ದೀಪಾವಳಿ

ದೀಪಾವಳಿ ಹೇಳಿ ಕೇಳಿ ಬೆಳಕಿನ ಹಬ್ಬ ಇಲ್ಲಿ ಮಡಿ ಹುಡಿ ಆಚಾರ ವಿಚಾರಗಳಿಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದರಿಂದ ಮಕ್ಕಳಿಗೂ ದೀಪಾವಳಿ ಎಂದರೆ ಅಚ್ಚು ಮೆಚ್ಚು. ನಮ್ಮ ಮನೆಯಲ್ಲಿಯೂ ನಾವೆಲ್ಲಾ ಸಣ್ಣವರಿದ್ದಾಗ ದೀಪಾವಳಿ ಹಬ್ಬ ಬರುವ ಎರಡು ತಿಂಗಳ ಮುಂಚೆಯೇ ನಮ್ಮ ಮನೆಯಲ್ಲಿ ಸಂಭ್ರಮದ ವಾತಾವರಣ. ಏಕೆಂದರೆ ಆಗ ನಮ್ಮ ಮನೆಯಲ್ಲಿ ಪಟಾಕಿ ಚೀಟಿಯನ್ನು ನಡೆಸುತ್ತಿದ್ದೆವು. ಪ್ರತೀ ತಿಂಗಳು ಕೆಲ ನಿರ್ಧಿಷ್ಟ ಮೊತ್ತದ ಹಣವನ್ನು ಆರು ತಿಂಗಳು ಕಟ್ಟಿದ ನಂತರ ದೀಪಾವಳಿ ಹಬ್ಬಕ್ಕೆ ಕೆಲ ವಾರಗಳ ಮುಂಚೆ ಕಟ್ಟಿದ ಹಣಕ್ಕೆ ಬಂದ ಅಲ್ಪ ಸ್ವಲ್ಪ ಬಡ್ದಿಯನ್ನೂ ಸೇರಿಸಿ ಪಟಾಕಿಯ ಜೊತೆಗೆ ಸಣ್ಣ ಉಡುಗೊರೆಯನ್ನು ನೀಡುವ ಪದ್ದತಿ ಜಾರಿಯಲ್ಲಿತ್ತು. ನಂತರ ಹೆಂಗಳೆಯರ ಒತ್ತಡದಿಂದಾಗಿ ಉಡುಗೊರೆಗೇ ಹೆಚ್ಚಿನ ಪ್ರಾಶಸ್ತ್ಯ ದೊರೆತು ಪಟಾಕಿಯೇ ನಗಣ್ಯವಾದಾಗ ಸಂಭ್ರಮದಿಂದ ಪಟಾಕಿ ಹೊಡೆಯಲು ಸಾಧ್ಯವಾಗದಿದ್ದಾಗ ನಮ್ಮ ಉದ್ದೇಶ ತೀರದ ಕಾರಣ ನಾವು ಪಟಾಕಿ ಚೀಟಿಯನ್ನೇ ನಡೆಸುವುದನ್ನು ಬಿಡಬೇಕಾಯಿತು.

ದೀಪಾವಳಿ ಹಬ್ಬಕ್ಕೆ ಐದಾರು ವಾರಗಳ ಮುಂಚೆಯೇ ಚಿಕ್ಕ ಪೇಟೆಯ ನಿರ್ಧಿಷ್ಟವಾದ ಅಂಗಡಿಗಳಿಗೆ ಹೋಗಿ ಆಗಿನ ಕಾಲಕ್ಕೇ ಸಾವಿರಾರು ರೂಪಾಯಿಗಳ ಪಟಾಕಿಗಳನ್ನೂ ಮತ್ತದರ ಜೊತೆಗೆ ಉಡುಗೊರೆಗಳನ್ನು ಕೊಂಡು ತಂದು ಅದನ್ನೆಲ್ಲಾ ಸರಿ ಸಮನಾಗಿ ವಿಂಗಡಿಸಿ ಚೀಟಿ ಹಾಕಿದ್ದ ಎಲ್ಲರ ಮನೆಗಳಿಗೂ ತಲುಪಿಸಿದರೆ ಏನೋ ಮಹತ್ಕಾರ್ಯ ಸಾಧಿಸಿದ ಅನುಭವ. ಪಟಾಕಿ ಹಂಚುವ ವೇಳೆಗೆ ಸರಿಯಾಗಿ ದಸರಾ ಹಬ್ಬವಿರುತ್ತಿದ್ದ ಕಾರಣ ನಮ್ಮ ಚಿಕ್ಕಮ್ಮನ ಮಕ್ಕಳೂ ನಮ್ಮೊಡನೆ ಸಂಭ್ರಮದಿಂದ ಪಟಾಕಿ ಹಂಚಲು ಜೊತೆಯಾಗುತ್ತಿದ್ದದ್ದು ಇನ್ನೂ ನೆನಪಿನಲ್ಲಿದೆ. ಹಾಗೆ ಎಲ್ಲರಿಗೂ ಪಟಾಕಿ ತರುವ ಜೊತೆಯಲ್ಲಿ ನಮ್ಮ ಮನೆಗೂ ಬಗೆ ಬಗೆಯ ಪಟಾಕಿಗಳನ್ನು ತಂದಿರುತ್ತಿದ್ದೆ.

ನರಕಚತುರ್ದಶಿಯಂದು ನೆರೆ ಹೊರೆಯವರು ಏಳುವ ಮುಂಚೆಯೇ ಎದ್ದು ಎಣ್ಣೆ ಸ್ನಾನ ಮಾಡಿ ಎಲ್ಲರ ಗಮನವನ್ನು ಸೆಳೆಯಲು ಮಬ್ಬು ಕತ್ತಲಿನಲ್ಲಿಯೇ 1000ವಾಲ ಪಟಾಕಿ ಹಚ್ಚಿ ಅದು ಡಂ ಡಂ ಡಮಾರ್ ಎನ್ನುತ್ತಿದ್ದರೆ ಜಗವನ್ನೇ ಗೆದ್ದ ಅನುಭವ. ಅದನ್ನು ಶಬ್ಧಗಳಲ್ಲಿ ವರ್ಣಿಸಲು ಅಸಾಧ್ಯ. ಅನುಭವಿಸಿಯೇ ತೀರಬೇಕು. ನಮ್ಮ ರಸ್ತೆಯಲ್ಲಿ ಎಲ್ಲರಗಿಂತ ಮುಂಚೆಯೇ ನಾನೇ ಪಟಾಕಿ ಹೊಡೆದ ಕಾರಣ ಅಂದು ನಾನೇ ಸ್ವಘೋಷಿತ ಹೀರೋ. ಇಡೀ ದಿನ ಎಲ್ಲರ ಬಳಿ ಅದೇ ಮಾತು. ನಮ್ಮ ತಾಯಿಯವರಿಗೆ ಶಬ್ಧ ಮಾಡುವ ಪಟಾಕಿಗಳು ಹಿಡಿಸದ ಕಾರಣ ಶಾಸ್ತ್ರಕ್ಕೆ ನಮ್ಮಲ್ಲಿ ಡಂ ಡಂ ಎಂದು ಶಬ್ಧ ಮಾಡುವ ಪಟಕಿಗಳನ್ನು ತಂದು ಹೆಚ್ಚಾಗಿ ಸುರ್ ಸುರ್ ಬತ್ತಿ , ಮತಾಪು, ಪೆನ್ಸಿಲ್, ತರ ತರಹದ ಹೂವಿನ ಕುಂಡಗಳು, ವಿಧ ವಿಧ ತರಹದ ಭೂ ಚಕ್ರ ಮತ್ತು ವಿಷ್ಣು ಚಕ್ರ, ಜೊತೆಗೆ ನಾನಾ ರೀತಿಯ ರಾಕೆಟ್ಗಳು, ನೀರಿನಲ್ಲಿ ಹೊಡೆಯುವ ಸಬ್ ಮರೈನ್, ದಾರ ಕಟ್ಟಿ ಬಿಡುವ ಟ್ರೈನ್ ಮತ್ತು ಮನೆಯ ಮುಂದೆ ಹೆಚ್ಚಿನ ಕಾಗದ ಬೀಳವಂತಾಗಲು ದೊಡ್ಡ ಲಕ್ಷ್ಮೀ ಪಟಾಕಿ ಮತ್ತು ವಿಷ್ಣು ಪಟಾಕಿಗಳನ್ನಷ್ಟೇ ತರುತ್ತಿದ್ದೆವು. ಮೊದಲ ದಿನ ಶಾಸ್ತ್ರಕ್ಕೆ ಪಟಾಕಿ ಹೊಡೆದು, ನಂತರ ಎರಡು ದಿನಗಳು ಸ್ನೇಹಿತರ ಮನೆಗಳಿಗೆ ಹೋಗಿ ಅವರ ಜೊತೆ ಅವರ ಪಟಾಕಿಗಳನ್ನೇಲ್ಲಾ ಖಾಲಿ ಮಾಡಿ ಬಲಿ ಪಾಡ್ಯಮಿಯಂದು ಉತ್ತಾನ ದ್ವಾದಸಿ (ತುಳಸೀ) ಹಬ್ಬಕ್ಕೆ ಸ್ವಲ್ಪ ಪಟಾಕಿ ತೆಗೆದಿರಿಸಿ ನನ್ನ ಎಲ್ಲಾ ಸ್ನೇಹಿತರನ್ನೂ ಮನೆಗೆ ಕರೆತಂದು ಕುಟುಂಬ ಮತ್ತು ಸ್ನೇಹಿತರೊಡನೆ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದ ದಿನಗಳು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಕೆಲವು ವರ್ಷಗಳ ನಂತರ ನಾವು ಯಾರೂ ಇಲ್ಲದ ಸಮಯದಲ್ಲಿ ಸಣ್ಣ ವಯಸ್ಸಿನ ನನ್ನ ತಂಗಿಯ ಮಗ, ನಮ್ಮ ತಾಯಿಗೆ ಕಾಣದ ಹಾಗೆ ಮನೆಯೊಳಗಿಂದ ರಾಕೆಟ್ ತಂದು ಬಾಟಿಲಿನೊಳಕ್ಕಿಟ್ಟು ರಾಕೆಟ್ ಹಚ್ಚಿಸಿಯೇ ಬಿಟ್ಟಿದ್ದಾನೆ. ಬಾಟಲಿನಲ್ಲಿ ರಾಕೆಟ್ ಸರಿಯಾಗಿ ಇಟ್ಟಿರದ ಕಾರಣ ರಾಕೆಟ್ ಸೀದಾ ನಮ್ಮ ಮನೆಯ ತೆಂಗಿನ ಮರಕ್ಕೆ ಬಡಿದಿದೆ. ಮರದಲ್ಲೇ ಒಣಗಿದ್ದ ತೆಂಗಿನ ಗರಿಗೆ ಬೆಂಕಿ ತಗುಲಿ ತೆಂಗಿನ ಮರ ಧಗ ಧಗನೆ ಉರಿಯ ತೊಡಗಿದಾಗ ಭಯ ಭೀತನಾಗಿ ಅಜ್ಜೀ ಎಂದು ಕೂಗಿದಾಗಲೇ ನಮ್ಮ ತಾಯಿಯವರಿಗೆ ನನ್ನ ತಂಗಿ ಮಗ ಮಾಡಿದ ಘನಾಂದಾರಿ ಕೆಲಸದ ಅರಿವಾಗಿದೆ. ಅದೃಷ್ಟವಶಾತ್ ಅದೇ ಸಮಯದಲ್ಲೇ ನಮ್ಮ ಮನೆಗೆ ಬಂದ ನಮ್ಮ ಭಾವನವರು ಅಕ್ಕ ಪಕ್ಕದವರ ನೆರವಿನಿಂದ ಬೆಂಕಿಯನ್ನು ಆರಿಸಿದರಾದರೂ ತೆಂಗಿನ ಮರದ ಕುಡಿಗೇ ಬೆಂಕಿ ತಗುಲಿದ್ದ ಕಾರಣ ಮರದ ಬೆಳವಣಿಗೆ ಕುಂಠಿತವಾಗಿ ನಮ್ಮ ತಂದೆಯವರ ಬಾರೀ ಪರಿಶ್ರಮ ಮತ್ತು ವಿಶೇಷ ಆರೈಕೆಯ ಫಲದಿಂದಾಗಿ ಮರವನ್ನು ಉಳಿಸಿಕೊಂಡಿದ್ದು ನಮ್ಮೆಲ್ಲರಿಗೂ ನೆಮ್ಮದಿ ತಂದಿತ್ತು. ಅಂದಿನ ಘಟನೆಯಿಂದ ವಿಚಲಿತನಾದ ನನ್ನ ಸೋದರಳಿದಯ ಮುಂದೆಂದೂ ಪಟಾಕಿಯನ್ನು ಹೊಡೆಯದಿರುವ ಭೀಷ್ಮ ಪ್ರತಿಜ್ಞೆ ತೊಟ್ಟು ಇಂದಿಗೂ ಅದನ್ನೇ ಪಾಲಿಸುತ್ತಿರುವುದು ಶ್ಲಾಘನೀಯ.

ಅಂದಿನಿಂದ ಮುಂದೆ ನನಗೆ ಮದುವೆಯಾಗಿ ನಮ್ಮ ಮಕ್ಕಳು ಪಟಾಕಿ ಹೊಡೆಯುವ ವಯಸ್ಸಿಗೆ ಬರುವ ವರೆವಿಗೂ ನಮ್ಮ ಮನೆಯಲ್ಲಿ ಪಟಾಕಿ ಶಬ್ಧ ಅಷ್ಟಕಷ್ಟೇ. ಮಕ್ಕಳು ದೊಡ್ಡವರಾದ ಮೇಲೆ ಅವರಿಚ್ಛೆಯಂತೆ ಪಟಾಕಿಗಳ ಪಟ್ಟಿಯನ್ನು ತಯಾರಿಸಿಟ್ಟುಕೊಂಡು ಬೆಂಗಳೂರಿಗಿಂತ ಪಟಾಕಿ ಕಡಿಮೆ ಬೆಲೆಗೆ ಮತ್ತು ತರ ತರಹದ್ದು ಸಿಗುವ ಕಾರಣ ಸ್ಣೇಹಿತರೊಂದಿಗೆ ಹೊಸೂರಿಗೆ ಹೋಗಿ ಸರಿ ಸುಮಾರು ಪಟಾಕಿಗಳನ್ನು ತಂದು ಹಿಂದಿನಂತೆಯೇ ಸಂಭ್ರಮದಿಂದ ವಿಜೃಂಭಣೆಯಿಂದ ಪಟಾಕಿ ಹೊಡೆಯುವ ಸಂಪ್ರದಾಯ ಮುಂದುವರಿದಿದೆ. ಕಳೆದ ವರ್ಷ ನಮ್ಮ ತಂದೆಯವರ ಅಕಾಲಿಕ ಮರಣದಿಂದಾಗಿ ನಮಗೆ ಹಬ್ಬ ಇರಲಿಲ್ಲ. ಆದರೆ ಈ ವರ್ಷ ಮನೆಯಲ್ಲಿ ಹಬ್ಬವಿದ್ದರೂ ಮನೆಯ ಹಿರಿಯರೇ ಇಲ್ಲದ ಕಾರಣ ಸಂಭ್ರಮವಿಲ್ಲ.

ನರಕಾಸುರ ಮತ್ತು ಬಲಿ ಚಕ್ರವರ್ತಿಯಂತಹ ಆಸುರರನ್ನು ಸಂಹರಿಸಿ ಜಗತ್ತನ್ನು ಕಾಪಾಡಿದ ಶ್ರೀ ಕೃಷ್ಣನ ವಿಜಯಯೋತ್ಸವದ ಸಂಭ್ರಮವೇ ಈ ದೀಪಾವಳಿ. ಕತ್ತಲಿನಿಂದ ಬೆಳಕಿಗೆ, ಅಜ್ಞಾನದಿಂದ ಜ್ಞಾನದೆಡೆಗೆ ಕೊಂಡೊಯ್ಯುವ ಸಂಕೇತವೇ ದೀಪಾವಳಿ. ಹಚ್ಚಿರುವ ಹಣತೆ ಸಾಂಕೇತಿಕವಾಗಿ ಕೆಲಕಾಲ ಉರಿದು ಆರಿ ಹೋಗಬಹುದು. ಆದರೆ ನಮ್ಮ ಜೀವನೋತ್ಸಾಹದ ಹಣತೆ ಎಂದೂ ಆರದಿರಲಿ. ಅದರ ಹೊಂಬೆಳಕು ನಮ್ಮ ಮನೆ ಮನಗಳನ್ನು ಸದಾ ಬೆಳಗುತ್ತಿರಲಿ. ಪ್ರತೀ ಸಂಸಾರದಲ್ಲೂ ಸದಾ ಆರೋಗ್ಯ ನೆಮ್ಮದಿ ತುಂಬಿರಲಿ. ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಮಧ್ಯೆ ಎಂದೆಂದಿಗೂ ಪ್ರೀತಿ ವಾತ್ಸಲ್ಯ ತುಂಬಿರಲಿ. ಎಲ್ಲರ ಬದುಕಿನಲ್ಲೂ ಆ ಭಗವಂತನ ಕೃಪೆ ನಿರಂತರವಾಗಿ ಇರಲಿ ಎಂದು ನಮ್ಮ ಸಂಪ್ರದಾಯದಂತೆ ನಮ್ಮ ಕೈಯಲ್ಲಾಗುವ ಮಟ್ಟಿಗೆ ಜಾಗೃತಿಯಿಂದ ಯಾರಿಗೂ ತೊಂದರೆಯಾಗದಂತೆ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸೋಣ. ಪಟಾಕಿ ಹೊಡೆಯುವ ಜೊತೆಗೆ ಪರಿಸರದ ಬಗ್ಗೆ ಕಾಳಜಿಯಿಂದ ನಮ್ಮ ಮನೆಯ ಸುತ್ತ ಮುತ್ತ ಮರ ಗಿಡಗಳನ್ನು ಬೆಳೆಸೋಣ. ವಾಯುಮಾಲಿನ್ಯವನ್ನು ಆದಷ್ಟೂ ತಡೆಯೋಣ. ಮನೆಯ ಸುತ್ತಲೂ ಹಣತೆಗಳನ್ನು ಹಚ್ಚಿ ಅರ್ಥ ಪೂರ್ಣವಾಗಿ ದೀಪಾವಳಿಯನ್ನು ಆಚರಿಸೋಣ ನಮ್ಮ ಮುಂದಿನ ಪೀಳಿಗೆಯವರಿಗೂ ನಮ್ಮ ಸಂಪ್ರದಾಯವನ್ನು ಉಳಿಸೋಣ ಮತ್ತು ಬೆಳೆಸೋಣ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s