ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೇ ದೇವತಾ: | ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾಫಲಾ ಕ್ರಿಯಾ | ಅಂದರೆ ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ ಎನ್ನುತ್ತದೆ ನಮ್ಮ ಶಾಸ್ತ್ರಗಳು. ಅಹಲ್ಯ, ದ್ರೌಪತಿ, ಕುಂತಿ, ತಾರ ಮಂಡೋದರಿಯರಂತಹ ಪತಿವ್ರತೆಯರು ಜನ್ಮಿಸಿದ ನಾಡು ನಮ್ಮ ನಾಡು. ಪರ ಪುರುಷರೊಂದಿಗೆ ಸಂಭಾಷಣೆ ಮಾಡುವಾಗ ಸೆರೆಗಿನಿಂದ ಇಡೀ ಮುಖವನ್ನೇ ಮುಚ್ಚಿಕೊಂಡು ತಲೆ ಬಗ್ಗಿಸಿಯೇ ಮಾತನಾಡಿಸುವ ಸಂಸ್ಕೃತಿ ನಮ್ಮದು. ಪತಿಯೇ ತನ್ನ ಮುಂದೆ ನಿಂತಿದ್ದರೂ ಪತಿಯನ್ನು ತಲೆ ಎತ್ತಿನೋಡದೆ ಮಗನ ಅಂತ್ಯಕ್ರಿಯೆಗೆ ಗೋಳಾಡಿದ ಸತ್ಯ ಹರಿಶ್ಚಂದ್ರನ ಪತ್ನಿ ತಾರಮತಿ ಹುಟ್ಟಿದ ನಾಡಿದು. ಅಲ್ಲಾಹುದ್ದೀನ್ ಖಿಲ್ಚಿಯು ಮೋಸದಿಂದ ರಾಜನನ್ನು ಸೋಲಿಸಿ ರಾಣಿ ಪದ್ಮಾವತಿಯನ್ನು ವಶ ಪಡಿಸಿಕೊಳ್ಳಲು ಪ್ರಯತ್ನಿಸಿದಾಗ ಪರ ಪುರುಷನ ಸೆರೆ ಸಿಗಬಾರದೆಂದು ತನ್ನನ್ನೇ ಆತ್ಮಾಹುತಿ ಮಾಡಿಕೊಂಡ ಇತಿಹಾಸವಿರುವ ನಾಡಿದು.
ಆದರೆ ಆಧುನಿಕತೆಯ ಹೆಸರಿನಲ್ಲಿ ಇಂದು ನಮ್ಮ ಹೆಣ್ಣು ಮಕ್ಕಳು ಮಾಡುತ್ತಿರುವುದಾದರೂ ಏನು? ಇಲ್ಲೊಬ್ಬಳು ನಟಿಮಣಿ ತನ್ನ ಆತ್ಮವಿಶ್ವಾಸದ ಮಟ್ಟವನ್ನು ಅಳೆದುಕೊಳ್ಳಲು ತನ್ನ ಅರೆಬೆತ್ತಲು ಭಂಗಿಯ ಭಾವಚಿತ್ರವನ್ನು ಜಗ್ಗಜ್ಜಾಹೀರಾತು ಮಾಡುತ್ತಿರುವುದು ಎಷ್ಟು ಸರಿ? ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿ ಯಾವುದೇ ಯಶಸ್ಸನ್ನು ಕಾಣದೆ ಯಶಸ್ಸಿನ ಹುಡುಗಾಟದಲ್ಲಿ ಬಿಗ್ ಬಾಸ್ ಮನೆಯಲ್ಲೂ ಕೆಲ ಕಾಲ ಕಳೆದು ಅಲ್ಲಿಯೂ ಏನನ್ನೂ ಗಿಟ್ಟಿಸಲಾಗದೆ ಈಗ ಅಗ್ಗದ ಪ್ರಚಾರಕ್ಕೆ ತನ್ನ ಅರೆ ಬೆತ್ತಲೆ ಭಾವಚಿತ್ರಗಳನ್ನು ಪ್ರಚಾರಕ್ಕೆ ಬಿಟ್ಟು ಹದಿಹರೆಯದ ಹುಡುಗರ ಮನಸ್ಸನ್ನು ದಿಕ್ಕು ತಪ್ಪಿಸುವ ಚಾಳಿಯಾದರೂ ಏಕೆ? ಇದರಿಂದ ಕೆಲವು ಅವಕಾಶಗಳನ್ನು ಗಿಟ್ಟಿಸಬಹುದಾದರೂ ಸ್ವಂತ ಪ್ರತಿಭೆ ಇಲ್ಲದಿದ್ದರೆ ಸವಕಲು ನಾಣ್ಯದ ತರಹ ಚಲಾವಣೆಯಿಂದಲೇ ದೂರ ಸರಿಯಬಹುದಲ್ಲವೇ?
ಪಂಡರೀಬಾಯಿ, ಲೀಲಾವತಿ, ಸರೋಜಾದೇವಿ, ಆರತಿ, ಭಾರತಿ, ಕಲ್ಪನ, ಮಂಜುಳ ಮುಂತಾದ ನಾಯಕಿಯರು ಇಂದೂ ಕೂಡಾ ನಮ್ಮ ನೆನಪಿನಂಗಳದಲ್ಲಿರುವುದು ಅವರ ನಟನಾ ಸಾಮರ್ಥ್ಯದಿಂದಾಗಿಯೇ ಹೊರೆತು ಈ ರೀತಿಯ ಅಗ್ಗದ ಬೆತ್ತಲೆ ಪ್ರದರ್ಶನದಿಂದಲ್ಲಾ ಎಂದು ತಿಳಿ ಆಕೆಗೆ ಹೇಳುವರಾರು. ಹದಿ ವಯಸ್ಸಿನಲ್ಲಿ ಅಗ್ಗದ ಪ್ರಚಾರದ ಹುಮ್ಮಸ್ಸಿನಲ್ಲಿ ಈ ರೀತಿಯ ಫೋಟೋ ಶೂಟ್ ಮಾಡಿಸಿ ನಂತರ ಕೆಲವು ವರ್ಷಗಳ ನಂತರ ತಮ್ಮ ಪ್ರಭಾವ ಕುಗ್ಗಿದಾಗ ಮತ್ತೆ ಪ್ರಾಭಲ್ಯಕ್ಕೆ ಬರಲು ಅಂದು ತನ್ನ ಫೋಟೋ ಶೂಟ್ ಮಾಡಿದಾಗ ಛಾಯಗ್ರಾಹಕ ಮತ್ತು ನಿರ್ದೇಶಕ ತನ್ನನ್ನು ಕೆಟ್ಟದಾಗಿ ನೋಡಿದರು ಅಥವಾ ತನ್ನನ್ನು ಬಲಾತ್ಕರಿಸಲು ಪ್ರಯತ್ನಿಸಿದರು ಎಂದು ನಿರ್ದೇಶಕ ಅಥವಾ ಛಾಯಾಗ್ರಾಹಕರ ಮೇಲೆ ದೂರನ್ನು ಹೇಳಲಾರಳು ಎಂದು ಹೇಗೆ ಭಾವಿಸುವುದಾದರೂ ಹೇಗೆ?
ಹೌದು ಇಂದು ಕಾಲ ಬದಲಾಗಿದೆ. ಹೆಣ್ಣು ನಾಲ್ಕು ಗೋಡೆಗಳ ಮಧ್ಯದಲ್ಲಿ ಮುಸುರೆ ತೊಳೆದುಕೊಂಡು ಕುಳಿತುಕೊಳ್ಳದೆ ಪುರುಷರ ಸರಿ ಸಮನಾಗಿ ಎಲ್ಲಾ ಉದ್ದಿಮೆಗಳಲ್ಲಿಯೂ ದುಡಿಯುವ ಕಾಲ ಬಂದಿದೆ. ಹಾಗೆಂದ ಮಾತ್ರಕ್ಕೆ ನಮ್ಮ ಸಂಸ್ಕಾರ ಸಂಪ್ರದಾಯಗಳಿಗೆ ಕೊಳ್ಳಿ ಇಡಬೇಕು ಎಂದೇನಿಲ್ಲ ಅಲ್ಲವೆ? ಹೆಜ್ಜೆ ಹೆಜ್ಜೆಗೂ ಅಂಧ ಪಾಶ್ಚಾತ್ಯ ಅನುಕರಣೆ ಮಾಡುತ್ತಾ , ದೇವರು ದಿಂಡಿರು ಎಲ್ಲವನ್ನೂ ಮರೆತು, ಹೆತ್ತ ತಂದೆ ತಾಯಿಯರಿಗೂ ಮರ್ಯಾದೆ ಕೊಡದೆ ಹೋದ ಗಂಡನ ಮನೆಯಲ್ಲಿಯೂ ಅತ್ತೆ ಮಾವನವರನ್ನು ಸರಿಯಾಗಿ ನೋಡಿಕೊಳ್ಳದೆ, ತಮ್ಮ ಮಕ್ಕಳಿಗೂ ಒಳ್ಳೆಯ ಸಂಸ್ಕಾರವನ್ನು ಕಲಿಸದೆ ಸಾಧಿಸಲು ಹೊರಟಿರುವುದಾದರೂ ಏನು? ಪುರುಷರ ಸರಿ ಸಮನಾಗಿ ಹೋಗುವ ಜಿದ್ದಿನಲ್ಲಿ ಅನಗತ್ಯವಾಗಿ ಸಂಪ್ರದಾಯಿ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದರಿಂದ ಆಗುವ ಲಾಭವಾದರೂ ಏನು?
ಹಾಗೆಂದ ಮಾತ್ರಕ್ಕೆ ನನ್ನನ್ನು ಹೆಣ್ಣಿನ ದ್ವೇಷಿಯೆಂದು ತಿಳಿಯದೆ ನಮ್ಮ ಮನೆಯೆ ಹೆಣ್ಣು ಮಗಳನ್ನು ಈ ರೀತಿಯಾಗಿ ಅರೆ ಬೆತ್ತಲೆಯಾಗಿ ನೋಡಲು ನಮ್ಮ ಮನಸ್ಸು ಒಪ್ಪುತ್ತದೆಯೇ ಎಂದು ಸ್ವಲ್ಪ ಯೋಚಿಸಿ ನೋಡಿ. ಏನೋ ಹುಚ್ಚು ಕೋಡಿ ಮನಸ್ಸಿನ ಹುಡುಗಿಯರು ಹಾದಿ ತಪ್ಪುತ್ತಿದ್ದಾರೆ ಎಂದರೆ ತಿದ್ದಿ ಸರಿದಾರಿಗೆ ತರುವ ಜವಾಬ್ಡಾರಿ ನಮ್ಮದೇ ಅಲ್ಲವೇ? ನಮ್ಮ ನಮ್ಮ ಮನೆಯ ಮಗಳನ್ನು ತಿದ್ದಿ, ತಿಳಿ ಹೇಳಿ ಸಂಸ್ಕಾರವಂತಳಾಗಿ ಮಾಡಿದರೆ ಕೆಲ ಸಮಯದಲ್ಲೇ ಇಡಿ ಸಮಾಜವೇ ಬದಲಾಗ ಬಹುದಲ್ಲವೇ?
ಅದೇ ಕಾಳಜಿಯಿಂದ ಹೃದಯಾಂತರಾಳದಿಂದ ಈ ಬರಹವನ್ನು ಬರೆದಿದ್ದೇನೆ. ಇದಕ್ಕೆ ನಿಮ್ಮ ಸಹಮತಿ ಇದೆಯೆಂದು ಭಾವಿಸುತ್ತೇನೆ.
ಏನಂತೀರೀ?