ಸಮಸ್ತ ಹಿಂದೂಗಳ ಹೃದಯ ಸಾಮ್ರಾಟ, ಮರ್ಯಾದ ಪುರುಶೋತ್ತಮ, ದಶರಥ ಪುತ್ರ, ಶ್ರೀ ರಾಮಚಂದ್ರ ಪ್ರಭು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ತ್ರೇತಾಯುಗದಲ್ಲಿ ಸರಯೂ ನದಿ ತಟದ ಅಯೋಧ್ಯೆಯಲ್ಲಿ ಜನಿಸಿದ ದಿನ. ಈ ದಿನವನ್ನು ದೇಶಾದ್ಯಂತ ಭಕ್ತಿಭಾವದಿಂದ, ಶ್ರಧ್ಧಾ ಪೂರ್ವಕವಾಗಿ ಬಹಳ ಸಂಭ್ರಮದಿಂದ ಹಬ್ಬವಾಗಿ ಆಚರಿಸುತ್ತಾರೆ. ಕರ್ನಾಟಕದ ಬಹಳಷ್ಟು ಮನೆಗಳಲ್ಲಿ ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯ ಅಂದರೆ ಯುಗಾದಿ ದಿನದಿಂದ ಮುಂದಿನ ಒಂಭತ್ತು ದಿನ ಅಂದರೆ ನವಮಿ, ರಾಮ ನವಮಿಯವರೆಗೆ ಪ್ರತೀ ದಿನ ರಾಮಾಯಣ ಪಾರಾಯಣ ಮಾಡಿ, ನವಮಿ ದಿನದಂದು ರಾಮ ಪಟ್ಟಾಭಿಷೇಕ ಪಾರಾಯಣ ಮಾಡಿ ಬಂಧು ಮಿತ್ರರ ಒಡಗೂಡಿ ರಾಮೋತ್ಸವ ಮಾಡಿ ಹಬ್ಬವನ್ನು ಆಚರಿಸುತ್ತಾರೆ.
ಉತ್ತರ ಕರ್ನಾಟಕದ ಕಡೆ ರಾಮ ನವಮಿಯಂದು ರಾಮನ ವಿಗ್ರಹವನ್ನು ತೊಟ್ಟಿಲಲ್ಲಿಟ್ಟು ಆರತಿ ಬೆಳಗಿ ಮನೆಯ ಹೆಂಗಳೆಯರೆಲ್ಲರೂ ತೊಟ್ಟಿಲು ತೂಗುವ ಸಂಪ್ರದಾಯವೂ ರೂಢಿಯಲ್ಲಿದೆ.
ಇನ್ನು ದೇವಸ್ಥಾನ ಮತ್ತು ಸಾರ್ವಜನಿಕವಾಗಿ ರಾಮ, ಸೀತೆ, ಲಕ್ಷಣ ಮತ್ತು ಆಂಜನೇಯರನ್ನು ಒಳಗೊಂಡ ರಾಮ ಪಟ್ಟಾಭಿಷೇಕದ ವಿಗ್ರಹವನ್ನೋ ಇಲ್ಲವೇ ಫೋಟೋವನ್ನು ಇಟ್ಟು ಷೋಡಶೋಪಚಾರದಿಂದ ಪೂಜೆಮಾಡಿ ಊರ ತುಂಬಾ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ನಂತರ ನೆರೆದಿದ್ದ ಎಲ್ಲರಿಗೂ ಪಾನಕ ಕೋಸಂಬರಿ, ಹಣ್ಣಿನ ರಸಾಯನ ಮತ್ತು ಹುಳಿಯವಲಕ್ಕಿ (ಗೊಜ್ಜವಲಕ್ಕಿಯ) ಪ್ರಸಾದ ಹಂಚುವುದರೊಂದಿಗೆ ಸಂಭ್ರಮದಿಂದ ಆಚರಿಸುತ್ತಾರೆ. ಇನ್ನು ಸಂಜೆ ಎಲ್ಲಾ ದೇವಾಲಯಗಳಲ್ಲಿ ರಾಮನ ಭಜನೆ, ಭಕ್ತಿಗೀತೆಗಳು ಇಲ್ಲವೇ ಸಂಗೀತ ಕಾರ್ಯಕ್ರಮದ ಮೂಲಕ ರಾಮನ ಧ್ಯಾನ ಮಾಡುತ್ತಾರೆ.
ಸಂಗೀತ ಪ್ರಿಯರಿಗಂತೂ ರಾಮ ನವಮಿ ಬಂದಿತೆಂದರೆ ಸಂಗೀತದ ರಸದೌತಣ. ದಕ್ಷಿಣ ಭಾರತದ ಬಹುತೇಕ ದೊಡ್ಡ ನಗರಗಳಲ್ಲಿ ದೊಡ್ಡ ದೊಡ್ಡ ರಾಮನಮಮಿ ಪೆಂಡಾಲ್ ಹಾಕಿಸಿ ರಾಮ ನವಮಿ ಸಂಗೀತ ಕಛೇರಿಗಳು ಕೆಲವು ಕಡೆ ವಾರಗಟ್ಟಲೆ ನಡೆದರೆ, ಹಲವಾರು ಕಡೆ ತಿಂಗಳುಗಟ್ಟಲೆ ಕಛೇರಿ ನಡೆಯುತ್ತದೆ. ಇಂತಹ ಸಭಾ ಕಛೇರಿಗಳಲ್ಲಿ ಹಾಡಲು ಅವಕಾಶ ಸಿಗುವುದೇ ಹೆಮ್ಮೆಯ ಸಂಗತಿ ಎಂದು ತಿಳಿದ ಹೆಸರಾಂತ ಸಂಗೀತಗಾರರು, ಅತ್ಯಂತ ಶ್ರಧ್ಧೆಯಿಂದ ತಿಂಗಳಾನು ಗಟ್ಟಲೆ ತಾಲೀಮ್ ನಡೆಸಿ ಅವಕಾಶ ಸಿಕ್ಕಂದು ಹೃದಯ ಬಿಚ್ಚಿ ಹಾಡುತ್ತಾ , ಸಂಗೀತರಸಿಕರ ಮನಸ್ಸನ್ನು ತಣಿಸುತ್ತಾರೆ. ಮೈಸೂರಿನ ಅರಮಮನೆಯ ಸಂಗೀತ ಕಛೇರಿ ಮತ್ತು ಬೆಂಗಳೂರಿನ ಚಾಮರಾಜಪೇಟೆ ರಾಮ ಸೇವಾ ಮಂಡಳಿಯವರ ರಾಮ ನವಮಿ ಸಂಗೀತ ಕಛೇರಿಗಳು ಹೆಸರುವಾಸಿಯಾಗಿವೆ.
ಇನ್ನು ಉತ್ತರ ಭಾರತದಲ್ಲಿ ಈ ಒಂಭತ್ತೂ ದಿನಗಳನ್ನು ನವರಾತ್ರಿ ಎಂದು ಕರೆದು ಬಹುತೇಕರು ಒಂಭತ್ತು ದಿನಗಳೂ ಉಪವಾಸ ವ್ರತ (ಬೆಳಗಿನಿಂದ ರಾತ್ರಿಯವರೆಗೂ ಉಪವಾಸ. ರಾತ್ರಿ ಫಲಾಹಾರ ಇಲ್ಲವೇ ಸ್ವಾತಿಕ ಆಹಾರ) ಮಾಡುತ್ತಾ ಅತ್ಯಂತ ಭಕ್ತಿ ಮತ್ತು ಭಕ್ತಿಪೂರ್ವಕವಾಗಿ ಆಚರಿಸುತ್ತಾರೆ. ಇನ್ನು ನಮಮಿಯಂದು ರಾಮನ ಮೂರ್ತಿಗಳನ್ನು ಮತ್ತು ಮಕ್ಕಳಿಗೆ ರಾಮನ ವೇಷಭೂಷಣಗಳನ್ನು ತೊಡಿಸಿ ಬಾರೀ ಅದ್ದೂರಿಯಾಗಿ ನಗರಾದ್ಯಂತ ಬಾಜಾ ಭಜಂತ್ರಿಯೊಂದಿಗೆ ಊರ ತುಂಬಾ ಮೆರವಣಿಗೆ ಮಾಡಿ ಸಂಭ್ರಮಿಸುತ್ತಾರೆ.
ನಮ್ಮ ಬಹುತೇಕ ಹಬ್ಬಗಳು ಮನೆಯ ನಾಲ್ಕು ಗೋಡೆಗಳ ಮಧ್ಯೆ ಕೇವಲ ಕುಟುಂಬಸ್ತರ ಸಮ್ಮುಖದಲ್ಲಿ ಆಚರಿಸಲ್ಪಟ್ಟರೆ, ಗಣೇಶೋತ್ಸವ, ಕನ್ನಡ ರಾಜ್ಯೋತ್ಸವ ಮತ್ತು ರಾಮ ನವಮಿ ಹಬ್ಬಗಳು ಮಾತ್ರ ಇದಕ್ಕೆ ತದ್ವಿರುದ್ದವಾಗಿ ಯಾವುದೇ ಜಾತಿ, ಧರ್ಮ, ಭಾಷೆಗಳ ಗೊಡವೆಯಿಲ್ಲದೆ ಎಲ್ಲರೂ ಒಗ್ಗೂಡಿ ಆಚರಿಸುವ ಹಬ್ಬವಾಗಿದೆ ಎಂದರೆ ತಪ್ಪಾಗಲಾರದು. ಕೂಲಿ ಕಾರ್ಮಿಕರು, ಆಟೋ ಡ್ರೈವರ್ಗಳು ಎಲ್ಲರೂ ತಮ್ಮ ಕೈಲಾದ ಮಟ್ಟಿಗೆ ಹಣ ಸಂಗ್ರಹಣೆ ಮಾಡಿ ರಸ್ತೆ ಬದಿಯಲ್ಲೇ ತಳಿರು ತೋರಣ ಕಟ್ಟಿ ರಾಮನ ಫೋಟೋ ಇಟ್ಟು ಭಕ್ತಿಯಿಂದ ಶ್ರೀರಾಮನ ಪೂಜೆ ಮಾಡುತ್ತಾರೆ. ನಂತರ ಸುಡುವ ಬೇಸಿಗೆಯ ಬಿಸಿಲಿಗೆ ತಂಪು ಮಾಡುವಂತೆ ತಂಪಾದ ಬೇಲದ ಹಣ್ಣಿನ ಪಾನಕ. ಈಗ ಬೇಲದ ಹಣ್ಣು ಯಥೇಚ್ಚವಾಗಿ ಸಿಗದ ಕಾರಣ ನಿಂಬೇಹಣ್ಣು ಇಲ್ಲವೇ ಕರ್ಬೂಜ ಹಣ್ಣಿನ ಪಾನಕ. ಜೊತೆಗೆ ಕೊತ್ತಂಬರಿ, ಶುಂಠಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿದ ನೀರು ಮಜ್ಜಿಗೆ ಹೇಳಿ ಮಾಡಿಸಿದ ಹಾಗಿರುತ್ತದೆ. ಇದರ ಜೊತೆ ಕಡಲೇ ಬೇಳೆ ಇಲ್ಲವೇ ಹೆಸರು ಬೇಳೆಯ ಜೊತೆಗೆ, ಸೌತೇಕಾಯಿ ಇಲ್ಲವೇ ಕ್ಯಾರೆಟ್ ತುರಿ ಬೆರೆಸಿ ರುಚಿ ಮತ್ತು ಘಂ ಎನ್ನುವ ಸುವಾಸನೆ ಬರಲು ಇಂಗು ಮತ್ತು ತೆಂಗಿನ ಒಗ್ಗರಣೆ ಹಾಕಿದ ಕೊಸಂಬರಿಯನ್ನು ಪ್ರಸಾದ ರೂಪದಲ್ಲಿ ಹಂಚಿ ಸಂಭ್ರಮದಿಂದ ಸಡಗದಿಂದ ರಾಮನವಮಿಯನ್ನು ಎಲ್ಲರೊಡಗೂಡಿ ಆಚರಿಸುವುದನ್ನು ಹೇಳುವುದಕ್ಕಿಂತ ಆ ಆಚರಣೆಯಲ್ಲಿ ಭಾಗಿಯಾಗಿ ಅದನ್ನು ಅನುಭವಿಸಿದರೇ ಸಿಗುವ ಮಜವೇ ಬೇರೆ.
ನಮ್ಮ ಸಹಿಷ್ಣುತೆಯೇ ನಮ್ಮ ದೌರ್ಬಲ್ಯವೆಂದು ತಿಳಿದು ನಮ್ಮ ದೇಶದ ಮೇಲೆ ಹಲವಾರು ವಿದೇಶಿಯರು ಆಕ್ರಮಣ ಮಾಡಿ ನಮ್ಮ ದೇವಾಲಯಗಳು, ಧಾರ್ಮಿಕ ಕೇಂದ್ರಗಳನ್ನು ನಾಶ ಪಡಿಸಿದ್ದಾರೆ ಮತ್ತು ನಮ್ಮ ಸಂಸ್ಕೃತಿಯನ್ನು ಬದಲಾಯಿಸಲು ಪ್ರಯತ್ನಿಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯನ್ನು ಪಡೆದಿದ್ದಾರೆ. ಅದರೆ ನಮ್ಮ ಸನಾತನ ಸಂಸ್ಕೃತಿಯ ತಳಹದಿ ಸುಭದ್ರವಾಗಿಗುವ ಕಾರಣ ಇಂದಿಗೂ ನಮ್ಮ ಆಚಾರ ವಿಚಾರಗಳು ಸಮಯ ಸಂಧರ್ಭಕ್ಕೆ ತಕ್ಕಂತೆ ಅಲ್ಪ ಸ್ವಲ್ಪ ಬದಲಾಗಿದ್ದರೂ ಮೂಲ ಉದ್ದೇಶದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಚಾಚೂ ತಪ್ಪದೆ ಆಚರಿಸಿಕೊಂಡು ಬರುತ್ತಿದ್ದೇವೆ. ವಸುದೈವ ಕುಟುಂಬಕಂ ಅಂದರೆ ಇಡೀ ವಿಶ್ವವೇ ಒಂದು ಕುಟುಂಬ ಎಂಬುದನ್ನು ಜಗತ್ತಿಗೆ ಸಾರಿ ಹೇಳಲು ಇಂತಹ ಹಬ್ಬಗಳು ಮಹತ್ವಪೂರ್ಣವಾಗಿವೆ.
ಏನಂತೀರೀ?
Well written article. Such articles are important for younger generation who need to know about our festivals & our culture. Language & expression is very good.
LikeLiked by 1 person