ಪರಿಸರದ ಮೇಲೆ ಪ್ಲಾಸ್ಟಿಕ್ ಎಂಬ ಮಾರಿ

ಸರಿ ಸುಮಾರು ಮೂವತ್ತು ನಲವತ್ತು ವರ್ಷಗಳ ಹಿಂದೆ ಯಾವುದೇ ಮನೆಗಳಿಗೆ ಹೋದರೂ ನಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದದ್ದು ಬಾಗಿಲಿಗೆ ಕಟ್ಟಿರುವ ಒಣಗಿದ ಮಾವಿನ ಎಲೆಯ ತೋರಣ. ತೋರಣದ ಅಡಿಯಲ್ಲಿ ತಲೆಬಾಗಿ ಮನೆಯ ಒಳ ಹೊಕ್ಕಲ್ಲಿ ವಿಶಾಲವಾದ ಪ್ರಾಂಗಣ ಅದರ ಮೂಲೆಯಲ್ಲೊಂದು ಕಾಲ್ತೊಳೆಯುವ ಸ್ಥಳ. ತಾಮ್ರವೋ ಇಲ್ಲವೇ ಹಿತ್ತಾಳೆ ಕೊಳಗದಲ್ಲಿದ್ದ ನೀರನ್ನು ತಂಬಿಗೆಯಿಂದ ತುಂಬಿಕೊಂಡು ಕಾಲ್ತೊಳೆದುಕೊಂಡು, ಶುದ್ಧವಾದ ವಸ್ತ್ರದಿಂದ ಒರೆಸಿಕೊಂಡು ಹಜಾರದಲ್ಲಿ ಹಾಕಿರುವ ನಾನಾ ರೀತಿಯ ಮರದ ಪೀಠೋಪರಣದ ಮೇಲೆ ಆಸೀನರಾಗುತ್ತಿದ್ದಂತೆಯೇ ಮನೆಯೊಡತಿ ಪಳ ಪಳನೆ ಹೊಳೆಯುತ್ತಿದ್ದ ಹಿತ್ತಾಳೆ ಲೋಟದಲ್ಲಿ ಶುದ್ಧವಾದ ಕುಡಿಯುವ ನೀರು ಜೊತೆಯಲ್ಲಿ ತಾಮ್ರದ ತಟ್ಟೆಯಲ್ಲಿ ಬೆಲ್ಲದ ತುಣುಕುಗಳನ್ನು ತಂಡಿಡುತ್ತಿದ್ದರು. ನಿಧಾನವಾಗಿ ನೀರು ಕುಡಿಯುತ್ತಾ ಮನೆಯ ಹಜಾರದ ಸುತ್ತ ಮುತ್ತಲೂ ಕಣ್ಣಾಡಿಸಿದಲ್ಲಿ ತೇಗ, ಬೀಟೆ, ಮರದ ಕಟ್ಟು ಹಾಕಲ್ಪಟ್ಟ ಹಲವಾರು ದೇವರ ಪಟಗಳು.

ತಿಂಡಿ ಇಲ್ಲವೇ ಊಟದ ಸಮಯಕ್ಕನುಗುಣವಾಗಿ ಊಟದ ಮನೆಯಲ್ಲಿ ಕುಳಿತುಕೊಂಡರೆ, ವಿಶಾಲವಾದ ತಟ್ಟೆಗಳೋ ಇಲ್ಲವೇ ಬಾಳೆ ಅಥವಾ ಪೋಣಿಸಿರುವ ಮುತ್ತುಗದ ಎಲೆಗಳ ಮೇಲೆ ಬಿಸಿ ಬಿಸಿ ಅಹಾರ ಅದರ ಮೇಲೆ ಶುದ್ಧವಾದ ಮತ್ತು ಹಸನಾದ ತುಪ್ಪಾ, ಜೊತೆಗೆ ಉಪ್ಪಿನಕಾಯಿ ಇಲ್ಲವೇ ಚೆಟ್ನಿಪುಡಿ ಜೊತೆಗೆ ಬಡಿಸದ ಆಹಾರವನ್ನು ಸವಿಯುತ್ತಿದ್ದರೆ ಆಹಾ ಮಹದಾನಂದ. ಊಟವಾದ ನಂತರ ಭುಕ್ತಾಯಾಸವನ್ನು ಪರಿಹರಿಸಿಕೊಳ್ಳಲು ಹಾಗೆಯೇ ಮಂಚದ ಮೇಲೆ ಪವಡಿಸಿಕೊಂಡು ಗಾಳಿಯಾಡಿಸಲು ಬಿದಿರಿನದೋ ಇಲ್ಲವೇ ಲಾಮಂಚದ ಬೀಸಣಿಗೆಯೊಂದಿಗೆ ಬೀಸಿಕೊಳ್ಳುತ್ತಿದ್ದರೆ ಅದುವೇ ಸ್ವರ್ಗ ಸುಖಃ.

ಆದರೆ ಇಂದು ಈ ಎಲ್ಲಾ ಚಿತ್ರಣವೂ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಔಷಧೀಗುಣವುಳ್ಳ ಮಾವು ಮತ್ತು ಬೇವಿನ ಎಲೆಯ ತೋರಣದ ಬದಲಿಗೆ ಸದಾ ಹಸಿರಾಗಿರುವ ಪ್ಲಾಸ್ಟಿಕ್ ತೋರಣ, ನೀರು ಇಡಲು ಪ್ಲಾಸ್ಟಿಕ್ ಬಕೀಟ್, ಬಿಂದಿಗೆ ಮತ್ತು ತಂಬಿಗೆ. ಕುಳಿತು ಕೊಳ್ಳಲು ಮತ್ತು ಆಯಾಸ ಪರಿಹರಿಸಿಕೊಳ್ಳಲು ಮತ್ತದೇ ಪ್ಲಾಸ್ಟಿಕ್ ಚೇರ್ ಮತ್ತು ಕುರ್ಚಿಗಳು. ಹಜಾರದಲ್ಲಿರುವ ದೇವರ ಪಟಗಳ ಮೇಲೆ ಎಂದೂ ಬಾಡದ ಮತ್ತು ಸುವಾಸನೆಯನ್ನೂ ಬೀರದ ನಿರ್ಜೀವ ಪ್ಲಾಸ್ಟಿಕ್ ಹಾರಗಳು. ಹಜಾರದಲ್ಲಿರುವ ಎಲ್ಲಾ ಎಲೆಕ್ಟ್ರಿಕಲ್ ಸ್ವಿಚ್ಗಳೂ ಪ್ಲಾಸ್ಟಿಕ್ಕಿನದೇ. ಆಹಾರ ಸೇವಿಸಲು ಮತ್ತು ನೀರು ಕುಡಿಯಲು ಆಕರ್ಶಕವಾದ ಬಣ್ಣ ಬಣ್ಣದ ಪ್ಲಾಸ್ಟಿಕ್ ತಟ್ಟೆ ಮತ್ತು ಲೋಟಗಳು. ಹೀಗೆ ನಮ್ಮ ಜೀವನ ಶೈಲಿಯಲ್ಲಿ ಸರ್ವವೂ ಪ್ಲಾಸ್ಟಿಕ್ ಮಯವಾಗಿ ಹೋಗಿರುವುದು ನಿಜಕ್ಕೂ ಆತಂಕ ಮತ್ತು ಕಳವಳಕಾರಿಯಾಗಿದೆ.

ಬೆಳಗ್ಗೆ ಎದ್ದು ಹಲ್ಲುಜ್ಜಲು ಬಳಸುವ ಬ್ರಷ್ನಿಂದ ಹಿಡಿದು, ನೀರಿಗಾಗಿ ಬಳಸುವ ಕೊಡ, ಬಕೆಟ್, ಅಡಿಗೆ ಮನೆಯಲ್ಲಿರುವ ಪಾತ್ರೆ ಪಗಡಗಳು, ಅರಿಯುವ ಒರಳು ಕಲ್ಲಿನ ಬದಲು ಪ್ಲಾಸ್ಟಿಕ್ ಮಿಕ್ಸರ್ಗಳು, ಚೆನ್ನ ಪಟ್ಟಣದ ಬಣ್ಣ ಬಣ್ಣದ ಮರದ ಆಟಿಕೆಗಳ ಜಾಗದಲ್ಲಿ ಚೀನಾ ದೇಶದಿಂದ ಆಮದಾದ ಅಗ್ಗದ ಪ್ಲಾಸ್ಟಿಕ್ ಆಟಿಕೆಗಳು, ಚರ್ಮದ ಚಪ್ಪಲಿಯ ಜಾಗದಲ್ಲಿ ಬಣ್ಣ ಬಣ್ಣದ ಪ್ಲಾಸ್ಟಿಕ್ ಶೂಗಳು ನೈಲಾನ್ ಸಾಕ್ಸಗಳು. ಮರದ ಪೆನ್ಸಿಲ್ ಮತ್ತು ಲೋಹದ ಪೆನ್ ಗಳ ಬದಲಾಗಿ ಪ್ಲಾಸ್ಟಿಕ್ ಪೆನ್ನು ಮತ್ತು ಪೆನ್ಸಿಲ್ಗಳು. ಬಟ್ಟೆಯ ಶಾಲಾ ಹಡಪದ ಬದಲಿಗೆ ಮತ್ತದೇ ಬಣ್ಣ ಬಣ್ಣದ ಪ್ಲಾಸ್ಟಿಕ್ ಸ್ಕೂಲ್ ಬ್ಯಾಗ್. ಹಿತ್ತಾಳೆ ಇಲ್ಲವೇ ಸ್ಟೀಲ್ ಊಟದ ದಬ್ಬಿಗಳ ಜಾಗದಲ್ಲಿ ತರ ತರಹದ ದುಬಾರಿ ಪ್ಲಾಸ್ಟಿಕ್ ವೇರ್ ಊಟದ ಡಬ್ಬಿಗಳು. ಇನ್ನು ಹೆಣ್ಣುಮಕ್ಕಳು ಹಾಕುವ ಚೆಪ್ಪಲಿ, ನೇತು ಹಾಕಿಕೊಳ್ಳುವ ಪರ್ಸ್, ಕೈಗೆ ಹಾಕಿಕೊಳ್ಳುವ ಬಳೆ, ತಲೆಗೆ ಹಾಕಿಕೊಳ್ಳುವ ಕ್ಲಿಪ್ಗಳು, ಮೇಕಪ್ ಮಾಡಿಕೊಳ್ಳಲು ಬಳೆಸುವ ಕಾಸ್ಮೆಟಿಕ್ ಡಬ್ಬಿ ಹೀಗೆ ಅಡಿಯಿಂದ ಮುಡಿಯವರೆಗೂ ಪ್ಲಾಸ್ಟಿಕ್. ಒಟ್ಟಿನಲ್ಲಿ ಆಡು ಮುಟ್ಟದ ಸೊಪ್ಪಿಲ್ಲ . ಪ್ಲಾಸ್ಟಿಕ್ ಇಲ್ಲದ ಜಾಗವೇ ಇಲ್ಲ ಎನ್ನುವ ಆಧುನಿಕ ಗಾದೆ ಮಾತಾಗಿದೆ.

ಇನ್ನೂ ಕೃಷಿಯಲ್ಲಂತೂ ಪ್ಲಾಸ್ಟಿಕ್ ಬಗ್ಗೆ ಹೇಳ ತೀರದು. ಗೊಬ್ಬರದ ಚೀಲದಿಂದ ಹಿಡಿದು, ಪಶು ಆಹಾರ ಚೀಲ, ಕೀಟನಾಶಕಗಳ ಕ್ಯಾನ್, ನೀರಿನ ಪೈಪ್, ಡ್ರಿಪ್ ಪೈಪ್, ಸ್ಪ್ರಿಂಕ್ಲರ್, ಜೆಟ್, ಪ್ಲಾಸ್ಟಿಕ್ ಟಾರ್ಪಾಲ್, ಕೀಟಗಳು ಮತ್ತು ಪಕ್ಷಿಗಳಿಂದ ರಕ್ಷಿಸುವ ನೆಟ್ಗಳು, ಮಣ್ಣು ತೆಗೆದು ಹಾಕಲು ಬಿದಿರಿನ ಮಂಕರಿಗಳ ಜಾಗದಲ್ಲಿ ಪ್ಲಾಸ್ಟಿಕ್ ಮೊರ ಮತ್ತು ಬುಟ್ಟಿಗಳು. ದನ ಕರುಗಳನ್ನು ಕಟ್ಟಿಹಾಕಲು ಮತ್ತು ಭಾವಿಗಳಿಂದ ನೀರು ಸೇದಲು ಬಳೆಸುತ್ತಿದ್ದ ಹಗ್ಗಗಳ ಜಾಗದಲ್ಲಿ ನೈಲಾನ್ ಹಗ್ಗಗಳು, ಚೀಲಗಳನ್ನು ಕಟ್ಟಲು ಗೋಣಿ ದಾರದ ಬದಲು ನೈಲಾನ್ ದಾರಗಳು ಹೀಗೆ ಎಲ್ಲಾ ಕಡೆಯಲ್ಲೂ ಪ್ಲಾಸ್ಟಿಕ್ ನಮ್ಮ ಬದುಕಿನಲ್ಲಿ ಆವರಿಸಿಕೊಂಡು, ಪ್ಲಾಸ್ಟಿಕ್ ಇಲ್ಲದೇ ಜೀವನವೇ ಸಾಧ್ಯವಿಲ್ಲ ಅದರ ಬದಲಿಗೆ ಬೇರೇನೂ ಬಳಸಲೂ ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿರುವುದು ಅತ್ಯಂತ ಕಳವಳಕಾರಿಯಾಗಿದೆ.

ಸಾಮಾನು ತರಲು ಇಲ್ಲವೇ ತರಕಾರಿ ತರಲು ಅಥವಾ ಬಟ್ಟೆಗಳನ್ನು ತರಲು ಅಂಗಡಿಗಳಿಗೆ ಹೋಗುವಾಗ ಕೈಚೀಲ ತೆಗೆದುಕೊಂಡು ಹೋಗುವ ಪದ್ಧತಿ ಎಂದೋ ಮಾಯಾವಾಗಿ ಬಿಟ್ಟಿದೆ. ಈಗ ಎಲ್ಲಾ ವಸ್ತುಗಳಿಗೂ ಒಂದೊಂದು ಬಗೆ ಬಗೆಯ ಪ್ಲಾಸ್ಟಿಕ್ ಕವರ್ ಮತ್ತು ಅವುಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಮತ್ತೊಂದು ಆಕರ್ಷಕವಾದ ಬಣ್ಣ ಬಣ್ಣದ ಕ್ಯಾರಿಬ್ಯಾಗ್. ಸಾಮಾನುಗಳನ್ನು ಬಿಡಿ ಲೋಹದ ಕ್ಯಾನ್ ಇಲ್ಲವೇ ಗಾಜಿನ ಬಾಟೆಲ್ಗಳಲ್ಲಿರುತ್ತಿದ್ದ ಹಾಲು ಮೊಸರು, ತುಪ್ಪಾ ಬೆಣ್ಣೆ ಇಂದು ಪ್ಲಾಸ್ಟಿಕ್ ಕವರ್ಗಳಲ್ಲಿ ಸಿಗುವಂತಾಗಿದೆ. ನಮ್ಮಲ್ಲಿ ಹೀಗೆ ಪ್ರತಿಯೊಬ್ಬರೂ ತುದಿ ಕತ್ತರಿಸಿ ಬಳೆಸುವ ಹಾಲು ಪ್ಯಾಕೆಟ್ಗಳಿಂದಲೇ ಬೆಂಗಳೂರಿನಲ್ಲಿ ಪ್ರತಿದಿನ 50,00,000 ಪ್ಲಾಸ್ಟಿಕ್ ತುಣುಕುಗಳು ಕಸಕ್ಕೆ ಸೇರುತ್ತಿದೆ ಎನ್ನುವ ಅಂಕಿ ಅಂಶ ಅತ್ಯಂತ ಆತಂಕಕಾರಿಯಾಗಿದೆ.

ಏಲ್ಲೆಂದರೆಲ್ಲಿ ಬಿಸಾಡುವ ಪ್ಲಾಸ್ಟಿಕ್ ಕವರ್ಗಳು ಬೀಡಾಡಿ ಹಸುಗಳ ಜೀವಕ್ಕೆ ಮಾರಕವಾಗಿದೆ. ಥೈರಾಯ್ಡ್, ಅಸ್ತಮ, ಚರ್ಮ ರೋಗಗಳು, ಲೈಂಗಿಕ ದೌರ್ಬಲ್ಯ, ಹೃದಯ ಸಂಬಂಧಿತ ಖಾಯಿಲೆಗಳು ಕಡೆಗೆ ಕ್ಯಾನ್ಸರ್ ತರಹದ ಮಾರಕ ರೋಗವೂ ಪ್ಲಾಸ್ಟಿಕ್ ಕವರ್, ತಟ್ಟೆ, ಲೋಟ ಮತ್ತು ಡಬ್ಬಿಗಳನ್ನು ಬಳೆಸುವುದರಿಂದ ಬರುತ್ತದೆ ಎಂಬ ಅಂಶವು ವೈಜ್ಞಾನಿಕವಾಗಿ ಸಾಬೀತಾಗಿದೆ. ಬಿಸಿ ಬಿಸಿಯಾದ ಆಹಾರವನ್ನು ಪ್ಲಾಸ್ಟಿಕ್ ವಸ್ತುಗಳ ಮೇಲೆ ಸೇವಿಸುವುದು ಮತ್ತು ಬಹಳ ಕಾಲ ನೀರನ್ನು ಪ್ಲಾಸ್ಟಿಕ್ ಕ್ಯಾನ್ ಇಲ್ಲವೇ ಬಾಟಲ್ಗಲಲ್ಲಿ ಸಂಗ್ರಹಿಸುವುದೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವುದು ತಿಳಿದು ಬಂದಿದೆ.

ಅಗ್ಗವಾಗಿ ಮತ್ತು ಸುಲಭವಾಗಿ ತಯಾರಿಸ್ಪಡುವ ಪ್ಲಾಸ್ಟಿಕ್ ಒಮ್ಮೆ ಬಳಕೆ ಮಾಡಿದ ನಂತರ ಅದನ್ನು ನಾಶ ಮಾಡಲು ಸಾಧ್ಯವೇ ಇಲ್ಲವಾಗಿದೆ. ಈ ಪ್ಲಾಸ್ಟಿಕ್ ತ್ಯಾಜ್ಯ ಮಣ್ಣಿನಲ್ಲಿ ನೂರಾರು ವರ್ಷಗಳಾದರೂ ಕರಗದೇ ಇರುವುದರಿಂದ ಇದು ಪರಿಸರಕ್ಕೆ ಮಾರಿಯಾಗಿದೆ. ಈ ರೀತಿಯಾಗಿ ಮಣ್ಣಿನಲ್ಲಿ ಬೆರೆಯದ ಪ್ಲಾಸ್ಟಿಕ್ ನಿಂದಾಗಿಯೇ ಮಳೆಯ ನೀರು ಕೂಡ ಭೂಮಿಯ ಒಳಗೆ ಇಳಿಯದೆ, ಹಾಗೆಯೇ ಮೇಲ್ಪದರಲ್ಲಿಯೇ ಆವಿಯಾಗಿ ಇಂಗಿ ಹೋಗಿ ಅಂತರ್ಜಲ ಬತ್ತಿ ಹೋಗುವುದಕ್ಕೂ ಕಾರಣವಾಗಿದೆ (ಲೇಖನದ ಜೊತೆಗಿರುವ ಚಿತ್ರವನ್ನು ಗಮನಿಸಿ). ಹಾಗೊಂದು ವೇಳೆ ಈ ಪ್ಲಾಸ್ಟಿಕ್ ತ್ಯಾಜ್ಯವನ್ನು ನಾಶ ಪಡಿಸಲು ಬೆಂಕಿಯಿಂದ ಸುಟ್ಟಲ್ಲಿ ಅದರಿಂದ ಹೊರಹೊಮ್ಮುವ ಅನಿಲ ಮತ್ತಷ್ಟೂ ವಿಷಕಾರಿಯಾಗಿದೆ.

plastic

ಹನಿ ಹನಿ ಗೂಡಿದರೆ ಹಳ್ಳ, ತೆನೆ ತೆನೆ ಗೂಡಿದರೆ ಬಳ್ಳ ಎನ್ನುವಂತೆ ಈ ಕಾರ್ಯ ನಮ್ಮಿಂದ ಮತ್ತು ನಮ್ಮಗಳ ಮನೆಯಿಂದಲೇ ಪ್ರಾರಂಭವಾಗಲಿ. ಒಗ್ಗಟ್ಟಿನಲ್ಲಿ ಬಲವಿದೆ ಮತ್ತು ಛಲವಿದೆ. ಮನುಷ್ಯ ಒಮ್ಮೆ ಧೃಢ ನಿರ್ಧಾರ ಮಾಡಿದಲ್ಲಿ ಸಾಧಿಸಲು ಅಸಾಧ್ಯವೇ ಇಲ್ಲ. ಖಾಯಿಲೆ ಬಂದಾಗ ಚಿಕಿತ್ಸೆ ಮೂಲಕ ಸರಿಪಡಿಸಿಕೊಳ್ಳುವ ಬದಲು ಖಾಯಿಲೆಯೇ ಬಾರದಂತೆ ತಡೆಗಟ್ಟುವಿಕೆಯೇ ಉತ್ತಮವಾದ ವಿಧಾನ ಎನ್ನುವಂತೆ ನಮಗೆ ಸಾಧ್ಯವಾದಷ್ಟರ ಮಟ್ಟಿಗೆ ಪ್ಲಾಸ್ಟಿಕ್ ಬಳಕೆಯನ್ನು ಸ್ವಯಂಪ್ರೇರಿತವಾಗಿ ಕಡಿಮೆ ಮಾಡುತ್ತಾ ನಮ್ಮ ಅಕ್ಕ ಪಕ್ಕದವರಿಗೆ , ಬಂಧು ಮಿತ್ರರಿಗೆ ಇದರ ಬಗ್ಗೆ ಕಾಳಜಿ ಮೂಡಿಸುತ್ತಾ ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಆದಷ್ಟೂ ಪ್ಲಾಸಿಕ್ ಮುಕ್ತವನ್ನಾಗಿ ಮಾಡಬಹುದಲ್ಲವೇ? ನಮ್ಮ ಹಿರಿಯರು ನಮಗೆ ಉಳಿಸಿಹೋದ ಈ ಪರಿಸರವನ್ನು ನಾವುಗಳು ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಸಿಕೊಟ್ಟು ಹೋಗುವ ಜವಾಬ್ದಾರಿ ನಮ್ಮ ಮೇಲಿದೆಯಲ್ಲವೇ?

ಏನಂತೀರಿ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s