಿನಗಲ್ಲಿ ಹಾಗೂ ಅವರ ಅನುಕೂಲಕ್ಕೆ ತಕ್ಕಂತೆ ತಾಯಿ ದುರ್ಗೆಯ ಸನ್ನಿಧಾನಕ್ಕೆ ಬರುವುದಾಗಿ ತಿಳಿಸಿದರು.  ಹಿತ್ತಲ ಗಿಡ ಮದ್ದಲ್ಲ ಎಂಬಂತೆ ದೇವಸ್ಥಾನದ ಕೂಗಳತೆಯ ದೂರದಲ್ಲಿದ್ದರೂ ಅಮಾವಾಸ್ಯೆಗೋ, ಇಲ್ಲವೇ ಹುಣ್ಣಿಮೆಗೋ ಒಮ್ಮೆ ದೇವಸ್ಥಾನಕ್ಕೆ ಹೋಗುವ ನಾವುಗಳು ಅವರ ಮಂದೆ ತಲೆ ತಗ್ಗಿಸುವ ಹಾಗೆ ಆಯಿತು.

ನಿಜವಾಗಲೂ ಹೇಳ ಬೇಕೆಂದರೆ ವಿದ್ಯಾರಣ್ಯಪುರಕ್ಕೇ ಒಂದು ಮಾನ್ಯತೆ ಸಿಕ್ಕಿದ್ದು ಕಾಳಿಕಾ ದುರ್ಗಾ  ಪರಮೇಶ್ವರಿ ದೇವಸ್ಥಾನ ಪ್ರಾರಂಭವಾದ ನಂತರವೇ ಎಂದರೂ ತಪ್ಪಾಗಲಾರದು. ಅಲ್ಲಿಯವರೆಗೂ ಬಿಇಎಲ್, ಹೆಚ್.ಎಂ.ಟಿ ಮತ್ತು ಎನ್.ಟಿ.ಐ. ಸಂಸ್ಥೆಗಳ ಮಧ್ಯಮ ವರ್ಗದ ಕಾರ್ಮಿಕರ ವಸತಿಗಳ ಬಡಾವಣೆಯೇ ಆಗಿತ್ತು. ಅಲ್ಲೊಂದು ಇಲ್ಲೊಂದು ಸಣ್ಣ ಪುಟ್ಟ ದೇವಸ್ಥಾಗಳನ್ನು ಸ್ಥಳೀಯ ಕ್ಷೇಮಾಭಿವೃಧ್ಢಿ ಸಂಘಗಳು ಸ್ಥಾಪಿಸಿಕೊಂಡು ಅಷ್ಟೋ ಇಷ್ಟು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದವಾದರೂ ಈ ಮಟ್ಟಿಗಿನ ದೇವಸ್ಥಾನಗಳು, ಧಾರ್ಮಿಕ ಕಾರ್ಯಕ್ರಮಗಳು ದುರ್ಗಾ ದೇವಸ್ಥಾನ ಆರಂಭಗೊಂಡ ನಂತವೇ ಆದ್ದದ್ದು ಎಂದರೆ ತಪ್ಪಾಗಲಾರದು. ದುರ್ಗಾದೇವಿ ದೇವಸ್ಥಾನದ ಆಡಳಿತ ವರ್ಗ  ಕೇವಲ ದುರ್ಗಾ ದೇವಸ್ಥಾನದ ಅಭಿವೃಧ್ಧಿಯತ್ತವೇ ಗಮನ ಹರಿಸದೆ ಸುತ್ತ ಮುತ್ತಲಿನ ಹಲವಾರು ದೇವಾಲಯಗಲ ಜೀರ್ಣೋಧ್ಢಾರಕ್ಕೂ ಕಾರಣವಾಯಿತು. ವಿದ್ಯಾರಣ್ಯಪುರದ ಕಳಸ ಪ್ರಾಯ ಮಹಿಶಾಸುರನ ಪ್ರತಿಮೆ, ಬಸ್ ನಿಲ್ದಾಣದ ಎದುರಿನ ರಾಮಾಂಜನೇಯ ದೇವಸ್ಥಾನ, ದುರ್ಗಾ ಪರಮೇಶ್ವರಿ ಕಮಾನು (ಆರ್ಚ್)  ವಿದ್ಯಾರಣ್ಯಪುರದ ಸಿಂಗಾರವನ್ನು ಹೆಚ್ಚಿಸಿರುವುದಂತೂ ಯಾರೂ ಅಲ್ಲಗಳಿಯಲಾರರು. ದೇವಸ್ಥಾನ ಅಭಿವೃಧ್ಧಿ ಹೊಂದುತ್ತಿದ್ದಂತೆ ಬರುವ  ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಾಗಿ ಅವರುಗಳ ಅಗತ್ಯಕ್ಕೆ ಅನುಗುಣವಾಗಿ ದೇವಸ್ಥಾನದ ಸುತ್ತ ಮುತ್ತಲೂ  ಅಂಗಡಿಗಳ ಮುಗ್ಗಟ್ಟುಗಳು ಆರಂಭ ಗೊಂಡು ನೂರಾರು ಕುಟುಂಬಗಳ ಜೀವನೋಪಾಯಕ್ಕೆ ಸಹಕಾರಿಯಾಯಿತು. ಇಂದಿಗೂ, ಮಂಗಳವಾರ, ಶುಕ್ರವಾರ, ಭಾನುವಾರ ಮತ್ತು ವಿಶೇಷ ದಿನಗಳಲ್ಲಿ ದೇವಸ್ಥಾನದ ಸುತ್ತ ಮುತ್ತ ಜಾತ್ರೆಯ ಸಂಭ್ರಮವಿದ್ದು ಇಂದಿನ ನಗರೀಕರಣದ ಮಧ್ಯೆಯೂ ಗ್ರಾಮೀಣ ಸೊಗಡನ್ನು ನೆನಪಿಸುವಂತಿದೆ.  ಇದೇ ದಿನಗಳಲ್ಲಿ ವಿದ್ಯಾರಣ್ಯಪುರಕ್ಕೆ ನಗರದ ವಿವಿಧ ಕಡೆಗಳಂದ ಬರುವ ಬಿ.ಎಂ.ಟಿ.ಸಿ ಬಸ್ಗಳು ತುಂಬಿ ತುಳುಕುವಂತಾಗಿ ಸರ್ಕಾರದ ಬೊಕ್ಕಸವೂ ದುರ್ಗೆಯ ಭಕ್ತಾದಿಗಳಿಂದ  ತುಂಬುವಂತಾಗಿದೆ. ವಿದ್ಯಾರಣ್ಯಪುರದ ಸುತ್ತ ಮುತ್ತಲಿನಲ್ಲಿ ನಡೆಯುವ ಬಹುತೇಕ ಗಣೇಶೋತ್ಸವ, ರಾಜ್ಯೋತ್ಸವ, ಕರಗ ಮಹೋತ್ಸವ,  ಅಂತರಾಷ್ಟ್ರೀಯ ಯೋಗ ದಿನಾಚರಣೆ, ವಿವಿಧ ಸಂಘಟನೆಗಳ  ಕಾರ್ಯಕ್ರಮಗಳ ಶ್ರಧ್ಧಾ ಭಕ್ತಿಯ ಆಚರಣೆ ಮತ್ತು  ಪ್ರಸಾದ ವಿತರಣೆಯು ದೇವಸ್ಥಾನದ ಕೊಡುಗೆಯೇ ಆಗಿರುವುದು ಗಮನಿಸಿಬೇಕಾದ ಅಂಶ.

ನೆನ್ನೆ  ದಿನಾಂಕ 09.09.2018 ಬಹಳ ವಿಶೇಷ ದಿನ. ಅಪರೂಪಕ್ಕೆ  ಭಾನುವಾರ ಮತ್ತು ಅಮ್ಯಾವಾಸ್ಯೆಗಳ ಸಮ್ಮಿಳನ. ಭಾನುವಾರದ ಸಂಜೆ ರಾಹುಕಾಲದ ಪೂಜೆ ಹಾಗೂ ಅಮ್ಯಾವಾಸ್ಯೆಯ ವಿಶೇಷ ಪೂಜೆಯಾದ ಪ್ರತ್ಯಂಗಿರಾ ಹೋಮಕ್ಕಾಗಿ ರಾಜ್ಯದ ಹಲವಾರು ಕಡೆಗಳಿಂದ ಸಹಸ್ರಾರು ಭಕ್ತರು ದೇವಸ್ಥಾನಕ್ಕೆ ಎಂದಿನಂತೆ ಆಗಮಿಸಿದ್ದರು. ಆದರೆ ಅವರಿಗೆಲ್ಲಾ ದೇವಸ್ಥಾನದ ಮುಂಭಾಗಿಲಿನಲ್ಲೇ  ಕಾರಣಾಂತರಗಳಿಂದ ಅಮ್ಯಾವಾಸ್ಯೆಯ ವಿಶೇಷ ಪೂಜೆಯಾದ ಪ್ರತ್ಯಂಗಿರಾ ಹೋಮ ಈ ಬಾರಿ ನಡೆಸುವುದಿಲ್ಲ ವೆಂಬ ಫಲಕ ನೋಡಿ ನಿರಾಶೆಯಾಗಿದ್ದಂತೂ ಸುಳ್ಳಲ್ಲ.  ಸುಮಾರು ವರ್ಷಗಳಿಂದ ಅನೂಚಾನವಾಗಿ ನಡೆದು ಬರುತ್ತಿದ್ದ ಸಂಪ್ರದಾಯ ಈ ಬಾರಿ ಮುರಿದು ಬಿದ್ದದ್ದಾದರೂ ಏಕೆ? ಈ ಸತ್ ಸಂಪ್ರದಾಯದ ಆಚರಣೆಯ ವಿರುಧ್ದದ ಕಾಣದ ಕೈಗಳು ಯಾವುದು ಎಂಬ ಕುತೂಹಲ ನೆರೆದಿದ್ದ ಸಹಸ್ರಾರು  ಭಕ್ತಾದಿಗಳ ಮನದಲ್ಲಿ ಮೂಡಿದ್ದಂತು ಸುಳ್ಳಲ್ಲ.

ಯಾವುದಾದರೂ ಒಳ್ಳೆಯ ಕಾರ್ಯಗಳು ನಡೆಯುತ್ತಿದ್ದರೆ ಅದಕ್ಕೆ ಪರ ಮತ್ತು ವಿರೋಧಿಗಳು ಇರುವುದು ಸಹಜ ಪ್ರಕ್ರಿಯೆ. ಮೇಲೆ ತಿಳಿಸಿದಂತೆ ಎಷ್ಟೋಂದು ಒಳ್ಳೆಯ ಕಾರ್ಯಕ್ರಮಗಳು ದೇವಸ್ಥಾನದ ಆಶ್ರಯದಲ್ಲಿ ನಡೆಸುತ್ತಿದ್ದರೂ ಕೆಲ ಸ್ವಾರ್ಥಿಗಳು ಒಗ್ಗೂಡಿ ದೇವಸ್ಥಾನದ ಆದಾಯದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಕೆಲ ಪ್ರಭಾವೀ ವ್ಯಕ್ತಿಗಳ ಸಹಾಯದಿಂದ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಕೆಲವಾರಗಳ ಹಿಂದೆ ಸೇರಿಸಿದ್ದರ ಪರಿಣಾಮವೇ ಭಕ್ತಾದಿಗಳ  ಈ ಅಸಹನೆಗೆ ಕಾರಣವಾಗಿದೆ. ದೇವಸ್ಥಾನವನ್ನು ಇಪ್ಪತ್ತು, ಇಪ್ಪತ್ತೈದು ವರ್ಷಗಳ ಹಿಂದೆ ಪ್ರಾರಂಭಿಸಿ ಸರ್ಕಾರದ ಮುಲಾಜಿಲ್ಲದೆ, ಕೇವಲ  ಭಕ್ತಾದಿಗಳ ಸ್ವಯಂ ಪ್ರೇರಿತ ಸಹಾಯದಿಂದ ತಮ್ಮ ಆರೋಗ್ಯದ ಕಡೆಯೂ ಗಮನಿಸಿದೆ ಇಂತಹ ಭವ್ಯ ದೇವಸ್ಥಾನದ ರೂವಾರಿಗಳಾದ ಶ್ರೀಯುತ ರಾಮುರವರ ಮತ್ತವರ ಕುಟುಂಬದ ಪರಿಶ್ರಮವನ್ನು ಗಮನಿಸದೆ ಏಕಾ ಏಕಿ  ದೇವಸ್ಥಾನವನ್ನು  ಸರ್ಕಾರದ ವಶಕ್ಕೆ ಪಡೆದಿರುವುದು ಹೇಗಿದೆ ಎಂದರೆ ಹತ್ತು ಹಲವು ತಿಂಗಳುಗಳು ತಮ್ಮ ಸ್ವಪರಿಶ್ರಮದಿಂದ ತಮ್ಮ ಆಶ್ರಯಕ್ಕೆ  ಗೆದ್ದಲು ಹುಳುಗಳು ಹುತ್ತವನ್ನು ಕಟ್ಟಿಕೊಂಡತೆ ಏಕಾ ಏಕಿ ಹಾವೊಂದು ಹುತ್ತವನ್ನು ಹೊಕ್ಕಿ  ಆಶ್ರಯ ಪಡೆಯುವುದಲ್ಲದೇ ಹುತ್ತದ ನಿರ್ಮಾತ ಗೆದ್ದಲು ಹುಳಗಳನ್ನೇ ತಿಂದು ಹಾಕಿ ಗೆದ್ದಲು ವಿನಾಶಕ್ಕೆ ಕಾರಣಿಭೂತವಾಗುವ ಹಾಗಿದೆ.  ತಾವು  ಮತ್ತು ತಮ್ಮ ಕುಟುಂಬ ಕಟ್ಟಿ ಬೆಳೆಸಿದ ದೇವಾಸ್ಥಾನದಲ್ಲಿ  ಯಾರದ್ದೋ  ವಯಕ್ತಿಕ ಹಿತಾಸಕ್ತಿಗಾಗಿ  ತಮ್ಮನ್ನೇ ಹೊರಗಿನಂತೆ ಕಾಣುವ ಸ್ಥಿತಿ ಬಂದದೊದಗಿರುವುದು ನಿಜಕ್ಕೂ ಖೇದಕಾರಿಯಾಗಿದೆ.     ತಪ್ಪು ಮಾಡುವುದು ಮನುಷ್ಯರ ಸಹಜ ಗುಣ. ಆವರು ಮಾಡಿದ್ದ ತಪ್ಪನ್ನು ತಿದ್ದಿ ಮುಂದೆ ಹೀಗಾಗದಂತೆ ನೋಡಿಕೊಳ್ಳುವುದು ಸರ್ಕಾರದ ಕೆಲಸ. ಆದರೆ ಸರ್ಕಾರ ಮತ್ತು ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಭಕ್ತರ ಮತ್ತು ದೇವಸ್ಥಾನದ ಹಿತವನ್ನು  ಕಾಪಾಡದೆ ತಮ್ಮ ವಯಕ್ತಿಕ  ಹಿತಾಸಕ್ತಿಯಿಂದಲೂ ಮತ್ತು ದೇವಸ್ಥಾನದ ಆದಯದ ಮೇಲೆ ಕಣ್ಣಿಟ್ಟು, ದೇವಸ್ಥಾನದಲ್ಲಿ ಸಂಗ್ರಹವಾದ ಕಾಣಿಕೆಯನ್ನು ದೇವಸ್ಥಾನಕ್ಕೆ ಮತ್ತು ಭಕ್ತರ ಆಶಯಕ್ಕೆ ಸದ್ವಿನಿಯೋಗ ಮಾಡದೆ, ಸರ್ಕಾರಿ ಗಂಟು ಮಾಡಲು ಹೊರಟಿರುವುದು ಎಷ್ಟು ಸರಿ? ಬಲ್ಲ ಮೂಲಗಳಿಂದ ತಿಳಿದ ಪ್ರಕಾರ, ಪ್ರತ್ಯಂಗಿರಾ ಹೋಮ ಮತ್ತು ಪ್ರಸಾದ ವಿನಿಯೋಗಕ್ಕೆ ಎಷ್ಟು ಖರ್ಚಾಗಬಹುದೆಂದು ಅಂದಾಜು  ತಿಳಿದ ಸರ್ಕಾರಿ ನಿಯೋಜಿತ ಅಧಿಕಾರಿಗಳು, ದೇವಸ್ಥಾನದ ಆದಾಯಕ್ಕಿಂತಲೂ ಖರ್ಚೇ ಹೆಚ್ಚಗ ಬಹುದೆಂಬ ನೆಪವೊಡ್ದಿ , ನೆಪ ಮಾತ್ರಕ್ಕೆ ಹೋಮ ಮಾಡಿಸಿದೆ. ದೇವರ ಅಭಿಷೇಕಕ್ಕೆಂದೇ ಮೀಸಲಾಗಿರುವ ಗೋಶಾಲೆಯ ಗೋವುಗಳಿಗೂ ಮತ್ತು  ಅಂಬಾರಿ ಹೊರುವ ಗಜರಾಜನಿಗೂ ಕೆಲವು ಸರ್ಕಾರಿ ನಿಯಮಗಳ ಪರಿಣಾಮವಾಗಿ ಹಣ ಬಿಡುಗಡೆಯಾಗದ ಕಾರಣ ಸರಿಯಾಗಿ ಮೇವು ಸಿಗುತ್ತಿಲ್ಲವೆಂದೂ ತಿಳಿದು ಬಂದಿದೆ.  ಇದು ಹೀಗೆಯೇ ಮಂದುವರಿದು ಸರಿಯಾದ ಸೂಕ್ತವಾದ ಆಹಾರವಿಲ್ಲದೆ ಹಸುಗಳು ಮತ್ತು ಆನೆ ಬಡವಾಗಿ ಪ್ರಾಣಿ ದಯಾ ಸಂಘ ಮತ್ತು ಅರಣ್ಯ ಇಲಾಖೆಗಳ ಸುಪರ್ದಿಗೆ ಒಪ್ಪಿಸುವ ಹುನ್ನರವೇ ಇದೆ.   ಇದರಲ್ಲಿ  ನಿಯೋಜಿತ ಸರ್ಕಾರಿ ಅಧಿಕಾರಿಗಳ ಪಾತ್ರವೇನಿಲ್ಲವಾದರೂ ಭಕ್ತಾಧಿಗಳ ಆಶಯದಂತೆ ಮತ್ತು ದೇವಾಲಯದ  ಸಂಪ್ರದಾಯಕ್ಕೆ ಅನುಗುಣವಾಗಿ ನಡೆಯುತ್ತಿದ್ದ ಆಚರಣೆಗಳೂ, ಉತ್ಸವಗಳಿಗೆ ಧಕ್ಕೆಯಗಿರುವುದಂತೂ ಸತ್ಯವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಗೌರಿ ಮತ್ತು ಗಣೇಶ ಆದಾದ ನಂತರ ನಾಡ ಹಬ್ಬ ದಸರಾ ಹಬ್ಬ ಶುರುವಾಗಲಿದೆ. ಮುಜರಾಯಿ ಇಲಾಖೆಯು ಇದೇ ರೀತಿ ತಮ್ಮ ನೀತಿಯನ್ನು  ಮುಂದುವರಿಸಿದಲ್ಲಿ  ಭಕ್ತರು ಇತರೇ ದೇವಾಲಯಗಳತ್ತ ಮುಖಮಾಡಿ ಈಗ ಬರುತ್ತಿರುವ ಆದಾಯಕ್ಕೂ ಸಂಚಕಾರವಾಗಿ, ಚೆನ್ನಾಗಿ ನಡೆಯುತ್ತಿರುವ ದೇವಾಲಯ ಭಕ್ತರೇ ಇಲ್ಲದೇ ಬಿಕೋ ಎನ್ನುವ ದಿನಗಳು ದೂರವಿಲ್ಲ.  ಹತ್ತು ಹಲವಾರು ವರ್ಷಗಳಿಂದ ದೇವಿಯ ಮೇಲಿನ ಭಕ್ತಿಯಿಂದಲೋ, ತಮ್ಮ ನಂಬಿಕೆಗಳಿಂದಲೋ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿರುವ ಅರ್ಚಕರು, ಪರಿಚಾರಕರು, ಬಾಣಸಿಗರು, ಗೋಪಾಲರು, ಮಾವುತರು ಹಾಗೂ ಇತರೇ ಸಿಬ್ಬಂಧ್ಧಿವರ್ಗದವರು ಏಕಾ ಏಕಿಯಾಗಿ ಮುಜರಾಯಿ ಇಲಾಖೆಯ ಕಠಿಣ ನಿರ್ಧಾರಗಳಿಂದ ಹೈರಾಣಗಿರುವುದು ಅವರ ವರ್ತನೆಯಿಂದಲೇ ಕಾಣ ಬಹುದಾಗಿದೆ. ಕೆಲವು ವಾರಗಳ ಹಿಂದೆ ಸದಾ ಹಸನ್ಮುಖರಾಗಿ ಬಂದಿದ್ದ ಸಕಲ ಭಕ್ತಾದಿಗಳನ್ನು ಆದರ ಮಾಡುತ್ತಿದ್ದವರು ಈಗ ತಮ್ಮ ನಾಳಿನ ಚಿಂತೆಯ ಬಗ್ಗೆಯೇ ಯೋಚಿಸುತ್ತಾ ಯಾಂತ್ರೀಕೃತವಾಗಿ ವ್ಯವಹರಿಸುತ್ತಿರುವುದು ಗಮನಕ್ಕೆ ಬಂದಿದೆ.  ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಮೇಲೆ  ಪ್ರತಿ ನಿತ್ಯದ  ದಾಸೋಹವಿರಲಿ,  ಅರ್ಚನೆಯ ಜೊತೆಗೆ ಪ್ರಸಾದ ರೂಪದಲ್ಲಿ ಕೊಡುತ್ತಿದ್ದ ಕಲ್ಲು ಸಕ್ಕರೆಯ ಪ್ರಮಾಣದಲ್ಲೂ  ಕಡಿಮೆಯಾಗಿರುವುದು ನಿಜಕ್ಕೂ ಭಕ್ತರನ್ನು ಆತಂಕಕ್ಕೆ ಎಡೆಮಾಡಿದೆ.

ದೇವಾಲಯಗಳು ಇರುವುದು ಧರ್ಮವನ್ನು ಉಳಿಸುವುದಕ್ಕೆ ಮತ್ತು ಬೆಳೆಸುವುದಕ್ಕೆ ಮಾತ್ರವೇ ಹೊರತು ಸರ್ಕಾರಕ್ಕೆ  ಆದಾಯ ತರುವ  ಕೇಂದ್ರಗಳಲ್ಲ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸಮಾಜದ ಧುರೀಣರು ದೇವಾಲಯ ಮತ್ತು ಭಕ್ತರ ಹಿತಾಸಕ್ತಿಗಳನ್ನು ಗಮನಿಸಿ, ಮುಜರಾಯಿ ಇಲಾಖೆಯಿಂದ ಹಿಂದಿರುವ ಆಡಳಿತ ವರ್ಗಕ್ಕೇ ದೇವಾಲಯವನ್ನು ವರ್ಗಾಯಿಸಿ ದೇವಸ್ಥಾನ ಹಿಂದಿನ ವೈಭವಕ್ಕೆ ಮರಳಿ ವಿಜೃಂಭಣೆಯಿಂದ ಮುಂಬರುವ ಎಲ್ಲಾ ಉತ್ಸವಗಳನ್ನು ನಡೆಸುವಂತೆ ಅನುವು ಮಾಡಿಕೊಡಲಿ ಎಂಬ ಕಳಕಳಿಯ ಪ್ರಾರ್ಥನೆ. ದೇವಸ್ಥಾನದ ಆದಯದ ಬಗ್ಗೆ ನಿಜವಾಗಿಯೂ ತಕರಾರಿದ್ದಲ್ಲಿ  ಅದನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದು ಆದನ್ನು ಸರಿ ಪಡಿಸಿ, ಕಾಲ ಕಾಲಕ್ಕೆ ಅಧಿಕಾರಿಗಳ ಮುಖೇನ ಪರಾಂಬರಿಸಿ, ಸರ್ಕಾರಕ್ಕೆ  ನ್ಯಾಯ ಸಮ್ಮತವಾಗಿ ಬರಬೇಕಾದ ವರಮಾನವನ್ನು ಪಡೆದು ದೇವಸ್ಥಾನದ  ಎಲ್ಲ ಸಂಪ್ರದಾಯ  ಹಾಗೂ ಭಕ್ತಾದಿಗಳ ಆಚರಣೆಗೆ ಯಾವುದೇ  ಭಂಗ ತರದೆ ಯಥಾ ರೀತಿಯಲ್ಲಿ ದೇವಸ್ಥಾನದ ಪೂಜೆ, ಪುನಸ್ಕಾರಗಳನ್ನು ಮುಂದುವರಿಸಿದರೆ ಯಾರ ಆಕ್ಷೇಪಣೆಯೂ ಇರುವುದಿಲ್ಲ.  ವಿದ್ಯಾರಣ್ಯಪುರದ ಗೌರವ ಘನತೆಗೂ ಯಾವುದೇ  ರೀತಿಯಲ್ಲಿ ಚ್ಯುತಿ ಬರುವುದಿಲ್ಲ.  ಇದೇ  ತಾಯಿ ಕಾಳಿಕಾ ದುರ್ಗಾ ಪರಮೇಶ್ವರಿಯ ಸಕಲ ಭಕ್ತಾದಿಗಳ ಆಶಯವೂ ಆಗಿದೆ

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: