ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ

ವಿದ್ಯಾರಣ್ಯಪುರ ಮಂಥನದ ಹತ್ತನೇ ಕಾರ್ಯಕ್ರಮ ನಿಗಧಿಯಾಗಿದ್ದಂತೆ, ಮಳೇ ನೀರಿನ ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆ ಕುರಿತಾದ ವಿಷಯದ ಬಗ್ಗೆ ಕಾರ್ಯಕ್ರಮದ ಇಂದಿನ ವಕ್ತಾರರಾದ ಶ್ರೀಯುತ ವಿಶ್ವನಾಥ್ ಶ್ರಿಕಂಠಯ್ಯ (ಜಲ ಸಂರಕ್ಷರು ಮತ್ತು ಮಳೆ ನೀರು ಕೊಯ್ಲು ತಜ್ಞರು) ಅವರ ಅಮೃತ ಹಸ್ತದಿಂದ ಭಾರತಮಾತೆಗೆ ಪುಷ್ಪಾರ್ಚನೆ ಸಲ್ಲಿಸುವುದರೊಂದಿಗೆ ಮತ್ತು ಶ್ರೀಮತಿ ಪ್ರೀತಿ ಜಯಂತ್ ಅವರ ಸುಶ್ರಾವ್ಯ ಕಂಠದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ನಮ್ಮ ದೇಶದ ಸಂಸ್ಕೃತಿ ಮತ್ತು ಇತಿಹಾಸ ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಸಿಂಧೂ ನದಿ ಮತ್ತು ಸರಸ್ವತಿ ನದಿಗಳ ಜೊತೆ ಜೊತೆಗೆ ಜೊತೆಗೆ ಹೋಲಿಸಿ ನೋಡುತ್ತವಾದರೂ ಅನೇಕ ಕಡೆ ಉತ್ಕತನ ಮಾಡಿ ನೊಡಿದಾಗ ಬಹುತೇಕ ಎಲ್ಲರ ಮನೆಗಳಲ್ಲಿಯೂ ಭಾವಿಯ ಬಳಕೆ ಮತ್ತು ಅತ್ಯುತ್ತಮ ಒಳಚೆರಂಡಿಯ ವ್ಯವಸ್ಥೆ ಇದ್ದದ್ದು ನಮಗೆ ಕಂಡು ಬರುತ್ತದೆ. ಅಂದರೆ ನಮ್ಮ ದೇಶದ ಜನತೆ ನದಿ ನೀರಿಗಿಂತಲೂ ಅಂತರ್ಜಲದ ಬಳಕೆಯನ್ನೇ ಹೆಚ್ಚಾಗಿ ಅವಲಂಭಿಸಿದ್ದರು ಎಂದು ತಿಳಿದು ಬರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಮಗೆ ತಿಳಿದಿರುವ ಅಂಕಿ ಅಂಶದ ಪ್ರಕಾರ 33 ದಶಲಕ್ಷ ಭಾವಿಗಳು ಮತ್ತು ಕೊಳವೇ ಭಾವಿಗಳ ಮೂಲಕ ನೀರನ್ನು ಬಳಸುತ್ತಿದ್ದೇವೆ. ನಮ್ಮ ದೇಶದಲ್ಲಿ ಇಂದು 250 Cubic sq KM ಅಂತರ್ಜಲವನ್ನು ಬಳಕೆ ಮಾಡುತ್ತಿದ್ದರೆ, ಚೀನಾ ಮತ್ತು ಅಮೇರಿಕಾ ದೇಶ ಎರಡೂ ಸೇರಿ ಕೇವಲ 200 Cubic sq KM ಅಂತರ್ಜಲವನ್ನು ಮಾತ್ರವೇ ಬಳಕೆ ಮಾಡುತ್ತಿದ್ದಾರೆ. ಹೀಗೆ ಗೊತ್ತು ಗುರಿ ಇಲ್ಲದ್ದೇ ಎಗ್ಗಿಲ್ಲದೆ ಅಂತರ್ಜಲ ಬಳಕೆ ಮಾಡುತ್ತಿರುವ ಕಾರಣದಿಂದಾಗಿ ಇಂದು ಸುಮಾರು 800-2000 ಅಡಿಗಳವರೆಗೂ ಕೊರೆದರೂ ನೀರು ಸಿಗದಾಗುತ್ತಿದೆ. ಸುಮಾರು 180-200 ಅಡಿಗಳಲ್ಲಿರುವ ಫ್ಲೋರೈಡ್ ಮತ್ತು ಓರ್ಸೆನಿಕ್ ಪದರಗಳು ನೀರಿನಲ್ಲಿ ಬೆರೆತು ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹೀಗೆ ಅಂತರ್ಜಲವನ್ನು ಹೆಚ್ಚು ಹೆಚ್ಚು ಕೊರೆದೆಂತಲ್ಲಾ ನದಿಗಳ ಸೆಲೆಗಳೂ ಬತ್ತಿ ಹೋಗುತ್ತಿವೆ. ನೀರಿಗಾಗಿ 30 ಅಡಿಗಳಿಗಿಂತಲೂ ಹೆಚ್ಚಾಗಿ ಭೂಮಿಯನ್ನು ಕೊರೆದಂತೆಲ್ಲಾ ನದಿಯೂ ಬತ್ತ ತೊಡಗುತ್ತದೆ. 1982ರ ವರೆಗೂ ಜೀವಂತವಿದ್ದ ಅರ್ಕಾವತಿ ನದಿ ಇಂದು ಕೇವಲ ಮಳೆಗಾಲದಲ್ಲಿ ಮಾತ್ರವೇ 15ದಿನಗಳಷ್ಟು ಸಂಪೂರ್ಣವಾಗಿ ಹರಿದರೆ ಹೆಚ್ಚೆನಿಸುತ್ತದೆ. ಹಾಗಾಗಿ ಗಂಗೆ, ಯಮುನಾ, ಅರ್ಕಾವತಿ ನದಿಗಳು ವರ್ಷದ ಮುನ್ನೂರೈವತ್ತು ದಿನಗಳೂ ಹರಿಯಬೇಕೆಂದರೆ ಮೋಡಗಳನ್ನು ಆಕರ್ಷಿಸಿ ಮಳೆ ಸುರಿಸಲು ಡಟ್ಟವಾದ ಮರಗಿಡಗಳು ಅವಶ್ಯಕವಾದರೆ, ಹಾಗೆ ಸುರಿದ ಮಳೆ ನೀರು ಸರಿಯಾಗಿ ನೀರಿನಲ್ಲಿ ಇಂಗಿಸಿ ಅಂತರ್ಜಲವನ್ನು ಹೆಚ್ಚಾಗಿಸಿದಲ್ಲಿ ಮಾತ್ರವೇ ಸಾಧ್ಯ. ಬೆಂಗಳೂರಿನಲ್ಲಿ ಇಂದು 970 ಮಿಲಿ ಮೀ ಮಳೆಯಾದರೆ ಅದರಲ್ಲಿ ಕೇವಲ 3-8% ನೀರು ಮಾತ್ರ ನೀರಿನಲ್ಲಿ ಇಂಗಿಹೋದರೆ ಅದೂ ಕೇವಲ 1 mts ಅಡಿಗಳಷ್ಟು ಮಾತ್ರವೇ ತಲುಪುತ್ತಿದೆ. ಎಲ್ಲಾಕಡೆಯಲ್ಲೂ ಕಾಂಕ್ರೀಟ್ ಮಯವನ್ನಾಗಿ ಮಾಡಿ ಭೂಮಿಯಲ್ಲಿ ನೀರು ಇಂಗಿ ಹೋಗಲು ಸಾಧ್ಯವೇ ಆಗದೇ ನೀರೆಲ್ಲಾ ವ್ಯರ್ಥವಾಗಿ ಚೆರಂಡಿಗೆ ಸೇರಿ ಕೊಳಚೆ ನೀರಾಗುತ್ತಿರುವುದು ನಿಜಕ್ಕೂ ದೌರ್ಭಾಗ್ಯವೇ ಸರಿ.

ಸುಮಾರು 800-1000 ವರ್ಷಗಳ ಇತಿಹಾಸವಿರುವ ಓಡಿಸ್ಸಾದ ಕಡೆಯಿಂದ ಬಂದಿರ ಬಹುದೆಂಬ ನಂಬಲಾಗಿರುವ ಓಡಿ ಜನಾಂಗ ಅಥವಾ ಒಡ್ಡರು ಇಲ್ಲವೇ ಭೋವಿ ಜನಾಂಗದವರು ನಮ್ಮ ರಾಜ್ಯದಲ್ಲಿರುವ ಅಥವಾ ಇದ್ದಿದ್ದ ಬಹುದಾಗಿದ್ದ ಸಾಕಷ್ಟು ಕೆರೆ ಭಾವಿಗಳನ್ನು ತೋಡಿರ ಬಹುದೆಂದು ಇತಿಹಾಸ ಹೇಳುತ್ತಿದೆ. ಇಂದಿಗೂ ಬೆಂಗಳೂರಿನಲ್ಲಿಯೇ ಸುಮಾರು 800-1000 ಕುಟುಂಬಳು ಇದ್ದೇ ಮಣ್ಣನ್ನೇ ನಂಬಿ ಜೀವನ ಸಾಗಿಸುತ್ತಿವೆ. ಇಂತಹ ಕುಟುಂಬಳಿಗೆ ಸೂಕ್ತ ತರಭೇತಿ ಸುಮಾರು ಎರಡು ಅಡಿಗಳ ವ್ಯಾಸವುಳ್ಳ 8-12 ಆಳದ ಭಾವಿರೀತಿಯ ಹಳ್ಳವನ್ನು ತೋಡಿ ಅದಕ್ಕೆ ಸಿಮೆಂಟ್ ರಿಂಗ್ ಗಳನ್ನು ಅಳವಡಿಸಿ ಮನೆಗಳ ಛಾವಣಿಯ ನೀರನ್ನು ಆ ಇಂಗು ಗುಂಡಿಗೆ ಹೋಗುವಂತೆ ಮಾಡುವ ಮೂಲಕ ಅಂತರ್ಜಲ ಮಟ್ತವನ್ನು ಹೆಚ್ಚಿಸುವ ಕಾರ್ಯ ಈಗ ಜಾರಿಯಲ್ಲಿದೆ.

Screenshot 2019-07-22 at 12.22.17 AM

ಇಂದು ಬೆಂಗಳೂರಿಗೆ ಪ್ರತಿದಿನ ಕಾವೇರಿ ನದಿಯಿಂದ 1400 ದಶಲಕ್ಷ ಲೀಟರ್ ನೀರನ್ನು ಬಳೆಸುತ್ತಿದ್ದೇವೆ. ಆದರೆ ಬೆಂಗಳೂರಿನಲ್ಲಿ ಬೀಳುವ ಮಳೆಯನ್ನು ಪ್ರತಿಯೊಂದು ಮನೆಯವರೂ ಸರಿಯಾಗಿ ಮಳೆ ನೀರು ಕೊಯ್ಲಿನ ಮೂಲಕ ಸಂಗ್ರಹಿಸಿದಲ್ಲಿ ಶೇ 50ರಷ್ಟು ಕಾವೇರಿಯ ನೀರಿನ ಅವಲಂಭನೆಯನ್ನು ಕಡಿಮೆ ಮಾಡ ಬಹುದಾಗಿದೆ. ಮಳೆ ನೀರು ಕೊಯ್ಲು ಮಾಡುವುದು ನಿಜಕ್ಕೂ ಸುಲಭವಾದ ಕೆಲಸ. ಮಳೆಗಾಲದಲ್ಲಿ ಛಾವಣಿಯನ್ನು ಸ್ಚಚ್ಚವಾಗಿ ಇಟ್ಟು ಕೊಂಡು ಅದರ ಮೇಲೆ ಬೀಳುವ ನೀರನ್ನು ಕೊಳವೆಯ ಮೂಲಕ ಒಂದು 60ಲೀಟರ್ ಸಂಗ್ರಹಿಸಲ್ಪಡುವ ಡ್ರಮ್ಮಿಗೆ ಒಂದು ಅಡಿಯಷ್ಟು ಇಜ್ಜಲು ಹಾಕಿ ಅದರ ಮೇಲೆ ಮೂರ್ನಾಲ್ಕು ಪದರದ ನೆಟ್ಲಾನ್ ಪದರವನ್ನು ಹಾಸಿ ಅದರ ಮೇಲೆ ಒಂದು ಶುಭ್ರವಾದ ಬಟ್ತೆಯನ್ನು ಹಾಸಿ ಅದರ ಹಾಯುವಂತೆ ಮಾಡಿ ಶುಧ್ಧೀಕರಿಸಿ ಅದನ್ನು ನಮ್ಮ ನೀರಿನ ಸಂಪ್ ಅಥವಾ ಯಾವುದಾದರೂ ತೊಟ್ಟಿಯಲ್ಲಿ ಸಂಗ್ರಹಿಸಿ ಎಲ್ಲದಕ್ಕೂ ಬಳೆಸಿಕೊಳ್ಳಬಹುದಾಗಿದೆ. ಅದಕ್ಕಿಂತಲೂ ಹೆಚ್ಚಾಗುವ ನೀರನ್ನು ಇಂಗು ಗುಂಡಿಗಳ ಮೂಲಕ ಭೂಮಿಯೊಳಗೆ ಹಾಯುವಂತೆ ಮಾಡಿ ಅಂತರ್ಜಲವನ್ನು ಹೆಚ್ಚಿಸಬಹುದಾಗಿದೆ. ಸುಮಾರು ಎರಡು ಮೂರು ವರ್ಷಗಳ ಅಂತರದಲ್ಲಿ ನೆಟ್ಲಾನ್ ಮತ್ತು ಬಟ್ಟೆಯ ಜೊತೆಗೆ ಇದ್ದಿಲನ್ನೂ ಬದಲಿಸಿದರೆ ಸಾಕು. ಮಳೆ ನೀರನ್ನು ನೇರವಾಗಿ ಭಾವಿ ಆಥವಾ ಕೊಳವೇ ಭಾವಿಗಳಿಗೆ ಬಿಡುವುದರ ಬದಲು ಅದನ್ನು ಆ ಭಾವಿ ಅಥವಾ ಕೊಳವೇ ಭಾವಿಗಳ ಹತ್ತಿರ ಇಂಗು ಗುಂಡಿ ನಿರ್ಮಿಸಿ ಅದರಲ್ಲಿ ಶುಧ್ಧೀಕರಿಸಿದ ನೀರನ್ನು ಹಾಯಿಸಿದಲ್ಲಿ ಹೆಚ್ಚಿನ ಸಫಲತೆ ಕೊಡುತ್ತದೆ.

ಮಳೆ ನೀರು ಕೊಯ್ಲು ಅಳವಡಿಗೆ ಬಹಳ ಸುಲಭವಾದರೂ ಆದನ್ನು ನಿರಂತವಾಗಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣ ಹಾಳು ಹೋಗುವ ಸಾಧ್ಯತೆಯೇ ಹೆಚ್ಚಾಗಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ನಮ್ಮ ಮನೆಯ ಮೇಲೆ ಬೀಳುವ ಪ್ರತೀ ಹನಿ ಹನಿ ನೀರನ್ನೂ ಸಂಗ್ರಹಿ ಅದನ್ನು ಸದುಪಯೋಗ ಪಡಿಸಿಕೊಳ್ಳುವುದು ಉತ್ತಮವಾವ ಅಂಡವಾದರೂ ನಮ್ಮ ಅಗತ್ಯಕ್ಕಿಂತ ಹೆಚ್ಚಾದ ನೀರನ್ನು ಚರಂಡಿ ಮೋರಿಗೆ ಹಾಯಿಸುವ ಬದಲು ಇಂಗು ಗುಂಡಿಗಳ ಮೂಲಕ ಅಂತರ್ಜಲವನ್ನು ಹೆಚ್ಚಿಸುವ ಕಾರ್ಯದಲ್ಲಿ ಎಲ್ಲರೂ ತೊಡಗಿ ಕೊಳ್ಳಲೇ ಬೇಕಾಗಿದೆ. ಸರ್ಕಾರವೂ ಈ ನಿಟ್ಟಿನಲ್ಲಿ ಕಾನೂನನ್ನು ತಂದು ಇನ್ನು ಮುಂದೆ ಕಟ್ಟುವ ಪ್ರತಿ ಮನೆಯಲ್ಲೂ ಮಳೆ ನೀರು ಕೊಯ್ಲು ಮಾಡಲೇ ಬೇಕಾಗಿದೆ. ತಮಿಳುನಾಡಿದನಲ್ಲಿ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಹೊಸ ಮನೆ ಅಥವಾ ಹಳೇ ಮನೆ ಎಂಬ ತಾರತಮ್ಯವಿಲ್ಲದೆ ಎಲ್ಲರ ಮನೆಯಲ್ಲಿಯೂ ಮಳೆ ಕೊಯ್ಲಿನ ಮೂಲಕ ನೀರನ್ನು ಸಂಗ್ರಹಿಸಿರುವುದನ್ನು ಖಡ್ಡಾಯ ಗೊಳಿಸಿ ಒಂದು ಪಕ್ಷ ಆ ರೀತಿ ಮಾಡದಿದ್ದಲ್ಲಿ ಅವರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂಬ ಕಾನೂನನ್ನು ಜಾರಿಗೆ ಗೊಳಿಸಿದ್ದಾರೆ.  ಹೀಗೆ ನಮ್ಮ ನಮ್ಮ ಪ್ರದೇಶಗಳಲ್ಲಿ ಬೀಳುವ ಮಳೆಯ ನೀರನ್ನೇ ಬಳಸಿಕೊಂಡಲ್ಲಿ ಪ್ರಕೃತಿಯ ವಿರುದ್ಧವಾಗಿ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಎತ್ತಿನ ಹೊಳೆ ಯೋಜನೆಯ ಮೂಲಕ ದಕ್ಷಿಣ ಕನ್ನಡದ ನೇತ್ರಾವತಿ ಅಥವಾ ಶರಾವತಿಯ ನೀರನ್ನು ಬೆಂಗಳೂರಿಗೆ ತರುವುದನ್ನು ತಡೆಗಟ್ಟ ಬಹುದಾಗಿದೆ.

water_reusre

ಕಬ್ಬನ್ ಪಾರ್ಕಿನಲ್ಲಿದ್ದ ಸುಮಾರು ಹತ್ತು ದೊಡ್ಡ ದೊದ್ಡ ಭಾವಿಗಳು ಹಲವಾರು ವರ್ಷಗಳ ಕಾಲ ಉಪಯೋಗಿಸದ ಕಾರಣ ಪಾಳು ಬಿದ್ದು ಹೋಗಿತ್ತು. ಅವುಗಳನ್ನು ಶುದ್ಧೀಕರಿಸಿ ಪುನರುಜ್ಜೀವನಗೊಳಿಸಿದ ಪರಿಣಾಮವಾಗಿ ಅಲ್ಲಿನ ಗಿಡಮರಗಳಿಗೆ ನೀರುಣಿಸಲು ಇದೇ ನೀರನ್ನು ಬಳೆಸಲಾಗುತ್ತಿದೆ. ಇದೇ ರೀತಿ ಬೆಂಗಳೂರಿನ ಅಚ್ಚು ಮತ್ತು ಗಾಲಿ ಕಾರ್ಖಾನೆಯಲ್ಲಿದ್ದ ಸುಮಾರು ಎಂಟು ಹಳೆಯ ಭಾವಿಗಳನ್ನು ಪುನರುಜ್ಜೀವನ ಗೊಳಿಸಿದ ಪರಿಣಾಮವಾಗಿ ಪ್ರತಿದಿನ ಸುಮಾರು 30000ಲೀಟರ್ ನೀರನ್ನು ಆ ಭಾವಿಗಳಿಂದ ಬಳೆಸಲಾಗುತ್ತಿದೆ. ಅನೇಕ ವರ್ಷಗಳಿಂದ ನೀರಿದ್ದು ಇತ್ತೀಚೆಗೆ ಬರಿದಾಗಿದ್ದ ಭಾವಿಯ ಸುತ್ತಾ ಇಂಗು ಗುಂಡಿಯ ಮೂಲಕ ಮನೆಯ ಮೇಲೆ ಬಿದ್ದ ನೀರನ್ನು ಹಾಯಿಸಿ ಈಗ ವರ್ಷ ಪೂರ್ತಿ ಅದೇ ಭಾವಿಯಿಂದ ನೀರನ್ನು ಬಳೆಸುತ್ತಿದ್ದಾರೆ. ಅಷ್ಟೆಲ್ಲಾ ಏಕೆ? ಶ್ರೀಯುತ ವಿಶ್ವನಾಥ್ ಅವರ ಮನೆಯ ಮೇಲೆಯೇ ಬೀಳುವ ನೀರನ್ನು ಸಂಗ್ರಹಿಸಿ ಅದನ್ನೇ ವರ್ಷಪೂರ್ತಿಯೂ ಬಳಸುತ್ತಿದ್ದಾರೆ ಮತ್ತು ಅವರು ಮತ್ತು ಅವರ ಮನೆಗೆ ಬರುವ ಅಥಿತಿಗಳಿಗೆ ಹಾಗೆ ಸಂಗ್ರಹಿಸಲ್ಪಟ್ಟ ನೀರಿನಿಂದಲೇ ಅತ್ಯಧ್ಬುತ ಕಾಫಿಯನ್ನೂ ಮಾಡಿ ಕೊಡುತ್ತಾರೆ.

ಸರ್ಕಾರವೂ ಈ ಬಗ್ಗೆ ಹೆಚ್ಚಿನ ಆಸ್ಥೆವಹಿಸಿದ್ದು. ಹೊಸದಾಗಿ ನಿರ್ಮಾಣವಾಗುತ್ತಿರುವ ಎಲ್ಲಾ ಬಡಾವಣೆಗಳಲ್ಲಿ ಮತ್ತು ಬಹು ಅಂತಸ್ತಿನ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಮತ್ತು ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಅಳವಡಿಸಿ ಕೊಂಡಲ್ಲಿ ಮಾತ್ರವೇ ಅನುಮತಿ ನೀಡುವ ಕಾನೂನು ಜಾರಿಗೊಳಿಸಿದೆ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತೀ ಮನೆಗಳಲ್ಲಿಯೂ ಕುಡಿಯುವ ಶುದ್ದ ನೀರು ಮತ್ತು ಈ ರೀತಿಯಾಗಿ ಶುಧ್ಧೀ ಕರಿಸಿದ ನೀರಿಗೆ ಪ್ರತ್ಯೇಕ ವ್ಯವಸ್ಥೆಗಳನ್ನು ಮಾಡಿ ಶುಧ್ಧೀ ಕರಿಸಿದ ನೀರನ್ನು ಶೌಚಾಲಗಳಲ್ಲಿಯೂ ಮತ್ತು ಮನೆ ಮತ್ತು ವಾಹನಗಳನ್ನು ತೊಳೆಯುವುದಕ್ಕೆ ಮತ್ತು ಗಿಡ ಮರಗಳ ಪೋಷಣೆಗೆ ಬಳೆಸುವಂತೆ ಮಾಡಲಾಗಿದೆ.

ಬೆಂಗಳೂರಿನ ನೀರಿನ ಸಮಸ್ಯೆ ನೆನ್ನೆ ಮೊನ್ನೆಯದಲ್ಲಾ. ಅದು ಸುಮಾರು ಶತಮಾನಗಳ ಹಿಂದಿನ ಸಮಸ್ಯೆಯಾಗಿದೆ. ಅದಕ್ಕಾಗಿಯೇ 1894 ರಲ್ಲಿಯೇ ಹೆಸರು ಘಟ್ಟ ಕೆರೆಯ ಮೂಲಕ ನೀರನ್ನು ನಗರಕ್ಕೆ ತರುವ ಪ್ರಯತ್ನ ಮಾಡಲಾಗಿದೆ ಅದೇ ರೀತಿ ತಿಪ್ಪಗೊಂಡನ ಹಳ್ಳಿಯ ಕೆರೆಯ ನೀರೂ ಸಹಾ ಬೆಂಗಳೂರಿನ ಹಲವಾರು ಬಡಾವಣೆಯ ನೀರಿನ ಬವಣೆಯನ್ನು ನೀಗಿಸುತ್ತಿದೆ. ಈ ನೀರನ್ನು ಪಂಪ್ ಮಾಡಲೆಂದೇ 1911 ರಲ್ಲಿ ಪ್ರಪ್ರಥವಾಗಿ ವಿದ್ಯುತ್ ಶಕ್ತಿಯನ್ನು ಬಳೆಸಲಾಯಿತು. ಅದೇ ರೀತಿ ಬೆಂಗಳೂರಿನಲ್ಲಿದ್ದ ಹಲವಾರು ಕೆರೆಗಳನ್ನು ಕೃಷಿಗಾಗಿ ಸುಮಾರು 1960ರ ವರೆಗೂ ಬಳೆಸಲಾಗುತ್ತಿತ್ತು. ಆದರೆ ಅದೇ ವರ್ಷ ಈ ಕೆರೆ ನೀರಿನಿಂದಾಗಿ ಸೊಳ್ಳೆಗಳ ಸಂಖ್ಯೆ ಹೆಚ್ಚಾಗಿ ಮಲೇರಿಯಾ ರೋಗ ಹರಡುತ್ತಿದೆ ಎಂದು ಮಲೇರಿಯಾ ನಿಯಂತ್ರಣ ಮಂಡಲಿ ಹೇಳಿದ್ದೇ ನೆಪ, ರೋಗಿ ಬಯಸಿದ್ದೂ ಹಾಲೂ ಅನ್ನ. ವೈದ್ಯ ಹೇಳಿದ್ದೂ ಹಾಲು ಅನ್ನ ಎನ್ನುವಂತೆ ಭೂಕಬಳಿಗೆದಾರರು ನೂರಾರು ಕೆರೆಗಳನ್ನು ಮುಚ್ಚಿ ಹಾಕಿ ಅಲ್ಲಿ ನಿವೇಶನಗಳನ್ನು ನಿರ್ಮಿಸಿ ಕಾಂಕ್ರೀಟ್ ಕಾಡನ್ನಾಗಿ ಮಾಡಿ ಅಂತರ್ಜಲ ಸಂಪೂರ್ಣವಾಗಿ ಬತ್ತಿ ಹೋಗಲು ಕಾರಣೀಭೂತರಾದರು.

ಪ್ರಜೆಗಳ ಅನುಕೂಲಕ್ಕಾಗಿ, ಕೃಷಿ ಚಟುವಟಿಕೆಗಳಿಗಾಗಿ ನಮ್ಮ ಹಿರಿಯರು ಮತ್ತು ನಮ್ಮನ್ನಾಳಿದ ರಾಜ ಮಹಾರಾಜರುಗಳು, ಪಾಳೇಗಾರರು ಪ್ರತೀ ಹಳ್ಳಿಗಳಲ್ಲಿಯೂ ಕೆರೆಯನ್ನು ನಿರ್ಮಿಸಿದ್ದರು. ಅ ಸುತ್ತಮುತ್ತಲೂ ಬೀಳುತ್ತಿದ್ದ ಮಳೆ ನೀರು ರಾಜ ಕಾಲುವೆಗಳ ಮೂಲಕ ಭೂಮಿಗೂ ಇಂಗಿ ಹೋಗಿ ಹೆಚ್ಚಾದ ನೀರು ಕೆರೆಯನ್ನು ಸೇರುತ್ತಿತ್ತು. ಕೆರೆಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಲು ಪ್ರತೀ ವರ್ಷವೂ ರೈತಾಪಿ ಜನಗಳು ಸೇರಿ ಕೆರೆಯ ಹೂಳನ್ನು ಎತ್ತಿ ಅದು ಅತ್ಯಂತ ಫಲವತ್ತತೆಯಿಂದ ಕೂಡಿದ್ದರಿಂದ ಅದನ್ನು ತಮ್ಮ ಹೊಲಗದ್ದೆಗಳಲ್ಲಿ ಬಳೆಸಿಕೊಳ್ಳುವುದರ ಮೂಲಕ ಯಾವುದೇ ಕೃತಕ ರಾಸಾಯನಿಕ ಗೊಬ್ಬರ ಬಳೆಸದೇ ಸಾವಯವ ರೂಪದಲ್ಲಿ ಬೇಸಾಯ ಮಾಡುತ್ತಿದ್ದರು. ಅದೇ ರೀತಿ ಕೆರೆಗಳಿಂದ ಜೇಡಿ ಮಣ್ಣುಗಳನ್ನು ತೆಗೆದು ಚೆನ್ನಾಗಿ ಹದಗೊಳಿಸಿ ದೊಡ್ಡ ಗಣೇಶನ ಮೂರ್ತಿಗಳನ್ನು ಮಾಡಿ, ಅದನ್ನು ಪೂಜಿಸಿ ನಂತರ ಮಳೆಗಾಲದಲ್ಲಿ ಕೆರೆಗಳಲ್ಲಿ ನೀರು ತುಂಬಿ ಕೆರೆ ಕಟ್ಟೆಗಳು ಒಡೆಯದಂತೆ ಗಟ್ಟಿಯಾಗಿರಲೂ ಗಣೇಶನ ಮೂರ್ತಿಗಳನ್ನು ಅದೇ ಕೆರೆಗಳಲ್ಲಿ ವಿಸರ್ಜಿಸುತಿದ್ದದ್ದು ಈಗ ಇತಿಹಾಸವಾಗಿ ಹೋಗಿರುವುದು ದುಖಃಕರ ಸಂಗತಿ.

ಆದರು ಇಂದು ಕೆಲ ಪರಿಸರ ಪ್ರೇಮಿಗಳು ಮತ್ತು ಹಲವಾರು ಸರ್ಕಾರಿ ಮತ್ತು ಖಾಸಗೀ ಕಂಪನಿಗಳು ತಮ್ಮ CSR ಹಣವನ್ನು ಪರಿಸರ ಸಂರಕ್ಷಣೆ , ಕಲ್ಯಾಣಿಗಳ ಸ್ವಚ್ಚತೆ, ಕೆರೆಗಳ ಶುದ್ಧೀಕರಣಕ್ಕೆ ವ್ಯಯಮಾಡುತ್ತಿರುವುದು ಶ್ಲಾಘನೀಯಕರವಾಗಿದೆ. ಒತ್ತುವರಿಯಾಗಿದ್ದ ರಾಜಕಾಲುವೆಗಳನ್ನೆಲ್ಲಾ ತೆರೆವುಗೊಳಿಸಿ ಅವುಗಳಿಂದ ನೀರನ್ನು ನೇರವಾಗಿ ಕೆರೆಯ ಒಂದು ಭಾಗಕ್ಕೆ ಹರಿಯುವಂತೆ ಮಾಡಿ ಅಲ್ಲಿ ಆ ನೀರನ್ನು ಆಧುನಿಕ ರೀತಿಯಲ್ಲಿ ಶುಧ್ಧೀಕರಿಸಿ ಅದನ್ನು ಕೆರೆಗೆ ಬಿಡುವ ಕಾರ್ಯದಲ್ಲಿ ಯಶಸ್ವಿಯಗಿದ್ದಾರೆ. ವರ್ಷದ ಮುನ್ನೂರೈವತ್ತು ದಿನಗಳೂ ಆ ಕೆರೆಯಲ್ಲಿ ನೀರು ನಿಲ್ಲುವಂತಾದಲ್ಲಿ ಅ ಕೆರೆಯ ಸುತ್ತಮುತ್ತಲಿನ ಪ್ರದೇಶದ ಅಂತರ್ಜಲದ ಮಟ್ಟ ಹೆಚ್ಚಾಗಿ ಸುಮಾರು 15-20 ಅಡಿಗಳ ಆಳದಲ್ಲಿಯೇ ಶುದ್ಧವಾದ ನೀರು ಸಿಗುವಂತಾಗಿದೆ.

ಕೇವಲ ಮಳೆಯ ನೀರೇ ಅಲ್ಲಿದೇ ಕೊಳಚೇ ನೀರನ್ನು ಕೆರೆಯ ಒಂದು ಭಾಗಕ್ಕೆ ಹರಿಯುವಂತೆ ಮಾಡಿ ಅದನ್ನು ಆರ್ದ್ರ ಭೂಮಿಯಲ್ಲಿ (wet land) ಮೂರ್ನಾಲ್ಕು ದಿನ ಇರುವಂತೆ ನೋಡಿಕೊಂಡು ಅಲ್ಲಿ ನೈಸರ್ಗಿಕವಾಗಿ ಶುದ್ದೀಕರಣವಾಗಿ ನಂತರ ಆ ನೀರನ್ನು ಶುಧ್ಧೀಕರಣ ಘಟಕದಲ್ಲಿ ಮತ್ತೊಮ್ಮೆ ಶುಧ್ಧೀಕರಿಸಿ ಕೆರೆಗಳಿಗೆ ಬಿಡುವ ವ್ಯವಸ್ಥೆಯಲ್ಲಿ ಯಶಸ್ಸನ್ನು ಕಂಡಿದ್ದಾರೆ. ಈಗಾಗಲೇ ಜಕ್ಕೂರಿನ ಕೆರೆ, ರಾಚೇನಹಳ್ಳಿಗಳಲ್ಲಿ ಈ ರೀತಿಯ ವ್ಯವಸ್ಥೆ ಜಾರಿಯಲ್ಲಿದ್ದರೆ, ದೊಡ್ಡಬೊಮ್ಮಸಂದ್ರದ ಕೆರೆಯಲ್ಲಿ ಬಿಇಎಲ್ ಕಾರ್ಖಾನೆಯ ಸಹೋಯೋಗದೊಂದಿಗೆ ಒಳಚರಂಡಿ ಸಂಸ್ಕರಣಾ ಘಟಕ (sewage treatment plant STP) ನಿರ್ಮಾಣ ಹಂತದಲ್ಲಿದ್ದು ಸುಮಾರು ಎರಡು ಮೂರು ವರ್ಷಗಳಷ್ಟರಲ್ಲಿ ದೊಡ್ಡ ಬೊಮ್ಮಸಂದ್ರದ ಕೆರೆ ಗತ ವೈಭವಕ್ಕೆ ಮರಳುವಂತಾಗುತ್ತಲಿದೆ.

ಈ ರೀತಿಯಾಗಿ ಶುದ್ಧೀಕರಣಗೊಂಡ ನೀರನ್ನು ನೇರವಾಗಿ ಕೃಷಿ ಚಟುವಟಿಕೆಗಳಿಗೆ ಬಳೆಸಿಕೊಳ್ಳಬಾಹುದಾದರೂ ಅದರಲ್ಲಿ ಮನುಷ್ಯರು ತಿನ್ನಬಹುದಾದ ಸೊಪ್ಪು, ಹಣ್ಣು ತರಕಾರಿಗಳನ್ನು ಬೆಳೆಯದೆ ಆಂತಹ ನೀರಿನಲ್ಲಿ ದೇವರ ಪೂಜೆಗೆ ಬಳೆಸುವ ಹೂ, ರೇಷ್ಮೇ ಹುಳುಗಳ ಸಾಗಾಣಿಕೆಗೆ ಬಳೆಸುವ ಹಿಪ್ಪನೇರಳೆ ಬೆಳೆಗೆ ಉಪಯೋಗಿಸಬಹುದಾಗಿದೆ. ಇದೇ ನೀರಿನಲ್ಲಿ ಬಾಳೇ ಮತ್ತು ಪರಂಗೀ (ಪಪ್ಪಾಯ) ಹಣ್ಣುಗಳನ್ನು ಬೆಳೆಯ ಬಹುದಾಗಿದೆ. ಈ ರೀತಿಯ ಪ್ರಯೋಗ STP water Shit to silk project ಎಂಬ ಹೆಸರಿನಲ್ಲಿ ಕೋಲಾರ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿದೆ.

ಇಂದು ನಾವು ಬಳೆಸುತ್ತಿರುವ ನೀರು ನಮ್ಮ ಹಿರಿಯರು ನಮಗೆ ಉಳಿಸಿಹೋದ ಸಂಪತ್ತಾಗಿದೆ. ನಾವು ಅದನ್ನು ಎಗ್ಗಿಲ್ಲದೇ ಬಳಸಿ ಬರಿದು ಮಾಡಿ ಹೋದಲ್ಲಿ ನಮ್ಮ ಮುಂದಿನ ಪೀಳಿಗೆಗೆ ಶುಧ್ಧ ಗಾಳಿ ಮತ್ತು ನೀರನ್ನೂ ಸೇವಿಸದಂತಹ ಪರಿಸ್ಥಿಗೆ ತಲುಪುವಂತಾಗುತ್ತದೆ. ಹಾಗಾಗಿ ಪ್ರತಿಯೊಂದು ಯೋಜನೆಗಳಿಗೂ ಸರ್ಕಾರವನ್ನೇ ಅವಲಂಭಿಸದೇ ನಾವುಗಳೇ ಒಗ್ಗೂಡಿ ಅತ್ಯಂತ ಕಡಿಮೆ ಖರ್ಚಿನಲ್ಲಿ ನೀರನ್ನು ಸದ್ವಳಕೆ ಮಾಡಿಕೊಳ್ಳ ಬಹುದಾಗಿದೆ. ಸರ್ಜಾಪುರದ ಸಮೀಪದಲ್ಲಿ ಸುಮಾರು 36 ಎಕರೆಗಳ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡ ಸುಮಾರು 360 ದೊಡ್ಡ ನಿವೇಶನಗಳ ಬಡಾವಣೆಯಲ್ಲಿ BWSSB ನೀರಿನ ಸರಬರಾಜು ವ್ಯವಸ್ಥೆ ಇರಲಿಲ್ಲವಾದ್ದರಿಂದ ಪ್ರತಿಯೊಂದು ಮನೆಗೂ ಒಂದೊಂದು ಕೊಳವೇ ಭಾವಿಗಳನ್ನು ತೊಡಲು ನಿರ್ಧರಿಸಲಾಗಿತ್ತು. ಅವರ ಆ ಕಲ್ಪನೆ ಹೇಗಿತ್ತೆಂದರೆ ಒಂದು ದೊಡ್ಡ ಎಳನೀರಿನ ಬುಡ್ಡೆಗೆ ನೂರಾರು ಸ್ಟ್ರಾಗಳನ್ನು ಹಾಕಿ ಒಮ್ಮೆಲೆ ಹೀರುವಂತಹ ಪರಿಸ್ಥಿತಿ. ಹಾಗೆ 360 ಕೊಳವೆ ಭಾವಿಗಳನ್ನು ತೊಡಿದ್ದಲ್ಲಿ ಕೆಲವೇ ಕೆಲವು ತಿಂಗಳಿನಲ್ಲಿ ಅಲ್ಲಿನ ಸುತ್ತಮುತ್ತಲಿನ ಅಂತರ್ಜಲ ಬರಿದಾಗುವ ಸಂದರ್ಭವೇ ಹೆಚ್ಚಾಗಿತ್ತು. ಅದರ ಬದಲು ಕೇವಲ ಮೂರ್ನಾಲ್ಕು ಕೊಳವೇ ಭಾವಿಗಳನ್ನು ತೋಡಿ ಅದನ್ನು ಎಲ್ಲಾ ಮನೆಗಳು ಸಮಾನಾಗಿ ಹಂಚಿಕೊಳ್ಳುವ ಪದ್ದತಿಯನ್ನು ತರಲಾಗಿದೆ ಅದೇ ರೀತಿ ಆ ಕೊಳವೆ ಭಾವಿಗಳಿಗೆ ಸರಿಯಾದ ರೀತಿಯಲ್ಲಿ ಮಳೇ ನೀರು ಕೊಯ್ಲು ಪದ್ದತಿ ಅಳವಡಿಸಲಾಗಿದೆ ಮತ್ತು ಅವರ ಬಡಾವಣೆಯ ಎಲ್ಲಾ ಗಿಡ ಮರ, ಹುಲ್ಲುಗಾವಲಿಗೂ ಮಳೆ ನೀರಿ ಕೊಯ್ಲಿನ ನೀರನ್ನೇ ಬಳೆಸುತ್ತಿರುವುದರಿಂದ ಇಂದಿಗೂ ಆ ಬಡಾವಣೆಯಲ್ಲಿ ನೀರಿನ ಸಮಸ್ಯೆ ಇಲ್ಲದಂತಾಗಿದೆ.

ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಸದ್ಬಳಕೆಯ ಕುರಿತಾಗಿ ಮತ್ತು ಇಂಗು ಗುಂಡಿಗಳನ್ನು ತೋಡಲು ನಮ್ಮ ಮನೆಯ ಹತ್ತಿರವೇ ಇರುವ ಭೋವಿಗಳ ಕುರಿತು ಈ http://bengaluru.urbanwaters.in/ ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಕಾರ್ಯಕ್ರಮವನ್ನು ಶ್ರೀ ಜಯಂತ್ ಅವರು ಸರಳ ಮತ್ತು ಸುಂದರವಾಗಿ ನಿರೂಪಣೆ ಮಾಡಿದರೆ, ಎಂದಿನಂತೆ ಶ್ರೀಕಂಠ ಬಾಳಗಂಚಿಯವರ ವಂದಾನಾರ್ಪಣೆ ಮತ್ತು ಶ್ರೀಮತಿ ಸುಧಾ ಸೋಮೇಶ್ ಅವರ ಜೊತೆಗೆ ಬಂದಿದ್ದವರೆಲ್ಲರ ಒಕ್ಕೊರಲಿನ ವಂದೇಮಾತರಂನೊಂದಿಗೆ ಈ ತಿಂಗಳ ಮಂಥನ ಸುರಿಯುತ್ತಿದ್ದ ಮಳೆಯ ನಡುವೆಯೂ ಉತ್ತಮ ಸಂಖ್ಯೆಯ ಆಸಕ್ತ ಸಭಿಕರ ಸಮ್ಮುಖದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಇಂದಿನ ಕಾರ್ಯಕ್ರಮ ಎಂದಿಗಿಂತಲೂ ಸ್ವಲ್ಪ ವಿಭಿನ್ನ ರೀತಿಯಲ್ಲಿದ್ದು ಅದು ಕೇವಲ ವಕ್ತಾರರು ಮಾತನಾಡುವುದನ್ನು ಸಭಿಕರು ಆಲಿಸುಬ ಬದಲು ಆವರಿಬ್ಬರ ನಡುವೆ ನೇರ ನೇರ ವಿಚಾರ ವಿನಿಮಯದ ಮೂಲಕ ಸಾಕಷ್ಟು ವಿಚಾರ ವಿನಿಮಯ ಮತ್ತು ಮಳೆ ನೀರು ಕೊಯ್ಲಿನ ಬಗ್ಗೆ ಇದ್ದ ಅನೇಕ ಸಂದೇಹಗಳು ನಿವಾರಣೆಯಾಗಿದ್ದು ಅತ್ಯಂತ ಮಹತ್ವವಾಗಿತ್ತು. .

ಮುಂದಿನ ತಿಂಗಳ ಮೂರನೇ ಭಾನುವಾರ ಮತ್ತೊಂದು ರೋಚಕವಾದ ವಿಷಯದೊಂದಿಗೆ ಮತ್ತೆ ಇದೇ ಸಮಯದಲ್ಲಿ ಇದೇ ಜಾಗದಲ್ಲಿ ಭೇಟಿಯಾಗೋಣ. ಅಲ್ಲಿಯವರೆಗೂ ಹನಿ ಹನಿ ಗೂಡಿದರೆ ಹಳ್ಳ ಎನ್ನುವಂತೆ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದರಲ್ಲಿ ಅಚಲವಾದ ನಂಬಿಕೆ ಇಟ್ಟು ಎಲ್ಲರೂ ಸೇರೀ ನಿಸ್ವಾರ್ಥವಾಗಿ ಮಳೆ ನೀರನ್ನು ಸಂಗ್ರಹಿಸಿ ಸದ್ಬಳಕೆ ಮಾಡಿಕೊಂಡು ಅಂತರ್ಜಲ ಮಟ್ಟವನ್ನು ಹೆಚ್ಚಿಸುವುದಲ್ಲದೇ ನದಿಗಳ ಮೇಲಿನ ಅವಲಂಭನೆಯನ್ನು ತಗ್ಗಿಸಬಹುದಾಗಿದೆ. ಇದರಿಂದ ನದಿ ನೀರಿನ ಹಂಚಿಕೆಯ ಬಗ್ಗೆ ಅಂತರಾಜ್ಯಗಳ ನಡುವೆ ಸದಾ ನಡೆಯುವ ವ್ಯಾಜ್ಯಗಳಿಗೆ ತಿಲಾಂಜಲಿ ಹಾಡ ಬಹುದಾಗಿದೆ. ಸಮಸ್ಯೆಗಳು ನೂರಾರಿದ್ದರೆ ಅದಕ್ಕೆ ಸಾವಿರಾರು ಪರಿಹಾರಗಳು ಖಂಡಿತವಾಗಿಯೂ ಇದ್ದೇ ಇರುತ್ತವೆ. ದೃಢ ಮನಸ್ಸಿನಿಂದ ಮನಸ್ಸಿದ್ದಲ್ಲಿ ಮಾರ್ಗ ಎಂದು ಅಳುದುಳಿದ ನೀರನ್ನು ಜಾಗೃತವಾಗಿ ಸಂಗ್ರಹಿ ಬಳೆಸೋಣ. ನಮ್ಮ ಮುಂದಿನ ಪೀಳಿಗೆಗೂ ಶುಧ್ಧವಾದ ಯಥೇಚ್ಚಾವಾದ ನೀರನ್ನು ಉಳಿಸೋಣ.

ಸುರಿವ ಮಳೆಯ ನೀರನ್ನು ಜೋಪಾನವಾಗಿ ಸಂಕ್ಷಿಸಿಕೊಳ್ಳುವತ್ತ ಹರಿಸೋಣ ನಮ್ಮೆಲ್ಲರ ಚಿತ್ತ. ಇಂದು ಉಳಿಸದಿದ್ದರೆ ಹನಿ ಹನಿ ನೀರು ಮುಂದೆ ಇರುವುದಿಲ್ಲ ಒಂದು ಚೂರು ಕಣ್ಣೀರು.

ಏನಂತೀರೀ?

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s