ಭೀಮನ ಅಮಾವಾಸ್ಯೆ

ಹೇಳಿ ಕೇಳಿ ನಮ್ಮ ಹಿಂದೂ ಸಂಪ್ರದಾಯ ಪುರುಷ ಪ್ರಧಾನವಾದದ್ದು. ದೀರ್ಘ ಸುಮಂಗಲೀಭವ ಎಂದು ಆಶೀರ್ವದಿಸುತ್ತಾ, ಪರೋಕ್ಷವಾಗಿ ಆಕೆಯ ಗಂಡ ದೀರ್ಘಾಯಸ್ಸು ಪಡೆಯುವುದರ ಮೂಲಕ ಆಕೆಯ ಸುಮಂಗಲೀತನ ದೀರ್ಘವಾಗಿರಲೀ ಹರಸುವುದು ನಡೆದುಬಂದ ವಾಡಿಕೆ. ಅಂತಯೇ ಪತಿಯೇ ಪರ ದೈವ ಎಂದು ನಂಬಿದ ಎಲ್ಲ ಪತ್ನಿಯರೂ, ಭಗವಂತ ತಮ್ಮ ಪತಿಗೆ ಆಯುರಾರೋಗ್ಯ ನೀಡಲೆಂದು, ತನ್ಮೂಲಕ ಆಕೆ ದೀರ್ಘಕಾಲ ಸುಮಂಗಲಿಯಾಗಿರುವಂತೆ ಕೇಳಿಕೊಳ್ಳುವ ಹಬ್ಬವೇ ಭೀಮನ ಅಮಾವಾಸ್ಯೆ. ಮನೋನಿಯಾಮಕ ರುದ್ರದೇವರ ಮತ್ತೊಂದು ಹೆಸರು ಭೀಮ ಎಂಬುದಾಗಿರುವುದರಿಂದ ಈ ವ್ರತವನ್ನು ಭೀಮನ ಅಮಾವಾಸ್ಯೆ ಎಂದು ಕರೆಯುತ್ತಾರೆಯೇ ಹೊರತು ಮಹಾಭಾರತದ ಭೀಮನಿಗೂ ಈ ವ್ರತಕ್ಕೂ ಯಾವುದೇ ಸಂಬಂಧವಿಲ್ಲ.

ವಿವಾಹಿತ ಹೆಣ್ಣುಮಕ್ಕಳು ತಮ್ಮ ಗಂಡದಿರ ಶ್ರೇಯೋಭಿಲಾಶೆಗೆ ಭೀಮನ ಅಮಾವಾಸ್ಯೆ ಪೂಜೆ ಮಾಡಿದರೆ, ಅವಿವಾಹಿತ ಹೆಣ್ಣು ಮಕ್ಕಳು ತಮಗೆ ಮಹಾಭಾರತದಲ್ಲಿ ತನ್ನ ಹೆಂಡತಿಗಾಗಿ ಸೌಗಂಧಿಕಾ ಪುಷ್ಪವನ್ನು ಕಷ್ಟ ಪಟ್ಟು ತಂದು ಕೊಟ್ಟ, ವಿರಾಟ ಪರ್ವದಲ್ಲಿ ಕೀಚಕನಿಂದ ದ್ರೌಪತಿಯನ್ನು ಧೀರನಂತೆ ಕಾಯ್ದ ಭೀಮನಂತೆ ಇರುವ ಗಂಡ ಸಿಗಲೆಂದು ಶಿವನನ್ನು ಭೀಮನ ಅಮಾವಾಸ್ಯೆಯಂದು ಪೂಜಿಸುತ್ತಾರೆ.

ಇನ್ನು ಭೀಮನ ಅಮಾವಾಸ್ಯೆಯನ್ನು ಪೌರಾಣಿಕ ಹಿನ್ನಲೆಯಿಂದ ನೋಡುವುದಾದರೆ,

ಸ್ಕಂದ ಪುರಾಣದಲ್ಲಿ ಹೇಳಿರುವಂತೆ, ಒಂದಾನೊಂದು ದೇಶದ ರಾಜನೊಬ್ಬ ತನ್ನ ಮಗನಿಗೆ ಅದ್ಧೂರಿಯಾಗಿ ಮದುವೆ ಮಾಡಬೇಕೆಂದು ನಿರ್ಧರಿಸಿ ಮದುವೆಗೆ ಸಕಲ ಏರ್ಪಾಡನ್ನು ಮಾಡಿಕೊಂಡು ವಧುವನ್ನು ಹುಡುಕುತ್ತಿರುವಾಗ, ಆ ರಾಜಕುಮಾರ ಅಕಾಲಿಕವಾಗಿ ಮರಣಹೊಂದುತ್ತಾನೆ. ಮಗ ಸಾವಿಗೀಡಾದರೂ, ರಾಜ ತನ್ನ ಸತ್ತ ಮಗನಿಗೇ ಮದುವೆ ಮಾಡಲು ನಿರ್ಧರಿಸಿ, ಯಾರು ತನ್ನ ಮಗನನ್ನು ಮದುವೆ ಮಾಡಿಕೊಳ್ಳುತ್ತಾರೋ ಅವರಿಗೆ ಅಪಾರ ಧನ ಸಂಪತ್ತಗಳನ್ನು ಕೊಡುವುದಾಗಿ ಘೋಷಣೆ ಹೊರಡಿಸುತ್ತಾನೆ.

ಈ ವಿಷಯವನ್ನು ಕೇಳಿದ ಒಬ್ಬ ಬಡ ಬ್ರಾಹ್ಮಣ, ತನ್ನ ಮಗಳನ್ನು ರಾಜಕುಮಾರನ ಶವದ ಜೊತೆ ಮದುವೆ ಮಾಡಿಕೊಟ್ಟು, ಅದರಿಂದ ಸಿಗುವ ಧನಕನಕಾದಿಗಳಿಂದ ತನ್ನ ಬಡತನ ನೀಗುತ್ತದೆ ಎಂದು ದುರಾಲೋಚಿಸಿ ತನ್ನ ಮಗಳನ್ನು ಅಂದು ಆಮಾವಾಸ್ಯೆಯಾದರೂ ಲೆಕ್ಕಿಸದೆ ಮದುವೆ ಮಾಡಿಕೊಡುತ್ತಾನೆ. ರಾಜನ ಆಸೆಯಂತೆ ಮಗನ ಮದುವೆ ಮುಗಿದ ನಂತರ ರಾಜಕುಮಾರನ ಅಂತಿಮ ವಿಧಿವಿಧಾನಗಳನ್ನು ಮುಗಿಸಲು ಭಾಗೀರಥಿ ನದಿ ತೀರದಲ್ಲಿ ಸಿದ್ಧತೆ ನಡೆಸುತ್ತಿದ್ದಾಗ ಇದ್ದಕ್ಕಿದ್ದಂತೆಯೇ, ಗುಡುಗು ಸಿಡಿಲಿನ ಸಹಿತ ಕುಂಭದ್ರೋಣ ಮಳೆ ಸುರಿಯಲಾರಂಭಿಸುತ್ತದೆ, ಮಳೆಯ ಆರ್ಭಟಕ್ಕೆ ಹೆದರಿ, ರಾಜನ ಸಮೇತನಾಗಿ, ನೆರೆದಿದ್ದ ಜನರೆಲ್ಲಾ ರಾಜಕುಮಾರನ ಶವ ಮತ್ತು ನವ ವಿವಾಹಿತ ವಧುವನ್ನು ಅಲ್ಲಿಯೇ ಬಿಟ್ಟು ದಿಕ್ಕಾಪಾಲಾಗಿ ಓಡಿ ಹೋಗುತ್ತಾರೆ.

ಅಂದು ಅಮಾವಾಸ್ಯೆ. ವಿಶೇಷವಾಗಿ ದ ದಿನ. ತನ್ನ ತಾಯಿಯು ಪ್ರತಿ ವರ್ಷ ಆ ವ್ರತವನ್ನು ಆಚರಿಸುವುದು ಆಕೆಗೆ ಕೂಡಲೇ ನೆನಪಾಗಿ ಅಲ್ಲಿಯೇ ಇದ್ದ ನದಿಯಲ್ಲಿ ಸ್ನಾನ ಮಾಡಿ, ಎರಡು ಮಣ್ಣಿನ ಹಣತೆಯನ್ನು ಮಾಡಿ, ಅಲ್ಲೇ ಇದ್ದ ಮರದ ಬೇರಿನಿಂದ ಬತ್ತಿಯನ್ನು ಮಾಡಿ ಅದಕ್ಕೆ ನೀರನ್ನು ಹಾಕಿ, ಮಣ್ಣಿನಿಂದ ಭಂಡಾರವನ್ನು ಮಾಡಿ ಅದರಿಂದಲೇ ಪೂಜೆಯನ್ನು ಮಾಡುತ್ತಾಳೆ. ಅವಳ ಭಕ್ತಿಗೆ ಮೆಚ್ಚಿ ಪ್ರತ್ಯಕ್ಷರಾದ ಶಿವ-ಪಾರ್ವತಿಯು ಭಂಡಾರವನ್ನು ಒಡೆದು ನಿನಗೇನು ವರ ಬೇಕು ಕೇಳಿಕೋ ಎಂದಾಗ, ಕೂಡಲೇ ಆಕೆ ಸತ್ತ ತನ್ನ ಪತಿಯನ್ನು ಬದುಕಿಸಿಕೊಡಿ ಎಂದು ಕೇಳಿಕೊಳ್ಳುತ್ತಾಳೆ. ಶಿವ-ಪಾರ್ವತಿಯರು ತಡಮಾಡದೇ ಆಕೆಯ ಬೇಡಿಕೆಗೆ ಅಸ್ತು ಎಂದು ಹೇಳಿ ಆಕೆಯ ಪತಿಯನ್ನು ಬದುಕಿಸಿಕೊಡುತ್ತಾರೆ. ಮಳೆ ಎಲ್ಲಾ ನಿಂತು, ಸೊಸೆಯ ಭಕ್ತಿಯ ಪ್ರಭಾವದಿಂದಾಗಿ ತನ್ನ ಮಗ ಬದುಕಿ ಹಿಂದಿರುಗಿದ್ದನ್ನು ಕಂಡು ಸಂತೋಷಗೊಂಡ ರಾಜ ಮಗನಿಗೆ ಪಟ್ಟಾಭಿಷೇಕ ಮಾಡಿ ನಂತರ ಸುಮಾರು ವರ್ಷಗಳ ಕಾಲ ಅವರೆಲ್ಲರೂ ಸುಖವಾಗಿ ಜೀವನ ನಡೆಸಿದರು. ಅಂದಿನಿಂದ ಈ ಜ್ಯೋತಿರ್ಭೀಮೇಶ್ವರನ ವ್ರತ ಮತ್ತಷ್ಟೂ ಪ್ರಸಿದ್ಧಿ ಪಡೆದು ಎಲ್ಲಾ ಹೆಣ್ಣುಮಕ್ಕಳು ಆಷಾಢಮಾಸದ ಅಮಾವಾಸ್ಯೆಯಂದು ಜ್ಯೋತಿರ್ಭೀಮೇಶ್ವರನ ವ್ರತ ಮತ್ತು ಪೂಜೆಯನ್ನು ಆಚರಿಸಲಾರಂಭಿಸಿದರು ಎನ್ನುತ್ತದೆ ಪುರಾಣ.

whatsapp-image-2019-07-31-at-9.19.15-pm.jpegಅದೇ ರೀತಿ ಕೇವಲ ತಮ್ಮ ಗಂಡಂದಿರ ಪೂಜೆಯಲ್ಲದೇ ಸಹೋದರ ಕ್ಷೇಮಕ್ಕಾಗಿಯೂ ಭಗವಂತನಲ್ಲಿ ಬೇಡಿಕೊಂಡು. ಅಂದು ಸಹೋದರರ ಹಣೆಗೆ ತಿಲಕವಿಟ್ಟು, ಕರಿದ ಕಡುಬು ಇಲ್ಲವೇ ಉದ್ದಿನ ಕಡಿಬಿನಲ್ಲಿ ಯಥಾ ಶಕ್ತಿ ದಕ್ಷಿಣೆಯನ್ನು ತಮ್ಮ ಹೊಸ್ತಿಲ ಮೇಲೆ ಇಟ್ಟು ಸೋದರರಿಂದ ಭಂಡಾರ ಒಡೆಸುವ ಪದ್ಧತಿಯೂ ಅನೇಕರ ಮನೆಯಲ್ಲಿ ರೂಢಿಯಲ್ಲಿದೆ. ಹಾಗೆ ಸಹೋದರರು ಒಡೆದ ಭಂಡಾರವನ್ನೇ ಪ್ರಸಾದ ರೂಪದಲ್ಲಿ ಎಲ್ಲರಿಗೂ ಹಂಚಿ ಆ ನಂತರ ಎಲ್ಲರೂ ಒಟ್ಟಿಗೆ ಕುಳಿತುಕೊಂಡು ಭಕ್ಷ ಭೋಜನವನ್ನು ಸೇವಿಸುವ ಪದ್ದತಿ ಇದೆ.

ಪೂಜಾ ವಿಧಾನ

Bheemana_Amavasyeಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನದಿಂದು ಆಚರಿಸಲ್ಪಡುವ ಈ ಹಬ್ಬ, ಅಂತಹ ಹೆಚ್ಚಿನ ಮಡಿ ಹುಡಿ ಇರುವುದಿಲ್ಲ. ವಿಶೇಷವಾಗಿ ಪಾರ್ವರ್ತಿ ಪರಮೇಶ್ವರ ಪಟವಾಗಲೀ ಅಥವಾ ವಿಗ್ರಹದ ಮುಂದೆ ತುಪ್ಪದ ದೀಪ ಹಚ್ಚಿ, ಯಥಾ ಶಕ್ತಿ ಹೂವಿನ ಅಲಂಕಾರ ಮಾಡಿ , ಶಾವಂತಿಗೆ ಹೂವು ಕಟ್ಟಿದ 9 ಗಂಟಿನ ಗೌರಿ ದಾರದ ಜೊತೆ ಮಡಿಯಿಂದ ಭಂಡಾರಕ್ಕೆ ಮಾಡಿದ ನೈವೇದ್ಯವಾದ ಕರಿದ ಕಡುಬು ಇಲ್ಲವೇ ಉದ್ದಿನ ಕಡಿಬನ್ನು ನೈವೇದ್ಯಕ್ಕೆ ಇಟ್ಟು ಭಕ್ತಿಯಿಂದ ಪೂಜಿಸುತ್ತಾರೆ. ಪೂಜೆಯ ನಂತರ ಮನೆಯಲ್ಲಿರುವ ಎಲ್ಲಾ ಹೆಣ್ಣುಮಕ್ಕಳು ಮತ್ತು ಮುತ್ತೈದೆಯರು ಆ ಗೌರಿ ದಾರವನ್ನು ಬಲ, ಎಡ ಕೈಗೆ ತಾಕಿಸಿ ನಂತರ ಬಲಗೈಗೆ ಕಟ್ಟಿಕೊಳ್ಳುತ್ತಾರೆ. ಹೀಗೆ ಕಟ್ಟಿಸಿಕೊಂಡ ಗೌರಿದಾರ ಭಾದ್ರಪದ ಮಾಸದಲ್ಲಿ ಗೌರಿ ಗಣೇಶ ಹಬ್ಬ ಮುಗಿದು ಗಣೇಶನ ಹಬ್ಬದವರೆಗೂ ಜತನದಿಂದ ಕಾಪಾಡಿಕೊಂಡು, ಗಣೇಶನ ವಿಸರ್ಜನೆಯ ಜೊತೆ ಈ ಗೌರೀ ದಾರವನ್ನೂ ವಿಸರ್ಜಿಸುವ ಪದ್ದತಿ ರೂಢಿಯಲ್ಲಿದೆ.

Shiva_parvathi

ಹೀಗೆ ಪ್ರತಿ ವರ್ಷ ಶ್ರಧ್ಧಾ ಭಕ್ತಿಯಿಂದ ಭೀಮೇಶ್ವರನ ಪೂಜೆ ಮಾಡುವುದರಿಂದ ಮನೆಯಲ್ಲಿ ಸುಖ, ಸಂತೋಷ ನೆಮ್ಮದಿ ದೊರೆತು ಎಲ್ಲರ ಆಯುರಾರೋಗ್ಯ ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.

ಇನ್ನು ಮಲೆನಾಡಿಲ್ಲಿ ಹೇಳೀ‌ ಕೇಳಿ ಹೆಚ್ಚಾಗಿಯೇ ಮಳೆ ಬೀಳುತ್ತದೆ. ಹೊಸದಾಗಿ ಮದುವೆ ಆದವರು ಮೊದಲ ವರ್ಷ ಶ್ರಾವಣ ಮಾಸದಲ್ಲಿ ಬರುವ ಸಾಲು ಸಾಲು ಹಬ್ಬಗಳಿಗೆ ದಂಪತಿಗಳ ಸಮೇತವಾಗಿ ಮಾವನ ಮನೆಗೆ ಬರಬೇಕಾಗುತ್ತದೆ. ಹಾಗಾಗಿ ನವವಿವಾಹಿತರಿಗೆ ಈ ಭೀಮನ ಅಮಾವಾಸ್ಯೆಯಂದು ಮಾವನ ಮನೆಯವರು ತಮ್ಮ ಅಳಿಯನಿಗೆ ಕೊಡೆ ಅಥವಾ ಛತ್ರಿಯನ್ನು ಉಡುಗೊರೆಯಾಗಿ ನೀಡುವ ಪದ್ಧತಿಯಿದೆ. ಹಾಗಾಗಿ ಮಲೆನಾಡು ಭಾಗದಲ್ಲಿ ಈ ಹಬ್ಬವನ್ನು ಕೊಡೆ ಅಮಾವಾಸ್ಯೆಯೆಂದು, ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ ಅಥವಾ ಕರ್ಕಾಟಕ ಅಮಾವಾಸ್ಯೆ ಎಂದು ಕರೆಯುತ್ತಾರೆ.

ಇಂದಿನ ಕಾಲದಲ್ಲಿ ಮದುವೆ ಎಂಬುದು ಮಕ್ಕಳಾಟದಂತಾಗಿ, ಈಗ ಮದುವೆ ನಂತರ ವಿಚ್ಛೇದನವಾಗುತ್ತಿರುವ ಸಂದರ್ಭದಲ್ಲಿ , ಪತ್ನಿ ತಮ್ಮ ಪತಿಯ ದೀರ್ಘಾಯುಷ್ಯದಿಂದ ತನ್ನ ಸುಮಂಗಲಿತ್ವ ಮತ್ತು ದಾಂಪತ್ಯ ಜೀವನ ನೂರ್ಕಾಲವಿರಲಿ ಎಂದು ಭಗವಂತನಲ್ಲಿ ಬೇಡುತ್ತಾ ಮಾಡುವ ಈ ವಿಶೇಷ ಪೂಜೆ ಅತ್ಯಂತ ಮಹತ್ವ ಪಡೆಯುತ್ತದೆ. ಅಂತೆಯೇ ಸಹೋದರಿಯರು ತಮ್ಮ ಸಹೋದರನ್ನು ತಮ್ಮ ಮನೆಗೆ ಕರೆದು ಅವರಿಂದ ಭಂಡಾರ ಒಡೆಸುವ ಮೂಲಕ ಅದರ ಜೊತೆಯಲ್ಲಿ ಯಥಾ ದಕ್ಷಿಣೆಯನ್ನು ಕೊಡುವ ಮೂಲಕ ಭ್ರಾತೃತ್ವವನ್ನು ವೃಧ್ದಿಸುವ ವಿಶೇಷ ಆಚರಣೆಯಾಗಿದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ಇದೊಂದೇ ಹಬ್ಬದಲ್ಲಿ ಮಾತ್ರವೇ ಹೆಣ್ಣುಮಕ್ಕಳು ತಮ್ಮ ಸಹೋದರರಿಗೆ ದಕ್ಷಿಣೆ / ಕಾಣಿಕೆ ಕೊಡುವ ಪದ್ದತಿ ಇದ್ದು, ಮಿಕ್ಕೆಲ್ಲಾ ಹಬ್ಬಗಳಲ್ಲಿಯೂ ಸಹೋದರರೇ, ಸಹೋದರಿಯರಿಗೆ ಕಾಣಿಕೆ ಕೊಡುವ ಸಂಪ್ರದಾಯವಿದೆ. ಈ ರೀತಿಯಾಗಿ ಕೊಡುವ ಮತ್ತು ತೆಗೆದುಕೊಳ್ಳುವ ವೈವಿಧ್ಯಮಯ ಸಂಪ್ರದಾಯದ ಮೂಲಕ ನಮ್ಮ ಹಿರಿಯರು ಕುಟುಂಬದಲ್ಲಿ ಸಾಮರಸ್ಯವನ್ನು ವೃಧ್ಧಿಸಲೆಂದೇ ಇಂತಹ ಹಬ್ಬಗಳನ್ನು ರೂಢಿಗೆ ತಂದಿದ್ದಾರೆ ಎಂದರೆ ತಪ್ಪಾಗಲಾರದು. ಅಲ್ವೇ?

ಏನಂತೀರೀ?
ಸೃಷ್ಟಿಕರ್ತ ಉಮಾಸುತ

ಭೀಮನ ಅಮಾವಾಸ್ಯೆಯ ದಿನದ ವಿಶೇಷ ತಿಂಡಿಯಾದ ಉದ್ದಿನ ಕಡುಬು ಮಾಡುವ ವಿಧಾನ ಇದೋ ನಿಮಗಾಗಿ

WhatsApp Image 2019-07-31 at 3.02.50 PM

Leave a comment