ಸಂತ ಶ್ರೇಷ್ಠ ಶ್ರೀ ರಾಜಾರಾಮರ ಜಯಂತಿ

ಹದಿನೇಳನೇ ಶತಮಾನದಲ್ಲಿ ಪರಕೀಯರ ಆಕ್ರಮಣಕ್ಕೆ ತುತ್ತಾದ ನಮ್ಮ ದೇಶ ಧಾರ್ಮಿಕವಾಗಿಯೂ ಮತ್ತು ಸಂಸ್ಕೃತಿಕವಾಗಿಯೂ ಅಧೋಗತಿಯಲ್ಲಿ ಸಾಗುತ್ತಿದ್ದಾಗ ಶ್ರೀಮಾರ್ತಾಂಡ ದೀಕ್ಷೀತರು ಮತ್ತು ಲಕ್ಷ್ಮೀದೇವಿಯವರ ತಪಸ್ಸಿನ ಫಲವಾಗಿ ದೈವಾನುಗ್ರಹದಿಂದ ದೈವಾಂಶ ಸಂಭೂತರಾಗಿ ಶ್ರೀ ಚಿದಂಬರ ಮಹಾಸ್ವಾಮಿಗಳು ಮುರುಗೋಡದಲ್ಲಿ ಜನಿಸಿದರು.

ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಬಹಳ ಬೇಗ ಅಪಾರ ಭಕ್ತವೃಂದವನ್ನು ಗಳಿಸಿದ ಮಹಾಸ್ವಾಮಿಗಳು ತಮ್ಮ ಲೀಲೆಯಿಂದ ಕಾಲ ಕಾಲಕ್ಕೆ ಮಳೆ ಬೆಳೆ ಆಗುವಂತೆ ನೋಡಿಕೊಂಡು ಎಲ್ಲರೂ ಸುಸಂಸ್ಕೃತರಾಗಿ, ಸುಭೀಕ್ಷವಾಗಿರುವಂತೆ ನೋಡಿಕೊಂಡರು. ಅವರು ಬೆಳೆಸಿದ ಅನೇಕ ಶಿಷ್ಯವೃಂದದಲ್ಲಿ ಸಂತ ಶ್ರೇಷ್ಠ ರಾಜಾರಾಮರು ಅಗ್ರಗಣ್ಯರು. ಶ್ರೀ ರಾಜಾರಾಮರು ಗುರುಗಳ ಭಕ್ತಿಮಾರ್ಗದ ಪರಂಪರೆಯನ್ನು ಮುಂದುವರಿಸಿದ್ದಲ್ಲದೆ, ಜನರನ್ನು ಒಗ್ಗೂಡಿಸಲು ಸಹಸ್ರಾರು ಅಭಂಗಗಳನ್ನು ರಚಿಸಿ ಅಭಂಗಗಳನ್ನು ಅಭ್ಯಸಿಸುವ ಸಹಸ್ರಾರು ಭಜನಾ ಮಂಡಳಿಗಳ ಮೂಲಕ ಲಕ್ಷಾಂತರ ಭಕ್ತ ಸಮೂಹವನ್ನು ಮಹಾರಾಷ್ಟ್ರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹುಟ್ಟು ಹಾಕಿದರು. ಮುಂದೆ ಲೋಕಮಾನ್ಯ ತಿಲಕರು ಸ್ವಾತಂತ್ರ್ಯ ಚಳುವಳಿಯ ಸಂಧರ್ಭದಲ್ಲಿ ಬ್ರಿಟಿಷರ ವಿರುದ್ಧ ಜನಸಾಮಾನ್ಯರನ್ನು ಒಗ್ಗೂಡಿಸಲು ಇದೇ ಮಾರ್ಗವನ್ನು ಅನುಸರಿಸಿ ಸಾರ್ವಜನಿಕವಾಗಿ ಗಣೇಶೋತ್ಸವವನ್ನು ಆಚರಿಸುವ ಪದ್ದತಿಯನ್ನು ಜಾರಿಗೆ ತಂದರು. ಈ ಮೂಲಕ ಆಧ್ಯಾತ್ಮಿಕವಾಗಿ ಜನರರನ್ನು ಒಗ್ಗೂಡಿಸಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ ಹರಿಕಾರರಾಗಿ ಸಂತ ಶ್ರೇಷ್ಠ ರಾಜಾರಾಮರು ಪ್ರಸಿದ್ಧಿಯಾದರು.

ದೇಶಾದ್ಯಂತ ನೆಲೆಸಿರುವ ಲಕ್ಷಾಂತರ ಚಿದಂಬರ ಸ್ವಾಮಿಗಳ ಅನುಯಾಯಿಗಳು ಸಂತ ರಾಜಾರಾಮರ ಜಯಂತಿಯನ್ನು ಪ್ರತೀ ವರ್ಷವೂ ಬಹಳ ಅದ್ದೂರಿಯಿಂದ ಆಚರಿಸುತ್ತಾರೆ. ಅದರಂತೆಯೇ, ನೆನ್ನೆ ಬೆಂಗಳೂರಿನ ಯಲಹಂಕದಲ್ಲಿ ನಡೆದ ಅಂತಹ ಒಂದು ಕಾರ್ಯಕ್ರಮಕ್ಕೆ ನನ್ನ ಪೂರ್ವ ಜನ್ಮದ ಸುಕೃತವೋ ಎನ್ನುವಂತೆ ಭಾಗವಹಿಸಲು ಸಾಧ್ಯವಾಯಿತು. ಸತತವಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಕಾರ್ಯಕ್ರಮಕ್ಕೆ ನಮ್ಮ ಸ್ನೇಹಿತರು ಆಹ್ವಾನಿಸುತ್ತಿದ್ದರಾದರೂ ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗಿರಲಿಲ್ಲವಾದ್ದರಿಂದ ಈ ಬಾರಿ ಖಂಡಿತವಾಗಿಯೂ ಭಾಗವಸಲೇ ಬೇಕೆಂಬ ಉತ್ಕಟ ಆಸೆಯಿಂದ ಕಾರ್ಯಕ್ರಮಕ್ಕೆ ಸ್ವಲ್ಪ ತಡವಾಗಿಯೇ ಹೋದರೂ ಕಾರ್ಯಕ್ರಮಕ್ಕೆ ಭಾಗವಸಿದ್ದರ ಸಾರ್ಥಕತೆ ದೊರೆಯಿತು. ಶನಿವಾರ ಸಂಜೆ ಮೂರ್ನಾಲ್ಕು ಗಂಟೆಗಳ ಭಜನೆಯಿಂದ ಆರಂಭವಾದ ಕಾರ್ಯಕ್ರಮ, ಭಾನುವಾರಕ್ಕೂ ಮುಂದುವರಿದು ಬೆಳಿಗ್ಗೆ ಲಿಂಗಸ್ವರೂಪಿ ಚಿದಂಬರರಿಗೆ ರುದ್ರಾಭಿಷೇಕ ನಡೆದು ಮತ್ತು ಅವರ ಪಾದುಕೆಗಳಿಗೆ ಅಚ್ಚುಕಟ್ಟಾದ ಪೂಜೆ ನಡೆದು, ನಂತರ ಮಧ್ಯಾಹ್ನ ವೇಳೆಗೆ ಸಂತ ರಾಜಾರಾಮರನ್ನು ತೊಟ್ಟಿಲಿಗೆ ಹಾಕಿ ಅವರಿಗೆ ಪ್ರಹ್ಲಾದ, ಉದ್ದವ, ತುಕಾರಂ, ನಾಮದೇವ್ ಮತ್ತು ರಾಜಾರಾಮ ಎಂಬ ಐದು ಹೆಸರನಿಂದ ನಾಮಕರಣ ಮಾಡಿ ಆ ಕಾರ್ಯಕ್ರಮಕ್ಕೆ ಬಂದ ಹೆಂಗಳೆಯರೆಲ್ಲರೂ ಬಾಲ ಸ್ವರೂಪಿ ರಾಜಾರಾಮರ ತೊಟ್ಟಿಲು ತೂಗುವ ಶಾಸ್ತ್ರ ನಿಜಕ್ಕೂ ರಮಣೀಯವಾಗಿತ್ತು. ಇದರ ಜೊತೆಯಲ್ಲಿ ಅಬಾಲ ವೃದ್ಧರಾದಿಯಾಗಿ ಎಲ್ಲರೂ ರಾಜಾರಾಮರ ಅಂಭಂಗಗಳನ್ನು ತಾಳ ವಾದ್ಯಗಳೊಂದಿಗೆ ಸಂಕೀರ್ತನೆ ಮಾಡುತ್ತಾ ಭಕ್ತಿಯಲ್ಲಿ ಪರಮಾವಶದಲಿ ಮಿಂದು ತಲ್ಲೀನರಾಗಿ ನರ್ತನೆ ಮಾಡುತ್ತಿದ್ದದ್ದು ಎಲ್ಲರ ಗಮನ ಸೆಳೆಯುತ್ತಿತ್ತು. ಅಭಂಗಗಳ ಕಂಠಪಾಠವಿದ್ದವರು ಎತ್ತರದ ಧನಿಯಲ್ಲಿ ಹಾಡುತ್ತಿದ್ದರೆ ಬಾರದಿರುವವರೂ ಕೂಡ ತಮಗೇ ಅರಿವಿಲ್ಲದಂತೆಯೇ ತಲೆ ತೂಗಿಸುತ್ತಿದ್ದದ್ದು ಆ ಆಭಂಗಗಳ ಸತ್ವವನ್ನು ಎತ್ತಿ ತೋರಿಸುತ್ತಿದ್ದವು.

ಯಾವುದೇ ಒಂದು ಕಾರ್ಯಕ್ರಮ ಯಶಸ್ವಿಯಾಗಲು ಉತ್ತಮ ತಂಡ ಇರಬೇಕು ಮತ್ತು ಆವರೆಲ್ಲರ ಮನಸ್ಥಿತಿಗಳು ಒಂದೇ ಆಗಿರಬೇಕು ಜೊತೆಗೆ ಎಲ್ಲರೂ ಕೈಜೋಡಿಸ ಬೇಕು. ಅಂತಹ ಸಮ್ಮಿಳನ ಈ ಕಾರ್ಯಕ್ರಮದಲ್ಲಿ ಎದ್ದು ಕಾಣುತ್ತಿತ್ತು. ಸಭಾಂಗಣದ ಮುಂಭಾಗದಲ್ಲಿಯೇ ಬಂದವರೆಲ್ಲರ ನೋಂದಾವಣೆ ಮಾಡಿಕೊಳ್ಳುತ್ತಿದ್ದರೆ ಮತ್ತೊಬ್ಬರು ಎಲ್ಲರ ಹಣೆಗೆ ತಿಲಕವನ್ನು ಇಟ್ಟು ಸ್ವಾಗತಿಸುತ್ತಿದ್ದದ್ದು ಮೆಚ್ಚುಗೆ ಪಡೆಯುತ್ತಿತ್ತು. ಎಲ್ಲಾ ಸ್ವಯಂ ಸೇವರಕರೂ ತಮ್ಮ ವಯೋ ಸಯಜಕ್ಕೆ ಅನುಗುಣವಾಗಿ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಕಾರ್ಯಕ್ರಮದ ಒಂದು ಮೂಲೆಯಲ್ಲಿ ಚಿದಂಬರರು ಮತ್ತು ರಾಜಾರಾಮರ ಕುರಿತಾದ ಪುಸ್ತಕಗಳು ಭಜನಾ ಧ್ವನಿಸುರಳಿಗಳು ಹಾಗೂ ಉತ್ತರ ಕರ್ನಾಟಕ ಶೈಲಿಯ ಕೆಲವು ತಿಂಡಿ ತಿನಿಸುಗಳು ವ್ಯಾಪಾರಕ್ಕೆ ಲಭ್ಯವಿದ್ದವು. ಒಂದು ಕಡೆ ಪೂಜೆ ಪುನಸ್ಕಾರಗಳು ಮತ್ತು ಭಜನೆಗಳು ಹೃನ್ಮನಗಳನ್ನು ತಣಿಸುತ್ತಿದ್ದರೆ, ಸವಿರುಚಿಯಾದ ಊಟ, ಪ್ರಸಾದ ರೂಪದಲ್ಲಿ ಎಲ್ಲರ ನಾಲಿಗೆ ಬರವನ್ನು ಕಳೆದ್ದದ್ದಲ್ಲದೆ ಹೊಟ್ಟೆಯನ್ನು ತುಂಬಿಸಿದವು. ಪ್ರಸಾದ ವಿನಿಯೋಗ ಸಮಯದಲ್ಲೂ ವಯಸ್ಕರಿಗೆ ವೇದಿಕೆಯ ಹಿಂಭಾಗದಲ್ಲಿ ಮತ್ತು ಇತರ ಶಕ್ತ ಭಕ್ತಾದಿಗಳಿಗೆ ಮಹಡಿಯ ಮೇಲೆ ಯಾವುದೇ ರೀತಿಯ ನೂಕಾಟ ಅಥವಾ ತಳ್ಳಾಟಗಳಿಲ್ಲದೆ ವಿತರಣೆ ಮಾಡಿದ್ದು ಕಾರ್ಯಕ್ರಮದ ಅಚ್ಚುಕಟ್ಟು ತನವನ್ನು ಸಾರಿ ಹೇಳುತ್ತಿತ್ತು. ನಮ್ಮ ಮನೆಗಳಲ್ಲಿ ನಡೆಯುವ ಸಣ್ಣ ಪುಟ್ಟ ಸಮಾರಂಭಗಳಲ್ಲಿಯೇ 150-200 ಮಂದಿಯನ್ನು ಸಂತೈಸಲು ಕಷ್ಟ ಪಡುವ ಇಂದಿನ ಪರಿಸ್ಥಿತಿಯಲ್ಲಿ ಸರಿ ಸುಮಾರು 600-800 ಜನ ಒಂದು ಕಡೆ ಸೇರಿಸಿ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಕೀರ್ತಿ ಆಯೋಜಕರಿಗೆ ಸಲ್ಲುತ್ತದೆ.

ಈ ಕಾರ್ಯಕ್ರಮಕ್ಕೆ ಕೇವಲ ಚಿದಂಬರರ ಅನುಯಾಯಿಗಳಲ್ಲದೆ ಹೆಸರಾಂತ ಸಂಗೀತ ವಿದ್ವಾಂಸರಾದ ಶ್ರೀ ವಿನಾಯಕ ತೊರವಿಯವರು, ಹೆಸರಾಂತ ವಕೀಲರು ಮತ್ತು ಕರ್ನಾಟಕ ರಾಜ್ಯದ ಮಾಜಿ ಅಡ್ಬೊಕೇಟ್ ಜನರಲ್ ಶ್ರೀ ಅಶೋಕ್ ಹಾರ್ನಳ್ಳಿಯವರು ಇಡೀ ದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾಜಾರಾಮರ ಅಭಂಗಗಳ ಹೊಸಾ ಧ್ವನಿ ಸುರಳಿಯನ್ನು ಅನಾವರಣ ಗೊಳಿಸಿದರೆ, ನಿವೃತ್ತ ನ್ಯಾಯಾಧೀಶರು ಮತ್ತು ಬಿಹಾರದ ಮಾಜೀ ರಾಜ್ಯಪಾಲರಾದ ಶ್ರಿ ರಾಮಾಜೋಯಿಸ್ ಅವರು ಮತ್ತು ಥಟ್ ಅಂತಾ ಹೇಳಿ ಖ್ಯಾತಿಯ ನಾ. ಸೋಮೇಶ್ವರ್ ಅವರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು ಎಂದರೆ ತಪ್ಪಾಗಲಾರದು.

ಇಂದಿನ ದಿನಗಳಲ್ಲಿ ಬಹುಪಾಲು ಯುವಕರು ಹಣದ ಹಿಂದೆಯೇ ಹೋಗುವ ಪರಿಣಾಮ ಧಾರ್ಮಿಕ ಕಾರ್ಯಗಳೇ ಗೌಣವಾಗಿರುವಂತಹ ಸಂಧರ್ಭದಲ್ಲಿ ಚಿದಂಬರ ಸ್ವಾಮಿಗಳ ಅನುಯಾಯಿಗಳ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ಹೆಚ್ಚಿನ ಮಹತ್ವವನ್ನು ಪಡೆಯುತ್ತವೆ ಎಂದರೆ ಅತಿಶಯೋಕ್ತಿಯೇನಲ್ಲ. ಇಂತಹ ಕಾರ್ಯಕ್ರಮಗಳು ಆಗ್ಗಿಂದ್ದಾಗೆ ಎಲ್ಲಾ ಕಡೆಯಲ್ಲೂ ನಡೆಯುವಂತಾದರೆ, ಭಾರತ ಮತ್ತೊಮ್ಮೆ ವಿಶ್ವ ವಂದಿತ ಗುರುವಾಗುವುದರಲ್ಲಿ ಸಂದೇಹವೇ ಇಲ್ಲ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s