ನಾ ಕಂಡಂತೆ ಪ್ರೀಮಿಯರ್ ಪದ್ಮಿನಿ

ಮನುಷ್ಯ ಸಂಘ ಜೀವಿ. ಆವನು ಹೆಚ್ಚು ಕಾಲ ಏಕಂತವಾಗಿರಲಾರ. ಹಾಗಾಗಿ ಬಲು ಬೇಗ ತಮ್ಮ ಅಭಿರುಚಿಗೆ ತಕ್ಕಂತೆ ಗೆಳೆಯ/ಗೆಳತಿಯರನ್ನು ಮಾಡಿಕೊಳ್ಳುತ್ತಾನೆ. ತಮ್ಮ ಸುಖಃ ದುಃಖಗಳನ್ನು ಹಂಚಿಕೊಳ್ಳುತ್ತಾನೆ. ಇದು ಬಾಲ್ಯದಿಂದ ಆರಂಭವಾಗಿ, ಯೌವನದಲ್ಲಿ ಮುಂದುವರೆದು, ವೃದ್ದಾಪ್ಯದಲ್ಲಿಯೂ ಕಾಣ ಬಹುದಾಗಿದೆ. ಅದಕ್ಕನುಗಣವಾಗಿ ಯೌವನದಲ್ಲಿ ಮದುವೆ ಎಂಬ ಕಟ್ಟು ಪಾಡಿನ ಬಂಧನದಲ್ಲಿ ಸಿಕ್ಕಿಸಿ ಅದಕ್ಕೊಂದು ಸುಮಧುರ ಬಾಂಧ್ಯವ್ಯವನ್ನು ಬೆಸೆದಿದ್ದಾರೆ ನಮ್ಮ ಪೂರ್ವಜರು. ಆದರೆ ಇಂದು ಆ ರೀತಿಯ ಮೌಲ್ಯಗಳೆಲ್ಲಾ ಮಾಯವಾಗಿ ಪಾಶ್ವಾತ್ಯೀಕರಣದ ಅಂಧಾನುಕರಣದಲ್ಲಿ ಮದುವೆಯೆಂಬ ಸುಮಧುರ ಬಾಂಧವ್ಯ ಮರೆಯಾಗಿ ಕೇವಲ ದೈಹಿಕ ಆಕರ್ಷಣೆಗಳೇ ಪ್ರಾಧಾನ್ಯತೆ ಪಡೆಯುತ್ತಿರುವುದು ನಿಜಕ್ಕೂ ದುಃಖಕರ.

ಇಂದು ಯಾವುದೇ ವಯಸ್ಸಿನ ಒಂದು ಹೆಣ್ಣು ಮತ್ತು ಗಂಡು ಪರಸ್ಪರ ಅನ್ಯೋನ್ಯವಾಗಿದ್ದಾರೆ ಎಂದರೆ ಸಮಾಜ ಅವರನ್ನು ನೋಡುವ ರೀತಿಯೇ ಸರಿಯಾಗಿರುವುದಿಲ್ಲ. ಎಲ್ಲರ ಮಧ್ಯೆಯಲ್ಲೂ ಅನೈತಿಕ ಸಂಬಂಧದ ಕರಿನೆರಳ ಛಾಯೆಯಡಿಯಲ್ಲಿಯೇ ನೋಡುವುದು ನಿಜಕ್ಕೂ ಶೋಚನೀಯವೇ ಸರಿ. ವಯಸ್ಸಿಗೆ ಬಂದ ಮಗಳನ್ನು ಕುಡಿದ ಅಮಲಿನಲ್ಲಿ ತಂದೆಯೇ ತನ್ನ ದೈಹಿಕ ವಾಂಛೆಗೆ ಬಲಿ ತೆಗೆದುಕೊಂಡಿರುವ ಅನೇಕ ಸಂದರ್ಭಗಳನ್ನು ಈಗಾಗಲೇ ಕೇಳಿದ್ದೇವೆ. ವಯಸ್ಸಿಗೆ ಬಂದ ಮಕ್ಕಳು ಇರುವಾಗ ಗಂಡ ಹೆಂಡತಿಯರು ಪರಸ್ಪರ ವಿಚ್ಚೇದನ ಪಡೆದು ಬೇರೆಯವರನ್ನು ಮದುವೆಯಾಗುತ್ತಿರುವ ವಿಷಯಗಳನ್ನು ನಾವಿಂದು ನೋಡುತ್ತಿದ್ದೇವೆ. ಹಾಗಾಗಿ ಇಂದು ಸಂಬಂಧಗಳಿಗೆ ಬೆಲೆ ಇಲ್ಲರೆ ಎಲ್ಲವೂ ಅವರರವರ ತೆವಲುಗಳಿಗೆ ಸೀಮಿತವಾಗಿ ಹೋಗುತ್ತಿರುವುದು ನಮ್ಮ ಸಂಸ್ಕೃತಿಯ ಅವನತಿಯೆಂದೇ ಹೇಳಬಹುದು. ಇಂತಹ ಎಲ್ಲಾ ಗೋಜಲುಗಳನ್ನೂ ಸುಂದರವಾಗಿ ಕಣ್ಣಿಗೆ ಕಟ್ಟುವಂತೆ ಕಡೆಯ ತನಕ ನಮ್ಮೊಡನೆ ಉಳಿಯುವವರೇ ನಮ್ಮ ನಿಜವಾದ ಬಂಧುಗಳು ಎಂಬ ನೀತಿಯನ್ನು ಸುಂದರವಾಗಿ ಹೇಳುವ ಚಿತ್ರವೇ ಪ್ರೀಮಿಯರ್ ಪದ್ಮಿನಿ.

ಸಾಧಾರಣವಾಗಿ ಜಗ್ಗೇಶ್ ಸಿನಿಮಾ ಎಂದರೆ ಕುಟುಂಬ ಸಮೇತ ನೋಡಲು ಸ್ವಲ್ಪ ಮುಜುಗರವಾಗುವಂತಹ ಪರಿಸ್ಥಿತಿ ಆರಂಭದಲ್ಲಿ ಇರುತ್ತಿತ್ತು. ಆದರೆ ಕಾಯಿ ಹಣ್ಣಾಗಿ ಪಕ್ವವಾಗುವಂತೆ ಇತ್ತೀಚೆಗೆ ಅವರು ತಮ್ಮ ವಯಸ್ಸಿಗೆ ಅನುಗುಣವಾಗಿ ಪಾತ್ರಗಳನ್ನು ಆಯ್ಕೆಮಾಡಿಕೊಳ್ಳುತ್ತಾ ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿರುವುದು ಮೆಚ್ಚಬೇಕಾದ ಅಂಶ. ಇನ್ನು ಹುಣಸೇ ಮರಕ್ಕೆ ಮುಪ್ಪಾದ್ರೇ, ಹುಳಿಯು ಮುಪ್ಪಾ? ಎನ್ನುವಂತೆ ದತ್ತಣ್ಣನವರಿಗೆ ವಯಸ್ಸಾದರೂ, ತುಂಟತನದ ಪಾತ್ರಗಳು ಅವರಿಂದ ದೂರವಾಗಿಲ್ಲ. ನೆರೆ ಮನೆಯ ಮಧ್ಯವಯಸ್ಸಿನ ಗಂಡು ಮತ್ತು ಹೆಣ್ಣು ಮನೆಯೊಳಗೆ ಕುಳಿತು ಮಾತನಾಡುತ್ತಿದ್ದರೆ, ನಗುತ್ತಿದ್ದರೆ ಅದನ್ನು ಕದ್ದು ಕೇಳುತ್ತಾ ಅವರ ವಯಸ್ಸಾದ ಹೆಂಡತಿಗೆ ಅದರ ವೀಕ್ಷಕ ವಿವರಣೆಯನ್ನು ನೀಡುವ, ಶಿವ ಪೂಜೆಯಲ್ಲಿ ಕರಡಿ ಬಿಟ್ಟಂತೆ ಆ ಗಂಡು, ಹೆಣ್ಣುಗಳ ಮಧ್ಯೆ ಅನಾವಶ್ಯಕವಾಗಿ ಬಂದು ಪಿರಿಪಿರಿಮಾಡುತ್ತಾ ಅಲ್ಲಲ್ಲಿ ನಗೆಯುಕ್ಕಿಸುವುದರಲ್ಲಿ ದತ್ತಣ್ಣ ಸಫಲರಾಗಿದ್ದಾರೆ.

ಮದುವೆ ಆಗಿ ಮಕ್ಕಳಾದ ತಕ್ಷಣ ಬಹುತೇಕ ನಾಯಕಿಯರು ಚಿತ್ರರಂಗದಿಂದ ದೂರವಿದ್ದರೆ, ಇತ್ತೀಚೆಗೆ ಹಲವಾರು ನಾಯಕಿಯರು ತಮ್ಮ ವಯಸ್ಸನ್ನು ದಿಕ್ಕರಿಸಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಅದಕ್ಕನುಗುಣವಾಗಿ, ಇಂದಿನ ನಾಯಕಿಯರನ್ನೂ ನೀವಾಳಿಸಿ ಹಾಕುವಂತೆ ಆಭಿನಯಿಸುತ್ತಿದ್ದಾರೆ. ಅಂತಹ ಕೆಲ ನಟಿಯರಲ್ಲಿ ಬಹುಭಾಷಾ ಕಲಾವಿದೆ ಮಧು ಮತ್ತು ಕನ್ನಡತಿ ಸುಧಾರಾಣಿ ಪ್ರಮುಖರು. ಜಗ್ಗೇಶರಿಂದ ವಿವಾಹ ವಿಚ್ವೇದನ ಪಡೆದು ಮತ್ತೊಬ್ಬ ವಿಧುರನೊಂದಿಗೆ ಮದುವೆಯಾಗ ಬಯಸುವ ಹೆಂಡತಿಯಾಗಿ ಮಧು ನಟಿಸಿದ್ದರೆ. ಚೆಂದುಳ್ಳಿ ಚೆಲುವೆ ಸುಧಾರಾಣಿ ಪಾತ್ರವನ್ನು ಇಲ್ಲಿ ಬಣ್ಣಿಸುವುದಕ್ಕಿಂತ ಚಿತ್ರಮಂದಿರದಲ್ಲೇ ನೋಡಿ ಆನಂದಿಸುವುದೇ ಉತ್ತಮ.

ಇನ್ನು ತಂದೆ ತಾಯಿಯರಿಂದ ಬೇರ್ಪಟ್ಟ ಮಗನಾಗಿ ವಿವೇಕ್ ಸಿಂಹ ಮತ್ತು ಅದೇ ರೀತಿ ತಾಯಿ ಇಲ್ಲದ ತಬ್ಬಲಿಯಾಗಿ ಆತನ ಗೆಳತಿಯ ಪಾತ್ರದಲ್ಲಿ ಹಿತಾ ಚಂದ್ರಶೇಖರ್ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ ಎಂದರೆ ಅತಿಶಯೋಕ್ತಿಯೇನಲ್ಲ. ನಂಬಿದ ಹುಡುಗನಿಂದ ಮೋಸ ಹೋಗಿ ಮದ್ಯದ ವ್ಯಸನಕ್ಕೆ ಬಿದ್ದಿರುವ ಹುಡುಗಿ ಅದೇ ರೀತಿ ಚಿಕ್ಕವಯಸ್ಸಿನಿಂದಲೂ ತಂದೆ ತಾಯಿರ ವಾತ್ಸಲ್ಯವೇ ಕಾಣದೇ ದುಶ್ಚಟಗಳಿಗೆ ಬಲಿಯಾದ ಹುಡುಗ ನಂತರ ಪರಸ್ಪರ ಆಕರ್ಶಿತರಾಗುವ ಸ್ನೇಹಿತರಾಗಿ ಬಿಂದಾಸ್ ಆಗಿ ನಟಿಸಿದ್ದಾರೆ. ವಿವೇಕ್ ಸಿಂಹ ಅಪಘಾತದಿಂದ ಸಾಯುವ ಮೊದಲು ಆಡುವ ಮಾತುಗಳಂತೂ ತಮ್ಮ ತಮ್ಮ ತೆವಲುಗಳಿಗೆ ಮಕ್ಕಳನ್ನು ದೂರಮಾಡಿದ ತಂದೆ ತಾಯಿಯರ ಮನಸ್ಸನ್ನು ಬಡಿದೆಚ್ಚರ ಪಡಿಸುವಂತಿದೆ. ನಾಡಿನಲ್ಲೇ ಕನ್ನಡ ಮಾಯೇಯಾಗುತ್ತಿರುವಾಗ ನಾಯಕಿ ಕುಡಿದ ಅಮಲಿನಲ್ಲಿಯೂ ಕನ್ನಡ ಹಾಡಿಗೆ ಒತ್ತಾಯಿಸುವುದು ಮತ್ತು ನಾಯಕ ಅವಳ ಇಚ್ಛೆಯನ್ನು ಪೂರೈಸುವುದು ಸ್ವಲ್ಪ ಬಾಲಿಶ ಎನಿಸಿದರೂ ನಿರ್ದೇಶಕರ ಕನ್ನಡ ಪ್ರೇಮವನ್ನು ಎತ್ತಿ ತೋರಿಸುತ್ತದೆ.

ಇನ್ನು ವಯಸ್ಸಿಗೆ ಬಂದ ತನ್ನ ಅಕ್ಕ, ತಂದೆಯಿಂದಲೇ ಮೋಸಹೋಗಿದ್ದನ್ನು ನೋಡಿ ತಂದೆಯನ್ನು ವಿರೋಧಿಸಿ ಮನೆ ಬಿಟ್ಟು ನಾನಾ ರೀತಿಯ ಕೆಲಸಗಳನ್ನು ಮಾಡಿ ಕಡೆಯದಾಗಿ ಜಗ್ಗೇಶ್ ಅವರ ಕಾರ್ ಡ್ರೈವರ್ ಆಗಿ ಬಂದು ಸೇರುವ ಪಾತ್ರದಲ್ಲಿ ಪ್ರಮೋದ್ ಅತ್ಯುತ್ತಮವಾಗಿ ನಟಿಸಿದ್ದಾರೆ ಎನ್ನುವುದಕ್ಕಿಂತ ಆ ಪಾತ್ರವೇ ತಾನಾಗಿದ್ದಾರೆ ಎನ್ನಲಡ್ಡಿಯಿಲ್ಲ. ಬೆಂಜ್ ಕಾರ್ ಓಡಿಸುವ ಭ್ರಮೆಯಲ್ಲಿದ್ದವನಿಗೆ ಪ್ರೀಮಿಯರ್ ಪದ್ಮಿನಿ ಕಾರ್ ಓಡಿಸುವ, ಎಫ್ ಎಂ ರೇಡಿಯೋ ಕೇಳುವ ತವಕದವನು ಮಾಲೀಕನ ಇಚ್ಛೆಯಂತೆ ಹಿಂದೂಸ್ತಾನಿ ಆಲಾಪ್ ಕೇಳಬೇಕಾದ ಕರ್ಮವನ್ನು ನೋಡಲು ಮಜಾ ಕೊಡುತ್ತದೆ. ಕೇವಲ ಕಾರ್ ಚಾಲಕನಾಗಿರದೇ ಒಡೆಯನ ಒಡೆದ ಕುಟುಂಬವನ್ನು ಸರಿ ಪಡಿಸಲು ಪ್ರಯತ್ನಿಸುವ ಮತ್ತು ಮಗನನ್ನು ಕಳೆದು ಕೊಂಡ ಜಗ್ಗೇಶ್ ಅವರಿಗೆ ಮಗನಂತೆ ಕಟ್ಟ ಕಡೆಯವರೆಗೆ ಸಾಥ್ ಕೊಡುವ ಅವರ ಪಾತ್ರ ನಿಜಕ್ಕೂ ಮನೋಹರವಾಗಿದೆ.

ಕಿರುತೆರೆಯಲ್ಲಿ ಬ್ಲಾಕ್ಬಸ್ಟರ್ ಧಾರವಾಹಿಗಳನ್ನು ನಿರ್ಮಿಸಿ, ನಿರ್ದೇಶಿಸಿ ಖ್ಯಾತಿ ಹೊಂದಿರುವ ಶೃತಿನಾಯ್ಡು ನಿರ್ಮಾಣದ, ರಮೇಶ್ ಇಂದಿರಾ ನಿರ್ದೇಶನದ ಚೊಚ್ಚಲು ಪ್ರಯತ್ನ ನಿಜಕ್ಕೂ ಸಫಲವಾಗಿದೇ ಎಂದೇ ಹೇಳಬೇಕು. ಎಂದಿನಂತೆ ನಾಲ್ಕು ಹಾಡು, ಮೂರು ಫೈಟ್, ಎರಡು ವಿದೇಶದಲ್ಲಿ ಚಿತ್ರೀಕರಣದ ದೃಶ್ಯ ಎಂಬ ಸಿದ್ಧ ಪಡಿಸಿದ ಸೂತ್ರಕ್ಕೆ ಜೋತು ಬೀಳದೆ ಕೌಟುಂಬಿಕ ಮೌಲ್ಯಗಳ ಜೊತೆಗೆ
ಮನಸ್ಸಿಗೆ ಮುದ ನೀಡುವಂತಹ ಹಾಡುಗಳಿರುವ, ಸಾಕಷ್ಟು ಪಂಚಿಂಗೆ ಮತ್ತು ಜೋಶ್ ಇರುವ ಸಂಭಾಷಣೆ, ಅಲ್ಲಲ್ಲಿ ಕಚಗುಳಿ ಇಡಿಸುವ ಹಾಸ್ಯದೊಂದಿಗೆ ಮನರಂಜಿಸುವಂಥ ಸಿನಿಮಾ ಮಾಡಿದ್ದಾರೆ.

ಇಡೀ ಚಿತ್ರದಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವಂತಿಲ್ಲ. ಹುಡುಗ ಮತ್ತು ಹುಡುಗಿ ಬಿಂದಾಸ್ ಎನ್ನುದನ್ನು ತೋರಿಸಲು ಅನಗತ್ಯವಾದಷ್ಟು ಕುಡಿತ ಮತ್ತು ಸಿಗರೇಟ್ ಸೇದುವುದನ್ನು ತೋರಿಸಿರುವುದನ್ನು ಕಡಿಮೆ ಮಾಡಬಹುದಾಗಿತ್ತೇನೋ? ಮೊದಲೇ ಜಗ್ಗೇಶ್ ಚಿತ್ರ, ನೀರ್ದೋಸೆ ಚಿತ್ರವಾದ ಮೇಲೆಂತೂ ಜಗ್ಗೇಶ್ ಮತ್ತು ದತ್ತಣ್ಣ ಜೋಡಿಯಲ್ಲಿ ಡಬಲ್ ಮೀನಿಂಗ್ ಡೈಲಾಗ್ ಇರಲೇ ಬೇಕು ಅಂತಾ ಏನೋ ಅಲ್ಲಲ್ಲಿ ತೂರಿಸಲಾಗಿದೆ. ಅಂತರ್ಜಾತಿ ವಿವಾಹ ಎಂದು ಎತ್ತಿ ತೋರಿಸಲು, ಜಗ್ಗೇಶ್ ಹುಷಾರಿಲ್ಲದ ತಮ್ಮ ತಾಯಿಯನ್ನು ನೋಡಲು ಬಂದಾಗ, ತನ್ನ ನೋವನ್ನೂ ಮರೆತು, ಸಂಧ್ಯಾವಂದನೆ ಮಾಡ್ತಾ ಇದ್ದೀಯೇನೋ ಅಂತಾ ಕೇಳುವುದರ ಮೂಲಕ, ಒಂದು ಸಮುದಾಯವನ್ನು ಕುಹಕವಾಡೋದು ಅಗತ್ಯವಿತ್ತಾ? ತಮ್ಮ ಸೀರಿಯಲ್ನಲ್ಲಿ ಮಾಡೋ ಬಹುತೇಕ ಕಲಾವಿದರನ್ನೇ ಸಿನಿಮಾದಲ್ಲೂ ಹಾಕಿಕೊಂಡಿರುವುದರಿಂದ ಸಿನಿಮಾ ನೋಡುವಾಗ, ಸೀರಿಯಲ್ ನೋಡುತ್ತಿರುವ ಆನುಭವ ಆಗಿದ್ದಂತೂ ಸುಳ್ಳಲ್ಲ.

ಬಹುಪಾಲು ಒಳ್ಳೆಯ ಅಂಶಗಳು ಇದ್ದಾಗ ಮತ್ತು ಮೊದಲನೇ ಬಾರಿ ನಿರ್ದೇಶನ ಮಾಡುತ್ತಿರುವಾಗ ಇಂತಹ ಸಣ್ಣ ಪುಟ್ಟ ನ್ಯೂನತೆಯನ್ನು ಪಕ್ಕಕ್ಕೆ ಇಟ್ಟು ನೋಡಿದಾಗ ಒಂದು ಉತ್ತಮ ಸಂದೇಶವುಳ್ಳ ಸಿನಿಮಾವನ್ನು ಕೊಟ್ಟಿರುವ ಪ್ರೀಮಿಯರ್ ಪದ್ಮಾವತಿ ಚಿತ್ರ ತಂಡ ಮೇಲೆ ಮುಂಬರುವ ದಿನಗಳಲ್ಲಿ ಇನ್ನಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳಬಹುದು ಎಂದನಿಸುತ್ತದೆ.

ಏನಂತೀರೀ?

One thought on “ನಾ ಕಂಡಂತೆ ಪ್ರೀಮಿಯರ್ ಪದ್ಮಿನಿ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s