ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು ಬದುಕು

ಶಂಕರ ಖಾಸಗೀ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಚಿಕ್ಕದಾದ ಚೊಕ್ಕದಾದ ಸಂಸಾರ. ಮಕ್ಕಳು ಶಾಲಾ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಮಡದಿ ಗೃಹಿಣಿ. ನೆಮ್ಮದಿಯಾದ ಸಂಸಾರ.  ಶಂಕರನಿಗೆ  ಬರವಣಿಗೆಯಲ್ಲಿ  ಕೊಂಚ ಹೆಚ್ಚಿನ ಆಸಕ್ತಿ. ಅದರಲ್ಲೂ  ರಾಜಕೀಯ ವಿಷಯಗಳೆಂದರೆ ಪಂಚಪ್ರಾಣ.  ಎಷ್ಟೇ ಚಟುವಟಿಕೆಗಳಿಂದ ಕೂಡಿದ್ದರೂ ಅದು ಹೇಗೋ ಸಮಯ ಮಾಡಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ತನ್ನ ಧರ್ಮ,  ನೆಚ್ಚಿನ ಸಿದ್ಧಾಂತ ಮತ್ತು ರಾಜಕೀಯ ನಾಯಕರುಗಳ ಪರವಾಗಿ  ಪ್ರಖರವಾಗಿ ಲೇಖನ ಬರೆಯುತ್ತಿದ್ದ. ಅಂತಯೇ ಇನ್ನೊಬ್ಬರ ಬರಹಗಳಿಗೆ ವಾದ ಪ್ರತಿರೋಧ ಮಾಡುತ್ತಿದ್ದ. ಅವನ  ಬರವಣಿಗೆ, ಅವನ ವಾದ ವಿವಾದಗಳು ತೀಕ್ಷ್ಣವಾಗಿರುತ್ತಿದ್ದ ಕಾರಣ ಅನೇಕ ಮಿತ್ರರ ಜೊತೆಗೆ ಅನೇಕ ಶತೃಗಳನ್ನೂ ಸಂಪಾದಿಸಿದ್ದ. ಆವನ ಹಲವಾರು ಸ್ನೇಹಿತರು ತಮ್ಮ ವ್ಯಾಟ್ಯಾಸ್ಪ್ ಮತ್ತು ಫೇಸ್ ಬುಕ್ ಗುಂಪುಗಳಲ್ಲಿ  ಶಂಕರನನ್ನು ಬೇಕೆಂದೇ ಸೇರಿಸಿಕೊಂಡು ಅನಗತ್ಯವಾಗಿ ಅವನನ್ನು ಪ್ರಚೋದಿಸಿ ಅವನಿಂದ  ತಮ್ಮ ವಿರೋಧಿಗಳಿಗೆ  ತೀಕ್ಷ್ಣವಾದ ಕಮೆಂಟ್ಗಳನ್ನು ಹಾಕಿಸುತ್ತಿದ್ದರು. ಚುನಾವಣೆ ಸಮಯ ಬಂದಿತಂದರೆ, ಶಂಕರನಿಗೆ ಎಲ್ಲಿಲ್ಲದ ಬೇಡಿಕೆ. ಎಲ್ಲರೂ ಇವನಿಗೆ ದಂಬಾಲು ಬಿದ್ದು ಅವರ ವಿರುದ್ಧ  ಲೇಖನ ಬರೆದು ಕೊಡು ಇವರ ವಿರುದ್ಧ ಬರೆದುಕೊಡು ಎಂದು ಕಾಡಿ ಬೇಡಿ ಬರೆಸಿಕೊಂಡು ಹೋಗುತ್ತಿದ್ದರು. ಹಲವು ಬಾರಿ  ಇವನ ಉಗ್ರ ಲೇಖನಕ್ಕೋ ಇಲ್ಲವೇ ಕಮೆಂಟ್ಗಳು ವಿರೋಧಿ ಬಣಕ್ಕೆ ಕಿಚ್ಚು ಹೆಚ್ಚಿಸಿ ಅನೇಕ ಬಾರಿ ಎಚ್ಚರಿಕೆಯನ್ನೂ ಕೊಟ್ಟಿದ್ದುಂಟು. ಆದರೆ ಬರೆಯುವ ಗುಂಗಿನಲ್ಲಿ ಶಂಕರ  ಇದಾವುದಕ್ಕೂ   ತಲೆ ಕೆಡಿಸಿಕೊಳ್ಳುತ್ತಲೇ ಇರಲಿಲ್ಲ. ತಾನಾಯಿತು ತನ್ನ ಉಗ್ರ ಬರಹಗಳಾಯಿತು.  ಶಂಕರನ ಪತ್ನಿಗೂ ಇದರ ಬಗ್ಗೆ ತುಂಬಾ ಬೇಸರವಿತ್ತು. ಅನಗತ್ಯವಾದ ವಿಚಾರಗಳನ್ನು ಮೈಮೇಲೆ ಎಳೆದು ಕೊಂಡು  ವಿನಾಕಾರಣ ಪರರ ವಿರೋಧ ಕಟ್ಟಿ ಕೊಳ್ಳುವುದು ಬೇಡ ಎಂದು ಸಾರಿ ಸಾರಿ ತಿಳಿ ಹೀಳಿದ್ದೂ ಉಂಟು.  ಇತರರ ಸಹವಾಸ ನಮಗೇಕೆ? ಯಾರು ಅಧಿಕಾರಕ್ಕೆ ಬಂದರೂ ನಮಗೇನೂ ಆಗುವುದಿಲ್ಲ. ನಿಮ್ಮ ದುಡಿಮೆಯಿಂದಲೇ ನಮ್ಮ  ಸಂಸಾರ ಸಾಗಬೇಕಿದೆ.  ಅವರಿಗೆ ನೀವಲ್ಲದಿದ್ದರೆ ಮತ್ತೊಬ್ಬ ಶಂಕರ ಸಿಗುತ್ತಾನೆ. ನಮ್ಮ ಮನೆಗೆ ನೀವೋಬ್ಬರೇ  ಎಂದು ಎಷ್ಟು ಸಾರಿ ತಿಳಿ ಹೇಳಿದ್ದಳು. ನೋಡಿ, ಇದೇ ರೀತಿ ಮುಂದುವರಿಸಿದರೆ ನಾನೂ ಮತ್ತು ನಿಮ್ಮ ಮಕ್ಕಳು ನಿಮ್ಮನ್ನು ಬಿಟ್ಟು ಹೋಗಬೇಕಾಗುತ್ತದೆ ಎಂದೂ ಎಚ್ಚರಿಸಿದರೂ  ಶಂಕರ ತಾನಾಯಿತು ತನ್ನ ಬರಹವಾಯಿತು ಎಂದಿದ್ದ.   ಶಂಕರನ ಹೆಂಡತಿಯೂ ಕೂಡಾ ಅವನ ಮೇಲೆ ಪ್ರಭಾವ ಬೀರಬಲ್ಲ ಅನೇಕರ  ಬಳಿ ತನ್ನ ಗೋಳನ್ನು ಹೇಳಿಕೊಂಡು ಶಂಕರನಿಗೆ  ಈ ರೀತಿಯ ಬರವಣಿಗೆಯ ಬದಲಾಗಿ ನಮ್ಮ ಕುಟುಂಬದ ಕಡೆಗೂ ಗಮನ ಹರಿಸುವಂತೆ ಬುದ್ದಿವಾದ ಹೇಳ ಬೇಕೆಂದು ಕೋರಿಕೊಂಡಳು.  ಅವರುಗಳು ಸಹಾ ಶಂಕರನಿಗೆ ಬುದ್ದಿ ಹೇಳಿದರೂ, ಸರಿ ಸರಿ ಎಂದು ತಿಪ್ಪೇ ಸಾರಿಸಿ  ಎರಡು ದಿನ ಸುಮ್ಮನಾಗುತ್ತಿದ್ದ ಮತ್ತು ಮೂರನೇ ದಿನದಿಂದ ಎಂದಿನಂತೆಯೇ ತನ್ನ ಉಗ್ರ ಲೇಖನಗಳಲ್ಲಿ ಪುಂಖಾನು ಪುಂಖವಾಗಿ ತನ್ನ ನಾಯಕರನ್ನು ಹೊಗಳುತ್ತಾ  ಇತರನ್ನು ಹಳಿಯುತ್ತಲೇ ನಾಯಿ ಬಾಲ ಮತ್ತು ಶಂಕರನ ಬುದ್ದಿ ಡೊಂಕು ಎನ್ನುವುದನ್ನೇ ಎತ್ತಿ ತೋರಿಸುತ್ತಿದ್ದ.   ಯಾರು ಏನು ಹೇಳಿದರೂ, ಹೇಗೇ  ತಿಳಿ ಹೇಳಿದರೂ  ಶಂಕರ ಬದಲಾಗಲೇ ಇಲ್ಲಾ.

ಅದೊಂದು ದಿನ ಮುಖಪುಟದಲ್ಲಿ ಇಬ್ಬರು ರಾಜಕೀಯ ಕಾರಣಕ್ಕಾಗಿ ವಾದ ವಿವಾದ ನಡೆಸುತ್ತಾ ಅದು, ವಿಕೋಪಕ್ಕೆ ತಿರಗಿ, ಒಬ್ಬ ಮತ್ತೊಬ್ಬನ ಮನೆಗೆ ಹೋಗಿ ಧಮ್ಕಿ ಹಾಕುವಷ್ಟರ ಮಟ್ಟಿನ ತಾರಕಕ್ಕೇರಿ ಹೋಯಿತು. ಸುಮ್ಮನಿರಲಾದೆ, ಬೇಡದ ಜಾಗಕ್ಕೆ  ಇರುವೆ ಬಿಟ್ಟು ಕೊಂಡ ಎನ್ನುವಂತೆ ನಮ್ಮ ಶಂಕರನೂ ಕೂಡ ಪರಾ ಪರ ವಿಚಾರಿಸದೆ ಧಮ್ಕಿ ಹಾಕಿಸಿಕೊಂಡವನ ಪರ ನಿಂತು  ಮುಖ ಪುಟದಲ್ಲಿ ವಾದಕ್ಕೆ ಇಳಿದೇ ಬಿಟ್ಟ. ಇಂತಹ ಸಂಧರ್ಭವನ್ನೇ ಕಾಯುತ್ತಿದ್ದ ಶಂಕರನ ವಿರೋಧಿಗಳು ಪರಸ್ಪರ ಕಿತ್ತಾಡಿಕೊಂಡವರನ್ನು ಬಿಟ್ಟು ಶಂಕರನ ಮೇಲೆ ಮುಗಿಬಿದ್ದರು. ಶಂಕರನೂ ಕೂಡಾ ಅಂತಹ ಬೆದರಿಕೆಗಳಿಗೆ ಜಗ್ಗದೆ ಅವರಿಗೆ ಸರಿಯಾದ ಪ್ರತ್ಯುತ್ತರವನ್ನು ನೀಡುತ್ತಲೇ ಹೋದ. ಸಾಮಾನ್ಯವಾದ  ವಾದ, ವಿವಾದವಾಗಿ,ಕೊನೆಗೆ  ವಿತಂಡ ವಾದಕ್ಕೆ ತಿರುಗಿ ಅಂತ್ಯವೇ ಕಾಣದೇ ಹೋಯಿತು.

ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿಯೇ ಶಂಕರನಿಗೆ ಆತನ ಮಗಳ ಸಹಪಾಠಿಯಿಂದ ಕರೆ ಬಂದಿತು.  ಮಗಳ ಸಹಪಾಠಿ ಚಿಕ್ಕಂದನಿಂದಲೂ ಗೊತ್ತಿರುವ ಹುಡುಗ. ಮಗಳು ಪ್ರತೀ ವರ್ಷವೂ ಆತನಿಗೆ ರಾಖೀ ಕಟ್ಟಿ ಅಣ್ಣನ ಸ್ಥಾನ ಕೊಟ್ಟಿದ್ದಳು. ಆತನೂ ಕೂಡ, ಶಂಕರನ ಮಗಳನ್ನು ತನ್ನ ಒಡ ಹುಟ್ಟಿದ ತಂಗಿಯಂತೆಯೇ ನೋಡಿಕೊಳ್ಳುತ್ತಿದ್ದ.  ನಮ್ಮ ಹುಡುಗನ   ಕರೆಯಲ್ಲವೇ ಎನೋ ವಿಷಯ ಇರಬೇಕು ಎಂದು ಕರೆ ಸ್ವೀಕರಿಸಿದಾಗ, ಅಂಕಲ್ ಹೇಗಿದ್ದೀರಿ? ಮನೆಯಲ್ಲಿ ಎಲ್ಲರೂ ಹೇಗಿದ್ದಾರೆ ಎಂಬ ಸಹಜ ಕುಶಲೋಪರಿ ವಿಚಾರಿಸಿದ. ಮಗೂ ನಾವು ಚೆನ್ನಾಗಿದ್ದೇವೆ. ನೀನು ಹೇಗಿದ್ದೀಯಾ? ಮನೆಯಲ್ಲಿ ಎಲ್ಲರೂ ಆರಾಮಾ? ಏನು ಸಮಾಚಾರ. ಬಹಳ ಅಪರೂಪವಾಗಿ ಕರೆ ಮಾಡಿದ್ದೀಯಾ? ಎಂದು ಸಹಜ ಕುತೂಹಲದಿಂದಲೇ ವಿಚಾರಿಸಿದ ಶಂಕರ.

ಅಂಕಲ್ ಏನೂ ತಪ್ಪು ತಿಳಿದುಕೊಳ್ಳಲಿಲ್ಲಾ  ಅಂದ್ರೇ ಒಂದು ವಿಷಯ ಹೇಳಬಹುದಾ? ಅಂತಾ ಕೇಳಿದ. ಅರೇ ಇದೇನಪ್ಪಾ ಈ ರೀತಿಯ ರೋಚಕತೆ  ಎಂದು ಮನಸ್ಸಿನಲ್ಲಿಯೇ ಯೋಚಿಸುತ್ತಾ ಹೇಳಪ್ಪಾ ಏನು ಸಮಾಚಾರ ಅಂದಾ ಶಂಕರ. ಅಲ್ಲಾ ನಾನು ತುಂಬಾ ದಿನಗಳಿಂದ ಈ ವಿಷಯ ನಿಮ್ಮಲ್ಲಿ ಹೇಳ ಬೇಕೂ ಅಂತಿದ್ದೆ. ಆದರೆ ಅದು ಹೇಗೆ ಹೇಳುವುದು ಎಂದು ಬಹಳ ಯೋಚಿಸುತ್ತಿದ್ದೆ. ಅದೇನಪ್ಪಾ ಅಂದ್ರೇ, ನಾನು ಚಿಕ್ಕ ಹುಡುಗ. ನಿಮ್ಮ ಕಣ್ಣ ಮುಂದೆ ಆಡಿ ಬೆಳೆದವನು. ನೀವು ದೊಡ್ಡವರು. ನಿಮಗೆ ಹೇಳುವಷ್ಟರ ಮಟ್ಟಿಗೆ ನನಗೆ ತಿಳುವಳಿಗೆ ಇಲ್ಲದಿರಬಹುದು. ಆದರೂ ನಿಮ್ಮ ಹಿತೈಷಿಯಾಗಿ ಒಂದು ವಿಷಯ ಹೇಳಲೇ ಬೇಕಿದೆ.  ಬೇಕಿದ್ರೆ ಫೋನ್ ಬೇಡ ಅಂದ್ರೇ, ಮನೆಗೇ ಬಂದು ಹೇಳ್ತೀನಿ ಅಂತಾ  ಮತ್ತಷ್ಟೂ ಕುತೂಹಲ ಹೆಚ್ಚಿಸಿದ.

ಹೇಳೀ ಕೇಳಿ ಶಂಕರ ಅಧಿಕ ರಕ್ತದೊತ್ತಡದ ಪ್ರಜೆ. ಮಗಳ ಸ್ನೇಹಿತ  ಹೇಳುತ್ತಿರುವುದನ್ನು ಕೇಳಿ ಅವನ ಹೃದಯದ ಬಡಿತ ಹೆಚ್ಚಾಗ ತೊಡಗಿತು. ಹೇ, ಹೇ,  ಮನೆಗೆ ಯಾವಾಗ ಬೇಕಾದರೂ ಬಾ. ನಿಮ್ಮ ಮನೆಗೆ ಬರುವುದಕ್ಕೆ ನೀನು ಬರುವುದಕ್ಕೆ ಸಂಕೋಚವೇಕೆ. ಅದು ಸರಿ ಈಗ ವಿಷಯಕ್ಕೆ ಬಾ ಎಂದು ಸ್ವಲ್ಪ ಏರು ಧನಿಯಲ್ಲಿಯೇ ಹೇಳಿದ.  ಶಂಕರ ಧ್ವನಿ ಬದಲಾದದ್ದನ್ನು ಗಮನಿಸಿದ ಮಗಳ ಸ್ನೇಹಿತ, ಅಂಕಲ್ ನೀವು ಗಾಭರಿ ಪಡುವಂತಹ ವಿಷಯವೇನಲ್ಲಾ. ನಾನು ನಿಮ್ಮ ಬರಹಗಳಿಗೆ ಮಾರು ಹೋದವ. ಅದೆಷ್ಟೋ ಬಾರಿ ನೀವೇ ನನಗೆ ಭಾಷಣಗಳನ್ನು ಬರೆದು ಕೊಟ್ಟಿದ್ದೀರಿ. ಅದರಿಂದ ನನಗೆ ಬಹುಮಾನಗಳೂ ಬಂದಿವೆ.  ಆದರೆ ನಿಮ್ಮ ಇತ್ತೀಚಿನ ಬರಹಗಳು ಬಹುತೇಕ ದ್ವೇಷ ಮತ್ತು ಅಸೂಯೆಗಳಿಂದ ಕೂಡಿದ್ದು ಏಕ ಪಕ್ಷೀಯವಾಗಿವೆ. ಹಲವಾರು ಬಾರಿ ನಿಮ್ಮ ವಾದವನ್ನು ಎಲ್ಲರೂ ಒಪ್ಪಲೇ ಬೇಕೆನ್ನುವ ಧಾಟಿಯಲ್ಲಿದೆ. ಅದಲ್ಲದೆ ಕಳೆದ ಒಂದು ವಾರಗಳಿಂದ ನಿಮ್ಮ ಬಗ್ಗೆ ಮುಖ ಪುಟದಲ್ಲಿ ಇಲ್ಲ ಸಲ್ಲದ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.  ನನಗೆ ತಿಳಿದಂತೆ ಅವರ ಆರೋಪಗಳಲ್ಲಿ ಸತ್ಯವಿಲ್ಲದಿದ್ದರೂ ಜನರ ದೃಷ್ಠಿಯಲ್ಲಿ ನೀವೇ ಆರೋಪಿ ಎಂದು ಬಿಂಬಿಸುವುದರಲ್ಲಿ  ಅವರು ಯಶಸ್ವಿಯಾಗುತ್ತಿದ್ದಾರೆ. ದಯವಿಟ್ಟು ನನ್ನನ್ನು  ನಿಮ್ಮ  ಕುಟುಂಬದವ ಎಂದು ತಿಳಿದು ಈ ರೀತಿಯ ಬರವಣಿಗೆಗಳನ್ನು ನಿಲ್ಲಿಸಿ. ನೀವು ಬರೆಯಬೇಕಾದದ್ದು ಇನ್ನೂ ಎಷ್ಟೋ ವಿಷಯಗಳಿವೆ.  ನಿಮ್ಮ ಅನುಭವಗಳು ನಮ್ಮಂತಹ ಕಿರಿಯರಿಗೆ ತಿಳಿಸಬೇಕಾಗಿದೆ. ಆದ್ದರಿಂದ ಮತ್ತೊಮ್ಮೆ ನಿಮ್ಮ ಮಗಳ ಸ್ನೇಹಿತನಾಗಿಯೂ ನಿಮ್ಮ ಅಭಿಮಾನಿಯಾಗಿಯೂ ಕಳಕಳಿಯಿಂದ ಕೇಳಿ ಕೊಳ್ಳುತ್ತೇನೆ. ದಯವಿಟ್ಟು ಈ ರೀತಿಯ ಬರಹಗಳಿಂದ ದೂರವಿರಿ. ಇದರಿಂದ ನಿಮ್ಮ ಆರೋಗ್ಯವೂ ಸುಧಾರಿಸುತ್ತದೆ.  ಈಗ ನಿಮ್ಮ ಸ್ನೇಹಿತನಿಗೆ ಧಮ್ಕಿ ಹಾಕಿದ್ದಾರೆ. ಮುಂದೆ ಇದೇ ಪರಿಸ್ಥಿತಿ ನಿಮಗೂ ಬರಬಹುದು. ಕೋಪದ ಭರದಲ್ಲಿ ಪರಿಸ್ಥಿತಿ ಕೈ ಮೀರಿದರೆ ನಿಮಗೆ ಹಾನಿಯಾಗಲೂ ಬಹುದು.  ಆ ರೀತಿಯಾಗಿ ಕಲ್ಪಿಸಿಕೊಳ್ಳಲು ನನ್ನಿಂದಾಗದು .  ಅದಕ್ಕಾಗಿ ದಯವಿಟ್ಟು ಸುಮ್ಮನಾಗಿಬಿಡಿ. ಇದರಿಂದ  ನಿಮ್ಮ ಮನಸ್ಸಿಗೇ ಶಾಂತಿ ದೊರೆತು ನಿಮ್ಮಿಂದ ಇನ್ನೂ ಅತ್ಯುತ್ತಮವಾದ ಬರಹಗಳು ಹೊರಬರುತ್ತವೆ ಎಂದು ಹೇಳಿ ಕರೆ ನಿಲ್ಲಿಸಿದ.

ತನ್ನ ಮಗಳ ವಯಸ್ಸಿನ ಹುಡುಗ, ತನ್ನ ಕಣ್ಣ ಮುಂದೆ ಆಡಿ ಬೆಳೆದ ಹುಡುಗ, ತನ್ನಿಂದ ಉಪಕೃತನಾದ ಹುಡುಗ ಈ ರೀತಿಯಾಗಿ ಹೇಳಿದ್ದದ್ದು ಶಂಕರನ ಅಹಂಗೆ ಪೆಟ್ಟು ಕೊಟ್ಟಿತ್ತು. ಆರಂಭದಲ್ಲಿ  ಈ ಸಣ್ಣ ಹುಡುಗನ ಮಾತು ನಾನೇಕೇ ಕೇಳಬೇಕು. ಅವನಿಗೇನೂ ಗೊತ್ತಾಗುತ್ತದೆ ಎಂದು ಭುಸು ಗುಟ್ಟಿದ ಶಂಕರ.  ಒಂದೆರಡು ದಿನಗಳ ಕಳೆದ ನಂತರ ಹಾಗೇ ಸುಮ್ಮನೆ ಯೋಚಿಸುತ್ತಿರುವಾಗ, ಅರೇ ಹೌದಲ್ಲವೇ, ಆತ ಹೇಳಿದ್ದರಲ್ಲಿ ಸತ್ಯಾಂಶವಿದೆ. ಇದನ್ನೇ ಅಲ್ಲವೇ ತನ್ನ ಮಡದಿಯೂ ಹೇಳಿದ್ದು ಮತ್ತು ಇತರರಿಂದ ಹೇಳಿಸಿದ್ದು. ಛೇ. ಎಂತಹ ದುಡುಕು ಬುದ್ಧಿ ನನ್ನದು. ಒಳ್ಳೆಯ ವಿಷಯ, ಚಿಕ್ಕವರಾಗಲೀ, ದೊಡ್ಡವರಾಗಲೀ ಹೇಳಿದರೆ ಕೇಳಬೇಕಾದದ್ದು ಒಳ್ಳೆಯ ಸದ್ಗುಣ ಎಂದು ಭಾವಿಸಿ, ಅಂದಿನಿಂದಲೇ ಬದಲಾಗಬೇಕೆಂದು ನಿರ್ಧರಿಸಿದ.  ಮುಖಪುಟದಿಂದ ಕ್ರಮೇಣ ವಿಮುಖನಾಗುತ್ತಾ ತನ್ನದೇ ಒಂದು ಬ್ಲಾಗ್ ಆರಂಭಿಸಿ ತಾನು ಕಂಡದ್ದೂ, ಕೇಳಿದ್ದು,  ತನ್ನ  ಜೀವನದ  ಅನುಭವಗಳನ್ನು  ಅಕ್ಷರ ರೂಪದಲ್ಲಿ ದಾಖಲಿಸತೊಡಗಿದ. ಕೆಲವೇ ದಿನಗಳಲ್ಲಿ ಶಂಕರನ ಬ್ಚಾಗ್ ಪ್ರಸಿದ್ಧಿಯಾಗ ತೊಡಗಿತು. ಅವರನ ಬರಹಗಳನ್ನು ಓದಿದ, ಒಂದೆರಡು ವಾರ ಪತ್ರಿಕೆಗಳು ಅವನ ಲೇಖನಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಗೊಳಿಸಿದ ಮೇಲಂತೂ ಶಂಕರ ಆನಂದಕ್ಕೆ ಪಾರವೇ ಇಲ್ಲ.  ಸ್ವಲ್ಪವೇ ದಿನಗಳಲ್ಲಿ ಒಂದು ಪತ್ರಿಕೆಯ ಅಂಕಣಕಾರನಾಗಿ ಬಡ್ತಿಯೂ ದೊರೆತು, ಈಗ ಪ್ರತಿವಾರವೂ ತಪ್ಪದೆ  ಒಂದು ಸಮಾಜಿಕ ಚಿಂತನಾಯುತ ಲೇಖನಗಳನ್ನು ಬರೆಯುತ್ತಾ, ಓದುಗರು ಪ್ರತೀ ವಾರವೂ ಅವನ ಬರಹಗಳಿಗೆ ಚಡ ಪಡಿಸುವಂತೆ ಬರೆಯತೊಡಗಿದ. ಇದರಿಂದಾಗಿ ಪ್ರಶಸ್ತಿ ಪರಸ್ಕಾರಗಳು ಅವನನ್ನು  ಹುಡುಕಿಕೊಂಡು ಬರಲಾರಂಭಿಸಿದ ಮೇಲಂತೂ, ಮಡದಿ ಮಕ್ಕಳಿಗೆ ಮತ್ತು ವಿಶೇಷವಾಗಿ ಅವನ ಮಗಳ ಸ್ನೇಹಿತ ಮತ್ತು ಶಂಕರನ ಆಪ್ತ ಬಂಧು-ಮಿತ್ರರಿಗೆ ಶಂಕರ ಮೇಲಿನ ಗೌರವ ಮತ್ತು ಅಭಿಮಾನ ಇನ್ನಷ್ಟು ಹೆಚ್ಚಾಗ ತೊಡಗಿತು ಮತ್ತು ಅವರೆಲ್ಲರ ಸಂಬಂಧ ಇನ್ನೂ ವೃಧ್ದಿಸ ತೊಡಗಿತು. ಹೋದ ಬಂದ ಕಡೆಯಲ್ಲೆಲ್ಲಾ ಶಂಕರನನ್ನು ಗುರುತಿಸಿ ಮಾತಾನಾಡಿಸಿ, ಸೆಲ್ಫ್ಪಿ ತೆಗೆದು ಕೊಳ್ಳ ತೊಡಗಿದಾಗ ಶಂಕರನ ಮಡದಿಗೆ ಸಾರ್ಥಕತೆಯ  ಅನುಭವ.  ಅಲ್ಲಿಯವರೆಗೂ ಬರೆಯ ಬೇಡಿ ಎನ್ನುತ್ತಿದ್ದ ಮಡದಿ ರೀ ಈ ವಿಷಯ ಬರೆಯಿರಿ, ಈ ವಿಷಯ ಬರೆಯಿರಿ. ಜನ ಇಷ್ಟ ಪಡುತ್ತಾರೆ ಎಂದು ಶಂಕರಿನಿಗೆ ಪ್ರೋತ್ಸಾಹ ಕೊಡ ತೊಡಗಿದಳು. ಮನೆಯಲ್ಲಿ ಹೆಂಡತಿ, ಮಕ್ಕಳ ಸಹಕಾರ ಸಿಕ್ಕಿದ ಮೇಲಂತೂ ಶಂಕರನ ಬರಹ ಇನ್ನಷ್ಟು ಪಕ್ವವಾಗಿ, ಬರಹಗಳಿಗಾಗಿ  ಹೊಸಾ ಹೊಸಾ ಪ್ರದೇಶಕ್ಕೆ ಕುಟುಂಬದೊಡನೆ ಹೋಗಿ ತನ್ನ ಅನುಭವಗಳನ್ನು  ಬರೆಯತೊಡಗಿದ.  ದ್ವೇಷ ಮತ್ತು ಅಸೂಯೆಗಳಿಂದ ದೂರವಾಗಿ ಪ್ರೀತಿ, ದೇಶ ಪ್ರೇಮ ಮತ್ತು ಅನುಭವಗಳ ಬಗ್ಗೆ ಬರೆಯತೊಡಗಿದ್ದರಿಂದ ಆತನ ಆರೋಗ್ಯದಲ್ಲೂ ತಕ್ಕ ಮಟ್ಟಿಗಿನ  ಸುಧಾರಣೆ ಕಂಡಿತು.

ಶಂಕರನ ಮಗಳ ಸಹಪಾಠಿಯ ಆ ಒಂದು ಕರೆ, ನಿಜಕ್ಕೂ ಶಂಕರನ ಬದುಕನ್ನೂ ಮತ್ತು ಬರವಣಿಗೆಯನ್ನು ಬದಲಾಯಿಸಿತು. ಇಂದು ಶಂಕರ ಮನೆಯಲ್ಲಿ ಸುಖೀ ಸಂಸಾರ ನಡೆಸುತ್ತಾ,  ಸಮಾಜದಲ್ಲಿ ಒಂದು ಆದರ್ಶ ಪುರುಷನಾಗಿ ಜೀವನ ನಡೆಸುವಂತಾಗಿದೆ ಎಂದಾದರೇ ಅದಕ್ಕೇ ಆ ಕರೆಯೇ ಕಾರಣ.  ಇದೇ ಅಲ್ಲವೇ ಒಂದು ಸತ್ವಯುತವಾದ  ಕರೆಯ ಮಹತ್ವ.

ಏನಂತೀರೀ?

2 thoughts on “ಆ ಒಂದು ಕರೆ,  ಬದಲಾಯಿಸಿತು ಬರವಣಿಗೆ ಮತ್ತು ಬದುಕು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s