ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಳ್ಳದಿರೋಣ

ಅದೊಂದು ರಾಜ್ಯ. ಅಲ್ಲಿಯ ರಾಜ ಅತ್ಯಂತ ಪ್ರಜಾಸ್ನೇಹಿ. ಆ ರಾಜನ ಆಳ್ವಿಕೆಯಲ್ಲಿ ಪ್ರಜೆಗಳೆಲ್ಲಾ ಸುಭಿಕ್ಷದಿಂದಿದ್ದರು. ಅದೊಂದು ಹಾಗೇ ತನ್ನ ಮಂತ್ರಿಯೊಂದಿಗೆ ಸಾಧಾರಣವಾಗಿ ಮಾತನಾಡುತ್ತಾ, ನನ್ನ ರಾಜ್ಯದ ಪ್ರಜೆಗಳೆಲ್ಲಾ ನನ್ನ ಆಳ್ವಿಕೆಯಿಂದ ಸುಖಃವಾಗಿದ್ದಾರೆ. ಅವರಿಗೆ ನನ್ನ ಮೇಲೆ ಅಪಾರ ಆಭಿಮಾನವಿದೆ ಮತ್ತು ನನ್ನ ಸಹಾಯಕ್ಕೆ ಬರಲು ಸದಾ ಸಿದ್ಧರಿರುತ್ತಾರೆ ಮತ್ತು ನಾನು ಹೇಳಿದ್ದನ್ನು ಶಿರಸಾ ವಹಿಸಿ ಪಾಲಿಸುತ್ತಾರೆ ಅಲ್ಲವೇ ಎಂದು ಹೇಳಿದನು. ಅದಕ್ಕೊಪ್ಪದ ಮಂತ್ರಿ ರಾಜಾ, ನಿಮ್ಮ ಮೊದಲ ಎರಡು ವಾಕ್ಯಗಳು ನಿಜ. ಅದನ್ನು ನಾನೂ ಒಪ್ಪುತ್ತೇನೆ. ಆದರೆ ಕಡೆಯ ಎರಡು ವಾಕ್ಯಗಳ ಬಗ್ಗೆ ನನಗೆ ಸಮ್ಮತವಿಲ್ಲ ಎಂದು ಕಡ್ಡಿ ಮುರಿದಹಾಗೆ ಹೇಳಿದ. ಮಂತ್ರಿಯ ಈ ಮಾತಿನಿಂದ ಅಸಂತೃಷ್ಟನಾದ ರಾಜ, ಅದು ಹೇಗೆ ಹೇಳುತ್ತೀಯೇ? ನಿನಗೆ ಒಂದು ವಾರ ಸಮಯ ಕೊಡುತ್ತೇನೆ ಅಷ್ಟರೊಳಗೆ ನೀನು ಹೇಳಿದ್ದನ್ನು ಆಧಾರ ಸಮೇತವಾಗಿ ತೋರಿಸಬೇಕು ಎಂದು ಆಜ್ಞಾಪಿಸಿದನು. ರಾಜನ ಆಜ್ಞೆಯನ್ನು ಮೀರುವುದುಂಟೇ ಅದಕ್ಕಾಗಿ ಮಂತ್ರಿ ಅರಮನೆಯ ಮುಂದೆ ಒಂದು ದೊದ್ಡ ತೊಟ್ಟಿಯನ್ನು ಕಟ್ಟಿಸಿ, ಅದನ್ನು ನಾಲ್ಕೂ ಕಡೆ ಮರೆಮಾಡಿ, ಅದರಲ್ಲಿ ಒಂದು ಸಣ್ಣ ರಂಧ್ರವನ್ನು ಮಾಡಿಸಿ, ಪ್ರಜೆಗಳ ಕ್ಷೇಮ ಮತ್ತು ಲೋಕಕಲ್ಯಾಣಕ್ಕಾಗಿ ಮಹಾರಾಜರು ನಾಡ ದೇವತೆಗೆ ಹಾಲಿನ ಆಭಿಷೇಕ ಮಾಡುತ್ತಿರುವ ಕಾರಣ ರಾಜ್ಯದ ಪ್ರತಿಯೊಂದು ಮನೆಯಿಂದಲೂ ಒಂದು ಚೊಂಬು ಹಾಲನ್ನು ನಾಳೆ ಬೆಳಿಗ್ಗೆ ತಂದು ಆ ತೊಟ್ಟಿಯಲ್ಲಿ ಹಾಗಬೇಕೆಂದು ಡಂಗೂರ ಹೊಡೆಸಲಾಯಿತು. ಮಂತ್ರಿಯ ಜೊತೆ ವ್ಯವಸ್ಥೆಗಳನ್ನು ನೋಡಲು ಮಾರು ವೇಷದಲ್ಲಿ ಬಂದ ರಾಜ, ಆ ತೊಟ್ಟಿಯನ್ನು ನೋಡಿ, ಅರೇ ಇದು ತುಂಬಾ ಸಣ್ಣದಾಯಿತು. ಪ್ರತೀ ಮನೆಯಿಂದ ಒಂದಂದು ಚೊಂಬು ಹಾಲನ್ನು ತಂದು ಹಾಕಿದಲ್ಲಿ ಈ ತೊಟ್ಟಿ ತುಂಬಿ ಹರಿಯುವುದು ಎಂದಾಗ, ವ್ಯಂಗವಾಗಿ ನಕ್ಕ ಮಂತ್ರಿ, ಮಹಾರಾಜರೇ ಈಗಿರುವ ವ್ಯವಸ್ಥೆ ಸರಿಯಾಗಿದೆ. ನಿಮ್ಮ ಮಾತಿನಂತೆ ಹೆಚ್ಚಿನ ಜನ ಬಂದಲ್ಲಿ ಅದ್ದಕೆ ಸೂಕ್ತ ರೀತಿಯ ವ್ಯವಸ್ಥೆ ಮಾಡಿದ್ದೇವೆ. ನಾಳೆ ಮಧ್ಯಾಹ್ನ ಫಲಿತಾಂಶದ ವರೆಗೂ ನೀವು ನಿಶ್ವಿಂತೆಯಿಂದಿರಿ ಎಂದನು.

ರಾಜಾಜ್ಞೆಯಂತೆ ಬಹಳಷ್ಟು ಮಂದಿ ಆರಂಭದಲ್ಲಿ ಸರದಿಯಲ್ಲಿ ನಿಂತು ಹಾಲನ್ನು ಹಾಕುತ್ತಿರುವುದನ್ನು ಅರಮನೆಯಂದಲೇ ನೋಡಿದ ರಾಜ ಬಹಳ ಸಂತೃಷ್ಟನಾಗಿ ಮಂತ್ರಿಗಳು ಹೇಳಿದಂತೆ ನಮ್ಮ ಜನರು ಅಪ್ರಾಮಾಣಿಕರಲ್ಲ. ನನ್ನ ಬಗ್ಗೆ ಮತ್ತು ನನ್ನ ಮಾತಿನ ಬಗ್ಗೆ ಅವರಿಗೆ ಆಭಿಮಾನವಿದೆ ಎಂದು ಮನಸ್ಸಿನಲ್ಲೇ ಅಂದುಕೊಂಡ. ಸ್ವಲ್ಪ ಸಮಯ ಕಳೆಯುತ್ತಿದ್ದಂತೆಯೇ ಜನರ ಸಾಲು ವಿರಳವಾಗ ತೊಡಗಿತು. ಗಂಟೆ ಹತ್ತಾದೊಡನೇ ಒಬ್ಬ ನರಪಿಳ್ಳೆಯೂ ಅತ್ತ ಸುಳಿಯಲಿಲ್ಲ. ಮಧ್ಯಾಹ್ನ ಹನ್ನೆರಡು ಗಂಟೆಗೆ ಸರಿಯಾಗಿ ಹಾಲಿನ ತೊಟ್ಟಿಯ ಮುಚ್ಚಳವನ್ನು ತೆರೆದು ನೋಡಿದಲ್ಲಿ ತೊಟ್ಟಿಯ ಅರ್ಧಭಾಗವೂ ತುಂಬಿರಲಿಲ್ಲ. ಹಾಗೆ ಅರ್ಧ ಭಾಗ ತುಂಬಿದ್ದ ದ್ರವ ಬೆಳ್ಳಗಿದ್ದರೂ ಅದರಲ್ಲಿ ಶೇ 70ರಷ್ಟು ನೀರಿತ್ತು. ಇದನ್ನು ನೋಡಿ ರಾಜ ಗಾಭರಿಗೊಂಡು ಹೀಗೇಕೆ ಆಯಿತೆಂದು ಮಂತ್ರಿಯನ್ನು ಕೇಳಲು. ರಾಜ, ರಾಜ್ಯದ ಎಲ್ಲಾ ಪ್ರಜೆಗಳು ನಿಮ್ಮನ್ನು ಇಷ್ಟ ಪಡುತ್ತಾರಾದರೂ, ಅವರಿಂದ ಸಹಾಯ ಕೇಳಿದಾಗ ಎಲ್ಲರೂ ಸಹಾಯ ಮಾಡಿತ್ತಿರುವಾಗ ನಾನೊಬ್ಬ ಮಾಡದೇ ಇದ್ದರೆ ರಾಜನಿಗೆ ಏನೂ ಆಗುವುದಿಲ್ಲ ಎಂದೇ ಭಾವಿಸುತ್ತಾರೆ. ಹಾಗಾಗಿ ಕೆಲವೇ ಕೆಲವು ಜನರು ಮಾತ್ರವೇ ಇಲ್ಲಿಗೆ ಬಂದು ಹಾಲನ್ನು ಹಾಕಿದ್ದಾರೆ. ಇನ್ನು ಹಾಗೆ ಹಾಲನ್ನು ಹಾಕಿದವರ ಪೈಕಿ ಹೆಚ್ಚಿನವರು ಹಾಲಿನ ಬದಲಾಗಿ ನೀರನ್ನೇ ತಂದು ಹಾಕಿದ್ದಾರೆ. ಏಕೆಂದರೆ, ಎಲ್ಲರೂ ಹಾಲನ್ನು ಹಾಕುವಾಗ, ನಾನೊಬ್ಬ ನೀರನ್ನು ಹಾಕಿದರೆ ಏನೂ ಆಗುವುದಿಲ್ಲ ಮತ್ತು ಗೊತ್ತಾಗುವುದಿಲ್ಲವೆಂದೇ ಭಾವಿಸುತ್ತಾರೆ. ನೋಡಿ ಹೀಗಿದೆ ನಮ್ಮ ಪ್ರಜೆಗಳ ಪ್ರಾಮಾಣಿಕತೆ ಎಂದು ಪುರಾವೆ ಸಮೇತ ಪ್ರತಿಪಾದಿಸಿದನು.

ನಮ್ಮ ದೇಶದ ಸದ್ಯದ ಪರಿಸ್ಥಿತಿಯೂ ಮೇಲೆ ಓದಿದ ಕಥೆಗಿಂತ ಹೊರತಾಗಿಲ್ಲ. ದೇಶದ ಎಲ್ಲರಿಗೂ ಸಮರ್ಥ ನಾಯಕತ್ವ ಬೇಕು. ಆತ ಪ್ರಮಾಣಿಕನಾಗಿರಬೇಕು. ಭ್ರಷ್ಟಚಾರಗಳಿಂದ ಹೊರತಾಗಿರಬೇಕು. ಪ್ರಜೆಗಳ ಎಲ್ಲಾ ಸಮಸ್ಯೆಗಳನ್ನೂ ಕ್ಷಣ ಮಾತ್ರದಲ್ಲಿಯೇ ಪರಿಹರಿಸ ಬೇಕು. ಎಷ್ಟೋ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮತ್ತು ಯಾರೂ ಮಾಡಲಾಗದ್ದನ್ನೇ ಈತ ಮಾಡಿ ಮುಗಿಸಬೇಕು. ಆದರೆ ಅಂತಹ ಪ್ರಾಮಾಣಿಕ, ದಕ್ಷ, ಸಮರ್ಥ ನಾಯಕನನ್ನು ಆಯ್ಕೆ ಮಾಡುವ ಮತದಾನದ ದಿನ ಮಾತ್ರ ಇಂತಹವರಾರೂ ಮತಗಟ್ಟಗೇ ಬರುವುದೇ ಇಲ್ಲ. ಮತದಾನವನ್ನೇ ಮಾಡುವುದಿಲ್ಲ ಎಲ್ಲರೂ ರಜೆಯ ಮಜ ಮಾಡುತ್ತಿರುತ್ತಾರೆ. ನಂತರ ಇದೇ ಜನ ಅಂತರ್ಜಾಲದಲ್ಲಿ, ಸಭೆ ಸಮಾರಂಭಗಳಲ್ಲಿ ಎಲ್ಲರನ್ನೂ ತೆಗಳುತ್ತಿರುತ್ತಾರೆ. ಇನ್ನು ಮತದಾನ ಮಾಡುವ ಹಲವರು ಯಾರದ್ದೂ ಆಮೀಷಕ್ಕೋ ಇಲ್ಲವೇ ಹಣ ಮತ್ತು ಹೆಂಡಕ್ಕೆ ತಮ್ಮ ಅಮೂಲ್ಯ ಮತವನ್ನು ಮಾರಿ ಕೊಳ್ಳುವ ಮೂಲಕ ಒಬ್ಬ ಅಪ್ರಾಮಾಣಿಕ ಮತ್ತು ಅದಕ್ಷ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ. ಇನ್ನೂ ಕೆಲವರು ಅತೀ ತಾವೇ ಅತೀ ಬುದ್ಧಿವಂತರೆಂದು ಭಾವಿಸಿ, ನಿಂತಿರುವ ಅಭ್ಯರ್ಥಿಗಳಲ್ಲಿ ಯಾರೂ ಸರಿಯಿಲ್ಲ ಎಂದು ತೀರ್ಮಾನಕ್ಕೆ ಬಂದು ಎಡಬಿಡಂಗಿಗಳಂತೆ ನೋಟಾ ( NOTA) ಒತ್ತಿ, ತಾವೇನೂ ಸಾಧಿಸಿದವರಂತೆ ಬೀಗೂತ್ತಾರಾದರೂ ಅಂತಿಮವಾಗಿ ಒಬ್ಬ ಅಪ್ರಾಮಾಣಿಕ ಮತ್ತು ಅದಕ್ಷ ಅಭ್ಯರ್ಥಿಯ ಜಯಕ್ಕೆ ಪರೋಕ್ಷವಾಗಿ ಕಾರಣೀಭೂತರಾಗಿರುತ್ತಾರೆ. ಮೇಲಿನ ಕಥೆಯಲ್ಲಿ ಪ್ರಾಮಾಣಿಕವಾಗಿ ಹಾಲನ್ನು ತಂದು ಹಾಕಿದ ಮಂದಿಯಂತೆ ನಿಜವಾಗಿಯೂ ಆತ್ಮ ಸಾಕ್ಷಿಯಾಗಿ ಮತದಾನ ತಮ್ಮ ಹಕ್ಕು ಎಂಬುವರ ಸಂಖ್ಯೆ ಕೇವಲ ಕೆಲವೇ ಇರುವುದರಿಂದ ಅವರು ಬೆಂಬಲಿಸಿದ ಅಭ್ಯರ್ಥಿ ಅಲ್ಪಮತಗಳಿಸಿ ಸೋಲನ್ನು ಅನುಭವಿಸುತ್ತಾನೆ.

ಹಾಗೆ ಮತಗಳನ್ನು ತನ್ನ ಹಣ ಬಲ ಮತ್ತು ತೋಳ್ಬಲಗಳಿಂದ ಪಡೆದು ಆಯ್ಕೆಯಾದ ಅಭ್ಯರ್ಥಿ ಮುಂದಿನ ಐದು ವರ್ಷಗಳವರೆಗೂ ತಾನು ಖರ್ಚು ಮಾಡಿದಕ್ಕಿಂತ ಸಹಸ್ರ ಪಾಲು ಮೊತ್ತವನ್ನು ಕೊಳ್ಳೆ ಹೊಡೆಯುವುದರಲ್ಲಿಯೇ ಕಾಲ ಕಳೆಯುತ್ತಾನೆ ಹೊರತು ಪ್ರಜೆಗಳ ಸೇವೆ ಮಾಡುವ ಮನಸ್ಸನ್ನೇ ಮಾಡುವುದಿಲ್ಲ. ಇರುವುದಕ್ಕೊಂದು ಸೂರು, ಮನ ಮುಚ್ಚಲು ಬಟ್ಟೆ, ತಿನ್ನಲು ಮೂರು ಹೊತ್ತು ಆಹಾರ ಇವಿಷ್ಟು ಇದ್ದರು ಸಾಕು ಎಂದು ಗೊತ್ತಿದ್ದರೂ ತನ್ನ ಹತ್ತಾರು ತಲೆಮಾರುಗಳು ಕೂತು ತಿಂದರೂ ಕರಗದಂತಹ ಆಸ್ತಿ ಪಾಸ್ತಿಗಳನ್ನು ಮಾಡುವುದರಲ್ಲಿಯೇ ಕಾಲ ಕಳೆಯುತ್ತಾನೆ. ಪ್ರಾಮಾಣಿಕರು ಅವನ ಅಪ್ರಾಮಾಣಿಕತೆಯನ್ನು ಪ್ರಶ್ನಿಸಲು ಹೋದರೆ, ನೀವು ನನಗೆ ಮತವನ್ನು ನೀಡಿಯೇ ಇಲ್ಲ ಹಾಗಾಗಿ ನಿಮಗೇಕೆ ಉತ್ತರಿಸಬೇಕು ಎಂದು ಉದ್ಧಟ ತನ ತೋರಿದರೆ, ಇನ್ನು ಹಣ ತೆಗೆದು ಕೊಂಡು ಮತ ಹಾಕಿ ಗೆಲ್ಲಿಸಿದವರಿಗೆ ಅವನನ್ನು ಪ್ರಶ್ನಿಸುವ ಅಧಿಕಾರವನ್ನೇ ಕಳೆದು ಕೊಂಡಿರುತ್ತಾರೆ. ನೋಟ ಒತ್ತಿರುವ ಮಂದಿಯು ಸದಾ ಇತರನ್ನು ಹಳಿಯುತ್ತಲೇ ಕಾಲ ಕಳೆಯುತ್ತಾರೆ.

ಹಾಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲರೂ ಸಮಯ ಮಾಡಿಕೊಂಡು ಯಾವುದೇ ರೀತಿಯ ಆಮೀಷಗಳಿಗೆ ಒಳಾಗಾಗದೇ ನಿರ್ಭಯವಾಗಿ, ಯಾರು ನಮ್ಮ ದೇಶದ ಘನತೆಯನ್ನು ಕಾಪಾಡಬಲ್ಲರೋ, ಯಾರು ದಕ್ಷರೋ, ಯಾರು ಪ್ರಾಮಾಣಿಕರೋ, ಯಾರು ತಮ್ಮ ಸ್ವಂತ ವಿವೇಚನೆಯಿಂದ ನಿರ್ಧಾರ ತೆಗೆದು ಕೊಳ್ಳಬಲ್ಲರೋ, ಯಾರು ತಮ್ಮ ಸ್ವಹಿತಾಸಕ್ತಿಯ ಹೊರತಾಗಿ, ಕುಟುಂಬ ರಾಜಕೀಯ ಮಾಡದೆ, ದೇಶವನ್ನು ನಮ್ಮ ನೆರೆ ಶತೃ ರಾಷ್ಟ್ರಗಳ ಆಕ್ರಮಣದಿಂದ ಕಾಪಾಡಬಲ್ಲರೋ, ಯಾರು ಜನರೊಂದಿಗೆ ಸುಲಭವಾಗಿ ಬೆರೆತು ಜನರ ಕಷ್ಟವನ್ನು ಅರಿಯಬಲ್ಲರೋ, ಯಾರು ದೆಹಲಿಯ ಹವಾನಿಯಂತ್ರಿತ ಕೊಠಡಿಯಲ್ಲೇ ಕುಳಿತು ಐಶಾರಾಮಿ ಆಡಳಿತ ನಡೆಸದೆ ಜನರ ನಡುವೆ ಇರುತ್ತಾರೋ, ಯಾರೂ ತಮ್ಮ ವರ್ಷದ ಮುನ್ನೂರ ಅರವತ್ತೈದು ದಿನಗಳೂ ಯಾವುದೇ ರಜವನ್ನು ತೆಗೆದುಕೊಳ್ಳದೆ ದುಡಿಯುತ್ತಾರೋ?, ಯಾರು ನಮ್ಮ ರೈತರ ಬೆಳೆಗೆ ಸರಿಯಾದ ಬೆಂಬಲ ಬೆಲೆ ಕೊಡಿಸುತ್ತಾರೋ, ಯಾರು ಸುಖಾ ಸುಮ್ಮನೆ ಸಾಲ ಮನ್ನಾಮಾಡದೇ ದುಡಿತು ತಿನ್ನುವವರಿಗೆ ಪ್ರೋತ್ಸಾಹ ಧನ ನೀಡಿ ಉದ್ದಾರ ಮಾಡುತ್ತಾರೋ, ಯಾರು ಬಡವರ ಪರ ಇರುತ್ತಾರೋ, ಯಾರು ಮಧ್ಯಮವರ್ಗದ ಬವಣೆಯನ್ನು ಅರಿತು ಅವರಿಗೆ ಅನುಕೂಲ ಮಾಡುತ್ತಾರೋ, ಅಂತಹವರನ್ನೇ ಆಯ್ಕೆ ಮಾಡುವ ದೃಡ ಸಂಕಲ್ಪವನ್ನು ಮಾಡಬೇಕಿದೆ. ಕೇವಲ ತಾವೊಬ್ಬರೇ ಈ ಕೆಲಸವನ್ನು ಮಾಡದೆ ತಮ್ಮ ಬಂಧು ಮಿತ್ರರಿಗೂ ಇದನ್ನು ತಿಳಿಸಿ ಅವರಿಂದಲೂ ಕಡ್ಡಾಯವಾಗಿ ಮತವನ್ನು ಮೇಲೆ ತಿಳಿಸಿದ ಹಾಗಿರುವ ಸೂಕ್ತ ಅಭ್ಯರ್ಥಿ ಮತ್ತು ಪಕ್ಷಕ್ಕೇ ಹಾಕುವಂತೆ ತಿಳುವಳಿಕೆ ನೀಡಬೇಕಿದೆ.

ಮುಂದಿನ ತಿಂಗಳು 18 ಮತ್ತು 23ನೇ ತಾರೀಖಿನಂದು ಎರಡು ಹಂತದಲ್ಲಿ ನಮ್ಮ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ನಿಮ್ಮ ಪ್ರದೇಶದಲ್ಲಿ ಚುನಾವಣೆ ನಡೆಯುವ ಆ ಒಂದು ದಿನ ಯಾರೋ ಕೊಡುವ ಹಣ, ಹೆಂಡ ಮತ್ತು ಬಿರ್ಯಾನಿಗೆ ಮನಸೋತಾಗಲೀ, ಆವರ ಇನ್ನಿತರೇ ಆಮೀಷಗಳಿಗಾಗಲೀ, ಮರುಳು ಮಾತಿಗೆ ಮರುಳಾಗಿ, ಅವನು ನಮ್ಮ ಧರ್ಮದವ, ನಮ್ಮ ಜಾತಿಯವ ಎಂದು ನಮ್ಮ ಅಮೂಲ್ಯವಾದ ಮತವನ್ನು ಅವರಿಗೆ ಕೊಟ್ಟಲ್ಲಿ ಮುಂದಿನ ಐದು ವರ್ಷ ನರಕಯಾತನೆಯನ್ನು ಅನುಭವಿಸ ಬೇಕಾಗುತ್ತದೆ. ಹರ್ಷದ ಕೂಳಿಗೆ ವರ್ಷದ ಕೂಳನ್ನು ಕಳೆದುಕೊಂಡಂತಾಗುತ್ತದೆ. ನಮ್ಮ ಒಂದು ಕ್ಷಣದ ತಪ್ಪಿಗೆ ನಾವೊಬ್ಬರೇ ಅಲ್ಲದೇ ಇಡೀ ದೇಶವೇ ಪರಿತಸುವ ಸಂದಿಗ್ಧ ಪರಿಸ್ಥಿತಿ ಬಂದೊದಗುತ್ತದೆ. ನಂತರ ಚಿಂತಿಸಿ ಫಲವಿಲ್ಲದಂತಾಗುತ್ತದೆ.

ಹಾಂ ಮತ್ತೊಂದು ವಿಷಯ ಈಗ ನಡೆಯುತ್ತಿರುವುದು ಲೋಕಸಭಾ ಚುನಾವಣೆ. ನಮ್ಮ ಮನೆಗೆ ಸರಿಯಾಗಿ ನೀರು ಬರುತ್ತಿಲ್ಲ. ನಮ್ಮ ಮನೆಯ ಮುಂದಿನ ರಸ್ತೆ, ಚರಂಡಿ ವಿಷಯವನ್ನು ತೆಗೆಯುವುದಕ್ಕಲ್ಲ. ಅದನ್ನು ಸರಿಪಡಿಸಲು ನಮ್ಮ ಗ್ರಾಮ ಪಂಚಾಯಿತಿಯ ಸದಸ್ಯರೋ, ಪುರಸಭಾ ಸದಸ್ಯರೋ, ನಗರ ಪಾಲಿಕೆ ಸದಸ್ಯರೋ ಇಲ್ಲವೇ ವಿಧಾನ ಸಭಾ ಸದ್ಯಸರೋ ಇರುತ್ತಾರೆ. ಹಾಗಾಗಿ ಇಂತಹ ಕ್ಷುಲ್ಲಕ ಸಮಸ್ಯೆಗಳನ್ನು ಎತ್ತಿ ತೋರಿಸದೆ ದೇಶದ ಸುಭದ್ರತೆ, ಕೃಷಿ, ಆರ್ಥಿಕ ಪರಿಸ್ಥಿತಿಯನ್ನು ನಿಭಾಯಿಸುವವರನ್ನು ಆಯ್ಕೆಮಾಡುತ್ತಿದ್ದೇವೆ ಎಂದು ಗಮನವಿಟ್ಟು ಮತ ಚಲಾಯಿಸಿ. ಯಾರಿಗೋ ಬುದ್ದಿ ಕಲಿಸಲು ಹೋಗಿ ಅಸಮರ್ಥರನ್ನು ಆಯ್ಕೆ ಮಾಡದಿರೋಣ.

ಹಾಗಾಗಿ ಈ ಬಾರಿಯ ಚುನಾವಣೆಯಂದು ಹಿಂದಿನ ಬಾರಿಯಂತೆ ರಜೆಯ ಮೋಜು ಮಸ್ತಿ ಮಾಡದೆ ಅಥವಾ ಮನೆಯಿಂದಲೇ ಹೊರ ಬಾರದೇ ನಮ್ಮ ಅಮೂಲ್ಯ ಮತವನ್ನು ವ್ಯರ್ಥ ಮಾಡದೆ, ಕೆಲಸಕ್ಕೆ ಬಾರದವರಿಗೆ ಅಪಾತ್ರ ಮಾಡದೇ, ಸತ್ಪಾತ್ರರಿಗೆ ಮತದಾನ ಮಾಡಿ ದೇಶಕ್ಕೆ ದಕ್ಷ, ಪ್ರಾಮಾಣಿಕ, ಸಮರ್ಥ ನಾಯಕನನ್ನೇ ಆಯ್ಕೆ ಮಾಡೋಣ. ಭಾರತವನ್ನು ಮತ್ತೊಮ್ಮೆ ವಿಶ್ವಗುರುವನ್ನಾಗಿ ಮಾಡುವ ಘನ ಕಾರ್ಯದಲ್ಲಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s