ಇತ್ತೀಚಿಗೆ ವ್ಯಾಟ್ಸಪ್ಬಲ್ಲಿನ ನೋಡಿದ ಒಂದು ಗೋಡೇ ಬರಹ ನನ್ನನ್ನು ಬಹಳಷ್ಟು ಕಾಡಿತು. ಅದರ ಸಾರಾಂಶ ಈ ರೀತಿಯಾಗಿದೆ.
ಮಗ ತಾಯಿಗೆ ಕೂಗಿ ಹೇಳುತ್ತಾನೆ. ಅಮ್ಮಾ ಕಸದವರು ಬಂದಿದ್ದಾರೆ. ಅದಕ್ಕೆ ಮನೆಯೊಳಗಿನಿಂದ ತಾಯಿ ಶಾಂತಚಿತ್ತದಿಂದ ಮಗನಿಗೆ ತಿಳಿ ಹೇಳುತ್ತಾಳೆ. ಮಗೂ ಕಸದವರು ಅವರಲ್ಲ , ನಾವುಗಳು. ಅವರು ನಾವು ಮಾಡಿದ ಕಸವನ್ನು ಸ್ವಚ್ಛ ಗೊಳಿಸಲು ಬಂದಿದ್ದಾರೆ. ಇನ್ನೊಬ್ಬರ ಕೆಲಸವನ್ನು ಹೀಯಾಳಿಸದೆ ನಮ್ಮ ಮನಸ್ಥಿತಿಯನ್ನು ನಮ್ಮ ದೃಷ್ಟಿಕೋನವನ್ನು ಬದಲಿಸಿ ನೋಡು ಎಲ್ಲವೂ ಸ್ಚಚ್ಚವಾಗಿ ಕಾಣುತ್ತದೆ ಎಂದು ಸುಂದರವಾಗಿ ಸ್ವಚ್ಚತೆಯ ಬಗ್ಗೆ ಮಗನಿಗೆ ತಿಳಿಸಿ ಹೇಳುತ್ತಾಳೆ.
ಇದನ್ನೇ ನಮ್ಮ ಪ್ರಧಾನಮಂತ್ರಿಗಳು ಸಹಾ ಸ್ವಚ್ಛ ಭಾರತ ಅಭಿಯಾನ ಎಂದು ಕರೆದು ಸಮಸ್ತ ಭಾರತೀಯರೂ ಸ್ವಚ್ಚತೆಯ ಬಗ್ಗೆ ಗಮನ ಹರಿಸಿತ್ತಾ ನಮ್ಮ ದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳ ಬೇಕೆಂದು ನಮ್ಮೆಲ್ಲರಲ್ಲೂ ವಿನಮ್ರವಾಗಿ ವಿನಂತಿಸಿಕೊಂಡಿದ್ದಾರೆ. ಇದನ್ನು ಬಹುತೇಕ ಭಾರತೀಯರು ಅನುಸರಿಸಿತ್ತಾ ಎಲ್ಲೆಂದರಲ್ಲಿ ಕಸಗಳನ್ನು ಬಿಸಾಡದೆ, ಎಲ್ಲೆಂದರಲ್ಲಿ ಮೂತ್ರ ವಿಸರ್ಜಿಸದೆ ತಮ್ಮ ಕೈಲಾದ ಮಟ್ಟಿಗೆ ಸ್ವಚ್ಛ ಭಾರತಕ್ಕೆ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.
ವಾರಂತ್ಯದಲ್ಲಿ ನಮ್ಮ ಸ್ನೇಹಿತರೊಬ್ಬರ ಮದುವೆಗೆಂದು ಬಳ್ಳಾರಿ ಜಿಲ್ಲೆಯ, ಕೂಡ್ಲಿಗಿ ತಾಲ್ಲೂಕ್ಕಿನ, ಮಾಳೆಹಳ್ಳಿ ಎಂಬ ಗ್ರಾಮಕ್ಕೆ ವಧುವಿನ ಮನೆಗೆ ಸುಮಾರು ಐವತ್ತು ಮಂದಿಯಷ್ಟು ಜನ, ಸಂಸಾರ ಸಮೇತರಾಗಿ ಬಸ್ಸಿನಲ್ಲಿ ಹೋಗಿ ವಿಜೃಂಭಣೆಯಿಂದ ಹಳ್ಳಿಯ ಮದುವೆ ಸಂಭ್ರಮದಲ್ಲಿ ಪಾಲ್ಗೊಂಡೆವು. ಮದುವೆಯ ಸಂಭ್ರಮ ಕೇವಲ ಆ ವಧುವಿನ ಮನೆಯಲ್ಲಿ ಮಾತ್ರವೇ ಆಗಿರದೆ, ಆ ಪುಟ್ಟ ಹಳ್ಳಿಯ ಎಲ್ಲಾ ಮನೆಗಳಲ್ಲಿಯೂ ಸಂತೋಷ ಮನೆ ಮಾಡಿತ್ತು. ಊರಿನಲ್ಲಿ ಯಾರ ಮನೆಗೆ ಹೋದರೂ, ಬಂದವರು ತಮ್ಮ ಮನೆಯ ಅತಿಥಿಗಳೇನೋ ಎನ್ನುವಂತೆ ಯಾವುದೇ ಕೃತ್ರಿಮಗಳಿಲ್ಲದೇ ಶುದ್ಧ ಮನಸ್ಸಿನ ಆದಾರಾತಿಥ್ಯ ನಮ್ಮೆಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿಸಿತ್ತು. ಆ ಊರಿನ ಸಾಕ್ಷರತೆಯ ಪ್ರಮಾಣ ನಮ್ಮೆಲ್ಲರನ್ನೂ ಆಶ್ವರ್ಯಚಕಿತಗೊಳಿಸಿತ್ತು. ಊರಿನ ಬಹುತೇಕ ಮಂದಿ ಅಕ್ಷರಸ್ಥರಾಗಿದ್ದು ಸರ್ಕಾರದಿಂದ ಬರಬೇಕಾದ ಎಲ್ಲಾ ರೀತಿಯ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡಿರುವುದು ಅಲ್ಲಿದ್ದ ಕೊಳವೇ ಭಾವಿ, ಅದರ ಪಕ್ಕದಲ್ಲಿದ್ದ ನೀರಿನ ಟ್ಯಾಂಕ್ ಮತ್ತು ಸಾಕ್ಷರತೆಯ ಬಗ್ಗೆ ಸರ್ಕಾರದ ಗೋಡೇ ಬರಹಗಳ ಮೂಲಕ ಎದ್ದು ಕಾಣುತ್ತಿತ್ತು.
ಎಲ್ಲರ ಮನೆಗಳ ಮುಂದೆಯೂ ಅತ್ಯಂತ ಸ್ವಚ್ಚವಾಗಿತ್ತು ಮತ್ತು ಎಲ್ಲರ ಮನೆಗಳಲ್ಲಿಯೂ ಶೌಚಾಲಯದ ವ್ಯವಸ್ಥೆಯಿತ್ತು. ಅಲ್ಲಿಯ ಸ್ವಚ್ಚತೆ ಎಷ್ಟು ಚೆನ್ನಾಗಿತ್ತೆಂದರೆ, ವಧುವಿನ ಮನೆಯ ವಿಶಾಲವಾದ ಕೊಟ್ಟಿಗೆಯಲ್ಲಿಯೇ ಬಂದವರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿತ್ತಾದರೂ ಅಲ್ಲಿ ಕೊಟ್ಟಿಗೆಯ ಯಾವುದೇ ವಾಸನೆಯಾಗಲೀ, ಗಲೀಜಾಗಲೀ ಕಾಣದೆ ಅತ್ಯಂತ ಸ್ವಚ್ಚವಾಗಿದ್ದ ಕಾರಣ ನಾವೂ ಕೂಡಾ ಯಾವುದೇ ರೀತಿಯ ಬೇಸರ ಅಥವಾ ಮುಜುಗರವಿಲ್ಲದೆ, ಎಂದಿಗಿಂತಲೂ ಎರಡು ತುತ್ತು ಹೆಚ್ಚಿಗೆ ಊಟ ಮಾಡಿದವೆಂದರೆ ಉತ್ಪ್ರೇಕ್ಷೆಯೇನಲ್ಲ. ಊಟದ ಸಮದಲ್ಲೂ ಟೇಬಲ್ ಮೇಲೆ ಹಾಸಲು, ಊಟದ ತಟ್ಟೆ ಮತ್ತು ನೀರಿನ ಲೋಟದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಿದ್ದದ್ದು ಹೆಚ್ಚಿನ ಗಮನ ಸೆಳೆಯಿತು. ಊಟವಾದ ನಂತರ ಕೈತೊಳೆಯಲು ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿ, ಕೈ ತೊಳೆಯಲು ಬೇಕಾದಷ್ಟೇ ನೀರು ಬರುವಂತೆ ವ್ಯವಸ್ಥೆ ಮಾಡಲಾಗಿತ್ತು ಮತ್ತು ಕೈತೊಳೆದ ನೀರು ಹಾಗೆಯೇ ನೆಲದ ಮೇಲೆ ಸುರಿದು ಹೋಗದೆ ಒಂದು ದೊದ್ಡ ಪಾತ್ರೆಯಲ್ಲಿ ಶೇಖರಣೆಯಾಗಿ ಅದನ್ನೇ ತಮ್ಮ ಹಸುಗಳಿಗೆ ಕಲಗಚ್ಚಿನ ರೀತಿಯಲ್ಲಿ ಕುಡಿಸುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಊರ ಮುಂದೆಯೇ ಇದ್ದ ಕಪ್ಪು ಬಣ್ಣದ ಮಣ್ಣಿನ ಹೊಲ. ಹೊಲದ ಸುತ್ತಲೂ ಬೇಲಿಯ ರೂಪದಲ್ಲಿ ಹಚ್ಚ ಹಸಿರಿನ ಹುಣಸೇ ಮರ ನೋಡುಗರ ಕಣ್ಣು ಕುಕ್ಕುವಂತಿತ್ತು. ವೈಜ್ಞಾನಿಕವಾಗಿ ಹುಣಸೇ ಮರ ಮತ್ತು ಅರಳೀ ಮರಗಳು ಅಂತರ್ಜಲವನ್ನು ಹೆಚ್ಚಿಸುತ್ತವೆ ಎಂದು ಸಾಭೀತಾಗಿದೆ.
ಮದುವೆ, ಅದಾದ ನಂತರ ಭರ್ಜರಿ ಊಟ, ತದನಂತರ ಆರತಕ್ಷತೆ, ಜೊತೆ ಜೊತೆಯಲ್ಲೇ ಫೋಟೋ ಶೂಟ್ಗಳನ್ನು ಮುಗಿಸಿಕೊಂಡು ಊರಿಗೆ ಮರಳಲು ಹೊರಟಾಗ, ಅರೇ ಇದೇನು ಇಷ್ಟು ಬೇಗ ಹೊರಡುತ್ತಿದ್ದೀರಿ. ಸಂಜೆ ಊರ ತುಂಬಾ ವಧು-ವರರ ಮೆರವಣಿಗೆ ಮುಗಿಸಿಕೊಂಡೇ ಹೋಗಬೇಕೆಂದು ಹೇಳಿದಾಗ, ನಾನಾ ರೀತಿಯ ಕಾರಣಗಳನ್ನು ಹೇಳಿ ಅವರಿಂದ ತಪ್ಪಿಸಿಕೊಂಡು ಬರುವುದೇ ಕಷ್ಟಕರವಾಗಿತ್ತು. ಆ ಸಣ್ಣ ಹಳ್ಳಿಯ ಈ ರೀತಿಯಾದ ಅಥಿತಿ ಸತ್ಕಾರ, ಪರಿಸರದ ಬಗ್ಗೆಗಿನ ಕಾಳಜಿ, ಇಡೀ ಊರಿನ ಸ್ವಚ್ಚತೆಯ ಅರಿವು, ನೀರಿನ ಸದ್ಬಳಕೆ ಅಭಿನಂದನೀಯ, ಅನುಕರಣೀಯ ಮತ್ತು ಶ್ಲಾಘನೀಯ.
ಅಂತಹ ಅಚ್ಚ ಮನಸ್ಸಿನ ಸ್ವಚ್ಛ ಜನರ ಆದಾರಾಥಿತ್ಯಗಳಿಗೆ ಮನಸೋತು ಒಲ್ಲದ ಮನಸ್ಸಿನಿಂದಲೇ ಬೆಂಗಳೂರಿಗೆ ಹಿಂದಿರುಗುತ್ತಿದ್ದೆವು. ಬಸ್ ಹತ್ತಿ ಕುಳಿತು ಸ್ವಲ ದೂರ ಹುಮಸ್ಸಿನಲ್ಲಿ ಎಲ್ಲರೂ ಅಂತ್ಯಾಕ್ಷರಿ ಆಟ ಆಡಿದರೆ, ನಂತರ ಹೊಟ್ಟೆ ತುಂಬಾ ತಿಂದ ಭುಕ್ತಾಯಾಸದ ಪ್ರಯುಕ್ತ ಒಬ್ಬೊಬ್ಬರೇ ನಿದ್ದೆಗೆ ಜಾರಿದರು. ದೂರದ ಪ್ರಯಾಣ ಮತ್ತು ಬಸ್ಸಿನ ಕುಲುಕಾಟದದಿಂದ ಬಹುತೇಕರು ಮೂತ್ರ ವಿಸರ್ಜನೆಗಾಗಿ ಮಾರ್ಗದ ಬದಿಯಲ್ಲಿ ನಿಲ್ಲಿಸಲು ಕೋರಿಕೊಂಡಾಗ, ಆ ಸಣ್ಣ ಹಳ್ಳಿಯಲ್ಲಿ ಅಷ್ಟೆಲ್ಲಾ ಪ್ರಾತ್ಯಕ್ಶಿಕವಾಗಿ ಸ್ವಚ್ಚಭಾರತದ ಅನುಷ್ಟಾನವನ್ನು ನೋಡಿದ್ದ ನಮಗೆ ದಾರಿಯ ಬದಿಯಲ್ಲಿ ಮೂತ್ರ ವಿಸರ್ಜನೆ ಮಾಡಲು ಬಸ್ ನಿಲ್ಲಿಸಲು ಮನಸ್ಸಾಗದೇ, ಹಾಗೂ ಹೀಗೂ ತುಮಕೂರಿನ ಕ್ಯಾತ್ಸಂದ್ರದ ಬಳಿಯ ಸುಂಕದ ಬಳಿ ಸಾರ್ವಜನಿಕ ಶೌಚಾಲಯ ನೋಡಿದ ಕೂಡಲೇ ಚಾಲಕರಿಗೆ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಲು ಹೇಳಿ, ಅಗತ್ಯವಿದ್ದವರು ಕಾಫೀ, ಟೀ ಮತ್ತು ತಮ್ಮ ಇತರೇ ಕೆಲಸಗಳು ಕೂಡಲೇ ಮುಗಿಸಿಕೊಂಡು ಬರಬೇಕೆಂದು ಸೂಚಿಸಿ, ಶೌಚಾಲಯದತ್ತ ಧಾಪುಗಾಲು ಹಾಕಿದೆವು. ಶೌಚಾಲಯದಿಂದ ಸುಮಾರು ಹತ್ತು ಹದಿನೈದು ಅಡಿಗಳಷ್ಟು ದೂರವಿರುವಾಗಲೇ ಶೌಚಾಲಯದ ದುರ್ನಾತ ಗಭ್ ಎಂದು ನಮ್ಮ ಮೂಗಿಗೆ ಬಡಿಯುತ್ತಾ ನಮ್ಮನ್ನು ಸ್ವಾಗತಿಸಿತು. ಹಾಗೂ ಹೀಗೂ ಅಲ್ಲಿ ಒಳಗೆ ಹೋಗಿ ನೋಡಿದರೆ ಎಲ್ಲಾ ಶೌಚಾಲಯಗಳೂ ಮುರಿದು ಬಿದ್ದಿವೆ. ಆದರೂ ಬಯಲಿನಲ್ಲಿ ಮೂತ್ರ ವಿಸರ್ಜನೆ ಮಾಡಲು ಮನಸ್ಸಾಗದೇ ಕಣ್ಣು ಮೂಗು ಮುಚ್ಚಿಕೊಂಡು ಮೂತ್ರ ವಿಸರ್ಜನೆ ಮಾಡಿ, ಕೈ ತೊಳೆಯಲು ನಲ್ಲಿಯನ್ನು ತಿರುಗಿಸಿದರೇ ನೀರೇ ಬರುತ್ತಿಲ್ಲ.
ಪ್ರತಿದಿನ ಲಕ್ಷಾಂತರ ವಾಹನಗಳಿಂದ ಕೊಟ್ಯಾಂತರ ಹಣವನ್ನು ಪೀಕುವ ಆ ಟೋಲ್ ಸಂಗ್ರಹ ಕಂಪನಿಗಳಿಗೆ ಕನಿಷ್ಟ ಪಕ್ಷ ತಮ್ಮ ಸರಹದ್ದಿನಲ್ಲಿರುವ ಶೌಚಾಲಯಗಳನ್ನು ಸ್ವಚ್ಚವಾಗಿ ಇಟ್ಟು ಕೊಳ್ಳದಿರುವುದು ನಿಜಕ್ಕೂ ಅಕ್ಷಮ್ಯ, ಅಕ್ರಮ ಮತ್ತು ಹಗಲು ದರೋಡೆ ಎಂದರೂ ತಪ್ಪಾಗಲಾರದು. ಸರ್ಕಾರದ ಆದೇಶದಂತೆ ಹೆದ್ದಾರಿಯ ಅಕ್ಕ ಪಕ್ಕದಲ್ಲಿರುವ ಪ್ರತಿಯೊಂದು ಉಪಹಾರ ಗೃಹಗಳೂ, ಪೆಟ್ರೋಲ್ ಪಂಪುಗಳು ಮತ್ತು ಟೋಲ್ ಪ್ರದೇಶಗಳಲ್ಲಿ ಕಡ್ಡಾಯವಾಗಿ ಸಾರ್ವಜನಿಕ ಶೌಚಾಲಯಗಳಿರಬೇಕು ಮತ್ತು ಅದು ಎಲ್ಲರೂ ಉಪಯೋಗಿಸುವ ಹಾಗೆ ಸುಸ್ಥಿತಿಯಲ್ಲಿರಬೇಕು ಎಂಬ ನಿಯಮವಿದೆ. ಆದರೇ ಸಾರ್ವಜನಿಕರಿಂದ ಕೇವಲ ದುಡ್ಡು ಮಾಡುವ ಭರದಲ್ಲಿರುವ ಟೋಲ್ ಕಂಪನಿಗಳು ಮತ್ತು ಅವರಿಂದ ಉಪಕೃತರಾದ ಕೆಲವು ಸರ್ಕಾರಿ ಅಧಿಕಾರಿಗಳ ನಿರ್ಲಕ್ಷದಿಂದಾಗಿ ನಾಮಕಾವಸ್ಥೆಗೆ, ಕಾಟಾಚಾರಕ್ಕೆ ಶೌಚಾಲಯವೆಂಬ ಪಾಳು ಮಂಟಪಗಳನ್ನು ಕಟ್ಟಿಸಿರುವುದು ನಿಜಕ್ಕೂ ಶಿಕ್ಷಾರ್ಹವೇ ಸರಿ.
ನಮ್ಮನ್ನಾಳುವ ನಾಯಕರುಗಳು ನಮ್ಮ ದೇಶವನ್ನು ಸಿಂಗಾಪುರ ಮಾಡುತ್ತೇವೆಂದು ಪ್ರತೀ ಬಾರಿ ಬೊಬ್ಬೆ ಹೊಡೆದಾಗಲೂ ಜೋರಾಗಿ ಚಪ್ಪಾಳೆ ಹೊಡೆದು ಅವರನ್ನು ಅಟ್ಟಕ್ಕೇರಿಸುವ ಸಾರ್ವಜನಿಕರಲ್ಲಿ ಒಂದು ಮನವಿ. ಮೊದಲಿನ ಪ್ಯಾರದಲ್ಲಿ ತಿಳಿಸಿದಂತೆ ಎಲ್ಲಿಯವರೆಗೂ ಸ್ವಚ್ಚತೆಯ ಬಗ್ಗೆ ನಮ್ಮ ಮನಸ್ಥಿತಿ ಮತ್ತು ಆಲೋಚನೆಗಳು ಬದಲಾಗುವುದಿಲ್ಲವೋ ಅಲ್ಲಿಯವರೆಗೂ ನಮ್ಮ ನಾಯಕರುಗಳಿರಲೀ ಆ ಬ್ರಹ್ಮನೇ ಬಂದರೂ, ನಮ್ಮ ದೇಶವನ್ನು ಸ್ವಚ್ಚಗೊಳಿಸಲಾರ. ಈ ವಿಷಯವನ್ನು ಬಿಸಿಲಿನ ನಾಡು ಮಾಳೆಹಳ್ಳಿಯ ಜನರು ಅರ್ಥ ಮಾಡಿಕೊಂಡು ಗಾಂಧೀಜಿ ಮತ್ತು ನಮ್ಮ ಪ್ರಧಾನಿಗಳ ಸ್ವಚ್ಚ ಗ್ರಾಮದ ಕನಸನ್ನು ನನಸು ಮಾಡಲು ಸಾಧ್ಯವಾದರೇ, ಇನ್ನು ಪಟ್ಟಣವಾಸಿಗಳು ಮತ್ತು ಅತೀ ವಿದ್ಯಾವಂತರೂ ಮತ್ತು ಬುದ್ಧಿವಂತರೆಂದು ನಮ್ಮನ್ನೇ ನಾವು ಹೊಗಳಿಕೊಳ್ಳುವ ನಮಗೇಕೆ ಸಾಧ್ಯವಾಗದು? ಇಂದಿಗೂ ಕಸವಿಲೇವಾರಿಯೇ ಬೆಂಗಳೂರು ನಗರದ ಅತಿ ದೊಡ್ಡ ಸಮಸ್ಯೆಯಾಗಿದೆ. ಪ್ರತೀ ವರ್ಷವೂ ಜನರ ಕೋಟ್ಯಾಂತರ ತೆರಿಗೆ ಹಣವನ್ನು ಖರ್ಚು ಮಾಡಿಕೊಂಡು ಕಸವಿಲೇವಾರಿ, ನೀರಿನ ಸದ್ಬಳಕೆ, ಲೊಟ್ಟೆ, ಲೊಸುಕುಗಳ ಅಧ್ಯಯನದ ನೆಪದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ತಮ್ಮ ಕುಟುಂಬದ ಸಮೇತ ಮೋಜುಮಾಡಲು ಹೋಗುವ ನಗರಪಾಲಿಕೆ ಸದಸ್ಯರ ಕೊರಳು ಪಟ್ಟಿಯನ್ನು ಹಿಡಿದು (ಕಾನೂನನ್ನು ಕೈಗೆ ತೆಗೆದುಕೊಳ್ಳುವುದು ಅಪರಾಧ) ಎಲ್ಲಿಯವವರೆಗೂ ಕೇಳುವುದಿಲ್ಲವೋ ಅಲ್ಲಿಯವರೆಗೂ ಇಂತಹ ಸಮಸ್ಯೆಗಳು ಇದ್ದೇ ಇರುತ್ತವೆ.
(ಸಾಂಧರ್ಭಿಕ ಚಿತ್ರಗಳು)
ಕಡೆಯ ಮಾತು. ಎಲ್ಲವನ್ನೂ ಸರ್ಕಾರವೇ ಮಾಡಬೇಕು, ಎಲ್ಲವನ್ನೂ ಮೋದಿಯವರೇ ಮಾಡಬೇಕು ಎಂದು ಈಗಿನ ಕಾಲದಲ್ಲಿಯೂ ನಿರೀಕ್ಷಿಸುವುದು ನಮ್ಮ ದಡ್ಡತನ. ಅದಕ್ಕೆಂದೇ ನಮ್ಮ ಹಿರಿಯರು ಮನೆಯ ಹಿಂದೆ ಹಿತ್ತಲು ಮತ್ತು ಮನೆಯ ತುಸು ದೂರದಲ್ಲಿ ಕೊಪ್ಪಲು ಇರುವಂತೆ ನೋಡಿಕೊಳ್ಳುತ್ತಿದ್ದರು. ಬಳೆಕೆಯಾದ ನೀರೆಲ್ಲಾ ಹಿತ್ತಲಿನ ಕೈತೋಟದ ಸಸ್ಯಗಳಿಗೆ ನೀರಾಗಿ ಮನೆಗೆ ಅಗತ್ಯವಿದ್ದಷ್ಟು ಸೊಪ್ಪು ತರಕಾರಿ ಮತ್ತು ಹೂವು ಹಣ್ಣುಗಳು ದೊರೆಯುತ್ತಿದ್ದವು ಮತ್ತು ನೀರು ಪುನಃ ಭೂಮಿಯೊಳಗೇ ಇಂಗಿ ಹೋಗಿ ಅಂತರ್ಜಲವನ್ನು ಹೆಚ್ಚಿಸುತ್ತಿತ್ತು. , ಮನೆಯ ಕಸ, ದನಕರುಗಳ ಸಗಣಿಗಳೊಂದಿಗೆ ಕೊಪ್ಪಲಿನಲ್ಲಿ ಕೊಳೆತು ಒಳ್ಳೆಯ ಸಾವಯವ ಗೊಬ್ಬರವಾಗಿ ಭೂಮಿಯ ಫಲವತ್ತತೆಯನ್ನೂ ಹೆಚ್ಚಿಸುತ್ತಿತ್ತು. ಈಗಲೂ ಕಾಲ ಮಿಂಚಿಲ್ಲ. ಕಸದಿಂದ ರಸ ತೆಗೆಯುವುದು ನಮ್ಮ ಭಾರತೀಯರಿಗೆ ಹೊಸದೇನಲ್ಲ. ಕೇವಲ ಸ್ವಚ್ಚತೆಯ ಬಗ್ಗೆ, ಪರಿಸರದ ಮಾಲಿನ್ಯದ ಬಗ್ಗೆ, ನೀರಿನ ಸದ್ಬಳೆಯ ಬಗ್ಗೆ ಮನಸ್ಸು ಮಾಡಬೇಕಷ್ಟೇ. ಎಲ್ಲರೂ ಒಮ್ಮತದಿಂದ ಮನಸ್ಸು ಮಾಡಿದಲ್ಲಿ ಖಂಡಿತವಾಗಿಯೂ ನಮ್ಮ ದೇಶವನ್ನು ಸಿಂಗಾಪೂರಕ್ಕಿಂತಲೂ ಹೆಚ್ಚಾಗಿ ಸಿಂಗಾರವನ್ನಾಗಿ ಮಾಡಬಹುದಾಗಿದೆ.
ಏನಂತೀರೀ?
ತುಂಬಾ ಸೊಗಸಾಗಿ, ಮನಮುಟ್ಟುವಂತೆ ಬರೆದಿದ್ದೀರಿ, ಕೆಲ ದಿನಪತ್ರಿಕೆ/ವಾರಪತ್ರಿಕೆಗಳಿಗೆ ಲೇಖನ ಕಳಿಸಿಕೊಡಿ, ಆಡಳಿತ ಯಂತ್ರ ಚಾಲು ಆಗುವಹಾಗೆ ಅಭಿಯಾನ ಆರಂಭಿಸೋಣ, ಎಲ್ಲೇ ಹಾಳಾದ ವ್ಯವಸ್ಥೆಕಂಡಾಗ ಅದರ ಚಿತ್ರೀಕರಣ ಮಾಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮುಟ್ಟುವಂತೆ ಮಾಡಬೇಕಾಗಿದೆ. ಇದು ಮೊದಲಹೆಜ್ಜೆಯಾಗಿದೆ. ಶುಭವಾಗಲಿ
LikeLike
ಈ ಲೇಖನದ ಕಾರಾಣೀಭೂತರೇ ನೀವು. ಹಾಗಾಗಿ ಇದರ ಸಂಪೂರ್ಣ ಲಾಭ ನಿಮಗೇ ಸಲ್ಲುತ್ತದೆ
LikeLike