ಅನಿಷ್ಟಕೆಲ್ಲಾ ಶನೀಶ್ವರನೇ ಕಾರಣ.

ಕಳೆದ ಎರಡು ವಾರಗಳಿಂದ ನಮ್ಮ ರಾಜ್ಯದ ಬಹುತೇಕ ಪ್ರದೇಶಗಳು ಆಶ್ಲೇಷ ಮಳೆಗೆ ಬಲಿಯಾಗಿ ಮುಳುಗಿ ಹೋಗಿದೆ. ನೆನ್ನೆ ತನಕ ಪ್ರಕೃತಿಯನ್ನು ಎಗ್ಗಿಲ್ಲದೆ ನಾಶ ಮಾಡಿ ತಮ್ಮ ಸಾಮ್ರಾಜ್ಯವನ್ನು ವಿಸ್ಥಾರ ಮಾಡಿಕೊಂಡು ಸಾವಿರಾರು ಎಕರೆ ತೋಟ ಮಾಡಿ ಕೊಂಡು ಐಶಾರಾಮಿ ಬಂಗಲೆಯಲ್ಲಿ ವಾಸ ಮಾಡಿ ಕೊಂಡು ನೂರಾರು ಕೂಲಿ ಕಾರ್ಮಿಕರಿಗೆ ಮಾಲಿಕರಾಗಿದ್ದವರು ಇಂದು ಎಲ್ಲವನ್ನೂ ಕಳೆದು ಕೊಂಡು ಅದೇ ಕೂಲಿಗಳ ಜೊತೆಯಲ್ಲಿಯೇ ಗಂಜೀ ಕೇಂದ್ರದಲ್ಲಿ ನಿರಾಶ್ರಿತರಾಗಿರುವವರು ಬಹಳ ಮಂದಿ ಇದ್ದಾರೆ.

ನಮ್ಮ ರಾಜ್ಯದಂತೆ ನೆರೆ ರಾಜ್ಯವಾದ ಕೇರಳದಲ್ಲೂ ವಿಪರೀತವಾದ ಹಾನಿಯುಂಟಾಗಿದೆ. ಅಲ್ಲಿಯ ಸಂತ್ರಸ್ಥರಿಗೂ ಯಥಾಶಕ್ತಿ ಪರಿಹಾರ ಕಲ್ಪಿಸುವ ಹೊಣೆಗಾರಿಕೆ ನಮ್ಮ ಮೇಲೂ ಇದೆ. ಆದರೆ ಅದಲ್ಲಿಯೂ ಕೆಲವರು ಜಾತೀ ಧರ್ಮ ಮತಗಳನ್ನು ನೋಡುತ್ತಿರುವುದು ನಿಜಕ್ಕೂ ದುಃಖಕರ ಮತ್ತು ಖಂಡನೀಯ. ಕೇರಳದ ಸಂತ್ರಸ್ರರಲ್ಲಿ ಬಹುತೇಕರು ಕ್ರಿಶ್ಚಿಯನ್ ಮತು ಮುಸಲ್ಮಾನರು ಹಾಗಾಗಿ ಅವರಿಗೆ ನಮ್ಮ ರಾಜ್ಯದಿಂದ ಯಾವುದೇ ರೀತಿಯ ಪರಿಹಾರ ಕಳುಹಿಸುದುವುದು ಸಲ್ಲ ಎನ್ನುವುದು ಅವರ ವಿತಂಡ ವಾದ. ಕೇರಳ ನಮ್ಮ ದೇಶದ ಒಂದು ಅವಿಭಾಜ್ಯ ಅಂಗ. ನಮ್ಮದು ಜಾತ್ಯಾತೀತ ರಾಷ್ಟ್ರ ಇಲ್ಲಿ ಸರ್ವ ಧರ್ಮ ಸಮನ್ವಯ ರೀತಿಯಲ್ಲಿ ನಡೆದುಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯವೇ ಸರಿ. ಕೇರಳದಲ್ಲಿ ಒಳ್ಳೆಯ ಬಂದರೆ ಮಾತ್ರವೇ ನಮ್ಮ ಕಾವೇರಿ ಮತ್ತು ಕಬಿನಿ ನದಿಗೆ ಒಳ ಹರಿವು ಹೆಚ್ಚಾಗಿ ಆ ನದಿಗಳು ತುಂಬುವುದು. ಕಾವೇರಿ ಮತ್ತು ಕಬಿನಿ ತುಂಬಿದಲ್ಲಿ ಮಾತ್ರವೇ ನಮ್ಮರಾಜ್ಯ ಮತ್ತು ಪಕ್ಕದ ತಮಿಳುನಾಡಿನ ರೈತರಿಗೆ ಮತ್ತು ಜನರಿಗೆ ಕೃಷಿಗೆ ಮತ್ತು ಕುಡಿಯಲು ನೀರು ಸಿಗುವುದು. ಅಲ್ಲಿ ಆಗುವ ಮಳೆಯಿಂದ ನಮಗೆ ನೀರು ಬೇಕು ಆದರೆ ಅವರು ಅದೇ ಮಳೆಯಿಂದಾಗಿ ಸಂಕಷ್ಟದಲ್ಲಿದ್ದಾಗ ಪರಿಹಾರಕ್ಕೆ ನಾವು ಭಾಗಿಗಳಾಗದೇ ಇರುವುದು ಎಷ್ಟು ಸರಿ? ನಮ್ಮ ಉತ್ತರ ಕರ್ನಾಟಕದ ಜನತೆಗೆ ಪರಿಹಾರ ಕಲ್ಪಿಸುವುದರ ಜೊತೆ ಜೊತೆಯಲ್ಲಿ ಕೇರಳದಿಂದ ಉಪಕೃತರಾದ ನಾವು ಅವರಿಗೂ ಸ್ವಲ್ಪ ಮಟ್ಟಿಗಾದರೂ ನೆರವನ್ನು ನೀಡೋಣ.

ಇಷ್ಟೆಲ್ಲದರ ಮಧ್ಯೆ ಇನ್ನೂ ಕೆಲವರು ತಮ್ಮ ಚಪಲ ತೀರಿಸಿಕೊಳ್ಳುವ ಸಲುವಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಜನರ ಧಾರ್ಮಿಕ ಭಾವನೆಗಳನ್ನು ಮತ್ತು ನಂಬಿಕೆಗಳನ್ನು ಕೆಣಕುವಂತಹ ಈ ರೀತಿಯ ವಿಚಾರಗಳನ್ನು ಹರಿಬಿಡುತ್ತಿರುವುದು ನಿಜಕ್ಕೂ ಕಳವಳಕಾರಿಯಾಗಿದೆ

ಕುಸಿದ ಬೆಟ್ಟ ಹಿಡಿಯಲು ಕೃಷ್ಣ ಬರಲಿಲ್ಲ..

ಕುಸಿದ ಸೇತುವೆ ಹಿಡಿಯಲು ಹನುಮಂತ ಬರಲಿಲ್ಲ..

ಮನೆಗಳು ಕುಸಿಯದಂತೆ ರಾಮ ಬಾಣ ಹೂಡಲಿಲ್ಲ..

ಉಕ್ಕಿ ಹರಿವ ಪ್ರವಾಹ ಕುಡಿಯಲು ಶಿವ ಬರಲಿಲ್ಲ…

ಎಲ್ಲ ಅನಾಹುತ ತಪ್ಪಿಸಲು ಗಣಪ ಬರಲಿಲ್ಲ..

ಊಟಕ್ಕೆ.. ಮನೆ ಕಟ್ಟಿಕೊಳ್ಳಲು ಲಕ್ಷ್ಮೀ, ವೆಂಕಟೇಶ್ವರ ಸಾಲ ಕೊಡಲಿಲ್ಲ..

ಹಗಲಿರುಳೆನ್ನದೆ ಪೂಜಿಸಿದ, ಪ್ರಾರ್ಥಿಸಿದ ಮಕ್ಕಳು ಸಾಯುತಿರಲು, ನೋಯುತಿರಲು ಹೋದರೆಲ್ಲಿಗೆ ಎಲ್ಲಾ ದೇವರುಗಳು..

ಕರೆ ಮಾಡಲು ಹೇಳಿದರು ನಾಟ್ ರೀಚಬಲ್…

ಆದರೆ ಇಂತಹ ದೈನೇಸಿ ಸ್ಥಿತಿಗೆ ಬರಲು ಕಾರಣವೇನು? ಇದಕ್ಕೆ ಕಾರಣೀ ಭೂತರು ಯಾರು? ಇಂತಹ ಪ್ರಕೃತಿ ವಿಕೋಪಕ್ಕೆ ಕೊನೆ ಎಂದು? ಅದಕ್ಕೆ ಶಾಶ್ವತ ಪರಿಹಾರವೇನು? ಎಂದು ಯಾರಾದರೂ ಯೋಚಿಸಿದ್ದಾರಾ?

ಇಪ್ಪತೈದು ಮುವತ್ತು ವರ್ಷಗಳ ಹಿಂದೆ ಇದಕ್ಕಿಂತಲೂ ಹೆಚ್ಚು ಜೋರಾಗಿ ಎಲ್ಲಾ ಕಡೆಯಲ್ಲೂ ಮಳೆ ಬರುತ್ತಿತ್ತು. ಅಂದು ವಾರಗಟ್ಟಲೆ ನಿರಂತರವಾಗಿ ಒಂದು ಘಳಿಗೆಯೂ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದ್ದರೂ ಗುಡ್ಡಗಳು ಉರುಳುವುದಾಗಲೀ, ಊರಿಡೀ ಮುಳುಗುವುದಾಗಲಿ, ಮನೆಗಳು ಬೀಳುವುದಾಗಲಿ, ಪ್ರಾಣ ಹಾನಿಯಾಗಲೀ, ಯಾವುದೂ ಸಂಭವಿದ ಘಟನೆಗಳು ಇರಲಿಲ್ಲ..

ಆದರೆ ಈಗ ಕೇವಲ ಮೂರ್ನಾಲ್ಕು ದಿನ ಬಿದ್ದ ಜಡಿ ಮಳೆಗೆ ಇಡೀ ಊರಿಗೆ ಊರೇ ಮುಳುಗಿ ನಾಶವಾಗಲು ಕಾರಣ ನಾವೇ ಅಲ್ಲವೇ? ನೀರು ನಿಲ್ಲಬೇಕಾದ ಜಾಗದಲ್ಲಿ ಗಗನಚುಂಬಿ ಕಟ್ಟಡಗಳು ನಿರ್ಮಾಣ ಮಾಡಿದೆವು, ನೀರು ಹರಿಯಬೇಕಾದ ರಾಜಕಾಲುವೇ ಜಾಗವನ್ನೆಲ್ಲಾ ರಸ್ತೆಗಾಗಿ ಡಾಂಬರೀಕರಣ ಹಾಗೂ ಕಾಂಕ್ರೀಟ್ ಮಾಡಿದೆವು. ಮಳೆ ನೀರನ್ನು ಹೀರಿಕೊಳ್ಳುವ ಭೂಮಿಯ ಎಲ್ಲಾ ದಾರಿಗಳನ್ನು ನಾವೇ ಮುಚ್ಚಿದಾಗ ರಸ್ತೆಗಳೇ ನದಿಗಳಂತಾದವು. ಮನೆಯ ಅಂಗಳ ಈಜು ಕೊಳದ ರೂಪ ಪಡೆದು ಮನೆಯ ಒಳಗೂ ನೀರು ಹರಿದು ಬಂತು. ಮನುಷ್ಯನ ತನ್ನ ಐಶಾರಾಮ್ಯಕ್ಕಾಗಿ ಪರಿಸರವನ್ನು ನಾಶಪಡಿಸಿದ ಪರಿಣಾಮದಿಂದಾಗಿಯೇ ಕಾಲ ಕಾಲಕ್ಕೆ ಮಳೆ ಬಾರದಂತಾಯಿತು. ಇನ್ನು ಅಕಾಲಿಕ ಮಳೆ ಬಂದರೂ ಇಡೀ ಊರೇ ಮುಳುಗಿ ಹೋಗುವಂತ ಪರಿಸ್ಥಿತಿ ನಿರ್ಮಾಣ ಮಾಡಿಟ್ಟಿದ್ದು ನಾವೇ ಅಲ್ಲವೇ.! ಕರ್ನಾಟಕದ ಕೊಡಗು ಮತ್ತು ಕೇರಳದ ಬಹುತೇಕ ಕಡೆ ನಿತ್ಯಹರಿದ್ವರ್ಣದ ದಟ್ಟವಾದ ಕಾಡನ್ನು ಟಿಂಬರ್ ಮಾಫಿಯಾದವರು ಎಗ್ಗಿಲ್ಲದೆ ಕಡಿದು ಕಾಫೀ, ರಬ್ಬರ್ ತೋಟಗಳನ್ನು ಮಾಡಿಕೊಂಡು ಲಕ್ಷಾಂತರ ರೂಪಾಯಿಗಳ ಅಕ್ರಮ ಸಂಪಾದನೆ ಮಾಡಿದವರೂ ನಾವೇ ಅಲ್ಲವೇ? ಅಂದು ಪ್ರಕೃತಿಯನ್ನು ಎಗ್ಗಿಲ್ಲದೆ ಹಾಳು ಮಾಡಿದ ಪರಿಣಾಮವೇ ಇಂದು ಪ್ರಕೃತಿ ನಮ್ಮನ್ನು ನಾಶ ಮಾಡುತ್ತಿದೆ.

ಈ ರೀತಿಯಾಗಿ ಪ್ರಕೃತಿಯನ್ನು ಎಗ್ಗಿಲ್ಲದೆ ನಾಶ ಮಾಡಿ ಅನಿಷ್ಟಕ್ಕೆಲ್ಲಾ ಶನೀಶ್ವರನೇ ಕಾರಣ ಎನ್ನುವಂತೆ ಈ ರೀತಿಯಾಗಿ ಭಗವಂತನನ್ನು ದೂಷಿಸುವುದು ಎಷ್ಟು ಸರಿ? ನಮ್ಮನ್ನು ಕಾಪಾಡಲು ನೇರವಾಗಿ ಬ್ರಹ್ಮ ವಿಷ್ಣು ಮಹೇಶ್ವರ, ಕೃಷ್ಣಾ ಹನುಮಂತರೇ ಬರಬೇಕಿಲ್ಲಾ. ಆ ದೇವಾನು ದೇವತೆಗಳೆಲ್ಲಾ ನಾವೇ ಸೃಷ್ಟಿ ಮಾಡಿಕೊಂಡಂತಹವರು. ಆದರೆ ಅ ದೇವರುಗಳ ಆಶೀರ್ವಾದಿಂದ ಪ್ರೇರೇಪಿತರಾದ ಕೋಟ್ಯಾಂತರ ಮಂದಿ ಭಗವಂತನ ಹೆಸರಿನಲ್ಲಿಯೇ ತಮ್ಮ ಸಹಾಯ ಹಸ್ತವನ್ನು ಚಾಚುತ್ತಿರುವುದನ್ನು ಗಮನಿಸಲೇ ಇಲ್ಲವೇ? ದೇವರೊಬ್ಬ ನಾಮ ಹಲವು ಎನ್ನುವಂತೆ ಇಲ್ಲಿ ಭಗವಂತ ಎನ್ನುವುದ್ದು ಕೇವಲ ನಿಮಿತ್ತ ಮಾತ್ರ. ಅದೊಂದು ಪ್ರೇರಣಾತ್ಮಕ ಶಕ್ತಿಯಷ್ಟೇ. ಎಲ್ಲರನ್ನೂ ಒಗ್ಗೂಡಿಸಿ ಮುನ್ನಡೆಸಲು ಆತ ಒಬ್ಬ ಸಾರಥಿಯಷ್ಟೇ.

ರಾಜ್ಯ ಸರ್ಕಾರವೂ ಕೂಡಾ ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳುತ್ತಾ ಅತೀ ಹೆಚ್ಚಿನ ಪ್ರಾಣ ಹಾನಿಯಾಗದಂತೆ ನೋಡಿ ಕೊಳ್ಳುತ್ತಾ , ಎಲ್ಲರಿಗೂ ಪುನರ್ವಸತಿ ಕಲ್ಪಿಸುವತ್ತ ಹರಿಸಿದೆ ತನ್ನ ಚಿತ್ತ. ಇನ್ನು ರಾಜ್ಯದ ಸಹೃದಯೀ ಜನರು ಪರಿಹಾರಕ್ಕಾಗಿ ಕೇವಲ ಸರ್ಕಾರವನ್ನೇ ಆಶ್ರಯಿಸದೇ ಎಲ್ಲರೂ ತಮ್ಮ ತಮ್ಮ ಕೈಯಲ್ಲಾದ ಮಟ್ಟಿಗೆ ಸಹಾಯ ಹಸ್ತವನ್ನು ಚಾಚುತ್ತಿರುವುದು ನಿಜಕ್ಕೂ ಶ್ಲಾಘನೀಯ. ಅನೇಕ ಸಂಘ ಸಂಸ್ಥೆಗಳಲ್ಲದೇ ಧಾರ್ಮಿಕ ಶ್ರದ್ಧಾ ಕೇಂದ್ರಗಳೂ ಮಂದಿರ ಮಸೀದಿಗಳಲ್ಲಿಯೂ ನಿರಾಶ್ರಿತರಿಗೆ ಗಂಜೀ ಕೇಂದ್ರವನ್ನು ತೆರೆದು ಯಾವುದೇ ಜಾತೀ ಧರ್ಮ ಮತ ಪಂತಗಳ ಬೇಧವಿಲ್ಲದೇ, ವಸುದೈವ ಕುಟುಂಬಕಂ ಎಂಬ ನಮ್ಮ ಸಂಸ್ಕೃತಿಯ ಧ್ಯೇಯವನ್ನು ಅಕ್ಷರಶಃ ಪಾಲಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಮತ್ತು ಅನುಕರಣಿಯವೇ ಸರಿ. ನಮ್ಮ ನಮ್ಮ ಜಾತೀ ಧರ್ಮ ಭಾಷೆಗಳನ್ನು ನಮ್ಮ ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ಬಿಟ್ಟು ನಾವೆಲ್ಲರೂ ಭಾರತೀಯರು ಎಂಬುದನ್ನು ಮನಸ್ಸಿನಲ್ಲಿಟ್ಟು ಕೊಂಡು ಬಿಚ್ಚುಮನಸ್ಸಿನಿಂದ ಎಲ್ಲರಿಗೂ ನೆರವಾಗೋಣ. ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದಾಗ ದೊರೆಯುವ ಆನಂದವೇ ಬೇರೆ. ಅದನ್ನು ಹೇಳುವುದಕ್ಕಿಂತ ಅನುಭವಿಸಲೇ ಬೇಕು. ಸಂತೋಷದಿಂದ ಸಹಾಯ ಮಾಡೋಣ. ಸಂಕಷ್ಟದಲ್ಲಿ ಇರುವವರನ್ನು ಪಾರು ಮಾಡೋಣ.

ನಾವೆಲ್ಲಾ ಒಂದು. ನಾವೆಲ್ಲಾ ಬಂಧು

ಏನಂತೀರೀ?

2 thoughts on “ಅನಿಷ್ಟಕೆಲ್ಲಾ ಶನೀಶ್ವರನೇ ಕಾರಣ.

  1. ಸಮಸ್ಯೆಗಳನ್ನು ಸಮರ್ಥವಾಗಿ ವಿವರಿಸಿದ್ದೀರಿ. ಪರಿಹಾರೋಪಾಯಗಳನ್ನು ಕೈಗೊಳ್ಳುವುದು ಕಷ್ಟಸಾಧ್ಯ. ಮರಳು ಮಾಫಿಯಾ, ಟಿಂಬರ್ ಮಾಫಿಯಾ ನಿಲ್ಲಿಸುವುದು ಸರ್ಕಾರದ ಕೆಲಸ. ಜನ ದುರಾಸೆ ಬಿಟ್ಟರೆ ಎಲ್ಲವೂ ಸಾಧ್ಯ

    Liked by 1 person

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s