ಶ್ರೀರಾಮ ನವಮಿಯ ಪಾನಕದ ಪಜೀತಿ

ಸಮಸ್ತ ಬಂಧು ಬಾಂಧವರಿಗೂ ಮತ್ತು ಸ್ನೇಹಿತರಿಗೂ  ಶ್ರೀರಾಮ ನವಮಿಯ ಹಾರ್ಧಿಕ ಶುಭಾಶಯಗಳು.  ಪ್ರಭು ಶ್ರೀರಾಮನ ಅನುಗ್ರಹ ನಮ್ಮೆಲ್ಲರ ಮೇಲೆ ಇದ್ದು, ನಮ್ಮೆಲ್ಲಾ ಇಚ್ಛೆಗಳನ್ನು ಪೂರೈಸಲಿ.  ಬಹುಶಃ ಇಷ್ಟು ಹೊತ್ತಿಗೆ ಎಲ್ಲರ ಮನೆಯಲ್ಲಿ ಅಥವಾ ಸಮೀಪದ ದೇವಾಲಯಗಳಲ್ಲಿ ಅಥವಾ ನಿಮ್ಮ ಬಡಾವಣೆಯಲ್ಲಿ ಶ್ರೀರಾಮನ ಪೂಜೆ ಪುನಸ್ಕಾರಗಳು ಮುಗಿದು ಪಾನಕ ಕೋಸಂಬರಿಯ ಪ್ರಸಾದ ಸವಿದಿರುತ್ತೀರೆಂದು ಭಾವಿಸುತ್ತೇನೆ. ಪಾನಕ ಅದೂ ರಾಮನವಮಿ ಪಾನಕವೆಂದರೆ ನನಗೆ ಒಂದು ರೋಚಕ ಅನುಭವ ನೆನಪಾಗುತ್ತದೆ. ಅಂತಹ ರಸಾನುಭವವನ್ನೇ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ತೊಂಬತ್ತರ ದಶಕ. ನಾನಾಗ ಕಾಲೇಜಿನಲ್ಲಿದ್ದೆ.  ರಾಮ ನವಮಿ ಹಬ್ಬಕ್ಕೆ ಸರಿಯಾಗಿ ನಮ್ಮ ಕಾಲೇಜಿನಲ್ಲಿ ಪ್ರಿಪರೇಟರಿ ಪರೀಕ್ಷೆಗಳು ನಡೆಯುತ್ತಿದ್ದು  ಬೆಳಿಗ್ಗೆ ಮನೆಯಲ್ಲಿ   ಅಮ್ಮನಿಗೆ ಪಾನಕ, ಕೂಸಂಬರಿ, ರಸಾಯನ ಮತ್ತು ಹುಳಿಯವಲಕ್ಕಿ ತಯಾರು ಮಾಡುವುದರಲ್ಲಿ  ಸಹಾಯ ಮಾಡಿ ರಾಮ ನವಮಿ ಪೂಜೆ ಆದ ಪ್ರಸಾದ ಸ್ವೀಕರಿಸಿದ ನಂತರ ಅವುಗಳನ್ನು ದೊನ್ನೆಗಳಲ್ಲಿ ಹಾಕಿ ನನ್ನ ಪಾಡಿಗೆ ನಾನು ನನ್ನ ಕೋಣೆಯಲ್ಲಿ  ಓದು ಕೊಳ್ಳುತ್ತಿದ್ದೆನಾದರೂ, ಮನೆಗೆ ಬಂದು ಹೋಗುತ್ತಿದ್ದವರ ಮಾತು ನನ್ನ ಕಿವಿಯ ಮೇಲೆ ಬೀಳುತ್ತಿತ್ತು.

ನಮ್ಮ ಮನೆಯ ಹತ್ತಿರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ   ದಂಪತಿಗಳು ಮತ್ತವರ ಇಬ್ಬರು ಗಂಡು ಮಕ್ಕಳು ಬಾಡಿಗೆಗೆ ಹೊಸದಾಗಿ ಬಂದಿದ್ದರು.  ಹಬ್ಬದ ದಿನ ಮೇಷ್ಟ್ರು ನಮ್ಮ ಮನೆಯ ರಾಮನವಮಿಗೆ ಬಂದಿದ್ದವರು ಹಾಗೇ ಲೋಕಾಭಿರಾಮವಾಗಿ ಮಾತಾನಾಡುತ್ತಾ ಪ್ರಸಾದ ಎಲ್ಲ ಸ್ವೀಕರಿಸಿದ ನಂತರ ಎಲ್ಲಿ ಮನೆಯಲ್ಲಿ ಯಾರೂ ಕಾಣ್ತಾ ಇಲ್ಲವಲ್ಲಾ?  ಎಂದು ಕೇಳಿದಾಗ, ಮಗ ಒಳಗೆ  ಅವನ ಕೋಣೆಯಲ್ಲಿ ಓದುಕೊಳ್ಳುತ್ತಿದ್ದಾನೆ ಎಂದರು ನಮ್ಮ ಅಮ್ಮ.  ಓ ಹೌದೇ, ಎಂದು ಹೇಳಿ ಧಡಕ್ಕನೆ ನನ್ನ ರೂಮಿನೊಳಗೆ ನುಗ್ಗಿದ ಮೇಷ್ಟ್ರು, ರಾಮ ನವಮಿಯ ಶುಭಾಶಯಗಳು.  ಏನಯ್ಯಾ, ಹಬ್ಬದ ದಿನವೂ ಓದ್ತಾ ಇದ್ದೀಯಾ. ಭೇಷ್ ಭೇಷ್. ಚೆನ್ನಾಗಿ ಓದಬೇಕು ಎಂದು ಹೇಳಿ. ಸರಿ ಬಾ ನಮ್ಮ ಮನೆಯ ರಾಮನನ್ನು ನೋಡಿ ಬರುವಿಯಂತೆ ಎಂದರು.  ಮೇಷ್ಟ್ರೇ,  ಈಗ ಓದುತ್ತಾ ಇದ್ದೀನಿ. ಸ್ವಲ್ಪ ಸಮಯದ ನಂತರ ಬರ್ತೀನಿ ಅಂತಾ ಹೇಳಿದರೂ ಕೇಳದೆ, ಬಾರಯ್ಯಾ,  ನಿನ್ನ ಬಗ್ಗೆ ನನಗೆ ಗೊತ್ತಿಲ್ಲವಾ, ಅಮೇಲೆ ನೀನು ಏನೋ ಸಬೂಬು ಹೇಳಿಕೊಂಡು ಬರುವುದೇ ಇಲ್ಲ. ಬ್ರಹ್ಮಚಾರಿಗಳಿಗೂ ಪ್ರಸಾದ ಕೊಟ್ಟರೆ ಪುಣ್ಯ ಬರುತ್ತದೆ ಎಂದು ಹೇಳಿ ನನ್ನನ್ನು ಬಲವಂತ ಮಾಡಿಕೊಂಡು ಕರೆದು ಕೊಂಡು ಹೊರಟೇ ಬಿಟ್ಟರು. ನಮ್ಮ ಅಮ್ಮನೂ ಕೂಡಾ ವಯಸ್ಸಾದವರ ಹತ್ತಿರ ಅಷ್ಟೊಂದು ಹೇಳಿಸಿಕೊಳ್ಳಬಾರದು. ಬೇಗ ಹೋಗಿ ಬಂದು ಬಿಡು ಎಂದಾಗ. ಸರಿ ಎಂದು ಹಾಕಿಕೊಂಡಿದ್ದ ನಿಕ್ಕರ್ ಮೇಲೆಯೇ ಪಂಚೆ ಉಟ್ಟುಕೊಂಡು ಮೇಷ್ಟ್ರ ಮನೆಗೆ  ಹೋದೆ.

ಮೇಷ್ಟ್ರು ಬರುವುದನ್ನೇ ಕಾಯುತ್ತಿದ್ದ  ಅವರ ಮನೆಯಾಕೆ, ಓ ಬಂದ್ರಾ, ಒಂದೈದು ನಿಮಿಷ ಮಾತಾಡ್ತಾ ಇರಿ. ನಾನು ಪಕ್ಕದ ಮನೆಗೆ ಅರಿಶಿನ  ಕುಂಕುಮಕ್ಕೆ ಹೋಗಿ ಬಂದು  ಬಿಡ್ತೀನಿ ಎಂದು ಹೇಳಿ ಪಕ್ಕದ ಮನೆಗೆ ಹೊರಟೇ ಬಿಟ್ಟರು. ಸರಿ ನಾನು ಹತ್ತು ಹದಿನೈದು ನಿಮಿಷಗಳು ಕಾದರೂ ಮೇಡಂ ಅವರು ಬರಲಿಲ್ಲವಾದ್ದರಂದ ಸರಿ ಮೇಷ್ಟ್ರೇ, ಸ್ವಲ್ಪ ಹೊತ್ತಾದ ಮೇಲೆ ಬರ್ತೀನಿ ಎಂದು ಹೇಳಿ ದೇವರ ಮನೆಯ ರಾಮ ದೇವರಿಗೆ ನಮಸ್ಕರಿಸಿ ಹೊರಡಲು ಅನುವಾದೆ. ಹೇ.. ಇರಪ್ಪಾ ನಮ್ಮವಳು ಬಂದು ಬಿಡ್ತಾಳೆ.  ಒಂದು ನಿಮಿಷ ಇರು. ಪಾನಕ ತಂದು ಕೊಡ್ತೀನಿ. ಪಾನಕ ಕುಡಿದು ಮುಗಿಸುವಷ್ಟರಲ್ಲಿ ಅವಳು ಬಂದು ಬಿಡ್ತಾಳೆ ಎಂದು ಹೇಳಿ, ಅಡುಗೆ ಮನೆಯಿಂದ ಕೆಂಬಣ್ಣದ ಪಾನಕ ತಂದು ಕೈಗಿತ್ತು ಪಕ್ಕದಲ್ಲಿ  ಕುಳಿತು ಕುಡಿ ಎಂದರು. ಸರಿ ಪಾನಕ ಕುಡಿಯೋಣ ಎಂದು ಮೊದಲನೇ ಗುಟುಕನ್ನು ಬಾಯಿಗೆ ಹಾಕಿಕೊಂಡರೆ, ಅದು ಪಾನಕದ ರೀತಿಯಿಲ್ಲ. ಏನೂ ಒಂತಾರ  ಒಗರು ಓಗರು, ಕಹಿ, ಹುಳಿ ಎಲ್ಲರದರ ಸಮ್ಮಿಳನ. ಸರಿ ಮಾತನಾಡಿದರೆ ಸುಮ್ಮನೆ ತೊಂದರೆ ಸಿಕ್ಕಿ ಹಾಕಿ ಕೊಳ್ತೀನಿ ಅಂತ  ಪಾನಕದ ಲೋಟವನ್ನು ಪಕ್ಕಕ್ಕೆ ಇಟ್ಟೆ. ನಾನು ಹಾಗೆ ಕುಡಿಯದೇ ಇಟ್ಟಿದ್ದನ್ನು ನೋಡಿದ ಮೇಷ್ಟ್ರು, ಅರೇ ಪಾನಕನೇ ಕುಡಿಲಿಲ್ಲಾ. ಯಾಕೆ ಪಾನಕ ಸೇರಲ್ವಾ? ಅದಕ್ಕೆ ನಿಂಬೆ ಹಣ್ಣಿನ ಪಾನಕ ಬೇಡ ಅಂತಾ ರಸ್ನಾ  ಮಾಡಿಸಿದ್ದು. ಕುಡಿ ಕುಡಿ ಅಂತಾ ಬಲವಂತ ಮಾಡಿಸಿ ಪಾನಕ ಕುಡಿಸಿಯೇ ಬಿಟ್ಟರು. ಬಿಸಿ ತುಪ್ಪ ನುಂಗುವ ಹಾಗಿಲ್ಲ ಬಿಡುವ ಹಾಗಿಲ್ಲ ಅನ್ನುವಹಾಗೆ ಇದು ಪಾನಕ ಅಲ್ಲಾ ಅಂತಾ ಹೇಳುವುದಕ್ಕೇ ಆಗುತ್ತಿಲ್ಲಾ ಮತ್ತು  ಕುಡಿಯಲು ಆಗುತ್ತಿಲ್ಲ.  ಗಂಟಲೆಲ್ಲಾ ಉರಿ, ಹೊಟ್ಟೆ ತೊಳೆಸುತ್ತಿದೆ. ಏನೂ ಮಾಡದ ಪರಿಸ್ಥಿತಿಯಲ್ಲಿ ಸಿಲುಕಿಕೊಂಡು ಹಾಗೂ ಹೀಗೂ ಮಾಡಿ  ಅರ್ಧ ಲೋಟ ಕುಡಿಯುವಷ್ಟರಲ್ಲಿ ಮೇಡಂ ಅವರು ಬಂದು ನನ್ನನ್ನು ನೋಡಿ,  ಅಯ್ಯೋ  ಬೇಜಾರು ಮಾಡಿಕೊಳ್ಳಬೇಡಪ್ಪಾ ಸ್ವಲ್ಪ ತಡ ಆಗಿಹೋಯ್ತು.  ಇರು ಪಾನಕ ಕೋಸಂಬರಿ ಕೊಡ್ತೀನಿ ಅಂತ  ದೇವರ ಮನೆಗೆ ಹೋದ್ರು. ಅದಕ್ಕೆ ಅವರ ಯಜಮಾನರು ಬರೀ ಕೋಸಂಬರಿ ಕೊಡು. ಪಾನಕ ಆಗಲೇ ಕೊಟ್ಟಿದ್ದೀನಿ ಎಂದರು. ಹಾಂ ಪಾನಕ ಕೊಟ್ರಾ,  ಎಲ್ಲಿಂದ ಕೊಟ್ರೀ?  ಪಾನಕದ ಲೋಟಗಳೆಲ್ಲಾ ಇಲ್ಲೇ ಇದೆ ಎಂದಾಗ, ಅದೇ ಅಡುಗೆ ಮನೆಯಲ್ಲಿ ಒಲೆ ಪಕ್ಕದಲ್ಲಿದ್ದ ಪಾತ್ರೆಯಿಂದ ಲೋಟಕ್ಕೆ ಹಾಕಿ ಕೊಟ್ಟೆ ಎಂದರು ಮೇಷ್ಟ್ರು. ಅಯ್ಯೋ ಅದ್ಯಾಕ್ರೀ ಕೊಟ್ರೀ. ಅದು ಪಾನಕ ಅಲ್ಲಾ. ಅದು ಕೈ ನೀರು  ಅದ್ದುಕೊಳ್ಳುವ ಪಾತ್ರೆ. ಬಾತ್ ಕಲೆಸಿದ ಮೇಲೆ ಕೈ ತೊಳೆದುಕೊಂಡ ನೀರು ಎಂದು ನನಗೂ  ಕೇಳುವ ಹಾಗೆ ಹೇಳಿದೊಡನೆ,  ನನಗೆ ಹೊಟ್ಟೆ ತೊಳೆಸಿ, ವ್ಯಾಕ್ ಎಂದು ವಾಂತಿ ಮಾಡಿಕೊಳ್ಳಬೇಕೆನಿಸಿತು.  ಮಗೂ ಏನು ತಿಳಿದುಕೊಳ್ಳ ಬೇಡ. ಮೇಷ್ಟ್ರಿಗೆ ತಿಳಿಯದಲೇ ಕೊಟ್ಟು ಬಿಟ್ಟಿದ್ದಾರೆ  ಎಂದು ಸಮಾಧಾನ ಪಡಿಸಲು ಯತ್ನಿಸಿದರು. ಮೇಷ್ಟರ ಮುಖದಲ್ಲಿ  ಸುಮ್ಮನೆ ಮನೆಯಲ್ಲಿ ಓದುತ್ತಿದ್ದ ಹುಡುಗನನ್ನು ಕರೆತಂದು ಈ ರೀತಿಯ ಪಜೀತಿಗೆ ಒಳಪಡಿಸಿದನಲ್ಲಾ ಎಂಬ ಪಶ್ಚಾತ್ತಾಪ ಎದ್ದು ಕಾಣುತ್ತಿತ್ತು. ನನ್ನ ಮುಖ ಇಂಗು ತಿಂದ ಮಂಗನಂತಾಗಿತ್ತು.

ಎಪ್ಪತ್ತು ಎಪ್ಪತ್ತೆರಡು ವಯಸ್ಸಿನ ಮೇಷ್ಟ್ರಿಗೆ ಕಣ್ಣು  ಅಷ್ಟೊಂದು ಸರಿಯಾಗಿ ಕಾಣಿಸುತ್ತಿರಲಿಲ್ಲ. ಆವರು ಅದಾಗಲೇ ದಪ್ಪನೆಯ ಸೋಡಾ ಗ್ಲಾಸ್ ಕನ್ನಡಕ ಹಾಕಿಕೊಳ್ಳುತ್ತಿದ್ದರು.  ಅವರಿಗೆ ಮೇಡಂನವರು ದೇವರ ಮನೆಯಲ್ಲಿ ಪಾನಕ ಕೊಸಂಬರಿ ಇಟ್ಟಿರುವುದು ಗೊತ್ತಿರದೆ, ಅಡುಗೆ ಮನೆಯಲ್ಲಿ ಬಾತ್ ಕಲೆಸಿ  ಕೈ ಅದ್ದುಕೊಂಡು  ಬಣ್ಣವಾಗಿದ್ದ ನೀರನ್ನೇ ಪಾನಕ ಎಂದು ತಿಳಿದು ನನಗೆ ಕೊಟ್ಟುಬಿಟ್ಟಿದ್ದರು. ಸರಿ ಎದ್ದನೋ ಬಿದ್ದನೋ ಎನ್ನುವಂತೆ ಕೋಸಂಬರಿ ಪಾನಕ ತೆಗೆದುಕೊಂಡು ಅವರ ಮನೆಯಲ್ಲಿ ಏನನ್ನೂ ತಿನ್ನದೆ ಮನೆಗೆ ಬಂದು ವಾಂತಿ ಮಾಡಿದ ಮೇಲೆಯೇ ಸ್ವಲ್ಪ ಸಮಾಧಾನವಾಯಿತು. ಅಷ್ಟು ಹೊತ್ತಿಗೆ ನಮ್ಮ ತಂಗಿಯಂದಿರೂ ಮನೆಗೆ ಬಂದು ನೆಡೆದದ್ದೆಲ್ಲವನ್ನು ಕೇಳಿ ತಿಳಿದು ಹೊಟ್ಟೆ ತುಂಬಾ ನಕ್ಕಿದ್ದೇ ನಕ್ಕಿದ್ದು.  ಬೆಕ್ಕಿಗೆ ಚೆಲ್ಲಾಟ, ಇಲಿಗೆ ಪ್ರಾಣ  ಸಂಕಟ ಎನ್ನುವ ಪರಿಸ್ಥಿತಿ ನನ್ನದಾಗಿತ್ತು.  ಅವತ್ತು ಇಡೀ ದಿನ ಏನನ್ನೇ ತಿಂದರೂ ಅದೇ ಒಗರು ರುಚಿಯೇ ನನ್ನ ಮನಸ್ಸಿಗೆ ಬಂದು ಇಡೀ ದಿನ  ಸರಿಯಾಗಿ ತಿನ್ನಲೇ ಆಗಲಿಲ್ಲ.

ಅಂದಿನಿಂದ ಎಲ್ಲೇ ಹೋಗಲಿ,  ಪಾನಕ ಕೊಡ್ತಾ ಇದ್ರೇ ಅಥವಾ ರಾಮನವಮಿ ಬಂದ್ರೆ, ಈ ಪ್ರಸಂಗ ನನ್ನ ಸ್ಮೃತಿ ಪಟಲದಲ್ಲಿ ಹಾದು ಹೋಗುತ್ತದೆ. ಅದಕ್ಕಾಗಿ ಈಗೆಲ್ಲಾ, ಅಕ್ಕ ಪಕ್ಕದವರು ಪಾನಕ  ಕುಡಿದ ಮೇಲೆಯೇ  ಅವರ ಮುಖ ನೋಡಿದ ಮೇಲೆಯೇ ನಾನು ಪಾನಕ ಕುಡಿಯುವುದು . ಅಂದಿನಿಂದ ಬೆಳ್ಳಗಿರುವುದು ಹಾಲಲ್ಲ ಎಂಬ ಗಾದೆ ಜೊತೆಗೆ  ಬಣ್ಣದ ನೀರೆಲ್ಲಾ ಪಾನಕವಲ್ಲ ಎಂದು ನಾನೇ ಜೋಡಿಸಿಕೊಂಡೆ. ಅದಕ್ಕೇ ನಮ್ಮ ಹಿರಿಯರು ಹೇಳಿರುವುದು ಪ್ರತ್ಯಕ್ಷಿಸಿ ನೋಡಿದರೂ ಪ್ರಮಾಣಿಸಿ ನೋಡು ಅಂತಾ. ವೇದ ಸುಳ್ಳಾದರೂ ಗಾದೆ ಸುಳ್ಳಲ್ಲಾ ಅಲ್ಲವೇ?

ಏನಂತೀರೀ?

One comment

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s