ಸುಮಾರು ಮುರ್ನಾಲ್ಕು ವರ್ಷಗಳ ಹಿಂದಿನ ಮಾತು. ಆಗಷ್ಟೇ ನಮ್ಮನೆಯ ಹತ್ತಿರದ ಬಿಇಎಲ್ ಹೊಸಾ ರಸ್ತೆಯಲ್ಲಿ ಪ್ಯಾರಡೈಸ್ ಹೋಟೆಲ್ ಆರಂಭವಾಗಿತ್ತು. ಹೈದರಾಬಾದ್ ಮೂಲದ ಪ್ಯಾರಡೈಸ್ ಹೊಟೆಲ್ ರುಚಿ ರುಚಿಯಾದ ಬಿರ್ಯಾನಿಗೆ ಬಲು ಖ್ಯಾತಿ. ಕೆಲಸದ ನಿಮಿತ್ತ ಹಲವು ಬಾರಿ ಹೈದರಾಬಾದ್ಗಗೆ ಹೋಗಿದ್ದಾಗ ಅಲ್ಲಿ ಬಿರ್ಯಾನಿ ಸವಿದದ್ದನ್ನು ನಮ್ಮ ಮನೆಯಲ್ಲಿ ಹಂಚಿಕೊಂಡಿದ್ದೆನಾದ್ದರಿಂದ ಬಿರ್ಯಾನಿ ಪ್ರಿಯೆ ನನ್ನ ಮಗಳು ಅಪ್ಪಾ, ಹೇಗೂ ಮನೆಯ ಸಮೀಪವೇ ಪ್ಯಾರಡೈಸ್ ಹೋಟೆಲ್ ಶುರುವಾಗಿದೆ. ಬಿರಿಯಾನಿ ತಿನ್ನಲು ಅಲ್ಲಿಗೆ ಕರೆದುಕೊಂಡು ಹೋಗಿ ಎಂದು ದಂಬಾಲು ಬಿದ್ದಿದ್ದಳು. ನಾನೂ ಕೂಡಾ, ಇಂದು ನಾಳೆ ಎಂದು ಹಾಗೆಯೇ ಕಾಲ ತಳ್ಳುತ್ತಿದೆ. ಅಂದೂ ಕೂಡಾ ರಂಜಾನ್. ಕಛೇರಿಗೆ ರಜೆ ಇದ್ದ ಕಾರಣ ಎಲ್ಲಿಗೋ ಹೋಗಿ ಅದೇ ರಸ್ತೆಯಲ್ಲಿ ಸಂಜೆ ಮಡದಿಯೊಂದಿಗೆ ಮನೆಗೆ ಬರುತ್ತಿದ್ದಾಗ ಮಗಳ ಬಿರಿಯಾನಿಯ ಬಯಕೆ ನೆನಪಾಗಿ ಗಾಡಿ ಪ್ಯಾರಡೈಸ್ ಹೋಟೆಲ್ ಬಳಿ ನಿಲ್ಲಿಸಿ, Take away counterನಲ್ಲಿ ಎರಡು ವೆಜ್ ಬಿರಿಯಾನಿ ಪಾರ್ಸೆಲ್ ಕೊಡಿ ಎಂದು ಕೇಳಿದೆ.
ಅಲ್ಲಿ ಆರ್ಡರ್ ತೆಗೆದುಕೊಳ್ಳುವವ, ಸಾರ್ ಎಷ್ಟು ಜನ ನಿಮ್ಮ ಮನೆಯಲ್ಲಿ ಇದ್ದೀರೀ ಎಂದು ಕೇಳಿದಾಗ, ನಾವು ಐವರಿದ್ದೇವೆ ಎಂದು ಉತ್ತರಿಸಿದೆ. ಸರ್ ಹಾಗಿದ್ದಲ್ಲಿ ಎರಡು ಬಿರಿಯಾನಿ ಬದಲು ಒಂದು Family pack ತೆಗೆದುಕೊಳ್ಳಿ. ಅದೇ ಬೆಲೆಗೆ ಐದೂ ಜನರಿಗೆ ಸಾಕಾಗುವಷ್ಟು ಬಿರಿಯಾನಿ, ಜೊತೆಗೆ ಎರಡು ರೊಟ್ಟಿ ಮತ್ತು ಒಂದು ಕರ್ರಿ ಕೊಡುತ್ತೇವೆ ಎಂದಾಗ, ನನಗೆ ಸರಿ ಎನಿಸಿ, ಸರಿ ಅದೇ ಕೊಡಿ ಎಂದು ಹೇಳಿ ಬಿಲ್ ಹಣ ಪಾವತಿಸಿ ಹಾಗೆಯೇ ಮಡದಿಯೊಂದಿಗೆ ಕುಶಲೋಪರಿ ಮಾತಾಡತೊಡಗಿದೆ. ಸುಮಾರು 20-25 ನಿಮಿಷಗಳಷ್ಟರಲ್ಲಿ ನಮ್ಮ order ಸಿದ್ದವಾಗಿ ಚೆಂದನೆಯ ಪ್ಯಾಕ್ ಮಾಡಿ ಕೈಗಿತ್ತು, ಸರ್ ರಂಜಾನ್ ಹಬ್ಬದ ಪ್ರಯುಕ್ತ ಸಿಹಿ ಪಾಯಸವನ್ನು ಉಡುಗೊರೆಯಾಗಿ ಕೊಟ್ಟಿದ್ದೇವೆ. ಸರ್ ಮನೆಗೆ ಬೇಗನೇ ಹೋಗಿ ಆಹಾರ ಬಿಸಿಯಾಗಿರುವಾಗಲೇ ತಿನ್ನಲು ಚೆನ್ನಾಗಿರುತ್ತದೆ. ಮನೆಯವರೆಲ್ಲರೂ ನಮ್ಮ ಹೋಟೇಲ್ ಅಹಾರ ಖುಷಿಯಿಂದ ಸೇವಿಸಿ ಹಾಗೂ ಮತ್ತೊಮ್ಮೆ ಎಲ್ಲರೊಂದಿಗೆ ಇಲ್ಲಿಗೇ ಬಂದು ಊಟ ಮಾಡಿ ಕೊಂಡು ಹೋಗಿ ಎಂದು ಬಹಳ ಆತ್ಮೀಯವಾಗಿ ಬೀಳ್ಕೊಟ್ಟರು.
ಅಷ್ಟರಲ್ಲಾಗಲೇ ಗಂಟೆ ಏಳಾಗಿದ್ದರಿಂದ ಮನೆಗೆ ಕರೆ ಮಾಡಿ ಮಗಳಿಗೆ ಅವಳ ನೆಚ್ಷಿನ ಬಿರಿಯಾನಿ parcel ತರುತ್ತಿರುವ ವಿಷಯ ತಿಳಿಸಿ ತಟ್ಟೆ, ಲೋಟಗಳನ್ನು ಸಿದ್ಧ ಪಡಿಸಲು ತಿಳಿಸಿ ಭರದಿಂದಲೇ ಮನೆಗೆ ಹೋದಾಗ ಕೇವಲ ನಾಲ್ಕೇ ತಟ್ಟೆಗಳನ್ನು ಜೋಡಿಸಿ ಊಟಕ್ಕಾಗಲೇ ಸಿದ್ದವಾಗಿದ್ದರು ನನ್ನ ಮಕ್ಕಳು. ಆರೇ ಇದೇನು ನಾಲ್ಕೇ ತಟ್ಟೆಗಳನ್ನು ಇಟ್ಟಿದ್ದೀರೀ? ತಾತನ ತಟ್ಟೇನೇ ಇಟ್ಟಿಲ್ಲವಲ್ರೋ ಎಂದಾಗ, ಅಪ್ಪಾ ತಾತಾ ನನಗೆ ಬಿರ್ಯಾನಿ, ಗಿರ್ಯಾನಿ ಆಗಿ ಬರುವುದಿಲ್ಲವಾದ್ದರಿಂದ ಮಧ್ಯಾಹ್ನದ ಅಡುಗೆಯನ್ನೇ ತಿನ್ನುವುದಾಗಿ ಹೇಳಿರುವ ಕಾರಣ, ನಾಲ್ಕೇ ತಟ್ಟೆಗಳನ್ನು ಜೋಡಿಸಿಟ್ಟಿದ್ದೇವೆ ಎಂದು ಹೇಳಿದಾಗ, ತಂದೆಯವರ ಕೋಣೆಗ ಹೋಗಿ, ಅಣ್ಣಾ ಬನ್ನಿ ಸ್ವಲ್ಪ ಬಿರ್ಯಾನಿ ತಿನ್ನುವಿರಂತೆ. ಚೆನ್ನಾಗಿರುತ್ತದೆ ಎಂದಾಗ, ಬೇಡಪ್ಪಾ ಬೇಡ. ನಾನು ಅದೆಲ್ಲಾ ತಿನ್ನೋದಿಲ್ಲ. ನೀವು ಬೇಕಿದ್ದರೆ ತಿನ್ನಿ ಎಂದು ಖಡಾ ಖಂಡಿತವಾಗಿ ಹೇಳಿದ್ದನ್ನು ಕೇಳಿ ಅವರನ್ನು ಬಿಟ್ಟು ತಿನ್ನ ಬೇಕಲ್ಲಾ ಎಂದು ಮನಸ್ಸಿಗೆ ಸ್ವಲ್ಪ ಬೇಸರ ಎನಿಸಿದರೂ ಹಿರಿಯರನ್ನು ಬಲವಂತ ಮಾಡಬಾರದು ಎಂದೆನಿಸಿ ನಮ್ಮ ಕೋಣೆಗೆ ಬಂದು ತಟ್ಟೆಗೆ ಆಹಾರವನ್ನು ಬಡಿಸಲು ಸಿದ್ದವಾಗಿ ಎಲ್ಲವನ್ನೂ ತೆಗೆದಿಡುತ್ತಾ ಬಿರ್ಯಾನಿ ಪ್ಯಾಕೆಟ್ ಮತ್ತು ರೋಟಿ ಪ್ಯಾಕ್ ತೆಗೆದು ಪಕ್ಕಕ್ಕಿಟ್ಟೆ. ಆದರೆ curry boxಗೆ ಕೈ ಹಾಕಿದಾಗ ಅದರ ಮೇಲೆ ಕೆಂಪು ಬಣ್ಣದ ಚುಕ್ಕಿ ಇದ್ದದ್ದನ್ನು ಕಂಡು ಅನುಮಾನವಾಗಿ ತೆರೆದು ನೋಡಿದರೆ veg curry box ಬದಲಾಗಿ non-veg curry box ಕೊಟ್ಟಿರುವುದು ಸ್ಪಷ್ಟವಾಗಿ ಗಮನಕ್ಕೆ ಬಂದು ಕೋಪ ಸರ್ರನೆ ನೆತ್ತಿಗೇರಿತು. ಕೂಡಲೇ ಬಿರ್ಯಾನಿ ಪ್ಯಾಕ್ ತೆರೆದು ನೋಡಿದಾಗ ಸದ್ಯ ವೆಜ್ ಬಿರ್ಯಾನಿಯನ್ನೇ ಕೊಟ್ಟಿದ್ದರು. ಕೂಡಲೇ ಪ್ಯಾಕ್ ಮೇಲಿದ್ದ ಫೋನ್ ನಂಬರ್ಗೆ ಕರೆ ಮಾಡಿ ಅವರ ಮೇಲೆ ಜೋರು ಮಾಡಬೇಕು ಎಂದು ನಡೆದ ವಿಷಯ ಕೂಲಂಕುಶವಾಗಿ ತಿಳಿಸಿದಾಗ. ಓಹೋ ಸಾರಿ ಸರ್ ಸಾರಿ, ನಮ್ಮಿಂದ ತಪ್ಪಾಗಿ ಹೋಗಿದೆ. ನಿಮ್ಮ ಮನೆಯ ವಿಳಾಸ ತಿಳಿಸಿ ನಾವು ಸರಿಯಾದದ್ದನ್ನು ಈ ಕೂಡಲೇ ಕಳುಹಿಸುತ್ತೇವೆ ಎಂದು ಬಹಳ ಶಾಂತಿಯಿಂದ ತಿಳಿಸಿ, ಮನೆಯ ವಿಳಾಸ ತೆಗೆದುಕೊಂಡು ಆವರ ಡೆಲಿವರಿ ಬಾಯ್ ಹೆಸರು ಮತ್ತು ಫೋನ್ ನಂಬರ್ ನಮಗೆ ತಿಳಿಸಿ ಇನ್ನು ಹದಿನೈದು ಇಪ್ಪತ್ತು ನಿಮಿಷಗಳ ಒಳಗೆ ನಿಮ್ಮ ಮನೆಗೆ ಡೆಲಿವರಿ ಮಾಡ್ತೀವಿ ಎಂದು ತಿಳಿಸಿದರು. ಅವರು ಮಾತನಾಡಿದ ರೀತಿ ಮತ್ತು ಯಾವುದೇ ರೀತಿಯ ವಾಗ್ವಾದ ಮಾಡದೇ ತಪ್ಪನ್ನು ಒಪ್ಪಿಕೊಂಡು, ತಪ್ಪನ್ನು ಸರಿ ಪಡಿಸುತ್ತೇವೆ ಎಂದು ವಿನಮ್ರವಾಗಿ ಕೇಳಿಕೊಂಡಾಗ ಅವರ ಮೇಲೆ ಜೋರು ಮಾಡಲು ಮನಸ್ಸೇ ಆಗಲಿಲ್ಲ.
ಮಕ್ಕಳೋ ಅದಾಗಲೇ ತಿನ್ನೋದಕ್ಕೆ ಸಿದ್ದರಾಗಿದ್ದವರು ಈ ರೀತಿಯಾದ ಅಚಾತುರ್ಯದಿಂದ ವಿಚಲಿತರಾಗಿದ್ದರು. ಅವರನ್ನು ಹೇಗೋ ಸಮಾಧಾನ ಪಡಿಸುವಷ್ಟರಲ್ಲಿ ಮನೆಯ ಕಾಲಿಂಗ್ ಬೆಲ್ ಸದ್ದಾಗಿ ಹೊರಗೆ ಹೋಗಿ ನೋಡಿದಾಗ ಪ್ಯಾರಡೈಸ್ ಹೋಟೆಲ್ಲಿನ ವ್ಯಕ್ತಿ ನಮ್ಮ ಆಹಾರದ ಡಬ್ಬಿಯೊಂದಿಗೆ ನಿಂತಿದ್ದರು. ಸರಿ ಒಳಗೆ ಬನ್ನಿ ಎಂದು ಕರೆದಾಗ ಬೇಡಾ ಸರ್. ಈಗಾಗಲೇ ನಮ್ಮಿಂದ ತಪ್ಪಾಗಿ ಹೋಗಿದೆ ಮತ್ತು ತಡವಾಗಿ ಹೋಗಿದೆ. ಎಲ್ಲರೂ ಕಾಯುತ್ತಿರುತ್ತಾರೆ. ತೊಗೊಳ್ಳಿ ಸಾರ್ ಎಂದು ಎರಡು ಪ್ಯಾಕ್ ಕೈಗಿತ್ತರು. ಇದೇನಿದು ಎರಡು ಪ್ಯಾಕ್? ಎಂದಾಗ ಸರ್ ಸಸ್ಯಹಾರಿಗಳಿಗೆ ಮಾಂಸಾಹಾರವನ್ನು ಕೊಟ್ಟಾಗ ಅಗಬಹುದಾದ ಕಸಿವಿಸಿ ನಮಗೆ ಅರ್ಥವಾಗುತ್ತದೆ. ಅದಕ್ಕೆ ನಾವು ಎಷ್ಟೇ ಸಮಜಾಯಿಷಿ ಕೊಟ್ಟರೂ ಏನೇ ಕೊಟ್ಟರೂ ಸರಿ ಪಡಿಸಲಾಗದಾದರೂ ನಮ್ಮಿಂದ ನಿಮಗಾದ ಕಸಿವಿಸಿಗಾಗಿ ಮತ್ತೆ ಎರಡು ರೋಟಿಗಳನ್ನು ಕೊಡುತ್ತಿದ್ದೇವೆ. ದಯವಿಟ್ಟು ತೆಗೆದುಕೊಳ್ಳಿ ಎಂದು ಬಹಳ ವಿನಯವಾಗಿ ಹೇಳಿದಾಗ ಆ ವ್ಯಕಿತ್ಯ ಮನವರಿಕೆಗೆ ಮಾರು ಹೋಗಿ ಅವರನ್ನು ಬೈಯ್ಯಲು ಮನಸ್ಸೇ ಬರಲಿಲ್ಲ. ಒಳಗಿನಿಂದ ಡಬ್ಬಿಯನ್ನು ತಂದು ಕೊಟ್ಟಾಗ, ಸರ್, ಇಂದು ರಂಜಾನ್ ಪ್ರಯುಕ್ತ ತುಂಬಾ ಜನ ನಮ್ಮ ಹೋಟೆಲ್ಗೆ ಬಂದ್ದಿದ್ದರು. ತುಂಬಾನೇ ರಷ್ ಇದ್ದ ಕಾರಣ ಏನೋ ಈ ರೀತಿಯ ತಪ್ಪಾಗಿ ಹೋಗಿದೆ. ಮುಂದೆ ಹೀಗಾಗದಂತೆ ಎಚ್ಚರ ವಹಿಸುತ್ತೇವೆ. ಮತ್ತೊಮ್ಮೆ ಇಡೀ ಕುಟುಂಬದ ಸಮೇತ ನಮ್ಮ ಹೋಟೆಲ್ಗೆ ಬನ್ನಿ. ನಾನೇ ಖುದ್ದಾಗಿ ನಿಮ್ಮ ಆತಿಥ್ಯ ವಹಿಸುತ್ತೇನೆ ಎಂದು ಹೇಳಿದರು. ಪರವಾಗಿಲ್ಲ ಒಮೊಮ್ಮೆ ಹೀಗೆ ಆಗಿ ಹೋಗುತ್ತದೆ ಎಂದು ಅವರನ್ನು ಸಮಾಧಾನ ಪಡಿಸಿ ಕಳುಹಿಸಿ ಕೊಟ್ಟು ಒಳಗೆ ಬರುವಷ್ಟರಲ್ಲಿ ಮಕ್ಕಳು ತಟ್ಟೆಗೆ ಆಹಾರವನ್ನು ಬಡಿಸಿ ನನ್ನ ಆಗಮನಕ್ಕಾಗಿ ಕಾಯುತ್ತಿದ್ದರು.
ನಂತರ ಎಲ್ಲರೂ ಸಮಚಿತ್ತದಿಂದ ನೆಮ್ಮದಿಯಾಗಿ ಮನಸೋ ಇಚ್ಘೆ, ಹೊಟ್ಟೆ ತುಂಬಾ ಊಟ ಮಾಡಿದರೂ ಅರ್ಧದಷ್ಟು ಬಿರಿಯಾನಿ ಹಾಗೆಯೇ ಉಳಿದು ಹೋಗಿತ್ತು. ಆಹಾರ ಚೆಲ್ಲಲು ಮನಸ್ಸು ಬಾರದೇ ತಂಗಳು ಡಬ್ಬಿಯಲ್ಲಿ ಭದ್ರವಾಗಿ ಎತ್ತಿಟ್ಟು ಮಾರನೇ ದಿನ ಬೆಳಿಗ್ಗೆ ಮೊಸರು ಬಜ್ಜಿ ಮಾಡಿ ಬೆಳಗಿನ ತಿಂಡಿಯೊಂದಿಗೆ ತಂಗಳು ಬಿರ್ಯಾನಿ ತಿಂದಾಗ ಅದರ ರುಚಿಯೇ ಬೇರಾಗಿತ್ತು ಮತ್ತಷ್ಟೂ ಸೊಗಸಾಗಿತ್ತು ಆಗಲೇ ನಮಗೆ ರಂಜಾನ್ ಮಾರನೆಯ ದಿನ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ಗೆ ಸಂಸಾರ ಸಮೇತರಾಗಿ ಬಂದು ಏಕೆ ತಿನ್ನುತ್ತಾರೆ ಎಂಬ ಗುಟ್ಟು ರಟ್ಟಾಗಿತ್ತು.
ಇಂದು ಕೂಡಾ ರಂಜಾನ್. ಇಂದೂ ಕೂಡಾ ನನಗೆ ಮತ್ತು ನನ್ನ ಮಗಳಿಗೆ ರಜೆ. ಬೆಳಿಗ್ಗೇ, ಸುಮ್ಮನೆ ತಮಾಷಿಗಾಗಿ ಏನೋ ಅಕ್ಕಾ, ರಂಜಾನ್ ಬಿರ್ಯಾನಿ ತಿನ್ನಲು ಪ್ಯಾರಡೈಸ್ಗೆ ಹೋಗೋಣ್ವಾ ಎಂದು ಕೇಳಿದೆ, ಅದಕ್ಕೆ ಅವಳೂ ಕೂಡಾ ತಕ್ಷಣವೇ ಹಳೆಯ ನೆನಪನ್ನು ಮೆಲುಕು ಹಾಕುತ್ತಾ ಸಣ್ಣಗೆ ಹುಸಿ ನಗುತ್ತಾ ಸರಿ ಅಪ್ಪಾ ನಡೀರಿ ಹೋಗೋಣ ಎಂದಿದ್ದೇ ತಡಾ, ನನ್ನಾಕೀ, ಏನೂ ಬೇಡ , ಒಂದು ಸರಿ ಆದ ರಂಜಾನ್ ರಾಮಾಯಣವೇ ಸಾಕು ಸಾಕು. ಮತ್ತೆ ಮತ್ತೆ ಅಲ್ಲಿಗೇ ಹೋಗ್ಬೇಕಾ? ನಾನೇ ರುಚಿ ರುಚಿಯಾಗಿ ಮಂಗಳೂರು ಸೌತೇಕಾಯಿ ಹುಳಿ ಮಾಡಿದ್ದೇನೆ ಎಲ್ಲೂ ಹೋಗುವುದೂ ಬೇಡ ಎನ್ನುವಷ್ಟರಲ್ಲಿ ನಮ್ಮ ಮಾವನವರು ಕರೆ ಮಾಡಿ ಎಲ್ಲರೂ ನಮ್ಮ ಮನೆಗೇ ಬನ್ನಿ ಒಟ್ಟಿಗೆ ಊಟ ಮಾಡೋಣ ಎಂದಾಗ, ಹಿರಿಯರ ಮನ ನೋಯಿಸುವುದು ಬೇಡ ಎಂದು ಹೇಳಿ ನಮ್ಮ ಮನೆಯ ಹುಳಿಯ ಕೊತೆಗೆ ಅವರ ಮನೆಯ ಚಪಾತಿ, ಸಾಗು ಅವರ ಮನೆಯಲ್ಲಿಯೇ ಎಲ್ಲರೂ ಗಡದ್ದಾಗಿ ತಿಂದು ಭುಕ್ತಾಯಾಸವನ್ನು ಪರಿಹರಿಸಿ ಕೊಳ್ಳುತ್ತಿದ್ದೇವೆ.
ಒಟ್ಟಿನಲ್ಲಿ ಈ ಪ್ರಕರಣ ಹಾಸ್ಯವೆನಿಸಿ ಸುಖಾಂತ್ಯದಲ್ಲಿ ಕೊನೆಗೊಂಡರೂ ಸಂಪ್ರದಾಯಸ್ಥರ ಮನೆಯಗಳಲ್ಲಿ ಆಗಬಹುದಾದ ಕಸಿವಿಸಿ ನಿಜಕ್ಕೂ ಅವರ್ಣನೀಯ ಮತ್ತು ಅಸಹನೀಯ. ಗೊತ್ತಿದ್ದೂ ಗೊತ್ತಿದ್ದೂ ನಾಲಿಗೆಯ ರುಚಿಗಾಗಿ ಮಾಂಸಾಹಾರಿ ಹೋಟೆಲ್ನಲ್ಲಿ ಸಸ್ಯಾಹಾರವನ್ನು ಬಯಸಿದರೆ ಈ ರೀತಿಯ ಅವಗಡಗಳು ಸಂಭವಿಸಬಹುದು ಎಂಬುದಕ್ಕೆ ಉತ್ತಮ ನಿದರ್ಶನವಾಗಿದೇ ಈ ಪ್ರಸಂಗ.
ಈ ವೀಡೀಯೋ ಮತ್ತು ಲೇಖನ ಇಷ್ಟವಾದಲ್ಲಿ like ಮಾಡಿ, Share ಮಾಡಿ, Subscribe ಆಗೋದನ್ನ ಮರೀಬೇಡಿ
ಏನಂತೀರೀ?
ಚೆನ್ನಾಗಿದೆ.
LikeLiked by 1 person
[…] […]
LikeLike