ಸಂಕ್ರಾಂತಿ ಹಬ್ಬಕ್ಕೆ ತಂದ ತೆಂಗಿನಕಾಯಿಗಳನ್ನು ಹಾಗೆ ಜಾಸ್ತೀ ದಿನ ಇಟ್ರೆ ಕೆಟ್ಟು ಹೋಗಬಹುದು. ಅದಕ್ಕೇ ಈ ರೀತಿಯಾಗಿ ರುಚಿ ರುಚಿಯಾದ ಘಮ ಘಮವಾದ ಕೊಬ್ಬರಿ ಮಿಠಾಯಿ ತಯಾರಿಸಿ ಮನೆಯವರಿಗೆ ಕೊಡಿ ಅದರ ಜೊತೆಯಲ್ಲೇ ನನ್ನ ಕೊಬ್ಬರೀ ಮಿಠಾಯಿ ಪುರಾಣವನ್ನು ಓದಿ ಆನಂದಿಸಿ.
ಕೊಬ್ಬರೀ ಮಿಠಾಯಿ ಮಾಡಲು ಬೇಕಾಗುವ ಸಾಮಗ್ರಿಗಳು.
- ಸಕ್ಕರೆ – ಮುಕ್ಕಾಲು ಕಪ್
- ಹಾಲು – 1 ಕಪ್(ಬೇಕಿದ್ದಲ್ಲಿ ಹಾಲಿನಪುಡಿಯನ್ನೂ ಬಳಸಬಹುದು)
- ಏಲಕ್ಕಿ – ಪುಡಿ ಮಾಡಿದ 5ರಿಂದ 6 ಏಲಕ್ಕಿ ( ಏಲಕ್ಕಿ ಎಷೆನ್ಸ್ ಕೂಡಾ ಬಳಸಬಹುದು)
- ಶುದ್ಧ ತುಪ್ಪ : 1-2 ಟೀ ಚಮಚ
- ಚಿಟುಕಿ – ಅರಿಶಿನ ಇಲ್ಲವೇ ಕೇಸರಿಯನ್ನು ಅಂದವಾಗಿ ಬಣ್ಣ ಬಣ್ಣವಾಗಿ ಕಾಣಲು ಬಳಸಬಹುದು
- ರುಚಿ ಹೆಚ್ಚಿಸಲು ಸಣ್ಣಗೆ ಹೆಚ್ಚಿದ ದ್ರಾಕ್ಷಿ, ಗೊಡಂಬಿ ಮತ್ತು ಬಾದಾಮಿಯನ್ನೂ ಬಳಸಬಹುದು
ಮಾಡುವ ವಿಧಾನ:
ಬಲಿತ ತೆಂಗಿನಕಾಯಿಯ ಬೆಳ್ಳಗಿನ ಭಾಗವನ್ನು ಮಾತ್ರ ತುರಿದುಕೊಳ್ಳಿ ಸಣ್ಣನೆಯ ಉರಿಯಯಲ್ಲಿ ಬಾಣಲೆ ಇಟ್ಟು ಅದಕ್ಕೆ ಹಾಲು ಮತ್ತು ಸಕ್ಕರೆ ಹಾಕಿ ಸ್ವಲ್ಪ ಕುದಿ ಬಂದ ಮೇಲೆ ಕೊಬ್ಬರಿಯನ್ನು ಸೇರಿಸಿ ತಳಹಿಡಿಯದಂತೆ ತಿರುವುತ್ತಿರಬೇಕು, ಕೊಬ್ಬರೀ ಮಿಠಾಯಿ ಬಣ್ಣ ಬಣ್ಣವಾಗಿ ಕಾಣಲು ಅರಿಶಿನ ಇಲ್ಲವೇ ಕೇಸರಿಯನ್ನು ಇದಕ್ಕೆ ಸೇರಿಸಬಹುದು. ಸುಮಾರು 15-20 ನಿಮಿಷಗಳಷ್ಟು ಸಮಯ ಕೆದಕುತ್ತಿದಂತೆ ಪಾಕ ಗಟ್ಟಿಯಾಗುತ್ತದೆ ಮತ್ತು ಘಮ್ಮನೆಯ ಸುವಾಸನೆ ಮೂಗಿಗೆ ಬಡಿಯ ತೊಡಗುತ್ತದೆ. ಈಗ ಮತ್ತಷ್ಟೂ ಘಮ್ಮನೆನಿಸಲು ಏಲಕ್ಕಿ ಪುಡಿ ಅದರ ಜೊತೆಗೆ ಸಣ್ಣಗೆ ಕತ್ತರಿಸಿದ ದ್ರಾಕ್ಷಿ, ಗೋಡಂಬಿ ಮತ್ತು ಬಾದಾಮಿಯನ್ನು ಸೇರಿಸಿ ಇನ್ನೂ 5 ನಿಮಿಷಗಳಾದ ಮೇಲೆ ಬಾಣಲೆಯನ್ನು ಸ್ಟವ್ ನಿಂದ ಕೆಳಗೆ ಇಡಿ.
ಒಂದು ದೊಡ್ಡ ತಟ್ಟೆಗೆ ಸ್ವಲ್ಪ ತುಪ್ಪ ಸವರಿ ಅದಕ್ಕೆ ಕೊಬ್ಬರೀ ಮಿಠಾಯಿ ಪಾಕವನ್ನು ಬಗ್ಗಿಸಿ ತೆಳುವಾಗಿ ತಟ್ಟಿ ಸ್ವಲ್ಪ ಸಮಯ ಆರಲು ಬಿಡಿ. ಸ್ವಲ್ಪ ಆರಿದ ನಂತರ ನಮಗೆ ಬೇಕಾದ ಆಕಾರಕ್ಕೆ ಕತ್ತರಿಸಿದರೆ ರುಚಿ ರುಚಿಯಾದ ಘಮ ಘಮವಾದ ಕೊಬ್ಬರಿ ಮಿಠಾಯಿ ಸಿದ್ಧ.
ಕೊಬ್ಬರೀ ಮಿಠಾಯಿ ಪುರಾಣ
ಮೊನ್ನೆ ತಾನೆ ಸಂಕ್ರಾತಿ ಹಬ್ಬ ಮುಗಿದು ರಥ ಸಪ್ತಮಿ ಮುಗಿಯುವವರೆಗೆ ಎಳ್ಳು ಬೀರುವ ಶಾಸ್ತ್ರ ಮುಂದುವರಿಯುತ್ತಿರುವಾಗ ಮನೆಯವರನ್ನು ಎಳ್ಳು ಬೀರಲು ಕರೆದುಕೊಂಡು ಹೋಗಬೇಕೆಂದು ಇಂದು ಸಂಜೆ ಸ್ವಲ್ಪ ಬೇಗನೆ 7:45ಕ್ಕೆಲ್ಲಾ ಮನೆಗೆ ಹಿಂದಿರುಗಿದಾಗ (ಪ್ರತಿದಿನ 9ರ ನಂತರವೇ ಮನೆಗೆ ಬರುವುದು) ತಕ್ಷಣವೇ ಮೂಗಿಗೆ ಘಮ್ ಎಂದು ಏಲಕ್ಕಿ ಸುವಾಸನೆ ಬಡಿದಾಗ, ವಾಹ್! ಕೊಬ್ಬರಿ ಮಿಠಾಯಿ ಮಾಡಿದ್ದೀಯಾಮ್ಮಾ ಎಂದು ಮನೆಯಾಕೆಯನ್ನು ಕೇಳಿದಾಗ, ಹ್ಹ ಹ್ಹ ಹ್ಹ ಬಹುಶಃ ಹಿಂದಿನ ಜನ್ಮದಲ್ಲಿ ನೀವು ನಾಯಿಯಾಗಿದ್ದಿರೇನೋ? ಎಲ್ಲಾ ವಾಸನೆಗಳು ನಿಮ್ಮ ಮೂಗಿಗೆ ಬಡಿಯುತ್ತದೆ ಎಂದು ನಮ್ಮಾಕಿ ಹುಸಿನಗೆಯಾಡಿದಳು.
ಹಬ್ಬಕ್ಕೆ ತಂದಿದ್ದ ತೆಂಗಿನಕಾಯಿ ತುಂಬಾನೇ ಮನೆಯಲ್ಲಿ ಉಳಿದುಹೋಗಿತ್ತು. ಸುಮ್ಮನೆ ಇಟ್ಟರೆ ಹಾಳಾಗ ಬಹುದಾದ ಕಾರಣ ನಿಮಗಿಷ್ಟವಾದ ಕೊಬ್ಬರಿ ಮಿಠಾಯಿ ಮಾಡಿದ್ದೇನೆ. ಬಟ್ಟೆ ಬದಲಾಯಿಸಿ ಕೈಕಾಲು ತೊಳೆದುಕೊಂಡು ಬನ್ನಿ ನಿಮಗೆ ಕೊಡುತ್ತೇನೆ ಎಂದಳು ನನ್ನೊಡತಿ. ತೆಂಗಿನ ಕಾಯಿಯ ಬೆಳ್ಳಗಿನ ಭಾಗವನ್ನು ಮಾತ್ರವೇ ನುಣ್ಣಗೆ ತುರಿದು, ಅದಕ್ಕೆ ಹದವಾಗಿ ಏಲಕ್ಕಿ ಪುಡಿಯನ್ನು ಬೆರೆಸಿ ರುಚಿ ಹೆಚ್ಚಿಸಲು ಸಕ್ಕರೆಯೊಂದಿಗೆ ಸ್ವಲ್ಪ ಜೇನು ತುಪ್ಪವನ್ನು ಬೆರೆಸಿ ಅತ್ಯಂತ ರುಚಿಯಾಗಿ, ಬಾಯಿಗೆ ಇಟ್ಟೊಡನೆಯೇ ಕರಗುವ ಕೊಬ್ಬರಿ ಮಿಠಾಯಿ ತಿನ್ನುತ್ತಿದ್ದಾಗ ನನ್ನ ಬಾಲ್ಯದ ದಿನಗಳಲ್ಲಿ ಕೊಬ್ಬರಿ ಮಿಠಾಯಿ ಕುರಿತಾದ ಕೆಲವು ಸವಿ ನೆನಪುಗಳು ಜ್ಞಾಪಕಕ್ಕೆ ಬಂದು ಅವುಗಳನ್ನು ಎಲ್ಲರೊಂದಿಗೆ ಹಂಚಿ ಕೊಳ್ಳುತ್ತಿದ್ದೇನೆ.
ಸುಮಾರು ವರ್ಷಗಳ ಹಿಂದೆ ನಮ್ಮ ತಾಯಿಯವರು ಕೊಬ್ಬರಿ ಮಿಠಾಯಿ ಮಾಡಿದ್ದರು. ಬಹುಶಃ ಸಕ್ಕರೆ ಪಾಕ ಹೆಚ್ಚಾಗಿದ್ದ ಕಾರಣ ಮಿಠಾಯಿ ಇನ್ನೂ ಹಸಿ ಹಸಿಯಾಗಿದ್ದ ಕಾರಣ ಅದು ಆರಲೆಂದು ಮನೆಯ ಹಾಲಿನ ಫ್ಯಾನ್ ಕೆಳಗೆ ಇಟ್ಟಿದ್ದರು. ಆದೇ ಸಮಯದಲ್ಲಿ ಸಂಬಂಧಿಕರು ಚಿಕ್ಕ ಮಗುವೊಂದಿಗೆ ಮನೆಗೆ ಅಚಾನಕ್ಕಾಗಿ ಆಗಮಿಸಿದಾಗ ಆ ಕೊಬ್ಬರಿ ಮಿಠಾಯಿ ತಟ್ಟೆಗಳನ್ನು ಅಲ್ಲಿಯೇ ಇದ್ದ ಸೋಫಾದ ಕೆಳಗೆ ತಳ್ಳಿ ಮನೆಗೆ ಬಂದವರ ಆಥಿತ್ಯದಲ್ಲಿ ಮಗ್ನರಾಗಿಬಿಟ್ಟರು. ಸಂಜೆ ನಾನು ಮತ್ತು ನಮ್ಮ ತಂಗಿಯರು ಶಾಲೆಯಿಂದ ಮನೆಗೆ ಬಂದು ಕೈಕಾಲು ತೊಳೆದುಕೊಂಡು ಅಮ್ಮಾ ಹೊಟ್ಟೆ ಹಸಿಯುತ್ತಿದೆ ತಿನ್ನಲು ಏನಾದರು ಕೊಡಿ ಎಂದಾಗ, ಹೇ ನಿಮಗಿಷ್ಟ ಎಂದು ಕೊಬ್ಬರಿ ಮಿಠಾಯಿ ಮಾಡಿದ್ದೇನೆ. ಯಾಕೋ ಏನೋ ಸ್ವಲ್ಪ ಪಾಕ ಜಾಸ್ತಿಯಾಗಿ ಹಸಿ ಹಸಿಯಾಗಿತ್ತು ಅದಕ್ಕೆ ಆರಲು ಇಟ್ಟಿದ್ದೇನೆ. ಅಲ್ಲೇ ಸೋಫಾ ಕೆಳಗೆ ಇಟ್ಟಿದ್ದೇನೆ ಸ್ವಲ್ಪ ತೆಗೆದು ನೋಡು ಬಹುಶಃ ಈಗ ಆರಿರಬಹುದೇನೋ ಎಂದರು. ಮೊದಲೇ ನನಗೆ ಕೊಬ್ಬರಿ ಮಿಠಾಯಿ ಎಂದರೆ ಬಹಳ ಇಷ್ಟ ಹಾಗಾಗಿ ಸೋಫಾ ಕೆಳಗಿ ಬಗ್ಗಿ ತಟ್ಟೆಗೆ ಕೈ ಹಾಕುತ್ತೀನಿ. ತಟ್ಟೆಯೆಲ್ಲಾ ಏನೋ ಒದ್ದೆ ಮತ್ತು ನೀರು ಮಯವಾಗಿತ್ತು. ಇದೇನಪ್ಪಾ ಎಂದು ಹೊರಗೆ ತೆಗೆದು ನೋಡಿದರೆ ಎರಡೂ ತಟ್ಟೆ ತುಂಬಾ ನೀರು ತುಂಬಿದೆ. ಅರೇ ಇದು ಹೇಗಪ್ಪಾ ಮಿಠಾಯಿ ತಟ್ಟೆಯೊಳಗೆ ನೀರು ತುಂಬಿಕೊಂಡಿದೆ ಎಂದುಕೊಂಡರೆ, ಎನೋ ಕೆಟ್ಟ ವಾಸನೆ ಕೂಡಾ ಬರುತ್ತಿತ್ತು. ಅದು ಏನಪ್ಪಾ ಎಂದು ಸರಿಯಾಗಿ ವಾಸನೆ ನೋಡಿದಾಗ ಅದು ಮೂತ್ರದ ವಾಸನೆಯಾಗಿತ್ತು. ಆಗ ಸೋಫಾದ ಮೇಲೆ ಹೊದ್ದಿಸಿದ್ದ ಬಟ್ಟೆಯೂ ಒದ್ದೆಯಾಗಿದ್ದನ್ನು ನೋಡಿದ ಅಮ್ಮನಿಗೆ ಏನಾಗಿರಬಹುದೆಂದು ಅರಿವಾಯಿತು. ಮನೆಗೆ ಬಂದಿದ್ದ ಮಗು ಆಟವೆಲ್ಲಾ ಆಡಿ ಸುಸ್ತಾಗಿ ನಿದ್ದೆ ಮಾಡಿದಾಗ ಮಗುವನ್ನು ಸೋಫಾದ ಮೇಲೆ ಮಲಗಿಸಿದ್ದರು. ನಿದ್ದೆಯಲ್ಲಿ ಬಹುಶಃ ಮೂತ್ರ ಮಾಡಿಕೊಂಡು ಅದೇ ಮೂತ್ರ ಕೊಬ್ಬರಿ ಮಿಠಾಯಿ ತಟ್ಟೆ ತುಂಬಿತ್ತು. ಹಾಗಾಗಿ ನಮ್ಮ ಅಮ್ಮನ ಶ್ರಮವೆಲ್ಲಾ ಕರಗಿ ಮೂತ್ರಮಯವಾಗಿತ್ತು.
ಕೈಯಿಗೆ ಬಂದದ್ದು ಬಾಯಿಗೆ ಬರಲಿಲ್ಲವಲ್ಲಾ!! ಮಕ್ಕಳು ಕೊಬ್ಬರಿ ಮಿಠಾಯಿ ತಿನ್ನಲಿಲ್ಲವಲ್ಲ ಎಂದು ಬೇಸರಿಸಿಕೊಂಡ ನಮ್ಮ ಅಮ್ಮ ಒಂದೆರಡು ದಿನಗಳಲ್ಲಿಯೇ ಮತ್ತೊಮ್ಮೆ ಹೆಚ್ಚಿನ ಕೊಬ್ಬರಿ ಮಿಠಾಯಿ ಮಾಡಿ, ಕಳೆದ ಬಾರಿಯಾದಂತೆ ಈ ಬಾರಿ ಆಗಬಾರದೆಂದು ನಿರ್ಧರಿಸಿ ಮಿಠಾಯಿ ಒಣಗಿದ ಕೂಡಲೇ ಡಬ್ಬಿಯಲ್ಲಿ ಹಾಕಿ ಸಂಜೆ ಶಾಲೆಯಿಂದ ಮನೆಗೆ ಬಂದಾಗ ನಮಗೆಲ್ಲರಿಗೂ ಕೊಬ್ಬರಿ ಮಿಠಾಯಿ ಕೊಟ್ಟರು. ಹಾಗೆಯೇ ಮಾತನಾಡುತ್ತಿದ್ದಾಗ , ನಾನು ಅಮ್ಮಾ ಎಷ್ಟು ಮಿಠಾಯಿಗಳನ್ನು ಮಾಡಿದ್ದೀರಿ? ಎಂದು ಕುತೂಹಲದಿಂದ ಕೇಳಿದಾಗ ಒಂದು ಇಪ್ಪತ್ತೈದು-ಮೂವತ್ತು ಮಿಠಾಯಿಗಳನ್ನು ಮಾಡಿದ್ದೇನೆ ಎಂದು ಹೇಳಿ ಸುಮ್ಮನಾದರು. ಮಾರನೇಯ ದಿನ ನಾವು ಶಾಲೆಯಿಂದ ಮನೆಗೆ ಬಂದಾಗ ಅಮ್ಮ ಸ್ವಲ್ಪ ಕೋಪದಿಂದ ಸುಮ್ಮನೆ ತಪ್ಪು ಒಪ್ಪಿಕೊಂಡು ಬಿಡಿ ಯಾರು ಕೊಬ್ಬರಿ ಮಿಠಾಯಿ ತಿಂದಿದ್ದು? ಎಂದಾಗ, ನಾವೆಲ್ಲಾರೂ ಒಕ್ಕೊರಿನಿಂದ ನಾವಲ್ಲಪ್ಪಾ ನಮಗೇನೂ ಗೊತ್ತಿಲ್ಲಾಪ್ಪಾ ಎಂದೆವು. ಅದೇ ಸಮಯಕ್ಕೆ ನನ್ನ ತಂಗಿ ಎಲ್ಲಿ ನೋಡೋಣ ಎಷ್ಟು ಇದೆ ? ಎಂದು ಡಬ್ಬಿ ತೆಗೆದು ಒಂದೊಂದಾಗಿ ಎಣಿಸಿ, ಯಾಕಮ್ಮಾ ಸುಳ್ಳು ಹೇಳ್ತೀರಿ? ನೋಡಿ ಸರಿಯಾಗಿ ಇಪ್ಪತ್ತೈದು ಮಿಠಾಯಿಗಳಿವೆ ಎಂದಳು. ಆಗ ನಮ್ಮಮ್ಮಾ ಕಳ್ಳೀ ನೋಡು ಹೇಗೆ ಸಿಕ್ಕಿ ಬಿದ್ದೇ !!ಎಂದಾಗ ನಮಗೇನೂ ಗೊತ್ತಾಗಲಿಲ್ಲ. ಆಗ ಅಮ್ಮ ನಿಜ ಹೇಳು ಅಷ್ಟೋಂದು ಮಿಠಾಯಿಗಳನ್ನು ಏನು ಮಾಡಿದೆ? ಸಣ್ಣ ಮಕ್ಕಳು ಅಷ್ಟೊಂದು ಒಂದೇ ದಿನ ತಿಂದರೆ ಆರೋಗ್ಯದ ಗತಿ ಏನು? ಬೇಗ ನಿಜ ಹೇಳ್ತೀಯೋ ಇಲ್ಲಾ ನಾಲ್ಕು ಕೊಡಲೋ ಎಂದು ಗದರಿದಾಗ, ನನ್ನ ತಂಗಿಯ ಕಣ್ಣಿನಲ್ಲಿ ಕಾವೇರಿ ಉಕ್ಕಿ ಹರಿದು, ಅಮ್ಮಾ ಹೊಡಿ ಬೇಡಿ, ಇನ್ನೊಂದು ಸಲ ಹೀಗೆ ಮಾಡೋದಿಲ್ಲ ಎಂದಳು. ಇನ್ನೊಂದು ಸಲ ಈ ರೀತಿ ತಪ್ಪು ಮಾಡುವುದಿರಲಿ ಈಗ ಮಾಡಿದ ತಪ್ಪನ್ನು ಸುಮ್ಮನೆ ಒಪ್ಪಿಕೋ, ಏನು ಮಾಡಿದೆ ಅಷ್ಟೊಂದು ಮಿಠಾಯಿಗಳನ್ನು ಎಂದಾಗ ತಂಗಿ ಅಳುತ್ತಲೇ ಹೇಳಿದ್ದನ್ನು ಕೇಳಿ ನಮಗೆಲ್ಲಾ ಅವಳನ್ನು ಶಿಕ್ಷಿಸ ಬೇಕೋ ಅಥವಾ ಅವಳ ಬುದ್ದಿ ಮತ್ತೆಗೆ ಹೊಗಳಬೇಕೋ ಎಂದು ತಿಳಿಯದೆ ಕಕ್ಕಾಬಿಕ್ಕಿಯಾಗಿದ್ದಂತೂ ಸುಳ್ಳಲ್ಲ. ಅಂದು ಬೆಳಿಗ್ಗೆ ಶಾಲೆಗೆ ಹೋಗುವಾಗ ನನ್ನ ತಂಗಿಗೆ ಕೊಬ್ಬರಿ ಮಿಠಾಯಿ ತಿನ್ನುವ ಮನಸಾಗಿ ಡಬ್ಬಿಯನ್ನು ತೆಗೆದು ನೋಡಿದಾಗ ಅಲ್ಲಿ ಎಷ್ಟೋಂದು ಮಿಠಾಯಿಗಳು ಇದ್ದದ್ದು ನೋಡಿ ಆಶ್ವರ್ಯಗೊಂಡಿದ್ದಾಳೆ. ಅಮ್ಮಾ ಇಪ್ಪತ್ತೈದು-ಮೂವತ್ತು ಮಿಠಾಯಿಗಳನ್ನು ಮಾಡಿದ್ದೇನೆ ಎಂದಿದ್ದಾರೆ , ಈಗ ಇಲ್ಲಿ ನೋಡಿದರೆ ಎಷ್ಟೋಂದು ಇದೆ ಹಾಗಾಗಿ ಸರಿಯಗಿ ಇಪ್ಪತ್ತೈದು ಮಿಠಾಯಿಗಳನ್ನು ಮಾತ್ರವೇ ಇಟ್ರೆ ಅಮ್ಮನಿಗೆ ಏನೂ ಗೊತ್ತಾಗುವುದಿಲ್ಲ ಎಂದು ಭಾವಿಸಿ, ಒಂದೆರಡು ಮಿಠಾಯಿಗಳನ್ನು ತಿಂದು ಮಿಕ್ಕೆಲ್ಲಾ ಮಿಠಾಯಿಗಳನ್ನು ಒಂದು ಕವರಿನಲ್ಲಿ ಹಾಕಿ ಕೊಂಡು ಶಾಲೆಯಲ್ಲಿ ತನ್ನೆಲ್ಲಾ ಗೆಳತಿಯರಿಗೆ ಹಂಚಿಬಿಟ್ಟಿದ್ದಳು ನನ್ನ ತಂಗಿ!!
ಇದಾದ ಸ್ವಲ್ಪ ವರ್ಷಗಳ ನಂತರ ಬೇಸಿಗೆ ರಜೆಯಲ್ಲಿ ನಮ್ಮ ಮನೆಗೆ ನಮ್ಮ ಚಿಕ್ಕಮ್ಮನ ಮಕ್ಕಳೆಲ್ಲಾ ಬಂದಿದ್ದರು. ಆಗಲೂ ಕೂಡಾ ನಮ್ಮ ಅಮ್ಮ ಕೊಬ್ಬರಿ ಮಿಠಾಯಿ ಮಾಡಿ ದಬ್ಬಿಯಲ್ಲಿ ನಮಗೆ ಗೊತ್ತಿಲ್ಲದಂತೆ ಎತ್ತಿಟ್ಟಿದ್ದರು. ಅಂದು ಸಂಜೆ ನಮ್ಮ ತಂದೆ ತಾಯಿ ಎಲ್ಲಿಗೂ ಹೊರಗೆ ಹೊರಟು ನಾವು ಬರುವುದು ಸ್ವಲ್ಪ ತಡವಾಗ ಬಹುದು. ನೀವೆಲ್ಲಾ ಆಟ ಆಡಿಕೊಂಡು ಹೊಟ್ಟೆ ಹಸಿವಾದಾಗ ಊಟ ಮಾಡಿ ಭದ್ರವಾಗಿ ಬಾಗಿಲು ಹಾಗಿಕೊಂದು ಮಲಗಿಬಿಡಿ ನಾವು ಬೀಗ ಕೈ ತೆಗೆದುಕೊಂದು ಹೋಗುತ್ತಿದ್ದೇವೆ ಎಂದು ಹೇಳಿ ಹೊರಗೆ ಹೊರಟು ಹೋದರು. ಅಪ್ಪಾ ಅಮ್ಮಾ ಹೋದ ಮೇಲೆ ನಾವು ಆಟ ಆಡಿ ಸುಸ್ತಾಗಿ, ಬೋರಾಗಿ ತಿನ್ನಲು ಏನಾದರೂ ಇದೆಯೇ ಎಂದು ಅಡುಗೆ ಮನೆಯ ಡಬ್ಬಿಯನ್ನು ಹುಡುಕುತ್ತಿದ್ದಾಗ, ರೋಗಿ ಬಯಸಿದ್ದೂ ಹಾಲೂ ಅನ್ನ, ವೈದ್ಯ ಹೇಳಿದ್ದೂ ಹಾಲೂ ಅನ್ನಾ ಎನ್ನುವಂತೆ, ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ಕೊಬ್ಬರಿ ಮಿಠಾಯಿ ಡಬ್ಬ ನಮ್ಮ ಕಣ್ಣಿಗೆ ಬಿದ್ದೇ ಬಿಟ್ಟಿತ್ತು. ಸರಿ ಎಲ್ಲಾರೂ ಯಥೇಚ್ಚವಾಗಿ ಕೊಬ್ಬರಿ ಮಿಠಾಯಿಗಳನ್ನು ತಿಂದು, ಅಮ್ಮಾ ಬಂದಾಗ ಮಿಠಾಯಿ ತಿಂದ ವಿಷಯವನ್ನು ಅವರಿಗೆ ಹೇಳಬಾರದೆಂದು ಆಣೆ ಪ್ರಮಾಣ ಮಾಡಿ ಕೊಂಡೆವು. ಅದಾದ ಸ್ವಲ್ಪವೇ ಸಮಯದಲ್ಲಿ ಹೋದ ಕೆಲಸವಾಗಲಿಲ್ಲವೆಂದು ನಮ್ಮ ತಂದೆ ತಾಯಿ ಮನೆಗೆ ಬಂದು ನಾವಿನ್ನೂ ಮಲಗಿಲ್ಲದಿದ್ದನ್ನು ನೋಡಿ ಏನ್ರೋ? ಊಟ ಮಾಡಿ ಇನ್ನೂ ಮಲಗಲಿಲ್ಲವೇನ್ರೋ? ಸರಿ ಏನ್ ಮಾಡ್ತಾಇದ್ರಿ ಇಷ್ಟು ಹೊತ್ತು ಎಂದು ಕೇಳಿದ್ದೇ ತಡಾ, ನಮ್ಮ ಚಿಕ್ಕಮ್ಮನ ಮಗ ದೊಡ್ಡಮ್ಮಾನಾವು ಕೊಬ್ಬರಿ ಮಿಠಾಯಿ ತಿನ್ನಲಿಲ್ಲ ಎಂದು ಬಿಡುವುದೇ? ಅವನು ಅಷ್ಟು ಹೇಳಿದ್ದೇ ತಡಾ ಮಿಕ್ಕ ವಿಷಯಗಳೆಲ್ಲಾ ನಮ್ಮ ಅಮ್ಮನಿಗೆ ತಿಳಿಯುವುದಕ್ಕೆ ಹೆಚ್ಚಿನ ಸಮಯ ಬೇಕಾಗಲಿಲ್ಲ. ನಾವೆಲ್ಲಾ ಇಂಗು ತಿಂದ ಮಂಗ ಆಗಿದ್ದಂತೂ ಸುಳ್ಳಲ್ಲ.
ಅಂದು ಮೂತ್ರ ಮಾಡಿ ಕೊಬ್ಬರಿ ಮಿಠಾಯಿ ಹಾಳು ಮಾಡಿದ ಮಗು ಇಂದು ದೊಡ್ಡವನಾಗಿ ಕೆಲಸಕ್ಕೆ ಹೋಗುತ್ತಿದ್ದಾನೆ. ಕೊಬ್ಬರಿ ಮಿಠಾಯಿ ಕದ್ದು ಗೆಳತಿಯರೊಡನೆ ತಿಂದು ಸಿಕ್ಕಿ ಹಾಕಿಕೊಂಡ ತಂಗಿಗೆ ಈಗ ಮದುವೆಯಾಗಿ ಕಾಲೇಜಿಗೆ ಹೋಗುವ ಮಕ್ಕಳಿದ್ದಾರೆ. ಚಿಕ್ಕ ಮಕ್ಕಳು ಯಾವತ್ತೂ ಸುಳ್ಳು ಹೇಳುವುದಿಲ್ಲ ಎಂದು ಸಾಬೀತು ಮಾಡುವಂತೆ ನಮ್ಮ ಅಮ್ಮನ ಮುಂದೆ ಮುಗ್ಧತೆಯಿಂದ ದೊಡ್ದಮ್ಮಾ ನಾವು ಕೊಬ್ಬರಿ ಮಿಠಾಯಿ ತಿನ್ನಲಿಲ್ಲ ಎಂದು ಹೇಳಿ ನಮ್ಮನ್ನೆಲ್ಲಾ ಸಿಕ್ಕಿ ಹಾಕಿಸಿದ್ದ ನನ್ನ ಚಿಕ್ಕಮ್ಮನ ಮಗನಿಗೂ ಇಂದು, ಅಂದು ಅವನಿಗಾಗಿದ್ದಷ್ಟೇ ವಯಸ್ಸಿನ ಮಗನಿದ್ದಾನೆ. ಅವರೆಲ್ಲಾ ಇಂದು ಆ ಪ್ರಸಂಗಗಳನ್ನು ಮರೆತಿರ ಬಹುದಾದರೂ ನನಗೆ ಇಂದಿಗೂ ಕೊಬ್ಬರಿ ಮಿಠಾಯಿಯ ಸಿಹಿಯಷ್ಟೇ ಮಧುರವಾಗಿ ಆ ಪ್ರಸಂಗಗಳು ನೆನಪಿನಲ್ಲಿ ಉಳಿದಿವೆ. ಅದಕ್ಕೇ ಹೇಳೋದು ಬಾಲ್ಯದ ನೆನಪು ಸಿಹಿ ನೆನಪು ಎಂದು
ಏನಂತೀರೀ?
ಕೊಬ್ಬರಿ ಮಿಠಾಯಿ ಪುರಾಣ ಓದಿದೆ. ಚೆನ್ನಾಗಿದೆ. ನಮ್ಮ ಮನೆಯಲ್ಲೂ ಚಿಕ್ಕಂದಿನಲ್ಲಿ ಈ ರೀತಿಯ ಅನುಭವಗಳಾಗಿವೆ. ನಾವು ಮಿಡ್ಲ್ ಸ್ಕೂಲಿಗೆ ಹೋಗುತ್ತಿದ್ದಾಗ ಹತ್ತು ಪೈಸೆ ಇದ್ದರೆ ಶಾಲೆ ಹತ್ತರವಿದ್ದ ಶೆಟ್ಟರ ಅಂಗಡಿಯಲ್ಲಿ ಹೋಗಿ ಹಳದಿ ಬಣ್ಣದ ಎರಡು ಕೊಬ್ಬರಿ ಮಿಠಾಯಿ ತೆಗದುಕೊಂಡು ತಿನ್ನುತ್ತಿದ್ದೆವು. ಆ ಅಂಗಡಿಯಲ್ಲಿ ಕೊಬ್ಬರಿಮಿಠಾಯಿ ಮತ್ತು ರವೆ ಉಂಡೆಯನ್ನು ಬಾಟಲ್ನಲ್ಲಿ ಜೋಡಿಸಿ ಇಡುತ್ತಿದ್ದು ನಮಗೆ ನೋಡಿದರೆ ಬಾಯಲ್ಲಿ ನೀರು ಬರುತ್ತಿತ್ತು. ಅದಲ್ಲದೆ ಕಿತ್ತಳೆ ಪೆಪ್ಪರ್ಮೆಂಟ್, ನಿಂಬೆ ಹುಳಿ ಪೆಪ್ಪರ್ಮೆಂಟ್ ಅಲ್ಲದೆ 1 ಪೈಸೆ ಮತ್ತು 2 ಪೈಸೆಗೆಲ್ಲ ಕಿತ್ತಳೆ, ಸೀಬೆ ಹಣ್ಣುಗಳು ಸಿಗುತ್ತಿತ್ತು.
LikeLike