ದಾನ- ಮತದಾನ

ನಮ್ಮ ಸನಾತನದ ಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಪುಣ್ಯ ಕೆಲಸ ಮಾಡುವ ಮೊದಲು ನಾವು ಏನಾದರೂ ದಾನ ಮಾಡಿಯೇ ಮುಂದಿನ ಶಾಸ್ತ್ರಗಳಲ್ಲಿ ತೊಡಗುತ್ತೇವೆ. ದಾನ ಎಂದರೆ ಅಗತ್ಯವಿದ್ದವರಿಗೆ ತಮ್ಮಲ್ಲಿರುವ ವಸ್ತುಗಳನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಕೊಡುವುದು ಎಂದರ್ಥ. ಹಾಗೆ ದಾನ ಮಾಡುವವರು ಶ್ರೀಮಂತರಾಗಿಯೇ ಇರಬೇಕೆಂದಿಲ್ಲ. ಕೊಡಲು ಕೈಯಲ್ಲಿ ಏನಿಲ್ಲದಿದ್ದರೂ ಸಂಕಷ್ಟದಲ್ಲಿರುವವರನ್ನು ಸಂತೈಸುವುದು, ಸಾಂತ್ವನದ ನುಡಿಗಳನ್ನು ಆಡುವುದು, ಅಷ್ಟೇ ಏಕೆ ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಅವನನ್ನು ಕಂಡು ಮುಗುಳ್ನಗುವುದೂ ಸಹ ದಾನದ ಚೌಕಟ್ಟಿನಲ್ಲಿಯೇ ಬರುತ್ತದೆ. ಹಾಗೆ ದಾನ ಮಾಡುವುದರಿಂದ ನಮ್ಮ ಪಾಪಗಳನ್ನು ತೊಳೆಯುವ ಒಂದು ಕ್ರಿಯೆ ಆಥವಾ ಪರಿಹಾರ ಎಂದೂ ಹೇಳ ಬಹುದು. ಹಾಗೆ ಸುಮ್ಮನೆ ಯಾರೆಂದರೆ ಅವರಿಗೆ ದಾನ ಮಾಡಿದರೆ ಫಲ ದೊರಕದು. ದಾನ ಸದಾಕಾಲವೂ ಸತ್ಪಾತ್ರರಿಗೇ ಮಾಡಬೇಕು ಮತ್ತು ಹಾಗೆ ದಾನ ಪಡೆದುಕೊಳ್ಳುವವರೂ ಅದಕ್ಕೆ ಅರ್ಹರಾಗಿರಬೇಕು. ಮಹಾಭಾರತದಲ್ಲಿ ತನ್ನ ಕರ್ಣ ಕುಂಡಲವನ್ನೇ ದಾನ ಮಾಡಿದ ದಾನ ವೀರ ಶೂರ ಕರ್ಣ. ಪಾರಿವಾಳದ ಜೀವವನ್ನು ಉಳಿಸಲು ತನ್ನ ತೊಡೆಯನ್ನೇ ದಾನ ಮಾಡಿದ ಶಿಬಿಚಕ್ರವರ್ತಿ, ದೇವರಿಗಾಗಿ ತನ್ನ ಕಣ್ಣುಗಳನ್ನೇ ದಾನ ಮಾಡಿದ ಬೇಡರ ಕಣ್ಣಪ್ಪ ನಮ್ಮ ಪುರಾಣಗಳಲ್ಲಿ ಹೆಸರುವಾಸಿಯಾಗಿದ್ದಾರೆ.

ಅಂತೆಯೇ ದಾನ ದಾನಗಳಲ್ಲಿ ಅತೀ ಶ್ರೇಷ್ಠ ದಾನ ಅನ್ನ ದಾನ ಮತ್ತು ರಕ್ತದಾನ. ಅನ್ನ ದಾನ ಒಬ್ಬ ಮನುಷ್ಯನ ಒಂದು ಹೊತ್ತಿನ ಹಸಿವನ್ನು ನೀಗಿಸಬಲ್ಲದು. ರಕ್ತದಾನ ಒಬ್ಬ ರೋಗಿಯನ್ನು ಬದುಕಿಸಿ ಒಂದು ಕುಟುಂಬವನ್ನು ಕಾಪಾಡಬಲ್ಲದು. ಹಾಗೆಯೇ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನವೂ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಜೆಗಳು ನಿಸ್ವಾರ್ಥವಾಗಿ ತಮ್ಮ ಅಮೂಲ್ಯವಾದ ಮತವನ್ನು ಚುನಾವಣಾ ಕಣದಲ್ಲಿ ನಿಂತಿರುವ ಅಭ್ಯರ್ಥಿಗಳಿಗೆ ದಾನ ಮಾಡುವುದರ ಮೂಲಕ ತನ್ನ ಪ್ರದೇಶದ ಅಥವಾ ರಾಜ್ಯದ ಇಲ್ಲವೇ ದೇಶದ ಮುಂದಿನ ಐದು ವರ್ಷಗಳ ಆಗು ಹೋಗುಗಳಿಗೆ ಕಾರಣೀ ಭೂತನಾಗುತ್ತಾನೆ ಹಾಗಾಗಿಯೇ ಅದಕ್ಕೇ ಅದನ್ನು ಕೇವಲ ಮತ ಹಾಕುವುದು ಎನ್ನದೆ ಮತದಾನ ಎಂದು ಕರೆದಿದ್ದಾರೆ. ಈ ಮತದಾನ ಎನ್ನುವುದು ನಮ್ಮ ಸಾಂವಿಧಾನಿಕ ಕೊಡುಗೆ ಮತ್ತು ಹಕ್ಕೂ ಹೌದು. ಹಾಗಾಗಿ ಮತದಾನದ ಹಕ್ಕನ್ನು ಪಡೆದಿರುವವರೆಲ್ಲರೂ ಅತ್ಯಗತ್ಯವಾಗಿ ತಪ್ಪದೇ ಚಲಾಯಿಸಲೇ ಬೇಕು. ಅದಕ್ಕಾಗಿಯೇ ನಮ್ಮ ಕಛೇರಿಯಲ್ಲಿ ನನ್ನ ತಂಡದಲ್ಲಿರುವ ಎಲ್ಲಾ ಸದಸ್ಯರಿಗೂ ಮತದಾನ ಅನೌಪಚಾರಿಕವಾಗಿ ಕಡ್ಡಾಯಗೊಳಿಸಿ ಅವರವರ ರಾಜ್ಯ ಮತ್ತು ಕ್ಷೇತ್ರಗಳಿಗೆ ಅನುಗುಣವಾಗಿ ರಜೆ ಕೊಟ್ಟು ಎಲ್ಲರೂ ಮತದಾನ ಮಾಡಿದ್ದೇವೆ ಮತ್ತು ಎಲ್ಲರೂ ಕಛೇರಿಗೆ ಮರಳಿದ ನಂತರ ಒಟ್ಟಾಗಿ ಫೋಟೋ ತೆಗಿಸಿಕೊಂಡಿದ್ದೇವೆ.

ಆದರೆ ಇತ್ತೀಚಿನ ದಿನಗಳಲ್ಲಿ ನಾನಾ ರೀತಿಯ ಕಾರಣಗಳಿಂದಾಗಿ ಜನರು ಈ ಪ್ರಕ್ರಿಯೆಯಿಂದ ವಿಚಲಿತರಾಗಿ ಮತ್ತು ವಿಮುಖರಾಗಿ ಅಷ್ಟಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳದಿರುವುದು ನಿಜಕ್ಕೂ ಕಳವಳಕಾರಿಯಾಗಿದೆ. ಸರ್ಕಾರ ಮತ್ತು ಚುನಾವಣಾ ಆಯೋಗ ಅಷ್ಟೆಲ್ಲಾ ಶ್ರಮವಹಿಸಿ ಚುನಾವಣೆ ನಡೆಸಿದರೂ, ಸರ್ಕಾರೀ ಕಛೇರಿ ಮತ್ತು ಖಾಸಗೀ ಕಂಪನಿಗಳು ತಮ್ಮ ಎಲ್ಲಾ ನೌಕರರೂ ಮತ ಚಲಾಯಿಸಲಿ ಎಂದು ಸಂಬಳ ಸಹಿತ ರಜೆ ಕೊಟ್ಟರೂ, ಚುನಾವಣೆಯ ದಿನ ಜನ ಮತಗಟ್ಟೆಯತ್ತ ಬಾರದೇ, ಮನೆಯಲ್ಲಿಯೋ, ಇಲ್ಲವೇ ಪ್ರವಾಸಗಳಿಗೆ ತೆರಳಿ ಮೋಜು ಮಸ್ತು ಮಾಡುತ್ತಾ ಕಾಲ ಕಳೆಯುವುದರ ಪರಿಣಾಮ, ಹಾಳೂರಿಗೆ ಉಳಿದವನೇ ಗೌಡ ಎನ್ನುವಂತೆ ಅಪಾತ್ರರು ಚುನಾವಣೆಯಲ್ಲಿ ಆಯ್ಕೆಯಾಗಿ ಮುಂದಿನ ಐದು ವರ್ಷಗಳು ನಮ್ಮನ್ನು ಪ್ರತಿನಿಧಿಸುತ್ತಿರುವುದು ನಿಜಕ್ಕೂ ಆತಂಕವೇ ಸರಿ. ವಿದ್ಯಾವಂತರೆಂದು ತಮ್ಮನ್ನೇ ತಾವು ಬುದ್ದಿ ಜೀವಿಗಳು ಎಂದು ಕರೆದುಕೊಳ್ಳುವ ನಗರದ ಪ್ರದೇಶದವರಿಗಿಂತ ಹಳ್ಳಿಯ ಜನರೇ ಯಾರದ್ದೋ ಒತ್ತಡಕ್ಕೋ ಇಲ್ಲವೇ ದೌರ್ಜನ್ಯಕ್ಕೆ ಒಳಗಾಗಿಯೋ ಇಲ್ಲವೇ ನಾನಾ ರೀತಿಯ ಆಮೀಷಗಳಿಗೆ ಒಳಗಾಗಿಯೋ ಅಧಿಕ ಪ್ರಮಾಣದಲ್ಲಿ ಮತದಾನ ಮಾಡುತ್ತಿರುವುದಂತೂ ಆತಂಕವೇ ಸರಿ.

ನಮ್ಮ ಜನರಿಗೆ ಪ್ರಸಕ್ತ ರಾಜಕೀಯ ಮತ್ತು ರಾಜಕಾರಣಿಗಳ ಬಗ್ಗೆ ವಿಪರೀತ ಬೇಸರವಾಗಿ ಯಾರು ಬಂದರೂ ಅಷ್ಟೇ. ನಮ್ಮ ಕಷ್ಟಗಳನ್ನು ಪರಿಹರಿಸುವರಿಲ್ಲ ಎಂದು ನಿರ್ಲಿಪ್ತರಾಗಿಹೋಗಿದ್ದಾರೆ. ಅವರಿಗೆ ಕಾರ್ಪೋರೇಟರ್, ಶಾಸಕರು ಮತ್ತು ಸಂಸದರ ಕಾರ್ಯವ್ಯಾಪ್ತಿಯ ಅರಿವಿಲ್ಲದೆ ಎಲ್ಲರ ಬಳಿಯೂ ತಮ್ಮ ಮನೆ ಮುಂದಿನ ರಸ್ತೆ ಸರಿಯಿಲ್ಲ, ನೀರು ಬರುತ್ತಿಲ್ಲ, ಮೋರಿ ಕಟ್ಟಿದೆ ಎಂದೋ ನಮ್ಮ ಮನೆಯ ಶುಭ ಸಮಾರಂಭಕ್ಕಾಗಲೀ ಅಥವಾ ಸಂತಾಪ ಸೂಚನೆಗೆ ಬರಲಿಲ್ಲವಲ್ಲಾ ಎಂಬುದನ್ನೇ ದೊಡ್ಡದು ಮಾಡಿಕೊಂಡು ಮುಂದಿನ ಚುನಾವಣೆಯಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದು ಕೊಳ್ಳುವ ಸಂಭವವೇ ಹೆಚ್ಚಾಗಿದೆ.

ಚುನಾವಣೆಯಲ್ಲಿ ಪ್ರತಿಯೊಬ್ಬರೂ ಸ್ವಪ್ರೇರಣೆಯಿಂದ ಭಾಗಿಯಾಗಬೇಕಾದ್ದದ್ದು ಎಲ್ಲರ ಕರ್ತ್ಯವ್ಯವಾದರೂ, ನಗರವಾಸಿಗಳು ಮತದಾನ ಮಾಡದಿರುವ ಕಾರಣ ಈ ಕೆಲವೊಂದು ಅಂಶಗಳನ್ನು ಕಡ್ಡಾಯ ಮಾಡಿದರೆ ಎಲ್ಲರೂ ಮತದಾನ ಮಾಡಬಹುದೇನೋ?

  • ಜನ್ ಧನ್ ಮೂಲಕ ಎಲ್ಲರ ಬಳಿಯೂ ಬ್ಯಾಂಕ್ ಅಕೌಂಟ್ ಇರುವುದರಿಂದ ತಮ್ಮ ಬ್ಯಾಂಕ್ ಅಕೌಂಟ್ನೊಂದಿಗೆ, ಮೊಬೈಲ್ ನಂಬರ್, ಆಧಾರ್ ನಂಬರ್ ಜೊತೆ ಚುನಾವಣಾ EPIC ನಂಬರ್ ಕೂಡಾ ದಾಖಲಿಸಿಬೇಕು.
  • ದೇಶಾದ್ಯಂತ ಒಂದೇ ದಿನ ಚುನಾವಣೆ ನಡೆಸಿ ಯಾರು ಯಾವ ಮತದಾನ ಕೇಂದ್ರದಲ್ಲಿಯೇ ಆಗಲೀ ತಮ್ಮ ಸ್ವಕ್ಷೇತ್ರವನ್ನು ಆರಿಸಿಕೊಂಡು ಅಲ್ಲಿ ತಮ್ಮ ಕ್ಷೇತ್ರದ ಅಭ್ಯರ್ಥಿ ಮತ ಚಲಾಯಿಸುವಂತಿರಬೇಕು. ಸುರಕ್ಷತೆಗಾಗಿ OTP ಬಳೆಸಬಹುದು.
  • ಅನಕ್ಷರಸ್ಥ/ಕಂಪ್ಯೂಟರ್ ತಿಳಿಯದ ಜನಕ್ಕೆ ಸಮೀಪದ ಯಾವುದೇ ಮತಗಟ್ಟೆಗೆ ಹೋಗಿ ತಮ್ಮ ಏಟಿಎಂ ಕಾರ್ಡ್ ಸ್ವಯ್ಪ್ ಮಾಡಿ ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿ ಗೆ ಮತಚಲಾಯಿಸುವ ಸೌಲಭ್ಯ ಹೊಂದಿರಬೇಕು.
  • ಇಷ್ಟೆಲ್ಲಾ ಸುಲಭೋಪಾಯ ಮಾಡಿಕೊಟ್ಟರೂ ಮತ ಮತಚಲಾಯಿಸದಿದ್ದಲ್ಲಿ ಅವರ ಬ್ಯಾಂಕ್ ಅಕೌಂಟ್ ರದ್ದು ಪಡಿಸಬೇಕು ಮತ್ತು ಸರ್ಕಾರದ ಎಲ್ಲಾರೀತಿಯ ಅನುದಾನವನ್ನು ರದ್ದುಗೊಳಿಸಬೇಕು.
  • ಜನರಿಗೆ ಈ ಎಲ್ಲಾ ಸೌಲಭ್ಯಗಳನ್ನು ಕೊಟ್ಟೂ ಮತದಾನ ಮಾಡದಿದ್ದಲ್ಲಿ ದಂಡ ದಶಗುಣಂ ಎನ್ನುವಂತೆ, ಮತದಾನ ಮಾಡಿದ್ದಲ್ಲಿ ಮಾತ್ರವೇ ಕಛೇರಿಗಳಲ್ಲಿ ವೇತನ ಸಹಿತ ರಜಾ ಕೊಡಬೇಕು ಇಲ್ಲದಿದ್ದಲ್ಲಿ ಅವರ ಎರಡು ದಿನ ರಜೆಯ ಸಜೆ ವಿಧಿಸಬೇಕು.
  • ಈ ರೀತಿಯಾಗಿ ಮಾಡಿದಾಗ ಎಲ್ಲರ ಸಮಯ ಮತ್ತು ಹಣ ಉಳಿತಾಯ ಆಗುತ್ತದೆ. ದೇಶವೂ ಉದ್ದಾರವಾಗುತ್ತದೆ.

ಏನಂತೀರೀ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s