ಗುಂಡಿಗಳ ಮಧ್ಯೆ ರಸ್ತೆ ಇದೆ ಎಚ್ಚರಾ!!

ಮೊನ್ನೆ ನಾನು ಮತ್ತು ನನ್ನ ಸಹೋದ್ಯೋಗಿ ಸಂಜೆ ಕಛೇರಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೊರಟೆವು. ನಾನು ಕಾರಿನಲ್ಲಿ ಹೊರಟರೆ, ಆತ ತನ್ನ ದ್ವಿಚಕ್ರ ವಾಹನದಲ್ಲಿ ಮನೆಯ ಕಡೆ ನನ್ನ ವಿರುದ್ಧ ದಿಕ್ಕಿನಲ್ಲಿ ಹೊರಟ. ಸ್ವಲ್ಪ ದೂರ ಹೊರಟೊಡನೆಯೇ ಇದ್ದಕ್ಕಿದ್ದಂತಯೇ ಮೋಡಗಳು ದಟ್ಟವಾಗಿ ಕಾರ್ಮೋಡಗಳಾದವು. ಮಿಂಚು, ಗುಡುಗು, ಸಿಡಿಲುಗಳು ಅಬ್ಬರಿಸತೊಡಗಿ ಅಚಾನಕ್ಕಾಗಿ ಧಾರಾಕಾರವಾಗಿ ಕುಂಬದ್ರೋಣ ಮಳೆ ಸುರಿತೊಡಗಿತು. ಸಾಧಾರಣ ಮಳೆಗೇ ತುಂಬಿ ತುಳುಕುವ ಬೆಂಗಳೂರಿನ ರಸ್ತೆಗಳು ಇನ್ನು ಧಾರಾಕಾರವಾಗಿ ಸುರಿಯಿತೆಂದರೆ ಇನ್ನು ಕೇಳ ಬೇಕೇ? ಸಿಕ್ಕ ಪಕ್ಕ ಕಡೆಗಳಲ್ಲಿ ನೀರು ನುಗ್ಗಿ ರಸ್ತೆಯಾವುದು ಕೆರೆಯಂಗಳಯಾವುದೇ ಎನ್ನುವುದೇ ಗೊತ್ತಾಗದೇ ಕಾರ್ ಚೆಲಾಯಿಸಲು ಕಷ್ಟಪಡಬೇಕಾಯಿತು. ಮಳೆಗೂ ಟ್ರಾಫಿಕ್ ಜಾಮ್ಗೆ ಒಂದು ರೀತಿಯ ಅವಿನಾವಭಾವ ಸಂಬಂಧ. ಸಾಧಾರಣ ದಿನಗಳಲ್ಲಿಯೇ ಟ್ರಾಫಿಕ್ ಮಯವಾಗಿರುವ ಬೆಂಗಳೂರಿನ ರಸ್ತೆಗಳು ಇನ್ನು ಮಳೆ ಬಂದರೆ ಕೇಳುವುದೇ ಬೇಡ. ಹಾಗೂ ಹೀಗೂ ಕಷ್ಟ ಪಟ್ಟು ಮನೆಗೆ ತಲುಪೋಣ ಎಂದರೆ ಕೆಇಬಿಯವರು ಕರೆಂಟ್ ತೆಗೆದ ಪರಿಣಾಮವಾಗಿ ಆಗೊಮ್ಮೆ, ಈಗೊಮ್ಮೆ ಉರಿಯುವ ಬೀದೀ ದೀಪಗಳೂ ಆರಿ ಹೋಗಿದ್ದರಿಂದ ದಡಾ ಬಡಾ ಕಾರ್ ಓಡಿಸಿಕೊಂಡು ಮನೆಗೆ ಹೋಗಿ ಉಸ್ಸಪ್ಪಾ ಎಂದು ಬಟ್ಟೆ ಬದಲಿಸಿ, ಕೈಕಾಲು ತೊಳೆದುಕೊಂಡು ಊಟ ಮಾಡ್ತಾ ಇರುವಷ್ಟರಲ್ಲಿ ಮೋಬೈಲ್ ಕರೆ ಬಂದಿತು. ಈ ಹೊತ್ತಿನಲ್ಲಿ ಯಾರಪ್ಪಾ ಕರೆ ಮಾಡಿರೋದು ಅಂತಾ ನೋಡಿದರೆ, ಕಛೇರಿಯಿಂದ ಒಟ್ಟಿಗೆ ಮನೆಗೆ ಹೊರಟ ನನ್ನ ಸಹೋದ್ಯೋಗಿಯದ್ದಾಗಿತ್ತು. ಹಾಂ!! ಹೇಳಾಪ್ಪಾ. ಮನೆಗೆ ತಲುಪಿದ್ಯಾ? ಮಳೆಗಿಳೆಲೀ ಸಿಕ್ಕಿ ಹಾಕಿಕೊಳ್ಳಲಿಲ್ಲ ತಾನೇ ಎಂದು ಒಂದೇ ಉಸಿರಿನಲ್ಲಿ ಕೇಳ್ತಾ ಇದ್ರೇ ಆ ಕಡೆಯಿಂದ ಯಾವುದೇ ಸದ್ದೇ ಇಲ್ಲಾ.. ಹಲೋ.. ಹಲೋ.. ಕೇಳಿಸ್ತಾ ಇದ್ಯಾ ಅಂದ್ರೆ, ಹಾಂ.. ಸಾರ್ ಕೇಳಿಸ್ತಾ ಇದೆ ಅಂತ್ ಕೀರಲು ಧ್ವನಿಯಿಂದ ಉತ್ತರ ಬಂತು. ಹೇ ಏನಾಯ್ತು? ಯಾಕೇ.. ಧ್ವನಿ ಒಂದು ರೀತಿಯಾಗಿ ನರಳುವ ಹಾಗಿದೆ ಎಂದ್ರೇ, ಹಾಂ.. ಸರ್, ಆಫೀಸ್ನಿಂದ ಮನೆಗೆ ಹೋಕ್ತಾ ಇರುವಾಗ ಮಳೆ ಶುರುವಾಯ್ತು. ಸಂಜೆ ಮಳೆ ಹೇಗೂ ನಿಲ್ಲೋದಿಲ್ಲ ಅಂತಾ ನಿರ್ಧರಿಸಿ ಹಾಗೇ ಮಳೆಯಲ್ಲಿ ನೆನೆದು ಕೊಂಡು ಹೋಗೇ ಬಿಡೋಣ ಅಂತಾ ನಿರ್ಧರಿಸಿ ಸ್ವಲ್ಪ ಜೋರಾಗಿ ಹೋಗ್ತಾ ಇದ್ದೇ ಸಾರ್. ಇನ್ನೇನು ಮನೆ ಹತ್ತಿರ ಬಂದೆ ಬಿಟ್ಟೇ ಅನ್ನೋವಷ್ಟರಲ್ಲಿಯೇ, ಧಡಾರ್ ಎಂದು ಹಳ್ಳದಲ್ಲಿ ಗಾಡಿ ಇಳಿದೇ ಬಿಡ್ತು. ಬ್ಯಾಲೆನ್ಸ್ ಸಿಗದೇ ಹಾಗೆಯೇ ಜೋರಾಗಿ ರಸ್ತೆಯಲ್ಲಿ ಬಿದ್ದು ಬಿಟ್ಟೆ. ಮೈ ಕೈಯೆಲ್ಲಾ ತರಚಿಕೊಂಡು ಹೋಯ್ತು. ಬೆಳಿಗ್ಗೆ ಆಫೀಸಿಗೆ ಹೋಗುವಾಗ ಆ ರಸ್ತೆ ಚೆನ್ನಾಗಿಯೇ ಇತ್ತು. ಸಂಜೆ ಬರುವಷ್ಟರಲ್ಲಿ ಯಾರೋ ಅಗೆದಿದ್ದಾರೆ. ಮಳೆ ಬಂತು ಅಂತಾ ಹಾಗೇ ಬಿಟ್ಟು ಹೋಗಿದ್ದಾರೆ. ಮಳೆ ಬಂದು ನೀರು ತುಂಬಿ ಕೊಂಡಿದ್ದರಿಂದ ನನಗೆ ಗೊತ್ತೇ ಆಗಲಿಲ್ಲವಾದ್ದರಿಂದ ಗಾಡಿ ಓಡಿಸಿಸ್ಕೊಂಡು ಹೋಗಿ ಬಿದ್ದು ಬಿಟ್ಟೆ ಸಾರ್. ಸದ್ಯ. ಯಾರೋ ಪುಣ್ಯಾತ್ಮರು ಅಂತಹ ಮಳೆಯಲ್ಲೂ ಬಂದು ನನ್ನನ್ನು ಅಲ್ಲೇ ಹತ್ತಿರದ ಡಾಕ್ಟರ್ ಹತ್ತಿರ ಕರೆದು ಕೊಂಡು ಹೋದ್ರು. ದೇವರು ದೊಡ್ಡವನು. ಕೇವಲ ತರಚುಗಾಯ ಆಗಿದೆ ಅಷ್ಟೇ. ಗಂಭೀರವಾದ ಗಾಯವಾಗಲೀ , ಮೂಳೆ ಮುರಿತವಾಗಲೀ ಆಗಿಲ್ಲ. ಮಳೆ ನಿಂತು ಹೋದ ಮೇಲೆ, ನನ್ನ ರೂಮ್ ಮೇಟ್ ಬಂದು ಕರೆದು ಕೊಂಡು ಹೋದ. ಡಾಕ್ಟರ್ ಇನ್ನೂ ಎರಡು ಮೂರು ದಿನ ರೆಸ್ಟ್ ತೆಗೆದುಕೊಳ್ಳುವುದಕ್ಕೆ ಹೇಳಿದ್ದಾರೆ ಹಾಗಾಗಿ ಆಫೀಸ್ಗೆ ಬರಲು ಆಗ್ತಾ ಇಲ್ಲಾ ಸಾರ್ ಎಂದು ಹೇಳಿದಾಗ, ಒಂದು ಕ್ಷಣ ಮನಸ್ಸಿಗೆ ಬೇಜರಾಯ್ತು. ಆಫೀಸ್ ಕಡೆ ನಾವು ನೋಡಿಕೊಳ್ಳುತ್ತೇವೆ ಪರವಾಗಿಲ್ಲ ಬಿಡು. ಮೊದಲು ನಿನ್ನ ಆರೋಗ್ಯದ ಕಡೆ ಗಮನ ಹರಿಸು ಎಂದು ಹೇಳಿ ಅವನನ್ನು ಸಮಾಧಾನ ಪಡಿಸಿದೆ.

ಕಳೆದ ವಾರ ಗೆದ್ದು ಬಂದ ಸಂಸದರು ಇನ್ನೂ ಗೆದ್ದು ಬಂದ ಸಂತೋಷವನ್ನು ಅರಿಗಿಸಿಕೊಳ್ತಾನೇ ಇದ್ದಾರೆ. ಇನ್ನೂ ಶಾಸಕರೋ ಇಂದೋ ನಾಳೆಯೋ ಸಮ್ಮಿಶ್ರ ಸರ್ಕಾರ ಬಿದ್ದು ಹೋಗುವ ಮುಂಚೆ ಇರೋ ಬರೋ ಬಿಲ್ಗಳನ್ನು ನಗದೀ ಕರಿಸಿ, ಮುಂದಿನ ಚುನಾವಣೆಯ ಖರ್ಚನ್ನು ಹೊಂದಿಸಿಕೊಳ್ಳುವ ಭರದಲ್ಲಿದ್ದಾರೆ. ಇನ್ನು ಬಿಬಿಎಂಪಿ ನಗರ ಸಭಾ ಸದಸ್ಯರು, ಅರು ಕೊಟ್ರೆ ಆ ಕಡೇ, ಮೂರು ಕೊಟ್ರೆ ಈ ಕಡೆ ಅಂತಾ ಕಾಲಾ ತಳ್ಳುತ್ತಾ , ಎಲ್ಲದ್ದಕ್ಕೂ ಮೋದಿನೇ ಬಂದು ಮಾಡಲಿ ಎಂದು ಕಾರ್ಪೋರೇಷನ್ ಆಫೀಸಿನಲ್ಲಿ ಕೈ ಕೈ ಮಿಲಾಯಿಸಿ ಕೊಳ್ಳುವುದರಲ್ಲಿಯೇ ಹೈರಾಣಾಗಿದ್ದಾರೆ. ಇನ್ನು ಮೊನ್ನೆ ಆಯ್ಕೆಯಾದ ಬಹುತೇಕ ನಗರ ಸಭೆ ಪುರಸಭೆ ಅತಂತ್ರವಾಗಿರುವ ಕಾರಣ ಅನೇಕ ಸದಸ್ಯರು ಯಾವ ಪಕ್ಷದ ಕಡೆಗೆ ವಾಲಿದರೆ ತಮ್ಮ ಬೇಳೇ ಬೇಯಬಹುದು ಎಂದು ಬಕ ಪಕ್ಷಿಗಳ ತರಹ ಕಾದುಕುಳಿತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಚುನಾವಣೆಗಳು ಇಲ್ಲದಿರುವ ಕಾರಣ, ನಮ್ಮ ರಸ್ತೆಗಳನ್ನು ನಮ್ಮ ಜನಪ್ರತಿನಿಧಿಗಳು ಸರಿ ಪಡಿಸುತ್ತಾರೆ ಎಂಬ ಯಾವುದೇ ಆಸೆಗಳನ್ನು ಇಟ್ಟು ಕೊಳ್ಳುವುದು ಮೂರ್ಖತನವಾಗಿದೆ. ಹಾಗಾಗಿ ಈ ಬಾರಿ, ಮಳೆಗಾಲದಲ್ಲಿ ಗುಂಡಿಗಳ ಮಧ್ಯೆ ಇರುವ ರಸ್ತೆಗಳಲ್ಲಿಯೇ ಹುಶಾರಾಗಿ ಓಡಾಡಬೇಕಾದ ಪರಿಸ್ಥಿತಿ ನಮ್ಮದಾಗಿರುವುದು ದೌರ್ಭಾಗ್ಯವಾಗಿದೆ. ಸುಮ್ಮನೆ ರಾಜಕಾರಣಿಗಳನ್ನು ಬೈಯ್ಯುತ್ತಾ ಸಮಯ ವ್ಯರ್ಥ ಮಾಡುತ್ತಾ ವಿನಾಕಾರಣ ಅಪಘಾತಕ್ಕೀಡಾಗಿ ನರಳುವ ಬದಲು ಈ ಕೆಲವು ಅಂಶಗಳನ್ನು ಪಾಲಿಸಿದರೆ ಉತ್ತಮ.

 • ಮಳೆ ಬರುವ ಮುನ್ಸೂಚನೆ ಅಥವಾ ಮಳೆ ಬರುತ್ತಿದ್ದಲ್ಲಿ, ಸಾಧ್ಯವಾದಷ್ಟೂ ಹೊರಗೆ ಬಾರದೇ ಮಳೆ ಸಂಪೂರ್ಣವಾಗಿ ನಿಂತು ಹತ್ತು ಹದಿನೈದು ನಿಮಿಷಗಳ ಬಳಿಕವೇ ಹೊರಗೆ ಬರೋಣ.
 • ಮಳೆಗಾಲದಲ್ಲಿ ದಯವಿಟ್ಟು ಒಂದು ಸಣ್ಣ ಕೊಡೆ ಅಥವಾ ರೈನ್ ಕೋಟ್ ಸದಾ ಜೊತೆಯಲ್ಲಿಟ್ಟು ಕೊಂಡಿರುವುದು ಕ್ಷೇಮ.
 • ಇನ್ನು ಮೊಬೈಲ್, ಲ್ಯಾಪ್ಟಾಪ್ ಇನ್ನು ಮುಂತಾದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೊಂಡೊಯ್ಯುವವರು ತಮ್ಮ ಬ್ಯಾಗಿನೊಳಗೆ ಒಂದು ದೊಡ್ಡ ಪ್ಲಾಸ್ಟಿಕ್ ಕವರ್ (ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳೆಸುವುದನ್ನು ತಡೆಗಟ್ಟೋಣ) ಇಟ್ಟು ಕೊಂಡು ಮಳೆ ಬರುವ ಸೂಚನೆ ಬಂದ ಕೂಡಲೇ ತಮ್ಮಲ್ಲಿನ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಭದ್ರವಾಗಿ ಪ್ಲಾಸ್ಟಿಕ್ ಕವರ್ನೊಳಗೆ ಇಟ್ಟುಕೊಳ್ಳೋಣ.
 • ಗುಡುಗು ಸಿಡಿಲು ಮಿಂಚು, ಅಬ್ಬರದ ಮಳೆ ಬರುತ್ತಿರುವ ಸಮಯದಲ್ಲಿ ಆದಷ್ಟು ಮರಗಳ ಕೆಳಗೆ ಆಶ್ರಯ ಪಡೆಯದಿರೋಣ.
 • ಸಿಡಿಲು ಮೋಡದಿಂದ ಭೂಮಿಗೆ ಪ್ರವಹಿಸಲು ಒದ್ದೆಯಾದ ಹಸಿ ಮರಗಳು ಪ್ರಶಸ್ತವಾಗಿರುತ್ತದೆ.
 • ನಗರ ಪ್ರದೇಶಗಳಲ್ಲಿನ ಮರಗಳ ಬೇರುಗಳು ಭದ್ರವಾಗಿರದೆ, ಅನೇಕ ವಾಹನಗಳ ಮೇಲೆ ಬಿದ್ದು ಪ್ರಾಣಾಹಾನಿ ಮತ್ತು ವಾಹನಗಳು ಜಖಂ ಆಗಿರುವುದು ನಮಗೆಲ್ಲರಿಗೂ ತಿಳಿದಿರುವ ವಿಷಯವಾಗಿದೆ.
 • ಮಳೆ ಬೀಳುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರ ಸುಳಿಯುವುದು ಒಳ್ಳೆಯದಲ್ಲ. ಏಕೆಂದರೆ ರಸ್ತೆಗಳ ಮೇಲೆ ಬಿದ್ದ ವಿದ್ಯುತ್ ತಂತಿಗಳನ್ನು ತಿಳಿಯದೆ ತುಳಿದು ಪ್ರಾಣ ಹಾನಿಯಾದ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗಿದೆ.
 • ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುದಾಗಲೀ ಮನೆಯ ಕಿಟಕಿಯ ಬಳಿ ನಿಲ್ಲುವ ದುಸ್ಸಾಹಸ ಮಾಡದೇ, ಸಾಧ್ಯವಾದಷ್ಟು ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.
 • ಗುಡುಗು-ಸಿಡಿಲಿನ ಸಂದರ್ಭದಲ್ಲಿ ಮೊಬೈಲ್ ಫೋನ್ ಮಾಡದಿರೋಣ ಮತ್ತು ಅದನ್ನು ಚಾರ್ಜ್ ಮಾಡುವ ಸಾಹಸವೂ ಬೇಡ.
 • ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಕಾರಿನ ಗಾಜನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಸಾಧ್ಯವಾದಷ್ಟು, ಕಾರಿನ ಬಾಡಿಯನ್ನು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.
 • ಮಳೆ ನಿಂತ ನಂತರ ಸಾಧ್ಯವಾದಷ್ಟೂ ಅಂಡರ್ ಪಾಸ್ಗಳನ್ನು ಬಳೆಸಿದಿರೋಣ ಏಕೆಂದರೆ ಬಹುತೇಕ ಅಂಡರ್ಪಾಸ್ಗಳು ಅವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ಮಳೆಯ ನೀರು ಹೊರಗೆ ಹೋಗದೇ ನೀರು ನಿಂತಿರುತ್ತದೆ.
  ಮಳೆಗಾಲಕ್ಕೆ ಮುಂಚೆಯೇ ನಮ್ಮ ಮನೆಯ ಮುಂದಿರುವ ಚೆರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡೋಣ
  ಸಾಧ್ಯವಾದಷ್ಟು ಎಲ್ಲರ ಮನೆಯಲ್ಲೂ ಮಳೆ ನೀರು ಕೋಯ್ಲು ಪದ್ದತಿಯನ್ನು ಅಳವಡಿಸಿ ಕೊಂಡು ನಮ್ಮ ಮನೆಯ ಛಾಚಣಿಯ ಮೇಲೆ ಬಿದ್ದ ಪ್ರತೀ ಹನಿಯನ್ನೂ ಸಂಗ್ರಹಿಸಿಟ್ಟು ಕೊಂಡು ಎಚ್ಚರಿಕೆಯಿಂದ ಬಳೆಸಿಕೊಳ್ಳೋಣ.

ಇವಿಷ್ಟೂ ಮಳೆಯ ಸಂದರ್ಭದಲ್ಲಿ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳಾದರೇ, ಇನ್ನು ನಮ್ಮ ಪ್ರದೇಶದಲ್ಲಿ ಸರಿಯಾಗಿ ಮಳೆ ಬೀಳಬೇಕಾದಲ್ಲಿ ಈ ಕೆಳಕಂಡ ಅಂಶಗಳತ್ತ ಗಮನ ಹರಿಸಬೇಕಾಗಿದೆ.

 • ಮರಗಳಿದ್ದಲ್ಲಿ ಮಾತ್ರವೇ ಮಳೆ ಎಂಬ ಸತ್ಯವನ್ನು ಮನನ ಮಾಡಿಕೊಂಡು, ಸಾಧ್ಯವಾದಷ್ಟೂ ಮರಗಳನ್ನು ಬೆಳೆಸೋಣ. ಈ ಮಳೆಗಾಲಕ್ಕೆ ಸ್ವಲ್ಪ ಮುಂಚೆ ಬೀಜದುಂಡೆಗಳನ್ನು (seedball) ಮಾಡಿ ಅದನ್ನು ನೀರು ನಿಲ್ಲುವ ಮತ್ತು ಕೆರೆಯಂಗಳದ ಸುತ್ತ ಮುತ್ತಲಿಗೆ ಹಾಕಿದ್ದಲ್ಲಿ, ಮಳೆಗಾಲಕ್ಕೆ ಆ ಬೀಜದುಂಡೆಗಳು ಮೊಳಕೆಯೊಡೆದು ಮುಂದೆ ಹೆಮ್ಮರವಾಗಿ ಮಳೆಯನ್ನು ಆಕರ್ಷಿಸುತ್ತವೆ.
 • ನಮ್ಮ ಮನೆ ಮತ್ತು ಸುತ್ತ ಮುತ್ತ ಇಂಗು ಗುಂಡಿಗಳನ್ನು ನಿರ್ಮಿಸಿ ನಮ್ಮ ಪ್ರದೇಶಗಳಲ್ಲಿ ಸುರಿದ ಮಳೆಯ ನೀರು ಆ ಇಂಗು ಗುಂಡಿಗಳ ಮೂಲಕ ಭೂಮಿಗೆ ಸೇರಿ ನಮ್ಮ ಸುತ್ತಮುತ್ತಲಿನ ಅಂತರ್ಜಲ ಮಟ್ಟ ಏರಿಕೆಯಾಗುವಂತೆ ನೋಡಿಕೊಳ್ಳೋಣ.
 • ಸಾಧ್ಯವಾದಷ್ಟೂ ರಾಜ ಕಾಲುವೆಗಳನ್ನು ಒತ್ತರಿಸಿಕೊಳ್ಳದೆ, ಕಾಲ ಕಾಲಕ್ಕೆ ಅದನ್ನು ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿದು ಹತ್ತಿರದ ಗುಂಡಿ ಅಥವಾ ಕೆರೆಗಳನ್ನು ಸೇರುವಂತೆ ನೋಡಿಕೊಳ್ಳೋಣ.

ಎಲ್ಲದ್ದಕ್ಕೂ ಸರ್ಕಾರವೇ ಮಾಡಲೀ ಎಂದು ಕಾದು ಕುಳಿತರೆ ಯಾವುದೇ ಕೆಲಸಗಳು ಆಗುವುದಿಲ್ಲ ಎನ್ನುವುದು ಕಠು ಸತ್ಯ. ಹಾಗಾಗಿ ನಾವುಗಳೇ ನಮ್ಮ ರಕ್ಷಣೆಯತ್ತ ಮತ್ತು ನಮ್ಮ ಪರಿಸರದತ್ತ ಕಾಳಜಿ ವಹಿಸೋಣ. ನಮ್ಮ ಪೂರ್ವಜರು ನಮ್ಮ ಹಿತರಕ್ಷಣೆಗಾಗಿಯೇ ಕೆರೆ ಕಟ್ಟೆಗಳನ್ನು, ದಟ್ಟವಾದ ಕಾಡುಗಳು, ಗೋಮಾಳಗಳನ್ನು ಬಿಟ್ಟುಹೋಗಿದ್ದರು. ಆದರೆ ನಾವಿಂದು ಸುತ್ತಮುತ್ತಲಿನ ಕೆರೆಗಳನ್ನು ಮುಚ್ಚಿ, ಕಾಡುಗಳಲ್ಲಿನ ಮರ ಕಡೆದು ಕಾಂಕ್ರೀಟ್ ನಾಡು ಮಾಡುತ್ತಿರುವ ಕಾರಣ ಬಿದ್ದ ಅಷ್ಟಿಷ್ಟು ನೀರೂ ಕೂಡೂ ಭೂಮಿಯೊಳಗೆ ಇಂಗಿ ಹೋಗದೆ, ಮೋರಿಗಳ ಮೂಲಕ ಕೊಳಚೆ ಚೆರಂಡಿ ಸೇರಿ ಪರಿಸರದ ನಾಶವೂ ಆಗುತ್ತಿದೆ.

ಇನ್ನೂ ಕಾಲ ಮಿಂಚಿಲ್ಲ. ಒಗ್ಗಟ್ಟಿನಲ್ಲಿ ಬಲವಿದೆ. ಹಾಗಾಗಿ ನಮ್ಮ ಸುತ್ತಮುತ್ತಲಿನ ಸ್ನೇಹಿತರು ಮತ್ತು ಬಂಧುಗಳನ್ನು ಒಗ್ಗೂಡಿಸಿ ಪರಿಸರವನ್ನು ಕಾಪಾಡುವ ಮತ್ತು ನಮ್ಮ ಮುಂದಿನ ಪೀಳಿಗೆಯವರಿಗೂ ಉಳಿಸಿಹೋಗುವ ಗುರುತರ ಜವಾಬ್ದಾರಿ ನಮ್ಮದೇ ಆಗಿದೆ

ಏನಂತೀರೀ?

One thought on “ಗುಂಡಿಗಳ ಮಧ್ಯೆ ರಸ್ತೆ ಇದೆ ಎಚ್ಚರಾ!!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s