ಜಗಣ್ಣಾ, ನಮಸ್ಕಾರ. ಎಲ್ಲಿದ್ದೀಯಾ? ಹೇಗಿದ್ದೀಯಾ? ಅಂತಾ ಫೋನ್ ಮಾಡಿದ್ರೆ, ಹಾಂ!! ಹೇಳಣ್ಣಾ, ಇಲ್ಲೇ ಕೆಲ್ಸದ್ ಮೇಲೆ ಇದ್ದೀನಿ. ಅಂತಾ ಶುರುವಾಗುತ್ತಿದ್ದ ನಮ್ಮ ಫೋನ್ ಸಂಭಾಷಣೆ ಕನಿಷ್ಟ ಪಕ್ಷ ಅರ್ಧ ಘಂಟೆಯವರೆಗೂ ನಡೆದು, ನಮ್ಮಿಬ್ಬರ ಕೆಲಸಕಾರ್ಯಗಳು, ನಂತರ ನಮ್ಮಿಬ್ಬರ ಮನೆಯವರೆಲ್ಲರ ಯೋಗಕ್ಷೇಮ ಅದಾದ ನಂತರ ನಮ್ಮ ಸಂಬಂಧೀಕರು, ನಮ್ಮೂರಿನ ಕುತೂಹಲಕಾರಿ ವಿಷಯಗಳನ್ನು ವಿಚಾರಿಸಿಕೊಂಡ ನಂತರ, ಒಂದೋ ನಾನು ಆಫೀಸ್ ತಲುಪಿರಬೇಕು ಇಲ್ಲವೇ ನಮ್ಮಿಬ್ಬರಿಗೆ ಬೇರಾವುದೋ ಕರೆ ಬಂದಾಗ, ಸರಿ ಅಣ್ಣಾ ಮತ್ತೇ ಸಿಗೋಣ ಎಂದು ಮಾತು ಮುಗಿಸಿ ಮತ್ತೊಂದು ದಿನ ಇದೇ ರೀತಿಯ ಮಾತು ಕಥೆ ಮುಂದುವರೆಯುತ್ತಿತ್ತು.
ಅಣ್ಣಾ ತಮ್ಮಂದಿರ ಸಂಬಂಧ ಎಂದರೆ ಹೀಗೇ ತಾನೇ ಇರ್ಬೇಕು? ಅದು ನಿಂತ ನೀರಾಗಿರದೇ, ಸದಾ ಸ್ವಚ್ಚಂದವಾಗಿ ಹರಿಯುವ ಶುಭ್ರ, ಕಲುಶಿತವಾಗದ ಶುಧ್ಧ ನೀರಿನಂತೆ ಇರಬೇಕು. ನಮ್ಮ ತಾತ ನಂಜುಂಡಯ್ಯನವರು ಮತ್ತು ಅವರ ಅಣ್ಣ ರಾಮಯ್ಯನವರು ಒಡಹುಟ್ಟಿದವರು. ಅವರಿಬ್ಬರ ಧರ್ಮ ಪತ್ನಿಯರಾದ ಚೆನ್ನಮ್ಮ ಮತ್ತು ಸುಂದರಮ್ಮನವರು ಓರಗಿತ್ತಿಯರಾದರೂ, ಅವರಿಬ್ಬರೂ ಒಡ ಹುಟ್ಟಿದ ಅಕ್ಕ ತಂಗಿಯರಿಗಿಂತ ಅನ್ಯೋನ್ಯವಾಗಿದ್ದವರು. ಹಾಗಾಗಿಯೇ ನಮ್ಮ ತಂದೆ ಮತ್ತು ಅವರ ಒಡ ಹುಟ್ಟಿದವರು ತಮ್ಮ ದೊಡ್ಡಮ್ಮನನ್ನೇ ಅಮ್ಮಾ ಎಂದು ಮತ್ತು ಹೆತ್ತ ತಾಯಿ ಮತ್ತು ತಂದೆಯವರನ್ನು ಚಿಕ್ಕಮ್ಮ-ಚಿಕ್ಕಪ್ಪಾ ಎಂದು ಸಂಭೋದಿಸುತ್ತಿದ್ದರೆಂದರೆ ನಮ್ಮ ಅಭಿಭಕ್ತ ಕುಟುಂಬ ಹೇಗೆತ್ತೆಂಬ ಕಲ್ಪನೆ ಎಲ್ಲರಿಗೂ ಮೂಡುತ್ತದೆ. ನಮ್ಮ ತಾತನವರ ಅಣ್ಣಂದಿರು ಚಿಕ್ಕವಯಸ್ಸಿನಲ್ಲಿಯೇ ಅಕಾಲಿಕ ಮರಣ ಹೊಂದಿದ ಪರಿಣಾಮವಾಗಿ, ನಮ್ಮ ತಾತನವರು, ತನ್ನ ಆಣ್ಣಂದಿರ ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆಯೇ ಪಾಲಿಸಿ ಪೋಷಿಸಿ ಅವರಿಗೆ ತಕ್ಕ ಮಟ್ಟಿಗಿನ ವಿದ್ಯಾಭ್ಯಾಸ ಕೊಡಿಸಿ ಕಾಲ ಕಾಲಕ್ಕೆ ಮದುವೆ, ಮುಂಜಿ, ಬಾಣಂತನಗಳನ್ನು ಮುಗಿಸಿ ತಮ್ಮ ಜವಾಬ್ಧಾರಿಯನ್ನು ನಿಭಾಯಿಸಿದ್ದರು.
ಇಂತಹ ಮಧುರ ಬಾಂಧವ್ಯದಿಂದಾಗಿಯೇ ನಮ್ಮ ದೊಡ್ಡಪ್ಪ ಸತ್ಯಣ್ಣ (ಸತ್ಯನಾರಾಯಣ) ಮತ್ತು ನಮ್ಮ ತಂದೆ ಇಬ್ಬರೂ ಒಡ ಹುಟ್ಟಿದವರಂತೆಯೇ ಅನ್ಯೋನ್ಯವಾಗಿದ್ದರೆ, ಅವರಿಬ್ಬರನ್ನೂ ಮೀರಿಸುವಂತೆ ಅವರಿಬ್ಬರ ಧರ್ಮಪತ್ನಿಯರಾದ ಸರೋಜಮ್ಮನವರು ಮತ್ತು ನಮ್ಮ ತಾಯಿಯವರೂ ಸಹಾ ತಮ್ಮ ಅತ್ತೆಯಂದಿರ ಸತ್ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗಿ ಸ್ವಂತ ಅಕ್ಕ-ತಂಗಿ ತಂಗಿಯರಂತೇ ಇದ್ದು ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಇದೇ ಕಾರಣದಿಂದಾಗಿ, ನಮ್ಮ ಮನೆಗಳಲ್ಲಿ ನಮ್ಮ ದೊಡ್ಡಪ್ಪನವರ ಮಕ್ಕಳನ್ನು ನಾವು ಸ್ವಂತ ಅಕ್ಕ- ಅಣ್ಣರಂತೆಯೇ ತಿಳಿದರೇ ಅವರೂ ಸಹಾ ನಮ್ಮನ್ನು ತಮ್ಮ ಸ್ವಂತ ತಮ್ಮ ಮತ್ತು ತಂಗಿಯರೆಂದೇ ಭಾವಿಸಿ ಇಂದಿಗೂ ಮಧುರ ಬಾಂದ್ಯವ್ಯವನ್ನು ಹೊಂದಿದ್ದೇವೆ. ಶಾಲೆಗ ರಜೆ ಬಂದಿತೆಂದರೆ, ಅಣ್ಣಂದಿರು ನಮ್ಮ ಮನೆಗೆ ಬಂದರೆ ಆಮೇಲೆ ನಾವು ಅವರ ಊರಿಗೆ ಹೋಗಿ ಮಜಾಮಾಡುತ್ತಿದ್ದದ್ದು ಇಂದಿಗೂ ನಮ್ಮೆಲ್ಲರ ಮನದಲ್ಲಿ ಹಚ್ಚಹಸಿರಾಗಿ ಉಳಿದಿದೆ. ನಮ್ಮ ಕುಟುಂಬದ ಯಾವುದೇ ಸಭೆ ಸಮಾರಂಭಗಳಿರಲಿ, ಒಬ್ಬರನ್ನೊಬ್ಬರು ಕೇಳದೇ, ವಿಚಾರಿಸದೇ ಮುಂದುವರೆದ್ದದ್ದೂ ನಮಗೆ ನೆನಪೇ ಇಲ್ಲ. ನಮ್ಮ ದೊಡ್ಡಪ್ಪನವರ ಅಕಾಲಿಕ ಮರಣಾನಂತರವಂತೂ ಇಡೀ ಕುಟಂಬದ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ದೊಡ್ಡಮ್ಮ ನಮ್ಮ ತಂದೆ-ತಾಯಿರಿಗೇ ವಹಿಸಿಬಿಟ್ಟಿದ್ದರು. ನಮ್ಮ ಅಣ್ಣಂದಿರೂ ಸಹಾ ತಮ್ಮ ಚಿಕ್ಕಪ್ಪನವರಿಗೆ ಹೇಳದೇ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರಲಿಲ್ಲ. ದೊಡ್ಡ ಅಣ್ಣಂದಿರ ಮದುವೆಯಲ್ಲಿ ನಮ್ಮ ತಂದೆ ತಾಯಿಯವರೇ ಹಸೆಮಣೆಯಲ್ಲಿ ಧಾರೆ ಎರೆಸಿಕೊಂಡರೆ ಕಡೆಯ ಅಣ್ಣನದೂ ಮತ್ತು ನನ್ನ ಮದುವೆ ಒಂದು ತಿಂಗಳ ಅಂತರದಲ್ಲೇ ಇದ್ದ ಕಾರಣ, ಎರಡು ನಾಂದಿ ಶಾಸ್ತ್ರಕ್ಕೆ ಒಬ್ಬರೇ ಕೂರಬಾರದೆಂಬ ಸಂಪ್ರದಾಯಕ್ಕೆ ಕಟ್ಟು ಬಿದ್ದು ಹಿರಿಯಣ್ಣ ಮತ್ತು ಅತ್ತಿಗೆ ಕೊನೆಯ ಅಣ್ಣನ ಮದುವೆಯಲ್ಲಿ ಧಾರೆ ಎರೆಸಿಕೊಂಡಿದ್ದರು. ನಮ್ಮ ತಂದೆಯವರು ಇರುವವರೆಗೂ ಅವರ ಮನೆಯ ಎಲ್ಲಾ ಆಹ್ವಾನ ಪತ್ರಿಕೆಗಳೂ ನಮ್ಮ ತಂದೆಯ ಹೆಸರಿನಲ್ಲಿಯೇ ಇರುವಂತಹ ಅವಿನಾಭಾವ ಸಂಬಂಧ ನಮ್ಮದು. ನಮ್ಮ ದೊಡ್ಡಪ್ಪ, ನಮ್ಮ ತಾಯಿ, ನಮ್ಮ ದೊಡ್ಡಮ್ಮ ಮತ್ತು ನಮ್ಮ ತಂದೆಯವರು ಕಾಲವಾದ ನಂತರವೂ ಈ ಮಧುರ ಬಾಂಧವ್ಯ ಇಂದಿಗೂ ನಮ್ಮ ನಡುವೆ ಹಾಗೆಯೇ ಮುಂದುವರೆಯುತ್ತಿದೆ ಮತ್ತು ಮುಂದುವರೆಯುತ್ತದೆ.
ಕೇವಲ ಹತ್ತು ದಿನಗಳ ಹಿಂದೆಯಷ್ಟೇ ನಮ್ಮ ಹಿರಿಯಣ್ಣ ಜಗದೀಶನ ಮಗಳ ಮದುವೆಯಲ್ಲಿ ನಾವೆಲ್ಲರೂ, ಹೂವಿಳ್ಯದ ದಿವಸದಿಂದ ವರಪೂಜೆ, ಧಾರೆ ಮತ್ತು ಆರತಕ್ಷತೆಯ ಮೂರೂ ದಿನಗಳಿಂದ ಸಕುಟುಂಬ ಸಮೇತರಾಗಿ ಸಂಭ್ರದಿಂದ ಓಡಾಡುತ್ತಾ ನಮ್ಮ ಕುಟುಂಬದಲ್ಲೇ ಅತ್ಯಂತ ವೈಭವೋಪೇತವಾಗಿ ಯಶಸ್ವಿಯಾಗಿ ನಡೆದ ಮದುವೆಗೆ ಸಾಕ್ಷಿಯಾಗಿದ್ದೆವು. ಮಧುಮಗಳ ಕೈಯಲ್ಲಿನ ಗೋರಂಟಿ ಕರಗುವ ಮುನ್ನವೇ, ಮದುವೆಗೆ ಮಾಡಿಸಿದ್ದ ಸಿಹಿತಿಂಡಿಗಳು ಎಲ್ಲರಿಗೂ ಹಂಚುವ ಮುನ್ನವೇ, ಮದುವೆಯ ಫೋಟೋ ಮತ್ತು ವೀಡಿಯೋಗಳು ನಮ್ಮ ಕೈ ಸೇರುವ ಮೊದಲೇ, ನಾವೆಲ್ಲಾರೂ ಇನ್ನೂ ಮದುವೆಯ ಸಂಭ್ರಮವನ್ನು ಮೆಲಕನ್ನು ಹಾಕುತ್ತಿರವಾಗಲೇ ಅದೇಕೋ ನಮ್ಮ ಕುಟುಂಬದ ಮೇಲೆ ಭಗವಂತ ಅವಕೃಪೆ ತೋರಿ ಹಠಾತ್ತನೆ ಬರಸಿಡಿಲು ಬಡಿದು ಭಾವಜೀವಿ, ಅಜನುಬಾಹು ಮತ್ತು ಅಜಾತ ಶತೃವಾಗಿದ್ದ ನಮ್ಮ ಅಣ್ಣ ಜಗದೀಶನನ್ನು ನಮ್ಮಿಂದ ದೂರಮಾಡಿ ಬಿಟ್ಟ. ಹೌದು ಜಾತಸ್ಯ ಮರಣಂ ಧೃವಂ ಎಂಬ ಗಾದೆಯೇ ಇದೆ. ಅಂದರೆ ಹುಟ್ಟಿದವರು ಒಂದಲ್ಲ ಒಂದು ದಿನ ಸಾಯಲೇ ಬೇಕೆಂಬುದು ಜಗದ ನಿಯಮ. ಆದರೆ ಸಾಯುವುದಕ್ಕೂ ಒಂದು ವಯಸ್ಸು ಇರುತ್ತದೆಯಲ್ಲವೇ? ಐವತ್ನಾಲ್ಕು ವರ್ಷ ಸಾಯುವ ವಯಸ್ಸಲ್ಲ ಅಲ್ಲವೇ? ಇನ್ನೂ ಮನೆ ಕಟ್ಟಿದ ಸಾಲ, ಮದುವೆಗೆ ಮಾಡಿದ ಸಾಲ, ಮಗಳ ಬಾಣಂತನ, ಮತ್ತೊಬ್ಬ ಮಗಳ ಮದುವೆ ಬಾಣಂತನ ಮುಗಿಸಿ ಮೊಮ್ಮಕ್ಕಳೊಂದಿಗೆ ಸ್ವಲ್ಪ ದಿನ ಆಟವಾಡುವಷ್ಟು ದಿನ ಕಾಯಲು ಆ ಯಮಧೂತರಿಗೆ ಆಗಲಿಲ್ಲವೇ? ಛೇ ಎಂತಹ ದುರ್ವಿಧಿ? ಇಂತಹ ಸಂಕಷ್ಟಗಳು ನಮ್ಮ ಶತೃಗಳಿಗೂ ಬಾರದಿರಲಿ.
ಜಗಣ್ಣಿ ನಿನ್ನ ಜೊತೆಗೆ ಕಳೆದ ಈ ಕೆಲವು ಸುಂದರ ಕ್ಷಣಗಳು ಸದಾಕಾಲವೂ ನಮ್ಮ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಉಳಿಯಲಿದೆ.
- ನಮ್ಮ ತಾತ ನಂಜುಂಡಯ್ಯನವರು ಹರಿಕಥೆ ಮುಗಿಸಿಕೊಂಡು ಬರುವಾಗ ತಮ್ಮ ನಶ್ಯದ ಕರ್ಚೀಪಿನಲ್ಲಿ ಕಟ್ಟಿ ಕೊಂಡು ತರುತ್ತಿದ್ದ ತಿಂಡಿಗಳನ್ನು ಕಿತ್ತಾಡಿ ತಿನ್ನುತ್ತಿದ್ದದ್ದು.
- ಅರಸೀಕೆರೆಯಲ್ಲಿ ನಡೆದ ಗೀತಕ್ಕನ ಮದುವೆಯಲ್ಲಿ ದೊಡ್ಡಪ್ಪ ನಮ್ಮೆಲ್ಲರಿಗೂ ಒಂದೇ ರೀತಿಯ ಬಟ್ಟೆಗಳನ್ನು ಹೊಲಿಸಿ ಕೊಟ್ಟದ್ದು.
- ನಾವಿನ್ನೂ ಪ್ರೈಮರೀ, ನೀನು ಹೈಸ್ಕೂಲಿನಲ್ಲಿ ಇರುವಾಗಲೇ ಗೀತಕ್ಕನಿಗೆ ಮಕ್ಕಳಾಗಿ ಅಷ್ಟು ಸಣ್ಣ ವಯಸ್ಸಿನಲ್ಲಿಯೇ ನಾವೆಲ್ಲರೂ ಸೋದರ ಮಾವಂದಿರಾಗಿ ಭಡ್ತಿ ಹೊಂದಿದ್ದು.
- ಭಾವನ ಗಿರಿಕನ್ಯೆ-ರಾಜಲಕ್ಷ್ಮೀ ಆಟೋದಲ್ಲಿ ನಾವೆಲ್ಲರೂ ಸುತ್ತಾಡುತ್ತಿದ್ದದ್ದು. ಅವರ ಮನೆಯಲ್ಲಿಯೇ ಮೊತ್ತ ಮೊದಲಿಗೆ ಟೇಪ್ ರೆಕಾರ್ಡರ್ ನೋಡಿ ನಲಿದದ್ದು.
- ಕಲ್ಗುಂಡಿಯ ಕೂಲಿಮಠದಲ್ಲಿ ಕಲಿತ ಮಗ್ಗಿ, ಬಸವಾಪಟ್ಟಣದ ಕಾವೇರಿ ನದಿಯಲ್ಲಿ ಒಟ್ಟಿಗೆ ಕಲಿತ ಈಜು, ಬೇಲೂರಿನ ಚನ್ನಕೇಶವ ದೇವಸ್ಥಾನಗಳಲ್ಲಿ ಆಡಿದ ಕಣ್ಣಾಮುಚ್ಚಾಲೆ.
- ಬಾಳಗಂಚಿ ಹೊನ್ನಮ್ಮನ ಜಾತ್ರೆಯಲ್ಲಿ ಕದ್ದು ಮುಚ್ಚಿ ಬೋಂಡ ಕೊಂಡು ತಿಂದದ್ದು.
- ರಾಮಕೃಷ್ಣಾ ಚಿಕ್ಕಪ್ಪನ ಮದುವೆಯ ಫೋಟೋವೊಂದರಲ್ಲಿ, ಚಿಕ್ಕಮ್ಮನ ಕೈಯಲ್ಲಿ ಚಿಕ್ಕಪ್ಪನ ಫೋಟೋ ಇರುವ ಬದಲು ಅಚಾತುರ್ಯವಾಗಿ ನಿನ್ನ ಪೋಟೋ ಇದ್ದದ್ದು.
- ನಾವೆಲ್ಲರೂ ಗಂಗೂರು ಗಾಯತ್ರಿ ಅತ್ತೆಯವರ ತೋಟದಲ್ಲಿ ಮನಸೋ ಇಚ್ಚೆ ಎಳನೀರು ಕುಡಿಯುತ್ತಾ, ಹೇಮಾವತಿ ಕಾಲುವೆಗಳಲ್ಲಿ ಗಂಟೆಗಟ್ಟಲೆ ಮೀಯುತ್ತಿದ್ದದ್ದು.
- ಕೆಲ ಕಾಲ ನಮ್ಮ ಮನೆಯಲ್ಲಿ ನೀನು ಇದ್ದಾಗ, ನಿನ್ನ ಸೈಕಲ್ ಬಾರ್ ಮೇಲೆ ನನ್ನ ಚಿಕ್ಕ ತಂಗಿ, ಹಿಂದೆ ನನ್ನ ದೊಡ್ದ ತಂಗಿ ಮತ್ತು ನಾನು ಒಟ್ಟಿಗೆ ನಾಲ್ವರು ಕುಳಿತು ಕೊಂಡು ಶಾಲೆಗೆ ಹೋದದ್ದು.
- ಬಿಇಎಲ್ ಇಂಡ್ರಸ್ಟ್ರಿಯಲ್ ಎಸ್ಟೇಟ್ ನಲ್ಲಿ ನೀನು ಕೆಲಸ ಮಾಡುತ್ತಿರುವಾಗ, ಮಧ್ಯಾಹ್ನದ ಶಾಲೆಗೆ ಹೋಗುವಾಗ ನಾವು ನಿನಗೆ ಊಟ ತಂದು ಕೊಡುತ್ತಿದ್ದದ್ದು. ನನಗೆ ಕಾಲಿಗೆ ಪೆಟ್ಟಾಗಿದ್ದಾಗ ನೀನು ಶಾಲೆಗೆ ಬಂದು ಕರೆದು ಕೊಂಡು ಹೋಗುತ್ತಿದ್ದದ್ದು.
- ನಿನ್ನ ಮೊತ್ತ ಮೊದಲ ಎರಡಂಕಿಯ ಸಂಬಳ ನೋಡಿ ನಾವೆಲ್ಲರೂ ಹಿರಿ ಹಿರಿ ಹಿಗ್ಗಿದ್ದು.
- ವಿಷ್ಣುವರ್ಧನ್ ಪರಮ ಅಭಿಮಾನಿಯಾದ ನೀನು ಅವರ ಹಾಗೇ ಅನುಕರಣೆ ಮಾಡುತ್ತಿದ್ದದ್ದು, ಅವರ ಪೋಟೋಗಳನ್ನು ಪರ್ಸ್ನಲ್ಲಿ ಇಟ್ಟಿಕೊಳ್ಳುತ್ತಿದ್ದದ್ದು.
- ನಿನ್ನ ಪುಸ್ತಕಗಳ ಮಧ್ಯೆ ನೀನು ನಿನ್ನ ಮೊದಲ ಗೆಳತಿಯ ಹೆಸರನ್ನು ಬರೆದದ್ದನ್ನು ನಮ್ಮಪ್ಪನಿಗೆ ತಿಳಿಸಿ ನಿನಗೆ ಬುದ್ಧಿವಾದ ಹೇಳಿಸಿ, ಕೊನೆಗೆ ನಿನ್ನಿಂದ ನಾನು ಹೊಡೆಸಿಕೊಂಡಿದ್ದು.
- ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮರಸತಾ ಸಂಗಮಕ್ಕೆ ನಮ್ಮ ಇಡೀ ಕುಟುಂಬದ ಅಬಾಲವೃದ್ಧರಾಗಿ ಪಾಲ್ಗೊಂಡದ್ದು.
- ಬಸವೇಶ್ವರ ನಗರದಲ್ಲಿ ಅಚಾನಕ್ಕಾಗಿ ಒಮ್ಮೆ ಭೇಟಿಯಾದಾಗ ರಸಭರಿತ ದೊಡ್ಡ ದೊಡ್ಡ ಮಾವಿನ ಹಣ್ಣುಗಳನ್ನು ನೀನು ಕೊಡಿಸಿದ್ದು.
- ಬಸವೇಶ್ವರ ನಗರದ ವ್ಯಾಸಾ ಪ್ಯಾರಡೈಸ್ ಎದುರಿಗಿದ್ದ ಮನೆಯಲ್ಲಿ ಅತ್ತಿಗೆಯವರನ್ನು ಅವರ ಮಾವನ ಮನೆಯಲ್ಲಿ ನೋಡಿ ತಾಂಬೂಲ ಬದಲಿಸಿಕೊಂಡಿದ್ದು.
- ಮಲ್ಲೇಶ್ವರಂನ ತ್ರಿಪುರ ಸುಂದರಿ ಕಲ್ಯಾಣ ಮಂಟದಲ್ಲಿ ನಡೆದ ನಿನ್ನ ಮದುವೆ. ಕಾಕತಾಳಿಯವಾಗಿ ಅದೇ ಆ ಕಲ್ಯಾಣ ಮಂಟಪದಲ್ಲಿ ನಡೆದ ಕಡೆಯ ಮದುವೆಯಾಗಿ ಈಗ ಅಲ್ಲಿ ಭವ್ಯವಾದ ಅಪಾರ್ಟ್ಮೆಂಟ್ ಆಗಿದೆ.
- ನಿನ್ನ ಮಗಳು ಸುರಕ್ಷಾ ಹುಟ್ಟಿ ನಮಗೆ ಮಾವನಿಂದ ಚಿಕ್ಕಪ್ಪಂದಿರಾಗಿ ಭಡ್ತಿ ಕೊಟ್ಟಿದ್ದು.
- ನಮ್ಮ ಎಲ್ಲಾ ಶುಭ ಸಮಾರಂಭಗಳಿಗೆ ನಿನ್ನ ಆಟೋವಿನಲ್ಲಿಯೇ ಎಲ್ಲರ ಮನೆಗೂ ಹೋಗಿ ಆಹ್ವಾನ ಪತ್ರಿಕೆ ಕೊಟ್ಟು ಬರುತ್ತಿದ್ದದ್ದು.
- ಬಾಳಗಂಚಿ ಹೊನ್ನಮ್ಮನ ಹಬ್ಬದಲ್ಲಿ ನಾವೆಲ್ಲರು ಸೇರಿ ಮಾಡಿದ ಹಬ್ಬದಲ್ಲಿ ನೀನು ಮಾಡಿದ ಬಿಸಿಬೇಳೆಬಾತ್.
- ನಮ್ಮ ಮನೆಯ ಕಡೆ ಬಂದಾಗಲೆಲ್ಲಾ ತಪ್ಪದೇ ಮನೆಗೆ ಒಂದು ಕ್ಷಣವಾದರೂ ಬಂದು ಹೋಗುತ್ತಿದ್ದದ್ದು.
- ನಮಗೆ ಯಾವುದೇ ಸಂಬಂಧೀಕರ ಫೋನ್ ನಂಬರ್ ಬೇಕಿದ್ದರೂ ನಾವೆಲ್ಲರೂ ನಿನ್ನನ್ನೇ ಅವಲಂಭಿಸುತ್ತಿದ್ದದ್ದು.
- ನಮ್ಮ ಅಮ್ಮ ಮತ್ತು ಅಪ್ಪ ಹೋದಾಗ, ನನ್ನ ಜೊತೆ ಇದ್ದು ಯಾವ ಕ್ರಿಯಾಕರ್ಮಗಳಿಗೂ ಲೋಪವಾಗದಂತೆ ಮುಗಿಸಿದ್ದು.
- ಮೊನ್ನೆ ನಿನ್ನ ಮಗಳ ಮದುವೆ ಮನೆಯಲ್ಲಿ ನೀನು ತೋರಿದ ತಾಳ್ಮೆಯನ್ನು ನೋಡಿ, ನಿಜಕ್ಕೂ ನಾನೇ ದಂಗಾಗಿ ಹೋಗಿದ್ದು.
- ಭೌತಿಕವಾಗಿ ನೀನಿಂದು ನಮ್ಮೊಡನೆ ಇರದಿರಬಹುದು. ಆದರೆ ನೀನು ದಾನ ಮಾಡಿದ ನಿನ್ನೆರಡು ಕಣ್ಗಳಿಂದ ಎರಡು ಮನೆಯ ಜ್ಯೋತಿ ಬೆಳಗಲಿದೆ.
ನಿನ್ನ ಧೈರ್ಯ, ನಿನ್ನ ಹುಂಬತನ, ನಿನ್ನ ರಸಿಕತೆ, ನಿನ್ನ ನಗು, ನಿನ್ನ ಅತ್ಮೀಯತೆ, ನಿನ್ನ ಪ್ರೀತಿಯ ಅಪ್ಪುಗೆ, ನಮ್ಮ ಪ್ರತೀ ಸಂಭಾಷಣೆಯಾದ ನಂತರ ಒಬ್ಬರೊನ್ನಬ್ಬರು ಕೇಳಿಕೊಳ್ಳುತ್ತಿದ್ದ, ಅಣ್ಣಾ ಮತ್ತೆ ಯಾವಾಗ ಸಿಗೋಣ? ಅನ್ನೋದು ಇನ್ನು ಮುಂದೆ ಕೇವಲ ಸಿಹಿ ನೆನಪಾಗಿಯೇ ಉಳಿದು ಹೋಗಲಿದೆ. ಅಚಾನಕ್ಕಾಗಿ ನಮ್ಮನ್ನಗಲಿದ ನಿನ್ನ ಆತ್ಮಕ್ಕೆ ಆ ಭಗವಂತ ಸದ್ಗತಿಯನ್ನು ಕೊಡಲಿ. ಸದ್ಯಕ್ಕೆ ನೀನು ಯಾರ ರೂಪದಲ್ಲಾದರೂ ನಮ್ಮ ಕುಟುಂಬದಲ್ಲೇ ಮತ್ತೊಮ್ಮೆ ಹುಟ್ಟಿ ಬಾ. ಎಂದಷ್ಟೇ ನಾವು ಆ ಭಗವಂತನಲ್ಲಿ ಕೇಳಿಕೊಳ್ಳಬಹುದು.
ಏನಂತೀರೀ?
ಎಂಥಹ ಮಧುರಬಾಂಧವ್ಯ. ಕಣ್ಣಂಚಲ್ಲಿ ನೀರಾಡಿದ್ದು ಸತ್ಯ. ಜಗಣ್ಣನವರನ್ನು ಕಾಣದಿದ್ದರೂ ನಿಮ್ಮಬರಹದಲ್ಲಿ ಪ್ರತ್ಯಕ್ಷವಾಗಿ ಕಂಡೆ. ಅವರ ಆತ್ಮಕ್ಕೆ ಶಾಂತಿಕೋರುವುದಷ್ಟೇ ನನ್ನಪಾಲಿಗೆ ಉಳಿದಿದ್ದು. ಸಮರತಾ ಸಂಗಮದಲ್ಲಿ ನಾನೂ ಭಾಗವಹಿಸಿದ್ದೆ ಅಚಾನಕ್ಕಾಗಿ ಧ್ವಜಹಿಡಿದು ಸಂಚಲನದಲ್ಲಿ ಭಾಗವಹಿಸಿದ್ದೆ.
LikeLiked by 1 person
ಜಗಣ್ಣ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಪಾರ್ಥಿಸುತ್ತೇವೆ
LikeLiked by 1 person
ಮನಮುಟ್ಟುವಂತಿದೆ ನಿಮ್ಮ ಲೇಖನ,
ನೆನಪುಗಳೇ ಹಾಗೆ ಸದಾ ಕಾಡುತ್ತವೆ, ಕೆಲವೊಮ್ಮೆ ನೋವು ಕೆಲವೊಮ್ಮೆ ಸಂತೋಷವನ್ನು ಕೊಡುತ್ತವೆ.
ಇಲ್ಲೆ ಎಲ್ಲೋ ಇದ್ದು ನಮ್ಮನ್ನೆಲ್ಲಾ ಹರಸುತ್ತಿರುತ್ತಾನೆ ನಮ್ಮ ಜಗ್ಗಣ್ಣ,
(ಅಯ್ಯಯ್ಯೋ ಇಷ್ಟು ಬೇಗ ಮೇಲೆಲ್ಲೋ ಕುಳಿತು ಹರಸುವಂತಾದನೇ ನಮ್ಮ ಜಗ್ಗಣ್ಣ)
ನಿಮ್ಮ ಕುಟುಂಬದವರೆಲ್ಲರಿಗೂ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ನನ್ನ ಪ್ರಾರ್ಥನೆ.
ಬಹುಶಃ ನಾನು ಕಂಡಂತ ಅತ್ಯಂತ ಶ್ರಮಜೀವಿ ಜಗ್ಗಣ್ಣ, ನಮಗೆಲ್ಲಾ ಸ್ಪೂರ್ತಿ.
LikeLiked by 1 person
ಮನಮುಟ್ಟುವಂತಿದೆ ನಿಮ್ಮ ಲೇಖನ,
ನೆನಪುಗಳೇ ಹಾಗೆ ಸದಾ ಕಾಡುತ್ತವೆ, ಕೆಲವೊಮ್ಮೆ ನೋವು ಕೆಲವೊಮ್ಮೆ ಸಂತೋಷವನ್ನು ಕೊಡುತ್ತವೆ.
ಇಲ್ಲೆ ಎಲ್ಲೋ ಇದ್ದು ನಮ್ಮನ್ನೆಲ್ಲಾ ಹರಸುತ್ತಿರುತ್ತಾನೆ ನಮ್ಮ ಜಗ್ಗಣ್ಣ,
(ಅಯ್ಯಯ್ಯೋ ಇಷ್ಟು ಬೇಗ ಮೇಲೆಲ್ಲೋ ಕುಳಿತು ಹರಸುವಂತಾದನೇ ನಮ್ಮ ಜಗ್ಗಣ್ಣ)
ನಿಮ್ಮ ಕುಟುಂಬದವರೆಲ್ಲರಿಗೂ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ದಯಪಾಲಿಸಲಿ ಎಂದು ನನ್ನ ಪ್ರಾರ್ಥನೆ.
ಬಹುಶಃ ನಾನು ಕಂಡಂತ ಅತ್ಯಂತ ಶ್ರಮಜೀವಿ ಜಗ್ಗಣ್ಣ, ನಮಗೆಲ್ಲಾ ಸ್ಪೂರ್ತಿ.
LikeLiked by 1 person
Nimma athmiya anubandadada bhavanegalu mathommae namma kannanchalli neeradisithu… Kaleduhoda madhura khsanagalu avismaraniya…. Nammanu agalida namma preetiya Bhavanavara Kannugalanu dhana maduva avakasha doretaduu namma punyavende nama bhavanae…. Aa kannugala moolaka namma bhavanavaru namma joteyalli irutaraendu namma ashaya… Nimma asaeyantae avru mathommae bega namma kutumbadalli hutti baralendu namma ashaya….
LikeLiked by 1 person
True
LikeLike
ಸಾಕಅಷ್ಟುವಿಶಯ ತುಂಬಾ ಹತ್ತಿರ !ಮಕ್ಕಳಾಗಿದ್ದಾಗ ನಡೆದಾಡಿದ ಜಾಗ ಬೆಳೆದುಬಂದ ವಾತಾವರಣ ಓನರ್ ಮನೆ ನೀರಿನ ಭಾವಿ ಸೀಬೆ ತೋಟ ……ನೆನಪುದಳ ಮಾತು ಮದುರ
LikeLiked by 1 person
ಖಂಡಿತವಾಗಿಯೂ ನೆನಪುಗಳ ಬುತ್ತಿ ಮೆಲಕು ಹಾಕುವುದಕ್ಕೆ ಚೆನ್ನ
LikeLike