ಆ-ರಕ್ಷಕರೋ ಇಲ್ಲಾ ಭಕ್ಷಕರೋ?

ಕೆಲ ದಿನಗಳ ಹಿಂದೆ weekend with ramesh ಕಾರ್ಯಕ್ರಮದಲ್ಲಿ infosys ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿಗಳು ಹೇಳಿದ ಮಾತು ಮೊದಲು ಅರಗಿಸಿಕೊಳ್ಳಲು ಸ್ವಲ್ಪ ಕಸಿವಿಸಿ ಎನಿಸಿದರೂ ನಿಧಾನವಾಗಿ ಆಲೋಚಿಸಿದಾಗ ಅವರು ಹೇಳಿದ್ದು ಸರಿಯೇ ಎನಿಸಿತು. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದ ಜನ ಶಿಸ್ತು ಸಂಯಮ ಕಾಪಾಡುವುದು ಸ್ವಲ್ಪ ಕಡಿಮೆ ಅವರು ಸದಾ ಕಾನೂನು ಮುರಿಯುವುದರಲ್ಲಿಯೇ ಹೆಚ್ಚಿನ ಸಂತೋಷ ಪಡುತ್ತಾರೆ ಎಂಬರ್ಥದಲ್ಲಿ ಹೇಳಿದ್ದರು. ಹಾಗಾಗಿ ಇಂತಹ ಜನರನ್ನು ಕಾನೂನಾತ್ಮವಾಗಿ ಪರಿಪಾಲಿಸಲು ಮತ್ತು ಅದನ್ನು ಹದ್ದು ಮೀರಿದಲ್ಲಿ ಸರಿದಾರಿಗೆ ತರಲು ನಮ್ಮ ಸಮಾಜದಲ್ಲಿ ಆರಕ್ಷಕರ ಪಾತ್ರ ಬಹಳ ಪ್ರಮುಖವಾದದ್ದು ಮತ್ತು ಅವರ ಶ್ರಮದ ಬಗ್ಗೆ ನಮಗೆ ಅಪಾರವಾದ ಗೌರವಿದೆ. ಕರ್ನಾಟಕ ಪೋಲೀಸ್ ಇಲಾಖೆ ಇಡೀ ದೇಶದಲ್ಲಿ ಅತ್ಯಂತ ದಕ್ಷ ಮತ್ತು ಪ್ರಾಮಾಣಿಕರು ಎಂದು ಈಗಾಗಲೇ ಹಲವಾರು ಸಂದರ್ಭದಲ್ಲಿ ಸಾಭೀತಾಗಿದೆ.

ಆದರೆ ಇತ್ತಿಚೆಗೆ ನಾನು ಕಂಡ ಮತ್ತು ವಯಕ್ತಿಕವಾಗಿ ಪೋಲಿಸರೊಂದಿಗೆ ಅನುಭವಿಸಿದ ಈ ಕೆಳಕಂಡ ಪ್ರಸಂಗಳಿಂದಾಗಿ, ಬೇಲಿಯೇ ಎದ್ದು ಹೊಲ ಮೇಯ್ದಂತೆ ಇಲ್ಲಿ ಕಾನೂನು ರಕ್ಷಕರೇ ಭಕ್ಷಕರಾಗಿ ಕಾನೂನುಗಳನ್ನು ಅವರ ಅನುಕೂಲಕ್ಕೆ ತಕ್ಕಂತೆ ಬಳಿಸಿಕೊಳ್ಳುತ್ತಾ ಕಕೃತ್ಯಗಳನ್ನು ನಡೆಸುತ್ತಿದ್ದರೆ ಯಾರಿಗೆ ಹೇಳುವುದು? ಅಂತಹವರ ವಿರುದ್ಧ ಯಾವುದೇ ಕ್ರಮವಿಲ್ಲವೇಕೇ?

ಪ್ರಸಂಗ – 1

ನನ್ನ ಸ್ನೇಹಿತ ತನ್ನ ಕೆಲಸ ಮೇಲೆ ವಿದೇಶಕ್ಕೆ ಹೋಗುವ ಸಲುವಾಗಿ ಪಾಸ್ ಪೋರ್ಟ್ ನವೀಕರಣಕ್ಕೆ ಅರ್ಜಿಹಾಕಿದ್ದ. ಆತನ ಅರ್ಜಿ, ಪಾಸ್ ಪೋರ್ಟ್ ಕಛೇರಿಯಿಂದ ಆತನ ಮನೆಯ ಹತ್ತಿರದ ಪೋಲೀಸ್ ಠಾಣೆಗೆ ವಿಚಾರಣೆಗೆ ಬಂದಿತು. ನಿಯಮದ ಪ್ರಕಾರ ಪೋಲೀಸರು ಆತನ ಮನೆಗೆ ಬಂದು ಆತ ಅದೇ ವಿಳಾಸದಲ್ಲಿ ವಾಸಿಸುತ್ತಿರುವನೇ, ಅತನ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ದಾಖಲೆಗಳು ಇಲ್ಲವೇ ಎಂದು ಖುದ್ದಾಗಿ ಪರೀಕ್ಷಿಸಿ ಎಲ್ಲವೂ ಸರಿ ಇದ್ದಲ್ಲಿ ನಿರಾಕ್ಷೇಪಣಾ ಪತ್ರವನ್ನು ಪಾಸ್ ಪೋರ್ಟ್ ಕಛೇರಿಗೆ ಕಳುಹಿಸಿಕೊಡಬೇಕು. ಆದರೆ ಇಲ್ಲಿ ಆದದ್ದೇ ಬೇರೆ. ಪೋಲೀಸ್ ಠಾಣೆಯಿಂದ ಆತನಿಗೆ ಕರೆ ಮಾಡಿ ಸಂಬಂಧ ಪಟ್ಟವರನ್ನು ವಯಕ್ತಿಕವಾಗಿ ಭೇಟಿ ಮಾಡಲು ಹೇಳಿದರು. ನನ್ನ ಸ್ನೇಹಿತ ಹಾಗೆಯೇ ಅವರನ್ನು ಭೇಟಿಮಾಡಿದಾಗ ಕುಳಿತಲ್ಲಿಯೇ ಅವನ ವಿಳಾಸ ಮತ್ತು ಆತನ ವಿವರಗಳನ್ನು ವಿಚಾರಿಸಿ ನೋಡಿ ನಾವು ಈ ದಾಖಲೆಗಳನ್ನು ಕಳುಹಿಸಿದರೆ ಮಾತ್ರವೇ ನಿಮಗೆ ಪಾಸ್ ಪೋರ್ಟ್ ಸಿಗುವುದು ಎಂದರು. ಅದಕ್ಕೆ ನನ್ನ ಸ್ನೇಹಿತ ಸರಿ ಸಾರ್. ದಯವಿಟ್ಟು ಬೇಗನೆ ಕಳುಹಿಸಿಬಿಡಿ ಎಂದು ವಿನಂತಿಸಿಕೊಂಡು ಠಾಣೆಯಿಂದ ಹಿಂದಿರುಗಿದ. ಆದಾದ ಒಂದು ವಾರದ ನಂತರವೂ ಆತನಿಗೆ ಯಾವುದೇ ಸಮಾಚಾರ ತಿಳಿಯದ ಕಾರಣ ಪಾಸ್ ಪೋರ್ಟ್ ಕಛೇರಿಯ ಅಂತರ್ಜಾಲದಲ್ಲಿ ನೋಡಿದರೆ, ಇನ್ನೂ ಪೋಲಿಸರ ನಿರಪೇಕ್ಷಣಾ ಪತ್ರ ತಲುಪದಿರುವ ಕಾರಣ ವಿಳಂಬವಾಗುತ್ತಿತ್ತು. ಹಾಗಾಗಿ ಮತ್ತೊಮ್ಮೆ ಪೋಲೀಸ್ ಠಾಣೆಗೆ ದೌಡಾಯಿಸಿ ಹಿಂದಿನ ಬಾರಿ ಭೇಟಿಯಾಗಿದ್ದ ಪೋಲೀಸರನ್ನೇ ಭೇಟಿಮಾಡಿ ಸಾರ್, ನನ್ನ ಎಲ್ಲಾ ದಾಖಲೆಗಳೂ ಸರಿಯಾಗಿದೆ ಎಂದು ನೀವೇ ಹೇಳಿದ್ದೀರಿ ಆದರೆ ಪಾಸ್ ಪೋರ್ಟ್ ಕಛೇರಿಗೆ ಇನ್ನೂ ನಿಮ್ಮಿಂದ ನನ್ನ ಅರ್ಜಿ ಹೋಗಿಲ್ಲವಂತೆ ಎಂದಾಗ ಆತ, ಹೌದು ರೀ. ಅವತ್ತು ನೀವು ಸುಮ್ಮನೆ ಹಾಗೇ ಹೋಗಿಬಿಟ್ರೀ, ನಮ್ಮನ್ನೇನೂ ನೋಡಿಕೊಳ್ಳಲೇ ಇಲ್ಲವಲ್ಲಾ ಎಂದಾಗ ನನ್ನ ಸ್ನೇಹಿತನಿಗೆ ಅವರ ಅಭೀಷ್ಟೆ ಅರಿವಾಗಿ ಬೇಸರದಿಂದಲೇ ಇನ್ನೂರರ ನೋಟೊಂದನ್ನು ಕೊಟ್ಟು , ಸರ್ ದಯವಿಟ್ಟು ಬೇಗನೇ ಕಳುಹಿಸಿ ಬಿಡಿ ಎಂದಾಗ, ಇನ್ನೇನು ಬಾಕಿ ಇಲ್ಲಾ ನಾಳೆನೇ ಕಳುಹಿಸುತ್ತೇವೆ. ಇನ್ನು ಒಂದೆರಡು ವಾರದೊಳಗೆ ನಿಮಗೆ ಪಾಸ್ ಪೋರ್ಟ್ ಬಂದು ಬಿಡುತ್ತದೆ ಎಂದು ಸಾಗಿ ಹಾಗಿದರು. ಅವರು ಹೇಳಿದಂತೆ ಎರಡು ವಾರದ ನಂತರ ಪಾಸ್ ಪೂರ್ಟ್ ಬಂದಿತಾದರೂ ಅದಾಗಲೇ ತಡವಾಗಿದ್ದರಿಂದ ಆತನ ಕಛೇರಿಯಲ್ಲಿ ನನ್ನ ಸ್ನೇಹಿತನ ಬದಲು ಮತ್ತೊಬ್ಬರನ್ನು ವಿದೇಶಕ್ಕೆ ಕಳುಹಿಸಿಯಾಗಿತ್ತು. ಕೇವಲ 200ರೂ ಲಂಚ ಕೊಡಲಿಲ್ಲಾ ಎಂದು ತನ್ನ ಕರ್ತವ್ಯ ನಿಭಾಯಿಸದೇ ಒಬ್ಬ ಸಾಮಾನ್ಯ ಪ್ರಜೆಯ ಭವಿಷ್ಯವನ್ನೇ ಹಾಳು ಮಾಡಿದವರ ವಿರುದ್ಧ ಯಾವುದೇ ಕ್ರಮವಿಲ್ಲವೇಕೇ?

ಪ್ರಸಂಗ -2

ಇತ್ತೀಚೆಗೆ ಎಲ್ಲಾ ಕಡೆಯಲ್ಲೂ ರಸ್ತೆ ಬದಿಯ ವ್ಯಾಪಾರಸ್ಥರು ಹೆಚ್ಚಾಗಿದ್ದಾರೆ. ಬಹುತೇಕ ವ್ಯಾಪಾರಸ್ಥರು ಅಂಗಡಿಗಳಿಗೆ ಬಾಡಿಗೆ ಕೊಡಲು ಶಕ್ತರಾಗಿರದ ಕಾರಣ ರಸ್ತೇ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಿರುತ್ತಾರೆ. ಅಂತಹವರಲ್ಲಿ , ಹೂ ಮಾರುವವರು, ತರಕಾರಿಗಳು, ಹಣ್ಣುಗಳು, ಪಾನೀಪೂರಿ, ಬೊಂಡ ಬಜ್ಜಿ ಮಾರುವವರೇ ಹೆಚ್ಚಾಗಿರುತ್ತಾರೆ. ಅದೊಂದು ಸಂಜೆ ರಸ್ತೆ ಬದಿಯಲ್ಲಿ ತರಕಾರಿ ಕೊಂಡುಕೊಳ್ಳುತ್ತಿದ್ದೆ. ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಇಬ್ಬರು ಪೋಲೀಸರು ಅಲ್ಲಿಗೆ ಬಂದು ತಮ್ಮ ಕೈಚೀಲವನ್ನು ಆ ರಸ್ತೆ ಬದಿಯ ವ್ಯಾಪಾರಿಯ ಕೈಗಿತ್ತರು. ಆತ ಅವರಿಬ್ಬರಿಗೂ ನಮಸ್ಕರಿಸಿ ಹಲವಾರು ತರಕಾರಿಗಳನ್ನು ಅವರ ಕೈಚೀಲಕ್ಕೆ ಹಾಕಿಕೊಟ್ಟ ಅವರಿಬ್ಬರೂ ಸುಮ್ಮನೆ ಹಣವನ್ನೇ ನೀಡದೆ ತರಕಾರಿ ಚೀಲವನ್ನು ಹಿಡಿದುಕೊಂಡು ರಾಜಾ ರೋಷದಿಂದ ಹೋರಟರು. ಇದನ್ನೇ ಗಮನಿಸಿತ್ತಿದ್ದ ನಾನು ಇದೇನು ದುಡ್ಡೇ ಕೊಡದೇ ಹಾಗೆಯೇ ಹೋಗಿಬಿಟ್ಟರಲ್ಲಾ ಅಂದರೆ, ಎನ್ಮಾಡೋದು ಸರ್, ನಾವೇನಾದ್ರೂ ಕೊಡ್ಲಿಲ್ಲಾಂದ್ರೆ ನಾಳೆಯಿಂದ ಇಲ್ಲಿ ವ್ಯಾಪಾರ ಮಾಡೋದಿಕ್ಕೇ ಬಿಡೋದಿಲ್ಲಾ. ಪ್ರತೀ ದಿನ ಹೀಗೇನೇ ಒಬ್ಬರೂ ಇಬ್ಬರೂ ಬಂದೇ ಬರ್ತಾರೆ. ಸೌತೇಕಾಯಿ ಎರಡೂ ಕಡೆ ಕತ್ತರಿಸಿ ವಿಷ ತೆಗೆಯೋ ಹಾಗೆ ಮನಸ್ಸಿಲ್ಲದಿದ್ದರೂ ಅವರಿಗೆ ಬಿಟ್ಟಿ ತರಕಾರಿ ಕೊಡ್ತೀವಿ ಸಾರ್ ಎಂದರು. ಇದೇ ರೀತಿಯ ಹಫ್ತಾ ವಸೂಲಿಯ ವ್ಯಥೆ ಹೂ ಮಾರುವರು ಪಾನೀಪುರಿ, ಐಸಿಕ್ರೀಮ್ ಮಾರುವವರ ಬಳಿಯೂ ಕೇಳಿದ್ದೇನೆ. ಹೊಟ್ಟೆ ಪಾಡಿಗೆ ಕಳ್ಳತನ ಮಾಡದೆ ಸುಳ್ಳಾಡದೇ ಸುಡು ಬಿಸಿಲಿನಲ್ಲಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿ ಹೊಟ್ಟೆ ಹೊರೆಯುವರ ಬಳಿ ದಬ್ಬಾಳಿಕೆಯಿಂದ ಪ್ರತಿ ನಿತ್ಯ ಹಫ್ತಾ ವಸೂಲು ಮಾಡುವವರ ವಿರುದ್ಧ ಯಾವುದೇ ಕ್ರಮವಿಲ್ಲವೇಕೇ?

ಪ್ರಸಂಗ -3

ಕಳೆದ ವಾರಾಂತ್ಯದಲ್ಲಿ ರಾಜಕುಮಾರ್ ಸಮಾಧಿಯ ರಸ್ತೆಯಿಂದ ಯಶವಂತ ಪುರಕ್ಕೆ ತಿರುಗುವ ಗೊರಗೊಂಟೇ ಪಾಳ್ಯದ ಸಿಗ್ನಲ್ಲಿನಲ್ಲಿ ನಿಂತಿದ್ದೆ. ಅಲ್ಲಿ ಬಹಳವಾಗಿ ವಾಹನ ದಟ್ಟಣೆಯಾಗುವುದರಿಂದ ಆ ಸಿಗ್ನಲ್ ದಾಟಲು ಕನಿಷ್ಟ ಪಕ್ಷ ಏನಿಲ್ಲವೆಂದರೂ ಎಂಟು ಹತ್ತು ನಿಮಿಷಗಳಾಗುತ್ತವೆ. ಹಾಗೆ ಕಾರ್ನಲ್ಲಿ ಕುಳಿತಿರುವಾಗಲೇ ಪಕ್ಕದಲ್ಲೇ ಮೂರ್ನಾಲ್ಕು ಪೋಲೀಸರು ತಪಾಸಣೆಗೆ ನಿಂತಿದ್ದರು. ಆಗ ಒಂದು ದ್ಚಿಚಕ್ರವಾಹನದಲ್ಲಿ ಇಬ್ಬರು ವ್ಯಕ್ತಿಗಳು ಮುಂದೆ ಸೋಫಾ ರಿಪೇರಿಮಾಡುವ ಸ್ಪಂಜಿನ ರೋಲ್ ಇಟ್ಟುಕೊಂಡು ಬರುತ್ತಿದ್ದರು. ಕೂಡಲೇ ಪೋಲೀಸರು ಆ ವ್ಯಕ್ತಿಗಳನ್ನು ತಡೆ ಹಿಡಿದರು. ಸಿಗ್ನಲ್ ಕೂಡಾ ಬಿಟ್ಟಿತ್ತು. ಇಬ್ಬರೂ ಹೆಲ್ಮೆಟ್ ಹಾಕಿದ್ದರೂ ಅವರನ್ನು ತಡೆ ಹಿಡಿದ್ದದ್ದನ್ನು ನೋಡಿ ಕುತೂಹಲದಿಂದ ಏನು ಮಾಡುತ್ತಾರೆ ಎಂದು ಗಮನಿಸುತ್ತಲೇ ಇದ್ದೆ. ಅವರ ಸಂಭಾಷಣೆಯೂ ನಮಗೆ ಅಸ್ಪಷ್ಟವಾಗಿ ಕೇಳಿಸುತ್ತಿತ್ತು. ಮೊದಲು ಡ್ರೈವಿಂಗ್ ಲೈಸೆನ್ಸ್, ನಂತರ ಇನ್ಶೂರೆನ್ಸ್, ಆಮೇಲೆ ಎಮಿಶನ್ ಟೆಸ್ಟ್ ಸರ್ಟಿಫಿಕೇಟ್ ತೋರಿಸಲು ಕೇಳಿದರು ಎಲ್ಲವೂ ಸರಿ ಇತ್ತು. ಹಾಗಾಗಿ ಅವರನ್ನು ಸುಮ್ಮನೆ ಬಿಟ್ಟು ಕಳುಹಿಸ ಬಹುದೆಂದು ಎಣಿಸಿದ್ದ ನನಗೆ ಅಚ್ಚರಿಯಾದ ಸಂಗತಿ ಏನೆಂದರೆ ಸೋಫಾ ರಿಪೇರಿಮಾಡುವ ಸ್ಪಂಜಿನ ರೋಲ್ ತೋರಿಸಿ ಓವರ್ ಲೋಡ್ ಹಾಕಿಕೊಂಡು ಹೋಗುತ್ತಿದ್ದೀಯಾ ಎಂದು ತಿಳಿಸಿ ಮುನ್ನೂರು ರೂಪಾಯಿ ದಂಡ ತೆರಲು ಸೂಚಿಸಿದರು. ಆಗ ಆತ ಸಾರ್ ಇದು ಸ್ಪಾಂಜ್ ಸಾರ್, ಭಾರ ಇರೋದಿಲ್ಲ. ನೋಡೋದಿಕ್ಕೆ ದೊದ್ಡದಾಗಿ ಕಾಣುತ್ತದೆ ಎಂದು ಪರಿ ಪರಿಯಾಗಿ ಬೇಡಿದರೂ ಅವರ ಮನ ಕರಗಲೇ ಇಲ್ಲ. ಸರಿ ಎಂದು ನೂರರ ನೋಟೊಂದನ್ನು ಕೈಗಿತ್ತ. ಕೊಟ್ಟ ನೋಟೋಂದ್ದನ್ನು ಹಿಂದಿನ ಕಿಸೆಗೆ ಇರಿಸುತ್ತಾ ಬಿಟ್ಟು ಕಳುಹಿಸಿದರು. ತಮ್ಮ ಹೊಟ್ಟೇ ಪಾಡಿಗೆ ಮಾಡುವ ಕೆಲಸದ ಕೆಲ ವಸ್ತುಗಳನ್ನು ತನ್ನ ಸ್ವಂತ ವಾಹನದಲ್ಲಿ ತೆಗೆದುಕೊಂಡು ಹೋಗುವವರ ಬಳಿಯೂ ಸುಲಿಗೆ ಮಾಡುವವರ ವಿರುದ್ಧ ಕ್ರಮವಿಲ್ಲವೇಕೇ?

ಪ್ರಸಂಗ -4

ಕೆಲ ದಿನಗಳ ಹಿಂದೆ ಜಾಲಹಳ್ಳಿ ಸರ್ಕಲ್ಲಿನಿಂದ ನೆಲಮಂಗಲದ ಕಡೆಗೆ ಹೋಗುವಾಗ ಪಾರ್ಲೇ ಜೀ ಬಿಸ್ಕೆಟ್ ಕಂಪನಿಯ ಮುಂಚೆ ಇರುವ ಟೋಲ್ ಗಿಂತ ಸ್ವಲ್ಪ ಮುಂಚೆ ಹಲವಾರು ವಾಹನಗಳು ಎಡಗಡೆ ತಿರುಗಿಕೊಳ್ಳುಲು ಅವಕಾಶ ಇದೆ. ಹಾಗಾಗಿ ಅಲ್ಲೊಂದು ಕಭ್ಭಿಣದ ತಡೆಗೋಡೆ ಇಟ್ಟಿರುವ ಕಾರಣ ಅಲ್ಲಿ ಅನೇಕ ಬಾರಿ ವಾಹನ ದಟ್ಟಣೆಯಾಗುತ್ತದೆ. ಹಾಗೆ ಸುಮಾರು ಐದು ಹತ್ತು ನಿಮಿಷ ಅಂಬೆಗಾಲಿನ ಟ್ರಾಫಿಕ್ಕಿನಿಂದ ಬೇಸತ್ತು ಆ ತಡೆಯನ್ನು ದಾಟಿ ಮುಂದು ಖಾಲಿ ಇರುವ ರಸ್ತೆಯಲ್ಲಿ ಹೋಗಲು ಗೇರ್ ಬದಲಾಯಿಸಿ, ಆಕ್ಸಲರೇಟರ್ ಒತ್ತುತ್ತಿದ್ದಂತೆಯೇ ಅಲ್ಲೊಂದು ಪೋಲೀಸ್ ವಾಹನವಿರುತ್ತದೆ ಮತ್ತು ಮೂರ್ನಾಲ್ಕು ಜನ ಪೋಲೀಸರು ಕೈಯಲ್ಲಿ ಲಾಟಿ ಹಿಡಿದು ಬಹುತೇಕ ಎಲ್ಲಾ ವಾಹನಗಳನ್ನೂ ತಡೆ ಹಾಕಿ ಸಾರ್ ಓವರ್ ಸ್ಪೀಡ್ನಲ್ಲಿ ಹೋಗುತ್ತಿದ್ದೀರಾ, ಅಲ್ಲಿ ಸಾಹೇಬರ ಬಳಿ ಹೋಗಿ ನೋಡಿ ಎನ್ನುತ್ತಾರೆ. ಹಾಗೆ ಪೋಲೀಸ್ ವಾಹನದಲ್ಲಿ ಕುಳಿತಿರುವ ಇನ್ಪಪೆಕ್ಟರ್ ಬಳಿ ಹೋದರೆ ಸಾರ್ ಮುನ್ನೂರು ರೂಪಾಯಿ ಫೈನ್ ಕಟ್ಟಿ ಎನ್ನುತ್ತಾರೆ. ಸಾರ್ ನಾವೇನು ಸ್ಫೀಡಿನಲ್ಲಿ ಹೋಗುತ್ತಿಲ್ಲ ಎಂದರೆ ಹೋಗಿ ಅಲ್ಲಿ ನೋಡಿ ಎಂದು ವಾಹನದ ಹಿಂಬದಿಯತ್ತ ಕೈ ಸೂಚಿಸುತ್ತಾರೆ. ಅಲ್ಲಿ ಕ್ಯಾಮೆರಾದಲ್ಲಿ ವಾಹನದ ಸ್ಪೀಡ್ ತೋರಿಸಿದಾಗ ನನ್ನ ವಾಹನ 62 ಕಿಮೀ ಸ್ಪೀಡಿನಲ್ಲಿ ಚಲಾಯಿಸಿದ್ದೀರೀ ಇಲ್ಲಿ ಕಾರ್ ಗಳು 60ಕಿ ಮೀಗಿಂತ ಹೆಚ್ಚಿನ ವೇಗದಲ್ಲಿ ಚಲಾಯಿಸುವಂತಿಲ್ಲ ಹಾಗಾಗಿ ಫೈನ್ ಕಟ್ಟಿ ಎನ್ನುತ್ತಾರೆ. ಅಷ್ಟು ಹೊತ್ತು ಕೃತಕ ವಾಹನ ದಟ್ಟಣೆಯಲ್ಲಿ ಬೇಸತ್ತು ಸ್ವಲ್ಪ ಜೋರಾಗಿ ಮಂದೆ ಖಾಲಿ ರಸ್ತೆ ಯಲ್ಲಿ 2 ಕಿಮೀ ಹೆಚ್ಚಾಗಿ ಹೋಗಿದ್ದಕ್ಕೆ 300ರೂ ದಂಡಾನಾ ಅಂತಾ ಕೇಳಿದರೆ, ಸಾರ್ ಇನ್ನೊಂದು ಹತ್ತು ದಿನ ತಡೆರೀ ಇದಕ್ಕೇ 1000 ರೂ ದಂಡ ಕಟ್ಟಬೇಕಾಗುತ್ತದೆ ಎಂದರು ಗಾಡಿಯಲ್ಲಿ ಕುಳಿತಿದ್ದ ಇನ್ಸ್ಪೆಕ್ಟರ್. ಸುಂಕದವನ ಮುಂದೆ ಸಂಕಟ ಹೇಳಿಕೊಂಡರೆ ಏನೂ ಸುಖವಿಲ್ಲ ಎಂದು ಪರ್ಸಿನಿಂದ ಡೆಬಿಟ್ ಕಾರ್ಡ್ ತೆಗೆದು ಕೊಟ್ಟರೆ, ಕಾರ್ಡ್ ಇಲ್ಲಾ ಸಾರ್, ಓನ್ಲಿ ಕ್ಯಾಶ್ ಎಂದು ಮುಖಕ್ಕೆ ಹೊಡೆದಂತೆ ಉತ್ತರ ಬಂತು. ಅಲ್ಲಾ ಸಾರ್, ನಿಮ್ಮ ಹತ್ತಿರ ಇರೋ ಮೆಷಿನ್ನಲ್ಲಿ ಸ್ವೈಪಿಂಗ್ ಮಾಡಬಹುದಲ್ವಾ ಅಂತ ಕೇಳಿದಕ್ಕೆ, ಸುಮ್ಮನೆ ತಲೆ ಹರಟೆ ಮಾಡಬೇಡಿ. ಅದೆಲ್ಲಾ ಕೆಲಸ ಮಾಡ್ತಾ ಇಲ್ಲಾ.. ತೆಗಿರಿ ತೆಗಿರಿ ದುಡ್ಡು ಎಂದು ಏರು ಧನಿಯಲ್ಲಿ ಕೇಳಿದಾಗ ಒಲ್ಲದ ಮನಸ್ಸಿನಿಂದಲೇ ಐದು ನೂರರ ನೋಟೋಂದನ್ನು ಅವರ ಕೈಗಿತ್ತು ಬಿಲ್ ಜೊತೆ ಇನ್ನೂರರ ನೋಟನ್ನು ಆವರಿಂದ ತೆಗೆದು ಕೊಂಡು ಭಾರದ ಮನಸ್ಸಿನಿಂದ ಬರುತ್ತಿದ್ದದ್ದನ್ನು ಗಮನಿಸಿದ ನನ್ನಾಕಿ ಏನಾಯ್ತು ಎಂದು ಕೇಳಿದಾಗ, ಅವೇಶದಲ್ಲಿ ಏನಿಲ್ಲಾ ಹಗಲು ದರೋಡೆ ಎಂದೆ. ಹಾಗೆ ಹಗಲು ದರೋಡೆ ಅಂದದ್ದು ಅಲ್ಲೇ ಲಾಟಿ ಹಿಡಿದುಕೊಂಡಿದ್ದ ಪೇದೇಗೇಕೆ ಚುಚ್ಚಿತೋ ಕಾಣೆ. ಕೂಡಲೇ ಏನು ಹಗಲು ದರೋಡೆ ಅಂತೀರೀ ಅಂದವನೇ ತನ್ನ ಮೊಬೈಲ್ನಲ್ಲಿ ನನ್ನ ಮತ್ತು ನನ್ನ ಕಾರ್ ಫೋಟೋ ಕ್ಲಿಕ್ಕಿಸ ತೊಡಗಿದ. ಕಾನೂನು ಪರಿಪಾಲಕರು ಎನ್ನುವ ಮಂದಿಗೆ ಅನುಮತಿ ಇಲ್ಲದೇ ಬೇರೊಬ್ಬರ ಫೋಟೋವನ್ನು ತಮ್ಮ ವಯಕ್ತಿಕ ಮೊಬೈಲ್ನಲ್ಲಿ ಸೆರೆ ಹಿಡಿಯುವುದೂ ತಪ್ಪೆಂದು ಗೊತ್ತಿಲ್ಲವೇ? ಕೂಡಲೇ ನಾನು ಮತ್ತು ನನ್ನ ಮಡದಿ ಅದನ್ನು ಪ್ರತಿಭಟಿಸಿ ದಂಡ ಕಟ್ಟಿದ್ದೇವೆ. ಇನ್ನೇಕೆ ಫೋಟೋ ತೆಗೆಯುತ್ತಿದ್ದೀರಿ, ಮೊದಲು ಫೋಟೋ ಅಳಿಸಿ ಎಂದು ದಬಾಯಿಸಿದಾಗ ಮತ್ತೊಬ್ಬ ಪೇದೆ ಬಂದು ನಮ್ಮನ್ನು ಸಮಾಧಾನ ಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಕೃತಕ ತಡೆ ಗೋಡೆ ನಿರ್ಮಿಸಿ ದಂಡವನ್ನು ನಗದಿನ ರೂಪದಲ್ಲೇ ಸುಲಿಗೆ ಮಾಡುವುದಲ್ಲದೇ, ತಮ್ಮ ಖಾಸಗೀ ಮೊಬೈಲ್ನನಲ್ಲಿ ಇನ್ನೊಬ್ಬರ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡುವವರ ವಿರುದ್ಧ ಕ್ರಮವಿಲ್ಲವೇಕೇ?

ಇಡೀ ದೇಶವೇ ಡಿಜಿಟಲ್ ಇಂಡಿಯಾ ಎಂದು ಡಿಜಿಟಲೀಕರಣದತ್ತ ಹೋಗುತ್ತಿದೆ. ನಗದು ವ್ಯವಹಾರದ ಬದಲು ಕಾರ್ಡ್ ಇಲ್ಲವೇ ನೇರ ಬ್ಯಾಂಕಿಂಗ್ ಮೂಲಕದ ವ್ಯವಹಾರವನ್ನು ಸರ್ಕಾರವೇ ಪ್ರೋತ್ಸಾಹಿಸುತ್ತಿರುವಾಗ, ಇವರೇಕೆ ದಂಡವನ್ನು ನಗದಿನ ರೂಪದಲ್ಲೇ ಕಟ್ಟಿಸಿಕೊಳ್ಳಬೇಕು. ಸರಿ ಒಂದು ಪಕ್ಷ ಕಾರ್ಡ್ ಸ್ವೈಪಿಂಗ್ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಅದನ್ನೇಕೆ ಸರಿ ಪಡಿಸಿಕೊಳ್ಳಬಾರದು? ಇವರ ಈ ರೀತಿಯ ನಡೆ, ಅವರು ಕೊಟ್ಟ ಬಿಲ್ ಮತ್ತು ನಾವು ಹಣ ಸರ್ಕಾರಕ್ಕೇ ತಲುವುದೇ ಎಂಬ ಅನುಮಾನ ಬರುವುದಿಲ್ಲವೇ? ಹಲವಾರು ವರ್ಷದ ಹಿಂದೆ ನಕಲಿ ಬಿಲ್ ತಯಾರಿಸಿ ಒಂದಲ್ಲಾ ಎರೆಡೆರಡು ಬಾರಿ ಸಿಕ್ಕಿಹಾಕಿಕೊಂಡು ಪೋಲೀಸ್ ಇಲಾಖೆಯಿಂದ ಸಸ್ಪೆಂಡ್ ಆಗಿ ಅಲ್ಲಿಂದ ಹೊರಬಂದು ರಾಜಕೀಯ ಸೇರಿ ಶಾಸಕರಾಗಿ ಮಂತ್ರಿಯೂ ಆಗಿ ಹೋಗಿದ್ದು ಈಗ ಇತಿಹಾಸ. ಅದೇ ರೀತಿ ಮಾಹಿತಿ ಪಡೆದ ಪೋಲೀಸ್ ಅಧಿಕಾರಿಗಳೇ ಕಳ್ಳರ ರೂಪದಲ್ಲಿ ಬಂದು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಚಿನ್ನದ ವ್ಯಾಪಾರಿಯನ್ನು ಬೆದರಿಸಿ ಕೋಟ್ಯಾಂತರ ರೂಪಾಯಿಗಳ ಬೆಲೆ ಬಾಳುವ ಗಟ್ಟಿ ಚಿನ್ನವನ್ನು ದೋಚಿ ಕೊನೆಗೆ ಸಾರ್ವಜನಿಕರಿಗೆ ಪೋಲೀಸ್ ಅಧಿಕಾರಿಗಲೇ ದರೋಡೆ ಮಾಡಿದ್ದ ವಿಷಯತಿಳಿದು ಹಲವಾರು ತಿಂಗಳುಗಳು ಕದ್ದು ಮುಚ್ಚಿಟ್ಟು ಕೊಂಡಿದ್ದು ಕೊನೆಗೆ ಆ ಕೇಸ್ ಹಳ್ಳ ಹಿಡಿಸಿರುವ ಉದಾಹಣೆಗಳೂ ಬಹಳಷ್ಟಿವೆ.

ನೆನ್ನೆಯಿಂದ ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಹಿಂದಿಗಿಂತ ಮೂರ್ನಾಲ್ಕು ಪಟ್ಟಿನ ದಂಡವನ್ನು ಏರಿಸುವ ಆದೇಶವನ್ನು ಜಾರಿಗೆ ಮಾಡಿದ್ದಾರೆ. ಈ ರೀತಿಯಾಗಿ ಮಾಡಿರುವುದು ಸಕಲ ಭಾರತೀಯರಿಗೂ ಬೇಸರ ತಂದರೆ, ಸಂಚಾರೀ ಆರಕ್ಷರಿಗೆ ಮಾತ್ರ ತಮ್ಮ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿದೆ. ಇಷ್ಟು ದಿನ ನೂರಿನ್ನೂರು ಲಂಚ ಪಡೆಯುತ್ತಿದ್ದವರು ಇನ್ನು ಮುಂದೆ ಐದು ನೂರಿಗಿಂತ ಕಡಿಮೆ ಲಂಚ ಪಡೆಯುವುದಿಲ್ಲಾ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ. ದಂಡವನ್ನು ಹೆಚ್ಚಿಸುವುದರಿಂದ ಅಪರಾಧಗಳನ್ನು ತಪ್ಪಿಸಬಹುದು ಎಂದು ತಿಳಿದು ಈ ಕಾನೂನು ತರಲು ಪ್ರೇರೇಪಿಸಿದ ಅಧಿಕಾರಿಗಳ ಬುದ್ಧಿ ಮತ್ತೆಗೆ ನಮೋ ನಮಃ.

ಹಾಗೆಂದ ಮಾತ್ರಕ್ಕೆ ನನಗೆ ಪೋಲಿಸರ ಮೇಲೇ ಆಕ್ರೋಶವಿದೆ ಎಂದಲ್ಲಾ. ವಯಕ್ತಿವಾಗಿ ನನ್ನ ರಕ್ತ ಸಂಬಂಧಿಗಳಲ್ಲಿಯೂ ಪೋಲೀಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರಿದ್ದಾರೆ. ಇಂದಿಗೂ ಅವರ ಶಿಸ್ತು , ಸಮಯ ಪ್ರಜ್ಞೆ ನಮಗೆಲ್ಲಾ ಆದರ್ಶಪ್ರಾಯವಾಗಿದೆ ಮತ್ತು ಅವರಿಂದ ಅಂತಹ ಸದ್ಗುಣಗಳನ್ನು ಅಳವಡಿಸಿಕೊಂಡೂ ಇದ್ದೇವೆ. ಕೆಲ ದಿನಗಳ ಹಿಂದೆ ಬಸ್ ಸ್ಟಾಂಡಿನಲ್ಲಿ ನಿಂತಿರುವಾಗ ಏನೋ ಕೊಡಿಸಲು ಹಠ ಮಾಡುತ್ತಿದ್ದ ಮಗುವೊಂದನ್ನು ಸಮಾಧಾನ ಪಡಿಸಲು ಅಲ್ಲಿಯೇ ಇದ್ದ ಪೋಲೀಸರನ್ನು ತೋರಿಸಿ, ನೋಡು ಸುಮ್ಮನಾಗದಿದ್ದರೆ ಪೋಲಿಸರಿಗೆ ಹಿಡಿದು ಕೊಟ್ಟು ಬಿಡುತ್ತೇನೆ ಎಂದು ಆ ತಾಯಿ ಗದರಿಸಿದಾಗ ಸಮವಸ್ತ್ರದಲ್ಲಿದ್ದ ಸ್ವಲ್ಪ ಹಿರಿಯ ಪೋಲೀಸರನ್ನು ನೋಡಿ ಭಯಭೀತವಾದ ಆ ಮಗು ಆ ಕೂಡಲೇ ತನ್ನ ಹಠವನ್ನು ನಿಲ್ಲಿಸಿತು. ಈ ಪ್ರಸಂಗವನ್ನು ನೋಡಿದ ಆ ಹಿರಿಯ ಪೋಲೀಸರು ಆ ತಾಯಿಯ ಬಳಿ ಬಂದು ನೋಡಮ್ಮಾ ಹಾಗೆಲ್ಲಾ ಮಕ್ಕಳಿಗೆ ಪೋಲೀಸರ ಮೇಲೆ ಭಯ ಪಡಿಸಬೇಡಿ ಎಂದು ತಿಳಿ ಹೇಳಿ. ಕಂದಾ ನಾವೂ ಒಳ್ಳೆಯವರೇ ಎಂದು ಆ ಮಗುವನ್ನು ಕರೆದುಕೊಂಡು ಹೋಗಿ ತಮ್ಮ ವಯಕ್ತಿಕ ಹಣದಲ್ಲಿ ಚಾಕ್ಲೇಟ್ ತೆಗೆದು ಕೊಟ್ಟಿದ್ದನ್ನೂ ನೋಡಿ, ಅಬ್ಬಾ ಇಂತಹ ಒಳ್ಳೆಯ ಪೋಲಿಸರ ಸಂಖ್ಯೆ ಹೆಚ್ಚಾಗಲಿ ಎಂದೂ ಅನಿಸಿದ್ದಿದೆ.

ಹೀಗೆ ಹೇಳುತ್ತಾ ಹೋದರೆ ನೂರಾರೇನು ಸಾವಿರಾರು ಉದಾಹರಣೆಗಳನ್ನು ಕೊಡಬಹುದು. ಧುರಳರೂ ಕೇವಲ ಪೋಲೀಸ್ ಇಲಾಖೆಯಲ್ಲಿ ಮಾತ್ರವೇ ಇಲ್ಲ. ಎಲ್ಲಾ ಕಡೆಯಲ್ಲಿಯೂ ಇದ್ದಾರೆ. ಅದರೆ ಕಾನೂನು ಪಾಲಕರಾಗಿ ಪ್ರತಿಜ್ಞಾವಿಧಿಯನ್ನು ಬೋಧಿಸಿಕೊಂಡು ಸರ್ಕಾರಿ ಸಂಬಳ ಮತ್ತು ನಾನಾ ರೀತಿಯ ಸವಲತ್ತುಗಳನ್ನೂ ಪಡೆದು ಕೊಂಡು ಕಾನೂನು ಬಾಹೀರ ಚಟುವಟೆಕೆಗಳಿಗೆ ಪ್ರತ್ಯಕ್ಷವಾಗಿಯೋ ಇಲ್ಲವೇ ಪರೋಕ್ಷವಾಗಿಯೋ ಸಹಕರಿಸುತ್ತಿರುವುದು ಎಷ್ಟು ಸರಿ? ಇದರಿಂದ ಆ-ರಕ್ಷರ ಮೇಲಿನ ನಂಬಿಕೆಯೇ ಕಡಿಮೆಯಾಗಿ ಹೋಗುತ್ತಿದೆ/ಹೋಗಿದೆ ಎಂದರೆ ಅತಿಶಯೋಕ್ತಿಯಲ್ಲಾ ಅಲ್ಲವೇ?

ಏನಂತೀರೀ?

7 thoughts on “ಆ-ರಕ್ಷಕರೋ ಇಲ್ಲಾ ಭಕ್ಷಕರೋ?

  1. ನಿಮ್ಮ ಅನುಭವಗಳು ನಮ್ಮೆಲ್ಲರ ಅನುಭವಗಳೂ ಹೌದು. ವ್ಯವಸ್ಥೆಗೆ ಬೇಸತ್ತು ಹೋಗಿ ವಿಧಿ ಇಲ್ಲದೆ, ಸಮಯವನ್ನು ವ್ಯರ್ಥ ಮಾಡಿಕೂಳ್ಳಲು ಇಷ್ಟವಿಲ್ಲದೆ ಕೇಳಿದಷ್ಟನ್ನು ಕೂಟ್ಟು ಬಂದದ್ದಿದೆ.

    Like

  2. Police Dept generates money to govt and parties for elections… They have targets.. to get a job they pay and collect.
    Not easy… A vicious circle

    Like

  3. ಸ್ವಾಮಿ, ಇದೊಂದು ಬಹು ದೊಡ್ಡ ವಿಷವರ್ತುಲ. ಇದರ ಆರಂಭ ಎಲ್ಲೋ, ಕೊನೆ ಎಲ್ಲೋ ಹುಡುಕಲು ಅಸಾಧ್ಯವಾದ ಮಾತು. ನದಿ ಮೂಲ, ಋಷಿಮೂಲ ಹುಡುಕಬಾರದು ಎಂಬ ಮಾತಿದೆ. ಹಾಗೆಯೇ ಇದೂ ಕೂಡ.
    ಯಾವುದರಿಂದ ಇದರ ಪ್ರಾರಂಭ, ಎಲ್ಲಿ ಕೊನೆ ಹೇಳಿ ನೋಡೋಣ. ನಮ್ಮ ಸಾಮಾಜಿಕ ವ್ಯವಸ್ಥೆಯೇ ಹಾಗಿದೆ. ನಮಗೆ ಅನುಕೂಲ ಆಗಲಿ, ನಮ್ಮ ಸಮಯಕ್ಕೆ ನಮಗನುಗುಣವಾಗಿ ಕೆಲಸವಾಗಲು ಹತ್ತೋ ನೂರೋ ತಳ್ಳಿದಾರಯಾತು, ಕಾಯುವುದು ಯಾರು ಎಂದು ಜನ ಯೋಚಿಸಿದರೆ, ಜನ ತಮ್ಮ ಕೆಲಸ ಆಗಲೆಂದು ಕೊಟ್ಟೆ ಕೊಡುತ್ತಾರೆಂದು ಅಧಿಕಾರಿಗಳು ನಂಬಿದ್ದಾರೆ. ಹಾಗೆಯೇ, ನಾವು ಬದುಕಿ ಬಾಳುತ್ತಿರುವ ಕಾಲ ನಿಸ್ಸಂಶಯವಾಗಿ ಮೀಸಲಾತಿ, ಜಾತಿ ರಾಜಕಾರಣದಿಂದ ಕೂಡಿದ್ದು, ಅದರ ಪರಿಣಾಮವಾಗಿ ಅನ್ಯಾಯಕ್ಕೆ ಒಳಗಾದ ಪಂಗಡವರು ಅಧಿಕಾರ ವ್ಯವಸ್ಥೆಯಲ್ಲೇ ಅರಾಜತಕತೆ ತಂದೊಡ್ಡಿ, ಲಂಚಗುಳಿತನಕ್ಕೆ ಎಡೆಮಾಡಿಕೂತಿದ್ದಾರೆ.
    ಒಂದು ಸಣ್ಣ ಉದಾಹರಣೆ – ವರ್ಗಾವಣೆ ದಂಧೆ. ಇಂತಹದೇ ಜಾಗಕ್ಕೆ, ಇಂತಿಷ್ಟಕಾಲಕ್ಕೆ ಅವರ ನೇಮಕಾತಿ ಪಡೆಯಲು ಲಕ್ಷಗಟ್ಟಲೆ ಲಂಚ ಕೊಟ್ಟು ಬರುವವರಿದ್ದಾರೆ. ಅವರೆಲ್ಲಿಂದ ಸಂಪಾದಿಸಬೇಕು ಆ ದುಡ್ಡನ್ನ? ಸಾಮಾನ್ಯ ಜನರಿಂದ ಕೊಳ್ಳೆಹೊಡೆಯಬೇಕುತಾನೇ?
    ಇಂತಹ ಉದಾಹರಣೆಗಳು ಎಲ್ಲ ರಂಗಗಳಲ್ಲೂ ಇದ್ದೆ ಇದೆ. ಇದೆಕ್ಕೆ ಕೊನೆಯಿಲ್ಲ.
    ಹುಚ್ಚುಮುಂಡೆ ಮದುವೇಲಿ ಉಂಡವನೇ ಜಾಣ.
    ಎಷ್ಟು ಸಾಧ್ಯವೋ ಅಷ್ಟು ಕಾನೂನು ಪಾಲಿಸಿ, ಕಾನೂನಿಗೆ ವಿರುದ್ಧ ಕೆಲಸ ಮಾಡದೆ ಇದ್ದು, ಇಂತಹ ಸಂದರ್ಭಗಳಿವೆ ಎಡೆ ಮಾಡಿಕೊಡದೆ ಜೀವನ ನಡೆಸುವುದು ಒಳಿತು. ಕಾಲಾಯ ತಸ್ಮೈ ನಮಃ… ಎಲ್ಲಕ್ಕೂ ಒಂದು ಮಿತಿ, ಒಳ್ಳೆ ಕಾಲ ಕೂಡಿಬರುತ್ತೆ. ನಮ್ಮ ನಮ್ಮ ಕರ್ತವ್ಯ ಧರ್ಮಕ್ಕಾನುಸಾರವಾಗಿ ಪರಿಪಾಲಿಸೋಣ.
    ಇದು ಕಲಿಗಾಲ. ಅನ್ಯಾಯಗಳು ಜಾಸ್ತಿ.

    Liked by 1 person

  4. […] ದೇಶ ನಡೆಸಲು ಖಂಡಿತವಾಗಿಯೂ ಹಣ ಅತ್ಯಾವಶ್ಯಕ. ವಿವಿಧ ರೀತಿಯ ತೆರಿಗೆಯ ರೂಪಾದಲ್ಲಿ ಜನರಿಂದ ಹಣವನ್ನು ಸಂಗ್ರಹ ಮಾಡಲಾಗುತ್ತಿದೆ. ಇದಾದ ಮೇಲೂ ಈ ರೀತಿಯಾಗಿ ಹತ್ತು ಪಟ್ಟು ಹೆಚ್ಚಿನ ದಂಡ ನಿಜಕ್ಕೂ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆಯೇ. ಆರಂಭ ಶೂರತ್ವದಂತೆ, ಮೊದ ಮೊದಲು ಸ್ವಲ್ಪ ಹೆಚ್ಚಿನ ಮೊತ್ತದ ದಂಡ ಸರ್ಕಾರಕ್ಕೆ ಸಂದಾಯವಾದರೂ ನಂತರದ ದಿನಗಳಲ್ಲಿ ಸರ್ಕಾರಿ ಖಜಾನೆಗೆ ತಲುಪದೇ ನೇರವಾಗಿ ಪೋಲಿಸರ ಜೋಬಿನ ಪಾಲಾಗುವುದರಲ್ಲಿ ಸಂದೇಹವೇ ಇಲ್ಲ. ಪ್ರತಿದಿನ ಲಂಚದ ರೂಪದಲ್ಲಿ 500- 1000 ರೂಗಳನ್ನು ಮನ್ಗೆಗೆ ಕೊಂಡೊಯ್ಯುತ್ತಿದ್ದ ಪೋಲೀಸರು ಇನ್ನು ಮುಂದೆ 5000-10000 ವರೆಗೂ ಲಂಚದ ಹಣವನ್ನು ತೆಗೆದುಕೊಂಡು ಹೋಗಿ ಅವರು ಉದ್ದಾರವಾಗುತ್ತಾರೆಯೇ ಹೊರತು ಸರ್ಕಾರಕ್ಕೆ ಏನೂ ಲಾಭವಾಗುವುದಿಲ್ಲ ಜನಾ ಬದಲಾಗುವುದಿಲ್ಲ. ಆ-ರಕ್ಷಕರೋ ಇಲ್ಲಾ ಭಕ್ಷಕರೋ?  […]

    Like

Leave a comment