ಸಹಕಾರ ನಗರದ ಸೈಕಲ್ ಡೇ ಮತ್ತು ದೇಸೀ ಆಟಗಳು

ಜೇಷ್ಠ ಮಾಸ ಇನ್ನೇನು ಮುಗಿಯುತ್ತಿದ್ದು, ಆಷಾಡ ಮಾಸ ಆರಂಭವಾಗುತ್ತಲಿದೆ.  ಆಷಾಡ ಮಾಸದ ಗಾಳಿಯ ರಭಸ ಈಗಾಗಲೇ ಹೆಚ್ಚಾಗಿಯೇ ಹೋಗಿದೆ. ಹೇಳೀ ಕೇಳಿ ಭಾನುವಾರ ಎಂದರೆ  ಬಹಳಷ್ಟು ಬೆಂಗಳೂರಿಗರಿಗೆ ಬೆಳಾಗಾಗುವುದೇ ಸೂರ್ಯ ನೆತ್ತಿಗೆ ಬಂದ ಮೇಲೆಯೇ ಎಂದರೆ ತಪ್ಪಾಗಲಾರದೇನೋ? ಆದರೆ ಅದಕ್ಕೆ ಅಪವಾದ ಎಂಬಂತೆ ಇಂದು  ಬೆಂಗಳೂರಿನ ಉತ್ತರದ ಭಾಗದ ಸಹಕಾರ ನಗರದಲ್ಲಿ ಬೆಳ್ಳಂಬೆಳ್ಳಗ್ಗೆಯೇ  ಹಬ್ಬದ ವಾತಾವರಣ ಮೂಡಿತ್ತು ಎಂದರೆ ತಪ್ಪಾಗಲಾದರದು.

ಕಾರು, ಬಸ್,  ನಾನಾ ತರಹದ ದ್ವಿಚಕ್ರ ವಾಹನಗಳು ಮುಂತಾದ ಮೋಟಾರು ವಾಹನಗಳ ದಟ್ಟಣೆ  ಅವುಗಳು ಉಗುಳುವ ಹೊಗೆಯಿಂದ  ಕನಿಷ್ಠ ಪಕ್ಷ ಒಂದು ಅರ್ಧ ದಿನವಾದರೂ ಹೊರಬಂದು ಸ್ವಚ್ಚ ವಾತಾವರಣದಲ್ಲಿ ಮನಸ್ಸಿಗೆ ನೆಮ್ಮದಿ ಮತ್ತು  ದೈಹಿಕ ಪರಿಶ್ರಮದ ಸಮ್ಮಿಲವಾದ ಸೈಕಲ್ ದಿನವನ್ನಾಗಿ ಆಚರಿಸಲು  ಸಹಕಾರ ನಗರದ ಮಹಿಳಾ ಕಲ್ಯಾಣ ಸಂಘದವರು ನಿರ್ಧರಿಸಿ ಅದನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದರು. ಕೇವಲ  ಸಹಕಾರ ನಗರ ಮಾತ್ರವಲ್ಲದೇ ಅಕ್ಕ ಪಕ್ಕ ಬಡಾವಣೆಯ ಸುಮಾರು ಇನ್ನೂರಕ್ಕೂ ಹೆಚ್ಚಿನ ಸೈಕಲ್ ಸವಾರರು ಅದಲ್ಲೂ   ಶಾಲಾಮಕ್ಕಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.  ಸೈಕಲ್ ತುಳಿಯುವ ಮೊದಲು ಬಂದವರೆಲ್ಲರಿಗೂ ಒಂದು ಹತ್ತು ನಿಮಿಷಗಳಷ್ಟು ಸಂಗೀತದೊಂದಿಗೆ  ಝುಂಬಾ ನೃತ್ಯ ಮಾಡಿಸಿ ಮೈಕೈ ಸಡಿಲಗೊಳಿಸಿ ಸರಾಗವಾಗಿ ಸೈಕಲ್ ತುಳಿಯುವುದಕ್ಕೆ ಅನುಕೂಲ ಮಾಡಿಕೊಟ್ಟರು.  ಸ್ಥಳೀಯ ಶಾಸಕರು ಮತ್ತು ರಾಜ್ಯದ ಮಂತ್ರಿಗಳಾದ ಶ್ರೀ ಕೃಷ್ಣಾ ಭೈರೇಗೌಡರು ಸ್ವಲ್ಪ ದೂರ ಸೈಕಲ್ ತುಳಿಯುವ ಮೂಲಕ  ಸಾಂಕೇತಿಕವಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿ,  ಈ ರೀತಿಯ ಸೈಕಲ್ ತುಳಿಯುವುದು ಕೇವಲ  ಈ ರೀತಿಯ ಕಾರ್ಯಕ್ರಮಕ್ಕೋ ಇಲ್ಲವೇ ಒಂದೇ ಒಂದು ದಿನಕ್ಕೇ ಸೀಮಿತವಾಗದೇ  ಸೈಕಲ್ ತುಳಿಯುವುದನ್ನು ನಮ್ಮ  ಜೀವನದ ಶೈಲಿಯಲ್ಲಿ  ಅಳವಡಿಸಿಕೊಂಡಲ್ಲಿ ಆರೋಗ್ಯಕ್ಕೂ ಉತ್ತಮ ಮತ್ತು ಪರಿಸರ ಹಾನಿಯನ್ನು ಸ್ವಲ್ಪ ಮಟ್ಟಿಗಾದರೂ ತಡೆಯಬಹುದಾಗಿದೆ ಎಂದು ತಿಳಿಸಿದರು.   ಇಡೀ ಕಾರ್ಯಕ್ರಮದಲ್ಲಿ  ಇಬ್ಬರು  ಅತ್ಯಂತ ಆಕರ್ಷಣೆಯಾಗಿದ್ದರು. ಮೊದಲಿಗೆ  ಸುಮಾರು ಒಂದು, ಒಂದೂವರೆ ವರ್ಷದ ಪುಟ್ಟ ಬಾಲಕ ತನ್ನ ಪುಟ್ಟ ಸೈಕಲ್ ಜೊತೆ  ಎಲ್ಲರೊಂದಿಗೆ ಭಾಗವಹಿಸಿದರೆ ಮತ್ತೊಂದು ಶ್ರೀ ಶ್ರೀಧರ್ ಜೋಷಿಯವರ ಮಕ್ಕಳಾದ   ಶ್ರೀದತ್ತ ಜೋಷಿ ಮತ್ತು ಶ್ರೀವತ್ಸ ಜೋಷಿಯವರು ಮೂರು ಚಕ್ರದ ಸೈಕಲ್.  ಎರಡು ಒಂದೇ ರೀತಿಯ ಸೈಕಲ್ಗಳನ್ನು ಸ್ವತಃ ಶ್ರೀ ದತ್ತ ಜೋಷಿ ತನ್ನ ಸಹೋದರನ ಜೊತೆ ಸೇರಿ, ಮೂರು ಚಕ್ರದ ಸೈಕಲ್ಲನ್ನಾಗಿಸಿ ಸಹೋದರರಿಬ್ಬರೂ ಒಂದಾಗಿ ಸೈಕಲ್ ತುಳಿದಿದ್ದದ್ದು ಪ್ರಮುಖ ಅಂಶವಾಗಿದ್ದಲ್ಲದೆ, ಕಾರ್ಯಕ್ರಮದ ನಂತರ ಸೈಕಲನ್ನು ವೇದಿಕೆಯ ಮೇಲೆ ಇರಿಸಿ ಅನೇಕರು ಅದರ ಜೊತೆ ತಾಮುಂದು ನಾಮುಂದು ಎಂದು ಫೋಟೋ ತೆಗೆಸಿಕೊಳ್ಳುತ್ತಿದ್ದದ್ದು ಆ ಸಹೋದರರು ಮತ್ತು ಅವರ ತಂದೆ ಶ್ರೀಧರ್ ಜೋಷಿಯವರ ಮುಖದ ಮೇಲೆ ಮಂದಹಾಸ ಮೂಡಿಸುತ್ತಿತ್ತು.

ಇಂದಿನ ಕಾಲದ ಮಕ್ಕಳಿಗೆ ಆಟಗಳು ಎಂದರೆ ಅದು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಯಾವುದೇ ದೈಹಿಕ ಪರಿಶ್ರಮವಿಲ್ಲದೆ,  ಕಣ್ಣುಗಳಿಗೆ ಮಾರಕವಾಗುವಂತಹ ಮೊಬೈಲ್ ಆಟಗಳೇ ಆಗಿಹೋಗಿರುವುದು ದುರ್ದೈವ ಮತ್ತು ಕಳವಳಕಾರಿಯಾಗಿದೆ.  ಮೊಬೈಲ್ ಹೊರತಾಗಿ ಹೊರಾಂಗಣ ಆಟ ಎಂದರೆ ಕ್ರಿಕೆಟ್ ಇಲ್ಲವೇ ಫುಟ್ಬಾಲ್ ಮತ್ತು ಟೆನಿಸ್ ಆಟಗಳ ಹೊರತಾಗಿ ಬೇರಾವ ಆಟಗಳೂ ಇಂದಿನ ಮಕ್ಕಳಿಗೆ ತಿಳಿದಿಲ್ಲದಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.   ಸುಮಾರು ಒಂದು ಹೊತ್ತು ಸೈಕಲ್ ತುಳಿದು  ಸುಸ್ತಾಗಿದ್ದವರೆಲ್ಲರ  ಮನಸ್ಸನ್ನು ಮುದಗೊಳಿಸಲು ಆಯೋಜಕರು  ನಮ್ಮ  ದೇಸಿ ಆಟಗಳಾದ  ಗಿಲ್ಲಿ ದಾಂಡು, ಲಗೋರಿ, ಅಳುಗುಳಿ ಮಣೆ, ಚೌಕಾಬಾರ, ಪಗಡೆ, ಚೆದುರಂಗ, ಟೈರ್ಗಳನ್ನು ಕಡ್ಡಿಯೊಂದಿಗೆ ಓಡಿಸಿಕೊಂಡು ಹೋಗುವ ಆಟಗಳೂ ಒಂದೆಡೆಯಾದರೇ ಮಹಿಳೆಯರಿಗಾಗಿಯೇ ಹಾವು ಏಣಿ ಆಟ, ಕುಂಟೋ ಬಿಲ್ಲೇ ಮತ್ತು ಗುಂಪಿನಲ್ಲಿ ಎಲ್ಲರೂ ನಿಂತು ದೇಹ ಬಳುಕಿಸುತ್ತಾ  ರಿಂಗನ್ನು ಒಬ್ಬರಿಂದ ಮತ್ತೊಬ್ಬರಿಗೆ ಸಾಗಿಸುವ ಆಟ ಮನೋಹರವಾಗಿತ್ತು.

ನೆರೆದಿದ್ದ ಬಹುತೇಕ ಮಕ್ಕಳಿಗೆ ಗಿಲ್ಲಿ ದಾಂಡು ಆಟ ಪರಿಚಯವಿಲ್ಲದ ಕಾರಣ ಇಲ್ಲಿ ನೆರದಿದ್ದವರು ಯಾರಾದರೂ ಈ ಆಟದ ಬಗ್ಗೆ ತಿಳಿಸಿಕೊಡಲು ಸಾಧ್ಯವೇ ಎಂದು ಆಯೋಗಕರು ಕೇಳಿದಾಗ, ಬಾಲ್ಯದಲ್ಲಿ   ಈ ಆಟವನ್ನು  ಹಲವಾರು ಬಾರಿ ಆಡಿದ್ದ ನಾನು ಈ ಆಟವನ್ನು  ಇಂದಿನ ಕಾಲದ  ಕ್ರಿಕೆಟ್ ಆಟಕ್ಕೆ ಹೋಲಿಸಿ  ಚೆಂಡಿನ ಬದಲಾಗಿ ಮರದಿಂದ ಮಾಡಲಾದ ಚಿಕ್ಕ ಚಿನ್ನಿ (ಮರದ ತುಂಡಿನ ಎರಡು ಕಡೆ ಮೊನಚಾಗಿ ಮಾಡಲಾಗಿರುತ್ತದೆ  ಹಾಗೂ ಬ್ಯಾಟ್ಗೆ ಬದಲಾಗಿ ಮರದಿಂದಲೇ ತಯಾರಾದ ಬಡಿಗೆಯ ರೂಪದ ದಾಂಡನ್ನು ಬಳಸಲಾಗುತ್ತದೆ. ಚಿನ್ನಿ ದಾಂಡು ಅಥವಾ ಗಿಲ್ಲಿ ದಾಂಡು  ಅಥವಾ ಚಿನ್ನಿ ಕೋಲು ಒಂದು ಜನಪ್ರಿಯ ಗ್ರಾಮೀಣ ಆಟವನ್ನು , ರೆಡಿ  ಡಬ್ಕುಡಬಲ್ ತುದಾಂಡಲ್ ಎಂದು ಹೇಳುತ್ತಾ  ಒಂದು ಎರಡು, ಮೂರು ಗಿಲ್ಲಿಗಳನ್ನು ಎಗರಿಸಿ ಜೋರಾಗಿ ಹೊಡೆದು ಎಲ್ಲರಿಗೂ ಪರಿಚಯ ಮಾಡಿಸಿ ಕೊಟ್ಟೆ.

ಇನ್ನು  ಕೈಯಲ್ಲಿ ಕೋಲು ಹಿಡಿದು ಟೈರ್ ಓಡಿಸುವಾಗಲಂತೂ ಬೇಲೂರಿನಲ್ಲಿದ್ದ  ನನ್ನ ಅಣ್ಣಂದಿರೊಂದಿಗೆ ಬೇಲೂರಿನಿಂದ, ಹಳೆಯಬೀಡಿನವರೆಗೂ ದಣಿವಿಲ್ಲದೆ ಟೈರ್ ಓಡಿಸಿಕೊಂಡು ಹೋಗಿ ಸ್ವಲ್ಪ ದಣಿವಾರಿಸಿಕೊಂಡು ಮತ್ತೆ  ಹಿಂದಿರುಗಿ ಬರುತ್ತಿದ್ದದ್ದು ನೆನಪಿಗೆ ಬಂದು ಹಾಗೆಯೇ ಶುಭಮಂಗಳ ಚಿತ್ರದ  ಬಾಲ್ಯದ ಆಟ, ಆ ಹುಡುಗಾಟ, ಇನ್ನು ಮಾಸಿಲ್ಲಾ.. ಆಟದಿ ಸೋತು, ರೋಷದಿ ಕಚ್ಚಿದ ಗಾಯವ ಮರೆತಿಲ್ಲ ಅಹ ಅಹ! ಎನ್ನುವ ಜನಪ್ರಿಯ ಹಾಡು ನನೆಪಿನಂಗಳಲ್ಲಿ ಬಂದು  ನನಗೇ ಗೊತ್ತಿಲ್ಲದಂತೆ ಗುನುಗುಟ್ಟಿ ಅಕ್ಕ ಪಕ್ಕದವರು ನನ್ನನ್ನೇ ಗಮನಿಸುತ್ತಿರುವುದನ್ನು ನೋಡಿ ಸುಮ್ಮನಾದೆ. ದೇಸೀ ಆಟಗಳ ಜೊತೆಯಲ್ಲಿಯೇ ನಮ್ಮ ದೇಶದ ಮತ್ತೊಂದು ಹೆಮ್ಮೆಯ ಕೊಡುಗೆಯಾದ ಯೋಗಾಭ್ಯಾಸ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.

ಇಂತಹ ಕಾರ್ಯಕ್ರಮವನ್ನು ಆಯೋಜಿಸಲು ಪ್ರೇರಣೆಯಾದರೂ ಏನು ಎಂದು ಕುತೂಹಲದಿಂದ ಆಯೋಜಕರಲ್ಲಿ ಒಬ್ಬರನ್ನು  ವಿಚಾರಿಸಿದಾಗ,  ಇಂದಿನ ಮಕ್ಕಳಿಗೆ ಮೊಬೈಲ್ ಎನ್ನುವುದು ಎಷ್ಟು ಅನುಕೂಲಕರವೂ ಅದು ಅಷ್ಟೇ ಮಾರಕವಾಗಿದೆ.  ಮನೆಯಲ್ಲಿಯೇ ಒಬ್ಬರನ್ನೊಬ್ಬರೊಂದಿಗೆ ಸಂಭಾಷಣೆಗೆ sms ಇಲ್ಲವೇ Whatsapp ಬಳೆಸುವಂತಹ ದೈನೇಸಿ ಸ್ಥಿತಿಗೆ ತಲುಪಿದ್ದೇವೆ. ಮನೆಯ ಪಕ್ಕದಲ್ಲಿರುವ  ಅಂಗಡಿಯಿಂದ ಹಾಲು, ಹಣ್ಣು ಮತ್ತು ತರಕಾರಿಗಳನ್ನು ತರಲೂ ಸಹಾ ದ್ವಿಚಕ್ರ ವಾಹನ ಬಳೆಸುತ್ತಿರುವುದು ನಿಜಕ್ಕೂ ಕಳವಳಕಾರಿ.  ಈ ರೀತಿಯಾಗಿ ಮೋಬೈಲ್ ಮತ್ತು  ದ್ವಿಚಕ್ರ ವಾಹನಗಳಿಗೆ  ದಾಸರಾಗುವುದರ ಹೊರತಾಗಿಯೂ ಹಲವಾರು ದೇಸೀ ಆಟಗಳಿವೆ ಮತ್ತು ನಡೆದು ಕೊಂಡು ಹೋಗುವುದು  ಇಲ್ಲವೇ ಸೈಕಲ್ ತುಳಿಯುವುದರಿಂದ ದೈಹಿಕವಾಗಿಯೂ ಆರೋಗ್ಯಕರವಾಗಿರಬಹುದು ಎಂಬುದನ್ನು ಪರಿಚಯಿಸಲು ಈ ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇವೆ  ಎಂದು ತಿಳಿಸಿದರು.  ಇಡೀ ಕಾರ್ಯಕ್ರಮವನ್ನು ಶ್ರೀಮತಿ ಶರ್ಮಿಳರವರು  ಅಚ್ಚ ಕನ್ನಡದಲ್ಲಿ ಸ್ವಚ್ಚವಾಗಿ ತಮ್ಮ ಮಂಗಳೂರಿನ ಶೈಲಿಯಲ್ಲಿ ನಿರೂಪಣೆ  ಮಾಡಿ ಎಲ್ಲರ ಗಮನ ಸೆಳೆದರು.

ಆಧುನಿಕ ಜಗತ್ತಿನ ಪಾಶ್ಚಾತ್ಯ ಅಂಧಾನುಕರಣದಲ್ಲಿಯೇ ಮುಳುಗಿ ಬೇಕೋ ಬೇಡವೋ ಮತ್ತೊಬ್ಬರನ್ನು ಮೆಚ್ಚಿಸಲು ನಮ್ಮ ಗ್ರಾಮೀಣ ಸೋಗಡು ಮತ್ತು ಸಂಪ್ರದಾಯಗಳನ್ನು ಮರೆತು  ಟಸ್ ಪುಸ್ ಎಂದು ಇಂಗ್ಲೀಷ್ ಮಾತನಾಡುತ್ತಾ ಅವರದ್ದೇ ಆಟಗಳನ್ನು ಆಡುವ ಇಂದಿನ ಸಮಯದಲ್ಲಿ ಇಂತಹ ಕಾರ್ಯಕ್ರಮಗಳ ಆಯೋಜನೆ ನಿಜಕ್ಕೂ  ಆಭಿನಂದನೀಯ ಮತ್ತು ಅನುಕರಣೀಯ. ಇಂತಹ ಕಾರ್ಯಕ್ರಮಗಳು ಕೇವಲ ವರ್ಷಕ್ಕೊಂದೂ ಇಲ್ಲವೇ ಎರಡು ಮಾತ್ರವೇ ಆಗದೇ, ಆಗ್ಗಿಂದ್ದಾಗೆ ಕನಿಷ್ಟ ಪಕ್ಷ ತಿಂಗಳಿಗೆ ಒಂದು ಬಾರಿಯಾದರೂ ನಡೆಯುವಂತಾಗಿ ನಮ್ಮ ಇಂದಿನ ಪೀಳಿಗೆಯವರಿಗೆ ನಮ್ಮ  ದೇಸೀ ಆಟವನ್ನು ಪರಿಚಯಮಾಡಿಸುವಂತಾಗಲಿ. ಇಂತಹ ಕಾರ್ಯಕ್ರಮಗಳಿಂದ ಪ್ರೇರಿತರಾಗಿ  ಇಂತಹ ಕಾರ್ಯಕ್ರಮಗಳು  ರಾಜ್ಯದ ಎಲ್ಲಕಡೆಯಲ್ಲೂ ನಡೆಯುವಂತಾಗಲೀ.

ಏನಂತೀರೀ?

2 thoughts on “ಸಹಕಾರ ನಗರದ ಸೈಕಲ್ ಡೇ ಮತ್ತು ದೇಸೀ ಆಟಗಳು

  1. ಲೇಖನ ಓದಿ ಬಹಳ ಆನಂದವಾಯಿತು. ಆಯೋಜಕರಿಗೆ ಅಭಿನಂದನೆಗಳು. ಇಂದಿನ ಜೀವನ ಮಾದರಿಗೆ ಇಂಥಹ ಕಾರ್ಯಕ್ರಮಗಳು ಅತ್ಯವಶ್ಯಕ. ತಿಂಗಳಿಗೆ ಒಮ್ಮೆಯಾದರೆ ಸಾಕೇನೋ! ಲೇಖನ ಉತ್ತಮವಾಗಿ ಮೂಡಿ ಬಂದಿದೆ.

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s