ರಾಷ್ಟ್ರಸೇವೆಯೆಂಬ ಯಜ್ಞದಲ್ಲಿ ಸಮಿದೆಯಂತೆ ದುಡಿದ ಕರ್ಮಯೋಗಿ ಮನೋಹರ್ ಪರಿಕ್ಕರ್ ಅವರಿಗೆ ನುಡಿ ನಮನ

​1955 ಡಿಸೆಂಬರ್​ 13 ಗೋವಾದ ಮಾಪೂಸ ಎಂಬ ಪ್ರಾಂತ್ಯದಲ್ಲಿ ರಾಧಾಭಾಯಿ ಮತ್ತು ಗೋಪಾಲಕೃಷ್ಣ ದಂಪತಿಗಳಿಗೆ ಜನಿಸಿದ ನೋಡಲು ಮನೋಹರವಾಗಿದ್ದ ಮಗುವಿಗೆ  ಅನ್ವರ್ಥವಾಗುವಂತೆಯೇ ಮನೋಹರ ಪರಿಕ್ಕರ್ ಎಂದು ನಾಮಕರಣ ಮಾಡಿದರು. ಬಾಲ್ಯದಿಂದಲೂ ಆಟ  ಪಾಠಗಳಲ್ಲಿ ಅತ್ಯಂತ ಚುರುಕಾಗಿದ್ದ ಹುಡುಗ, ಓದಿನ ಜೊತೆಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಂಟಿನೊಂದಿಗೆ ರಾಷ್ಟ್ರೀಯತೆಯನ್ನೂ ಬೆಳೆಸಿಕೊಂಡ.  ಮಾರ್ಗೋವಾದಲ್ಲಿನ ಲೊಯೋಲಾ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ 1978ರಲ್ಲಿ  ಮುಂಬಯಿ -ಐಐಟಿಯಲ್ಲಿ  ಮೆಟಲರ್ಜಿಕಲ್ ಇಂಜಿನಿಯರಿಂಗ್​ನಲ್ಲಿ ಪದವಿ ಪಡೆದು ಕೈತುಂಬಾ ಹಣ ಗಳಿಸಬಹುದಾಗಿದ್ದರೂ, ಸಂಘದ ಪ್ರಭಾವದಿಂದಾಗಿ  ಸಮಾಜ ಸೇವೆ ಮಾಡಲು ಕೆಲ ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘದ  ಪ್ರಚಾರಕರಾಗಿ ಸೇವೆ ಸಲ್ಲಿಸಿ ನಂತರ ಮೇಧಾರನ್ನು ವರಿಸಿ ಗೃಹಸ್ಥಾಶ್ರಮಕ್ಕೆ ಕಾಲಿಟ್ಟು ಅವರಿಬ್ಬರ ದಾಂಪತ್ಯದ ಕುರುಹಾಗಿ ಅಭಿಜಿತ್ ಮತ್ತು ಉತ್ಪಲ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ.

90ರ ದಶಕದಲ್ಲಿ ಆರಂಭವಾದ  ರಾಮಜನ್ಮ ಭೂಮಿ ಚಳವಳಿ ಸಂಘಟನೆಯಲ್ಲಿ ಉತ್ತರ ಗೋವಾ ಭಾಗದಲ್ಲಿ ಸಕ್ರಿಯರಾಗುವ ಮೂಲಕ ರಾಜಕೀಯ ಕ್ಷೇತ್ರಕ್ಕೆ ಕಾಲಿಡುತ್ತಾರೆ.  ಆಗೆಲ್ಲಾ ಗೋವಾದಲ್ಲಿ ಗೋಮಾಂತಕ ಪಕ್ಷದ್ದೇ ಕಾರುಬಾರು. ಅದರ  ವಿರುದ್ಧ ಹೋರಾಟ ನಡೆಸುವ ಸಲುವಾಗಿ  ಗೋವಾದಲ್ಲಿ ಆಗಿನ್ನು ಕಾಲಿಡುತ್ತಿದ್ದ ​ ಬಿಜೆಪಿಗೆ ಪರಿಕ್ಕರ್ ನೆಚ್ಚಿನ ನಾಯಕರಾಗುತ್ತಾರೆ. ತಮ್ಮ ಸರಳ ಜೀವನ ಮತ್ತು ಅನನ್ಯ ದೇಶಪ್ರೇಮದ ಮೂಲಕ ಬಹಳ ಬೇಗ ಗೋವಾದ ಜನರ ಮನಗೆದ್ದ ಮನೋಹರ್ ಪರಿಕ್ಕರ್ ಅವರು 1994ರಲ್ಲಿ ಗೋವಾ ವಿಧಾನಸಭೆಗೆ ಮೊದಲಬಾರಿಗೆ ಆಯ್ಕೆಯಾಗಿ 1999ರಲ್ಲಿ ವಿರೋಧಪಕ್ಷದ ನಾಯಕನ ಹುದ್ದೆಯನ್ನು ಅಲಂಕರಿಸಿದರೆ 2000 ಇಸ್ವಿಯಲ್ಲಿ ಅಲ್ಪಾವಧಿಗೆ ಪ್ರಥಮ ಬಾರಿಗೆ ಗೋವಾದ ಮುಖ್ಯಮಂತ್ರಿ ಪದವಿಯನ್ನಲಂಕರಿಸಿ ನಂತರ  2002ನೇ ಇಸ್ವಿಯಲ್ಲಿ ಇತರೇ ಪಕ್ಷಗಳ ಸಹಕಾರದಿಂದ  ಮತ್ತೊಮ್ಮೆ ಗೋವಾದ ಮುಖ್ಯಮಂತ್ರಿಗಳಾಗುತ್ತಾರೆ.  ಗೋವಾದಲ್ಲಿನ ರಾಜಕೀಯ ಸದಾ ಅತಂತ್ರವಾಗಿಯೇ ಇರುವ ಕಾರಣ 2005ರಲ್ಲಿ ಮಿತ್ರಪಕ್ಷಗಳ ಅಸಹಕಾರದಿಂದ ಅಧಿಕಾರ ಕಳೆದುಕೊಂಡರೂ ಮತ್ತೆ 2012ರ ಚುನಾವಣೆಯಲ್ಲಿ ಪರಿಕ್ಕರ್ ಅವರ ನೇತೃತ್ವದಲ್ಲಿ  ಬಿಜೆಪಿ ಮೈತ್ರಿಕೂಟ 24 ಸ್ಥಾನ ಪಡೆಯುವ ಮೂಲಕ  ಅಧಿಕಾರಯುತವಾಗಿ ಮೂರನೆಯ ಬಾರಿಗೆ ಗೋವಾ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಳ್ಳುತ್ತಾರೆ.

ಮನೋಹರ್ ಪರಿಕ್ಕರ್ ಅಧಿಕಾರ ವಹಿಸಿಕೊಳ್ಳುವವರೆಗೂ  ಗೋವಾ ರಾಜ್ಯದ ಪ್ರಮುಖ ಆದಾಯ ಪ್ರವಾಸೋದ್ಯಮ ಮತ್ತು  ಅಬ್ಕಾರಿಯಿಂದಲೇ ಬರುತಿತ್ತು. ಆದರೆ ನಿಜಕ್ಕೂ ಗೋವಾದ ಅಪಾರ ಪ್ರಮಾಣದ ಆದಾಯ ಅಕ್ರಮ ಗಣಿಗಾರಿಕೆಯಿಂದಾಗಿ  ಸೋರಿಹೋಗುತ್ತಿದ್ದನ್ನು ಮನಗಂಡ ಪರಿಕ್ಕರ್ ಅಲ್ಲಿನ ಗಣಿಗಾರಿಕೆಯನ್ನು ರಾಷ್ಟ್ರೀಕರಣ ಮಾಡಿ  ಅಕ್ರಮ ಗಣಿಗಾರಿಕೆಯನ್ನು ತಡೆದಿದ್ದಲ್ಲದೇ ಗೋವಾ ರಾಜಕ್ಕೆ  ಪ್ರಮುಖವಾದ ಆದಾಯವನ್ನು ತಂದಿತ್ತರು.  ಈ ಆದಾಯದಿಂದಾಗಿಯೇ,  ದೇಶಾದ್ಯಂತ ತೈಲ ಬೆಲೆ ಹೆಚ್ಚಾಗಿದ್ದರೂ ಗೋವಾರಾಜ್ಯದಲ್ಲಿ  ಮಾತ್ರ  ರಾಜ್ಯಸರ್ಕಾರ  ಹೆಚ್ಚಿನ ತೆರಿಗೆ ವಿಧಿಸದೆ ಇಂದಿಗೂ ದೇಶದಲ್ಲೇ ಅತ್ಯಂತ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸಲ್ ದೊರೆಯುವಂತೆ ಮಾಡಿದ ಹೆಗ್ಗಳಿಕೆಯೂ ಪರಿಕ್ಕರ್ ಅವರಿಗೇ ಸಲ್ಲುತ್ತದೆ.  ಪ್ರವಾಸೋದ್ಯಮದ ಹೆಸರಿನಲ್ಲಿ  ದೇಶ ವಿದೇಶಗಳಿಂದ  ಬರುವ ಪ್ರವಾಸಿಗಳಿಗೆ  ಗೋವಾ, ಒಂದು ರೀತಿಯ  ಅಶ್ಲೀಲ ಮತ್ತು  ಅಕ್ರಮ ಚಟುವಟಿಕೆಗಳ ತಾಣವಾಗಿತ್ತು.  ಗೋವಾ ಡ್ರಗ್ ಮತ್ತು ಅಕ್ರಮ ಜೂಜೂಕೂರರ ಪ್ರಮುಖ ತಾಣವಾಗಿತ್ತು. ಈ ಎಲ್ಲಾ ಕುಕೃತ್ಯಗಳನ್ನೂ ತಡೆಗಟ್ಟಿ ಸಂಸಾರವಂತರೂ, ಸಂಸ್ಕಾರವಂತರೂ ಸಕುಟುಂಬ ಸಮೇತರಾಗಿ ಗೋವಾಕ್ಕೆ  ಹೋಗುವಂತೆ ಮಾಡಿದ ಕೀರ್ತಿಯೂ  ಪರಿಕ್ಕರ್ ಅವರಿಗೆ ಸಲ್ಲುತ್ತದೆ.

ಸದಾ ಜನಸಾಮಾನ್ಯರ ಜೊತೆ ಸರಳವಾಗಿ ಸಲುಗೆಯಿಂದ ಇರುತ್ತಿದ್ದ ಕಾರಣ ಅವರು ಲ್ಲರಿಗೂ ಇಷ್ಟವಾಗಿದ್ದರು. ಒಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದರೂ ಅವರಿಗೆ  ಐಷಾರಾಮ್ಯ ಜೀವನ  ತಲೆಗೆ ಹತ್ತಿರಲಿಲ್ಲ. ಸದಾಕಾಲ ಸಾಮಾನ್ಯ ಮಧ್ಯಮ ವರ್ಗದ ಜನರಂತೆ ಸಣ್ಣ ಸ್ಕೂಟರ್ನಲ್ಲಿಯೋ ಇಲ್ಲವೇ ಜನ ಸಾಮಾನ್ಯರು ಪ್ರಯಾಣಿಸುವ ಬಸ್ನಲ್ಲಿಯೇ ಪ್ರಯಾಣಿಸಿಸಿ ಎಲ್ಲರ ಗಮನ ಸೆಳೆದಿದ್ದರು. ಜನರ ತೆರಿಗೆ ಹಣವನನ್ನು ನಾನೇಕೇ ದುಂದು ವೆಚ್ಚ ಮಾಡಬೇಕು?  ಅವರಂತೆಯೇ ನಾನೂ ಕೂಡಾ ವಿಮಾನದಲ್ಲಿ  ಎಕನಾಮಿ ಕ್ಲಾಸ್ನಲ್ಲಿಯೇ  ಓಡಾಡುತ್ತೇನೆ ಎಂದು ಹೇಳಿ ಅದನ್ನೇ ಮಾಡಿ ತೋರಿಸಿದವರು ಪರಿಕ್ಕರ್ ಅವರು.

ಈ ಒಂದು ಸಣ್ಣ ಪ್ರಹಸನವೇ ಅವರ ಸರಳತೆಯನ್ನು ಎತ್ತಿ ತೋರುತ್ತದೆ.  ಅದೋಮ್ಮೆ ಒಬ್ಬ ಗೋವಾದಲ್ಲಿ ಐಷಾರಾಮಿ ಕಾರಿನಲ್ಲಿ  ರಾಂಗ್ ಸೈಡ್ ನಲ್ಲಿ ಬರುತ್ತಿದ್ದನಂತೆ. ಆಗ ಕೈನೆಟಿಕ್ ಹೊಂಡದಲ್ಲಿದ್ದ  ವ್ಯಕ್ತಿಯೊಬ್ಬರು, ಅ ಕಾರ್ ಚಾಲಕನಿಗೆ ಇದು ರಾಂಗ್ ಸೈಡ್ ಕಣಪ್ಪಾ… ಹೀಗೆಲ್ಲಾ ಬರಬಾರದು ಅಂತ ಬುದ್ಧಿ ಹೇಳಿದರಂತೆ. ಅದಕ್ಕೆ ಕೋಪಗೊಂಡ ಆ ಹುಡುಗ ಕಾರಿಂದ ಇಳಿದು ನಾನು ಯಾರು ಗೊತ್ತಾ…? ನಾನು ಗೋವಾ ಕಮೀಷನರ್ ಮಗ. ನನಗೆ ರೂಲ್ಸ್ ಹೇಳ್ತೀಯಾ ಅಂತ ದರ್ಪದಲ್ಲೇ ಮಾತನಾಡಿದನಂತೆ. ಆಗ ವ್ಯಕ್ತಿ ತನ್ನ ಹೆಲ್ಮೆಟ್ ತೆಗಿಯುತ್ತಾ ರೂಲ್ಸ್‌ ಎಂದ ಮೇಲೆ, ಕಮೀಷನರ್ ಮಗನಿಗೂ ಮತ್ತು ಮುಖ್ಯಮಂತ್ರಿಗೂ ಒಂದೇ, ಎಂದು ನಗುತ್ತಾ ಹೇಳಿದರಂತೆ. ಹಾಗೆ ಬುದ್ಧಿವಾದ ಹೇಳಿದ ವ್ಯಕ್ತಿ  ಬೇರೆ ಯಾರೂ ಆಗಿರದೇ , ಅವರೇ  ಗೋವಾದ ಅಂದಿನ ಮುಖ್ಯಮಂತ್ರಿ ಮನೋಹರ್ ಗೋಪಾಲಕೃಷ್ಣ ಪ್ರಭು ಪರಿಕ್ಕರ್.  ಸಾಧಾರಣ ಗ್ರಾಮಪಂಚಾಯಿತಿಯ ಸದಸ್ಯರೋ ಇಲ್ಲವೇ ನಗರಸಭಾ ಸದಸ್ಯರಾದರೂ ಸಾಕು ದೊಡ್ಡ ದೊಡ್ಡ ಐಶಾರಾಮಿ ಕಾರಿನಲ್ಲಿ ನಾಲ್ಕಾರು ಸಹಚರರೊಂದಿಗೆ ಓಡಾಡುವ ಇಂದಿನ ಕಾಲದಲ್ಲಿ, ಒಂದು ರಾಜ್ಯದ  ಮುಖ್ಯಮಂತ್ರಿಯೊಬ್ಬ ಸ್ಕೂಟರ್ನಲ್ಲಿ  ಓಡಾಡುವಷ್ಟು ಸರಳತೆಯನ್ನು ನಾವು ಸಾಮಾನ್ಯರಲ್ಲಿ ಕಾಣಲು ಸಾಧ್ಯವೇ???

ಅದೇ ರೀತಿ ಹೊಟ್ಟೆ ಹಸಿದಾಗ  ಪಂಚತಾರ ಹೋಟೆಲ್ಗಳೇ ಬೇಕೆನ್ನದೆ, ರಸ್ತೆಯ ಬದಿಯಲ್ಲಿಯ ಸಾಮಾನ್ಯ ಹೋಟೆಲ್ನಲ್ಲಿಯೇ ತಮಗೆ ಬೇಕಾದ್ದನ್ನು ತಿಂದು ಹಸಿವನ್ನು ನೀಗಿಸಿಕೊಂಡು ಅದಕ್ಕೆ ಕೊಡಬೇಕಾದ ಬಿಲ್ಲನ್ನು ತಮ್ಮ ಜೇಬಿನಿಂದಲೇ ಕೊಡುವ ಸರಳ ಸಜ್ಜನಿಕೆಯನ್ನು ಹೊಂದಿದ್ದವರು ಪರಿಕ್ಕರ್ ಅವರು. ಅದೇ ರೀತಿ ಕೆಲ ವರ್ಷಗಳ ಹಿಂದೆ ಕರ್ನಾಟಕದ ಕಾರವಾರದಲ್ಲಿ  ತಮ್ಮ ಸಮಾಜವಾದ ಗೌಡಸಾರಸ್ವತ ಬ್ರಾಹ್ಮಣರ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿದ್ದ ಸಂಧರ್ಭದಲ್ಲಿ ತಮ್ಮ ಕೇಂದ್ರ ಸರ್ಕಾರದ ಸಚಿವ ಎಂಬ ಹಮ್ಮು ಬಿಮ್ಮು ತೋರದೇ, ಕೊಂಕಣ್ ಎಕ್ಸ್ ಪ್ರೆಸ್ ರೈಲಿನಲ್ಲಿ ಯಾವುದೇ ಅಂಗರಕ್ಷಕರಿಲ್ಲದೆ ತಮ್ಮ ಬಂಧುವಿನೊಂದಿಗೆ ಆಗಮಿಸಿ ಕಾರ್ಯಕ್ರಮದಲ್ಲಿ ಪೂರ್ಣವಾಗಿ ಭಾಗವಹಿಸಿ ಮತ್ತದೇ ರೈಲಿನಲ್ಲಿ ಹಿಂತಿರುಗಿದಂತಹ ಮಹಾನ್ ಸರಳ ಜೀವಿಯಾಗಿದ್ದರು ಪರಿಕ್ಕರ್.

ತಮ್ಮ ಪಕ್ಷದಲ್ಲಿ ಮತ್ತು  ರಾಜಕೀಯದಲ್ಲಿ ಎಷ್ಟೇ ಎತ್ತರಕ್ಕೇರಿದ್ದರೂ ತಮ್ಮ ಪಕ್ಷದ ಆಣತಿಯನ್ನು ಎಂದೂ ಮೀರದೇ ಪಕ್ಷದ ಸಿಪಾಯಿಯಾಗಿ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಆಡಳಿತಕ್ಕೆ ಬಂದಾಗ ಪಕ್ಷದ ಕರೆಯಂತೆ ಗೋವಾ ರಾಜ್ಯದ ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡಿ ದೇಶದ ರಕ್ಷಣಾ ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡು ತಮ್ಮ ಸರಳತೆ ಮತ್ತು ಕಾರ್ಯತತ್ಪರತೆಗಳಿಂದ ಗೋವಾ ಮುಖ್ಯಮಂತ್ರಿಯಾಗಿ ಪಡೆದಿದ್ದ ಖ್ಯಾತಿಗಿಂತಲೂ ಹೆಚ್ಚಿನ ಖ್ಯಾತಿಯನ್ನು ದೇಶದ ರಕ್ಷಣಾ ಸಚಿವರಾಗಿ ಪಡೆದು ದೇಶವಾಸಿಗಳ ಹೃದಯ ಗೆದ್ದಿದ್ದರು ಎಂದರೆ ಅತಿಶಯೋಕ್ತಿ ಏನಲ್ಲ. ಪಾಪೀಸ್ಥಾನದ ಬೆಂಬಲಿತ ಉಗ್ರರು ನಡೆಸಿದ ಉರಿ ದಾಳಿಗೆ ಹಿಂದಿನ ಸರ್ಕಾರಗಳಂತೆ  ಕೈ ಕಟ್ಟಿ ಕೂರದೆ, ತಮ್ಮ ನೇತೃತ್ವದಲ್ಲಿಯೇ ಪ್ರತೀಕಾರವಾಗಿ ಸರ್ಜಿಕಲ್​ ಸ್ಟ್ರೈಕ್​ ನಡೆಸಿದ ಕೀರ್ತಿಯೂ ಅವರಿಗೇ ಸಲ್ಲುತ್ತದೆ.  ತಮ್ಮ ವಿದ್ಯಾಭ್ಯಾಸದಿಂದಾಗಿ ತಾಂತ್ರಿಕವಾಗಿ ಅಪಾರ ಪರಿಣತಿ ಹೊಂದಿದ್ದರಿಂದ ರಕ್ಷಣಾ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತುರುವಲ್ಲಿ ಶ್ರಮ ವಹಿಸಿದ್ದರು. ಅವರ ಕಾಲದಲ್ಲಿಯೇ ಸೈನಿಕರಿಗೆ ಅಗತ್ಯವಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಗುಂಡು ನಿರೋಧಕ ಕವಚಗಳು ಮತ್ತು ಎಲ್ಲದ್ದಕ್ಕಿಂತ OROP one rank one pention ಜಾರಿಗೆ ತರಲು  ಅಪಾರವಾದ ಪರಿಶ್ರಮ ಪಟ್ಟಿದ್ದರು.  2003 ರಿಂದಲೂ ಮಾತು ಕತೆಯಲ್ಲಿಯೇ ನೆನೆಗುದಿಗೆ ಬಿದ್ದಿದ್ದ ಹಾಗೂ ಇಂದಿಗೆ ಬಹಳವಾಗಿ ಚರ್ಚೆಯಾಗುತ್ತಿರುವ ರಫೇಲ್ ವಿಮಾನಗಳ ಖರೀದಿಯನ್ನು ಪೂರ್ಣಗೊಳಿಸುವುದರಲ್ಲಿ  ಅವರ ಪರಿಶ್ರಮವಿದೆ. ಅಂತೆಯೇ ಅಮೇರಿಕಾದ ಜೊತೆ ಶಸ್ತ್ರಾಸ್ತ್ರ ಖರೀದಿ ಮಾಡುವಾಗ ಹಿಂದಿನ ಸರ್ಕಾರ ಕೊಟ್ಟಿದ್ದ ಹೆಚ್ಚಿನ ಹಣ ಅಮೇರಿಕಾದ ಬಳಿಯೇ ಇದ್ದದ್ದನ್ನು ಪತ್ತೆ ಹಚ್ಚಿ ಅದನ್ನು ಸದುಪಯೋಗ ಪಡಿಸಿದದ್ದು ಅವರ ನಿಷ್ಠೆಯನ್ನು ಎತ್ತಿ ಸಾರುತ್ತದೆ.

2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅತಂತ್ರ ಸರ್ಕಾರವೇ ಬಂದಾಗ ಮಿತ್ರ ಪಕ್ಷಗಳನ್ನು ಜೋಡಿಸಿಕೊಂಡು ಹೋಗುವುದಕ್ಕೆ ಮನೋಹರರೇ ಸರಿಯಾದ ವ್ಯಕ್ತಿ ಎಂದು ಪಕ್ಷ ತೀರ್ಮಾನಿಸಿದ ಕಾರಣ ಕೇಂದ್ರ ಸಚಿವ ಸ್ಧಾನಕ್ಕೆ ರಾಜೀನಾಮೆ ಕೊಟ್ಟು ನಾಲ್ಕನೇ ಬಾರಿಗೆ  ಗೋವಾದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಉತ್ತಮ ಆಡಳಿತ ನೀಡುತ್ತಿದ್ದ  ಸಂಧರ್ಭದಲ್ಲಿಯೇ ಪ್ಯಾನ್‌ಕ್ರಿಯಾಟಿಕ್‌  ಕ್ಯಾನ್ಸರ್ ಎಂಬ ಮಾರಕ ರೋಗಕ್ಕೆ ತುತ್ತಾದದ್ದು ನಿಜಕ್ಕೂ ಖೇದಕರ. ಆರಂಭದಲ್ಲಿ ದೆಹಲಿಯಲ್ಲಿ ನಂತರ ಅಮೆರಿಕದಲ್ಲಿಯೂ ಚಿಕಿತ್ಸೆ ಪಡೆದುಕೊಂಡು ಬಂದರಾದರೂ, ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ. ಅನಾರೋಗ್ಯದಿಂದ ಬಳಲುತಿದ್ದರೂ ಎಂದೂ ತಮ್ಮ ಕೆಲಸ ಬಿಡದ ಪರಿಕ್ಕರ್​ ಮೂಗಿಗೆ ನಳಿಕೆ ಹಾಕಿಕೊಂಡೇ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದರು ಮತ್ತು  ಅದೇ  ಪರಿಸ್ಥಿತಿಯಲ್ಲಿಯೇ ಬಜೆಟ್‌ ಅಧಿವೇಶನದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದರು. ತಮ್ಮ ಅನಾರೋಗ್ಯವನ್ನೇ ಮುಂದಿಟ್ಟು ಕೊಂಡು, ತಮ್ಮನ್ನು ಚುನಾಯಿಸದಿದ್ದಲ್ಲಿ ಸತ್ತು ಹೋಗುತ್ತೇನೆ ಎಂದು ಜನರನ್ನು ಹೆದರಿಸುತ್ತಲೇ ಅಧಿಕಾರ ಗಿಟ್ಟಿಸಿಕೊಳ್ಳುತ್ತಿರುವ ಹಲವಾರು ನಾಯಕರುಗಳ ಮಧ್ಯೆ    ತಮ್ಮ ಸಾವು ಖಚಿತ ಎಂದು ಗೊತ್ತಿದ್ದರೂ, ಸಾವನ್ನು ಬಗಲಲ್ಲೇ  ಕಟ್ಟಿಕೊಂಡು ತನ್ನ ರಾಜ್ಯದ ಜನರಿಗಾಗಿ ಕೊನೆಯ ತನಕ ವಿಧಿಗೆ ಸೆಡ್ಡು ಹೊಡೆದು ಕೆಲಸ ಮಾಡುತ್ತಿದ್ದ ಈ  ಮುಖ್ಯಮಂತ್ರಿಯ ಬಗ್ಗೆ ಆ ಭಗವಂತನಿಗೂ ಅಸೂಯೆಯಾಗಿ  ನೆನ್ನೆ ಅವರನ್ನು ತನ್ನ ಬಳಿ ಕರೆಸಿಕೊಂಡಿದ್ದು ನಿಜಕ್ಕೂ ದುರ್ವಿಧಿಯೇ ಸರಿ.

ಎರಡು ತಿಂಗಳ ಹಿಂದೆ ನಮ್ಮನ್ನಗಲಿದ ಜಾರ್ಜ್ ಫರ್ನಾಂಡೀಸ್ ಮತ್ತು ಮನೋಹರ್ ಪರಿಕ್ಕರ್ ಅವರಿಬ್ಬರ ನಡುವೆ ಬಹಳಷ್ಟು ಸಾಮ್ಯವಿದೆ. ಇಬ್ಬರ ಮಾತೃಭಾಷೆಯೂ ಕೊಂಕಣಿ. ಇಬ್ಬರೂ ಸರಳ ಸಜ್ಜನ ವ್ಯಕ್ತಿಗಳು. ಇಬ್ಬರ ವೇಷಭೂಷಣಗಳು ಬಹಳಷ್ಟು ಸರಳವಾಗಿದ್ದವು. ಇಬ್ಬರೂ ದೇಶದ ರಕ್ಷಣಾ ಸಚಿವರಾಗಿ ದೇಶದ ಸೈನಿಕರಿಗೆ ಯುದ್ಧ ಭೂಮಿಯಲ್ಲಿಯೇ ಸಹಾಯ ಹಸ್ತವನ್ನು ನೀಡಿದ್ದವರು.  ಫರ್ನಾಂಡೀಸರು ಕಾರ್ಗಿಲ್ ವಿಜಯ ತಂದಿತ್ತರೆ, ಪರಿಕ್ಕರ್ ಅವರು ಸರ್ಜಿಕಲ್ ಸ್ಟ್ರೈಕ್ ಮುಖಾಂತರ ಪಾಕಿಗಳನ್ನು ಬಗ್ಗಿ ಬಡಿದರು. ಇಬ್ಬರೂ ದೀರ್ಘಕಾಲದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದರು ಮತ್ತು  2019ರಲ್ಲಿಯೇ ವಿಧಿವಶರಾದರು.

ಭಾರತ ದೇಶಕ್ಕೆ ಸಂಘಪರಿವಾರದ  ಕೊಡುಗೆ, ತ್ಯಾಗ, ಬಲಿದಾನ,  ಏನು ಎಂದು   ದೇಶದ ಸಂಪತ್ತನ್ನು  ಲೂಟಿ ಹೊಡೆದು ಬೇಲ್ ಮೇಲಿರುವ ಕೆಲವು ಜನರು ಕೇಳುತ್ತಿರುವಾಗ, ಶಾಮಪ್ರಸಾದ್ ಮುಖರ್ಜಿ, ದೀನ್ ದಯಾಳ್ ಉಪಾಧ್ಯಾಯ, ಜಗನ್ನಾಥ್ ರಾವ್ ಜೋಶಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಈಗ ಮನೋಹರ್ ಪರಿಕ್ಕರ್ ಅಂತಹವರ ಕೊಡುಗೆ ಮತ್ತು  ತ್ಯಾಗಗಳೇ ಉತ್ತರ ನೀಡುತ್ತವೆ ಅಲ್ಲವೇ?

ಒಬ್ಬ ದೇಶಭಕ್ತ ಪ್ರಜೆಯಾಗಿ  ಆ ಭಗವಂತನನ್ನು ಕೇಳುವುದಿಷ್ಟೇ.  ಇನ್ನೇನು ಕೆಲವೇ ಗಂಟೆಗಳಲ್ಲಿ  ಪಂಚಭೂತಗಳಲ್ಲಿ ವಿಲೀನರಾಗಲಿರುವ ಶ್ರೀ ಮನೋಹರ್ ಪರಿಕ್ಕರ್ ಅವರ ಆತ್ಮಕ್ಕೆ ಶಾಂತಿ ಕೊಡು.  ದುಃಖ ತಪ್ತ ಅವರ ಕುಟುಂಬವರ್ಗದವರಿಗೂ ಮತ್ತು ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಅವರ ಅಗಲಿಕೆಯ ನಷ್ಟವನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ಕೊಡು. ಸ್ವಾತಂತ್ರ್ಯಾನಂತರ ಬಹಳ ಜನರ ಅಪೇಕ್ಷೇಯಂತೆ ಇಂದು ಕೆಲವು ದಕ್ಷ,  ಪ್ರಾಮಾಣಿಕ ಮತ್ತು ನಿಷ್ಟಾವಂತ  ನಾಯಕರ ಕೈಯಲ್ಲಿ ಭಾರತ  ಸುರಕ್ಷಿತವಾಗಿದೆ. ದಯವಿಟ್ಟು ಅಂತಹ ನಾಯಕರಿಗೆ  ದೀರ್ಘಾಯಸ್ಸು ನೀಡುವ ಮೂಲಕ ನಿನ್ನ ಕೃಪಾರ್ಶೀವಾದವಿರಲಿ ಮತ್ತು ಭಾರತ ಮತ್ತೊಮ್ಮೆ ವಿಶ್ವ ಗುರು ಆಗುವುದಕ್ಕೆ ನಿನ್ನ  ಆಭಯ ಹಸ್ತವಿರಲಿ.

ದೈಹಿಕವಾಗಿ ಮನೋಹರ್ ಪರಿಕ್ಕರ್ ನಮ್ಮನ್ನಿಂದು ಅಗಲಿರಬಹುದು ಅವರು ಮಾಡಿದ ಕಾರ್ಯಗಳಿಂದಾಗಿ ಮಾನಸಿಕವಾಗಿ ಸದಾಕಾಲವೂ ನಮ್ಮೊಡನೆ ಚಿರಕಾಲ ಇದ್ದೇ ಇರುತ್ತಾರೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s