ವೈಟ್ ಟಾಪಿಂಗ್ ಕರಾಳ ಅನುಭವ

ಆಡು ಮುಟ್ಟದ ಸೊಪ್ಪಿಲ್ಲಾ  ವೈಟ್ ಟಾಪಿಂಗ್ ಹೆಸರನ್ನು ಕೇಳದ ಬೆಂಗಳೂರಿಗನಿಲ್ಲ ಎಂದರೆ ಅತಿಶಯೋಕ್ತಿಯೇನಲ್ಲ. ಒಂದು ವರ್ಷದ ಹಿಂದೆ ವಿಧಾನ ಸಭೆಯ ಚುನಾವಣೆಗೆ ಮುಂಚೆ, ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಪ್ರಸ್ತಾವನೆ ಮುರಿದುಬಿದ್ದ ನಂತರ ಇದ್ದಕ್ಕಿಂದ್ದಂತೆಯೇ ಬೆಂಗಳೂರಿನ ಜನರು  ಅದರಲ್ಲೂ ವಾಹನ ಸವಾರರನ್ನು ಬೆಚ್ಚಿ ಬೀಳಿಸುವ ಪದವೇ ವೈಟ್ ಟಾಪಿಂಗ್. ಅಷ್ಟೋ ಇಷ್ಟು ಚೆನ್ನಾಗಿಯೇ ಇದ್ದ ರಸ್ತೆಗಳಲ್ಲಿ ಏಕಾ ಏಕಿ ಭಾರಿ ಯಂತ್ರಗಳನ್ನು ತಂದಿರಿಸಿ ರಸ್ತೆಯನ್ನು ಅರ್ಧ ಭಾಗಗಳಾಗಿ ವಿಂಗಡಿಸಿ, ಇದ್ದ ಡಾಂಬರನ್ನೂ ಅಗೆದು ಹಾಕಿ ಮುದುಕಿಗೆ ಅಲಂಕಾರ ಮಾಡುವ ಹಾಗೆ ವೈಟ್ ಟಾಪಿಂಗ್ ಎನ್ನುವ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ನೀರಿನಂತೆ ಕಾಂಕ್ರೀಟ್ ಮೇಲೆ ಖರ್ಚುಮಾಡುತ್ತಿರುವುದು ಎಷ್ಟು ಸರಿ?  ಹಾಗಿದ್ದರೆ ರಸ್ತೆಗಳು ಚೆನ್ನಾಗಿರ ಬೇಡವೇ ಎಂಬ ಪ್ರಶ್ನೆ ನಿಮ್ಮಿಂದ ಬರುವ ಮುಂಚೆಯೇ, ನಾನೂ ಹೇಳುತ್ತೇನೆ. ರಸ್ತೆಗಳು ಚೆನ್ನಾಗಿರಬೇಕು. ರಸ್ತೆಗಳು ಅತ್ಯುತ್ತಮವಾಗಿದ್ದರೆ ಮಾತ್ರವೇ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ  ಸುಲಭವಾಗಿ ಪ್ರಯಾಣಿಸಬಹುದಾಗಿದೆ ಮತ್ತು  ವಾಹನಗಳನ್ನೂ ಸುಸ್ತಿಯಲ್ಲಿಡ ಬಹುದಾಗಿದೆ, ವಾಹನಗಳು ಹೆಚ್ಚಿನ ಮೈಲೇಜ್ ನೀಡುವುದರಿಂದ  ಇಂಧನದ ಬಳಕೆಯೂ ಕಡಿಮೆಯಾಗಿ ವಿದೇಶಿ ವಿನಿಮಯವನ್ನೂ ಉಳಿಸಬಹುದಾಗಿದೆ.

ಆದರೆ, ಪ್ರತಿಯೊಂದು ಕೆಲಸಗಳನ್ನು ಮಾಡುವ ಮೊದಲು ಸರಿಯಾದ ಪೂರ್ವ ಯೋಜನೆ ತಯಾರು ಮಾಡಿ ಸಾಧಕ ಬಾದಕಗಳನ್ನು ಅಭ್ಯಸಿಸಿ, ದುರಸ್ತೀಕರಣದ ರಸ್ತೆಗಳ ಪರ್ಯಾಯ ಮಾರ್ಗಗಳನ್ನು ಮೊದಲು ಸರಿ ಪಡಿಸಿ ಕೆಲವು ದಿನಗಳು ಆ ಬದಲೀ ರಸ್ತೆಗಳಲ್ಲಿ ವಾಹನಗಳನ್ನು ಚೆಲಾಯಿಸಿ ಎಲ್ಲವೂ ಸುಗಮವಾದ ನಂತರ ರಸ್ತೆ ದುರಸ್ತೀಕರಣದ ಮಾಡಲು  ತೆಗೆದುಕೊಳ್ಳುವ ನಿಗಧಿತ ಅವಧಿಯನ್ನು  ಸಾರ್ವಜನಿಕರಿಗೆ ತಿಳಿಸಿದ ನಂತರವೇ ವೈಟ್ ಟಾಪಿಂಗ್ ಕಾರ್ಯ ತೆಗೆದುಕೊಳ್ಳಬೇಕು. ಆದರೆ ಇಲ್ಲಿ ಎಮ್ಮೆ ಹೋದದ್ದೇ ದಾರಿ ಎನ್ನುವ ಹಾಗೆ  ಯಾವುದೇ ಪರ್ಯಾಯ ಮಾರ್ಗಗಳನ್ನು ಸೂಚಿಸದೆ ಏಕಾಏಕಿ ಕೆಲವು ರಸ್ತೆ ದುರಸ್ತೀಕರಣದ ಹಳದಿ ಬಣ್ಣದ ಫಲಕಗಳನ್ನು ರಸ್ತೆಗಳಲ್ಲಿ ಇರಿಸಿ ಕೆಂಪು ಬಿಳಿ ಬಣ್ಣದ ಪಟ್ಟಿಯನ್ನು ಕಟ್ಟಿ ಕೆಲಸ ಕೈಗೆತ್ತಿ ಕೊಳ್ಳುತ್ತಿರುವುದು ಎಷ್ಟು ಸರಿ?

ಸರಿ ಜನರ ಹಿತಕ್ಕಾಗಿಯೇ ಈ ರಸ್ತೆಗಳನ್ನು ಹಾಕಿಸುತ್ತಿದ್ದಾರೆ ಎಂದು ಒಪ್ಪಿಕೊಂಡರೂ, ಯಾವುದೇ ಪ್ರಯೋಗಗಳು ಜನರಿಗೆ ತೊಂದರೆಯಾಗದೆ ಅವರ ದೈನಂದಿನ ಕಾರ್ಯಗಳಿಗೆ  ಅಡ್ಡಿ ತಾರದೆ ಮಾಡಿದಲ್ಲಿ ಎಲ್ಲರೂ ಒಪ್ಪಿಕೊಳ್ಳಬಹುದು. ಇದಾವುದರ ಪರಿವೇ ಇಲ್ಲದೆ, ಸುಮ್ಮನೆ ತಿಂಗಳಾನುಗಟ್ಟಲೆ  ಜನರಿಗೆ ತೊಂದರೆ ಕೊಡುವುದರಲ್ಲಿ ಸರ್ಕಾರಕ್ಕೆ ಅದ್ಯಾವ ಸುಖಃ ದೊರೆಯುತ್ತದೆಯೋ ಆ ಭಗವಂತನೇ ಬಲ್ಲ. ಇನ್ನು  ಶುರು ಮಾಡಿದ ಮೊದಲನೇ ಕೆಲಸವೇ ಮುಗಿಯುವ ಮುನ್ನವೇ  ಅದೇ ರಸ್ತೆಯ ಮುಂದುವರಿದ ಭಾಗದ ಕೆಲಸವನ್ನು ಕೈಗೆತ್ತಿಕೊಂಡು ಮೈಲಿಗಟ್ಟಲೆ ವಾಹನಗಳನ್ನು  ದಟ್ಟಣೆ ಮಾಡಿ ಸುಮಗ ಸಂಚಾರಕ್ಕೆ ಅಡ್ದಿ ಪಡಿಸುತ್ತಿರುವುದು ಎಷ್ಟುಸರಿ?

ಹೆಬ್ಬಾಳದ ಮೇಲು ಸೇತುವೆಯಿಂದ ಮಾನ್ಯತಾ ಟೆಕ್ಪಾರ್ಕ್ ನಡುವಿನ ಅಂತರ ಸುಮಾರು ಮೂರ್ನಾಲ್ಕು  ಕಿಲೋ ಮೀಟರ್ಗಳಿರ ಬಹುದು. ರಸ್ತೆಯಲ್ಲಿ ಯಾವುದೇ ವಾಹನಗಳ ದಟ್ಟಣೆ ಇಲ್ಲದಿದ್ದಲ್ಲಿ ಐದರಿಂದ ಹತ್ತು ನಿಮಿಷಗಳಲ್ಲಿ ತಲುಪಬಹುದು.  ದೈನಂದಿನ ವಾಹನಗಳನ್ನು  ಪರಿಗಣಿಸಿದರೆ ಇನ್ನೂ ಐದು ನಿಮಿಷಗಳು ಹೆಚ್ಚಾಗಿ ಸುಮಾರು ಹತ್ತು ಹದಿನೈದು ನಿಮಿಷಗಳಲ್ಲಿ ಕ್ರಮಿಸಬಹುದು.  ಆದರೆ ಇಂದು ಆ ಮೂರ್ನಾಲ್ಕು ಕಿಲೋ ಮೀಟರೆ ಕ್ರಮಿಸಲು ಬರೋಬ್ಬರಿ ಒಂದೂವರೆ ಗಂಟೆಗಳು ತೆಗೆದುಕೊಂಡರೆ ಪರಿಸ್ಥಿತಿ ಹೇಗಾಗಿರಬಹುದು ಎಂದು ನೀವೇ ಯೋಚಿಸಿ. ಹೆಚ್ಚೆ ಹೆಹ್ಹೆಗಳ ಅಂತರದಲ್ಲಿನ ವಾಹನಗಳ ದಟ್ಟಣೆ. ಇರುವ ಅಲ್ಪ ಸ್ವಲ್ಪ ಜಾಗದಲ್ಲೇ ನುಗ್ಗುವ ದ್ವಿಚಕ್ರ ವಾಹನಗಳು, ಮುಂದಿನ ಚಕ್ರ ನುಸುಳಿದರೆ ಸಾಕು ಹಿಂದಿನ ಚಕ್ರ ತಾನಾಗಿಯೇ  ಮುಂದೆ ಹೋಗುತ್ತದೆ ಎಂದು ನಂಬಿರುವ ಆಟೋ ಚಾಲಕರು. ಇನ್ನು ಮೈ ಮೇಲೆ ಏರುವ ಬಿ.ಎಂ.ಟಿಸಿ ಮತ್ತು ವೋಲ್ವೋ ಬಸ್ಸುಗಳು ಅಬ್ಬಬ್ಬಾ ನೆನಸಿ ಕೊಂಡರೆನೇ ಇಷ್ಟು ಭಯವಾಗುವಾಗ  ಇನ್ನು ಆನುಭವಿಸಿರುವವರ ಪಾಡೇನು? ತುರ್ತಾಗಿ ರೋಗಿಗಳನ್ನು ಕರೆದೊಯ್ಯುತ್ತಿರುವ ಆಂಬ್ಯುಲೆನ್ಸ್ ವಾಹನಕ್ಕೂ ಜಾಗ ಮಾಡಿ ಕೊಡಲು ಆಗದಂತಹ ಪರಿಸ್ಥಿತಿ.  ನೆತ್ತಿಯ ಮೇಲೆ ಸುಡುತ್ತಿರುವ ಸೂರ್ಯ. ಕಛೇರಿಗೆ ತಡವಾಗುತ್ತಿರುವ ಆತಂಕ ಜೊತೆಗೆ, ಬೆನ್ನು ಹತ್ತಿದ ಬೇತಾಳದಂತೆ ಒಂದಾದ ಮೇಲೊಂದು ಮೊಬೈಲ್ ಕರೆಗಳು. ನಿಧಾನವಾಗಿ ಆಮೆ ಹೆಜ್ಜೆಯಂತೆ ಸಾಗುತ್ತಿರುವ  ನೂರಾರು ವಾಹನಗಳು ಹೊರ ಹಾಕುತ್ತಿರುವ ಹೊಗೆ. ಕಾರಿನಲ್ಲಿ ಏಸಿ ಹಾಕಿದ್ದರೂ ಅದೇ ಕಲುಷಿತವಾದ ಗಾಳಿಯ ಸೇವನೆ.  ಈಗಾಗಲೇ ಗಗನಕ್ಕೇರಿರುವ ತೈಲ ಬೆಲೆಯಲ್ಲಿ ಈ ರೀತಿಯಾಗಿ ನೂರಾರು ವಾಹನಗಳ ದಟ್ಟಣೆಯಾದಲ್ಲಿ ಅನಗತ್ಯವಾಗಿ ಖರ್ಚಾಗುವ ಇಂಧನಕ್ಕೆ ಯಾರು ಹೊಣೆಗಾರರು?  ಅಬ್ಬಬ್ಬಾ  ಒಂದೇ, ಎರಡೇ ನಮ್ಮ ಕಷ್ಟಗಳು.  ಯಾರದೋ ತೆವಲಿಗೆ ಯಾರದೋ ಹಿತವನ್ನು  ಕಾಪಾಡುವವ  ಸಲುವಾಗಿ  ಹಾಕುತ್ತಿರುವ ಈ ವೈಟ್ ಟಾಪಿಂಗ್ನಿಂದಾಗಿ ಜನಸಾಮಾನ್ಯರಿಗೇಕೆ ಈ ರೀತಿಯ ಬವಣೆ?

ಸರ್ಕಾರದ ಯೋಜನೆಗಳು ಸಾರ್ವಜನಿಕರ ಹಿತಕ್ಕಾಗಿ ಇರಬೇಕೇ ಹೊರತು ಕೆಲ ರಾಜಕಾರಣಿಗಳೂ ಮತ್ತು ಪಟ್ಟಭದ್ರ ಜನರ  ಹಿತಾಸಕ್ತಿ ಕಾಪಾಡುವುದಕ್ಕಲ್ಲಾ ಎನ್ನುವುದನ್ನು ಹೇಗೆ ತಿಳಿಯ ಪಡಿಸುವುದು? ಬೆಕ್ಕಿಗೆ ಗಂಟೆ ಕಟ್ಟುವರಾರು?

ಏನಂತೀರೀ?

4 thoughts on “ವೈಟ್ ಟಾಪಿಂಗ್ ಕರಾಳ ಅನುಭವ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s