ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.

ಸುಮಾರು ವರ್ಷಗಳ ಹಿಂದೆ ಕಛೇರಿಯ ಕೆಲಸದ ನಿಮಿತ್ತ ಜಪಾನ್ ದೇಶದ ಟೋಕೀಯೋ ನಮ್ಮ ಮತ್ತೊಂದು ಶಾಖೆಗೆ ಹೋಗುವ ಸಂದರ್ಭ ಒದಗಿ ಬಂದಿತ್ತು. ಅದು ನನ್ನ ಮೊತ್ತ ಮೊದಲ ವಿದೇಶೀ ಪ್ರವಾಸವಾಗಿದ್ದ ಕಾರಣ ಬಹಳ ಉತ್ಸುಕನಾಗಿ ಅದಕ್ಕೆ ಬೇಕಾದ ಎಲ್ಲಾ ರೀತಿಯ ತಯಾರುಗಳನ್ನು ಮಾಡಿಕೊಂಡಿದ್ದೆ. ಅದರಲ್ಲೂ ವಿಶೇಷವಾಗಿ ಸಸ್ಯಹಾರೀ ಊಟದ ವ್ಯವಸ್ಥೆಯ ಬಗ್ಗೆ ಬಹಳ ತಲೆ ಕೆಡಿಸಿಕೊಂಡು ಲಗೇಜಿನಲ್ಲಿ ನನ್ನ ಆರ್ಧದಷ್ಟು ಎಂಟಿಆರ್ ರೆಡಿ ಟು ಈಟ್ ಪದಾರ್ಥಗಳೇ ಆಗಿತ್ತು. ತಡ ರಾತ್ರಿ ಬೆಂಗಳೂರಿನಿಂದ ಹೊರಟು ಮುಂಜಾನೆ ಮಲೇಷಿಯಾದ ಕೌಲಾಲಾಂಪುರ್ ತಲುಪಿ ಮೂರ್ನಾಲ್ಕು ಗಂಟೆಗಳ ನಂತರ ಅಲ್ಲಿಂದ ಟೋಕಿಯೋದ ನರೀತಾ ವಿಮಾನ ನಿಲ್ದಾಣ ತಲುಪುವ ವಿಮಾನವೇರಿದ್ದೆ. ಬೆಳ್ಳಂಬೆಳಿಗ್ಗೆ ಹಸಿವೂ ಆಗಿತ್ತು. ಗಗನ ಸಖಿ ಯಾವಾಗ ತಿನ್ನಲು ಏನಾದರೂ ಕೊಡುವರೋ ಎಂದು ಜಾತಕ ಪಕ್ಷಿಯಂತೆ ಕುಳಿತಿದ್ದಾಗ ಹುರಿದ ಕಡಲೇಕಾಯಿ ಮತ್ತು ಹಣ್ಣಿನ ರಸವನ್ನು ತಂದು ಕೊಟ್ಟಾಗ, ಪಕ್ಕದವರು ಏನೆಂದು ಕೊಳ್ಳುತ್ತಾರೋ ಎಂದು ಆಲೋಚಿಸದೇ ಎಷ್ಟೋ ದಿನಗಳ ನಂತರ ತಿನ್ನಲು ಆಹಾರ ಸಿಕ್ಕವನಂತೆ ಗಬ ಗಬ ಎಂದು ತಿಂದು ಮುಗಿಸಿದೆ. ರಾವಣ ಹೊಟ್ಟೆಗೆ ಅರಕಾಸಿನ ಮಜ್ಜಿಗೆ ಎನ್ನುವಂತೆ ತಿಂದ್ದದ್ದು ಸಾಲದೇ ಮತ್ತೇನಾದರೂ ಕೊಡವರೋ ಎಂದು ನೋಡುತ್ತಿದ್ದಾಗ ಎಲ್ಲರಿಗೂ ಬರ್ಗರ್ ಕೊಡುತ್ತಾ ನನ್ನ ಕೈಗೂ ಬನ್ನಿನ ಮಧ್ಯೆ ಹೂ ಕೋಸಿನ ಎಲೆಗಳು ಅದರ ಮಧ್ಯೆ ಇದ್ದ ಒಂದು ತುಂಡು ಇರುವ ಬರ್ಗರ್ ಒಂದನ್ನು ಕೊಟ್ಟರು. ಅದೇಕೋ ಅನುಮಾನ ಬಂದು ಇದು ಸಸ್ಯಾಹಾರ ತಾನೇ? ಎಂದು ಕುತೂಹಲದಿಂದ ಕೇಳಿದಾಗ, ಓಹೋ, ದಯವಿಟ್ಟು ಕ್ಷಮಿಸಿ, ಇದು ಗೋಮಾಂಸದಿಂದ ಕೂಡಿದೆ ಎಂದು ಹೇಳಿ ಮದ್ಯದಲ್ಲಿದ್ದ ಗೋಮಾಂಸದ ತುಂಡನ್ನು ತೆಗೆದು, ತೆಗೆದುಕೊಳ್ಳಿ ಈಗ ಇದು ಸಸ್ಯಾಹಾರವಾಗಿದೆ. ನೀವು ನಿಶ್ವಿಂತೆಯಿಂದ ತಿನ್ನ ಬಹುದು ಎಂದಾಗ ನನ್ನ ಮುಖ ಇಂಗು ತಿಂದ ಮಂಗನಂತಾಗಿತ್ತು. ಕೂಡಲೇ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಆ ಗಗನ ಸಖಿ ದಯವಿಟ್ಟು ಕ್ಷಮಿಸಿ ನಮ್ಮಿಂದ ತಪ್ಪಾಗಿದೆ. ಸ್ವಲ್ಪ ಸಮಯ ಕೊಡಿ ನಿಮಗೆ ತಿನ್ನಲು ಸಸ್ಯಾಹಾರ ಪದಾರ್ಥದ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿ ಮತ್ತೆರಡು ಕಡಲೇ ಕಾಯಿ ಬೀಜದ ಪೊಟ್ಟಣ, ಸ್ವಲ್ಪ ಚಾಕ್ಲೇಟ್, ಚಿಸ್ಕೆಟ್ ಮತ್ತು ಹಣ್ಣಿನ ರಸವನ್ನು ತಂದು ಕೊಟ್ಟರು. ಗೋಮಾಂಸ ತಿಂದು ಧರ್ಮಭ್ರಷ್ಟನಾಗುವುದಕ್ಕಿಂತ ಈ ಕುರುಕಲು ತಿಂದು ಜೀವ ಉಳಿಸಿಕೊಳ್ಳುವುದೇ ಲೇಸು ಎಂದು ಪಾಲಿಗೆ ಬಂದದ್ದು ಪಂಚಾಮೃತ ಎಂದು ಕೊಟ್ಟದ್ದನ್ನೇ ತಿಂದು ಹಾಗೂ ಹೀಗೂ ಟೋಕಿಯೋ ತಲುಪಿ ಅಲ್ಲಿಂದ ನೇರವಾಗಿ ಹೋಟೆಲ್ಗೆ ಹೋಗಿ ಬಿಸಿ ಬಿಸಿಯಾದ ಎಂಟಿಆರ್ ಪೊಂಗಲ್ ಬಿಸಿ ಮಾಡಿಕೊಂಡು ತಿಂದಾಗ ನೆಮ್ಮದಿಯಾಗಿತ್ತು.

ಟೋಕಿಯೋದಲ್ಲಿ ಇದ್ದ ಮೂರುವಾರಗಳಲ್ಲಿ ಕೆಲಸ ನಿರಾಯಾಸವಾಗಿ ನಡೆದರೂ ತೆಗೆದು ಕೊಂಡು ಹೋಗಿದ್ದ ಪದಾರ್ಥಗಳೆಲ್ಲವೂ ಮುಗಿದು ಹೋಗಿ ಹಣ್ಣು ಹಂಪಲುಗಳನ್ನು ತಿನ್ನುತ್ತಾ , ವಾರಾಂತ್ಯದಲ್ಲಿ ನಮ್ಮ ಸ್ನೇಹಿತರ ನಮ್ಮ ರೂಮಿಗೆ ಬಾ, ನಮ್ಮ ರೂಮಿಗೇ ಬಾ ಅಂತ ಕರೆಯುವವರೇ. ಒಂದೊಂದು ವಾರಾಂತ್ಯದಲ್ಲಿ ಒಬ್ಬರ ಮನೆಗೆ ಹೋಗಿ ಅವರಿಗೆ ಒಂದು ವಾರಕ್ಕಾಗುವಷ್ಟು ಪಲ್ಯ, ಗೊಜ್ಜು, ಸಾರು ಹುಳಿ ಮಾಡಿಟ್ಟು ಜೊತೆಗೆ ಪಲಾವ್, ಮೊಸರು ಬಜ್ಜಿ ಎಲ್ಲದ್ದಕ್ಕಿಂತ ಹದವಾಗಿ ಒಗ್ಗರಣೆ ಹಾಕಿದ ಮೊಸರನ್ನ ಹೊಟ್ಟೆ ಬಿರಿಯುವ ಹಾಗೆ ತಿನ್ನುತ್ತಿರುವಾಗ ನಮ್ಮ ಊಟದ ಮಹತ್ವ ಗೊತ್ತಾಗಿತ್ತು.

ಜಪಾನಿನಲ್ಲಿ ಮತ್ತೊಂದು ಗಮನಿಸಿದ ಬೇಕಾದ ಅಂಶವೆಂದರೆ ಎಲ್ಲದ್ದಕ್ಕೂ ದುಡ್ಡು ಕೊಡಬೇಕು. ನಮ್ಮ ಸ್ನೇಹಿತರು ಇದ್ದ ರೂಮ್ಗಳಲ್ಲಿ ಕಾಮನ್ ಬಾತ್ ರೂಮ್ ಇರುತ್ತವೆ. ಅಲ್ಲಿ ಸ್ನಾನ ಮಾಡಲು 150 ಯೆನ್ ಹಾಕಿದಲ್ಲಿ ಮಾತ್ರವೇ 15 ನಿಮಿಷ ನೀರು ಬರುತ್ತದೆ. ಅದೇ ರೀತಿ ವಾಷಿಂಗ್ ಮೇಷೀನ್ನಿನಲ್ಲಿ ಒಂದು ಬಾರಿ ಬಟ್ಟೆ ಒಗೆಯಲು 150 ಯೆನ್ ಹಾಕಿದಲ್ಲಿ ಮಾತ್ರವೇ ವಾಷಿಂಗ್ ಮೆಷಿನ್ ಕೆಲಸ ಶುರು ಮಾಡೋದು. ಅದೇ ರೀತಿ ಅರ್ಧ ಗಂಟೆ ಇಸ್ತ್ರಿ ಪಟ್ಟಿಗೆ ಉಪಯೋಗಿಸಲು ಮತ್ತದೇ 150 ಯೆನ್. ಇನ್ನು ನಮ್ಮಲ್ಲಿ ಹೇರ್ ಕಟಿಂಗ್ ಶಾಪ್ಗೆ ಹೋದರೆ ಕನಿಷ್ಠ ಪಕ್ಷ ಅರ್ಧ ಮುಕ್ಕಾಲು ಗಂಟೆ ತೆಗೆದು ಕೊಂಡರೆ ಅಲ್ಲಿ ಕೇವಲ 10 ನಿಮಿಷದಲ್ಲಿಯೇ 450 ಯೆನ್ ಕೊಟ್ಟರೇ ನಮಗೆ ಬೇಕಾದ ಹಾಗೆ ಕೂದಲು ಕತ್ತರಿಸಿ ಕಳುಹಿಸುವುದನ್ನು ಹೇಳಿವುದಕ್ಕಿಂತ ಅನುಭವಿಸಿದರೇ ಚೆಂದ.

ನಮ್ಮ ಆಫೀಸಿನಿಂದ ದಿನ ಭತ್ಯೆ ರೂಪದಲ್ಲಿ ಪ್ರತೀ ದಿನ ನಮಗೆ 5500 ಯೆನ್ ಕೊಡುತ್ತಿದ್ದರು. ನನ್ನ ಊಟೋಪಚಾರವೆಲ್ಲಾ ಹೊಟೇಲ್ ರೂಮಿನಲ್ಲಿಯೇ ಆಗುತ್ತಿದ್ದರಿಂದ ನನಗೆ ಅಷ್ಟೇನೂ ಖರ್ಚಾಗುತ್ತಿರಲಿಲ್ಲ. ಹಾಗೆ ಉಳಿಸಿದ ಹಣದಿಂದಲೇ ಮಕ್ಕಳಿಗೆ ಬಣ್ಣ ಬಣ್ಣದ ಬಟ್ಟೆಗಳು, ತರ ತರಹದ ಆಟಾಸಾಮಾನುಗಳು ಅಮೇರಿಕದ 1$ ಶಾಪಿನಂತೆ ಜಪಾನಿನ 100 ಯೆನ್ ಶಾಪಿಂಗ್ನಲ್ಲಿ ಸಣ್ಣ ಪುಟ್ಟ ಕತ್ತರಿ, ಚಾಕು, ಮತ್ತೇನೋ ಗೃಹ ಅಲಂಕಾರಿಕ ವಸ್ತುಗಳನ್ನು ಕೊಂಡಿದ್ದೆ. ಇಷ್ಟೊಂದು ವರ್ಷವಾದರೂ ಅವುಗಳೆಲ್ಲವೂ ಇನ್ನೂ ಚೆನ್ನಾಗಿಯೇ ಕೆಲಸ ಮಾಡುತ್ತಿವೆ. ಭಾರತಕ್ಕೆ ಇನ್ನೂ ಡಿಜಿಟೆಲ್ ಕ್ಯಾಮೆರಾ ಬರುವ ಮೊದಲೇ ನನ್ನ ಮೊತ್ತ ಮೊದಲಿನ 4.5 ಮೆಗಾ ಪಿಕ್ಸೆಲ್ 2 MB ಮೆಮೋರಿ ಕಾರ್ಡ್ ಇರುವ ಡಿಜಿಟೆಲ್ ಕ್ಯಾಮೆರಾ ತೆಗೆದುಕೊಂಡು ಭಾರತಕ್ಕೆ ಬಂದ ಮೇಲೆ ಎಲ್ಲರ ಮುಂದೆ ಶೋಕಿ ಮಾಡಿದ್ದು ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿಯೇ ಇದೆ.

ಹೀಗೆ ಹಾಗೂ ಹೀಗೂ ಮೂರು ವಾರಗಳನ್ನು ಟೋಕೀಯೋದಲ್ಲಿ ಕಳೆದು ಭಾರತಕ್ಕೆ ಹಿಂದಿರುಗುವ ದಿನ ಏರ್ಪೋಟ್ ಲಿಮೋಸಿನ್ ಬಸ್ (ನಮ್ಮ ವಾಯು ವಜ್ರದ ರೀತಿ) ಲಗೇಜ್ ಸಮೇತ ಹತ್ತಿ ನರೀಟಾ ಏರ್ಪೋಟ್ ತಲುಪುವ ಹೊತ್ತಿಗೆ ಸುಮಾರು ಬೆಳಿಗ್ಗೆ 11 ಅಂದರೆ ನಮ್ಮ ಬೆಂಗಳೂರಿನಲ್ಲಿ ಆಗ ಬೆಳಿಗ್ಗೆ 7:30. ಬೇಗ ಬೇಗ ಚೆಕ್ ಇನ್ ಮಾಡಿಸಿ ಬೋರ್ಡಿಂಗ್ ಪಾಸ್ ತೆಗೆದುಕೊಳ್ಳುವಾಗ ಎಚ್ಚರದಿಂದ ವೆಜ್ ಮೀಲ್ಸ್ ಎಂದು ತಿಳಿಸಿ ಬೋರ್ಡಿಂಗ್ ಪಾಸ್ ಪಡೆದು 1:30ರ ಫ್ಲೈಟ್ ಟೇಕಾಫ್ ಮಾಡಲು ಇನ್ನೂ ಸಮಯ ಇದ್ದಿದ್ದರಿಂದ ಮತ್ತು ನಮ್ಮ ಕಾಲಿಂಗ್ ಕಾರ್ಡಿನಲ್ಲಿ ಇನ್ನೂ 350- 400 ಯೆನ್ ಬಾಕಿ ಇದ್ದ ಕಾರಣ ಮನೆಗೆ ಫೋನ್ ಮಾಡಿ, ಫೋನ್ ಕಾರ್ಡಿನಲ್ಲಿ ಬ್ಯಾಲೆನ್ಸ್ ಸ್ವಲ್ಪನೇ ಇದೆ. ಯಾವಾಗ ಬೇಕಾದ್ರೂ ಕಟ್ ಆಗ್ಬೋದು ಅಂತಾ ಮೊದಲೇ ತಿಳಿಸಿ, ನಂತರ ಚೆಕ್ ಇನ್ ಸರಿಯಾಗಿ ಆಗಿದೆ. ಮಧ್ಯರಾತ್ರಿ ಬರುವ ಕಾರಣ ಕರೆದುಕೊಂಡು ಹೋಗಲು ಬರೋದು ಬೇಡ. ನಾನೇ ಟ್ಯಾಕ್ಸಿ ಮಾಡಿಸಿಕೊಂಡು ಬರ್ತೀನಿ ಅಂತಾ ಹೇಳ್ತಾ ಇದ್ದ ಹಾಗೇ, ಇಡೀ ಏರ್ಪೋರ್ಟ್ ಇದ್ದಕ್ಕಿದ್ದಂತೆಯೇ ಅಲ್ಲಾಡುವುದಕ್ಕೆ ಶುರುವಾಯ್ತು. ನಮ್ಮ ಟೆಲಿಫೋನ್ ಬೂತ್ ಅದಕ್ಕೆ ನೇತು ಹಾಕಿದ್ದ ಬೋರ್ಡ್ ಕೂಡಾ ಆಲ್ಲಾಡ್ತಾ ಇದೆ. ಎಷ್ಟೇ ಸರಿಯಾಗಿ ನಿಂತರೂ ಕಾಲು ಬೀಳೋ ಹಾಗೆ ಆಗ್ತಾ ಇದೆ. ಸುತ್ತಾ ಮುತ್ತಾ ತಿರಿಗಿ ನೋಡಿದರೆ ಕೆಲವರ ಕೈಯಲ್ಲಿದ್ದ ಲಗೇಜ್ ಕೆಳಗೆ ಬಿದ್ರೆ, ಇನ್ನು ಕೆಲವರ ಪಕ್ಕದಲ್ಲಿ ಇಟ್ಟು ಕೊಂಡಿದ್ದ ಲಗೇಜ್ ತನ್ನಿಂದ ತಾನೇ ಉರುಳಿ ಹೋಗ್ತಾಇದೆ. ಕೆಲವರು ಜೋರಾಗಿ ಕಿರಿಚ್ತಾ ಇದ್ದಾರೆ, ನನಗೆ ಏನು ಆಗ್ತಾ ಇದೆ ಅಂತಾ ಗೊತ್ತಾಗ್ದೇ. ಮಮತಾ ಅಲ್ಲಾಡ್ತಾ ಇದೇ, ಅಲ್ಲಾಡ್ತಾ ಇದೇ ಅಂತಾ ಫೋನ್ ನಲ್ಲಿ ಹೇಳ್ತಾ ಇದ್ದಾ ಹಾಗೇ ಕಾಲಿಂಗ್ ಕಾರ್ಡಿನ ಕರೆನ್ಸಿ ಖಾಲಿ ಆಗಿ ಫೋನ್ ಕೂಡಾ ಕಟ್ ಆಗಿ ಹೋಯ್ತು. ಇಷ್ಟೇಲ್ಲಾ ಆವಾಂತರ ಆಗಿದ್ದು ಕೇವಲ 30-40 ಸೆಕೆಂಡ್ ಮಾತ್ರವೇ. ಹಾಗೆಯೇ ಬೂತ್ ಹೊರಗೆ ಬಂದು ನೋಡಿದರೆ, ಕಿರಿಚಾಡಿ ಅತಂಕ ಪಟ್ಟು ಕೊಂಡವರೆಲ್ಲಾ ವಿದೇಶಿಯರೇ ಆಗಿದ್ದರು. ಸ್ಥಳೀಯ ಸಿಬ್ಬಂಧ್ಧಿಗಳು ಮಾತ್ರ ತಮ್ಮ ಪಾಡಿಗೆ ತಾವು ಏನೂ ಆಗಿಲ್ಲವೇನೋ ಎನ್ನುವಂತೆ ಕೆಲಸ ಮಾಡಿ ಕೊಂಡು ಹೋಗ್ತಾ ಇದ್ದರಿಂದ ನನಗೆ ಏನಾಯ್ತು ಅಂತಾನೇ ಗೊತ್ತಾಗಲಿಲ್ಲ. ಹಾಗೆ ಸಾವರಿಸಿಕೊಂಡು ಅಲ್ಲೇ ಸ್ವಲ್ಪ ನೀರು ಕುಡಿದು, ಸ್ವಲ್ಪ ಹೊತ್ತಿನ ನಂತರ ವಿಮಾನದಲ್ಲಿ ಕುಳಿತು ಕೊಂಡು ನಮ್ಮ ಸೀಟಿನ ಮುಂದೆ ಇದ್ದ ಟಿವೀ ಚಾನೆಲ್ ನೋಡಿದಾಗಲೇ ಗೊತ್ತಾಗಿದ್ದು ಅದು 7.5 ರಿಯಾಕ್ಟರ್ ಪ್ರಮಾಣದ ಭೂಕಂಪವಾಗಿದ್ದು ಸುಮಾರು ಸಾವು ನೋವುಗಳು ಟೋಕೀಯೋದಲ್ಲಿ ಸಂಭವಿಸಿವೆ ಅಂತಾ. ಅಬ್ಬಾ ದೇವ್ರೇ, ಕಡೇ ದಿನ ನಮ್ಮದೇಶಕ್ಕೆ ಹಿಂತಿರುಗುವ ದಿನ ಜಪಾನಿನ ಭೂಕಂಪದ ಅನುಭವ ಕೂಡಾ ಆಗ್ಲಿ ಅಂತಾ ಈ ರೀತಿ ಮಾಡಿದ್ಯಾ. ಏನಪ್ಪಾ ನಿನ್ನ ಲೀಲೆ ಅಂತಾ ಅನ್ಕೊಂಡು ಗಗನ ಸಖಿಯರು ಕೊಟ್ಟ ಊಟ ತಿಂದಿ ಮಾಡಿಕೊಂಡು ನನ್ನ ಪಾಡಿಗೆ ನಾನು ನಿದ್ದೆಗೆ ಜಾರಿ ಹೋದೆ. ಅಲ್ಲಿಂದ ಮಲೇಷ್ಯಾದ ಕೌಲಾಲಾರಂಪುರ್ ತಲುಪಿ ಅಲ್ಲಿಂದ ಮತ್ತೊಂದು ವಿಮಾನ ಹಿಡಿದು ಅಬ್ಬಾ ಇನ್ನೇನು ನಾಲ್ಕು ಗಂಟೆಯೊಳಗೆ ನಮ್ಮ ಊರು ಸೇರಿ ಕೊಂಡು ಬಿಡ್ತೀನಿ ಅಂತ ಮನೆ ಮಡೆದಿ, ಮಕ್ಕಳು ಮತ್ತು ಅಪ್ಪಾ ಅಮ್ಮಂದಿರನ್ನು ನೆನಪಿಸಿಕೊಂಡು ಅವರಿಗಾಗಿಯೇ ತಂದಿದ್ದ ಉಡುಗೊರೆಗಳನ್ನು ಜೊಟ್ಟಾಗ ಆವರ ಸಂತೋಷ ಹೇಗಿರಬಹುದು ಎಂದು ಮನಸ್ಸಿನಲ್ಲಿಯೇ ಮಂಡಿಗೆ ಹಾಕುತ್ತ ಇದ್ದಾಗ, ವಿಮಾನ ಕೂಡಾ ಸಲ್ಪ ಡೋಲಾಯಮಾನದ ಸ್ಥಿತಿಯಂತೆ ಅತ್ತಿಂದಿತ್ತ ಅಲ್ಲಾಡುತ್ತಿತ್ತು. ಇದ್ದಕ್ಕಿದ್ದಂತಯೇ ಪ್ರಯಾಣಿಕರೆಲ್ಲರೂ ದಯವಿಟ್ಟು ವಿಮಾನದಲ್ಲಿ ಅತ್ತಿತ್ತ ಓಡಾಡರೆ ಸೀಟ್ ಬೆಲ್ಟ್ ಧರಿಸಿಕೊಂಡು ತಮ್ಮ ತಮ್ಮ ಸ್ಥಳಗಲ್ಲಿಯೇ ಆಸೀನರಾಗಿ ಎಂಬ ಸಂದೇಶ ಕೇಳಿ ಬಂತು. ಗಗನ ಸಖಿಯರೂ ಆ ಕಡೆ ಈ ಕಡೇ ಈ ಕಡೇ ಓಡಾಡುತ್ತಾ ಪ್ರಯಾಣಿಕರ ಸುರಕ್ಷತೆಯತ್ತ ಗಮನ ಹರಿಸುತ್ತಿದ್ದಂತೆ ವಿಮಾನದ ಅಲುಗಾಟ ಹೆವ್ವಾಗ ತೊಡಗಿತು. ನಿಂತಿದ್ದ ಗಗನ ಸಖಿಯರೂ ಅಲ್ಲೇ ಕುಸಿಯುವಂತಾಯಿತು. ಪೈಲೆಟ್ ಹವಾಮಾನ ವೈಪರೀತ್ಯದಿಂದಾಗಿ ಈ ರೀತಿಯಾಗಿ ವಿಮಾನ ಅಲ್ಲಾಡುತ್ತಿದೆ. ಯಾರೂ ಭಯಪಡುವ ಅವಶ್ಯಕತೆ ಇಲ್ಲಾ ಎಂದು ಹೇಳಿ, ಸ್ವಲ್ಪ ಹೊತ್ತಿನ ನಂತರ ಹೆಚ್ಚಿನ ಮಾಹಿತಿ ತಿಳಿಸುತ್ತೇವೆ ಎನ್ನುತ್ತಿದ್ದಂತೆ, ಆಗಸದಲ್ಲಿ ಹಾರಾಡುತ್ತಿದ್ದ ವಿಮಾನ ಇದ್ದಕ್ಕಿದ್ದಂತೆಯೇ ಚಾಲಕನ ನಿಯಂತ್ರಣ ತಪ್ಪಿ ಎತ್ತರಿಂದ ಕೆಳಗೆ ಬೀಳತೊಡಗಿತು. ಅಯ್ಯೋ ರಾಮ ಇದೇಪ್ಪಾ ಅಲ್ಲಿ ನೋಡಿದರೆ ಭೂಕಂಪದಿಂದ ಪಾರು ಮಾಡಿ ಇಲ್ಲಿ ಈ ರೀತಿಯಾಗಿ ಆಡಿಸುತ್ತಿದ್ದೀಯಾ, ಅಶ್ಟೇ ನನ್ನ ಗತಿ. ನಾನು ಸುರಕ್ಷಿತವಾಗಿ ಮನೆಗೆ ಹೋಗೋದು ಕಷ್ಟ. ಇಲ್ಲಿಗೆ ನನ್ನ ಆಯಸ್ಸು ಮುಗಿಯಿತು. ನನ್ನ ಮಡದಿಯೊಂದಿಗೆ ಮಾತಾನಾಡಿದ್ದೇ ಕಡೇದು. ಛೇ, ಅಪ್ಪಾ ಅಮ್ಮನ ಜೊತೇನೂ ಮಾತಾನಾಡಿ ಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಏನೇನೋ ಯೋಚನೆ ತಲೆಯಲ್ಲಿ ಒಂದು ಕ್ಷಣ ಸುಳಿಯತೊಡಗಿತು. ಜೋರಾಗಿ ನೆಲಕ್ಕೆ ಅಪ್ಪಳಿಸುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಬ್ರೇಕ್ ಹಾಗಿದ ಅನುಭವ ಸೀಟ್ ಬೆಲ್ಟ ಕಟ್ಟಿಕೊಂದಿದ್ದರೂ, ಸೀಟ್ನಿಂದ ಎರಡು ಮೂರು ಅಡಿಗಳಷ್ಟು ಎತ್ತರಕ್ಕೇರಿ ಪುನಃ ಸೀಟ್ ಮೇಲೆ ಕುಳಿತ ಅನುಭವ. ಈ ಭರದಲ್ಲಿ ಹಣೆಗೆ ಚೂರು ಪೆಟ್ಟೂ ಬಿತ್ತು. ಇದೇ ರೀತಿಯ ಅನುಭವ ಎರಡು ಮೂರು ಸಲಾ ಆಗಿ, ಕಡೆಗೆ ಪೈಲೆಟ್ ತನ್ನ ಅನುಭವದ ಮೂಲಕ ವಿಮಾನವನ್ನು ನಿಯಂತ್ರಣಕ್ಕೆ ತಂದ ನಂತರ ಮತ್ತೊಮ್ಮೆ ಕರೆ ಮಾಡಿ, ಈಗ ಯಾವುದೇ ರೀತಿಯ ತೊಂದರೆ ಇಲ್ಲ ಇನ್ನು ಅರ್ಧ ಮುಕ್ಕಾಲು ಗಂಟೆಯೊಳಗೆ ಸುರಕ್ಷಿತವಾಗಿ ಬೆಂಗಳೂರಿನ ಹೆಚ್.ಎ.ಎಲ್ ಅಂತರಾಷ್ಟ್ರೀಯ ವಿಮಾನದಲ್ಲಿ ಸುರಕ್ಷಿತವಾಗಿ ಇಳಿಯುತ್ತೇವೆ ಎಂದು ತಿಳಿಸಿದಿದಾಗ ಬಾಯಿಗೆ ಬಂದಿದ್ದ ಹೃದಯಾ ಮತ್ತೆ ಸ್ವಸ್ಥಾನಕ್ಕೆ ಹಿಂದಿರುಗಿತು. ಸಾವು ಯಾವಾಗ ಬೇಕಾದರೂ, ಹೇಗೆ ಬೇಕದರೂ ಬರಬಹುದು ಎಂದು ಕೇಳಿದ್ದೆ ಈಗ ಅದರ ಅನುಭವವಾಯ್ತು. ಬದುಕಿದೆಯಾ ಬಡ ಜೀವ ನೀರನ್ನು ತರಿಸಿಕೊಂಡು ಗಟ ಗಟನೆ ಕುಡಿದು ನನಗೆ ತಿಳಿದಿದ್ದ ಎಲ್ಲಾ ಶ್ಲೋಕಗಳನ್ನು ಹೇಳಿಕೊಳ್ಳುವಷ್ಟರಲ್ಲಿ ಬೆಂಗಳೂರು ತಲುಪಿ ಸುರಕ್ಷಿತವಾಗಿ ಇಳಿದ ಸಂದೇಶ ಬಂದಿತು. ವಿಮಾನ ನಿಂತ ಕೂಡಲೇ ಎಲ್ಲರೀಗೂ ಪುನರ್ಜನ್ಮ ಪಡೆದ ಅನುಭವ. ಎಲ್ಲರೂ ಒಬ್ಬರ ಮೇಲೆ ಒಬ್ಬರು ಎದ್ದೂ ಬಿದ್ದೂ ಇಳಿಯಲು ಪ್ರಯತ್ನಿಸುತ್ತಿದ್ದಾಗ ಹೇಗೂ ಸುರಕ್ಷಿತವಾಗಿ ಹಿಂದಿರುಗಿ ಬಂದಾಗಿದೆ. ಇನ್ನು ಹತ್ತು ಹದಿನೈದು ನಿಮಿಷ ತಡವಾಗಬಹುದಷ್ಟೇ ಎಂದು ತಿಳಿದು ಎಲ್ಲರೂ ಇಳಿದ ಮೇಲೆ ಅರಾಮವಾಗಿ ಇಳಿಯೋಣ ಎಂದು ಸ್ವಲ್ಪ ಹೊತ್ತು ಅಲ್ಲೇ ಕುಳಿತು ನಂತರ ಆತಾಮವಾಗಿ ಇಳಿದು ಇಮಿಗ್ರೇಷನ್ ಮುಗಿಸಿಕೊಂಡು ಲಗೇಜ್ ತೆಗೆದು ಕೊಳ್ಳಲು ಹೊರಗೆ ಬರುವಷ್ಟರಲ್ಲಿ ಗಂಟೆ ನಡುರಾತ್ರಿ 2ಆಗಿತ್ತು. ನನ್ನ ಲಗೇಜ್ ಎಲ್ಲಿದೇ ಅಂತಾ ಹುಡುಕುತ್ತಿರುವಾಗಲೇ, ಜೋರಾಗಿ ಅಪ್ಪಾ ಎಂದು ನನ್ನ ಪುಟ್ಟ ಮಗಳು ಕೂಗಿದಂತೆ ಕೇಳಿಸಿತು. ಅರೇ, ಇಷ್ಟು ಹೊತ್ತಿನಲ್ಲಿ ನನ್ನ ಮಗಳು ಇಲ್ಲಿಗೇಕೆ ಬರುತ್ತಾಳೆ? ಅವರಿಗೆ ಬಾರದಿರಲು ನಾನೇ ಹೇಳಿದ್ದೆ. ಅದೂ ಅಲ್ಲದೇ ಇಲ್ಲಿಯವರೆಗೆ ಹೇಗೆ ಬಿಡುತ್ತಾರೆ ಅಂತ ಯೋಚಿಸುತ್ತಿರುವಾಗಲೇ ನನ್ನ ಮಗಳು ಓಡಿ ಬಂದು ನನ್ನನ್ನು ಅಪ್ಪಿ ಮುದ್ದಾಡ ತೊಡಗಿದಳು. ಒಂದು ಕ್ಷಣ ಏನಾಗುತ್ತಿದೆ ಎಂದು ಅರಿಯುವಷ್ಟ್ರರಲ್ಲಿ ನನ್ನಾಕಿ ಮತ್ತು ನಮ್ಮ ಪೂಜ್ಯ ತಂದೆಯವರೂ ನನ್ನ ಬಳಿ ಬಂದು ಜೋರಾಗಿ ನನ್ನನ್ನು ತಬ್ಬಿಕೊಂಡು ಗಳಗಳನೇ ಅಳುತ್ತಿದ್ದಾರೆ.

ಅಕ್ಕ ಪಕ್ಕದವರೆಲ್ಲರೂ ನಮ್ಮನ್ನೇ ಗಮನಿಸುತ್ತಿದ್ದನ್ನು ನೋಡಿ ಸರಿ ಸರಿ ಮೊದಲು ಹೋರಗೆ ಹೋಗಿ ಮಾತಾನಾಡೋಣ ಎಂದು ನನ್ನ ಲಗ್ಗೇಜ್ ತೆಗೆದುಕೊಂಡು ಹೊರಗೆ ಬಂದ ಮೇಲೆ ತಿಳಿದ ವಿಷಯವೇನೆಂದರೆ, ಅಂದು ಬೆಳಿಗ್ಗೆ ಎಲ್ಲರಿಗೂ ತಿಂಡಿ ಮತ್ತು ಅಡುಗೆ ಮಾಡುತ್ತಿದ್ದ ನನ್ನ ಹೆಂಡತಿಯೊಂದಿಗೆ ನಾನು ಕರೆ ಮಾಡಿ ಅಲ್ಲಾಡ್ತಾ ಇದೇ ಮಮತಾ ಅಲ್ಲಾಡ್ತಾ ಇದೇ ಎಂದು ಹೇಳಿ ಫೋನ್ ಕಟ್ ಆಗಿದ್ದಕ್ಕೆ ಗಾಬರಿಯಾಗಿ ಏನಾಗಿರಬಹುದು ಎಂದು ಯೋಚಿಸುತ್ತಿರುವ ಸ್ವಲ್ಪ ಹೊತ್ತಿನಲ್ಲೇ ನಮ್ಮ ತಂದೆಯವರು ಟಿವಿಯ ವಾರ್ತಾ ಪ್ರಸಾರದಲ್ಲಿ ಜಪಾನಿನ ಟೋಕಿಯೋದಲ್ಲಿ 7.5 ರಿಯಾಕ್ಟರ್ ಪ್ರಮಾಣದ ಭೂಕಂಪವಾಗಿದ್ದು ಸುಮಾರು ಸಾವು ನೋವುಗಳು ಸಂಭವಿಸಿರುವ ವಿಷಯ ಕೇಳಿದ್ದಾರೆ. ಕೂಡಲೇ ನನ್ನ ಮಡದಿಯ ಬಳಿ ಬಂದು ಶ್ರೀಕಂಠಾ ಹೊರಟ್ನಾ, ಹೊರಡುವ ಮುಂಜೆ ಫೋನ್ ಎನಾದ್ರೂ ಮಾಡಿದ್ನಾ ಅಂತಾ ನನ್ನಾಕೆಯ ಬಳಿ ವಿಚಾರಿಸಿದ್ದಾರೆ. ಆಕೆ ಕೂಡಾ, ಹೌದು ಮಾವಾ ಈಗ ಅರ್ಧ ಗಂಟೆ ಮುಂಜೆ ಫೋನ್ ಮಾಡಿ ಚಿಕ್ ಇನ್ ಮಾಡಿದ್ದೇನೆ. ನೀವು ಯಾರೂ ಏರ್ಪೋರ್ಟಿಗೆ ಬರಬೇಡಿ ನಾನೇ ಟ್ಯಾಕ್ಸಿ ಮಾಡಿಕೊಂಡು ಬರುತ್ತೇನೆ ಅಂತಾ ಹೇಳ್ತಾ ಇದ್ರೂ ಅಷ್ಟರಲ್ಲಿ ಇದ್ದಕ್ಕಿದ್ದಂತೆಯೇ ಮಮತಾ ಅಲ್ಲಾಡ್ತಾ ಇದೇ, ಮಮತಾ ಅಲ್ಲಾಡ್ತಾ ಇದೇ ಅಂತಾ ಹೇಳ್ತಾ ಫೋನ್ ಕಟ್ಟಾಗಿ ಹೋಯ್ತು. ನನಗೇಕೋ ತುಂಬಾ ಭಯ ಆಗ್ತಾ ಇದೆ ಎಂದು ತನ್ನ ಆತಂಕ ತನ್ನ ಮಾವನವರ ಬಳಿ ತೋಡಿಕೊಂಡಿದ್ದಾಳೆ. ಅವಳನ್ನು ಸಮಾಧಾನ ಪಡಿಸಿದ ನಮ್ಮ ತಂದೆಯವರು, ಹೌದು ಈಗ ತಾನೇ ಟೀವಿಲಿ ಟೋಕಿಯೋದಲ್ಲಿ 7.5 ರಿಯಾಕ್ಟರ್ ಪ್ರಮಾಣದ ಭೂಕಂಪವಾಗಿ ಸುಮಾರು ಸಾವು ನೋವುಗಳು ಸಂಭವಿಸಿರುವ ವಿಷಯ ತಿಳಿಸಿ ನಮ್ಮ ಮಗನಿಗೆ ಏನೂ ಆಗಿರುವುದು ಬೇಡ ಎಂದು ದೇವರಿಗೆ ತುಪ್ಪದ ದೀಪ ಹಚ್ಚಿ ಕೇಳಿಕೊಳ್ಳಮ್ಮಾ ಎಂದು ಹೇಳಿ, ಹಾಂ ಇನ್ನೊಂದು ವಿಷಯ, ಇದನ್ನು ನಿಮ್ಮತ್ತೆಗೆ ಹೇಳಬೇಡ. ಅವಳು ತುಂಬಾ ವೀಕು. ಬಹಳ ಹಚ್ಚಿಕೊಂಡು ರಂಪಾ ಮಾಡಿಬಿಡುತ್ತಾಳೆ. ಹೇಗೂ ರಾತ್ರಿ ಶ್ರೀಕಂಠಾ ಸುರಕ್ಷಿತವಾಗಿ ಬಂದ ಮೇಲೆ ಹೇಳಿದ್ರಾಯ್ತು ಎಂದು ತಿಳಿಸಿದ್ದಾಳೆ.

ಈ ಯಾವ ವಿಷಯಗಳ ಅರಿವಿಲ್ಲದ ಅಜ್ಜೀ ಮತ್ತು ಮೊಮ್ಮಕ್ಕಳು ಇವತ್ತು ಅಪ್ಪಾ ಬಂದು ಬಿಡ್ತಾನೆ. ನಿಮಗೆಲ್ಲಾ ಏನೇನೋ ಅಟಾ ಸಾಮಾನು ಮತ್ತು ಬಟ್ಟೆಗಳನ್ನು ತರ್ತಾನೆ. ಇಬ್ಬರೂ ಜಗಳವಾಡಿಕೊಳ್ಳದೇ ಆ ಆಟಾಸಾಮಾನಿನಲ್ಲಿ ಆಟವಾಡಿಕೊಳ್ಳಿ ಅಂತಾ ಹೇಳುತ್ತಿರುವ ಹೊತ್ತಿಗೆ ನಮ್ಮ ತಂಗಿ ಕರೆಮಾಡಿ ಅಮ್ಮಾ, ಶ್ರೀಕಂಠಾ ಜಪಾನಿನಿಂದ ಬಂದ್ನಾ? ಯಾವಾಗ ಬರೋದು? ಫೋನ್ ಏನಾದ್ರೂ ಮಾಡಿದ್ನಾ ಅಂತಾ ಕೇಳ್ತಾ ಇದ್ದಿದ್ದನ್ನು ಕೇಳಿಸಿಕೊಂಡ ನಮ್ಮ ತಂದೆ, ತಾವೇ ಫೋನ್ ತೆಗೆದು ಕೊಂಡು ಹೂಂ.. ಫೋನ್ ಮಾಡಿದ್ದಾ.. ಹೊರಟಿದ್ದಾನಂತೇ… ಇವತ್ತು ಮಧ್ಯರಾತ್ರಿ ಬಂದು ಬಿಡ್ತಾನೆ ಅಂತಾ ಹೇಳಿದ್ದಾರೆ. ಅದಕ್ಕೆ ನನ್ನ ತಂಗಿ ಸರಿ ಅಣ್ಣಾ ಅವನು ಬಂದ ಮೇಲೆ ನನಗೆ ಒಂದು ಫೋನ್ ಮಾಡಿ ಎಂದು ಹೇಳಿ ಕರೆ ಕಟ್ ಮಾಡಿದ್ದಾಳೆ. ಇದೇ ರೀತೀ ನನ್ನ ಮತ್ತೊಬ್ಬ ತಂಗಿ ನಮ್ಮ ನಮ್ಮ ಚಿಕ್ಕಮ್ಮಂದಿರೂ ಮತ್ತೆ ಕೆಲವು ಸ್ನೇಹಿತರೂ ಆಗ್ಗಿಂದ್ದಾಗೆ ಕರೆ ಮಾಡಿದಾಗಲೆಲ್ಲಾ ನಮ್ಮ ತಂದೆಯವರೇ ಸಂಭಾಳಿಸಿ ನಮ್ಮ ತಾಯಿ ಮತ್ತು ನನ್ನ ಮಕ್ಕಳಿಗೆ ಯಾವ ವಿಷಯವನ್ನೂ ತಿಳಿಸಿಲ್ಲ.

ಇನ್ನು ನನ್ನಾಕಿ, ಮನಸ್ಸು ತಡೆಯದೆ ಕೂಡಲೇ ನಮ್ಮ ಮಾವನವರಿಗೆ ಕರೆ ಮಾಡಿ ವಿಷಯ ತಿಳಿಸಿ, ಅವರಿಗೆ ತಿಳಿದಿದ್ದ ಏರ್ಪೋಟ್ ಆಫೀಸರ್ ಅವರಿಗೆ ಕರೆ ಮಾಡಿಸಿ ವಿಮಾನದ ವಿಷಯ ತಿಳಿದು ಕೊಂಡು ಹಾಗೇ ಏರ್ಪೋಟ್ ಒಳಗೆ ಹೋಗಲು ಪಾಸ್ ಕೂಡಾ ಮಾದಿಸಿ ನಮ್ಮ ಮಾವನವರ ಮನೆಯ ಡ್ರೈವರ್ನನ್ನು ಏರ್ಪೋರ್ಟಿನಿಂದ ನನ್ನನ್ನು ಕರೆ ತರುವ ಎಲ್ಲಾ ವ್ಯವಸ್ಥೆ ಮಾಡಿ ರಾತ್ರಿ ಯಾವಾಗಾ ಆಗುವುದೋ? ನನ್ನನ್ನು ಯಾವಾಗ ನೋಡುತ್ತೀನೋ ಎಂದು ಜಾತಕ ಪಕ್ಷಿಯಂತೆ ಕಾಯುತ್ತಾ, ರಾತ್ರಿ ಹನ್ನೊಂದು ಘಂಟೆಗೆ ನಮ್ಮ ತಂದೆ ಮತ್ತು ನನ್ನಾಕಿ ಮಕ್ಕಳನ್ನು ಮತ್ತು ನಮ್ಮ ತಾಯಿಯವರನ್ನು ಮನೆಯಲ್ಲೇ ಬಿಟ್ಟು ಡ್ರೈವರ್ ಸಮೇತ ನನ್ನನ್ನು ಕರೆ ತರಲು ಸಿದ್ಧವಾಗುತ್ತಿದ್ದಂತೆಯೇ ನನ್ನ ಮಗಳು ತಾನೂ ಬರುತ್ತೇನೆ ಎಂದು ಹಠ ಮಾಡಿದ್ದಾಳೆ. ಸರಿ ಅವಳನ್ನು ಕರೆದು ಕೊಂಡು ಹೋಗಲು ನಿರ್ಧರಿಸುತ್ತಿದ್ದಂತೆಯೇ, ಅಕ್ಕಾ ಹೋಗುತ್ತಿರುವುದನ್ನೂ ನೋಡಿದ ನನ್ನ ಎರಡು ವರ್ಷದ ಮಗ, ನಾನೂ ಬರ್ತೀನಿ ಅಂತಾ ಗೋಳು ಹೊಯ್ದು ಕೊಂಡಿದ್ದಾನೆ. ಇನ್ನು ನಮ್ಮ ಅಮ್ಮನವರನ್ನು ಮಾತ್ರಾ ಏಕೆ ಬಿಟ್ಟು ಹೋಗುವುದೆಂದು ನಿರ್ಧರಿಸಿ ಎಲ್ಲರೂ ಒಟ್ಟಿಗೆ ನನ್ನನ್ನು ಕರೆತರಲು ಏರ್ಪೋರ್ಟಿಗೆ ಬಂದಿದ್ದಾರೆ,

ಮಗ ಆಗಾಗ್ಲೇ ಮಲಗಿ ಬಿಟಿದ್ದರಿಂದ ಅಜ್ಜಿ,ಮೊಮ್ಮಗ ಮತ್ತು ಡ್ರೈವರ್ ಅವರನ್ನು ಪಾರ್ಕಿಂಗ್ ಜಾಗದಲ್ಲೇ ಬಿಟ್ಟು ಮಾವ, ಸೊಸೆ ಮತ್ತು ಮೊಮ್ಮಗಳು ಮೂವರೂ ನನ್ನನ್ನು ಬರಮಾಡಿಕೊಳ್ಳಲು ಏರ್ಪೋರ್ಟ್ ಒಳಗೆ ಬಂದಿದ್ದಾರೆ, ಬರಗಾಲದಲ್ಲಿ ಅಧಿಕ ಮಾಸ ಎನ್ನುವಂತೆ ಇವರೆಲ್ಲರ ಆತಂಕ ತಿಳಿಯದೇ, ನನ್ನದೇ ಚಿತ್ರ ವಿಚಿತ್ರ, ಸಾವು ಬದುಕಿನ ಹೋರಾಟ ನಡೆಸಿ ನಿಧಾನವಾಗಿ ಹೊರ ಬಂದ ನನ್ನನ್ನು ನೋಡಿದ ಕೂಡಲೇ ಎಲ್ಲರ ಕಣ್ಣೀರ ಕೋಡಿ ಉಕ್ಕಿ ಹರಿದಿದೆ.

ಇದಾವುದರ ಅರಿವಿಲ್ಲದೇ ಮೊಮ್ಮಗನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕಾರ್ನಲ್ಲಿ ಕುಳಿತಿದ್ದ ನಮ್ಮ ತಾಯಿಯವರನ್ನು ಹಾಗೇ ಮಾತಾನಾಡಿಸುತ್ತಾ ನಮ್ಮ ಮಾವನ ಮನೆಯ ಡ್ರೈವರ್ ಅಕ್ಕಾ, ಅಣ್ಣಾ ಚೆನ್ನಾಗಿದ್ದಾರಂತಾ? ಹೊರಡೋ ಮುಂಚೆ ಫೋನ್ ಏನಾದ್ರೂ ಮಾಡಿದ್ರಾ? ಯಾಕೆ ಕೇಳ್ತಾ ಇದ್ದೀನಿ ಅಂದ್ರೇ… ಅದೇನೋ ನೆನ್ನೆ ಬೆಳಿಗ್ಗೆ ಅಲ್ಲಿ ಭೂಕಂಪ ಆಗಿ ನೂರಾರು ಜನಾ ಸತ್ತೊದ್ರಂತೇ ಅಂತಾ ನಿಧಾನವಾಗಿ ಯಾವ ವಿಷಯವನ್ನು ನಮ್ಮ ಅಮ್ಮನಿಗೆ ತಿಳಿಸಬಾರದು ಅಂದು ಕೊಂಡಿದ್ರೋ ಅದನ್ನು ಅವನು ತಿಳಿಸಿಯೇ ಬಿಟ್ಟಿದ್ದಾನೆ. ಈ ವಿಷಯ ಕೇಳಿದ ನಮ್ಮ ಅಮ್ಮನಿಗೆ ಬೆಳಗಿನಿಂದ ನನ್ನ ತಂಗಿಯರು, ಅವರ ತಂಗಿಯರು, ಬಂಧು ಮಿತ್ರರು ಕರೆ ಮಾಡುತ್ತಿದ್ದದ್ದು, ಮತ್ತು ಕರೆದು ಕೊಂಡು ಬರಲು ಹೋಗುವುದು ಬೇಡಾ ಎಂದು ಆರಂಭದಲ್ಲಿ ಹೇಳಿ ಈಗ ಇದ್ದಕ್ಕಿದಂತೆಯೇ ಏರ್ಪೋರ್ಟಿಗೆ ಬಂದದ್ದೂ ಎಲ್ಲದಕ್ಕೂ ಒಂದಕ್ಕೊಂದು ತಾಳೇ ಹಾಕಿ ನಮ್ಮ ಅಮ್ಮನೂ ಕೂಡಾ ಆ ಮಧ್ಯರಾತ್ರಿಯಲ್ಲಿ ಆತಂಕಕ್ಕೀಡಾಗಿ ಕಾರಿನಲ್ಲೇ ಗೋಳೋ ಅಂತಾ ಅಳುವುದಕ್ಕೆ ಶುರು ಮಾಡಿಬಿಟ್ಟಿದ್ದರು.

ನನ್ನನ್ನು ಕಾರಿನ ಬಳಿ ನೋಡುತ್ತಿದ್ದಂತಯೇ ಮತ್ತೊಂದು ಬಾರೀ ಎಲ್ಲರೂ ತಬ್ಬಿಕೊಂಡು ಮತ್ತೊಂದು ಸುತ್ತಿನ ಗುಂಪಿನ ಅಳು ಶುರುವಾಗಿ, ಕೂಡಲೇ ಅಲ್ಲೇ ಇದ್ದ STD Boothನಿಂದ ಅಷ್ಟು ಹೊತ್ತಿನಲ್ಲಿ ನಮ್ಮ ಕರೆಗೇ ಕಾಯುತ್ತಿದ್ದ ನಮ್ಮ ಮಾವನವರಿಗೆ ಕರೆ ಮಾಡಿ ಸುಖವಾಗಿ ತಲುಪಿದ್ದ ಸಂಗತಿ ತಿಳಿಸಿ ಅವರಿಗೂ ಸಮಾಧಾನವಾಯಿತು. ಇಡೀ ದಾರಿ ಪೂರ್ತಿ ಅದೇ ಭೂಕಂಪದ ಮತ್ತು ವಿಮಾನದ ಅಲುಗಾಟದ ಅನುಭವದ ಮಾತೇ. ಮನೆಗೆ ಬಂದ ಕೂಡಲೇ ಅತ್ತೆ ಮತ್ತು ಸೊಸೆ ಆರತಿ ಎತ್ತಿ ಮನೆಯೊಳಗೆ ಬರಮಾಡಿಕೊಂಡು ಆಷ್ಟು ಹೊತ್ತಿನಲ್ಲಿಯೇ ಸ್ನಾನ ಮಾಡಿಸಿ ದೇವರಿಗೆ ತುಪ್ಪದ ದೀಪ ಹಚ್ಚಿಸಿದ್ದು ಇನ್ನೂ ಹಚ್ಚಹಸಿರಾಗಿಯೇ ಇದೆ. ಬೆಳಗಾದರೆ ಆಗಸ್ಟ್ 15ನೇ ತಾರೀಖು ಸ್ವಾತಂತ್ರೋತ್ಸವ. ಬೆಳ್ಳಂ ಬೆಳಗ್ಗೆಯೇ ನನ್ನ ತಂಗಿಯರು ಮತ್ತು ನನ್ನೆಲ್ಲಾ ಬಂಧು ಮಿತ್ರರಿಗೂ ಕರೆ ಮಾಡಿ ಮತ್ತದೇ ಅನುಭವಗಳನ್ನು ಹಂಚಿಕೊಂಡಿದ್ದೆ.

ಇನ್ನು ನಾಲ್ಕು ದಿನ ಕಳೆದರೆ ಮತ್ತೊಂದು ಸ್ವಾತಂತ್ರೋತ್ಸವದ ಸಂಭ್ರಮ. ಅದರೆ ಅದಕ್ಕಿಂತ ಹೆಚ್ಚಾಗಿ ಇಂದು ರಾಜ್ಯಾದ್ಯಂತ ಪ್ರಕೃತಿ ವಿಕೋಪದ ಪರಿಣಾಮವಾಗಿ ಅತೀ ವೃಷ್ಟಿಯಗಿ ಮುಕ್ಕಾಲು ರಾಜ್ಯ ಜಲಾವೃತವಾಗಿದೆ. ಕೆಲವೇ ದಿನಗಳ ಹಿಂದೆ ಅನಾವೃಷ್ಟಿ ಎಂದು ಬರ ಪರಿಹಾರಕ್ಕೆ ಕೈ ಒಡ್ಡಿದ್ದ ಪ್ರದೇಶಗಳಲ್ಲಿ ಇಂದು ಅತೀವೃಷ್ಟಿ ಎಂದು ಹೊಸಾ ಪರಿಹಾರಕ್ಕೆ ನೆರವನ್ನು ಕೋರುತ್ತಿವೆ. ಮನುಷ್ಯ ಆಧುನಿಕವಾಗಿ ಎಷ್ಟೇ ಮುಂದುವರಿದರೂ, ಪ್ರಕೃತಿಯ ಮುಂದೆ ಆವನಾಟ ಏನೂ ನಡೆಯುವುದಿಲ್ಲ ಎಂದು ಮತ್ತೊಮ್ಮೆ ಸಾಭೀತಾಗಿದೆ.  ತಮ್ಮ ಆತ್ಮೀಯರನ್ನು ಅಕಾಲಿಕವಾಗಿ ಭೂಕಂಪ, ಅಪಘಾತ, ಬರ ಅಥವಾ ಅತೀವೃಷ್ಟಿಯ ಮೂಲಕ ಕಳೆದು ಕೊಂಡರೆ ಆಗುವ ಅನುಭವ ನಿಜಕ್ಕೂ ನಮ್ಮ ಯಾವ ಶತೃವಿಗೂ ಬರುವುದು ಬೇಡ.  ಸರ್ಕಾರದ ಪರಿಹಾರದ ಹೊರತಾಗಿಯೂ ನಮ್ಮೆಲ್ಲರ ತನು ಮನ ಧನಗಳಿಂದ ನಮ್ಮ ಬಂಧುಗಳನ್ನು ರಕ್ಷಿಸುವ ಮಹತ್ಕಾರ್ಯ ನಮ್ಮ ಮೇಲಿದೆ. ಈ ಪರಿಹಾರದಲ್ಲಿ ಯಾವುದೇ ಧರ್ಮ, ಜಾತೀ, ಭಾಷೇ, ಲಿಂಗ ತಾರತಮ್ಯವಿಲ್ಲದೇ ಸ್ವತಃ ಇಲ್ಲವೇ ನಿಮಗೆ ನಂಬಿಕೆಯಿರುವ ಯಾವುದೇ ಸ್ವಯಂಸೇವಾ ಸಂಸ್ಥೆಗಳ ಮೂಲಕ ಯಥಾ ಶಕ್ತಿ ಇಲ್ಲವೇ ಸ್ವಲ್ಪ ಹೆಚ್ಚಾಗಿಯೇ ನೆರವನ್ನು ನೀಡೋಣ.

ಏನಂತೀರೀ ?

Screenshot 2019-08-11 at 6.47.49 PM

4 thoughts on “ಅಲ್ಲಾಡ್ತಾ ಇದೆ, ಅಲ್ಲಾಡ್ತಾ ಇದೆ.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s