ಇಂದು ಬೆಳಿಗ್ಗೆ ಮನೆಯ ಹತ್ತಿರ ಜಾಗಿಂಗ್ ಮಾಡುತ್ತಿದ್ದೆ. ಹಾಗೆ ಮಾಡುವಾಗ ನನಗಿಂತ ಸುಮಾರು ಅರ್ಧ ಕಿಲೋ ಮೀಟರ್ ಮುಂದೆ ಜಾಗಿಂಗ್ ಮಾಡುತ್ತಿದ್ದ ಮತ್ತೊಬ್ಬ ವ್ಯಕ್ತಿಯನ್ನು ಗಮನಿಸಿದೆ.
ಅವರು ಸ್ವಲ್ಪ ನಿಧಾನವಾಗಿ ಓಡುತ್ತಿರುವುದನ್ನು ಗಮನಿಸಿ ಅವರನ್ನು ಹಿಂದಿಕ್ಕಬೇಕೆಂದು ನನ್ನ ಒಳ ಮನಸ್ಸು ಹೇಳಿತು.
ಹಾಗಾಗಿ ನಾನು ಮತ್ತಷ್ಟೂ ವೇಗ ಮತ್ತು ವೇಗವಾಗಿ ಓಡಲು ಪ್ರಾರಂಭಿಸಿ, ಕೆಲವೇ ನಿಮಿಷಗಳಲ್ಲಿ ಅವರಿಗಿಂತ 100 ಅಡಿಗಳ ಹಿಂದೆ ಬಂದಿದ್ದನ್ನು ಗಮನಿಸಿದ ಅವರೂ ತಮ್ಮ ವೇಗವನ್ನು ಹೆಚ್ಚಿಸಿಕೊಂಡರು. ನಾನೂ ಕೂಡ ಅವರನ್ನು ಹಿಂದಿಕ್ಕಲು ಸರ್ವ ಪ್ರಯತ್ನ ಮಾಡಿದೆ.
ನನ್ನ ಪ್ರಯತ್ನದ ಫಲವಾಗಿ ಅಂತಿಮವಾಗಿ, ನಾನು ಅವರನ್ನು ಹಿಂದಿಕ್ಕಿದಾಗ, ಮನಸ್ಸಿನಲ್ಲಿಯೇ ವಾವ್!! ನಾನು ಅವರನ್ನು ಸೋಲಿಸಿದೆ ಎಂಬ ಭಾವನೆ ಮೂಡಿತು.
ಆದರೆ ನಿಜಕ್ಕೂ ಹೇಳಬೇಕೆಂದರೆ , ನಾನು ಅವರೊಂದಿಗೆ ರೇಸಿಂಗ್ ಮಾಡುತ್ತಿದ್ದೇವೆಂದು ಆ ವ್ಯಕ್ತಿಗೆ ತಿಳಿದಿದೇ ಇರಲಿಲ್ಲ.
ಅವರನ್ನು ಮೆಟ್ಟಿನಿಂತರ ನಾನು ನನ್ನಲ್ಲಿಯೇ ಗಮನಿಸಿದ ಅಂಶವೇನೆಂದರೆ, ಅವರನ್ನು ಸೋಲಿಸುವ ಭರದಲ್ಲಿ
- ನನ್ನ ಮನೆಯ ತಿರುವನ್ನು ಮರೆತು ಬಹಳ ದೂರ ತಲುಪಿದ್ದೆ.
- ನನ್ನ ವಿವೇಚನಾ ಶಕ್ತಿಯನ್ನು ಕಳೆದು ಕೊಂಡಿದ್ದೆ.
- ಸುತ್ತ ಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಮರೆತಿದ್ದೆ.
- ನನ್ನ ಆಂತರಿಕ ಸತ್ಯ ಶೋಧನೆ ಮತ್ತು ಧ್ಯಾನ ಮಾಡಲು ಮರೆತಿದ್ದೆ ಮತ್ತು ಅವರನ್ನು ಹಿಂದಿಕ್ಕುವ ಭರದಲ್ಲಿ ಕೆಲವು ಬಾರಿ ಎಡವಿ ಮತ್ತು ಒಂದೆರಡು ಬಾರಿ ಜಾರಿ ಬಿದ್ದು ಕೈಕಾಲುಗಳಿಗೆ ಗಾಯವನ್ನೂ ಮಾಡಿ ಕೊಂಡಿದ್ದೆ.
- ಕೇವಲ ಸ್ಪರ್ಧೆಯತ್ತಲೇ ನನ್ನೆಲ್ಲಾ ಗಮನವನ್ನು ಕೇಂದ್ರೀಕರಿಸಿ, ನನ್ನ ಸಹೋದ್ಯೋಗಿಗಳು, ನೆರೆಯವರು, ಸ್ನೇಹಿತರು, ಕುಟುಂಬದವರನ್ನು ಮೆಟ್ಟಿ ನಿಲ್ಲಬೇಕೆಂದು ನಿರ್ಧರಿಸಿ,ಅಂತಿವಾಗಿ ನಾವು ಯಲ್ಲಿ ವಿಜಯಶಾಲಿಯಾಗಿ ಯಶಸ್ವಿಯಾದೆವೂ ಎಂದೆನಿಸಿದರೂ, ಜೀವನದಲ್ಲಿ ಮಾತ್ರಾ ಸೋಲನ್ನು ಅನುಭವಿಸಿರುತ್ತೇವೆ. ದೊಡ್ಡ ದೊಡ್ಡ ಕಾರ್ಯಗಳನ್ನು ಸಾಧಿಸುವ ಭರದಲ್ಲಿ ಸಣ್ಣ ಸಣ್ಣ ಸಂತೋಷಗಳನ್ನು ಗೊತ್ತಿಲ್ಲದಯೇ ಕಳೆದು ಕೊಂಡಿರುತ್ತೇವೆ.
- ಇತರರನ್ನು ಹಿಂದಿಕ್ಕುವ ಭರದಲ್ಲಿಯೇ ನಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಪಡಿಸಿಕೊಂಡು ನಾವು ನಮ್ಮ ನಿರ್ಧಿಷ್ಟ ಗುರಿಯಿಂದ ಪಕ್ಕಕ್ಕೆ ಸರಿದು ಅನಗತ್ಯವಾದ ದಾರಿಯಲ್ಲಿ ಹಿಂದಿರುಗಿ ಬರಲು ಸಾಧ್ಯವಾಗದಷ್ಟು ದೂರ ಸರಿದು ಹೋಗಿರುತ್ತೇವೆ.
ಈ ರೀತಿಯ ಫಲಿತಾಂಶಗಳು ಅನಾರೋಗ್ಯಕರ ಸ್ಪರ್ಧೆಯಲ್ಲಿ ಅಂತಿಮವಾದ ಪಡೆಯುವ ಸಹಜ ಪ್ರಕ್ರಿಯೆಯಾಗಿದೆ.
ಜೀವನದಲ್ಲಿ ಸದಾ, ಒಬ್ಬರಲ್ಲಾ ಮತ್ತೊಬ್ಬರು ನಮ್ಮ ಮುಂದೆ ಇದ್ದೇ ಇರುತ್ತಾರೆ.
ಕೆಲವರು ನಮಗಿಂತ ಉನ್ನತ ಹುದ್ದೆಯಲ್ಲಿರುಬಹುದು. ಅವರ ಬಳಿ ಒಳ್ಳೆಯ ಕಾರು, ಬ್ಯಾಂಕ್ನಲ್ಲಿ ಹೆಚ್ಚು ಹಣ, ನಮಗಿಂತ ಒಳ್ಳೆಯ/ಹೆಚ್ಚಿನ ಶಿಕ್ಷಣ, ಸುಂದರವಾದ ಪತ್ನಿ/ಪತಿ ಮುದ್ದಾದ ಮತ್ತು ಸುಶಿಕ್ಷಿತ ಮಕ್ಕಳು ಇದ್ದಿರಬಹುದು. ಸಮಯ ಮತ್ತು ಸಂದರ್ಭಗಳು ಅವರಿಗೇ ಅನುಕೂಲಕರವಾಗಿರ ಬಹುದು.
ಆದರೆ ಅಂತಿಮವಾಗಿ ನಾವು ಅರಿತು ಕೊಳ್ಳಬೇಕಾದ ಸತ್ಯ ಸಂಗತಿಯೆಂದರೆ ನಮಗೆ ನಾವೇ ಸಾಟಿ. ನಾವು ಯಾರೊಂದಿಗೂ ಪೈಪೋಟಿ ಇಲ್ಲದಿದ್ದಾಗ ಮಾತ್ರವೇ ನಾವು, ನಾವಾಗಿರಬಹುದು ಮತ್ತು ಸುಖಃ, ಸಂತೋಷವಾಗಿರಬಹುದು.
ಆದರೆ ಬಹಳಷ್ಟು ಜನರು ತಮ್ಮನ್ನು ತಾವು ಅಸುರಕ್ಷಿತ ಎಂದೇ ಭಾವಿಸಿರುತ್ತಾರೆ ಹಾಗಾಗಿ ಅವರು ಸದಾ ಇತರರನ್ನು ಗಮನಿಸುತ್ತಲೇ ಇರುತ್ತಾರೆ.
ಇತರರು ಏನು ಮಾಡುತ್ತಾರೆ, ಅವರು ಎಲ್ಲಿಗೆ ಹೋಗುತ್ತಾರೆ, ಅವರು ಏನನ್ನು ಖರೀಧಿಸುತ್ತಾರೆ, ಏನನ್ನು ಧರಿಸುತ್ತಾರೆ, ಅವರು ಏನನ್ನು ಸೇವಿಸುತ್ತಾರೆ, ಯಾರ ಬಳಿ ಏನು ಮಾತನಾಡುತ್ತಾರೆ ಇತ್ಯಾದಿ.. ಇತ್ಯಾದಿ…
ಅದನ್ನೆಲ್ಲಾ ಪಕ್ಕಕ್ಕಿಟ್ಟು ನಾವು ನಾವಾಗಿಯೇ ಇರೋಣ. ಭಗವಂತ ನಮಗೆ ಕೊಟ್ಟಿರುವ ರೂಪ, ಲಾವಣ್ಯ, ಎತ್ತರ, ಬಣ್ಣ ಮತ್ತು ವ್ಯಕ್ತಿತ್ವದ ಬಗ್ಗೆ ಅಭಿಮಾನದಿಂದ ತೋರಿದಾಗ ಮಾತ್ರವೇ ನಾವು ಬದಕನ್ನು ಹೆಚ್ಚಾಗಿ ಸವಿಯಬಹುದು ಮತ್ತು ಆರೋಗ್ಯಕರ ಜೀವನವನ್ನು ನಡೆಸ ಬಹುದು.
ಎಲ್ಲರಿಗೂ ಅವರದ್ದೇ ಆದ ಧ್ಯೇಯ ಮತ್ತು ಗುರಿಗಳು ಇದ್ದೇ ಇರುತ್ತವೆ. ಹಾಗಾಗಿ ನಾವು ಇತರರೊಂದಿಗೆ ಅನಾವಶ್ಯಕ ಸ್ಪರ್ಧೆಗೆ ಇಳಿಯದಿರೋಣ.
ಇತರರೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದರ ಮೂಲಕ ನಮ್ಮ ಸ್ವಂತಿಕೆಯ ಮೇಲೆಯೇ ನಮಗೆ ಅಪನಂಬಿಕೆ ಮೂಡುವ ಕಾರಣ, ನಾವು ಜೀವಮಾನವಿಡೀ ಸುಖಃವನ್ನು ಅನುಭವಿಸಲಾರೆವು. ಸದಾ ದುಃಖಿಗಳಾಗಿಯೇ ಇರ ಬೇಕಾಗ ಬಹುದು
ಹಾಗಾಗಿ ಯಾರೊಂದಿಗೂ ಅನಾವಶ್ಯಕವಾಗಿ ಸ್ಪರ್ಧೆಗಿಳಿಯದೆ, ನಮ್ಮೊಂದಿಗೆ ನಾವೇ ಸ್ಪರ್ಧಿಸಿಕೊಳ್ಳುವುದರ ಮೂಲಕ ಶಾಂತಿಯುತ ಮತ್ತು ಸಂತೋಷದಾಯಕ ಬದುಕನ್ನು ಸವಿಯೋಣ.
ಮುಂದೆ ಸ್ಪಷ್ಟ ಗುರಿ ಮತ್ತು ಹಿಂದೆ ದಿಟ್ಟ ಗುರು ಇದ್ದಲ್ಲಿ ಇಡೀ ಜಗತ್ತನ್ನೇ ಮೆಟ್ಟಿ ನಿಲ್ಲಬಹುದು. ಆದರೇ, ಹಾಗೆ ಜಗತ್ತನ್ನು ಮೆಟ್ಟಿ ನಿಲ್ಲುವ ಮೊದಲು ನಮ್ಮನ್ನು ನಾವೇ ಮೆಟ್ಟಿ ನಿಂತಲ್ಲಿ ಮಾತ್ರವೇ ಎಲ್ಲವೂ ಸುಲಭ ಸಾಧ್ಯ.
ಏನಂತೀರೀ?
ಕೃಪೆ : ವ್ಯಾಟ್ಯಾಪ್ನ ಆಂಗ್ಲ ಭಾಷೆಯ ಅನಾಮಿಕ ಲೇಖಕರ, ಕನ್ನಡ ಅನುವಾದ