ಸುಭ್ರಹ್ಮಣ್ಯ ಷಷ್ಠಿ ಅವಾಂತರ

ನಾವುಗಳು ಚಿಕ್ಕವರಿದ್ದಾಗ ನಮಗೆಲ್ಲಾ ಆಷಾಡ ಮಾಸ   ಮುಗಿದು ಎಂದು ಶ್ರಾವಣ ಮಾಸ ಬರುತ್ತದೋ ಎಂಬ ಕಾತುರ. ಏಕೆಂದರೆ, ಭೀಮನ ಅಮಾವಸ್ಯೆಯಿಂದ ಆರಂಭವಾಗುವ ಹಬ್ಬಗಳ ಮತ್ತು ರಜೆಗಳ ಸಾಲು ಗೌರಿ, ಗಣೇಶ ದಾಟಿ ದಸರಾ ಮುಗಿದು ದೀಪಾವಳಿ ಮತ್ತು ಉತ್ತಾನದ್ವಾದಸಿ (ಮರಿ ದೀಪಾವಳಿ) ಹೊತ್ತಿಗೆ ಮುಗಿಯುತ್ತಿತ್ತು  ಹಬ್ಬಗಳ ದಿನ ಹೊಸ ಬಟ್ಟೆ, ರುಚಿ ತಿಂಡಿ ತೀರ್ಥಗಳ ಜೊತೆಗೆ ರಜಾದಿನಗಳಂದು ಇಡೀದಿನ ಕ್ರಿಕೆಟ್ ಆಡಲು ಭರ ಪೂರ ಸಮಯ ಸಿಗುತ್ತಿದ್ದದ್ದು ನಮ್ಮಗೆ ಹೆಚ್ಚಿನ ಮಜ ಕೊಡುತ್ತಿತ್ತು.  ಬೆಳಿಗ್ಗೆ ಸ್ನಾನ ಮುಗಿಸಿ ತಿಂಡಿ ತಿಂದು ಆಡಲು ಹೊರಟವೆಂದರೆ ಮಧ್ಯಾಹ್ನ ಊಟಕ್ಕೆ  ಬಂದರೆ ಬಂದೆವು ಇಲ್ಲವೇ ಒಟ್ಟಿಗೆ ಸಂಜೆ ಕತ್ತಲಾದ ಮೇಲೆ ಮನೆಗೆ ಬರುತ್ತಿದ್ದೆವು.  ಹಬ್ಬದ ದಿವಸ ತಂದೆಯವರು ಹೇಗೂ  ಬೈಯುತ್ತಿರಲಿಲ್ಲವಾದ್ದರಿಂದ  ಭಂಡ ಧೈರ್ಯ ನಮಗೆ.

ಈ ಎಲ್ಲಾ ಹಬ್ಬಗಳಿಗಿಂತ ನನಗಂತೂ ಭೀಮನ ಅಮಾವಸ್ಯೆ ಮತ್ತು  ಸುಭ್ರಹ್ಮಣ್ಯ ಷಷ್ಠಿ  ಎಂದರೆ ಬಲು ಪ್ರೀತಿ. ಏಕಂದರೆ  ಅಂದಿನ ಕಾಲದಲ್ಲಿ ನಮಗೆಂದು ಪಾಕೆಟ್ ಮನಿ ಕೊಡುವ ಅಭ್ಯಾಸವೇ ನಮ್ಮ ಮನೆಯಲ್ಲಿ ಇರಲಿಲ್ಲ. ಏನೇ ಬೇಕಂದರೂ ಸರಿಯಾದ ಕಾರಣ ತಿಳಿಸಿ ಅಗತ್ಯವಿದ್ದಷ್ಟೇ ದುಡ್ಡನ್ನು ಕೊಡುತ್ತಿದ್ದರು. ಆಕಸ್ಮಾತ್ ಹೆಚ್ಚಿನ ಹಣ ನೀಡಿದ್ದಲ್ಲಿ, ಸರಿಯಾದ ಚಿಲ್ಲರೆ ತಂದು ಕೊಡಲೇ ಬೇಕಿತ್ತು. ಹಾಗಾಗಿ ನಮಗೆ ಕ್ರಿಕೆಟ್ ಮ್ಯಾಚ್ ಆಡುವಾಗ ಬೆಟ್ಟಿಂಗ್ ಕಟ್ಟಲು  ಹಣವೇ ಸಿಗುತ್ತಿರಲಿಲ್ಲ. ಆದರೆ ಭೀಮನ ಅಮಾವಾಸ್ಯೆಯಂದು ಹೊಸಿಲಿನ ಮೇಲೆ ಗಂಡು ಮಕ್ಕಳ ಮೊಣಕೈನಿಂದ ಉದ್ದಿನ ಕಡುಬು ಇಲ್ಲವೇ ಕರಿದ ಕಡುಬಿನಿಂದ  ಭಂಡಾರ ಹೊಡೆಸುವುದು ನಮ್ಮ ಮನೆಯಲ್ಲಿ  ಆಚರಿಸುತ್ತಿದ್ದ ಪದ್ದತಿ.  ಆ ಭಂಡಾರದ ಜೊತೆಯಲ್ಲಿ ದಕ್ಷಿಣೆಗೆಂದು ಇಡುತ್ತಿದ್ದ  ಐದೋ, ಹತ್ತು  (ಇಂದು ಐದು ನೂರು, ಸಾವಿರ ರೂಪಾಯಿಗಳವರೆಗೆ ತಲುಪಿದೆ)  ರೂಪಾಯಿಗಳೇ ನಮಗೆ ಸಿಗುತ್ತಿದ್ದ ನಿಧಿ. ಹಾಗಾಗಿ ಅದಕ್ಕೇ ನಾನು ಬಕ ಪಕ್ಷಿಯಂತೆ ಒಂದು ವರ್ಷಗಳಿಂದ ಕಾಯುತ್ತಲಿರುತ್ತಿದೆ. ಆ ದುಡ್ಡನ್ನು ಅಮ್ಮಾ ಡಬ್ಬಿ ಗಡಿಗೆಯಲ್ಲಿ ಹಾಕಲು ಹೇಳುತ್ತಿದ್ದರಾರರೂ ಅದು ಹೇಗೂ ಅಮ್ಮನ ಕಣ್ಣುತಪ್ಪಿಸಿ ನನ್ನ ಜೋಬಿನೊಳಕ್ಕೆ ಹಾಕಿ ಕೊಳ್ಳುತ್ತಿದ್ದೆ. ನಂತರ ಅದೇ ದುಡ್ಡಿನಲ್ಲಿ  ಕ್ರಿಕೆಟ್ ಮ್ಯಾಚ್ ಆಡಲು ಇಲ್ಲವೇ ಬಾಲ್ ಖರೀದಿಸಲು ಉಪಯೋಗಿಸುತ್ತಿದ್ದೆ.  ಅದೇ ರೀತಿ ಸುಬ್ಬರಾಯನ ಷಷ್ಠಿ  ಮತ್ತು  ಮುಂಜಿಗಳು ಬಂದಿತೆಂದರೆ ನನ್ನಂತಹ ಬ್ರಹ್ಮಚಾರಿಗಳಿಗೆ ಸುಗ್ಗಿಯೋ ಸುಗ್ಗಿ.  ಒಂಟಿ ಪಂಚೆ ಜೊತೆ, ಭೂರೀ ಭೋಜನ ಮತ್ತು ಯಥಾಶಕ್ತಿ ದಕ್ಷಿಣೆಗಳು ನಮ್ಮನ್ನು  ಮತ್ತಷ್ಟು ಆರ್ಥಿಕವಾಗಿ ಸಧೃಡಗೊಳಿಸುತ್ತಿದ್ದವು. ಅಂತಹ ಒಂದು ಸುಬ್ಬರಾಯನ ಷಷ್ಠಿಯ ಮಜಬೂತಾದ  ಅನುಭವವನ್ನೇ ಇಂದು ನಾನು ನಿಮ್ಮೊಡನೆ ಹಂಚಿಕೊಳ್ಳಲು ಬಯಸುತ್ತಿದ್ದೇನೆ.

ನರಹರಿ ಅಂದಿಗೂ, ಇಂದಿಗೂ ಮತ್ತು ಮುಂದೆಂದಿಗೂ ನನ್ನ ಆತ್ಮೀಯ ಗೆಳೆಯರ ಸಾಲಿನಲ್ಲಿ ಅಗ್ರ ಶ್ರೇಣಿಯವ.  ನರಹರಿ ಎಂದು ಅವನ ಹೆಸರಿದ್ದರೂ ನಮಗೆಲ್ಲಾ ಹರೀ ಎಂದೇ ಸುಪರಿಚಿತ. ಆವರ ತಂದೆಯವರು ಮತ್ತು ನನ್ನ ತಂದೆಯವರು ಒಟ್ಟಿಗೆ ಬಿಇಎಲ್ ಕಾರ್ಖಾನೆಗೆ ಸೇರಿಕೊಂಡು, ಒಟ್ಟೊಟ್ಟಿಗೇ ತರಭೇತಿ ಪಡೆದು ಒಂದೇ ಡಿಪಾರ್ಟ್ಮೆಂಟ್ನಲ್ಲಿ ಕೆಲಸ ಮಾಡುತ್ತಿದ್ದವರು. ಆವರ ಮನೆಯೂ ನಮ್ಮ ಮನೆಯ ಸಮೀಪವೇ ಇತ್ತು. ವಯಸ್ಸಿನಲ್ಲಿ ನನಗೂ ಅವನಿಗೂ ಐದು ವರ್ಷಗಳ ಅಂತರವಿದ್ದರೂ ನಾವಿಬ್ಬರೂ ಗಳಸ್ಯ ಗಂಟಸ್ಯರೇ.  ನಮ್ಮ ಮನೆಯಲ್ಲಿ ಏನೇ ತಿಂಡಿಗಳನ್ನು ಮಾಡಿದರೂ ಅದರಲ್ಲಿ ಹರಿಯ ಪಾಲಿರುತ್ತಿತ್ತು. ಅದೇ ರೀತಿ ಅವರ ಮನೆಯಲ್ಲೂ ನನಗೂ ಪಾಲಿರುತ್ತಿತ್ತು. ನನ್ನ ತಾಯಿಯಂತೂ ನಾವಿಬ್ಬರೂ ಸದಾ ಜೊತೆಯಲ್ಲಿರುತ್ತಿದ್ದನ್ನು ನೋದಿ ಒಡ ಹುಟ್ಟದಿದ್ದರೂ ಒಳ್ಳೆ ರಾಮ ಲಕ್ಷ್ಮಣರಂತೆ ಇದ್ದೀರಿ, ಹಾಗೆಯೇ ಸದಾಕಾಲವೂ ಇರಿ ಎಂದೇ ಹರಸುತ್ತಿದ್ದರು. ಇಂದು ನಮ್ಮ ತಾಯಿಯವರು ನಮ್ಮನ್ನಗಲಿದ್ದರೂ ಅವರ ಇಚ್ಛೆಯಂತೆ ಅದೇ ಗೆಳೆತನವನ್ನು ಇಂದಿಗೂ ನಾವಿಬ್ಬರೂ  ಮುಂದುವರಿಸಿಕೊಂಡು ಬರುತ್ತಿದ್ದೇವೆ. ನಮ್ಮಿಬ್ಬರ ಮನೆಯಲ್ಲಿಯ ಯಾವುದೇ ಶುಭ/ಅಶುಭ ಕಾರ್ಯಕ್ತಮಗಳಾದರೂ ಒಬ್ಬರು ಮತ್ತೊಬ್ಬರಿಲ್ಲದೆ ನಡೆದ ನೆನಪಿಲ್ಲ.

ಇಂತಹ ಹರಿ ಮನೆಯಲ್ಲಿಯಲ್ಲಿ  ಒಮ್ಮೆ ನನ್ನನ್ನು  ಸುಭ್ರಹ್ಮಣ್ಯ ಷಷ್ಠಿಗೆ ಬ್ರಹ್ಮಚಾರಿಯಾಗಿ ಬರಲು ಹೇಳಿದ್ದರು.  ನಾನು,  ಹರೀ ಎಷ್ಟು ಹೊತ್ತಿಗೆ ಬರಬೇಕೋ ಎಂದು ಕೇಳಿದ್ದಾಗ, ಅವನು 1:30-2 ಘಂಟೆಗೆ ಬಂದು ಬಿಡೋ ಎಂದಿದ್ದ. ಆಂದು ಭಾನುವಾರ. ನಾನು ಸ್ನಾನ ಸಂಧ್ಯಾವಂದನೆ ಮುಗಿಸಿ  (ಅಂದು ಷಷ್ಠಿಗೆ ಬ್ರಹ್ಮಚಾರಿಯಾಗಿ ಹೋಗಲು ಒಪ್ಪಿಕೊಂಡಿದ್ದರಿಂದ, ತಿಂಡಿ ತಿನ್ನುವ ಹಾಗಿರಲಿಲ್ಲ)  ಮನೆಯ ಮುಂದಿನ ತೋಟದಲ್ಲಿ ಗಿಡಗಳಿಗೆ ನೀರುಣಿಸುತ್ತಿದ್ದೆ.  ಆದೇ ಸಮಯದಲ್ಲಿ ನಮ್ಮ ಮನೆಯ ಸಮೀಪದಲ್ಲೇ ಇರುವ ಮತ್ತೊಬ್ಬ ಸ್ನೇಹಿತ ಕೃಷ್ಣೀ (ಕೃಷ್ಣಮೂರ್ತಿ, ಗಾಲಿ ಮತ್ತು ಅಚ್ಚು ಕಾರ್ಖಾನೆಯ ಕ್ರಿಕೆಟ್ ಪಟು) ಮನೆಗೆ ಬಂದು ಬಾರೋ, ಕ್ರಿಕೆಟ್ ಮ್ಯಾಚ್ ಆಡಲು ಹೋಗೋಣ ಎಂದು ಕರೆದ. ನಾನು ಇಲ್ಲಾ ಕೃಷ್ಣೀ  ಇವತ್ತು  ಮಧ್ಯಾಹ್ನ ಎಲ್ಲಿಗೂ ಹೋಗಬೇಕು ಬರಲು ಆಗುತ್ತಿಲ್ಲ  ಮುಂದಿನ ವಾರ ಖಂಡಿತ ಬರ್ತೀನಿ ಅಂದೆ. ಅದಕ್ಕೆ ಅವನು ಹೇ ಇವತ್ತು ಟೆನ್ನಿಸ್ ಬಾಲ್ ಮ್ಯಾಚ್ ಅಲ್ಲಾ ಮಗಾ, ಲೆದರ್ ಬಾಲ್ ಮ್ಯಾಚ್ ಏರ್ಫೋಸ್ ಟೀಮ್ ಮೇಲೇ ಅಂತ ಪುಸಲಾಯಿದ. ಲೆದರ್ ಬಾಲ್ ಮ್ಯಾಚಾ? ಎಷ್ಟು ಹೊತ್ತಿಗೆ ಮುಗಿಯುತ್ತದೆ ಎಂದು ಆಸೆಯಿಂದ ಕೇಳಿದೆ. 9-9:30ಕ್ಕೆ ಹೊತ್ತಿಗೆ ಆರಂಭವಾಗಿ 12-12:30 ವರೆಗೆ ಮುಗಿಯುತ್ತದೆ. ಇಪ್ಪತ್ತು ಓವರ್ ಮ್ಯಾಚ್ ಅಂತ ಹೇಳಿದ.  ಹರಿ ಹೇಗೂ ಒಂದೂವರೆಗೆ ಬರಲು ಹೇಳಿದ್ದಾನೆ, ನಾನೂ ಅಷ್ಟು ಹೊತ್ತಿಗೆ  ಲೆದರ್ ಬಾಲ್ ಮ್ಯಾಚ್ ಮುಗುಸಿ ಕೊಂಡು ಬರಬಹುದು ಎಂದು ಯೋಚಿಸಿ ಶೂ ಹಾಕಿಕೊಂಡು ಸೈಕಲ್ ಹತ್ತಿ ಮ್ಯಾಚ್ ಆಡಲು ಹೋಗಿಯೇ ಬಿಟ್ಟೆ. ಟಾಸ್ ಹಾಕಿ ನಾವೇ ಟಾಸ್ ಗೆದ್ದು ಎದುರಾಳಿಗೆ  ಮೊದಲು ಬ್ಯಾಟ್ ಮಾಡಲು ಕೇಳಿದ್ದೆವು. ಆಷ್ಟರಲ್ಲಿ ನಮ್ಮ ತಂಡ ಸದಸ್ಯನೊಬ್ಬ 20 ಓವರ್ ಬದಲು  30 ಓವರ್ ಆಡೋಣ ಅವರನ್ನು ಬೇಗನೆ  ಔಟ್ ಮಾಡಿಬಿಟ್ರೆ ನಮಗೆ ಪೂರ್ತಿ 30 ಓವರ್ ಆಡಬಹುದು ಎಂಬ ಸಲಹೆ ಕೊಟ್ಟೇ ಬಿಟ್ಟ. ಸರಿ ನಮ್ಮ ತಂಡದ ನಾಯಕ ಕೃಷ್ಣಿ  ಹಾಗು ಎದುರಾಳಿ ತಂಡದ ನಾಯಕ ಒಪ್ಪಿಕೊಂಡು ಆಟ ಶುರುವಾಯಿತು. ಆರಂಭದಲ್ಲಿ ಎರಡ್ಮೂರು ವಿಕೆಟ್ ಬಿದ್ಡಾಗ ನಮ್ಮ ನಿರ್ಧಾರ ಸರಿಯಾಗಿದೆ ಎಂದೆನೆಸಿದರು ನಂತರ ಬಂದ ಆಟಗಾರರು ನಿಂತು ಆಡತೊಡಗಿದರು. ನನಗೋ ಸಮಯ ಜಾಸ್ತಿ ಆಗುತ್ತಿರುವ ಬಗ್ಗೆ ಕಳವಳ.  ಹಾಗೂ ಹೀಗೂ ವಿಕೆಟ್ ಉರಳುತ್ತಾ 29.5 ಓವರ್ಗೆ  ಎಲ್ಲರೂ ಔಟ್ ಆದಾಗ ಸಮಯ   ಮಧ್ಯಾಹ್ನ 12.45. ನಾನು ಬ್ಯಾಟ್ ಮಾಡುವುದಿಲ್ಲ. ನಾನು ಮನೆಗೆ ಹೊರಟು ಹೋಗುತ್ತೇನೆ ಎಂದು ಕೃಷ್ಣಿ ಬಳಿ ಕೇಳಿದಾಗ, ಅದೆಲ್ಲಾ ಬೇಡಾ ನೀನೇ ಓಪನಿಂಗ್ ಮಾಡು ಎಂದ. ಅಕ್ಕಿ ಮೇಲೆ ಆಸೆ ನೆಂಟರ ಮೇಲಿನ ಪ್ರೀತಿ ಎನ್ನುವಂತೆ ಇತ್ತ ಆಟ,  ಅತ್ತ ಊಟ. ಸರಿ ಒಂದೆರಡು ಓವರ್ ಆಡಿ ಹೋದರಾಯ್ತು ಎಂದು ಪ್ಯಾಡ್ ಕಟ್ಟಿಕೊಂಡು ಗ್ಲೌಸ್ ಹಾಕಿ ಕೊಂಡು ಆಡಲು ಇಳಿದೇ ಬಿಟ್ಟೆ.  ನಾನೊಂದು ಬಗೆದರೆ ದೈವ ಒಂದು ಬಗೆದೀತು ಎನ್ನುವ ಹಾಗೆ ಅಂದು ನಾನು ಮುಟ್ಟಿದ್ದೆಲ್ಲಾ  ಚಿನ್ನ ಎನ್ನುವಂತೆ ಹೊಡೆದದ್ದೆಲ್ಲಾ ರನ್ಗಳೇ . ಔಟೇ ಆಗ್ತಾ ಇಲ್ಲ. ಹಾಗೂ ಹೀಗೂ 10-12  ಓವರ್ ಆಟ ಮುಗಿತಾ ಬಂತು ನಾನು  32 ರನ್ ಹೊಡೆದು ರನ್ ಔಟ್ ಆದಾಗ ಸಮಯ 1:50.  ಓಡೋಡಿ ಪ್ಯಾಡ್,  ಗ್ಲೌಸ್ ಎಲ್ಲಾ ಬಿಚ್ಚಾಕಿ ಮನೆಕಡೆಗೆ ಹೋದಾಗ ರೇಡಿಯೋದಲ್ಲಿ  ಮಧ್ಯಾಹ್ನ  2:10ರ ಪ್ರದೇಶ ಸಮಾಚಾರ ಬರುತ್ತಿತ್ತು. ಮನೆಗೆ ಹೋದ ತಕ್ಷಣವೇ ನಮ್ಮ ತಂದೆ  ನನ್ನ ಮೇಲೆ ಸಿಡಿಮಿಡಿಗೊಂಡು ಏಲ್ಲಿ  ಹೋಗಿದ್ದೆ ಎಂದು ಏರು ದನಿಯಲ್ಲಿ ಕೇಳಿದರು? ಇದೇನಪ್ಪಾ, ಹೀಗೇಕಾಡ್ತಾ ಇದ್ದಾರೆ ನಮ್ಮಪ್ಪಾ? ಎಂದು ಕೊಂಡಾಗ  ಹರಿ ಈಗಾಗಲೇ 4-5 ಬಾರಿ ಅಂಡು ಸುಟ್ಟ ಬೆಕ್ಕಿನಂತೆ ನಮ್ಮ ಮನೆಗೆ ನನ್ನನ್ನು ಹುಡುಕಿಕೊಂಡು  ಬಂದು ಹೋಗಿದ್ದು ಗೊತ್ತಾಯ್ತು. ಸರಿ ಸರಿ. ಅವರ ಮನೆಯಲ್ಲಿ  ಎಲ್ಲರೂ ಕಾಯುತ್ತಿದ್ದಾರೆ. ಕೈ ಕಾಲು ತೊಳಿದುಕೊಂಡು ಪಂಚೆ ಉಟ್ಟು ಕೊಂಡು ಹೋಗು ಎಂದರು ನಮ್ಮ ತಂದೆಯವರು. ಇಲ್ಲಾ  ಈಗಾಗಲೇ ಸಮಯ ಆಗಿ ಹೋಗಿದೆ. ನಾನು ಹೋಗೋದಿಲ್ಲಾ ಎಂದೆ.  ಹೋದ್ರೆ ಅವರ ಮನೆಯಲ್ಲೆಲ್ಲಾ ಬೈದುಕೊಳ್ಳುತ್ತಾರೆ ಎಂದೆ. ಅದಕ್ಕವರು ಹೇ ಹಾಗೆಲ್ಲಾ ಮಾಡಬಾರದು.  ಬ್ರಹ್ಮಚಾರಿಗಳ ಪೂಜೆಮಾಡಿ ಊಟ ಹಾಕದ ಹೊರತು ಅವರ ಮನೆಯಲ್ಲಿ ಯಾರೂ ಕೂಡಾ ಊಟ ಮಾಡುವ ಹಾಗಿಲ್ಲ ಹೋಗು ತಡ ಮಾಡ ಬೇಡ ಎಂದು ತಿಳಿ ಹೇಳಿ ಕಳುಹಿಸಿದರು.  ಸರಿ ಎಂದು ಒಲ್ಲದ ಮನಸ್ಸಿನಿಂದಲೇ ಹರಿ ಮನೆಗೆ ಹೋದಾಗ ಆಗಲೇ ಬಂದ ನೆಂಟರಿಸ್ಟರೆಲ್ಲಾ ಹಸಿವಿನಿಂದ ತತ್ತರಿಸಿ ನನ್ನ ಬರುವನ್ನೇ ಕಾಯುತ್ತಿದ್ದರು. ನನ್ನನ್ನು ನೋಡಿ ಹರಿ, ಓ ಶ್ರೀಕಂಠಾ ಬಂದ್ಯಾ, ಬಾ,ಬಾ, ಹೋಗಿ ಸ್ನಾನ ಮಾಡಿಕೊಂಡು ಮಡಿ ಪಂಚೆ ಉಟ್ಟಿಕೋ ಎಲ್ಲರೂ ನಿನಗಾಗಿಯೇ ಕಾಯ್ದು ಕಾಯ್ದು ಸುಸ್ತಾಗಿದ್ದಾರೆ ಎಂದು ಸಮಚಿತ್ತದಂದ ಹೇಳಿದಾಗ ನಾನು ಅಬ್ಬಾ ಬದುಕಿದೆಯಾ ಬಡ ಜೀವ ಎಂದು ಸದ್ದಿಲ್ಲದೆ ಬಚ್ಚಲಿನತ್ತ ಓಡಿದ್ದೆ. ಮಡಿಯುಟ್ಟು ದೇವರ ಮನೆ ಮುಂದೆ ಕುಳಿತಾಗ, ಹರಿ ಒಬ್ಬನನ್ನು ಬಿಟ್ಟು ಬೇರೆ ಯಾರೂ ನನ್ನನ್ನು ಮಾತಾನಾಡಿಸುವುದು ಬಿಡಿ, ನೋಡುತ್ತಲೂ ಇರಲಿಲ್ಲ. ಅವರ ತಾತ ಅಜ್ಜಿ  ನನ್ನನ್ನು ಹರಿಗಿಂತಲೂ ತುಸು ಹೆಚ್ಚೇ ಇಷ್ಟ ಪಡುತ್ತಿದ್ದವರು ಅಂದೇಕೋ ನಾನು ತಡವಾಗಿ ಬಂದಿದ್ದಕ್ಕೆ ಕೋಪಗೊಂಡಿದ್ದರು. ಇನ್ನು ಅವರ ಅಪ್ಪಾ ಅಮ್ಮಾ   ಕೂಡಾ ನನ್ನ ನೋಡಿ ಸಿಡಿಮಿಡಿ ಗೊಂಡಾಗ, ಅಯ್ಯೋ ತಂದೆಯವರ ಮಾತನ್ನು   ಕೇಳಿ ಬರಬಾರದಿತ್ತು ಎಂದೆನಿಸುತ್ತಿತ್ತು. ಸರಿ ಹೇಗೂ ನನ್ನಿಂದ ತಪ್ಪಾಗಿದೆ ತೆಪ್ಪಗಿರಲೇ ಬೇಕು ಎಂದು ಕೊಂಡು. ಹೇಗೋ  ಬಂದದ್ದೂ ಆಗಿದೆ.  ಆಗಿದ್ದು ಆಗಿಯೇ ಹೋಗಲಿ  ಎಂದು  ಚಾಪೆ ಮೇಲೆ ಕುಳಿತು ಕೊಂಡೆ. ಹರಿಯವರ ಅಜ್ಜಿ  ಮತ್ತವರ ಅವರಮ್ಮ ನನಗೂ ಮತ್ತು  ಮತ್ತೊಬ್ಬ ವಟುವಿಗೆ ಪೂಜೆ ಮಾಡಿ ಆರತಿ ಎತ್ತಿ ಎಲೆ ಬಡಿಸಿ ಊಟ ಬಡಿಸಿ ಮನೆಯವರೆಲ್ಲಾ ನಮ್ಮಿಬ್ಬರಿಗೂ ನಮಸ್ಕಾರ ಮಾಡಿ ನಮಗೆ ಊಟ ಮಾಡಲು ಹೇಳಿದರು. ಸಾಮಾನ್ಯವಾಗಿ ವಟುಗಳ ಊಟ ಮುಗಿದು ನಮಗೆ ಫಲ ತಾಂಬೂಲ ದಕ್ಷಿಣೆ ಎಲ್ಲಾ ಕೊಟ್ಟ ಮೇಲೆಯೇ ಉಳಿದವರೆಲ್ಲಾ ಊಟ ಮಾಡುತ್ತಿದ್ದದ್ದು ಸಂಪ್ರದಾಯ.  ಆದರೆ ಆಗಾಗಲೇ ಸಮಯ ಮೂರರ ಸಮೀಪವಾಗಿದ್ದ ಕಾರಣ ಎಲ್ಲರೂ ನಮ್ಮೊಟ್ಟಿಗೇ ಊಟಕ್ಕೆ ಕುಳಿತೇ ಬಿಟ್ಟರು. ಸಾಮಾನ್ಯವಾಗಿ ಅವರ ಮನೆಯಲ್ಲಿ ಎಲ್ಲರೂ ಊಟ ಮಾಡುವಾಗ ನಗು ನಗುತ್ತಾ ಬಾಯ್ತುಂಬಾ ಮಾತನಾಡುತ್ತಾ  ಊಟ ಮಾಡುತ್ತಿದ್ದವರು ಅಂದು ಎಲ್ಲವೂ ಗಪ್ ಚುಪ್. ಬರೀ ಕೈ ಬಾಯಿಗೆ ಮಾತ್ರ ಕೆಲಸ. ಸರಿ ನಾನು ಕೂಡಾ ಒಲ್ಲದ ಮನಸ್ಸಿನಿಂದಲೇ ಬಡಿಸಿದ್ದ ಎಲ್ಲವನ್ನೂ  ಗಬ ಗಮ ಎಂದು  ತಿಂದು ಯಾವುದೇ ರುಚಿ ಗಿಚಿಯ ಪರಿವೇ ಇಲ್ಲದೇ ತಿಂಡೆದ್ದಿದ್ದೆ.  ಊಟ ಮಾಡಿ ಕೈ ತೊಳೆದುಕೊಂಡು ಫಲ ತಾಂಬೂಲ ದಕ್ಷಿಣೆ  ತೆಗೆದುಕೊಂಡು ಯಾರನ್ನೂ ಮಾತನಾಡಿಸದೇ, ಬರ್ತಿನೋ ಹರಿ ಎಂದು ಅವನತ್ತ ತಿರಿಗಿಯೂ ನೋಡದೆ ಕಾಲ್ಕಿತ್ತಿದ್ದೆ. ಮಂದಿನ ಒಂದು ವಾರ ಹರೀ ನಮ್ಮ ಮನೆಯ ಕಡೆ ಸುಳಿಯಲೇ ಇಲ್ಲ. ನಾನೂ ಕೂಡಾ ಅವನಿಗೆ ನನ್ನ ಮೇಲಿನ ಕೋಪ ಇಳಿದ ಮೇಲೆ ಹೊದರಾಯ್ತು ಎಂದು ಸುಮ್ಮನಿದ್ದೆ. ಮತ್ತೆ ಮುಂದಿನ ಭಾನುವಾರ ಬೆಳಿಗ್ಗೆ ಹರಿ ಮನೆಗೆ ಬ್ಯಾಟ್ ಬಾಲ್ ಹಿಡಿದುಕೊಂಡು ಬಂದೇ ಬಿಟ್ಟ, ನಾನು ಕೂಡಾ ವಿಕೆಟ್ಗಳನ್ನ ಹಿಡಿದು ಕೊಂಡು ಕ್ರಿಕೆಟ್ ಆಡಲು ಹೊರಟೆ ಬಿಟ್ಟ. ಗಂಡ ಹೆಂಡತಿಯರ ಜಗಳ ಊಂಡು ಮಲಗುವ ತನಕವಾದರೆ, ನನ್ನ, ಹರಿ ಕೋಪ ಮುಂದಿನ ಕ್ರಿಕೆಟ್ ಮ್ಯಾಜ್ ವರೆಗೆ  ಎನ್ನುವಂತಾಗಿತ್ತು.

ಆದೇ ಕಡೆ . ಮುಂದೆದೂ ಹರಿ ಮನೆಯವರು ನನ್ನನ್ನು ಸುಭ್ರಹ್ಮಣ್ಯ ಷಷ್ಠಿಗೆ ಬ್ರಹ್ಮಚಾರಿಯಾಗಿ ಬರಲು ಹೇಳಲೇ ಇಲ್ಲಾ, ನಾನೂ ಕೂಡಾ ಇನ್ನಾವುದೇ ಮನೆಗೂ ಬ್ರಹ್ಮಚಾರಿಯಾಗಿ ಹೋಗಲು ಮನಸೇ ಮಾಡಲಿಲ್ಲ. ಅದಕ್ಕೇ ಹೇಳೋದು ಹರ್ಷದ ಕೂಳಿಗೆ ಆಸೆ ಪಟ್ಟು,  ವರ್ಷದ ಕೂಳನ್ನು  ಕಳೆದು ಕೊಳ್ಳವಾರದು ಎಂದು

ಏನಂತೀರೀ?

Author: ಶ್ರೀಕಂಠ ಬಾಳಗಂಚಿ

ಶ್ರೀಕಂಠ ಬಾಳಗಂಚಿ ಎಂಬ ನಾಮದೇಯನಾದ ನಾನು, ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕ್ಕಿನ ಬಾಳಗಂಚಿ ಗ್ರಾಮದ ಖ್ಯಾತ ವಾಗ್ಗೇಯಕಾರರೂ, ಗಮಕಿಗಳು ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಗಮಕಿ ದಿ. ಶ್ರೀ ನಂಜುಂಡಯ್ಯನವರ ಮೊಮ್ಮಗ ಮತ್ತು ಗಮಕಿ ದಿ. ಶ್ರೀ ಶಿವಮೂರ್ತಿಗಳ ಸುಪುತ್ರ. ಪ್ರಸ್ತುತ ಬೆಂಗಳೂರಿನ ವಿಶ್ವವಿಖ್ಯಾತ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ ಹವ್ಯಾಸಿ ಬರಹಗಾರ. ಕ್ರೀಡೆ, ಸಾಮಾಜಿಕ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಲೇಖನ ಬರೆದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸಿದ್ದೇನೆ. ಕನ್ನಡ ನಾಡು, ಭಾಷೆ, ನುಡಿಗಳ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೇಮ ಇರುವವ. ಜಿ.ಪಿ.ರಾಜರತ್ನಂರವರ ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯ್ ಒಲ್ಸಾಕಿದ್ರೂನೂ ಮೂಗ್ನಲ್ ಕನ್ನಡ್ ಪದ್ವಾಡ್ತೀನಿ ಅಂತಾ ಹೇಳಿರುವುದನ್ನು ಅಕ್ಷರಶಃ ಪಾಲಿಸುತ್ತಿರುವವನು.

One thought on “ಸುಭ್ರಹ್ಮಣ್ಯ ಷಷ್ಠಿ ಅವಾಂತರ”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s