ಪ್ರಜಾಪಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು

ಶ್ರೀ ರಮೇಶ್ ಕುಮಾರ್ ಅವರಿಗೆ
ಮಾನ್ಯ ಕರ್ನಾಟಕ ವಿಧಾನಸಭಾಧ್ಯಕ್ಷರು,
ವಿಧಾನಸೌಧ.

ಮಾನ್ಯ ಸಭಾಧ್ಯಕ್ಷರೇ, ಚುಂಚೋಳಿ ಕ್ಷೇತ್ರದ ಕಾಂಗ್ರೇಸ್ ಶಾಸಕರಾದ ಶ್ರೀ ಉಮೇಶ್ ಜಾದವ್ ಅವರು ತಮ್ಮ ವಯಕ್ತಿಯ ಕಾರಣಗಳಿಂದಾಗಿ ಕೆಲವು ದಿನಗಳ ಹಿಂದೆ ಖುದ್ದಾಗಿ ತಮ್ಮ ಮನೆಗೆ ಆಗಮಿಸಿ ತಮ್ಮ ವಿಧಾನಸಭಾ ಸದ್ಯಸ್ಯಕ್ಕೆ ರಾಜಿನಾಮೆ ಕೊಟ್ಟಿದ್ದು ಎಲ್ಲರಿಗೂ ತಿಳಿದ ವಿಷಯ. ಒಳ್ಳೆಯ ಜ್ಞಾನಿಗಳೂ, ವಾಗ್ಮಿಗಳೂ ಮತ್ತು ಅತ್ಯುತ್ತಮ ಸಂಸದೀಯ ಪಟುವಾದ ನೀವು ಅವರ ರಾಜೀನಾಮೆಯನ್ನು ಸ್ವೀಕರಿಸಿ ಕಾನೂನಿನ ಪ್ರಕಾರ ಆದಷ್ಟು ಬೇಗನೇ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಅವರಿಗೆ ತಿಳಿಸಿ ಅದರ ಪ್ರಕಾರವಾಗಿಯೇ ಕಾನೂನು ಸಂಬಂಧ ಪಟ್ಟವರ ಬಳಿ ವಿಚಾರಿಸಿ, ಮಾನ್ಯ ಶಾಸಕರಿಗೆ ಕೆಲವು ದಾಖಲೆಗಳನ್ನು ಪ್ರಸ್ತುತ ಪಡಿಸಲು ತಿಳಿಸಿ ಅದರಂತೆ ನೆನ್ನೆ ಒಂದು ಐತಿಹಾಸಿಕವಾದ ವಿಚಾರಣೆ ನಡೆಸಿದ್ದೀರಿ. ನಭೂತೋ ನ ಭವಿಷ್ಯತಿ ಎನ್ನುವಂತೆ ಚುಂಚೋಳಿ ಕ್ಷೇತ್ರದ ಕೆಲವು ಆಯ್ದ ಮತದಾರನನ್ನು ನಿಮ್ಮ ಕಚೇರಿಗೆ ಕರೆಸಿ ಈ ರಾಜೀನಾಮೆಗೆ ಅವರ ಪ್ರತಿಕ್ರಿಯೆಯನ್ನೂ ಕೇಳುವ ಮೂಲಕ ಭಾರತದ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಅವರ ಆಣತಿಯಂತೆಯೇ ಎಲ್ಲವೂ ನಡೆಯುತ್ತದೆ ಎಂಬುದನ್ನು ಎತ್ತಿ ಸಾರಿದಿರಿ. ಹಾಗೆ ಬಂದಿದ್ದ ಎಲ್ಲರೂ ನಾವೆಲ್ಲರೂ ಮನಃ ಪೂರ್ವಕವಾಗಿಯೇ ಎರಡು ಬಾರಿ ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ. ಕ್ಷೇತ್ರದಲ್ಲಿ ಇನ್ನೂ ಸಾಕಾಷ್ಟು ಕೆಲಸಗಳು ಆಗಬೇಕಾಗಿದೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೀತಿಯಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಬೇರೊಂದು ಪಕ್ಷದ ವತಿಯಿಂದ ಲೋಕಸಭೆಗೆ ಸ್ಪರ್ಧಿಸುತ್ತಿರುವುದು ಅವರನ್ನು ಆಯ್ಕೆ ಮಾಡಿ ಕಳುಹಿಸಿದ ನಮ್ಮಂತಹವರಿಗೆ ಮಾಡುವ ದ್ರೋಹ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಮತ್ತೊರ್ವ ಮುಸ್ಲಿಂ ಮಹಿಳೆ ಜಾದವ್ ಅವರ ರಾಜಿನಾಮೆ ನಿಕಾಹ್ ಮಾಡಿಕೊಂಡು ಅರ್ಧದಲ್ಲಿ ಕೈಬಿಟ್ಟು ಓಡಿ ಹೋದವರಿಗೆ ಹೋಲಿಸಿ ಮಾತಾನಾಡಿದ್ದಾರೆ.

ಈ ಎಲ್ಲಾ ಹೇಳಿಕೆಗಳನ್ನು ಕೂಲಂಕುಶವಾಗಿ ಸಮಾಧಾನ ಚಿತ್ತದಿಂದ ಆಲೈಸಿ ಅದನ್ನು ದಾಖಲಿಸಿ ಈ ಸಮಸ್ಯೆಯನ್ನು ಸೂಕ್ತ ಸಮಯದಲ್ಲಿ ಐತಿಹಾಸಿಕವಾಗಿ ಸೂಕ್ತವಾದ ರೀತಿಯಲ್ಲಿ ಪರಿಹರಿಸುತ್ತೇನೆ ಎಂದು ತಿಳಿಸಿ ನಿಮ್ಮ ತೀರ್ಪನ್ನು ಕಾಯ್ದಿರಿಸಿದ್ದೀರಿ.

ಇದೀಗ ತಾನೇ ತಿಳಿದು ಬಂದ ಮತ್ತೊಂದು ಆಘಾತಕಾರಿ ವಿಷಯವೇನೆಂದರೆ, ಬೆಂಗಳೂರಿನ ಉತ್ತರ ಕ್ಷೇತ್ರದ ದಲ್ಲಿ ಜೆ.ಡಿ.ಎಸ್ ಮತ್ತು ಕಾಂಗ್ರೇಸ್ ಹೊಂದಾಣಿಕೆ ಮಾಡಿಕೊಂಡು ಜೆಡಿಎಸ್ ಪಕ್ಷದಿಂದ ಸನ್ಮಾನ್ಯ ದೇವೇಗೌಡರೇ ಸ್ವರ್ಧಿಸುವರೆಂಬ ಸುದ್ದಿ ಇತ್ತು. ಆದರೆ ದೇವೆಗೌಡರು ತಮ್ಮ ಈ ಇಳೀ ವಯಸ್ಸಿನಲ್ಲಿಯೂ ತಮ್ಮ ರಾಜಕೀಯ ಭದ್ರತೆಗಾಗಿ ಈ ಕ್ಷೇತ್ರ ಸೂಕ್ತವಲ್ಲ ಎಂದು ನಿರ್ಧರಿಸಿ, ಕೊಟ್ಟ ಕುದುರೆಯನ್ನು ಏರಲಾದವನು ಧೀರನೂ ಅಲ್ಲಾ, ಶೂರನಂತೂ ಅಲ್ಲವೇ ಅಲ್ಲಾ ಎಂಬಂತೆ ತಮ್ಮ ಪಕ್ಷದ ಅಭ್ಯರ್ಥಿಯನ್ನು ನಿಲ್ಲಿಸದೆ, ಪುನಃ ಕಾಂಗ್ರೇಸ್ ಪಕ್ಷಕ್ಕೇ ಹಿಂದಿರುಗಿಸಿದ ಪರಿಣಾಮವಾಗಿ, ಕಾಂಗ್ರೇಸ್ ಪಕ್ಷ ತಮ್ಮ ಪಕ್ಷದ ಅಭ್ಯರ್ಥಿಯಾಗಿ ಬ್ಯಾಟರಾಯನಪುರದ
ವಿಧಾನ ಸಭಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿ ಸದ್ಯ ಸಮ್ಮಿಶ್ರ ಸರ್ಕಾರದಲ್ಲಿ ಮಂತ್ರಿಗಳೂ ಆಗಿರುವ ಶ್ರೀ ಕೃಷ್ಣ ಭೈರೇಗೌಡರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಈಗ ತಮ್ಮ ಐತಿಹಾಸಿಕ ನಿರ್ಣಯದ ಪ್ರಕಾರವೇ ಪ್ರಜೆಗಳೇ ಪ್ರಭುಗಳು ಮತ್ತು ಅವರ ಮಾತನ್ನೇ ಆಲಿಸಬೇಕೆಂದರೆ, ನಿಮ್ಮದೇ ಪಕ್ಷದ ನಿಮ್ಮ ಊರಿನ ಪಕ್ಕದವರೇ ಆದ ನಿಮ್ಮ ಸ್ನೇಹಿತನ ಮಗನಾದ, ಶ್ರೀ ಕೃಷ್ಣ ಭೈರೇಗೌಡರ ಲೋಕಸಭಾ ಸ್ಪರ್ಧೆಯನ್ನು ಯಾವ ರೀತಿಯಾಗಿ ನೀವು ಸಭಾಧ್ಯಕ್ಷರಾಗಿ ಸಮರ್ಥನೆ ಮಾಡಿಕೊಳ್ಳುತ್ತೀರಿ. ಒಂದು ಪಕ್ಷ, ಮತ್ತೊಮ್ಮೆ ಹೇಳುತ್ತಿದ್ದೇನೆ ಒಂದು ಪಕ್ಷ, ಶ್ರೀ ಕೃಷ್ಣ ಭೈರೇಗೌಡರ ಲೋಕಸಭೆಗೆ ಆಯ್ಕೆಯಾದ ಪಕ್ಷದಲ್ಲಿ ಅವರು ವಿಧಾನ ಸಭಾ ಸದ್ಯಸ್ಯತ್ವಕ್ಕೆ ಖಂಡಿತವಾಗಿಯೂ ನಿಮ್ಮ ಬಳಿಯೇ ಬಂದು ರಾಜೀನಾಮೆ ಕೊಡಲೇ ಬೇಕಾಗುತ್ತದೆ. ಆಗ ಆವರ ರಾಜೀನಾಮೆ ಅಂಗೀಕರಿಸಲು ಯಾವ ಮಾನದಂಡ ಅನುಸರಿಸುತ್ತೀರಿ. ಮೂರು ಸಾರಿ ಶಾಸಕರಾಗಿ ಎರಡು ಬಾರಿ ರಾಜ್ಯದಲ್ಲಿ ಪ್ರಭಾವೀ ಮಂತ್ರಿಗಳಾಗಿದ್ದರೂ, ಬೆಂಗಳೂರಿನ ನಗರದ ಪರಿಧಿಯಲ್ಲಿದ್ದರೂ ಇನ್ನೂ ಅವರ ಕ್ಷೇತ್ರ ಅಭಿವೃದ್ಧಿ ಮರೀಚಿಕೆಯಾಗಿದೆ. ಹಾಗಾಗಿ ಅವರಿಗೆ ಇಲ್ಲಿಯೇ ಮಾಡಲು ಸಾಕಷ್ಟು ಕೆಲಸ ಕಾರ್ಯಗಳು ಇರುವಾಗ ಅವರನ್ನು ಆಯ್ಕೆಮಾಡಿ ಕಳುಹಿಸಿದ ಕ್ಷೇತ್ರದ ಜನರ ವಿರುದ್ಧವಾಗಿ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಿರುವುದು ಎಷ್ಟು ಸರಿ? ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆಯುವ ಮರುಚುನಾವಣೆಯ ಅನಗತ್ಯಾವಾಗಿ ಆಗುವ ಖಚ್ಬು, ವೆಚ್ಚವನ್ನು ಭರಿಸುವವರು ಯಾರು? prevention is better than cure ಎನ್ನುವ ಆಂಗ್ಲ ಗಾದೆಯಂತೆ ಒಬ್ಬ ವಿಧಾನ ಸಭಾಧ್ಯಕ್ಷರಾಗಿ ನಿಮ್ಮದೇ ಮಾತೃ ಪಕ್ಷದ (ಸಭಾಧ್ಯಕ್ಷರಾಗುವ ಮುನ್ನ ಪಕ್ಷಕ್ಕೆ ರಾಜೀನಾಮೆ ನೀಡುವ ಸಂಪ್ರದಾಯವಿದ್ದರೂ) ಮಂತ್ರಿಗಳನ್ನು ಕರೆದು ಬುದ್ದಿವಾದ ಹೇಳಬಹುದಲ್ಲವೇ. ಅವರ ಬದಲಾಗಿ ಬೇರೊಬ್ಬರನ್ನು ಅಭ್ಯರ್ಥಿಗಳನ್ನಾಗಿ ಮಾಡಲು ಅತ್ಯಂತ ಪುರಾತನ ರಾಷ್ಟ್ರೀಯ ಪಕ್ಷದವರಿಗೆ ಜೆಡಿಎಸ್ ನಂತೆ ಬರವೇ?

ಆಭ್ಯರ್ಥಿಗಳು ನಾಮಪತ್ರ ಸಲ್ಲಿಸಲೂ ಇಂದೇ ಕೊನೆಯ ದಿನ ಹಾಗಾಗಿ ಈ ಕುರಿತಂತೆ ಆದಷ್ಟು ಬೇಗ ನೀವು ನಿರ್ಧಾರ ತೆಗೆದುಕೊಂಡು ಮತ್ತೊಮ್ಮೆ ನೀವು ಪಕ್ಷಾತೀತ ಮತ್ತು ಪ್ರಶ್ನಾತೀತ ಸಭಾಧ್ಯಕ್ಷರೆಂದು ಪ್ರಜಾಪಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂಬುದನ್ನು ಎತ್ತಿ ತೋರಿಸುತ್ತೀರಿ ಎಂದು ಭಾವಿಸಿದ್ದೇನೆ.

ಇಂತಿ ಮನ ನೊಂದ

ಬ್ಯಾಟರಾಯನಪುರ ವಿಧಾನ ಸಭಾ ಕ್ಷೇತ್ರದ ಮತದಾರ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s