ಮೊನ್ನೆ ಯೋಗ ದಿನಾಚರಣೆಯ ಹಿಂದಿನ ದಿನ ಬೆಳಿಗ್ಗೆ ಸಂಪರ್ಕಕ್ಕೆಂದು ಹಲವಾರು ಜನರನ್ನು ಭೇಟಿ ಮಾಡಲು ಹೋಗುವ ಸಂಧರ್ಭದಲ್ಲಿ ನಮ್ಮ ಕಾರ್ಯಕರ್ತ ಗುರು ಆವರ ಮನೆಗೂ ಹೋಗಿದ್ದೆವು. ಅವರ ಮನೆಯ ಮುಂದೆ ನಮ್ಮ ಗಾಡಿಗಳನ್ನು ನಿಲ್ಲಿಸುವಾಗಲೇ ಗುರು ಎಲ್ಲಿಗೋ ಹೊರಡಲು ಅನುವಾಗಿದ್ದನ್ನು ನೋಡಿ, ಕ್ಷಿಪ್ರವಾಗಿ ನಾಳಿನ ಕಾರ್ಯಕ್ರಮದ ಸ್ವರೂಪ ತಿಳಿಸಿ, ನೀವೇಲ್ಲೋ ಹೊರಟಿದ್ದೀರಿ. ಹೋಗಿ ಬನ್ನಿ ನಿಮ್ಮ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದಾಗ. ಎಲ್ಲಿ ಜೀ ಶುಭ. ನಾನು ಹೋಗುತ್ತಿರುವುದೇ ಆಶುಭ ಕಾರ್ಯಕ್ರಮಕ್ಕೆ ಎಂದಾಗ ಒಮ್ಮೆಲೆ ಮನಸ್ಸು ಪಿಚ್ಚೆನಿಸಿತು. ಏಕೆ ಏನಾಯ್ತು ಎಂದರೆ. ಜೀ ನೆನ್ನೆ ರಾತ್ರಿ 9 ಗಂಟೆವರೆಗೂ ನಾನೂ ನನ್ನ ಸಹೋದ್ಯೋಗಿ ಒಟ್ಟಿಗೆ ಕೆಲಸ ಮಾಡಿ ಅವರನ್ನು ಮೆಟ್ರೋಗೆ ಹತ್ತಿಸಿ ಮನೆಗೆ ಬಂದಿದ್ದೆ. ಈಗ ಬೆಳಿಗ್ಗೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಟಿದ್ದಾರೆ. ಒಂದು ವಾರದ ಕೆಳಗೆ ಅವರ ಮಾವನವರು ದೂರದ ಊರಿನಲ್ಲಿ ತೀರಿ ಹೋಗಿದ್ದಾರೆ ಎಂದು ಸಂಸಾರ ಎಲ್ಲಾ ಊರಿಗೆ ಹೋಗಿದ್ದರು. ಇವರೂ ಕೂಡಾ, ತಮ್ಮ ಮಾವನವರ ಅಂತ್ಯ ಸಂಸ್ಕಾರ ಮುಗಿಸಿ ಮಾವನವರ ಕಾರ್ಯಗಳಿಗೆ ಎರಡು ವಾರ ರಜಾ ಅಥವಾ work from home option ಕೇಳಿದ್ದರು. ಆದರೆ ಅವರ ಬಾಸ್, ಪ್ರಾಜೆಕ್ಟ್ ವರ್ಕ್ ತುಂಬಾನೇ ಇದೆ. ಪ್ರತೀದಿನ ಕಾಲ್ ಅಟೆಂಡ್ ಮಾಡ್ಲೇ ಬೇಕು. ನೀವಿಲ್ಲದಿದ್ದರೆ ಅದು ಆಗೋದಿಲ್ಲ ಅಂತ ಹೇಳಿದ್ದಕ್ಕೆ ಊರಿಂದ ವಾಪಸ್ ಕೆಲಸಕ್ಕೆ ಬಂದು ಕಡೆಯ ಮೂರು ದಿನಗಳ ಕಾರ್ಯಕ್ಕೆ ಮಾತ್ರಾ ಹೋಗುವುದಾಗಿ ತಿಳಿಸಿದ್ದರು. ಅವರು ರಜಾ ಹಾಕಿದ್ದರೆ ಪ್ರಾಜೆಕ್ಟ್ ಆಗೋದಿಲ್ಲ ಅಂತಾ ಹೇಳ್ತಾ ಇದ್ರೂ. ಈಗ ಆ ಮನುಷ್ಯನೇ ಇಲ್ಲಾ. ಇನ್ನು ಪ್ರಾಜೆಕ್ಟ್ ಕಥೆ ಅಷ್ಟೇ. ಅಂತಾ ಹೇಳಿದಾಗ ಮನಸ್ಸಿಗೆ ದುಃಖವಾಗಿ. ಭಗವಂತ ಮೃತರ ಆತ್ಮಕ್ಕೆ ಶಾಂತಿ ಕೊಡು ಮತ್ತು ಅವರ ಕುಟುಂಬಕ್ಕೆ ಎರಡೆರಡು ಆಧಾರ ಸ್ಥಂಭಗಳನ್ನು ಕಳೆದುಕೊಂಡ ಶಕ್ತಿಯನ್ನು ಭರಿಸುವ ಕೊಡು ಎಂದು ಮನಸ್ಸಿನಲ್ಲಿಯೇ ಬೇಡಿಕೊಂಡೆ.
ಅದೇ ರೀತಿ ಎರಡ್ಮೂರು ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬನ, ಸ್ನೇಹಿತ ಬೆಂಗಳೂರಿನ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ, ಹೈದಿರಾಬಾದಿಗೆ ಹೊರಟಿದ್ದ. ಬುಧವಾರ ಅವನ ಕಡೆಯ ದಿನವಾಗಿದ್ದರೂ,ಅವನ ಬಾಸ್ ಶುಕ್ರವಾರದವರೆಗೂ ಕೆಲಸ ಮಾಡದಿದ್ದರೆ, ರಿಲೀವಿಂಗ್ ಲೆಟರ್ ಕೊಡುವುದಿಲ್ಲಾ ಎಂದು ಬೆದರಿಸಿ ಶುಕ್ರವಾರ ಸಂಜೆ ಕಳುಹಿಸಿ ಕೊಟಿದ್ದರು. ನನ್ನ ಸ್ನೇಹಿತನೇ ಅವನನ್ನು ಬಸ್ ಸ್ಟಾಂಡ್ ವರೆಗೂ ಕರೆದು ಕೊಂಡು ಹೋಗಿ ಒಟ್ಟಿಗೇ ಊಟ ಮುಗಿಸಿ ಬಸ್ ಹತ್ತಿಸಿ, ನಾಳೆ ಬೆಳಿಗ್ಗೆ ಹೈದರಾಬಾದ್ ತಲುಪಿದ ನಂತರ ಕರೆ ಮಾಡು ಎಂದು ತಿಳಿಸಿ ಮನೆಗೆ ಬಂದು ಬೆಚ್ಚಗೆ ಮಲಗಿದ್ದ. ಮಾರನೇ ದಿನ ಹೇಗೂ ಕಛೇರಿಗೆ ರಜಾ ಎಂದು ತಡವಾಗಿ ಎದ್ದು ಟಿವಿ ಹಾಕಿದರೆ, ಹಿಂದಿನ ರಾತ್ರಿ, ಆತನ ಗೆಳೆಯ ಪ್ರಯಾಣಿಸುತ್ತಿದ್ದ ಬಸ್ ಅಪಘಾತಕ್ಕೆ ಒಳಗಾಗಿ ಬಸ್ಸಿನ ಡೀಸಲ್ ಟ್ಯಂಕಿಗೆ ಬೆಂಕಿ ಹತ್ತಿಕೊಂಡು ಇಡೀ ಬಸ್ಸಿನಲ್ಲಿದ್ದ ಎಲ್ಲರೂ ಬೆಂದು ಕರಕಲಾಗಿ ಹೋಗಿದ್ದ ಹೃದಯ ವಿದ್ರಾವಕ ಸಂಗತಿ ತಿಳಿದು, ಒಂದು ವಾರಗಳ ಕಾಲ ನನ್ನ ಸ್ನೇಹಿತನೂ ಖಾಯಿಲೆಗೆ ಬಿದ್ದು ಸುಮಾರು ದಿನಗಳ ವರೆಗೆ ಖಿನ್ನತೆಗೆ ಒಳಗಾಗಿದ್ದ. ಅಂದು ಬಾಸ್ ಅವನನ್ನು ಬುಧವಾರವೇ ಕಳುಹಿಸಿಕೊಟ್ಟಿದ್ದರೆ ಒಂದು ಜೀವ ಉಳಿಯಬಹುದಿತ್ತೇನೋ?
ಇನ್ನು ನನ್ನ ವಯಕ್ತಿಕ ಅನುಭವ ಇನ್ನೂ ರೋಚಕ. ಶನಿವಾರ, ಭಾನುವಾರ ಮತ್ತು ಸೋಮವಾರ ನನ್ನ ತಮ್ಮನ (ಚಿಕ್ಕಮ್ಮನ ಮಗ) ಮದುವೆ ದೂರದ ಮೈಸೂರಿನಲ್ಲಿತ್ತು. ಶನಿವಾರ, ಭಾನುವಾರ ಹೇಗೂ ರಜಾ, ಸೋಮವಾರ ಒಂದು ದಿನ ಮಾತ್ರ ರಜೆ ಕೇಳಿದ್ದಕ್ಕೆ ನಮ್ಮ ಬಾಸ್ ಇಲ್ಲಾ ರಜೆ ಕೊಡಲು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರ ಪರಿಣಾಮ. ಶನಿವಾರ ಮದುವೆಗೆ ಹೋಗಿ, ಭಾನುವಾರ ರಾತ್ರಿ ಆರತಕ್ಷತೆ ಮುಸಿಸಿಕೊಂಡು ಅಲ್ಲಿಯೇ ಮಲಗಿದ್ದು ಬೆಳಿಗ್ಗೆ ಸುಮಾರು 4-4:30ಕ್ಕೆ ಪ್ರಾತ್ರರ್ವಿಧಿಗಳನ್ನು ಮುಗಿಸಿ ಕುಟಂಬ ಸಮೇತರಾಗಿ ಮೈಸೂರಿನಿಂದ ಬೆಂಗಳೂರಿಗೆ ಹೊರಟೆವು. ನಮ್ಮ ತಂದೆ, ತಾಯಿ ಮತ್ತು ಮಕ್ಕಳೆಲ್ಲರೂ ಕಾರಿನಲ್ಲಿಯೇ ಗಾಢನಿದ್ರೆಯಲ್ಲಿದ್ದಾರೆ. ನಾನೂ ಮತ್ತು ನನ್ನ ಮಡದಿ ಮುಂದೆ ಕಾರಿನ ಮುಂಭಾಗದಲ್ಲಿ ಕುಳಿತು ಆರಾಮವಾಗಿ ಮಾತನಾಡುತ್ತಾ ಕಾರ್ ಚಲಾಯಿಸುತ್ತಾ ಬಿಡದಿ ದಾಟಿ ಬಂದಿದ್ದೆವು. ಅದೇನಾಯಿತೋ ಏನೋ ಕಾಣೆ. ಇದ್ದಕ್ಕಿದ್ದಂತೆಯೇ ದಡ್ ದಡ್ ದಡ್ ದಡ್ಎಂಬ ಶಬ್ಧವಾದಾಗಲೇ ನನಗೆ ಗೊತ್ತಾಗಿದ್ದು, ನನ್ನ ಕಾರ್ ರಸ್ತೆಯ ವಿಭಜಕದ ಮೇಲೆ ಅರ್ಧದಷ್ಟು ಹತ್ತಿ ಅಲ್ಲಿದ್ದ ಗಿಡಗಳ ಮಧ್ಯೆ ಸಿಕ್ಕಿಹಾಕಿಕೊಂಡಿದೆ. ಒಂದು ಕ್ಷಣದ ನಿದ್ದೆಯ ಮಂಪರು ಈ ರೀತಿಯ ಕೆಲಸ ಮಾಡಿಸಿತ್ತು. ದೇವರ ದಯೆ ಪ್ರಾಣಾಪಾಯವಿಲ್ಲದೆ ಎಲ್ಲರೂ ಪಾರಾಗಿ, ಕೆಂಗೇರಿಯ ಬಳಿಯಿದ್ದ ನನ್ನ ಸ್ನೇಹಿತನ ಸಮಯೋಜಿತ ಸಹಾಯದಿಂದ ಕುಟುಂಬದವರನ್ನೆಲ್ಲಾ ನಮ್ಮ ಮನೆಗೆ ಕಳುಹಿಸಿ, ನಮ್ಮ ಕಾರನ್ನು ಹತ್ತಿರದಲ್ಲೇ ಅವನ ಪರಿಚಯವಿದ್ದ ಗ್ಯಾರೇಜಿನಲ್ಲಿ ರಿಪೇರಿಗೆ ಬಿಟ್ಟು ಕಛೇರಿಗೆ ತಲುಪಿದಾಗ ಮಧ್ಯಾಹ್ನವೇ ಆಗಿತ್ತು. ಸರಿ ತಡವಾಗಿ ಬಂದಿದ್ದಕ್ಕೆ ಬಾಸ್ ಬಳಿ ನಡೆದ ವಿಷಯವನ್ನು ತಿಳಿಸಿದಾಗ, ಅವರು ಯಾವುದೇ ರೀತಿಯ ಭಾವನೆಯನ್ನೇ ವ್ಯಕ್ತಪಡಿಸದೇ ಒಂದು ಸಾಂತ್ವನವನ್ನೂ ಹೇಳದೆ ಸರಿ, ಇನ್ನು ನಿಮ್ಮ ಕೆಲಸ ನೋಡಿಕೊಳ್ಳಿ ಎಂದಾಗ, ಛೇ!! ಇಂತಹವರಿಗಾಗಿಯೇ ನಾವೇಕೆ ಅಂತಹ ಅಪಾಯ ತೆಗೆದುಕೊಳ್ಳಬೇಕಿತ್ತು ಎಂದೆನಿಸಿ, ಇಂತಹ ಹೃದಯವೇ ಇಲ್ಲದ ಮೇಲಾಧಿಕಾರಿ ಯಾರಿಗೂ ಸಿಗದಿರಲಿ ಎಂದು ಮನಸ್ಸಿನಲ್ಲಿ ಯೋಚಿಸಿ ಕೆಲಸದಲ್ಲಿ ಮಗ್ನನಾದೆ.
ಹೀಗೆ ಹೇಳುತ್ತಾ ಹೋದರೆ ಇನ್ನೂ ನೂರಾರೇನು, ಸಾವಿರಾರು ಇಂತಹ ಪ್ರಸಂಗಗಳನ್ನು ನಾನು ಹೇಳಬಲ್ಲೆ. ಈ ಮೇಲೆ ಹೇಳಿದ ಮೂರು ಪ್ರಸಂಗಳಲ್ಲಿ ಒಬ್ಬರೇ ಖಳನಾಯಕ. ಅವರೇ ಮೇಲಧಿಕಾರಿ ಅಂದರೆ ಬಾಸ್. ಹಾಗೆಂದು ಎಲ್ಲಾ ಮೇಲಧಿಕಾರಿಗಳು ಕೆಟ್ಟವರಲ್ಲ. ಆದರೆ ಅವರಿಗೆ ಸಮಸ್ಯೆಗಳನ್ನು ಪರಿಹರಿಸುವ ಸರಿಯಾದ ಮಾರ್ಗವೇ ತಿಳಿಯದಿರುವುದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. ಈ ಎಲ್ಲಾ ಸಮಸ್ಯೆಗಳಲ್ಲೂ ಒಬ್ಬನೇ ವ್ಯಕ್ತಿಯ ಮೇಲೆ ಅತಿಯಾಗಿ ಅವಲಂಭಿತವಾಗಿರುವುದರಿಂದ ಸಮಸ್ಯೆಗಳು ಶುರುವಾಗುತ್ತದೆ. ಒಬ್ಬ ಮೇಲಧಿಕಾರಿ ತನ್ನ ಕೆಲಸದಲ್ಲಿ ಸಫಲತೆಯನ್ನು ಪಡೆಯಬೇಕೆಂದರೆ ತನ್ನ ಸಹೋದ್ಯೋಗಿಗಳ ಬಗ್ಗೆ ಕಾಳಜಿ ಹೊಂದಿರಬೇಕು ಅವರ ಬೇಕು ಬೇಡಗಳನ್ನು ನೋಡಿಕೊಳ್ಳುವುದು ಅತ್ಯಾವಶ್ಯಕ. ತನ್ನ ಸಹೋದ್ಯೋಗಿಗಳನ್ನು ಬೆಳಸಿದಲ್ಲಿ ಮಾತ್ರವೇ, ಆತ ತಾನು ಉನ್ನತ ಸ್ಥಾನಕ್ಕೆ ಏರಲು ಸಾಧ್ಯ. ಪ್ರತಿಯೊಂದು ಕೆಲಸಕ್ಕೂ ಒಂದಿಬ್ಬರು ಸಹಾಯಕರು ನೇಮಿಸಿದಲ್ಲಿ ಆ ಕೆಲಸಗಳೂ ಸುಗಮವಾಗಿ ಮತ್ತು ಶೀಘ್ರದಲ್ಲಿ ಮುಗಿಯುತ್ತದೆ ಮತ್ತು ಒಬ್ಬರಿಲ್ಲದಿದ್ದಲ್ಲಿ ಮತ್ತಿಬ್ಬರು ಅದನ್ನು ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಇರುತ್ತದೆ. ಇಲ್ಲದಿದ್ದಲ್ಲಿ ಅನಾವಶ್ಯಕ ಒತ್ತಡಗಳಿಂದ ಈ ರೀತಿಯ ಅವಘಡಗಳು ಸಂಭವಿಸುತ್ತವೆ. ತನ್ನ ಉಳಿವಿಗಾಗಿ ಇತರರನ್ನು ಅಳಿವಿಗೆ ತಂದೊಡ್ಡುವ ವಿಷಮ ಪರಿಸ್ಥಿತಿಯನ್ನು ತಡೆಗಟ್ಟಬಹುದಾಗಿದೆ.
ಹುಟ್ಟಿಸಿದ ಬ್ರಹ್ಮ ಹಣೆಯ ಮೇಲೆ ನಮ್ಮ ವಿಧಿಯನ್ನು ಬರೆದು ಕಳುಹಿಸಿರುತ್ತಾನೆ. ನಡೆಯುವುದೆಲ್ಲವೂ ಆ ವಿಧಿ ಬರಹದಂತೆಯೇ ಎನ್ನುವುದು ಆಡು ಮಾತು. ಆದರೆ ಆ ಆಡು ಮಾತುಗಳೆಲ್ಲವೂ ಹಳೆಯದಾಗಿ, ಈಗ ಯಾರೋ ತಮ್ಮ ಮೇಲಾಧಿಕಾರಿಗಳು ಹೇರಿದ ಒತ್ತಡವನ್ನು ತಮ್ಮ ಕೆಳಗೆ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳ ಮೇಲೇ ಹೇರಿ, ಅನಾವಶ್ಯಕ ಒತ್ತಡ ಪರಿಸ್ಥಿತಿ ನಿರ್ಮಾಣ ಮಾಡಿ, ಮುಗ್ಧ ಜೀವಿಗಳನ್ನು ಬಲಿ ತೆಗೆದುಕೊಳ್ಳುತ್ತಿರುವುದು ಎಷ್ಟು ಸರಿ? ಮೇಲಾಧಿಕಾರಿಗಳಿಗೂ ಒಬ್ಬ ಸಹೋದ್ಯೋಗಿ ಹೋದರೆ ಮತ್ತೊಬ್ಬ ಸಿಗಬಹುದು. ಆದರೆ ತಮ್ಮ ಮನೆಯ ಆಧಾರವನ್ನೇ ಕಳೆದು ಕೊಂಡ ಕುಟುಂಬದ ಹೊಣೆಯನ್ನು ಹೊರುವವರು ಯಾರು? ಇದನ್ನೇ ಮಾರ್ಮಿಕವಾಗಿ ಹೇಳಿರುವ ಯಾರೋ ಯಾರೋ ಗೀಚಿ ಹೋದಾ, ಹಾಳು ಹಣೆಯ ಬರಹ ಹಾಡು ಈಗ ಸದ್ಯದ ಸ್ಥಿತಿಯಲ್ಲಿ ನಿಜವಾಗಿಯೇ ಹೋಗುತ್ತಿರುವುದು ಬಹಳ ಆಘಾತಕಾರಿಯೇ ಸರಿ
ಏನಂತೀರೀ?