ಏಪ್ರಿಲ್ 18 ಮತ್ತು 23 ರಂದು ಕರ್ನಾಟಕಾದ್ಯಂತ ಲೋಕಸಭಾ ಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿ ಮಾಡುವುದು ಸಾಂವಿಧಾನಿಕವಾಗಿ ಕಡ್ಡಾಯವಾಗಿರುವ ಕಾರಣ, ಎಲ್ಲರೂ ಯಾವುದೇ ಕುಂಟು ನೆಪಗಳಿಲ್ಲದೆ, ಮತ ಚಲಾವಣೆ ಮಾಡಬೇಕಾಗಿ ಸವಿನಯ ಪ್ರಾರ್ಥನೆ.
ಚುನಾವಣಾ ದಿನ ಬೆಳಿಗ್ಗೆ ರಜೆ ಎಂದು ತಡವಾಗಿ ಎದ್ದು ಕಾಪಿ ಗೀಪಿ ಕುಡ್ಕಂಡು… ಓ ಸೋ ಹಾಟ್ ಅಂತಾನೋ ಇಲ್ಲಾ ಅಪರೂಪಕ್ಕೆ ಬೀಳ್ತಾ ಇರೋ ಸೋನೆ ಮಳೆ ನೆಪ ಒಡ್ಡಿ …ಯಾರ್ ಹೋಗ್ತಾರೆ ವೋಟ್ ಹಾಕಕ್ಕೆ? ಯಾರ್ ಬಂದ್ರೂ ನಮಗೇನು? ಅಂತ ಕಾಲ್ ಮೇಲೆ ಕಾಲ್ ಚಾಚಿ ಕೂರೋ ಜನಕ್ಕೋ ಅಥವಾ ಸಾಲು ಸಾಲು ರಜೆ ಇದೇ ಅಂತಾ ಊರು ಬಿಟ್ಟು ಪ್ರವಾಸಕ್ಕೆ ಹೋಗಿ ಮಜಾ ಮಾಡೋ ಮಂದಿಗೆ ಈ ಕಠೋರ ಸತ್ಯ ಗೊತ್ತಿರ್ಲಿ.
ಚುನಾವಣೆ ಪ್ರಕ್ರಿಯೆ ಆರಂಭವಾಗುವ ಮುಂಜೆಯೇ ಉದ್ಯೋಗಿಗಳು ಬಹಳಷ್ಟು ಶ್ರಮವಹಿಸಿರುತ್ತಾರೆ. ಚುನಾವಣಾ ಆಯೋಗದ ಲಕ್ಷೋಪಲಕ್ಷ ಆಡಳಿತ ವರ್ಗದ ಸಿಬ್ಬಂದಿಗಳು, ಸರ್ಕಾರಿ ನೌಕರರು, ಶಾಲಾ ಕಾಲೇಜು ಶಿಕ್ಷಕ, ಶಿಕ್ಷಕಿರು, ಪೋಲಿಸರು, ಎಲ್ಲರಿಗೂ ಎರಡು ಮೂರು ತಿಂಗಳುಗಳ ಹಿಂದೆಯೇ ಚುನಾವಣಾ ಪ್ರಕ್ರಿಯೆ ಮತ್ತು ಮತದಾನದ ಯಂತ್ರದ ಬಗ್ಗೆ ಸಾಕಷ್ಟು ತರಭೇತಿ ನೀಡಿರುತ್ತಾರೆ. ಚುನಾವಣಾ ಹಿಂದಿನ ದಿನ ಈ ಎಲ್ಲಾ ಸಿಬ್ಬಂಧಿಗಳೂ ನಿಗದಿತ ಜಾಗದಲ್ಲಿ ಸೇರಿ ಚುನಾವಣೆ ನಡೆಸಲು ಬೇಕಾದ ಅಗತ್ಯ ವಸ್ತುಗಳನ್ನು ಸ್ವತಃ ತೆಗೆದುಕೊಂಡು ಬಿಸಿಲಿನಲ್ಲಿ ಒಣಗುತ್ತಾ ಸರಿಯಾದ ಊಟವೂ ಇಲ್ಲದೇ, ತಮಗೆ ವಹಿಸಿದ ಪ್ರದೇಶ ಮತ್ತು ಬೂತ್ ಗೆ ಹೋಗಿ ಎಲ್ಲವನ್ನೂ ಕಣ್ಣಳತೆಯಲ್ಲೇ ಇರಿಸಿಕೊಂಡು ರಾತ್ರಿ ಅಲ್ಲೇ ಮಲಗಿ ಮತದಾನದ ದಿನ ಬೆಳ್ಳಂ ಬೆಳಿಗ್ಗೆಯೇ ಎದ್ದು ಮತದಾನಕ್ಕೆ ಸಿದ್ಧತೆ ನಡೆಸಿ ಮತದಾರರಾದ ನಮ್ಮೆಲ್ಲರ ಬರುವಿಕೆಯನ್ನೇ ಕಾಯುತ್ತಿರುತ್ತಾರೆ. ಇನ್ನು ಹಳ್ಳಿ ಕಡೆ ಕರ್ತ್ಯವ್ಯ ಇರುವವರ ಪಾಡು ಹೇಳ ತೀರದು. ಸರಿಯಾದ ಊಟ, ತಿಂಡಿ, ನೀರು, ಶೌಚಾಲಯ, ಮಲಗಲು ಜಾಗ ಎಲ್ಲವೂ ಸಿಕ್ಕರೆ ಸಿಕ್ಕಿತು ಇಲ್ಲದಿದ್ದರೆ ಇಲ್ಲ. ಮತದಾನ ಮುಗಿದ ನಂತರ ಮತದಾನ ಯಂತ್ರಗಳನ್ನು ಭಧ್ರಪಡಿಸಿ ಅದನ್ನು ಹಿಂದಕ್ಕೆ ವಾಪಾಸು ತಲುಪಿಸಿ ಮನೆ ಸೇರುವ ಹೊತ್ತಿಗೆ ಮಧ್ಯ ರಾತ್ರಿ ಅಥವಾ ಮಾರನೇಯ ದಿನ ಆದರೂ ಆದೀತು….
ಮತದಾನ ಹೇಗೆ ಕಡ್ಡಾಯವೋ ಹಾಗೆಯೇ, ಮತದಾನದ ಪ್ರಕ್ರಿಯೆಯಲ್ಲಿ ಈ ರೀತಿಯಾಗಿ ಪಾಲ್ಗೊಳ್ಳುವುದು ಈ ಸಿಬ್ಬಂಧಿಗಳಿಗೆ ಕಡ್ಡಾಯವಾಗಿರುವ ಕಾರಣ, ಹಸುಗೂಸು, ಮಕ್ಕಳು ಮರಿ, ಮನೆ, ಜವಾಬ್ದಾರಿ, ತಮ್ಮ ಅನಾರೋಗ್ಯ, ಮುಟ್ಟು-ಚಟ್ಟು ಎಲ್ಲವನ್ನೂ ಮೀರಿ ಈ ದೇಶದ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುವ ಕಾರ್ಯದಲ್ಲಿ ಈ ಎಲ್ಲಾ ದೇಶ ಸೇವಕರ ಪಾತ್ರ ಅನನ್ಯ ಮತ್ತು ಅಭಿನಂದನೀಯ.
ಮತದಾನದ ದಿನ ಎಂದರೆ ಅದು ಪ್ರಜಾಪ್ರಭುತ್ವದ ಹಬ್ಬದ ದಿನ. ನಾವು ಹೇಗೆ ನಮ್ಮ ನಮ್ಮ ಹಬ್ಬಗಳ ದಿನ ಬೆಳ್ಳಂ ಬೆಳಿಗ್ಗೆಯೇ ಎದ್ದು ಮನೆಮಂದಿಯೆಲ್ಲ ಸಂಭ್ರಮದಿಂದ ಹಬ್ಬದಲ್ಲಿ ತೊಡಗುತ್ತೇವೆಯೋ ಹಾಗೆಯೇ, ಮತದಾನದ ದಿನ ಮನೆಯಲ್ಲಿರುವ ಅರ್ಹ ಮತದಾರರೆಲ್ಲಾ, ತಮ್ಮ ಹತ್ತಿರದ ಮತದಾನಕ್ಕೆ ಸ್ವಯಂ ಪ್ರೇರಿತರಾಗಿ ಹೋಗಿ, ಯಾವುದೇ ಆಮೀಷಕ್ಕೊಳಗಾಗದೇ, ಇವ ನಮ್ಮ ಧರ್ಮದವ, ಇವ ನಮ್ಮ ಜಾತಿಯವ, ಇವ ನಮ್ಮ ಕೋಮು, ನಮ್ಮ ಪಂಗಡ, ನಮ್ಮ ಭಾಷಿಗ, ಇವ ನಮ್ಮ ಸಂಬಂಧಿ, ನಮ್ಮ ನೆರೆಯವ ಎಂದು ನೋಡದೇ, ಸರದಿಯ ಸಾಲಿನಲ್ಲಿ ಶಾಂತರೀತಿಯಿಂದ ನಿಂತು, ಯಾರು ನಮ್ಮ ದೇಶ, ಸಂಸ್ಕೃತಿ ಮತ್ತು ನಮ್ಮ ಜನರನ್ನು ನೋಡಿಕೊಳ್ಳಲು ಸಮರ್ಥರೋ, ಅಂತಹವರಿಗೇ ನಿರ್ಭಯವಾಗಿ ಮತ್ತು ಗೌಪ್ಯವಾಗಿ ಮತ ಚಲಾಯಿಸೋಣ. ಸರದಿಯ ಸಾಲಿನಲ್ಲಿ ವಿಕಲಾಂಗರಿಗೆ, ಹಿರಿಯನಾಗರೀಕರಿಗೆ ಮತ್ತು ನಮ್ಮ ದೇಶ ಕಾಯೋ ಯೋಧರಿಗೆ ಮೊದಲ ಆದ್ಯತೆ ನೀಡಿ ಅವರು ಮತದಾನ ಮಾಡಿದ ನಂತರ ನಾವು ಮತದಾನ ಮಾಡೋಣ.
ಇಂದು ಯಾವುದೋ ಕಟ್ಟು ಪಾಡಿಗೆ ಒಳಗಾಗಿಯೋ ಇಲ್ಲವೇ ಆಮೀಷಕ್ಕೆ ಒಳಗಾಗಿಯೋ ನಮ್ಮ ಪವಿತ್ರವಾದ ಹಕ್ಕನ್ನು ಮಾರಿಕೊಂಡಲ್ಲಿ ನಮ್ಮ ಆ ಒಂದು ತಪ್ಪಿಗಾಗಿ ಮುಂದಿನ ಐದು ವರ್ಷಗಳು ಇಡೀ ದೇಶವೇ ಪರಿತಪಿಸಬೇಕಾಗ ಬಹುದು. ಆದ್ದರಿಂದ ಮತದಾನ ನಮ್ಮೆಲ್ಲರ ಹಕ್ಕು. ನಮ್ಮ ಒಂದೊಂದು ಮತದ ಮೌಲ್ಯವೂ, ಬೆಲೆ ಕಟ್ಟಲಾಗದಷ್ಟಿದೆ. ಹಾಗಾಗಿ ಎಲ್ಲರೂ ಖಡ್ಡಾಯವಾಗಿ ಮತದಾನ ಮಾಡೋಣ ಮತ್ತು ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯೋಣ.
ಮತದಾನದ ದಿನದಂದು ನಮ್ಮ ಬೆರಳಿಗೆ ಮಸಿ ಅಂಟದಿದ್ದರೆ, ನಾಳೆ ದೇಶದ ಭವಿಷ್ಯಕ್ಕೇ ಮಸಿ ಅಂಟೀತು. ಹಾಗಾಗಿ ಪ್ರಜ್ಞಾವಂತರಾದ ನಾವೆಲ್ಲಾ ನೋಟಿಗೂ, ನೋಟಾಗೂ ಅಲ್ಲದೇ ಕೇವಲ ಭಾರತದ ಉಜ್ವಲ ಭವಿಷ್ಯದ ನೋಟಕ್ಕಾಗಿ ತಪ್ಪದೇ, ಸಕುಟಂಬ ಸಮೇತರಾಗಿ ನಮ್ಮ ಸಂಬಂಧಿಕರು, ಹಾಗೂ ನಮ್ಮ ಸುತ್ತಮುತ್ತಲಿನವರು ಹಾಗೂ ನಮ್ಮ ಹಿತೈಷಿಗಳ ಒಳಗೊಂಡಂತೆ ಎಲ್ಲರೂ ಕೂಡ ಬೆಳಗ್ಗೆ 10:30ರ ಒಳಗಾಗಿ ತಪ್ಪದೆ ಮತದಾನ ಮಾಡೋಣ.
ಮತದಾನದ ನಂತರ ನಮ್ಮ ಬೆರಳ ಮೇಲಿನ ಶಾಹಿಯ ಜೊತೆಗೆ ನಮ್ಮದೊಂದು Seifie ಯನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ (Whats app status, Facebook, Instagram etc..,) ಹಾಕುವುದರ ಮೂಲಕ ನಾವು ಮಾಡಿದ ಮತದಾನದ ಬಗ್ಗೆ ಹೆಮ್ಮೆ ಪಡೋಣ ಮತ್ತು ಇತರರಿಗೆ ಮತದಾನದ ಬಗ್ಗೆ ಪ್ರೇರೇಪಿಸುವಂತಾಗೋಣ.
ಹಾಷ್ಟ್ಯಾಗ್ #VoteForNation #ComeAndVote #MyVoteMyRight ಇತ್ಯಾದಿ ಉಪಯೋಗಿಸಿದರೆ ಇನ್ನೂ ಅತ್ಯುತ್ತಮವಾಗಿರುತ್ತದೆ.
ಮತದಾನ ಮಾಡಲು ಮರೆಯದಿರಿ ಮತ್ತು ಮರೆತು ನಿರಾಶರಾಗದಿರಿ. ಪ್ರತಿದಿನ ಈ ಅವಕಾಶ ಸಿಗುವುದಿಲ್ಲ ಮತ್ತು ಸಿಕ್ಕಾಗ ಬಳೆಸಿಕೊಳ್ಳದವರು ಈ ದೇಶದ ಸತ್ಪ್ರಜೆಯೇ ಅಲ್ಲಾ.
ಏನಂತೀರೀ?