ವಿವೇಕಾನಂದ ಓಟ

ಸೆಪ್ಟೆಂಬರ್ 11, 1893 ಚಿಕಾಗೋ ವಿಶ್ವಧರ್ಮ ಸಮ್ಮೇಳನದಲ್ಲಿ ಅಮೇರಿಕಾದ ಸಹೋದರ ಸಹೋದರಿಯರೇ ಎಂದು ಆರಂಭಿಸಿ ಅತ್ಯಂತ ಚಿಕ್ಕದಾಗಿ, ಚೊಕ್ಕವಾಗಿ ಇಡೀ ವಿಶ್ವಕ್ಕೇ ಭಾರತ ದೇಶ ಮತ್ತು ಹಿಂದೂ ಧರ್ಮದ ಬಗ್ಗೆ ಇದ್ದ ಅಪ ನಂಬಿಕೆಯನ್ನು ಹೋಗಲಾಡಿಸಿ ಜಗತ್ತಿಗೇ ಭಾರತ ದೇಶದ ಮತ್ತು ಹಿಂದೂ ಧರ್ಮದ ಹಿರಿಮೆಯನ್ನು ಎತ್ತಿ ಹಿಡಿದ ಸ್ವಾಮೀ ವಿವೇಕಾನಂದರು ಭಾಷಣ ಮಾಡಿದ 125 ವರ್ಷದ ಅಂಗವಾಗಿ ಯುವ ಬ್ರಿಗೇಡ್ ನೇತೃತ್ವದಲ್ಲಿ, BNMIT ಮತ್ತು ಅಧಮ್ಯ ಚೇತನದ ಸಹಯೋಗದೊಂದಿಗೆ ಇಂದು ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಮೈದಾದನದಲ್ಲಿ ಬೃಹತ್ ಓಟವನ್ನು ಏರ್ಪಡಿಸಲಾಗಿತ್ತು.

ಒಂದು ಕಾರ್ಯಕ್ರಮ ಸುಸೂತ್ರವಾಗಿ ನಡೆಯಬೇಕಾದರೆ ಉತ್ತಮವಾದ ಯೋಜನೆ, ಸರಿಯಾದ ಆರ್ಥಿಕ ಸಂಪನ್ಮೂಲ, ಪರಿಣಾಮಕಾರಿ ಪ್ರಚಾರ ಮತ್ತು ಎಲ್ಲದಕ್ಕಿಂತಲೂ ಮಿಗಿಲಾಗಿ ನಿಷ್ಟಾವಂತ ಕಾರ್ಯಕರ್ತರ ಪಡೆ ಇರಬೇಕು. ಇವೆಲ್ಲದರ ಅಚ್ಚುಕಟ್ಟಿನ ಸಮ್ಮಿಳನವೇ ಇಂದಿನ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು. ಸರಿಯಾದ ಪ್ರಚಾರ ನಡೆಸಿ ಮುಂಚಿತವಾಗಿ ನೊಂದಾವಣೆ ಮಾಡಿಕೊಂಡಿದ್ದವರೆಲ್ಲರಿಗೂ ಸುಂದರವಾದ ಹಸಿರು ಬಣ್ಣದ ವಿವೇಕಾನಂದರ ಭಾವಚಿತ್ರವನ್ನೊಳಗೊಂಡ ಟೀ-ಶರ್ಟನ್ನು ಉಚಿತವಾಗಿ ಎಲ್ಲೂ ಗೊಂದಲವಾಗದಂತೆ ಇಂಗ್ಲೀಷ್ ವರ್ಣಮಾಲೆಯ ಅನುಸಾರವಾಗಿ ವಿತರಿಸುವುದರ ಮೂಲಕ ಆರಂಭವಾದ ಕಾರ್ಯಕ್ರಮ ಚಂದ್ರಶೇಖರ ಜಾಗೀರ್ದಾರ್ ಅವರ ಅತ್ಯಂತ ಸರಳವಾಗಿ ಕಂಡರೂ ಅತ್ಯಂತ ಪರಿಣಾಮಕಾರಿಯಾದಂತ ದೇಹವನ್ನು ಸಡಿಲಗೊಳಿಸುವ ವ್ಯಾಯಾಮದ ಮೂಲಕ ಅಧಿಕೃತವಾಗಿ ಆರಂಭಗೊಂಡಿತು. ನೆರೆದಿದ್ದ ಸಹಸ್ರಾರು ದೇಶಭಕ್ತ ತರುಣರ ಬೋಲೋ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಶ್ರೀ ಸ್ವಾಮೀ ವಿವೇಕಾನಂದ ಮಹರಾಜ್ ಕೀ ಜೈ ಎನ್ನುವ ಒಕ್ಕೊರಲಿನ ಕೂಗು ಮುಗಿಲು ಮುಟ್ಟುವಂತಿತ್ತು. ಅಷ್ಟು ಹೊತ್ತಿಗೆ ವೇದಿಕೆಯ ಮೇಲೆ ಹಲವಾರು ಸಾಧು ಸಂತರು, ಬಹುತೇಕ ಎಲ್ಲಾ ರಾಜಕೀಯ ಪಕ್ಷದ ಧುರೀಣರು, ಸ್ಥಳೀಯ ನಗರ ಸಬಾ ಸದಸ್ಯರು ಮತ್ತು ಶಾಸಕರನ್ನು ಕಾರ್ಯಕ್ರಮದ ರೂವಾರಿ ಶ್ರೀ ಚಕ್ರವರ್ತಿ ಸೂಲಿಬೆಲೆ ಸ್ವಾಗತ ಕೋರಿ ಅವರ ಜೊತೆಗೆ ರಾಜ್ಯ , ರಾಷ್ತ್ರೀಯ, ಅಂತರಾಷ್ಟ್ರೀಯ ಕ್ರೀಡಾ ಪಟುಗಳನ್ನೂ ವೇದಿಕೆಯ ಮೇಲೆ ಕರೆತಂದು ಅವರನ್ನೂ ನೆರೆದಿದ್ದವರೆಲ್ಲರಿಗೂ ಪರಿಚಯಿಸಿದ್ದು ಅತ್ಯಂತ ಶ್ಲಾಘನೀಯವಾಗಿತ್ತು.

ಕಾರ್ಯಕ್ರಮದ ಆಯೋಜಿಸಿದ ಮೂಲ ಉದ್ದೇಶ, ಕಾರ್ಯಾಕ್ರಮದ ಚಿನ್ಹೆಯ ಮತ್ತು ಎಲ್ಲರಿಗೂ ಉಚಿತವಾಗಿ ವಿತರಿಸಿದ್ದ ಹಸಿರು ಬಣ್ಣದ ಟೀ-ಶರ್ಟ್ ಮಹತ್ವವನ್ನು ಚುಟುಕಾಗಿ (ಭಾಷಣದ ಪೂರ್ಣ ವಿವರ ಈ ಲೇಖನದ ಜೊತೆ ಇರುವ ವಿಡೀಯೋದಲ್ಲಿ ಲಭ್ಯವಿದೆ) ವಿವರಿಸಿದ ಚಕ್ರವರ್ತಿಯವರು, ಕಾರ್ಯಕ್ರಮದ ಪ್ರಮುಖ ಆಯೋಜಕರಲ್ಲೊಬ್ಬರಾಗಿದ್ದ BNMIT ಮುಖ್ಯಸ್ಧರ ಚುಟುಕ ಭಾಷಣದ ನಂತರ ಬೇಲಿ ಮಠದ ಶ್ರೀಗಳ ಇವನಾರವ, ಇವನಾರವ ಇವ ನಮ್ಮವ, ಇವ ನಮ್ಮವ ಎಂಬ ಪ್ರಖ್ಯಾತ ವಚನದೊಂದಿಗೆ ಆರಂಭಗೊಂಡು ನೆರೆದಿದ್ದ ಎಲ್ಲ ತರುಣ ತರುಣಿಯರಿಗೂ ಆಶೀರ್ವಚನದ ಮೂಲಕ ಅಂತ್ಯಗೊಂಡು, ನೆರೆದಿದ್ದ ಎಲ್ಲಾ ಸ್ವಾಮೀಜೀಗಳ ಪುಷ್ಪಾರ್ಚನೆಯಿಂದ ಅಧಿಕೃತವಾಗಿ ಓಟಕ್ಕೆ ಚಾಲನೆ ನೀಡಲಾಯಿತು.

ನ್ಯಾಶನಲ್ ಕಾಲೇಜ್ ಮೈದಾನದ ಮುಂಬಾಗಿಲಿನಿಂದ ಆರಂಭವಾಗಿ, ಕಾಲೇಜು ಮುಂಬಾಗದಿಂದ ಬಲಕ್ಕೆ ತಿರುಗಿ, ರಾಮಕೃಷ್ಣ ಆಶ್ರಮದ ಬಳಿ ಸ್ಥಾಪಿಸಿರುವ ಸ್ವಾಮೀ ವೀವೇಕಾನಂದರ ಪುತ್ಥಳಿಯನ್ನು ಪ್ರದಕ್ಷಿಣೆ ಮಾಡಿಕೊಂಡು ರಾಮಕೃಷ್ಣ ಆಶ್ರಮದ ಮುಖ್ಯದ್ವಾರವನ್ನು ಪ್ರವೇಶಿಸಿ, ಹಿಂತಿರುಗಿ , ಉಮಾ ಚಿತ್ರ ಮಂದಿರದ ವರೆಗೂ ಬಂದು ಅಲ್ಲಿಂದ ಬಲಕ್ಕೆ ಮಕ್ಕಳ ಕೂಟದ ವರೆಗೂ ಸಾಗಿ, ಬೆಂಗಳೂರು ಇನಿಸ್ಟಿಟ್ಯೂಟ್ ಆಫ್ ಟಕ್ನಾಲಜಿಯ ಮುಂಭಾಗದಿಂದ ಮೆಟ್ರೋ ನಿಲ್ಡಾಣದ ವರೆಗೂ ಬಂದು ಅಲ್ಲಿಂದ ಬಲಕ್ಕೆ ತಿರುಗಿ ಪುನಃ ನ್ಯಾಶನಲ್ ಕಾಲೇಜ್ ಮೈದಾನದ ತಲುಪುವವರೆಗೂ ಅಚ್ಚುಕಟ್ಟಾಗಿತ್ತು.

ಓಟದ ಮಾರ್ಗದ ಮಧ್ಯೆ ಯುವಾ ಬ್ರಿಗೇಡ್ ಸ್ವಯಂಸೇವಕರು ಮಾರ್ಗದರ್ಶಿಗಳಾಗಿದ್ದು , ಓಟಕ್ಕೆ ಅಡ್ಡಿಯಾಗದಂತೆ ವಾಹನಗಳನ್ನು ತಡೆಹಿಡಿದು ಮಾರ್ಗದ ಮಧ್ಯದಲ್ಲಿ ಅಲ್ಲಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದದ್ದು ಗಮನಾರ್ಹವಾಗಿತ್ತು. ನ್ಯಾಶನಲ್ ಕಾಲೇಜ್ ನಿಂದ ರಾಮಾಕೃಷ್ಣ ಆಶ್ರಮದ ವರೆಗೆ ಮತ್ತು ಅಲ್ಲಿಂದ ಉಮಾ ಚಿತ್ರಮಂದಿರದ ವರೆಗೆ ಅಲ್ಲಿಂದ ಮಕ್ಕಳ ಕೂಟದವರೆಗೂ ಗುಂಪು ಗುಂಪಾಗಿ ಶಿಸ್ತಿನಿಂದ ಓಡುತ್ತಿದ್ದ ಹಸಿರು ಬಣ್ಣದ ದೇಶ ಭಕ್ತ ತರುಣ ತರುಣಿಯರೂ, ಆ ಬಾಲ ವೃಧ್ಧರೂ ಮತ್ತು ಕೆಲವು ವಿಕಲಾಂಗ ಚೇತನರನ್ನು ನೋಡುವುದಕ್ಕೇ ರಮಣೀಯವಾಗಿತ್ತು. ದಾರಿಯುದ್ದಕ್ಕೂ ನೆರೆದಿದ್ದ ಅಪಾರ ಸಂಖ್ಯೆಯ ಸಾರ್ವಜನಿಗಕರ ಭಾರತ್ ಮಾತಾಕೀ ಜೈ, ವಂದೇ ಮಾತರಂ ಫೋಷಣೆಗಳು ಓಟಗಾರರ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.

ಓಟ ಮುಗಿಸಿ ಸುಸ್ತಾಗಿ ಮೈದಾನಕ್ಕೆ ಮರಳಿದವರಿಗೆಲ್ಲರಿಗೂ ಬಿಸಿ ಬಿಸಿಯಾದ ಸಿಹಿ ಮತ್ತು ಖಾರ ಹುಗ್ಗಿಯ ಉಪಹಾರದ ಅಚ್ಚುಕಟ್ಟಾದ ವಿತರಣೆ ನಿಜಕ್ಕೂ ಮೆಚ್ಚತ್ತಕ್ಕಂತಹದ್ದು. ಇಡೀ ಕಾರ್ಯಕ್ರಮವನ್ನು ಪ್ಲಾಸ್ಟಿಕ್ ಮುಕ್ತವಾಗಿಸಿ, ಸ್ಟೀಲ್ ತಟ್ಟೆ, ಚಮಚ ಹಾಗೂ ಲೋಟಗಳು ನಮ್ಮನ್ನು ಹತ್ತು ಹದಿನೈದು ವರ್ಷಗಳ ಹಿಂದಿನ ನೆನಪಿನಂಗಳಕ್ಕೆ ಜಾರಿಸಿತು ಎಂದರೆ ಅತಿಶಯೋಕ್ತಿ ಎನಿಸಲಾರದು. ಮೈದಾನದಲ್ಲಿ ದೇಶಿ ಬಟ್ಟೆಯಿಂದ ತಯಾರಾದ ಚೀಲಗಳು, ದೇಶ ಭಕ್ತರ ಚಿತ್ರಗಳಿದ್ದ ಬಣ್ಣ ಬಣ್ಣದ ಅಂಗಿಗಳು, ದೇಶ ಭಕ್ತರ ಹಾಗೂ ನಮ್ಮ ಧರ್ಮಕ್ಕೆ ಸಂಬಂಧದ ಪುಸ್ತಕದ ಪ್ರದರ್ಶನ ಮತ್ತು ಮಾರಾಟ ನೆರೆದಿದ್ದ ಎಲ್ಲರ ಮೆಚ್ಚುಗೆ ಗಳಿಸಿತು. ವಿವೇಕಾಂದರ ಚಿಕಾಗೂ ಭಾಷಣದ ಪ್ರತಿಗಳನ್ನು ಬಂದಿದ್ದ ಎಲ್ಲರಿಗೂ ಕೊಡುವ ಮೂಲಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು. ಕಾರ್ಯಕ್ರಮ ಮುಗಿದ ಅರ್ಧ ಗಂಟೆಯೊಳಗೇ ಅಲ್ಲೋಂದು ಬೃಹತ್ ಕಾರ್ಯಕ್ರಮ ನಡೆದಿತ್ತು ಎನ್ನುವ ಕುರುಹೂ ಇರದಂತೆ ಸ್ವಚ್ಛಗೊಳಿಸಿ ಪ್ರಧಾನ ಮಂತ್ರಿಗಳ ಸ್ವಚ್ಛಭಾರತದ ಕಲ್ಪನೆಯನ್ನು ನಿಜಕ್ಕೂ ಸಾಕಾರಗೊಳಿಸಿದ ಎಲ್ಲಾ ಸ್ವಯಂಸೇವಕರ ನಿಸ್ವಾರ್ಥ ಸೇವೆ ಮೆಚ್ಚು ಬೇಕಾದ ವಿಷಯ.

ಅಂದು ಸ್ವಾಮಿ ವಿವೇಕಾನಂದರು ನನಗೆ ಉಕ್ಕಿನಂತಹ ತೋಳಿರುವ ಸಾವಿರ ತರುಣರನ್ನು ನನಗೆ ಕೊಡಿ ನಾನು ಸ್ವಾತಂತ್ರ್ಯವನ್ನು ನಿಮಗೆ ತಂದು ಕೊಡುತ್ತೇನೆ ಎಂದು ಹೇಳಿದ್ದರು. ಇಂದು ಸಾವಿರವೇಕೇ ಕೊಟ್ಯಾಂತರ ತರುಣ ತರುಣಿಯರು ನರೇಂದ್ರರ ಕನಸನ್ನು ಸಾಕಾರಗೊಳಿಸಲು ಕಟಿಬದ್ದರಾಗಿದ್ದೇವೆ ಎಂದು ತೋರಿಸುವ ಸಣ್ಣ ಝಲಕ್ ನಂತೆ ಇತ್ತು ಇಂದಿನ ಕಾರ್ಯಕ್ರಮ. ಯಾವುದೇ ಎಡರು ತೊಡರುಗಳು ಬಂದರೂ ಅದನ್ನೆಲ್ಲಾ ಬದಿಗೊತ್ತಿ ಒಗ್ಗಟ್ಟಿನಿಂದ ನರೇಂದ್ರರ ಕನಸಿನ ಭಾರತವನ್ನು ಕಟ್ಟಲು ನಾನು ಸಿದ್ಢ.

ನೀವೇನಂತೀರೀ?

ನಿಮ್ಮವನೇ ಉಮಾಸುತ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s